ಸಸ್ಯ ಲೋಕ -12
ಸಾಂಬಾರ ಬೆಳೆಗಳ ಪೈಕಿ ಸುಗಂಧ ಹಾಗೂ ಔಷಧೀಯ ಗುಣಗಳಿಂದ ಕೂಡಿದ ಲವಂಗದ ಬಗ್ಗೆ ಯಾರಿಗೆ ತಾನೆ ತಿಳಿದಿಲ್ಲ ಹೇಳಿ!? ಲವಂಗ, ಏಲಕ್ಕಿ, ಜಾಯಿಕಾಯಿ, ಜಾಪತ್ರೆ, ಕರಿಮೆಣಸು ಮತ್ತು ಚಕ್ಕೆ (ದಾಲ್ಚೀನಿ) ಇವೆಲ್ಲ ಜಗತ್ತಿನಾದ್ಯಂತ ಅತಿ ಬೇಡಿಕೆ ಇರುವ ಸಾಂಬಾರ ಪದಾರ್ಥಗಳು. ಇವೆಲ್ಲ ಭಾರತೀಯರ ಅಡಿಗೆಗೆ ಮೆರುಗು ನೀಡುವ ಸಾಂಬಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಿರ್ಟೇಸಿ ಕುಟುಂಬಕ್ಕೆ ಸೇರಿದ ಲವಂಗ ಇದರ ವೈಜ್ಞಾನಿಕ ಹೆಸರು "ಸಿಜಿಗಂ ಆರೊಮ್ಯಾಟಿಕಂ". ಇದೊಂದು ಪುಟ್ಟ ನಿತ್ಯ ಹರಿದ್ವರ್ಣ ಮರ. ಲವಂಗವನ್ನು ಹೆಚ್ಚಾಗಿ ಬೀಡ, ಪಾಯಸ,ಲಡ್ಡುಗಳ ಮೇಲೆ ಹಾಗೂ ಮಾಂಸಾಹಾರ ತಯಾರಿಸಲು ಬಳಸುವುದನ್ನು ನೋಡಿರುತ್ತೇವೆ. ಇದೊಂದು ಬೆಳೆಬಾಳುವ ಸಾಂಬಾರ ಪದಾರ್ಥವಾದರಿಂದ ಕೆಲವು ಬೀಡಾ ತಯಾರಕರು ಲವಂಗದ ಬದಲಾಗಿ ಅದರಷ್ಟಲ್ಲದಿದ್ದರೂ ಸುಗಂಧಯುಕ್ತವಾದ ಆಲ್ ಸ್ರೈಸ್ Allspice pimenta diocia ಎಂಬ ಮತ್ತೊಂದು ಪುಟ್ಟ ಮರದ ಮೊಗ್ಗನ್ನು ಉಪಯೋಗಿಸಿ ಬೀಡ ತಯಾರಿಸಿದರೂ ಇದು ಬೀಡಕ್ಕೆ ಲವಂಗ ನೀಡುವ ಮೆರುಗು ನೀಡಲಾರದು..
ಲವಂಗ ಅಂದರೆ ಏನು?
ಲವಂಗ ಮರದಿಂದ ಉತ್ಪನ್ನವಾಗುವ ಹೂವಲ್ಲ, ಕಾಯಿ ಅಲ್ಲ , ಹಣ್ಣು ಅಲ್ಲ!!! ಹಾಗಾದರೆ ಏನದು!!? ಅದು ಕೇವಲ ಅರಳದ ಮೊಗ್ಗು.. ದಳಗಳು ಮುಚ್ಚಿರುವಾಗಲೇ ಮರದಿಂದ ಕೊಯ್ದು ನೆರಳಿನಲ್ಲಿ ಒಣಗಿಸಿದರೆ ಬಳಸಲು ಯೋಗ್ಯ. ತುದಿಯಲ್ಲಿ ಟಾರ್ಚಿನ ಬಿಲ್ಲಿನಂತೆ ಎದ್ದು ಕಾಣುವ ಆ ಭಾಗವನ್ನು ಪುಷ್ಪಪಾತ್ರ ಎಂದು ಕರೆಯುವರು.
ಇದರ ಹೂವರಳಿ ಪರಾಗಸ್ಪರ್ಶದಿಂದುಂಟಾಗುವ ಹಣ್ಣು ಒಂದು ಡ್ರೂಪ್ ಮಧ್ಯದಲ್ಲಿ ಒಂದು ಓಟೆಯುಳ್ಳ ತಿರುಳುಗಾಯಿ ಇದರಿಂದ ಗಿಡ ಬೆಳೆಸಬಹುದು ಹೊರತು ಬೇರೇನೂ ಪ್ರಯೋಜನವಿಲ್ಲ.
ಲವಂಗ ಚರಕ, ಶುಷೃತರ ಕಾಲದಿಂದಲೂ ಭಾರತೀಯರಿಗೆ ಪರಿಚಿತ. ಇದರ ಮೂಲ ಇಂಡ್ಯೋನೆಷ್ಯಾವಾಗಿದ್ದು, ಮಲಕ್ಕ ಮತ್ತು ಅದರ ಸುತ್ತಮುತ್ತಲಿನ ದ್ವೀಪಗಳಲ್ಲಿ ಮಾತ್ರ ಲವಂಗ ಬೆಳೆಯುತ್ತಿತ್ತು. ಅಲ್ಲಿಂದ ಅದು ಚೀನಾ, ಭಾರತಗಳ ಮುಖಾಂತರ ಮೇಡಿಟರೇನಿಯನ್ ಪ್ರದೇಶವನ್ನು ಕಡಲ ಮೂಲಕ ತಲುಪುತ್ತಿತ್ತು. ಡಚ್ಚರು 17ನೇ ಶತಮಾನದಲ್ಲಿ ಮಲಕ್ಕ ದ್ವೀಪದ ಸರ್ವಾಧಿಕಾರಿಗಳಾಗಿ ವ್ಯಾಪಾರದಲ್ಲಿ ತೊಡಗಿದಂದಿನಿಂದ 18ನೇ ಶತಮಾನದವರೆಗೂ ಇದರ ಸ್ವಾಯಂವನ್ನು ತಮ್ಮ ಕೈಯಲ್ಲೇ ಇರಿಸಿಕೊಂಡಿದ್ದರು.
ನಂತರ ಅಂತ್ಯದಲ್ಲಿ ಈ ಬೆಳೆಯನ್ನು ಫ್ರೆಂಚರು ವೆಸ್ಟ್ ಇಂಡೀಸ್ ನಲ್ಲಿ ನೆಲೆಯೂರಿಸಿದರು. ದಕ್ಷಿಣ ಭಾರತದಲ್ಲಿ ಸರಿಸುಮಾರು 70-80 ವರ್ಷಗಳಿಂದ ಲವಂಗದ ಸಾಗುವಳಿ ಆರಂಭಿಸಿತು. ನಮ್ಮ ಕರ್ನಾಟಕ ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ಲವಂಗ ಬೆಳೆಯುತ್ತಾರೆ.
ಲವಂಗ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ ಎಂಬ ವಿಚಾರ ಭಾರತೀಯರಿಗೆ ಬಹುಕಾಲದಿಂದಲೂ ತಿಳಿದಿತ್ತು. ಹಾಗಾಗಿ ಆಸ್ಥಾನಕ್ಕೆ ಬರುವ ಅಧಿಕಾರಿಗಳು ಸದಾ ಬಾಯಲ್ಲಿ ಲವಂಗವನ್ನು ಇಟ್ಟುಕೊಂಡು ಬರಬೇಕು ಎನ್ನುವ ಫರ್ಮಾನು ಕ್ರಿ.ಪೂ 3ನೇ ಶತಮಾನದಿಂದಲೂ ಚೀನಾದಲ್ಲಿ ಇತ್ತಂತೆ. ಕಿವಿ ತೂತನ್ನು ಮುಚ್ಚಲು ಬೇರೇನೂ ಇಲ್ಲದಿರುವ ಕಡುಬಡವರು ಅಪರೂಪಕ್ಕೆ ಲವಂಗವನ್ನು ಚುಚ್ಚಿಕೊಳ್ಳುತ್ತಿದ್ದರಂತೆ.
ಆಯುರ್ವೇದ ಔಷಧಿಗಳ ಉತ್ಪಾದನೆಯಲ್ಲಿ ಲವಂಗದ ಪಾತ್ರ ಅಗಣಿತ...
ಉಪಯೋಗ:-
ಲವಂಗದ ಎಣ್ಣೆ ಹಲ್ಲುನೋವಿಗೆ ಶಮನಕಾರಿ.
ವಾಂತಿ ಬರುವಂತಹ ಸಂದರ್ಭ ಹಾಗೂ ಕೆಮ್ಮು ಇವನ್ನು ಲವಂಗ ಸೇವನೆಯಿಂದ ನಿಯಂತ್ರಿಸಲು ಸಾಧ್ಯ.
ವಾತರೋಗ ಹಾಗೂ ಗಾಯಗಳ ಔಷಧಿ ತಯಾರಿಕೆಯಲ್ಲಿ ವಿಶೇಷವಾಗಿ ಬಳಕೆಯಾಗುವಂಥದ್ದು ಲವಂಗದ ಎಣ್ಣೆ.
ಅಜೀರ್ಣ ದಿಂದಾಗಿ ಹೊಟ್ಟೆನೋವು, ಹೊಟ್ಟೆ ಉಬ್ಬರ , ಹೊಟ್ಟೆ ಗಟ್ಟಿಯಾಗುವಿಕೆ ಇವೆಲ್ಲದರ ಪರಿಹಾರಕ್ಕೆ ಲವಂಗದ ಕಷಾಯ ಸೂಕ್ತ.
ನೋವಿರುವ ಹಲ್ಲಿಗೆ ಲವಂಗದ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ ಒತ್ತಿ ಹಿಡಿದರೆ ಕೆಲವೇ ಸೆಕೆಂಡುಗಳಲ್ಲಿ ಹಲ್ಲುನೋವು ಮಾಯ.
ಕೆಲವು ಟೂಥ್ ಪೇಸ್ಟ್ ಮತ್ತು ಮೌತ್ ವಾಶ್ ಸಾಧನಗಳಲ್ಲಿ ಲವಂಗದ ಬಳಕೆ ಕಡ್ಡಾಯ ಮಾಡುತ್ತಿದ್ದಾರೆ, ಇದರಿಂದ ಬಾಯಿ ದುರ್ಗಂಧದ ನಿವಾರಣೆ ಸಾಧ್ಯ.
ಲವಂಗದ ತೈಲವು ರೋಗ ನಿರೋಧಕ ಔಷಧಗಳ ಉತ್ಪಾದನೆಗೂ ಅಗತ್ಯವಾಗಿದೆ.
ಲವಂಗ ಬೆಳೆ
ಇಷ್ಟೆಲ್ಲಾ ಮಾಹಿತಿ ಸಿಕ್ಕ ಮೇಲೆ ಲವಂಗ ಬೆಳೆಯುವ ಆಸಕ್ತಿ ನಿಮ್ಮಲ್ಲಿ ಇದ್ದರೆ ಇಲ್ಲಿ ಕೇಳಿ.....
ಸಾಮಾನ್ಯವಾಗಿ ಎಲ್ಲ ನಮೂನೆಯ ಮಣ್ಣಲ್ಲಿ ಲವಂಗ ಬೆಳೆಯುತ್ತಾದರೂ ಮರಳು ಮಿಶ್ರಿತ ಕೆಂಪು ಮಣ್ಣಲ್ಲಿ ಇನ್ನು ಚೆನ್ನಾಗಿ ಬೆಳೆಯುತ್ತದೆ. ಅದೇ ರೀತಿ ಈ ಗಿಡ ಜಾಸ್ತಿ ಉಷ್ಣತೆ ತಾಳದು ಹಾಗಾಗಿ ಮಲೆನಾಡು ಹಾಗೂ ಕರಾವಳಿ ಪ್ರದೇಶ ಸೂಕ್ತವಾಗಿದೆ. ನಮ್ಮ ರೈತರು ಅಡಿಕೆ ಬೆಳೆಯ ನಡುವೆ ಲವಂಗವನ್ನು ಮಿಶ್ರ ಬೆಳೆಯಾಗಿ ಬೆಳೆಯಬಹುದು. ಇದರ ನಿರ್ವಹಣೆ ಕೂಡ ತುಂಬಾ ಸುಲಭ. ನರ್ಸರಿಯಲ್ಲಿ ಗಿಡ ಸಿಗುವ ಕಾರಣ ಅಲ್ಲಿಂದ ಗಿಡ ತಂದು ನೆಟ್ಟರೆ 4-5 ವರ್ಷಗಳಲ್ಲಿ ಮೊಗ್ಗು ಬಿಡಲು ಆರಂಭವಾಗುತ್ತದೆ. ಗಿಡ ಚೆನ್ನಾಗಿ ಬೆಳೆದು ಮೊಗ್ಗು ಬಿಡಬೇಕೆಂದರೆ ಕೊಟ್ಟಿಗೆ ಗೊಬ್ಬರ ಹಾಗೂ ಅಡಿಕೆಗೆ ನೀಡುವಷ್ಟು ನೀರು ನೀಡಿದರೆ ಸಾಕು, ದೀರ್ಘಕಾಲೀನ ಬೆಳೆಯಾದ ಲವಂಗವು ಲಾಭದಾಯಕ ಬೆಳೆಯಾಗಿ ರೈತರ ಮುಖದಲ್ಲಿ ಹರ್ಷವನ್ನು ತರುತ್ತದೆ ಅನ್ನುದರಲ್ಲಿ ಎರಡು ಮಾತಿಲ್ಲ.
ಸುಪ್ರೀತ ಪ್ರಶಾಂತ್ ಭಂಡಾರಿ, ಸೂರಿಂಜೆ
No comments:
Post a Comment