BhandaryVarthe Team

BhandaryVarthe Team
Bhandary Varthe Team

Saturday 7 August 2021

ಆಟಿ ತಿಂಗಳ ಪಾಲೆ ಮದ್ದು-ಇಗೋ ಭಂಡಾರಿ, ಕಾರ್ಕಳ

 ತುಲುನಾಡಿಗೆ ಎರಡೇ ಕಾಲಗಳು.ಅರಗಲ ಮತ್ತು ಮರಿಯಲ(ಬೇಸಗೆ ಕಾಲ ಮತ್ತು ಮಳೆಗಾಲ). ಬೇಸ ತಿಂಗಳಲ್ಲಿ ಆರಂಭವಾದ ಜಡಿಮಳೆ ಕಾರ್ತೆಲ್ ಬಂದಾಗ ಭೂಮಿಯ ಮಣ್ಣು ಮೆದುವಾಗಿ ಮಣ್ಣು ಕುರ್ತೆಲ್ ಕುರ್ತೆಲ್(ಗಲೀಜು)ಆಗಿ ಕಲ ಕಂಬ್ಲಆಗಿ ಕೆಸರು ಕೆಸರು ಆಗಿ ಬಿಡುವುದು.



ಆಟಿ ತಿಂಗಳಿಗೆ ಇನ್ನಷ್ಟು ಎಲೆಗಳು ಮಣ್ಣಿನೊಡನೆ ಕೊಳೆತು ನಾನಾ ತರದ ವಾತಾವರಣವು ಸೋಂಕು ಕಾಯಿಲೆಗಳ ಆಗರ ಆಗುತ್ತದೆ.  ಸೂರ್ಯನ ಕಿರಣ ಇಲ್ಲದೆ ಸಾಂಕ್ರಾಮಿಕ ಕಾಯಿಲೆಗಳು ಹರಡಲು ಆರಂಭವಾಗುತ್ತದೆ. ಇವುಗಳನ್ನು ತಡೆಯಲು ನಮ್ಮ ಪೂರ್ವೀಕರು ಮುಂಜಾಗ್ರತಾ ಕ್ರಮವಾಗಿ ಕಂಡು ಹಿಡಿದ ಅದ್ಭುತ ಮದ್ದು ಆಂಟಿಬಯೋಟಿಕ್ ಪಾಲೆ ಕಷಾಯ ಅಥವಾ ಪಾಲೆ ಮರ್ದ್.

ಇದು ನಮ್ಮ ಶರೀರಕ್ಕೆ ಬೇಕಾದ ಪ್ರತಿ ಜೀವಕ ರೋಗ ನಿರೋಧಕ (antibiotic medicine)ಮದ್ದು. ಈ ಔಷಧೀಯ ಪವರ್ ನಮ್ಮ ಶರೀರದಲ್ಲಿ ಹನ್ನೆರಡು ತಿಂಗಳು ಇರುವುದು. ಇದು ಬಹಳ ಬಹಳ ಉಷ್ಣಯುಕ್ತ ಮದ್ದು. ಈ ಔಷಧಿಯನ್ನು ಮಳೆಗಾಲದ ಮಧ್ಯದಲ್ಲೇ ಕುಡಿಯಬೇಕು. ಮಳೆಗಾಲದ ಆರಂಭ ಅಥವಾ ಕೊನೆಗೆ ಕುಡಿಯುವಂತಿಲ್ಲ. ಬೇಸ ತಿಂಗಳಲ್ಲಿ ನಮ್ಮ ಶರೀರವು ಉಷ್ಣತೆಯಲ್ಲೇ ಇರುತ್ತದೆ. ಬೇಸ,ಕಾರ್ತೆಲ್, ಆಟಿ ತಿಂಗಳು ಉಷ್ಣತೆಯಲ್ಲೇ ಇರುತ್ತದೆ. ಬೇಸ,ಕಾರ್ತೆಲ್, ಆಟಿ ತಿಂಗಳು ಗಳಲ್ಲಿ ಮಳೆ ಬಂದು ವಾತಾವರಣ, ಪೃಕೃತಿ ಮತ್ತು ನಮ್ಮ ಶರೀರವು ತಂಪಾಗುತ್ತದೆ. ಶೀತದಿಂದ ಕೂಡಿರುತ್ತದೆ. ಈ ಸಮಯವು ಪಾಲೆಮದ್ದು ಕುಡಿಯಲು ಸೂಕ್ತವಾಗಿ ಇರುತ್ತದೆ.

ಒಟ್ಟಾರೆ ಈ ಔಷಧೀಯ ಸೇವನೆಗೆ ನಮ್ಮ ಶರೀರವು ಮೂರು ತಿಂಗಳ ತಂಪು ಶೀತ ಹವಾಮಾನವನ್ನುಅನುಭವಿಸಿದ್ದಿರಬೇಕು.ಸೇವನೆ ಆದ ನಂತರವೂ ಮೂರು ತಿಂಗಳ ತಂಪು ಶೀತ ಚಳಿಯ ಹವಾಮಾನ ಇರಲೇಬೇಕು. ಆಟಿಯಲ್ಲಿ ಕುಡಿದರೆ ಸೋನ, ಕನ್ಯಾ, ಬೊಂತೆಲ್ ಮೂರು ತಿಂಗಳು ಮಳೆಗಾಲ ಸಿಗುತ್ತದೆ. ಆಟಿ ತಿಂಗಳಲ್ಲಿಈ ಔಷಧಿ ತೆಗೆದು ಕೊಳ್ಳದೆ ಇದ್ದರೆ ಜ್ವರ, ಕೆಮ್ಮು, ದಂಬು, ಉಬ್ಬಸ ಇತ್ಯಾದಿ ಸಾಮಾನ್ಯ ಕಾಯಿಲೆಗಳು ಹುಟ್ಟಿ ಬೇರೆ ಬೇರೆ ಕಾಯಿಲೆಗಳಿಗೆ ಸೇರಿ ಬಿಡುವ ಸಂಭವಗಳಿರುತ್ತದೆ.

ಕ್ರಿಮಿಕೀಟ ಸೊಳ್ಳೆಗಳಿಂದ,ಬ್ಯಾಕ್ಟೀರಿಯಾಗಳಿಂದ ಅಪಾಯಕಾರಿ ಕಾಯಿಲೆಗಳು ಜನಿಸುತ್ತದೆ. ಮಳೆಗಾಲದ ಕೊನೆಗೆ ತೆಗೆದು ಕೊಂಡರೆ ಜೀವಕ್ಕೆ ಅಪಾಯ ಇದೆ.ಏಕೆಂದರೆ ನಂತರ ಸೆಕೆಗಾಲ ಆರಂಭವಾಗುತ್ತದೆ. ವಾತಾವರಣ ಪೃಕೃತಿಯಲ್ಲಿ ಉಷ್ಣತೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಈ ಮದ್ದು ತುಲುನಾಡಲ್ಲಿ ಮಾತ್ರ ಇದೆ.ಇಲ್ಲಿ ಆರು ತಿಂಗಳು ಮಳೆ ಇರುವುದರಿಂದ ಈ ಮದ್ದು ಪರಿಣಾಮ ಬೀರುತ್ತದೆ. ಪಾಲೆದ ಮರಕ್ಕೆ ಸೂರ್ಯನ ಬಿಸಿಲು ಅಥವಾ ಚಂದ್ರನ ಬೆಳಕು ಬಿದ್ದಾಗ ಈ  ಮರದ ಚೆಕ್ಕೆಯು ವಿಷಕಾರಿ ಆಗುತ್ತದೆ.

ಈ ಕಾರಣದಿಂದಲೇ ಅಮವಾಸ್ಯೆ ದಿನದಲ್ಲೇ ಈ ಔಷಧಿಯನ್ನು ತಯಾರಿಸಿ ಕುಡಿಯಲು ಪೂರ್ವಿಕರು ನಮಗೆ ಸಲಹೆ ಕೊಟ್ಟಿದ್ದಾರೆ. ಅಮವಾಸ್ಯೆ ದಿನ ಚಂದ್ರನು ಇಲ್ಲದೆ ಇರುವುದರಿಂದ ಅಂದು ನಸುಕಿನಲ್ಲೇ ಮದ್ದು ಕೆತ್ತೆತಂದು ಕಷಾಯವನ್ನು ತಯಾರಿಸುತ್ತಾರೆ. ಸೂರ್ಯೋದಯದ ಮುಂಚಿತವಾಗಿ ಈ ಮದ್ದು ತಯಾರಿಸಿ ಕುಡಿದು ಮುಗಿಸಬೇಕು.

ಪಾಲೆ ಕೆತ್ತೆಯನ್ನು ಕತ್ತಿಯಿಂದ ಕೆತ್ತ ಬಾರದು. ಬದಲಾಗಿ ಕಲ್ಲಿನಿಂದ ಜಜ್ಜಿ ತರಬೇಕು. ಪಾಲೆ ಕೆತ್ತೆಯನ್ನು ಕತ್ತಿಯಿಂದ ಕೆತ್ತ ಬಾರದು. ಬದಲಾಗಿ ಕಲ್ಲಿನಿಂದ ಜಜ್ಜಿ ತರಬೇಕು. ಕೆತ್ತೆಯನ್ನು ಕತ್ತಿಯಿಂದ ಕೆತ್ತಿ ತೆಗೆದರೆ ಮರದ ಒಳಪದರಿಗೆ ಕತ್ತಿ ತಾಗಿಮರ ಸಾಯುವ ಸಂಭವ ಹೆಚ್ಚಿದೆ. ಅಲ್ಲದೆ ಈ ಮರದ ಕೆತ್ತೆಯಿಂದ ಬರುವ ಹಾಲು ಲೋಹಕ್ಕೆ ವಿಷಕಾರಿ ಆಗುತ್ತದೆ. ಕಲ್ಲಿನಿಂದ ಜಜ್ಜಿ ತೆಗೆದರೆ ಮರಕ್ಕೆ ಪೆಟ್ಟು ಆಗುವುದಿಲ್ಲ. ಕೆತ್ತೆತೆಗೆದ ಜಾಗ ಮುಂದಿನ ದಿನ ತಂತಾನೆ ತುಂಬಿ ಕೊಳ್ಳುವುದು.

ಪಾಲೆ ಮದ್ದು ಬಹಳಷ್ಟು ಉಷ್ಣ ಪಿತ್ತದಿಂದ ಕೂಡಿದೆ. ಈ ಕಾರಣಕ್ಕಾಗಿ ಮದ್ದು ಕುಡಿದ ಮೇಲೆ ಗೇರು ಬೀಜ ಮತ್ತು ಬೆಲ್ಲ ತಿನ್ನಲೇ ಬೇಕು. ಕಪ್ಪು ಬೆಲ್ಲ ಅತ್ಯುತ್ತಮ. ಇದರಿಂದ ಪಿತ್ತ ಶಮನ ಆಗುತ್ತದೆ. ನಂತರ ತಾರಾಯಿ ಗಂಜಿ ಉನ್ನಲೇ ಬೇಕು. ಈ ಗಂಜಿಗೆ ಗೋಲಿ ಕೆತ್ತೆ,ಸನ್ಯಾಸಿ ಗೆಡ್ಡೆಹಾಕಿದರೆ ಇನ್ನೂ ಉತ್ತಮ ತಾರಾಯಿ ಗಂಜಿಗೆ ಬಡ್ ತಾರಾಯಿಯನ್ನೇ ಉಪಯೋಗಿಸ ತಕ್ಕದ್ದು.ಇಲ್ಲಿ ಬಡ್ ಎಂದರೆ ಆಚೆ ಎಳನೀರುನೂ ಅಲ್ಲ ಈಚೆ ಕಾಯಿಯೂ ಅಲ್ಲ. ಅಂದರೆ ಇನ್ನೂ ಒಣಗದ ತೆಂಗಿನಕಾಯಿ.ಬಡ್ ತಾರಾಯಿಯ ನೀರನ್ನು ಕಾಯಿ ರುಬ್ಬುವಾಗ ಹಾಕಬೇಕು.

ಇದನ್ನು ಅಂದು ಹಿರಿಯರು ಅನುಸರಿಸುತ್ತಿದ್ದರು. ಕಷಾಯಕ್ಕೆ ಬೊಲ್ಕಲ್ಲ್(ಬಿಳಿಕಲ್ಲು) ಗೆಂಡದಲ್ಲಿ ಕಾಯಿಸಿ ಓಮ, ಬೆಳ್ಳುಳ್ಳಿ ವಗ್ಗರಣೆ ಕೊಡುತ್ತಾರೆ.ಇಲ್ಲೂ ಲೋಹದ ಪಾತ್ರೆಯಲ್ಲಿ ಒಗ್ಗರಣೆ ಮಾಡುವುದ್ದಿಲ್ಲ. ತಪ್ಪದೆ ಮರೆಯದೆ ಪಾಲೆ ಮದ್ದನ್ನು ನಮ್ಮ ಹಿರಿಯರಿಗೆ ಎಡೆ ಇಟ್ಟು ಎಲ್ಲರೂ ಒಂದೆಡೆ ಬರೆ ಹೊಟ್ಟೆಗೆ ಸೇವಿಸುವುದು. ಪಾಲೆಮರದ ಗುರುತು ತಿಳಿಯದವರು ಮುಂಚಿನ ದಿನಗಳಲ್ಲೇ ತಿಳಿದವರ ಲ್ಲಿ ಅರಿತು ಕೊಳ್ಳುವುದು ಸೂಕ್ತ. ನಸುಕಿನಲ್ಲಿ ಚೆಕ್ಕೆ ತರುವಾಯಾಗಿ ಹೋಗುವ ಬದಲು ನೆರೆಹೊರೆಯರೊಡನೆ ಹೋಗಿ ತರುವುದು ಉತ್ತಮ. ಕಷಾಯ ತಯಾರಿಸುವಾಗ ಹಿರಿಯ ರಲ್ಲಿ ಕೇಳಿ ಸಲಹೆ ಪಡೆಯಬೇಕು.

ಈ ಔಷಧೀಯ ಬಗ್ಗೆಹಗುರವಾಗಿ ತೆಗೆದು ಕೊಳ್ಳ ಬಾರದು. ಇದು ಪವಿತ್ರ ಔಷಧಿ. ಪಾಲೆಮರದ ಚೆಕ್ಕೆಯನ್ನು ತೆಗೆಯುವ ಮೊದಲು ಮರ ಮುಟ್ಟಿ ನಮಸ್ಕರಿಸ ಬೇಕು. ಈ ನಮಾಸ್ಕಾರವು ಪೃಕೃತಿಗೆ ಸಂದಾಯ ಆಗುತ್ತದೆ. ಮಾನವನಿಗೆ ಪಾಲೆಮರದ ಚೆಕ್ಕೆ ಕಷಾಯವು ಅಂಟಿ ಬಯೋಟಿಕ್ ಮದ್ದು ಆಗಿದ್ದರೆ ನಾವು ಬೆಳೆಸಿದ ಬೆಳೆಗಳಿಗೆ ಕಾಯೆರ್ ಮರದ ಕನೆಯನ್ನು ಊರುವ ಪದ್ಧತಿಯನ್ನು ನಮಗೆ ಪೂರ್ವಿಕರು ಹೇಳಿದ್ದಾರೆ. ಪಾಲೆಮರದಂತೆ ಕಾಯೆರ್ ಮರವೂ ಕಹಿ ಆಗಿರುತ್ತದೆ. ಇದು ಬೆಳೆಗಳಿಗೆ ಅಂಟಿ ಬಯೋಟಿಕ್ ಔಷಧಿ ಎಂಬ ನಂಬಿಕೆ ಅವರದ್ದಾಗಿತ್ತು.

ಕಾಯೆರ್ ಮರದ ಔಷಧೀಯ ಗುಣಗಳು ಮಣ್ಣಿನಲ್ಲಿರುವ ಬೆಳೆಗಳ ಮಾರಕ ಕ್ರಿಮಿ ಕೀಟ ಜಂತುಗಳನ್ನು ಈ ಕಾಯೆರ್ ಮದ್ದು ಸಾಯಿಸುತ್ತದೆ ಮತ್ತು ಉತ್ತಮವಾದ ಬೆಳೆ ಸಿಗುತ್ತದೆ ಎಂಬ ನಂಬಿಕೆ. ಈ ಕಾಯೆರ್ ಕನೆಯನ್ನು ಕಾಪು(ಕಾಯು)ಎಂತಲೂ ಕರೆಯುತ್ತಾರೆ.ಕನೆಯು ದೂರಕ್ಕೆ ಯಾರೋ ನಿಂತಿರುವಂತೆ ಕಾಣುತ್ತದೆ ಮೃಗ ಪಕ್ಷಿಗಳಿಗೆ. ಸುಳಿಯುವುದಿಲ್ಲ ಎಂಬ ನಂಬಿಕೆ ನಮ್ಮವರದಾಗಿತ್ತು.ಕಾಯೆರ್ ಕನೆಯ ಎಲೆಗಳು ಉದುರಿದರೂ ಅದು ದೂರಕ್ಕೆ ಆಸ್ತಿಪಂಜರದಂತೆ ಕಾಣುವುದು.

ಹಿಂದೆಲ್ಲಾ ಮನೆಗಳಲ್ಲಿ ಮಕ್ಕಳ ನವಗ್ರಹ ಶಾಂತಿಯನ್ನುಆಟಿದ ಅಮವಾಸ್ಯೆ ದಿನ ಮನೆಗಳಲ್ಲೇ ಮನೆಯವರೇ ನಡೆಸುತ್ತಿದ್ದರು. ಅಂದು ಪಾಲೆ ಮದ್ದು ಸೇವನೆಯ ನಂತರ 12 ವರ್ಷ ಮತ್ತು ಕೆಳಗಿನ ಮಕ್ಕಳನ್ನು ತಲೆ ಸ್ನಾನ ಮಾಡಿಸಿ ಸಾಲಾಗಿ ಮಣೆಗಳಲ್ಲಿ ಕೂರಿಸಿ ಅವರ ಎದುರಿಗೆ ತುದಿ ಇರುವ ಬಾಳೆ ಎಲೆಗಳನ್ನು ಹರಡಿ ಒಂಭತ್ತು ಬಗೆಯ ಕಾಡು ಹೂವುಗಳು(ದೊರೆಯದೆ ಇದ್ದರೆ ಯಾವುದೇ ಹೂವು) ಮತ್ತು 9 ಬಗೆಯ ಧಾನ್ಯಗಳನ್ನು(ಸೂರ್ಯ-ಗೋಧಿ, ಚಂದ್ರ-ಭತ್ತ ಅಥವಾ ಅಕ್ಕಿ, ಮಂಗಳ-ತೊಗರಿ, ಬುಧ-ಹೆಸರು, ಗುರು-ಕಡಲೆ, ಶುಕ್ರ-ಅವರೆ, ಶನಿ-ಎಳ್ಳು, ರಾಹು-ಉದ್ದು, ಕೇತು-ಹುರುಳಿ)ಮಕ್ಕಳ ಮುಡಿಗೆ ಬೇರೆ ಬೇರೆ ಪ್ರದಕ್ಷಿಣೆ ತಂದು ಎಲೆಯ ಮಧ್ಯಕ್ಕೆ ಹಾಕುತ್ತಿದ್ದರು. ಅದೇ ರೀತಿ ಒಂದೊಂದು ನಾಣ್ಯವನ್ನು ಸುತ್ತು ತಂದು ಎಲೆಗೆ ಹಾಕುವುದು.ಕೊನೆಗೆ ಎಲೆಗಳನ್ನು ತೆಗೆದು ಪುನಃ 9 ಸುತ್ತು ತಂದು ಹರಿಯುವ ನೀರಿಗೆ ಬಿಡುವುದು. ಇಲ್ಲಿಗೆ ಗ್ರಹ ಶಾಂತಿ ಕಾರ್ಯಕ್ರಮ ಮುಗಿಯುತ್ತದೆ. ನಂತರ ಮಕ್ಕಳೆಲ್ಲಾಮದ್ದು ಗಂಜಿ ಸಾಲಾಗಿ ಕೂತು ಸೇವಿಸುವುದು.ದೃಷ್ಟಿ ತೆಗೆಯುವ ಕಾರ್ಯಕ್ರಮದಲ್ಲಿ ತಪ್ಪದೆ ದೀಪ ಹಚ್ಚಿರ ಬೇಕು.

ಆಟಿ ಅಮವಾಸ್ಯೆ, ಆಟಿ ತಿಂಗಳು ಎಂದರೆ ಅಟ್ಟದ ಮೇಲೆ ಮಳೆಗಾಲಕ್ಕಾಗಿ ಸಂಗ್ರಹಿಸಲ್ಪಟ್ಟ ತಿನಿಸುಗಳನ್ನು ತಿನ್ನುವ ಒಡನೆ ತಮ್ಮ ಆರೋಗ್ಯವನ್ನು ವರ್ಷ ಇಡೀ ಕಾಪಾಡಿ ಕೊಂಡು ಬರುವ ತಿಂಗಳು. ಕತ್ತಿ, ಪನೊರು ಇತ್ಯಾದಿ ಲೋಹಗಳಿಂದ ಗಾಯವಾದ ರೆ ಅಂದು ಮತ್ತು ಇಂದಿಗೂ ಪಾಲೆಮರದ ಚೆಕ್ಕೆಯನ್ನು ಮತ್ತು ಜೀರಿಗೆ ಪುಡಿಯನ್ನು ಸೇರಿಸಿ ಕೊಬ್ಬರಿ ಎಣ್ಣೆಯಲ್ಲಿ ಬಿಸಿ ಮಾಡಿ ಗಾಯಕ್ಕೆ ತಾಗಿಸುತ್ತಾ ಹೋದರೆ ಗಾಯವು ಒಣಗಿ ಗುಣವಾಗುತ್ತದೆ. ಹಸಿ ಗಾಯವು ಒಣಗುತ್ತದೆ. ಇದರಲ್ಲಿಅಂಟಿಬಯೋಟಿಕ್ ಶಕ್ತಿ ಇರುವುದೆಂದು ತಿಳಿಯುತ್ತದೆ. ಕತ್ತಿ ಇಲ್ಲವೇ ಯಾವುದೇ ಲೋಹದ ಸಲಕರಣೆಯಿಂದ ಪಾಲೆಮರದ ಚೆಕ್ಕೆ ತೆಗೆಯುತ್ತಾ ಬಂದರೆ ಮರದಲ್ಲಿರುವ ಉಷ್ಣಾಂಶದೊಡನೆ ಇನ್ನಷ್ಟು ಉಷ್ಣತೆ ಅಧಿಕವಾಗಿ ಮರವೇ ಗಾಯ ಒಣಗಿದ ರೀತಿಯಲ್ಲಿ  ಒಣಗಿ ಸಾಯುತ್ತದೆ.

ಪಾಲೆ ಮರದ ಚೆಕ್ಕೆಯ ಎಣ್ಣೆಗೆ ಜೀರಿಗೆ ಹಾಕಲೇಬೇಕು. ಏಕೆಂದರೆ ಅದರಲ್ಲಿ ಅಧಿಕ ಉಷ್ಣತೆಯ ಅಂಶ ಇದೆ.ಈ ಕಾರಣದಿಂದಲೇ ಪಾಲೆ ಚೆಕ್ಕೆಯನ್ನು ಲೋಹಗಳ ಸಲಕರಣೆಯಿಂದ ತೆಗೆಯಬಾರದು.ಲೋಹದ ಸಲಕರಣೆಯಿಂದ ತೆಗೆದಾಗ ಅದರ ಉಷ್ಣತೆ ಇನ್ನಷ್ಟು ಹೆಚ್ಚಾಗುತ್ತದೆ.ಜೀವಕ್ಕೆಅಪಾಯ ಇದೆ. ಇನ್ನೊಂದು ಅಂಶ ಎಂದರೆ ಬೊಲ್ಕಲ್ಲಿನ ಒಗ್ಗರಣೆ ಹಾಕಲೇ ಬೇಕು.ಒಗ್ಗರಣೆ ಇಲ್ಲದಿದ್ದರೂ ಚಿಂತಿಲ್ಲ‌.ಕೆಂಡ ವಾದ ಬೊಲ್ಕಲ್ಲನ್ನು ಪಾಲೆ ಮದ್ದಿಗೆ ಹಾಕಲೇ ಬೇಕು. ಇದು ಪಾಲೆ ಮದ್ದಿನ ಉಷ್ಣಾಂಶವನ್ನು ಹೀರಿ ಬಿಡುತ್ತದೆ. ಕಲ್ಲಿನ ಸತ್ವವನ್ನು ಮದ್ದಿನಲ್ಲಿ ಬಿಡುತ್ತದೆ.

   

-ಇಗೋ ಭಂಡಾರಿ, ಕಾರ್ಕಳ

.

.

 

No comments:

Post a Comment