BhandaryVarthe Team

BhandaryVarthe Team
Bhandary Varthe Team

Friday 1 October 2021

ಅಂತರಾಳ -ಭಾಗ 1

 ಆತ್ಮೀಯ ಓದುಗ ಮಿತ್ರರೇ....

ಇಂದಿನಿಂದ ಭಂಡಾರಿ ವಾರ್ತೆಯಲ್ಲಿ ಕೌಟುಂಬಿಕ ಕಥಾಹಂದರ ಹೊಂದಿರುವ "ಅಂತರಾಳ" ಧಾರಾವಾಹಿಯು ‌ ಪ್ರಕಟಣೆ ಗೊಳ್ಳಲಿದೆ.

ತಾವೆಲ್ಲರೂ ಎಂದಿನಂತೆ ಓದಿ ಪ್ರೋತ್ಸಾಹಿಸುವಿರಾಗಿ ಆಶಿಸುತ್ತೇವೆ...



 

ಅಂತರಾಳ -ಭಾಗ 1

ಶಮಿಕಾ ಕೆಲಸ ಮುಗಿಸಿ ಬಸ್ಸಲ್ಲಿ ಕುಳಿತಾಗ ಆಲೋಚನೆಗಳು ನುಗ್ಗಿ ಬರುತಿತ್ತು. ನನಗೆ ಮಂಗಳೂರಿನ  ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಸಿಕ್ಕಿ 2 ವರ್ಷವಾಯಿತು. ಕೈ ತುಂಬಾ ಸಂಬಳ ಸಿಗುತ್ತದೆ ಒಳ್ಳೆಯ ಮನೆಯನ್ನು ಬಾಡಿಗೆಗೆ ಪಡೆದು ತಾಯಿ ಭವಾನಿ ಮತ್ತು ನಾನು ಇಬ್ಬರೇ ಸಂತೋಷ, ಆತ್ಮೀಯತೆ, ಪರಸ್ಪರ  ಪ್ರೀತಿ ವಿಶ್ವಾಸದಿಂದ ಇದ್ದೇವೆ. ಆದರೆ ಇತ್ತೀಚಿಗೆ ನನಗೆ ತುಂಬಾ ಕೋಪ ಬರುತ್ತದೆ. ಕೋಪ ,ಸಂಶಯ ಬೇರೆ ಯಾರಲ್ಲೂ ಅಲ್ಲ ನನ್ನ ತಾಯಿಯ ಮೇಲೆಯೇ.

ಈಗ ನನಗೆ 23 ವರ್ಷ, ಇಲ್ಲಿಯವರೆಗೆ ಲೆಕ್ಕವಿಲ್ಲದಷ್ಟು ಸಲ ಅಪ್ಪ ಎಲ್ಲಿ? ಯಾರು? ಸಂಬಂಧಿಕರು ನಮಗೆ ಯಾರೂ ಇಲ್ಲವೇ ? ಎಂದು ಕೇಳಿ ಕೇಳಿ ಸಾಕಾಗಿದೆ. ನಾನು ಚಿಕ್ಕವಳಿರುವಾಗ ಬೇರೆ ಏನೋ ಹೇಳಿ ನನ್ನ ಪ್ರಶ್ನೆ ಮರೆಸುವುದು ಇಲ್ಲ ಆಟದ ಸಾಮಾನು ನೀಡಿ ಮರೆಯುವ ಹಾಗೆ ಮಾಡುತ್ತಿದ್ದರು. ಈಗ ಪ್ರಾಯಕ್ಕೆ ಬಂದ ಮೇಲೂ ಕೈ ತುಂಬಾ ಸಂಬಳ, ಮನೆಯ ಎಲ್ಲಾ ಖರ್ಚು ಎಲ್ಲಾ ನಾನೆ ನೋಡಿಕೊಳ್ಳುತ್ತಿದ್ದರೂ ಹೇಳುವುದಿಲ್ಲ ಎಂದರೆ ನನಗೇಕೋ ಸಂಶಯ ಬರುತ್ತದೆ. ಕಾಲೇಜು ಓದುತ್ತಿದ್ದಾಗ ಮನೆಯಲ್ಲಿ ಹೇಳದೆ ಯಾರ ಜೊತೆಗೋ ಓಡಿ ಹೋಗಿ ನನ್ನನ್ನು ಹೆತ್ತಿರಬಹುದು ಅದಕ್ಕೆ ಹೇಳುವುದಿಲ್ಲ. ಇಲ್ಲ..... ಇಲ್ಲ...ಅಮ್ಮ ಹಾಗೆ ಮಾಡಿರಲಾರರು. ಅಪ್ಪ ಅಮ್ಮ ಮದುವೆ ಮಾಡಿರಬಹುದು.ಗಂಡನನ್ನು ಬಿಟ್ಟು ಬೇರೆ ಪುರುಷನ ಜೊತೆ ಓಡಿ ಹೋಗಿರಬಹುದು. ಹಾಗಾಗಿ ಯಾರೂ ಸಂಬಂಧಿಕರು ಇಲ್ಲ....... ಛೇ ಏನೇನೋ ಯೋಚನೆಗಳು..... ಪಾಪ ಅಮ್ಮ ಎಷ್ಟು ಕಷ್ಟದಲ್ಲಿ ಬೆಳೆಸಿದ್ದರೊ ಏನೋ...... ಇಲ್ಲ ಇಂದು ಎನೇ ಆಗಲಿ ಈ ಬಗ್ಗೆ ತೀರ್ಮಾನ ಆಗಲೇಬೇಕು. ಬೇಕಿದ್ದರೆ ಯಾರ ಜೊತೆನೂ ಬದುಕಲಿ ನಾನು ಒಬ್ಬಳೇ ಇರುತ್ತೇನೆ. ನನಗೆ ದೈರ್ಯ, ಕೆಲಸ, ಮನೆ ಎಲ್ಲವು ಇದೆ. ಯಾಕೆ ಹೆದರಬೇಕು.ಇಂತಹ ಅಮ್ಮ ಇದ್ದಾರೆ ಎನೂ ಇಲ್ಲದಿದ್ದರೆ ಎನೂ...... ಎರಡು ಒಂದೇ...... "ಜ್ಯೋತಿ... ಜ್ಯೋತಿ.. ಯಾರು ಇಳಿಯಿರಿ" ನಿರ್ವಾಹಕನ ಧ್ವನಿ ಕೇಳಿ ಒಮ್ಮೆಲೇ ಯೋಚನೆಯಿಂದ ಎಚ್ಚೆತ್ತಾ ಶಮಿಕಾ ದಡಬಡನೆ ಎದ್ದು ಬಸ್ಸಿನಿಂದ ಇಳಿದು ಮನೆಯತ್ತ ಹೆಜ್ಜೆ ಹಾಕಿದಳು.

ಮನೆಗೆ ಹತ್ತಿರ ಹತ್ತಿರ ಆಗುವಾಗ ರಸ್ತೆಯಲ್ಲಿ ಅಮ್ಮ ನಡೆದು ಬರುತ್ತಿದ್ದರು."ನಾನು ಗ್ರಂಥಾಲಯಕ್ಕೆ ಹೋಗುತ್ತೇನೆ. ಬೀಗದ ಕೀ ದಿನಾ ಇಡುವಲ್ಲೇ ಇಟ್ಟಿದ್ದೇನೆ" ಎಂದು ಹೇಳಿ ಹೋಗಿಯೇ ಬಿಟ್ಟರು. ಶಮಿಕಾ ಒಮ್ಮೆ ಅವರನ್ನೇ ನೋಡಿ ಪುನಃ ಮನೆಯತ್ತ ಹೆಜ್ಜೆ ಹಾಕಿದಳು. ಮನೆಗೆ ಬಂದು ಬೀಗ ತೆಗೆದು ಒಳ ಹೋಗಿ ಸೀರೆ ಬದಲಿಸಿ ಕೈ ಕಾಲು ಮುಖ ತೊಳೆದು ಅಡುಗೆ ಕೊಣೆಗೆ ಬಂದಾಗ ನಾಲ್ಕು ನೀರು ದೋಸೆ,ಚಾ ಮಾಡಿಟ್ಟು ಹೋಗಿದ್ದರು. ಶಮಿಕಾ ದೋಸೆ ತಿಂದು ಚಾ ಕುಡಿದು ಓದಲು ಕುಳಿತಳು. ಆದರೆ ಮನಸ್ಸು ಓದಿನಲ್ಲಿ ಇರಲಿಲ್ಲ.

ಬೇರೆ ಎಲ್ಲೂ ಹೋಗುತ್ತಿತ್ತು.ತಕ್ಷಣ ಅಮ್ಮ ಯಾವಾಗಲೂ ಡೈರಿಯಲ್ಲಿ ಬರೆಯುವುದು ಆಗಾಗ ಅದನ್ನು ತೆಗೆದು ಓದುವುದು ಮಾಡುತ್ತಿದ್ದರು. ನನಗೆ ಮಾತ್ರ ಒಮ್ಮೆಯೂ ಡೈರಿ ಓದುವ ಅವಕಾಶ ಸಿಕ್ಕಿರಲಿಲ್ಲ. ಈ ದಿನ ಒಳ್ಳೆಯ ಅವಕಾಶ ಯಾಕೆ ಓದಬಾರದು ಎಂದೆನಿಸಿ ದಡಕ್ಕನೆ ಎದ್ದು ಅಮ್ಮ ಮಲಗುವ ಕೋಣೆಯಲ್ಲಿ ಹುಡುಕಿದಳು. ಸೀರೆಯ ಅಡಿಯಲ್ಲಿ ದಪ್ಪನಾದ ಡೈರಿ ಸಿಕ್ಕಿತು.ಮನೆಯ ಚಿಲಕ ಭದ್ರಪಡಿಸಿದಳು.ಡೈರಿ ಓದಿ ಅಮ್ಮನ ಪೂರ್ವಾಪರ ತಿಳಿದು ಗ್ರಹಚಾರ ಬಿಡಿಸಬೇಕು ಎಂದೆನಿಸಿದಳು.ಈ ರೀತಿ ಮನೆಯವರಿಗೆ, ಗಂಡನಿಗೆ, ಸ್ವಂತ ಮಗಳಿಗೆ ವಂಚಿಸಬಾರದು ಎಂದೆನಿಸಿತು ಶಮಿಕಾಳಿಗೆ. ಕೋಣೆಗೆ ಹೋಗಿ ಡೈರಿ ಬಿಡಿಸಿ ಓದಲಾರಂಭಿಸಿದಳು.

(ಮುಂದುವರಿಯುವುದು....)

✍️ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

1 comment:

  1. ಶಮಿಕಾಳ ತಾಯಿ ಶಮಿಕಾ ಯೋಚನೆ ಮಾಡಿದ ರೀತಿಯಲ್ಲಿ ಇರದೆ ತುಂಬಾ ಒಳ್ಳೆಯಳಾಗಿ ಇರುತ್ತಾರೆ. ಶಮಿಕಾಳ ತಂದೆ ಸಿಗುವ ಜಾನ್ಸ್
    ಹೆಚ್ಚು ಇದೆ.

    ReplyDelete