BhandaryVarthe Team

BhandaryVarthe Team
Bhandary Varthe Team

Sunday 1 August 2021

ಜೀವದ ಗೆಳತಿ - -ಸುಮಾ ಭಂಡಾರಿ, ಸುರತ್ಕಲ್

 ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು. ಇತಿಹಾಸದ ಪುಟಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ಸ್ನೇಹಿತರು ಅಂದ್ರೆ ನಮಗೆಲ್ಲಾ ಕೃಷ್ಣ ಕುಚೇಲ , ದುಯೋಧನ ಕರ್ಣರ ಹೆಸರು ಮನ ಪಟಲದಲ್ಲಿ ಮೂಡುತ್ತದೆ ಆದರೆ ಸ್ನೇಹಿತರ ದಿನ ಅಂದಾಗ ನನಗೆ ತುಂಬಾ ನೆನಪಾಗುವುದು ನನ್ನ ಜೀವದ ಗೆಳತಿ ಸವಿತಾ. ನನ್ನ ಅವಳ ಸಂಬಂಧಕ್ಕೆ ಚೌಕಟ್ಟು ನಿರ್ಮಿಸಲು ಸಾಧ್ಯವಿಲ್ಲ. ಒಂದಾ , ಎರಡಾ ಹೇಳಿದಷ್ಟು ಮುಗಿಯದ ಅವಿನಾಭಾವ ಸಂಬಂಧ ನಮ್ಮಿಬ್ಬರದ್ದು. ಎರಡು ದೇಹ ಬೇರೆ ಬೇರೆ ಆದರೂ ಮನಸ್ಸು ಒಂದೇ. ಅವಳು ನನ್ನನ್ನು ಸಲಹುವ ತಾಯಿ, ಪ್ರೀತಿಯ ತಂಗಿ, ಬುದ್ಧಿ ಹೇಳುವ ಅಕ್ಕ, ತಪ್ಪಿದಾಗ ದಾರಿ ತೋರುವ ಗುರು, ಕೋಪ ಬಂದಾಗ ಸಮಾಧಾನ ಪಡಿಸುವ ಆತ್ಮೀಯ ಗೆಳತಿ. ಅಷ್ಟೇ ಅಲ್ಲದೆ ನಡೆಯುವಾಗ, ಆಕಡೆ ಈಕಡೆ ಹೋಗುವಾಗ ಸಂರಕ್ಷಣೆ ಮಾಡುವ ತಂದೆ ಎಂದರೂ ತಪ್ಪಾಗಲಾರದು.


ನಾನು ಶಿಕ್ಷಕಿ ವೃತ್ತಿ ಪಡೆಯಲು ಟ್ರೈನಿಂಗ್ ಗೆ ಹೋಗುವಾಗ, ನನ್ನ ಸೀನಿಯರ್ ಆಗಿ ಸಿಕ್ಕ ನನ್ನ ಗೆಳತಿ ಜೀವದ ಗೆಳತಿ ಆದದ್ದು ಒಂದು ರೋಚಕ ಕಥೆ. ಜೂನಿಯರ್ ಆದ ನಾನು ಕೆಲವೊಂದು ವಿಷಯಗಳಿಗೆ ಸೀನಿಯರನ್ನು ಆಶ್ರಯಿಸಿ ಬೇಕಾಗಿತ್ತು. ಆದರೆ ಅವಾಗ ಅಷ್ಟೇನೂ ಹತ್ತಿರ ಇರುತ್ತಿರಲಿಲ್ಲ. ವಿಷಯ ತಿಳಿಸಿ ಬಿಡುತ್ತಿದ್ದರು. ಅವಳದ್ದು ಮಾತು ಕಮ್ಮಿ. ಆದರೆ ನಾನು ಮಾತಿನ ಮಲ್ಲಿ. ಚಿನಕುರುಳಿಯಂತೆ ಮಾತನಾಡುತ್ತಾ ಇರುವುದು ನನ್ನ ಸ್ವಭಾವ. ಅದು ಎರಡು ಮಕ್ಕಳಾದರೂ ಬದಲಾಗಲಿಲ್ಲ ಬಿಡಿ. ಹುಟ್ಟು ಗುಣ ಸುಟ್ಟರೂ ಬಿಡದು ಎಂಬ ಮಾತಿನಂತೆ ನನ್ನ ಜೊತೆಗೆಯೇ ಇದೆ. ಕಲ್ಲನ್ನೂ ಮಾತನಾಡಿಸುವ ಬುದ್ಧಿ ನನ್ನದು. ಹಾಗೆ ಮಾತು ಕಮ್ಮಿ ಇರುವ ಅವಳನ್ನು ಕುಟ್ಟಿ ಕುಟ್ಟಿ ಮಾತನಾಡಿಸುತ್ತಾ ಇರುತ್ತೇನೆ. ಎಷ್ಟೋ ಸಲ ನನ್ನ ಅತಿ ಮಾತು ಅವಳಿಗೆ ಕಿರಿ ಕಿರಿ ಕೊಡುತ್ತದೆಯೋ ಏನೋ.... ಆದರೆ ಅವಳಿಗೆ ನಾನು ಮಾತನಾಡಿಸದಿದ್ದರೂ ಆಗುವುದಿಲ್ಲ ಎಂಬುದು ಸತ್ಯ. ಎರಡು ಮೂರು ದಿನಗಳ ನಾನು ಕಮ್ಮಿ ಮಾತನಾಡಿಸಿದರೆ ಯಾಕೆ ನಿನಗೆ ನನ್ನಲ್ಲಿ ಕೋಪನಾ ಸರಿಯಾಗಿ ಮಾತನಾಡಿಸುದಿಲ್ಲ ಅಂತ ಹೇಳ್ತಾಳೆ.☺️

ನನ್ನ ಒಂದನೇ ವರ್ಷದ ಟಿಸಿಹೆಚ್ ನಲ್ಲಿ ಒಂದು ಮಹತ್ವದ ಘಟನೆ ನಡೆಯಿತು. ನನ್ನ ಗೆಳತಿ ಹಾಸ್ಟೆಲ್ನಲ್ಲಿ ಇರುತ್ತಿದ್ದರು. ನಾನು ಡೈಲಿ ಮನೆಯಿಂದ ಹೋಗಿ ಬರುತ್ತಿದ್ದೆ. ಒಂದು ದಿನ ಬೆಳಿಗ್ಗೆ ಕಾಲೇಜಿಗೆ ಹೋಗುವಾಗ ಬೈಕಂಪಾಡಿಯಲ್ಲಿ ಒಂದು ಹಿಂದೂ ಹುಡುಗಿಯ ಮರ್ಡರ್ ಆಯಿತು. ಇದು ಕೋಮು ಗಲಭೆ ಆದ ಕಾರಣ , ಬಸ್ಸ್ ಬಂದ್ ಆಯಿತು. ಟಯರ್ ಮಾರ್ಗ ಮಧ್ಯೆ ಸುಡುವುದಲ್ಲದೆ, ಪೋನ್ ಸಂಪರ್ಕ ಸಹ ಕಡಿದು ಹೋಯಿತು. ಗಲಾಟೆ ಜೋರಾಗಿ ಹೇಗೊ ಕಾಲೇಜ್ ತಲುಪಿದೆ . ಆದರೆ ನನಗೆ ಮನೆಗೆ ನಾಲ್ಕೈದು ದಿನ ಬರದಂತೆ ಆಯಿತು. ಹಾಸ್ಟೆಲ್ ನಲ್ಲಿ ಉಳಿಯಬೇಕಾದ ಪರಿಸ್ಥಿತಿ. ಉಟ್ಟ ಬಟ್ಟೆಯಲ್ಲಿ ಹಾಸ್ಟೆಲ್ನಲ್ಲಿ ಉಳಿದ ನನಗೆ ಸವಿತಾ ನನ್ನನ್ನು ಸ್ವಂತ ತಂಗಿಯಂತೆ ನೋಡಿಕೊಂಡರು. ಬೇರೆ ಗೆಳತಿಯರು ಸಹ ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ ಇವಳು ಅಂದು ಮಾಡಿದ ಸಹಾಯ, ಕೊಟ್ಟ ಆತ್ಮೀಯತೆ ಇಂದಿನವರೆಗೆ ನನ್ನ ಜೀವದ ಗೆಳತಿಯಾಗಿ ಉಳಿಯುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಮತ್ತೆ ಎರಡು ವರ್ಷಗಳ ಟ್ರೈನಿಂಗ್ ಮುಗಿದ ಬಳಿಕ ನಾನು ಅವಳು ಒಂದೇ ಶಾಲೆಗೆ ಶಿಕ್ಷಕರಾಗಿ ಒಂದು ದಿನದ ಅಂತರದಲ್ಲಿ ಏಪೈಮೆಂಟ್ ಆದೆವು. ಬಳಿಕ ಒಂದೇ ವರುಷ ನಮ್ಮಿಬ್ಬರ ಮದುವೆ ಒಂದು ತಿಂಗಳ ಅಂತರದಲ್ಲಿ ನಡೆಯಿತು. ಅಷ್ಟೇ ಅಲ್ಲದೆ ಅವಳ ನನ್ನ ಸೀಮಂತ ಸಹ ಒಂದು ದಿನ ಅಂತರದಲ್ಲಿ ನಡೆಯಿತು. ಅಲ್ಲದೆ ನನ್ನ ಅವಳ ಮೊದಲ ಮಗು ಸಹ ಒಂದೇ ದಿನ , ಕೆಲವು ಗಂಟೆಗಳ ಅಂತರದಲ್ಲಿ ಒಂದೇ ಹಾಸ್ಪಿಟಲ್ ನಲ್ಲಿ ಹುಟ್ಟಿದ್ದರು. ಅದು ಒಂದು ಮಿರಾಕಲ್ ಎಂದೇ ಹೇಳಬಹುದು. ಅವಳು ಮತ್ತು ಅವಳ ತಂದೆ ನನಗೆ ಡೆಲಿವರಿ ಆದದ್ದು ತಿಳಿದು ನೋಡಲು ಬಂದಿದ್ದರು. ಮಗುವನ್ನು ನೋಡಿ ಹಿಂದಿರುಗುವಾಗ ಬಸ್ಸಿನಲ್ಲಿ ನೋವು ಕಾಣಿಸಿಕೊಂಡಿತು ಅವಳಿಗೆ.... ಕೂಡಲೇ ಇಳಿದು ಅಲ್ಲೇ ಎಡ್ಮಿಟ್ ಆದರು. ಒಂದೆ ಹಾಸ್ಪಿಟಲ್ ನಲ್ಲಿ ನಮ್ಮಿಬ್ಬರ ಮೊದಲ ಮಗುವಿನ ಜನನವಾಯಿತು.

ಮೂರು ವರ್ಷಗಳ ಬಳಿಕ ನಾನು ವೈಯಕ್ತಿಕ ಕಾರಣದಿಂದ ಸುರತ್ಕಲ್ ಗೆ ಟ್ರಾನ್ಸ್ ಫರ್ ತೆಗೆದುಕೊಂಡೆ. ಬಳಿಕ 15 ವರುಷಗಳ ಕಾಲ ಸಂಸಾರ ಜಂಜಾಟದಲ್ಲಿ ನನ್ನ ಅವಳ ಒಡನಾಟ ಸ್ವಲ್ಪ ಕಮ್ಮಿಯಾಯಿತು. ಆದರೆ ದೇವರಿಗೆ ಅದು ಬೇಸರವಾಯಿತ್ತೊ ಏನೋ. ಇತ್ತೀಚೆಗೆ ಅಂದರೆ ಐದು ವರ್ಷಗಳ ಹಿಂದೆ ನಮ್ಮಿಬ್ಬರಿಗೂ ಟ್ರಾನ್ಸ್ಫರ್ ಆಯಿತು. ಇಬ್ಬರೂ ಪುನಃ ಒಂದೇ ಶಾಲೆಗೆ ಬಂದು ಸೇರಿದೆವು. ನಾನು ಸೇವೆಗೆ ಸೇರಿದ ದಿನದಿಂದ ಸೀನಿಯರ್ ಆದ ಕಾರಣ ನಾನು ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಬೇಕಾಗಿ ಬಂತು. ಆದರೆ ತುಂಬಾ ಸಮಸ್ಯೆ ಸುಳಿಯಲ್ಲಿ ಸಿಲುಕಿ ಒದ್ದಾಡುವಂತೆ ಆಯಿತು. ಪ್ರತಿ ಸಲವೂ ನನಗೆ ಧೈರ್ಯ ಹೇಳುತ್ತಾ ನನಗೆ ಬೆಂಬಲವಾಗಿ ನಿಂತಳು. ನನ್ನ ಈ ವೃತ್ತಿ ಜೀವನದಲ್ಲಿ ನನ್ನ ಬಲಗೈಯಾಗಿ, ನನ್ನ ಹಿಂದೆ ಬೆನ್ನೆಲುಬಾಗಿ ನಿಂತು ನನಗೆ ಸರ್ವ ರೀತಿಯಲ್ಲೂ ಸಹಾಯ ಮಾಡುತ್ತಿದ್ದಾಳೆ. ಈ ನನ್ನ ಜೀವದ ಗೆಳತಿಗೆ ನಾನು ಸದಾ ಚಿರಋಣಿ. ಸದಾ ನಮ್ಮಿಬ್ಬರ ಪ್ರೀತಿ ,ವಿಶ್ವಾಸ ಹೀಗೆಯೇ ಇರಲಿ. ಅದಕ್ಕೆ ಎಂದೂ ಯಾರ ದೃಷ್ಟಿ ತಾಕದಿರಲಿ ಎಂದು ದೇವರಲ್ಲಿ ಬೇಡುವೆ. ಇಂತಹ ಗೆಳೆತನ ಯಾರಿಗೂ ಸಿಗಲು ಸಾಧ್ಯವಿದೆಯೇ? ದಿನಾಲೂ ಜೊತೆ ಜೊತೆಯಾಗಿ ಸಮಸ್ಯೆಗಳನ್ನು ಎದುರಿಸುತ್ತಾ, ಆತ್ಮ ಸ್ಥೈರ್ಯ ದಿಂದ ಒಟ್ಟಾಗಿ ದುಡಿಯುತ್ತಿದ್ದೇವೆ. ಈ ಲೇಖನವನ್ನು ಆತ್ಮಿಯ ಗೆಳತಿಗೆ ಅರ್ಪಿಸುತ್ತಾ ಬರವಣಿಗೆಗೆ ಚುಕ್ಕಿ ಇಡುವೆ. ಧನ್ಯವಾದಗಳು.🙏🏽

  -ಸುಮಾ ಭಂಡಾರಿ,ಸುರತ್ಕಲ್ 



No comments:

Post a Comment