BhandaryVarthe Team

BhandaryVarthe Team
Bhandary Varthe Team

Thursday, 15 April 2021

ದಿನನಿತ್ಯ ಜೀವನದಲ್ಲಿ ಮಾತಿನ ಮಹತ್ವ-ಸುಪ್ರೀತಾ ಭಂಡಾರಿ, ಸೂರಿಂಜೆ

         ಭೂಮಿ ಮೇಲಿರುವ ಕೋಟ್ಯಂತರ ಜೀವಿಗಳಲ್ಲಿ ಮಾನವ ಪರಿಪೂರ್ಣವಾದ ಹಾಗೂ ವಿಭಿನ್ನವಾದವನು ಎನ್ನುದರಲ್ಲಿ ಎರಡು ಮಾತಿಲ್ಲ. ಆ ದೇವರ ಅಪರೂಪದ ಅದ್ಭುತವಾದ ಪರಿಕಲ್ಪನೆಯ ಫಲವೇ ಈ ಮಾನವ ಸೃಷ್ಟಿ. ಮಾನವರಾದ ನಮಗೆ ಆಲೋಚನಾ ಶಕ್ತಿ ಇದೆ. ತರ್ಕಬದ್ಧವಾಗಿ ಯೋಚಿಸುವ ಹಾಗೂ ತನ್ನ ಭಾವನೆಗಳನ್ನು ಇತರರೊಡನೆ ವ್ಯಕ್ತಪಡಿಸುವ ಸಾಮರ್ಥವನ್ನು ಪಡೆದಿದ್ದೇವೆ ಭಾವನೆಗಳ ಅಭಿವ್ಯಕ್ತಿಗೆ ಮಾತು ಆ ದೇವರು ನಮಗಿತ್ತ ಅಪೂರ್ವ ಕೊಡುಗೆ.

        ನಮ್ಮ ಜೀವನದಲ್ಲಿ ಮಾತು  ಎನ್ನುವ ಎರಡು ಪದಗಳಿಗೆ ಮಹತ್ತರ ಪಾತ್ರವಿದೆ . ನಾವು ಆಡುವ ಉಪಯೋಗಿಸುವ ಮಾತು ಮುತ್ತಿನ ಹಾರದಂತಿರಬೇಕು. ಮಾತಿನಲ್ಲಿ ನಯ-ವಿನಯವಿದ್ದರೆ ದ್ವೇಷದ ದ್ವಾರವನ್ನು ತೆರೆಯಬಲ್ಲದು. ಸಮರ ಸಾರುದಾಗಾಲಿ ಶಾಂತಿ ಸಂಧಾನವಾಗಲಿ ಎರಡನ್ನು ಮಾಡುವುದು ಮಾತಿನ ಸಾಮರ್ಥ್ಯ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತ್ತು ಎಂಬಂತೆ ಮಾತು ಆಡುವಾಗ ಎಚ್ಚರದಿಂದರಬೇಕು.

        ಮಾತು ಮಾನವ ಸಮಾಜದ ಜೊತೆಗೆ ಶುರುವಾಯಿತೆನ್ನುತ್ತಾರೆ ಬಲ್ಲವರು. ಅಕ್ಷರವಿಲ್ಲದ ಸಮಾಜಗಳು ಇಂದಿಗೂ ಹಲವಿದೆ.ಆದರೆ ಮಾತಿಲ್ಲದ ಸಮಾಜಗಳು ಎಲ್ಲಿಯೂ ಇಲ್ಲ. ಅಕ್ಷರಸ್ಥ ಸಮಾಜಗಳಲ್ಲೂ ಬರವಣಿಗೆಗಿಂತ ಮಾತಿನದೇ ಮೇಲುಗೈ. ನಾವೆಲ್ಲರೂ ಒಂದು ದ್ವೀಪವಾದರೆ ಮಾತು ನಮ್ಮನ್ನು ಸಾಗರೋಪಾದಿಯಲ್ಲಿ ಆವರಿಸಿದೆ. ಮಾತು ಗಾಳಿಯಲ್ಲಿ ತೇಲಿ ಹೋಗಬಾರದೆಂಬ ಇಚ್ವೆಯಿಂದ ಜನ ಬರವಣಿಗೆ ಶುರು ಹಚ್ಚಿಕೊಂಡರು.

        ಮನುಷ್ಯ ಸಮಾಜ ಜೀವಿಯಾದುದರಿಂದ ಮತ್ತು ಮನುಷ್ಯನೊಳಗೆ ಮನಸ್ಸಿರುವುದರಿಂದ ಆ ಮನಸ್ಸಿನ ಭಾಗವಾಗಿಯೇ ಸಂವಹನ ಸಾಧ್ಯವಾಗುವುದು. ಮನಸ್ಸಿನ ಭಾವನೆಯನ್ನು ಮಾತಿನ ರೂಪದಲ್ಲಿ ಹೊರಹಾಕುತ್ತೇವೆ. ಸಂವಹನದ ಬಹುಮುಖ್ಯ ಭಾಗ ಮಾತು. ಜಗತ್ತಿನ ಎಲ್ಲಾ ಸಮಸ್ಯೆಗಳ ಮೂಲ ಇರುವುದು ಸಂವಹನದ ಕೊರತೆಯಿಂದಾಗಿ. ಮನುಷ್ಯ-ಮನುಷ್ಯರ ನಡುವೆ ನಿರಂತರ ಸಂವಾದ ಮತ್ತು ಅರ್ಥವಂತಿಕೆಯನ್ನು ಸ್ಥಾಪಿಸಲು ಸಂವಹನ ಅತಿ ಅಗತ್ಯ. ಮಾತಿಗೂ ಸಂದರ್ಭಕ್ಕೂ ಸನ್ನಿವೇಶಕ್ಕೂ ನಿಕಟ ಸಂಬಂಧವಿರುತ್ತದೆ. ಆದ್ದರಿಂದ ಒಂದೇ ಮಾತನ್ನು ಅಥವಾ ನಡವಳಿಕೆಯನ್ನು ಎಲ್ಲ ಕಡೆಯೂ ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ. ಆಯಾಯ ಸಂದರ್ಭಕ್ಕೆ ತಕ್ಕಂತೆ ನಮ್ಮ ಮಾತಿನ ಮೇಲೆ ನಮಗೆ ಹಿಡಿತವಿದ್ದರೆ ಒಳ್ಳೆಯದು...

       ಮಾತನಾಡುವುದು ಒಂದು ಕಲೆ.ಮಾತು ಯಾವಾಗಲೂ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಮಾತಾಡುವ ಕಲೆ ಜ್ಞಾನದೊಂದಿಗೆ ವಿದ್ಯೆಯೊಂದಿಗೆ ಬೆಳೆಯಬೇಕು. ಮಾತು ಬಲ್ಲವರೆಲ್ಲ ಮಾತುಗಾರರಲ್ಲ. ತಾನು ಎಷ್ಟು ಮಾತನಾಡಿದೆ ಎನ್ನುದಕ್ಕಿಂತ ಹೇಗೆ ಮಾತನಾಡಿದೆ ಅನ್ನೋದು ಮುಖ್ಯ. ಅರ್ಥವೇ ಇಲ್ಲದ ಮಾತಿಗೆ ಬೆಲೆಯಿಲ್ಲ. ಮಾತು ಬರುವುದು ಬೇರೆ, ಮಾತನಾಡಬಲ್ಲವರು ಬೇರೆ. ಮಾತು ಒಂದು ಪರಿಣಾಮಕಾರಿಯಾಗಲು ಅದಕ್ಕೆ ಸಾಧನೆಯೂ ಅಗತ್ಯ. ಮಾತನಾಡುವವರು ಮತ್ತು ಸ್ವೀಕರಿಸುವವರು ಮಾತಿನ ಮಹತ್ವವನ್ನು ಅರಿತಿದ್ದರೆ ಸಂವಹನ ತನ್ನ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ತಾನೊಬ್ಬ ಒಳ್ಳೆಯ ಮಾತುಗಾರ, ತಾನೇನು ಮಾತನಾಡಿದರೂ ನಡೆಯುತ್ತದೆ ಎಂಬ ಧೋರಣೆ ಇಟ್ಟುಕೊಂಡವನು. ಮಾತುಗಾರಿಕೆಯ ಬಗ್ಗೆ ಕಲಿಯುದಕ್ಕೇನಿದೆ ಎಂದು ಉದಾಸೀನ ತಾಳುವನು.

       ಮಾತಿನಲ್ಲಿ ಅನೇಕ ವಿಧಗಳಿವೆ. ಕೊಕ್ಕೆಮಾತು (ವಕ್ರ ನುಡಿ), ಗಾಳಿ ಮಾತು ತೊದಲ ಮಾತು (ಅಸ್ಪಷ್ಟ ನುಡಿ) ಬಣ್ಣದ ಮಾತು ಬೆಲ್ಲದ ಮಾತು ಪಡೆ ಮಾತು ಇತ್ಯಾದಿ. ಹೀಗೆ ಅನೇಕ ಬಗೆಗಳಲ್ಲಿ ಮಾತಿನ ಅನೇಕ ಅವತಾರಗಳನ್ನು ಅರಿತು ಅರಿಯದೆಯೋ ನಮ್ಮ ದಿನನಿತ್ಯದ ಮಾತುಕತೆಯಲ್ಲಿ ಪ್ರಸ್ತಾಪಿಸುತ್ತೇವೆ. ಮಾತಿಗೆ ಎಷ್ಟು ಪ್ರಾಮುಖ್ಯತೆ ಇದೆಯೆಂದರೆ ಅರ್ಥವಿಲ್ಲದ ಮಾತು ಅಪಹಾಸ್ಯಕ್ಕೆ ಗುರಿಯಾದೀತು..ಇದೇ ಕಾರಣಕ್ಕಾಗಿ ಮಾತು ಬಲ್ಲವನಿಗೆ ಜಗಳವಿಲ್ಲ,ಮಾತು ಮನೆ ಕೇಡಿಸಿತು,  ಮುಂತಾದ ಪಡೆನುಡಿಗಳು ಜನಸಾಮಾನ್ಯರಲ್ಲಿ ಪ್ರಚಲಿತವಾಗಿದೆ.

        ಮಾತುಗಾರಿಕೆ ಅನ್ನುವುದು ಯಾರಿಗೂ ಹುಟ್ಟಿನಿಂದಲೇ ಸಿದ್ದಿಸಿಲ್ಲ.ನಾಯಕತ್ವ ಕೂಡಾ ಹಾಗೆಯೇ. ನಾವು ಆಡುವ ಮಾತು ಪುಸ್ತಕದ ಬದನೆಯಂತಿದ್ದರೆ ಕೇಳಲು ಹಿತವಾಗಿರುದಿಲ್ಲ.ಮಾತಿನಲ್ಲಿ ಹಾವ-ಭಾವ ಕೈಗಳ ಚಲನೆ ಹಾಸ್ಯದ ಸಂದರ್ಭ ಬಂದಾಗ ನಗು ಕೌತುಕದ ಸಂದರ್ಭದಲ್ಲಿ ವಿಸ್ಮಯದ ಛಾಯೆ ನಮ್ಮ ಮುಖ  ಅಥವಾ ಮಾತಿನಲ್ಲಿದ್ದರೆ ನಮ್ಮ ಎದುರಿಗಿದ್ದವರಿಗೂ ಮಾತನ್ನು ಮತ್ತು ಮತ್ತು ಕೇಳಬೇಕೆನಿಸುತ್ತದೆ.ಮುಗ್ಧ ಮಗುವಿನ ತೊದಲು ನುಡಿ ನಮಗೆ ಕೇಳಿದಷ್ಟು ಸಾಲದು ಅಲ್ಲವೇ ಹಾಗೆಯೇ ....ಮಾತು ಒಂದೆಡೆ ಕುಟುಂಬವನ್ನು ಬೆಸೆಯುವಲ್ಲಿ ಮುಂದಾದರೆ ಇನ್ನೊಂದೆಡೆ ಒಡೆಯುವಲ್ಲಿಯೂ ಪಾತ್ರ ವಹಿಸುತ್ತದೆ.ಹೀಗಾಗಿ ನಮ್ಮ ಮಾತಿನ ಮೇಲೆ ನಾವು ನಿಗವಹಿಸಿದರೆ ಉತ್ತಮ..

       ಇತರರ ಹೊಗಳಿಕೆಗಾಗಿ ಹಂಬಲಿಸುವುದು ಮಾನವ ಸಹಜ ಗುಣ.ಹಾಗೆಯೇ ಹೊಗಳುವುದು ಮತ್ತೊಂದು ಸಹಜ ಕ್ರಿಯೆ. ಹೆಂಡತಿಯನ್ನು ಓಲೈಸಲು ಗಂಡ ತುಂಟ ಮಗುವನ್ನು ದಾರಿಗೆ ತರಲು ತಂದೆ-ತಾಯಿ.. ಮುನಿಸಿಕೊಂಡಿರುವ ಪ್ರೇಯಸಿಯನ್ನು ಒಲಿಸಿಕೊಳ್ಳಲು ಹರಸಾಹಸ ಪಡುವ ಪ್ರಿಯಕರ....ಹೀಗೆ ಒಂದೇ ಎರಡೇ ದಿನನಿತ್ಯ ಜೀವನದಲ್ಲಿ ಒಂದಿಲ್ಲೊಂದು ಕಾರಣಕ್ಕಾಗಿ ಅನೇಕ ವಿಧಗಳಲ್ಲಿ ಮಾತನಾಡುವ ನಾವು ನಮ್ಮ ಮಾತಿನ ಬಗ್ಗೆ ಯೋಚಿಸದೆ ತಿಳಿದೋ ತಿಳಿಯದೆಯೋ ಇನ್ನೊಬ್ಬರಿಗೆ ಉಪದೇಶವನ್ನು ನೀಡುತ್ತೇವೆ..ಇದೇ ಮಾತನ್ನು ಕಲೆಯಂತೆ ಸಾಧನೆ ಮಾಡಿರುವವರು ಅದೆಷ್ಟೋ ಮಂದಿ ನಮ್ಮಲ್ಲಿ ಇದ್ದಾರೆ. ಆಕಾಶವಾಣಿ, ದೂರದರ್ಶನ ನಾಟಕ ಯಕ್ಷಗಾನ ಹೀಗೆ ಹತ್ತು ಹಲವು ರಂಗಗಳಲ್ಲಿ ತಮ್ಮ ವಾಕ್ಚತುರ್ಯದಿಂದ ಹೆಸರು ಮಾಡಿದವರಿದ್ದಾರೆ.

       ಇನ್ನು ಭಾಷಣಕಾರರ ವಿಷಯಕ್ಕೆ ಬರೋಣ ಸಭೆ-ಸಮಾರಂಭಗಳಲ್ಲಿ ಗಂಟೆಗಟ್ಟಲೆ ಮಾತಾಡಿ ನನ್ನ ನಾಲ್ಕು ಮಾತುಗಳನ್ನು ಮುಗಿಸುತ್ತೇನೆ ಎನ್ನುವ ಭೂಪರು.., ಗೊತ್ತಿಲ್ಲದ ಭಾಷೆಯಲ್ಲಿ ಯಾರೋ ಸಹಾಯಕರು ಬರೆದುಕೊಟ್ಟ ಚೀಟಿ ನೋಡಿ ಭಾಷಣ ಬಿಗಿಯುವರು.., ಗಂಟಲು ಹರಿಯುವಂತೆ ಕಿರುಚಿ ಓಟು ಗಿಟ್ಟಿಸಿಕೊಳ್ಳುವ ರಾಜಕಾರಣಿಗಳು ತಮ್ಮ ಎಲುಬಿಲ್ಲದ ನಾಲಗೆಯ ಮೂಲಕ ಪ್ರಮಾದವೆಸಗಿ, ಕೊನೆಗೆ ತಾವು ಹಾಗೆ ಹೇಳಲಿಲ್ಲ ಎಂದು ಜಾರಿಕೊಳ್ಳುತ್ತಾರೆ... ಅಸಂಬದ್ಧ ಪ್ರಲಾಪ ಗೈಯುವವರು ತನ್ನ ಮತ್ತು ಇತರರ ಸಮಯವನ್ನು ಪೋಲು ಮಾಡುತ್ತಾರೆಂದೇ ಲೆಕ್ಕ... ಅರ್ಥವಿಲ್ಲದ ಮಾತಿಗೆ, ಪೇಚಿಗೆ ಸಿಲುಕಿಕೊಳ್ಳುವವರ ಕಥೆಯಂತೂ ಇನ್ನು ಸ್ವಾರಸ್ಯಕರವಾದದ್ದು...

      ಅಳುವಿನಿಂದ ಶುರುವಾದ ನಮ್ಮ ಬದುಕು ಸುತ್ತಮುತ್ತಲ ಪ್ರಭಾವದಿಂದ ಮಾತು ಕಲಿಸುತ್ತಾ ಹೋಗುತ್ತದೆ. ಯಾವ ಭಾಷೆ ಅನ್ನುವುದು ನಮ್ಮ ಪರಿಸರದ ಮೇಲೆ ನಿಂತಿದೆ.ಮಾತನಾಡುವ ಶಕ್ತಿ ಸ್ವಾಭವಿಕವಾದರೂ ಅದು ಕಲೆಯೂ ಹೌದು.ಎಲ್ಲ ಸಮಾಜಗಳಲ್ಲಿ ದೊಡ್ಡವರು ಮಕ್ಕಳಿಗೆ ಮಾತಿನ ಸರಿ-ತಪ್ಪುಗಳನ್ನು ಕಲಿಸುತ್ತಾರೆ. ಯಾರ ಜೊತೆ ಹೇಗೆ ಮಾತನಾಡಬೇಕು, ಎಲ್ಲಿ ಯಾವ ತರಹ ಮಾತನಾಡಬೇಕು ಇತ್ಯಾದಿಗಳು ನಾವು ಸಮಾಜದಿಂದ ಕಲಿಯುವದರ ಮುಖ್ಯ ಭಾಗ ಎಂಬುದರಲ್ಲಿ ಎರಡು ಮಾತಿಲ್ಲ..

ಸುಪ್ರೀತಾ ಭಂಡಾರಿ, ಸೂರಿಂಜೆ

No comments:

Post a Comment