ಅವನೊಬ್ಬನಿರ್ತಾನೆ/ಳೇ. ಎಂಥ ಸಮಯದಲ್ಲೂ 'ನಾನಿದ್ದೀನಿ ನಿಂಜೊತೆ' ಅನ್ನೋಕೆ, ಅತ್ತಾಗ ಸಂತೈಸೋಕೆ, ನಕ್ಕಾಗ ಜೊತೆಯಾಗೋಕೆ. ಈ 'ಸ್ನೇಹಿತ' ಅನ್ನೋ ಮೂರಕ್ಷರವನ್ನು ಒಂದು ವ್ಯಕ್ತಿಯಲ್ಲಿ ಕಟ್ಟಿಹಾಕೋದು ಕಷ್ಟವೇ. ಆಗಸ್ಟ್ ತಿಂಗಳ ಮೊದಲ ಭಾನುವಾರ(ಈ ಬಾರಿ ಆಗಸ್ಟ್ 01) ಬರುತ್ತಿದ್ದಂತೆಯೇ 'ಹ್ಯಾಪಿ ಫ್ರೆಂಡ್ಶಿಪ್ ಡೇ' ಎಂದು ಕೈಕುಲುಕಿದ ಮಾತ್ರಕ್ಕೆ ಅವನ/ಅವಳ ಋಣ ತೀರಿಹೋಗೋಲ್ಲ!
ಪ್ರತಿ ವ್ಯಕ್ತಿಯ ಬದುಕಿನಲ್ಲೂ ಈ ಸ್ನೇಹ ಪ್ರಪಂಚ ಎಷ್ಟು ವಿಶಾಲ! ಆಗಷ್ಟೇ ಭೂಮಿ ಎಂಬ ಸುಂದರ ಪ್ರಪಂಚಕ್ಕೆ ಬಂದು ಕಣ್ಬಿಟ್ಟ ಕ್ಷಣ... ಪುಟ್ಟ ಕೈಮೇಲೆ ಅಮ್ಮನ ಅಕ್ಕರೆಯ ಬೆರಳು ಆಡಿದರೆ ಈ ಅಮ್ಮಂಗಿಂತ ಬೇರೆ ಸ್ನೇಹಿತೆ ಇಲ್ಲ! ಪುಟ್ಟ ಪುಟ್ಟ ಹೆಜ್ಜೆ ಇಡುವಾಗಲೂ ಬೀಳದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗ ಈ ಅಪ್ಪನ ಅಕ್ಕರೆಗಿಂತ ಮಿಗಿಲಾದ ಸ್ನೇಹವಿಲ್ಲ! ಯಾರೋ ಕೊಟ್ಟ ಮಿಠಾಯಿಯಲ್ಲಿ, ಅರ್ಧ ಭಾಗವನ್ನು ಗುಬ್ಬಿ ಎಂಜಲು ಮಾಡಿ ತನ್ನ ಪುಟ್ಟ ಕೈಯಲ್ಲಿಟ್ಟುಕೊಂಡು ತಿನ್ನಿಸುವಾಗ ಈ ಅಕ್ಕನಿಗಿಂತ ಬೇರೆ ಸ್ನೇಹಿತರಿಲ್ಲ! ತುಂಟಾಟವಾಡುವ ತಂಗಿ, ಸಲಹೆ ನೀಡುವ ಅಣ್ಣ, ಕತೆ ಹೇಳುವ ಅಜ್ಜ-ಅಜ್ಜಿ... ಎಲ್ಲರೂ ಒಂದಿಲ್ಲೊಂದು ರೀತಿಯಲ್ಲೇ ಈ ಸ್ನೇಹ ಪ್ರಪಂಚದ ಆಜೀವ ಸದಸ್ಯರೇ! ಕಾಯಾ ವಾಚಾ ಮನಸಾ ಜೊತೆಯಲ್ಲಿರುತ್ತೇನೆಂದು ಸಪ್ತಪದಿ ತುಳಿದ ಸಂಗಾತಿಯೂ ಆತ್ಮಸ್ನೇಹಿತನೇ/ಳೇ .....
ಅಪ್ಪಟ ಸ್ನೇಹವೆಂದರೆ ಅಷ್ಟು ಮಾತ್ರವಲ್ಲ, ನಮ್ಮ ತಪ್ಪುಗಳನ್ನು ಗುರುತಿಸಿ ಸರಿಪಡಿಸಲು, ಸರಿಯಾದ ಪಾಠದ ಮೂಲಕ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಬಾಳಲು ನೆರವಾಗುವುದು ಮುಖ್ಯವಾಗಿದೆ. ನಿಮ್ಮ ವಯಸ್ಸನ್ನು ಸ್ನೇಹಿತರಿಂದ ಅಳೆಯಿರಿ, ವರ್ಷಗಳಿಂದಲ್ಲ ಎಂಬ ಆಂಗ್ಲ ನಾಣ್ಣುಡಿಯಿದೆ.
ಹಾಗೆ ಹೇಳುವುದಕ್ಕೆ ಹೋದರೆ ಈ ಬದುಕಿಗೆ ಎಷ್ಟೆಲ್ಲ ಸ್ನೇಹಿತರು..!
ಎನಿತು ಜೀವದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ ಅರಿತು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ
ಎಂಬ ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪ ಅವರ ಸಾಲಿನಂತೆ, ಈ ಪ್ರಪಂಚದಲ್ಲಿ ಪ್ರತಿ ಹೆಜ್ಜೆಯಲ್ಲೂ ಸಿಕ್ಕ ಅದೆಷ್ಟು ಜನರಿಗೆ ನಾವು ಋಣಿಯಾಗಬೇಕೋ. ಅವರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಸ್ನೇಹಿತರೇ!
ಮನುಷ್ಯ ಮಾತ್ರ ಗೆಳೆತನ/ ಸ್ನೇಹ ಸಂಪಾದಿಸುವುದಲ್ಲ ಪ್ರಾಣಿ ಪಕ್ಷಿಗಳು ಕೂಡ ಸ್ನೇಹಿತರನ್ನು ಆರಿಸಿಕೊಳ್ಳುತ್ತವೆ.
ಬಡ ಕುಚೇಲ ತಂದ ಹಿಡಿ ಅವಲಕ್ಕಿಯನ್ನೇ ಮೃಷ್ಟಾನ್ನ ಎಂಬಂತೆ ತಿಂದನಂತೆ ಕೃಷ್ಣ! ಜಗದೊಡೆಯ ಎಂದು ವಿಶ್ವವೇ ಪೂಜಿಸುವ ಕೃಷ್ಣ, ಅವತಾರ ಪುರುಷ ಮುರಾರಿ ಕರಗಿ ಹೋಗಿದ್ದು ಆ ಹಿಡಿ ಅವಲಕ್ಕಿಗೆ, ಅದರೊಳಗೆ ಹೂತಿದ್ದ ನಿಸ್ವಾರ್ಥ ಸ್ನೇಹಕ್ಕೆ! .
ಕರ್ಣನ ಕೈ ತಾಕಿ ಭಾನುಮತಿಯ ಮುತ್ತಿನ ಹಾರ ಹರಿದುಬಿದ್ದಾಗ, 'ಪೋಣಿಸಿಕೊಡಲಾ, ಆರಿಸಿಕೊಡಲಾ?' ಎಂದು ಕೇಳಿದನಂತೆ ದುರ್ಯೋಧನ! ದುರ್ಯೋಧನ ಎಂಥ ದುಷ್ಟನೇ ಇದ್ದಿರಬಹುದು. ಕರ್ಣನ ಬಗೆಗೆ ಅವನಲ್ಲಿದ್ದ ಸ್ನೇಹತ್ವ ಮಾತ್ರ ಎಂದಿಗೂ ಮಾದರಿಯೇ.
ಕೇನ ರತ್ನಮಿದಂ ಸೃಷ್ಟಂ ಮಿತ್ರಮಿತ್ಯಕ್ಷರದ್ವಯಂ ಎಂಬಂತೆ ಮಿತ್ರ ಎಂಬ ರತ್ನವನ್ನು ಯಾರು ಸೃಷ್ಟಿಸಿದರೋ.
ನಿಜವಾಗಿಯೂ ಅವರಂಥ ಮಿತ್ರರು ಮನುಕುಲಕ್ಕೆ ಇನ್ನೊಬ್ಬರಿಲ್ಲ. ಪ್ರಪಂಚ ಇಂದು ಆಧುನಿಕತೆಯ ಪರದೆಯೊಳಗೆ ನಾಲ್ಕು ಗೋಡೆಗಳ ಮಧ್ಯೆ ಸಿಲುಕಿ ಸೀಮಿತವಾಗುತ್ತಾ ಕಿರಿದಾಗುತ್ತಿದೆ. ಪಕ್ಕದ ಮನೆಯವರೂ ಅಪರಿಚಿತರಾಗುತ್ತಿದ್ದಾರೆ. ಮೊಬೈಲ್ ಟಿವಿ ಮುಂತಾದ ಆವಿಷ್ಕಾರದಿಂದ ಸಂಬಂಧಗಳು ಆವಿಯಾಗುತ್ತಿರುವಾಗಲೂ ಬಾಧೆಗೊಳಗಾಗದ ಬಂಧವೇ ಈ ಸ್ನೇಹ. ಫೇಸ್ ಬುಕ್ - ವಾಟ್ಸಪ್ ಎಂಬಂಥ ಅದೆಂಥ ಮಹಾನ್ ಆವಿಷ್ಕಾರಕ್ಕೆ ಹೋದರೂ ಅಲ್ಲಿ ಸಿಗುವುದು ಅದೇ ಗೆಳೆತನ.
ಯಾರಲೂ ಹೇಳಿಕೊಳಲಾಗದ ಮನಸ್ಸಿನ ಬೇಸರ, ನೋವು, ಕಷ್ಟ, ಸಂತೋಷ, ಪ್ರೀತಿ, ಪ್ರೇಮ, ಸಹಾಯ ಎಲ್ಲವನ್ನೂ ಕೂಡಾ ಹಂಚಿಕೊಳ್ಳುವುದು ಸ್ನೇಹಿತರಲ್ಲಿ.
ಸ್ನೇಹಕ್ಕೆಇಂತವರೇ ಬೇಕು ಎಂದೆನಿಲ್ಲ.ತುಂಬ ದೊಡ್ಡ ಶ್ರೀಮಂತರಿಗೆ ಬಡವರು ಸ್ನೇಹಿತರಿರಬಹುದು.ತುಂಬಾ ವಯಸ್ಸು ಆದವರಿಗೆ ಸಣ್ಣ ಪ್ರಾಯದ ಸ್ನೇಹಿತರು ಇರಬಹುದು. ಹೆಣ್ಣು ಗಂಡು ಎಂಬ ಭೇದ ಇಲ್ಲದೆ ಇರುವುದೇ ಗೆಳೆತನ ....
ಮುಖ್ಯವಾಗಿ ಒಬ್ಬರಿಗೊಬ್ಬರು ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವವರು ಬೇಕು ಅಷ್ಟೇ. ಸ್ನೇಹ ಚಿರಾಯುವಾಗಲಿ.
ಗೆಳೆತನಕ್ಕಾಗಿ ಅಲ್ಲೆಲ್ಲೋ ಇರುವ ಸೂರ್ಯ ಕಮಲವ ಅರಳಿಸುವಂತೆ ಅಳಿಸಲಾಗದ ಈ ಸಂಬಂಧ ನಮ್ಮೆಲ್ಲರನ್ನು ಬೆಳೆಸಲಿ.
ವನಿತಾ ಅರುಣ್ ಭಂಡಾರಿ ಬಜ್ಪೆ
No comments:
Post a Comment