ಆಗಸ್ಟ್ 15 ಬಂದ ಕೂಡಲೇ ನಮಗೆಲ್ಲರಿಗೂ ಏನೋ ಸಂಭ್ರಮ. ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದುಕೊಂಡ ದಿನ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಮಡಿದ ಮಹಾತ್ಮ ಗಾಂಧಿ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ತಾತ್ಯಾ ಟೋಪಿ, ರಾಣಿ ಲಕ್ಷ್ಮೀಬಾಯಿ, ಉಳ್ಳಾಲದ ರಾಣಿ ಅಬ್ಬಕ್ಕ ಮುಂತಾದ ವೀರರನ್ನು ನೆನೆಯುವ ಸುದಿನ. ಇದು ಭಾರತೀಯರ ಸ್ವಾಭಿಮಾನದ ದಿನ ಎಂದರೂ ತಪ್ಪಾಗಲಾರದು. ಅಂದು ಅವರೆಲ್ಲರ ಬಲಿದಾನಗಳ ಫಲವಾಗಿ ಪಡೆದ ಈ ಸ್ವಾತಂತ್ರ್ಯ ಇಂದಿಗೆ ಹೋಲಿಸಿದರೆ, ಅದು ಕೇವಲ ಹೆಸರಿಗಾಗಿ ಮಾತ್ರ ಎಂದೆನಿಸುತ್ತದೆ.
ಪಾಶ್ಚಾತ್ಯ ದೇಶಗಳ ಕಪಿ ಮುಷ್ಠಿಯಿಂದ ಬಿಡುಗಡೆ ಹೊಂದಿದ್ದೇವೆ ಎಂದು ಹೇಳುತ್ತಾ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ನಮ್ಮ ವರ್ತನೆ ಅರ್ಥಹೀನವೆನಿಸುತ್ತಿದೆ. ನಿಜವಾಗಿ ನೋಡಿದರೆ ನಾವೀಗ ಯಾರ ಕಪಿಮುಷ್ಠಿಯಲ್ಲಿ ಇದ್ದೇವೆ ಎಂಬುದನ್ನು ನಾವೇ ಪ್ರಶ್ನಿಸುವಂತಾಗಿದೆ. ನಿಜವಾಗಿಯೂ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯೇ? ಆ ಸ್ವಾತಂತ್ರ್ಯ ಉಳಿಸಿ ಬೆಳೆಸಲು ನಾವು ಪ್ರಯತ್ನಿಸುತ್ತಿದ್ದೇವೆಯೇ? ಎಂದು ನಮ್ಮನ್ನೇ ಪ್ರಶ್ನಿಸಬೇಕಾಗಿದೆ.
75ರ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕಿದ್ದ ನಮ್ಮೆಲ್ಲರ ಕನಸು ಕೋರೋನದಿಂದ ನನಸಾಗದೆ ಉಳಿಯಿತು. ಈ ಮಹಾಮಾರಿಯು ವಿಶ್ವ ವ್ಯಾಪಿಯಾಗಿ ಹರಡುತ್ತಾ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಸ್ವಾತಂತ್ರ್ಯದ ದಿನ ದೇಶಭಕ್ತಿ ಗೀತೆಗಳನ್ನು ಹಾಡುತ್ತಾ, ರಾಷ್ಟ್ರ ನಾಯಕರ ವೇಷಗಳನ್ನು ಧರಿಸಿ ಸಂತೋಷ ಪಡುವ ಮಕ್ಕಳ ಕನಸು ಕನಸಾಗಿಯೇ ಉಳಿಯುವಂತೆ ಮಾಡಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆ, ಪರೇಡ್ ಮುಂತಾದ ಕಾರ್ಯಕ್ರಮಗಳು ನಡೆದು ವಿಜೃಂಭಣೆಯಿಂದ ಆಗಬೇಕಿದ್ದ 75ರ ಸ್ವಾತಂತ್ರ್ಯ ಸಂಭ್ರಮ ಯಾವುದೇ ಕಾರ್ಯಕ್ರಮಗಳಿಲ್ಲದೆ ನೇರವೇರಬೇಕಾಗಿದ್ದು ನಮ್ಮೆಲ್ಲರ ದುರಾದೃಷ್ಟವೇ ಸರಿ. ಎಲ್ಲರೂ ಕೋರೋನಾ ಮಹಾಮಾರಿಯನ್ನು ಹೊಡೆದೋಡಿಸಲು ಕೈ ಜೋಡಿಸಲೇ ಬೇಕಾಗಿದೆ. ಸಂಭ್ರಮದಿಂದ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ.
ಸರ್ವ ಸಮಾನ ನಾಗರಿಕ ಸಮಾಜ ನಿರ್ಮಾಣ ನಮ್ಮೆಲ್ಲರ ಕರ್ತವ್ಯ. ಎಲ್ಲರನ್ನೂ ಸಾಮಾಜಿಕ, ನೈತಿಕ ನಿಯಮಗಳ ಅಡಿಯಲ್ಲಿ ನಡೆಸಿಕೊಳ್ಳುತ್ತೇವೆ. ಸಮಾನತೆ , ಜಾತ್ಯಾತೀತ ರಾಷ್ಟ್ರ ನಿರ್ಮಾಣ ನಮ್ಮ ಧ್ಯೇಯ ಎಂದು ಹೇಳಿದ ರಾಜಕೀಯ ಪಕ್ಷಗಳು ಅದನ್ನು ಸಾಧಿಸಲು ವಿಫಲವಾಗಿದೆ. ವಿಧಾನ ಸಭೆಯಲ್ಲಿ ನಮ್ಮ ರಾಜಕಾರಣಿಗಳು ವರ್ತಿಸುವ ರೀತಿ ನೋಡಿದರೆ, ಚುನಾವಣೆಯಲ್ಲಿ ಹರಿಯುವ ಹಣ, ನಡೆಯುವ ಜಾತೀಯ ಸಂಘರ್ಷವನ್ನು ನೆನೆಸಿಕೊಂಡರೆ ಭಾರತ ಸ್ವಾತಂತ್ರ್ಯ ಗಳಿಸಿ 74 ವರ್ಷಗಳಾದರೂ ಇಂತಹ ವ್ಯವಸ್ಥೆ ಬದಲಾಗಲಿಲ್ಲವಲ್ಲ ಎಂದು ಖೇದವಾಗುತ್ತದೆ. ಎಲ್ಲರಿಗೂ ಮಾದರಿಯಾಗ ಬೇಕಿದ್ದ, ತಿಳುವಳಿಕೆಯುಳ್ಳವರೇ ಕಚ್ಚಾಟ ಮಾಡಿಕೊಂಡು, ಒಬ್ಬರಿಗೊಬ್ಬರು ದೂಷಿಸುತ್ತಾ ಸಾಗಿದರೆ, ಇಂದಿನ ಮುಗ್ಧ ಮಕ್ಕಳಿಗೆ ಯಾರ ಆದರ್ಶವನ್ನು ತಿಳಿಸುವುದು ಎಂಬುದೇ ತಿಳಿಯದಾಗಿದೆ. ಚುನಾಯಿತರಾದ ಜನಪ್ರತಿನಿಧಿಗಳು ಯುವ ಜನಾಂಗಕ್ಕೆ ಆದರ್ಶ ಪ್ರಾಯ ರಾಗಬೇಕಿದೆ. ಆದರೆ ಅದರ ಬದಲಾಗಿ ನಮ್ಮ ನಾಯಕರ ಅಧಿಕಾರ ದಾಹ , ಅಂತರ್ಜಗಳ , ಭಾರತದ ಪ್ರಜ್ಞಾಶೂನ್ಯ ಪ್ರಜೆಗಳಿಂದ ಭಾರತ ಇಂದು ಅದ್ಹಪತನಕ್ಕೆ ಏರುತ್ತಿದೆ .😔
ರಾಜ ಉತ್ತಮ ಆಡಳಿತಗಾರನಾಗಿದ್ದರೆ, ರಾಜ್ಯ ಸುಭೀಕ್ಷಾವಾಗಿರುತ್ತದೆ.ಅನ್ನ ಬೆಂದಿದೆಯೋ ಎಂದು ನೋಡಲು ಮಡಕೆಯ ಎಲ್ಲಾ ಅನ್ನ ಈಚುಕಬೇಕಿಲ್ಲ ತಾನೇ. ಒಂದೆರಡು ಅನ್ನ ಈಚುಕಿದರೆ ಸಾಕು. ಹಾಗೆಯೇ ಒಂದು ದೇಶದ ಆರೋಗ್ಯವಂತ ಸ್ಥಿತಿ ತಿಳಿಯಲು ಅಲ್ಲಿನ ಪ್ರಜೆಗಳ ಮನಸ್ಸನ್ನು ತಿಳಿದರೆ ಸಾಕು ಭಾರತೀಯ ಸಮಾಜದಲ್ಲಿ ಈಗಲೂ ನಡೆಯುತ್ತಿರುವ ಸಾಮಾಜಿಕ ವೈಪರೀತ್ಯಗಳು, ವರ್ಗ ಸಂಘರ್ಷ, ಜಾತಿ ವ್ಯವಸ್ಥೆ, ಕೋಮುವಾದಿಗಳ ಪಿಡುಗುಗಳನ್ನು ಮೆಟ್ಟಿ ನಿಂತರೆ ನಿಜವಾದ ಸ್ವಾತಂತ್ರ್ಯ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಸ್ವಾತಂತ್ರ್ಯವನ್ನು ಭಾರತೀಯರೆಲ್ಲರೂ ತಮ್ಮ ಪ್ರಾಂತ್ಯ, ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಒಗ್ಗಟ್ಟಿನಿಂದ ಆಚರಿಸಿ ಭಾರತ ಮಾತೆಯ ಉನ್ನತಿಗಾಗಿ ಶ್ರಮಿಸೋಣ. ಪ್ರಜ್ಞಾವಂತ ಯುವ ಜನಾಂಗವೇ ಏಳಿ ಎದ್ದೇಳಿ. ಎಚ್ಚೆತ್ತು ಕೊಳ್ಳಿ. ಉತ್ತಮ ಸಮಾಜ ನಿರ್ಮಾಣ ಮಾಡುವುದು ನಿಮ್ಮ ಕೈಯಲ್ಲಿದೆ ಅದಕ್ಕಾಗಿ ಇಂದೇ ಪಣ ತೊಡಿರಿ.
ಜೈ ಹಿಂದ್.
- ಸುಮಾ ಭಂಡಾರಿ,ಸುರತ್ಕಲ್
No comments:
Post a Comment