BhandaryVarthe Team

BhandaryVarthe Team
Bhandary Varthe Team

Sunday 8 August 2021

ಆಟಿಯ ಒಂದು ದಿನ-ಸುಮಾ ಭಂಡಾರಿ ಸುರತ್ಕಲ್ 

 ತುಳುವೆರೆ ಆಚರಣೆಗಳ ಬಗ್ಗೆ ಕಣ್ಣು ಹಾಯಿಸಿದರೆ, ಬೇರೆ ಊರಿಗೆ ಹೋಲಿಸಿದರೆ ತುಳುನಾಡಿನ ಆಚರಣೆಗಳು ವಿಶೇಷವಾಗಿದೆ. ಕಾರ್ತೆಲ್ ಕಳೆದು ಬರುವುದೇ ಆಟಿ(ಆಷಾಢ) ತಿಂಗಳು.


ತುಳುನಾಡಿನಲ್ಲಿ ಆಟಿ ತಿಂಗಳ ಅಮಾವಾಸ್ಯೆ ತುಂಬಾ ಪ್ರಾಶಸ್ತ್ಯ. ಜೋರಾಗಿ ಬಿಡದೆ ಸುರಿಯುವ ಮಳೆ ಒಂದೆಡೆ. ಇದರಿಂದಾಗಿ ಜನರಿಗೆ ರೋಗ ರುಜಿನಗಳು ಜಾಸ್ತಿ. ಸದಾ ಸುರಿಯುವ ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಂತು ಭೂಮಿಯೆಲ್ಲಾ ಕೆಸರು ಕೆಸರು ಆಗುತ್ತದೆ. ಜೊತೆಗೆ ಗಿಡಮರಗಳ ತರಗೆಲೆಗಳೂ ಉದುರಿ ನೀರಿನ ಜೊತೆ ಕೊಳೆಯುತ್ತದೆ. ಸೊಳ್ಳೆ ಬ್ಯಾಕ್ಟೀರಿಯಾ, ಕ್ರೀಮಿ ಕೀಟಗಳು ಜಾಸ್ತಿಯಾಗಿ ರೋಗ ರುಜಿನಗಳು ಜಾಸ್ತಿಯಾಗುತ್ತದೆ. ಇದರಿಂದಾಗಿ ಜ್ವರ , ಶೀತ, ಕೆಮ್ಮು ಕಾಡುತ್ತದೆ. ಮಕ್ಕಳಂತೂ ತುಂಬಾ ತೊಂದ್ರೆ ಪಡುತ್ತಾರೆ. ಥರಥರ ನಡುಗುವ ಚಳಿ, ಬಿಡದೆ ಸುರಿಯುವ ಮಳೆ ಇದರಿಂದ ದೇಹವನ್ನು ಉಷ್ಣವಾಗಿಡಲು ನಮ್ಮ ಹಿರಿಯರು ಕೆಸುವಿನ ಪತ್ರೊಡೆ , ತೇಟ್ಲ, ತಗತೆ ಸೊಪ್ಪಿನ ಪಲ್ಯ , ಅಲ್ಲದೆ ಸುತ್ತ ಮುತ್ತ ಬೀಗುವ ಸೊಪ್ಪುಗಳಾದ ತೇರೆ , ಸೀಗೆ, ನೆಕ್ಕರೆ, ಕುಂಟಾಲು , ಕೆಪುಲ ಇತ್ಯಾದಿ ಗಿಡಗಳ ತುದಿ(ಕೊಡಿ)ಯಲ್ಲಿ ಮಾಡಿದ ಸಾರು ಸೇವಿಸುತ್ತಿದ್ದರು. ಶೀತ ತುಂಬಿದ ದೇಹವನ್ನು ಬೆಚ್ಚಗಿಡಲು ಈ ಆಹಾರಗಳು ತುಂಬಾ ಸಹಾಯ ಮಾಡುತ್ತವೆ.

ಆಷಾಢ (ಆಟಿ) ತಿಂಗಳ ಅಮಾವಾಸ್ಯೆ ಬಂತೆಂದರೆ ಎಲ್ಲರಿಗೂ ಸಂಭ್ರಮ. ಮುಂಜಾನೆ ಬೇಗ ಎದ್ದು, ಕಲ್ಲು ಹಿಡಿದು ಹಾಲೆ(ಪಾಲೆ ಕೆತ್ತೆ) ಮರದಿಂದ ತೊಗಟೆಯನ್ನು ತಂದು ಕಷಾಯ ಮಾಡಿ ಕುಡಿಯುವುದು ಸಂಪ್ರದಾಯ. ಈ ಮರಕ್ಕೆ ಸಪ್ತವರ್ಣಿ ಎಂದೂ ಕರೆಯುತ್ತಾರೆ .ಏಳು ಎಲೆಗಳಿಂದ ಕೂಡಿದ ಎಲೆ ಆದ್ದರಿಂದ ಇದಕ್ಕೆ ಸಪ್ತವರ್ಣಿ ಎಂದು ಕರೆಯುತ್ತಾರೆ.

ಹಾಲೆ ಮರದ ತೊಗಟೆಯನ್ನು ಸೂರ್ಯೋದಯದ ಮೊದಲು ಕಲ್ಲಿನಿಂದ ಗುದ್ದಿ ತಂದು, ಅದಕ್ಕೆ ಬೆಳ್ಳುಳ್ಳಿ, ಕರಿಮೆಣಸು, ಓಂಕಾಳು(ಓಮ) ಹಾಕಿ ಕಡೆಯುವ ಕಲ್ಲಿನಲ್ಲಿ ಅರೆದು ಸೋಸಬೇಕು. ನಂತರ ಬೊಳ್ಳುಕಲ್ಲ(ಬಿಳಿ ಕಲ್ಲು)ನ್ನು ಕೆಂಡಕ್ಕೆ ಹಾಕಿ ಕೆಂಪು ಕಾದ ಬಳಿಕ ಬೆಳ್ಳುಳ್ಳಿ ಜಜ್ಜಿ ಅದರ ಮೇಲೆ ಇಟ್ಟು ಕಾಯಿಸಿ ಕಲ್ಲಿನ ಸಮೇತ ಒಗ್ಗರಣೆ ಕೊಡಬೇಕು. ಖಾಲಿ ಹೊಟ್ಟೆಗೆ ಕಷಾಯ ಕುಡಿದು ನಂತರ ಮೆಂತೆ ನೆನ ಹಾಕಿ ಮಾಡಿದ ಸಾಮಾನಿನ ಗಂಜಿ ತಿನ್ನಬೇಕು. ಈ ಗಂಜಿ ಮಾಡುವ ವಿಧಾನ ತುಳುನಾಡಿನಲ್ಲಿ ಎಲ್ಲರಿಗೂ ತಿಳಿದಿದೆ. ನೆನೆ ಹಾಕಿದ ಮೆಂತೆಯ ಜೊತೆ, ಬೆಳ್ತಿಗೆ, ಬೆಲ್ಲ ಹಾಕಿ ಬೇಯಿಸಬೇಕು. ಮತ್ತೆ ತೆಂಗಿನಕಾಯಿ, ಕೊತ್ತಂಬರಿ , ಜೀರಿಗೆ ಹಾಕಿ ನುಣ್ಣಗೆ ರುಬ್ಬಿ ಬೇಯಿಸಿದ ಗಂಜಿಗೆ ಹಾಕಿ ಕುದಿಸಬೇಕು. ರುಚಿ ತಕ್ಕಷ್ಟು ಉಪ್ಪು ಹಾಕಿ ಕುದಿಸಿದರೆ ಆಯಿತು ಗಂಜಿ ರೆಡಿ. ಕೆಲವರು ಕಡೆಯುವಾಗ ಗಸಗಸೆಯನ್ನು ಹಾಕುತ್ತಾರೆ. ಈ ಗಂಜಿ ತುಂಬಾ ತಂಪು. ಹಾಲೆ ಮರದ ಕಷಾಯ ಉಷ್ಣ ಆದ ಕಾರಣ, ಉಷ್ಣ ಶಮನ ಮಾಡಲು ಈ ಗಂಜಿ ಮಾಡಿ ತಿನ್ನಲೇ ಬೇಕು.

ಹಾಲೆ ಮರದ ತೊಗಟೆಯನ್ನು ತೆಗೆಯುವಾಗ ಕಬ್ಬಿಣದಿಂದ(ಕತ್ತಿ) ತೆಗೆಯಬಾರದು ಎಂದು ಹಿರಿಯರು ಹೇಳುತ್ತಾರೆ. ಕತ್ತಿಯಿಂದ ತೆಗೆದರೆ ವಿಷವಾಗುತ್ತದೆ ಎನ್ನುತ್ತಾರೆ. ಇದಕ್ಕೆ ಇನ್ನೊಂದು ಕಾರಣವೂ ಇರಬಹುದು .ಕತ್ತಿಯಿಂದ ಚುಚ್ಚಿ ತೆಗೆಯುವಾಗ ಮರದ ತಿರುಳಿಗೆ ತಾಗಿ ಮರ ಸಾಯಬಹುದು. ಉಪಯುಕ್ತವಾದ ಮರ ನಾಶವಾಗುತ್ತದೆ ಎಂಬ ಕಾಳಜಿಯಿಂದ ಹೀಗೆ ಹೇಳಿರಲೂಬಹುದು. ಅದೇನೇ ಇರಲಿ ಹಿರಿಯರ ಮಾತು ವೇದಕ್ಕೆ ಸಮಾನ. ಯಾವುದೇ ಉದ್ದೇಶ ಇಲ್ಲದೆ ಅವರು ಹೇಳಿರಲಿಕ್ಕಿಲ್ಲ. ಈ ಮರ ಹಾಲು ಸುರಿಯುವ ಮರ ಆದ ಕಾರಣ ಲೋಹಗಳು ಸೇರಿ ಕ್ಯಾಮಿಕಲ್ ರಿಯ್ಯಕ್ಷನ್ ಆಗಬಹುದು ಎಂಬ ವೈಜ್ಞಾನಿಕ ಕಾರಣವೂ ಇರಬಹುದು ಅಲ್ಲವೆ..... ಆದರೆ ಈಗಿನ ಆಧುನಿಕ ಜನರು ಎಲ್ಲವನ್ನೂ ಕಡೆಗಣಿಸುತ್ತಾರೆ. ಯಾವುದೇ ಆಚರಣೆಗಳನ್ನು ಪಾಲಿಸಲು ಹಿಂದೇಟು ಹಾಕುತ್ತಾರೆ. ನಮ್ಮ ಈ ಅತಿಯಾದ ನಿರ್ಲಕ್ಷ್ಯವೂ ಕೋರೋನದಂತ ಖಾಯಿಲೆ ಬರಲು ಕಾರಣವೂ ಆಗಿರಬಹುದು. ಯಾವುದೋ ಒಂದು ಕಾರಣ ಇದ್ದುದರಿಂದ ಹಿಂದಿನವರು ಈ ಆಚರಣೆಗಳನ್ನು ಮಾಡಿದ್ದಾರೆ ಎಂದು ನಂಬಿ ನಡೆದರೆ ಎಲ್ಲರಿಗೂ ಒಳಿತಾಗುವುದು ಅಂತೂ ಸತ್ಯ.

ಊರಿಗೆ ಬಂದ ಮಾರಿ ಕಳೆಯಲು ಆಟಿ ಕಳೆಂಜ ಊರೂರೂ ಸುತ್ತಿ ಮಾರಿ ಓಡಿಸುವುದು ತುಳುನಾಡಿನಲ್ಲಿ ವಿಶೇಷ. ಈ ಆಟಿ ಕಳೆಂಜನ ವಿಕಾರವಾದ ವೇಷ ನೋಡಿ ಚಿಕ್ಕ ಮಕ್ಕಳು ಹೊರಗೆ ಬರಲು ಹೆದರುತ್ತಾರೆ. ದೊಡ್ಡ ಮಕ್ಕಳಂತೂ ಅವರು ಹಿಂದೆನೇ ಸಾಗಿ , ನೃತ್ಯ ನೋಡಿ ಖುಷಿ ಪಡುತ್ತಾರೆ. ಆಟಿ ತಿಂಗಳಲ್ಲಿ ಯಾವುದೇ ಶುಭ ಕಾರ್ಯಗಳೂ ನಡೆಯುವುದಿಲ್ಲ. ಅಲ್ಲದೇ ಹೊಸ ಮದುವೆಯಾದ ಹೆಣ್ಣು ಮಗಳನ್ನು ತವರುಮನೆಗೆ ಕಳುಹಿಸುವುದು ತುಳುವೆರೆ ಪದ್ದತಿ. ಆಷಾಢ (ಆಟಿ)ದಲ್ಲಿ ಗಂಡ ಹೆಂಡತಿ ಒಟ್ಟು ಸೇರಬಾರದು ಎಂಬ ಕಾರಣಕ್ಕಾಗಿ ಈ ಪದ್ದತಿ ಜಾರಿಯಲ್ಲಿದೆ.

ಆಟಿಯಲ್ಲಿ ನಡೆಯುವ ಹಬ್ಬ ಎಂದರೆ ನಾಗರಪಂಚಮಿ. ಕುಟುಂಬದ ನಾಗನಿಗೆ ತನು (ಹಾಲು) ತಂಬಿಲ ಸೇವೆ ಮಾಡಿ ಇಷ್ಟ ದೇವರಾದ ನಾಗದೇವರನ್ನು ಪ್ರಾರ್ಥಿಸುತ್ತಾರೆ ತುಳುವರು. ತುಳುನಾಡು ಪರಶುರಾಮರ ಸೃಷ್ಟಿ. ತಂದೆ (ಸಪ್ತರ್ಷಿಗಳಲ್ಲಿ ಒಬ್ಬರಾದ ಜಮದಗ್ನಿ)ಯ ಮಾತಿಗೆ ಕಟ್ಟುಬಿದ್ದ ಪರಶುರಾಮರು ತಂದೆಯ ಅಪ್ಪಣೆಯಂತೆ ತಾಯಿಯ ತಲೆ ಕಡಿಯುತ್ತಾರೆ. ನಂತರ ಸಂತಸಗೊಂಡ ತಂದೆ ಜಮದಗ್ನಿಯವರು ಕೊಟ್ಟ ವರದಿಂದ ಸತ್ತ ತಮ್ಮಂದಿರು ಹಾಗೂ ತಾಯಿಯನ್ನು ಬದುಕಿಸುತ್ತಾರೆ. ರಕ್ತ ಸಿಕ್ತ ವಾದ ಕೊಡಲಿಯನ್ನು ಸಮುದ್ರಕ್ಕೆ ಬೀಸಾಡಿದಾಗ, ಮಹಾನ್ ಪತಿವ್ರತೆ(ರೇಣುಕಾ)ಯ ರಕ್ತ ಸೋಕಿದ ಕೊಡಲಿ ತಾಗಿ ಪಾಪ ಸುತ್ತಿಕೊಳ್ಳುತ್ತವೆ ಎಂದು ಹೆದರಿದ ಸಮುದ್ರರಾಜ ಹಿಂದೆ ಸರಿಯುತ್ತಾರೆ. ಹೀಗೆ ನಿರ್ಮಾಣ ಆದ ನಮ್ಮ ತುಳುನಾಡಿನಲ್ಲಿ ನಾಗಾರಾಧನೆ ಒಂದು ಪ್ರಮುಖ ಆಚರಣೆ ಆಗಿದೆ. ಆಟಿ ತಿಂಗಳಲ್ಲಿ ಬರುವ ಪಂಚಮಿಗೆ ತುಳುನಾಡಿನಲ್ಲಿ ಜನರು ಯಾವ ಮೂಲೆಯಲ್ಲಿ ಇದ್ದರೂ, ಅವರವರ ಕುಟುಂಬದ ನಾಗಬನಕ್ಕೆ ಹೋಗಿ ಹಾಲೆರೆದು ಪೂಜಿಸುತ್ತಾರೆ. ಜೋರಾಗಿ ಸುರಿಯುವಾಗ ಮಳೆಯಿಂದ ನಾಗ ಕಲ್ಲಿಗೆ ಎರೆದ ಹಾಲು ಪಾತಾಳ ತಲುಪಿ, ಪಾತಾಳ ಲೋಕದಲ್ಲಿ ಇದ್ದ ನಾಗದೇವರು ಸಂತೃಪ್ತರಾಗಿ ನಮ್ಮನ್ನು ಕಾಯುತ್ತಾರೆ ಎಂಬುದು ತುಳುವರೆ ನಂಬಿಕೆ.

ಹಿರಿಯರು ಹಾಕಿ ಕೊಟ್ಟ ಹಾದಿಯಲಿ ನಡೆಯುವುದು ಕಿರಿಯರಾದ ನಮ್ಮೆಲ್ಲರ ಕರ್ತವ್ಯ. ಯಾವುದೇ ಒಂದು ಆಚರಣೆಯಲ್ಲೂ ಅದರದೇ ಆದ ಮಹತ್ವ ಇದ್ದೆ ಇರುತ್ತದೆ. ಅವೆಲ್ಲಾ ಗೊಡ್ಡು ಸಂಪ್ರದಾಯಗಳು ಎಂದು ಹೀಗಳೆಯದೆ ಸಾಧ್ಯವಾದಷ್ಟು ಪಾಲಿಸುವ. ಈ ಸಂಪ್ರದಾಯಗಳು ನಶಿಸದೆ ಮುಂದಿನ ಪೀಳಿಗೆಗೂ ಸಿಗುವಂತಾಗಲಿ. ಧನ್ಯವಾದಗಳು.

ತುಳುವ ಬಂಧುಗಳೆಲ್ಲರಿಗೂ ಆಟಿ ಅಮಾವಾಸ್ಯೆಯ ಶುಭಾಶಯಗಳು🙏🏽

 

 

 

-ಸುಮಾ ಭಂಡಾರಿ ಸುರತ್ಕಲ್

 

No comments:

Post a Comment