BhandaryVarthe Team

BhandaryVarthe Team
Bhandary Varthe Team

Sunday 1 August 2021

ಅಮರ ಮಧುರ ಗೆಳೆತನ.... ✍ ರತೀಶ್ ಭಂಡಾರಿ ಕುಂಜಿಬೆಟ್ಟು

 ಹೇಗೆ ಮರೆಯಲಿ ಗೆಳೆಯರೆ ನಿಮ್ಮನ್ನು...

ನಿಮ್ಮ ಪ್ರೀತಿಯ ಸ್ನೇಹದಿಂದ ಸಂತೋಷಗೊಳಿಸಿರುವಿರಿ ನನ್ನನ್ನು...

ನಿಮ್ಮ ಜೊತೆ ಕಳೆದ ದಿನಗಳನ್ನು ಹೇಗೆ ಮರೆಯಲು ಸಾಧ್ಯ...
ನಿಮ್ಮ ಪ್ರೀತಿಯ ಗೆಳೆತನವಿರದೆ ನಾನಿರಲು ಅಸಾಧ್ಯ...

ಮತ್ತೊಮ್ಮೆ ಒಂದಾಗಿ ಮೆಲುಕು ಹಾಕುವ ಕಳೆದ ಆ ದಿನಗಳ.... 
ಗೆಳೆಯರಿಲ್ಲದೆ ಕಳೆಯಬಹುದಾ ಈ ಬಾಳ.....

ನಮ್ಮ ಜೀವನದಲ್ಲಿ ತಂದೆ ತಾಯಿಯರಿಗಿಂತ ಹೆಚ್ಚಾಗಿ ನಮ್ಮ ಮನಸ್ಸಿನಲ್ಲಿರುವ ವಿಷಯವನ್ನು ಹಂಚಿಕೊಳ್ಳಲು ಇಷ್ಟಪಡುವುದು ನಮ್ಮ ಗೆಳೆಯರಲ್ಲಿ ಮಾತ್ರ .

ಪ್ರತಿಯೊಬ್ಬರ ಜೀವನದಲ್ಲೂ ಗೆಳೆಯರು ಇರುವುದಂತೂ ಖಂಡಿತಾ. ನನಗೆ ಅನೇಕ ಗೆಳೆಯರು ಸಿಕ್ಕಿದ್ದಾರೆ. ಅವರ ಜೊತೆಗೂಡಿ ಮಾಡುವ ಕುಚೇಷ್ಟೆಯ ಹೇಗೆ ಮರೆಯುವುದು, ಮರೆಯಲು ಅಸಾಧ್ಯ..
ಗೆಳೆಯರ ಪ್ರೀತಿಯೆಂದರೆ ಅದು ಅಂತಿಂಥ ಪ್ರೀತಿಯಲ್ಲ.ಒಬ್ಬ ಗೆಳೆಯನ ಸುಖ ದುಃಖವನ್ನು ಹಂಚಿಕೊಳ್ಳುವುದು ಗೆಳೆತನದ ಪಾತ್ರ.ತನ್ನ ಗೆಳೆಯನ ಸಂತೋಷವನ್ನು ತನ್ನದೆಂದು ನನ್ನಿಂದ ಬಂತೆಂದು ಬೀಗುವವನು ನಿಜವಾದ ಗೆಳೆಯನ್ನಲ್ಲ.ಅವನ ನೋವು ತನ್ನದೆಂದು ಅವನ ಯಶಸ್ಸಿಗೆ ಯಾರು ಕಾರಣವಾಗುತ್ತಾರೊ ಅವರು ನಿಜವಾದ ಗೆಳೆಯರು.ಗೆಳೆಯರ ಪ್ರೀತಿಯನ್ನು ಯಾರಿಂದಲೂ ಬೇರೆ ಮಾಡಲು ಸಾಧ್ಯವಿಲ್ಲ. ಒಬ್ಬ ಗೆಳೆಯನ ನೋವು ಅವನನ್ನು ಹೆಚ್ಚಾಗಿ ಪ್ರೀತಿಸುವ ಗೆಳೆಯನಿಗೆ ತಿಳಿಯಲು ಮಾತ್ರ ಸಾಧ್ಯ.


ನನ್ನ ಗೆಳೆಯರು ಕೂಡ ಪ್ರೀತಿಯಿಂದ ನನ್ನನ್ನು  ಕಾಣುತ್ತಾರೆ. ನಾ ಸೋತರೆ ನನ್ನನ್ನು ಗೆಲ್ಲಿಸುತ್ತಾರೆ.ಜೀವಕ್ಕೆ ಜೀವವಾಗಿ ನಿಲ್ಲುತ್ತಾರೆ. ಇಂತಹ ಗೆಳೆಯರು ಯಾರಿಗೆ ತಾನೆ ಬೇಡ ನೀವೆ ಹೇಳಿ.


ಎಲ್ಲರ ಗೆಳೆತನವು ಕೃಷ್ಣ-ಕುಚೇಲರ ಗೆಳೆತನದಂತೆ ಪರಿಶುದ್ಧವಾದ ಗೆಳೆತನವಾಗಿರಬೇಕು. ನಾ ಕಂಡಂತೆ ಅನೇಕ ಗೆಳೆಯರು ತನ್ನ ಗೆಳೆಯನ ಕಷ್ಟಗಳಿಗಾಗಿ ಏನು ಬೇಕಾದರೂ ತ್ಯಾಗ ಮಾಡಲು ತಯಾರಿರುತ್ತಾರೆ. ಆದರೆ ಅವರ ಮನೆಯವರು ಅದಕ್ಕೆ ಅಡ್ಡಿಯಾಗುತ್ತಾರೆ. ಅವನಿಗೋಸ್ಕರ ನೀನ್ಯಾಕೆ ತ್ಯಾಗ ಮಾಡುವೆ ಎಂದು ಪ್ರಶ್ನಿಸುವವರು ಅನೇಕರ ಮನೆಯವರಿದ್ದಾರೆ. ಅದು ಪ್ರಶ್ನಿಸುವುದೇನು ತಪ್ಪೆಂದು ನಾ ಹೇಳುವುದಿಲ್ಲ .


ನಾನು ಹೇಳುವುದು ಇಷ್ಟೇ ಅವರು ತ್ಯಾಗ ಮಾಡಲು ತಯಾರಿರುವುದರಲ್ಲೆ ನಾವು ಗಮನಿಸಬಹುದು ಅವರಿಗೆ ತನ್ನ ಗೆಳೆಯನ ಬಗ್ಗೆ ಎಷ್ಟು ಅಭಿಮಾನ,ಪ್ರೀತಿ ,ಗೌರವವಿದೆಎನ್ನುವುದನ್ನು. ನನ್ನ ಚಿಕ್ಕಪ್ಪನ ಗೆಳೆಯರೊಬ್ಬರಿಗೆ ಹುಷಾರಿಲ್ಲದೆ ಹಾಸಿಗೆ ಹಿಡಿದಿದ್ದರು. ಹಣದ ಕೊರತೆಯಿಂದಾಗಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದರು. ಸರ್ಕಾರಿ  ಡಾಕ್ಟರ್ ಇಲ್ಲಿ ನೋಡಲು ಸಾಧ್ಯವಿಲ್ಲ ಅವರನ್ನು ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರು.ಹಣದ ಅಭಾವದಿಂದ ಸೇರಿಸದೆ ಮನೆಗೆ ಕರೆದುಕೊಂಡು ಹೋಗಿದ್ದರು. ನನ್ನ ಚಿಕ್ಕಪ್ಪನಿಗೆ ವಿಷಯ ತಿಳಿದು ನನಗೆ ವಿಷಯ ತಿಳಿಸಿದರು.ನಾನು ಅವರ ಜೊತೆ ಹೋದೆ, ನನಗೆ ಅವರ ಮನೆಯವರ ಸ್ಥಿತಿ ನೋಡಲಾಗದೆ ಕಣ್ಣೀರು ಉಕ್ಕಿ ಬಂತು.ನನ್ನ ಚಿಕ್ಕಪ್ಪನು ಮನೆಯಲ್ಲಿದ್ದ ಗಾಡಿಯನ್ನು ಮಾರಲೆಂದು ಹೊರಟರು. ನಾನು ಅದಕ್ಕೆ ಅವಕಾಶ ಕೊಡದೇ ಅವರನ್ನು ತಡೆದು ನಮ್ಮೂರಿನ ಸಂಘ ಸಂಸ್ಥೆಗೆ ಕರೆ ಮಾಡಿ ವಿಷಯ ಮುಟ್ಟಿಸಿದೆ.


ಚಿಕ್ಕಪ್ಪನು ಅವರ ಎಲ್ಲಾ ಗೆಳೆಯರಿಗೂ ವಿಷಯ ಮುಟ್ಟಿಸಿದರು.ನಾನು ಕೂಡಾ ಎಲ್ಲಾ ಗೆಳೆಯರಿಗೂ ತಿಳಿಸಿದೆ. ಎಲ್ಲರೂ ಸಹಾಯಕ್ಕೆ ನಿಂತರು. ಹಣವನ್ನು ಸಂಗ್ರಹಿಸಿ ನನ್ನ ಚಿಕ್ಕಪ್ಪನ ಗೆಳೆಯರನ್ನು ದೊಡ್ಡ ಹಾಸ್ಪಿಟಲ್ ಗೆ ಸೇರಿಸಿದೆವು. ಅವರೀಗ ಹುಷಾರಾಗಿ, ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿ ಖುಷಿಯಿಂದ ಜೀವನ ನಡೆಸುತ್ತಿರುವರು.
ನನ್ನ ಚಿಕ್ಕಪ್ಪನ ಗೆಳೆತನ ಎಂತಹದ್ದು ನೋಡಿ ತನ್ನ ಗೆಳೆಯನಿಗೋಸ್ಕರ ತಾನು ಕಷ್ಟಪಟ್ಟು ಗಳಿಸಿದ ಗಾಡಿಯನ್ನು ಮಾರಲು ಹೊರಟಿದ್ದರು.ಇದೊಂದು ಗೆಳೆತನಕ್ಕೆ ಪುಟ್ಟ ಉದಾಹರಣೆಯಷ್ಟೇ.
ಇಂದು ನಾವು ಗೆಳೆಯರ ದಿನವನ್ನು ಆಚರಿಸುತ್ತಿದ್ದೇವೆ.


ನನ್ನ ಅಪ್ಪನ ಎದುರು ನಾನೊಂದು ಪ್ರಶ್ನೆ ಎದುರಿಟ್ಟೆ, ಅದೇನೆಂದರೆ ನಿಮ್ಮ ಕಾಲದಲ್ಲಿ ಗೆಳೆಯರ ದಿನ ಹೇಗೆ ಆಚರಿಸುತ್ತಿದ್ದಿರೆಂದು, ಅದಕ್ಕವರು ನಮ್ಮ ಕಾಲದಲ್ಲಿ ಇಂತಹ ದಿನಗಳೇ ಇರಲಿಲ್ಲ. ನಾವು ಎಲ್ಲ ದಿನವೂ ಒಂದಾಗಿ ಖುಷಿಯಿಂದ ಇರುತ್ತಿದ್ದೆವು ಎಂದರು.ನನಗನಿಸಿತು ಆದರೀಗ ಕೆಲಸಕ್ಕೆ ಬಿಡುವು ಸಿಗದೆ ಒಂದು ದಿನ ಆಚರಿಸುತ್ತಿರಬಹುದೆಂದು.
ಪ್ರತಿಯೊಬ್ಬರೂ ಎಲ್ಲಾ ದಿನವನ್ನು ಗೆಳೆಯರ ದಿನವೆಂದು ಆಚರಿಸಿ,ನಿಮ್ಮ ನಿಮ್ಮ ಗೆಳೆಯರಿಗೆ ಸುಖ ಸಂತೋಷವನ್ನು ನೀಡಿ ಗೆಳೆತನದ ಖುಷಿಯನ್ನು ಸಂಭ್ರಮಿಸಿ ಎಂದು ಕೇಳಿಕೊಳ್ಳುತ್ತೇನೆ.
ಗೆಳೆಯರ ದಿನವಾದ ಈ ದಿನ ಪ್ರತಿಯೊಬ್ಬ ಗೆಳೆಯ ಗೆಳತಿಯರಿಗೂ ಹಾರ್ದಿಕ  ಶುಭಾಶಯಗಳನ್ನು ಕೋರುತ್ತಿದ್ದೇನೆ....

 

 ರತೀಶ್ ಭಂಡಾರಿ ಕುಂಜಿಬೆಟ್ಟು


No comments:

Post a Comment