BhandaryVarthe Team

BhandaryVarthe Team
Bhandary Varthe Team

Thursday, 19 August 2021

ಗ್ರಾಮದೇವತೆಗಳು,ಡಾ.ಸಿದ್ಧಲಿಂಗಯ್ಯನವರ ಪುಸ್ತಕ ಓದು ಅಭಿಪ್ರಾಯ - ವೆಂಕಟೇಶ ಭಂಡಾರಿ ಕುಂದಾಪುರ.

 ಕೆಲವೊಮ್ಮೆ ಹೀಗೆ ಆಗುತ್ತದೆ ಮನುಷ್ಯ ಬದುಕಿರುವಾಗ ಆತನ ಬಗ್ಗೆ ಇರುವ ಆಸಕ್ತಿ, ಸತ್ತನಂತರ ದ್ವಿಗುಣಗೊಳ್ಳುತ್ತದೆ.ಹಾಗೆ ನೋಡಿದರೆ ಡಾ.ಸಿದ್ಧಲಿಂಗಯ್ಯನವರನ್ನು ಓದಬೇಕು ಅನ್ನುವ ಹಂಬಲ ಮೊದಲಿಂದಲೂ ಇತ್ತು.ಇತ್ತೀಚೆಗೆ ಅವರು ನಿಧನರಾದ ನಂತರ ಅಯ್ಯೋ ಮರೆತೆ ಬಿಟ್ಟೆನಲ್ಲ ಎಂದು ಅವರ ಕೆಲವು ಪುಸ್ತಕಗಳನ್ನು ಕೊಂಡುಕೊಂಡೆ,ಹೀಗೆ ಅತಿಯಾದ ಕುತೂಹಲ ಮೂಡಿಸಿದ ಅವರ ಜಾನಪದೀಯ ಅಧ್ಯಯನದ ಕೃತಿ "ಗ್ರಾಮದೇವತೆಗಳು" .ಮನುಷ್ಯನ ಜೀವನ ಇತಿಹಾಸ ಈ ದಿನಗಳಲ್ಲಿ ಮೂಗಿನ ನೇರಕ್ಕೆ ಸಿಗುವಂತೆ ದೇವತೆಗಳ ಇತಿಹಾಸವು ಅದಕ್ಕೆ ಹೊರತಾಗಿಲ್ಲ,ಆದರೂ ನಮ್ಮ ಮೂಲ ದೇವತೆಗಳು ಮತ್ತು ಅವುಗಳ ಹುಟ್ಟು ಜೊತೆಗೆ ಅವುಗಳಿಂದಾದ ಮೌಢ್ಯ ನಂತರ ಪರಕೀಯ ಸಂಪ್ರದಾಯಗಳಿಂದ ಕಡೆಗಣಿಸಲ್ಪಟ್ಟ ದೇವತೆಗಳ ಬಗ್ಗೆ ತಿಳಿದುಕೊಳ್ಳುವುದು,ಮುಂದಿನ ಜೀವನದ ದೃಷ್ಟಿಯಿಂದ ಅತಿ ಅವಶ್ಯಕವಾಗಿದೆ ಅನ್ನುವುದು ಒಂದು ಭಾವನೆ.


ಭಾರತಕ್ಕೆ ಬಂದ ವಿದೇಶಿ ಇತಿಹಾಸಕಾರರು ಇಲ್ಲಿನ ದೇವರು ದೇವತೆಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ,ತಮ್ಮ ಪುಸ್ತಕಗಳಲ್ಲಿ ದಾಖಲೆ ನೀಡಿದ್ದಾರಾದರು,ಕೊನೆಯಲ್ಲಿ ತಮ್ಮ ದೇವರನ್ನು ಹೇರುವ ಪ್ರಯತ್ನ ಮಾಡಿದ್ದರಿಂದ,ನಿಜವಾದ ಅರ್ಥದಲ್ಲಿ ನಮ್ಮ ದೇವತೆಗಳ ಚಿತ್ರಣವನ್ನು ನೀಡುವ ನಮ್ಮವರೆ ಒಬ್ಬರು ಬೇಕಾಗಿದ್ದು ಅದಕ್ಕೆ ಸಮಯ ಸಿದ್ದಲಿಂಗಯ್ಯನವರನ್ನು ನೇಮಿಸಿ ಆಧ್ಯಯನದಿಂದ ಯುವ ಅಧ್ಯಯನಕಾರಿಗೆ ಒಂದು ಉತ್ತಮ ಕೃತಿ ನೀಡಿದ್ದು ಈಗ ಒಂದು ಇತಿಹಾಸ.ಸಿದ್ದಲಿಂಗಯ್ಯನವರ ಗ್ರಾಮದೇವತೆಗಳು ಕೃತಿಯ ಪ್ರತಿ ಪುಟವು ಜ್ಞಾನದ ಆಗರವಾಗಿದೆ ಅನ್ನುವುದು ಪುಟತಿರುಗಿಸಿ ಓದಿದವರಿಗೆ ತಿಳಿಯುತ್ತದೆ. ಇದು ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್.ಡಿ.ಪದವಿ ಪಡೆದುಕೊಂಡಿರುವ ಕೃತಿ ಆಗಿದ್ದು,ಈ ಗೌರವ ಈ ಕೃತಿಗೆ ಸಿಕ್ಕಿದ್ದು ನಿಜಕ್ಕೂ ಅರ್ಥಪೂರ್ಣವಾಗಿದೆ.ಸಿದ್ದಲಿಂಗಯ್ಯನವರ ಶ್ರಮ ಶ್ಲಾಘನೀಯ.


ದೇವರ ಮೇಲೆ ನಂಬಿಕೆ,ನಂಬಿಕೆಯ ನಂತರ ನನ್ನ ದೇವರು ಶ್ರೇಷ್ಠ ಅನ್ನುವ ಭಾವನೆ ಜಗತ್ತಿನಾದ್ಯಂತ ನಾವು ಕಾಣುತ್ತೇವೆ,ಇದು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ,ವಿದೇಶೀ ಇತಿಹಾಸಕಾರರು ಇಲ್ಲಿ ಅಧ್ಯಯನದ ಜೊತೆ ಜೊತೆಗೆ, ಇಲ್ಲಿನ ಆಚರಣೆಗಳು ಕೇವಲ ಮೌಡ್ಯದಿಂದ ತುಂಬಿಕೊಂಡಿವೆ,ಇವರನ್ನು ಮತಾಂತರ ಮಾಡದಿದ್ದರೆ ಇವರ ಪ್ರಗತಿ ಸಾಧ್ಯವಿಲ್ಲ ಎಂದು ಭಾವಿಸಿದ್ದರು ,ಎಂದರೆ ಅವರುಗಳು ಸಹ ಎಷ್ಟೊಂದು ಮತಾಂಧರು ಎನ್ನುವುದು ತಿಳಿಯುತ್ತದೆ.ಅದರ ಜೊತೆಗೆ ಇಲ್ಲಿಯ ಮೇಲ್ವರ್ಗದ ಜನರು ಅನ್ನಿಸಿಕೊಂಡವರು ಇಲ್ಲಿನ ಮೂಲ ದೇವತೆಗಳನ್ನು ಅವಮಾನಿಸುವುದು ಕಡೆಗಣಿಸುವುದು ಅದರ ಜೊತೆ ಜೊತೆಗೆ ಭಯದಿಂದ ಕದ್ದು ಮುಚ್ಚಿ ಪೂಜಿಸುವುದು ಇತಿಹಾಸ ಮತ್ತು ವಾಸ್ತವಗಳಾಗಿ ಗೋಚರಿಸುವುದನ್ನು ಕೃತಿ ಎಳೆಎಳೆಯಾಗಿ ನಮ್ಮ ಮುಂದೆ ತೆರೆದಿಡುತ್ತದೆ.


ಗ್ರಾಮದೇವತೆಗಳ ಪರಿಕಲ್ಪನೆ.=ಮಾತೃದೇವತಾ ಪಂಥದ ಜನಪದ ರೂಪಗಳೇ ಗ್ರಾಮದೇವತೆಗಳು.ಭಯ ,ಭಕ್ತಿಯಿಂದ ಹುತ್ತ,ವೃಕ್ಷ, ಶಿಲೆಗಳನ್ನು ಆರಾಧಿಸುತ್ತಿದ್ದ ಗ್ರಾಮೀಣರು, ಒಂದು ಕಾಲದಲ್ಲಿ ಅವುಗಳನ್ನು ಗ್ರಾಮದೇವತೆಗಳಾಗಿ ಕಂಡುಕೊಂಡರು. ಆನೇಕ ಗ್ರಾಮದೇವತೆಗಳು ಅತಿ ಪ್ರಾಚೀನವಾದ ಭೂಮಿ ಪೂಜೆ ಅಥವಾ ಮಾತೃಪೂಜೆಗಳ ಕುರುಹುಗಳಲ್ಲದೇ ಬೇರೆಯಲ್ಲ.ಅರಣ್ಯವಾಸಿಗಳಾದ ಬುಡಕಟ್ಟು ಜನಾಂಗದವರು ಪೂಜಿಸುವ ಪ್ರೇತಾತ್ಮಗಳು ಗ್ರಾಮಸಮುದಾಯಗಳು ಬೆಳೆದ ಮೇಲೆ ಗ್ರಾಮದೇವತೆಗಳಾಗಿ ಮಾರ್ಪಾಟು ಹೊಂದಿರುವ ಸಾಧ್ಯತೆಗಳಿವೆ.ಇಲ್ಲಿ ಅಪಮೃತ್ಯುವಿಗೆ ಒಳಗಾಗಿ ಸತ್ತವರ ಪ್ರೇತಾತ್ಮಾಗಳನ್ನು,ಚಾರಿತ್ರಿಕ ವ್ಯಕ್ತಿಗಳಾಗಿ ಮೃತರಾದವರನ್ನು ಹಾಗೆಯೇ ಮಹಾಸತಿಯರಾದ ಹೆಣ್ಣು ಮಕ್ಕಳನ್ನು ಗ್ರಾಮದೇವತೆಗಳಾಗಿಸಿದ್ದನ್ನು ಕಾಣಬಹುದು.

ಬಹುಮುಖ್ಯವಾಗಿ ಗ್ರಾಮದೇವತೆಗಳು ಹೆಣ್ಣು ದೇವತೆಗಳಾಗಿದ್ದು ಮಾತೃಪ್ರಧಾನ ಕುಟುಂಬ ವ್ಯವಸ್ಥೆಯ ಪರಿಣಾವವಾಗಿದೆ ಅನ್ನುವುದನ್ನು ಗಮನಿಸಬೇಕಾಗುತ್ತದೆ.ಈ ರೀತಿಯ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಅಥವಾ ದೇವತೆಗಳ ಆರಾಧನೆ ಕೇವಲ ಭಾರತಕ್ಕೆ ಸಿಮೀತವಾಗದೆ,ಎಲ್ಲಾ ಹಳೆಯ ಮೂಲ ನಾಗರಿಕತೆಯ ಭಾಗವಗಿತ್ತು ಅನ್ನುವುದು, ಸೆಮಿಟಿಕ್ ಜನಾಂಗದಲ್ಲಿ ಬೇಳೆದ ಅಷ್ಟಾರ್ಟ್ ದೇವತೆಯ ಕಲ್ಪನೆ, ಈಜಿಪ್ಟಿನ ಇಸಿನ್ ದೇವತೆಯ ಕಲ್ಪನೆ, ಫ್ರಿಜಿಯಾದ ಸಿಬೆಲೇ ದೇವತೆಯ ಕಲ್ಪನೆ ಭಾರತದ ಶಕ್ತಿ ದೇವತೆಗಳ ಕಲ್ಪನೆಯ ಸಮಾನ ಪರಿಕಲ್ಪನೆಗಳಾಗಿವೆ.


ಪ್ರಾಚೀನ ಸಮಾಜದಲ್ಲಿ ಮುಕ್ತ ಲೈಂಗಿಕತೆಯಿದ್ದು ಆಯಾ ಗುಂಪುಗಳ ಸ್ತ್ರೀಯರ ಮೂಲಕ ನಿಯಂತ್ರಿಸಲ್ಪಡುತ್ತಿದ್ದರಿಂದ ಆಗ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಜಾರಿಗೆ ಬಂದಿರಬೇಕು. ಮತ್ತು ಮಕ್ಕಳಿಗೆ ಹೆತ್ತ ತಾಯಿಯನ್ನು ಮಾತ್ರ ಗುರುತಿಸಲು ಸಾಧ್ಯವಿದ್ದದ್ದು,ತಂದೆಯ ಕಲ್ಪನೆಯೇ ಇಲ್ಲದ ಕಾಲದಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಜಾರಿಯಲ್ಲಿ ಇತ್ತು.ಮೂಲದಲ್ಲಿ ಹೊಸ ಹುಟ್ಟಿಗೆ ಕಾರಣಳಾಗಿ ಕಾಣಿಸುತ್ತಿದ್ದ ಸ್ತ್ರೀ ಅತಿಮಾನುಷ ಶಕ್ತಿಯಾಗೆ ವಿಶೇಷವಾಗಿ ದೇವತೆಯಾಗಿ ಕಾಣಿಸಿಕೊಂಡಳು ಮತ್ತು ಅಂತೆಯೇ ಮನುಷ್ಯ ಕೃಷಿಕನಾಗುತ್ತಿದ್ದ ಕಾಲದಲ್ಲಿ ಭೂಮಿಯನ್ನು ಸಹ ತಾಯಿಯಂತೆ ದೇವತೆ ಎಂದು ಭಾವಿಸಿ ಆರಾಧನೆ ಮಾಡಿದ್ದನ್ನು ಕಾಣಬಹುದು ಕಾರಣ ಹೊಸ ಸೃಷ್ಟಿಯ ಶಕ್ತಿ ಹೆಣ್ಣು ಮತ್ತು ಭೂಮಿಗೆ ಮಾತ್ರ ಇರುವುದು ಅನ್ನುವ ತಿಳುವಳಿಕೆಯಿಂದ.ಇದು ಸುಮಾರು ಕಾಲಗಳ ತನಕ ಅಂದರೆ ಭೂಮಿಗೆ ಬೀಜದ ಅವಶ್ಯಕತೆ, ಮತ್ತು ಹೆಣ್ಣಿಗೆ ಗಂಡಿನ ಅವಶ್ಯಕತೆ ತಿಳಿಯುವ ಕಾಲದವರೆಗೆ ನಡೆದುಬಂದು , ನಂತರ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಬದಲಾವಣೆ ಆಗಿದ್ದನು ಗಮನಿಸಬಹುದು.


ಹೀಗೆ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ರೂಪಗೊಂಡು ಮಾತೃದೇವತೆಗಳ ಪ್ರತಿನಿಧಿಗಳಾದ ಗ್ರಾಮದೇವತೆಗಳು ಗ್ರಾಮದಲ್ಲಿ ಆರಾಧನೆಗೆ ಒಳಗಾದವು.ಮಾತೃದೇವತೆಗಳ ಆರಾಧನೆಯು ಚರಿತ್ರೆಯ ಪೂರ್ವಕಾಲದಲ್ಲಿ ಬಳಕೆಯಲ್ಲಿತ್ತೆಂಬುದಕ್ಕೆ ವಿಪುಲವಾದ ಸಾಕ್ಷ್ಯಾಧಾರಗಳು ದೊರೆತಿವೆ.ಸಿಂಧೂ ಕಣಿವೆಯಲ್ಲಿ ದೊರೆತಿರುವ ಅನೇಕ ಸ್ತ್ರೀ ವಿಗ್ರಹಗಳು ಮಾತೃದೇವಾತಾ ಪಂಥಕ್ಕೆ ಸಂಬಂಧಿಸಿದವುಗಳು ಎಂಬುದಾಗಿದೆ.ಈ ಬಗೆಯ ಸ್ತ್ರೀ ವಿಗ್ರಹಗಳು ಪ್ರಪಂಚದ ನಾನಾ ಸಂಸ್ಕೃತಿಗಳಲ್ಲಿ ದೊರೆಯುತ್ತವೆ.ಆದಿಮಾನವನ ಮನಸ್ಸಿನಲ್ಲಿ ಹೆಣ್ಣು ಮತ್ತು ಪ್ರಾಣಿ ಈ ಎರಡು ಸಂಗತಿಗಳು ವಿಶೇಷವಾದ ಆಸಕ್ತಿಯನ್ನು ಕೆರಳಿಸಿದ್ದವು.ಲೈಂಗಿಕ ಸಂತೋಷದ ಮೂಲಾಧಾರವಾದ್ದರಿಂದ ಹೆಣ್ಣಿನ ಬಗ್ಗೆಯೂ, ಆಹಾರದ ಮೂಲವಾದ್ದರಿಂದ ಪ್ರಾಣಿಗಳ ಬಗ್ಗೆಯೂ ಆದಿಮಾನವನಲ್ಲಿ ಕುತೂಹಲ ಬೆಳೆಸಿದಿರಬೇಕು.ಅದ್ದರಿಂದ ಗ್ರಾಮದೇವತೆಗಳಲ್ಲಿ ಸ್ತ್ರೀ ದೇವತೆಗಳ ಜೊತೆ ಜೊತೆಗೆ ಪ್ರಾಣಿ ಗ್ರಾಮದೇವತೆಗಳು ಕಾಣ ಸಿಗುತ್ತವೆ.

ಗ್ರಾಮದೇವತೆಗಳನ್ನು ಬೇರೆ ಬೇರೆ ರೀತಿಯಲ್ಲಿ ವಿಭಜನೆ ಮಾಡಿ ನೋಡಲಾಗುತ್ತದೆ. ಕುಲದೇವತೆಗಳು,ರಾಜರ ಪ್ರೇತಗಳು, ರಾಷ್ಟ್ರೀಯ ದೇವತೆಗಳಾಗಿ.ಹಾಗೇಯೆ ಗುಣಸ್ವಭಾವದಿಂದ,ಆಹಾರ ಪದ್ಧತಿಗೆ ಅನುಗುಣವಾಗಿ, ಆಯಾ ಜನಾಂಗದ ಜನರ ಜೀವನ ಪದ್ಧತಿಯಂತೆ,ಯಾವ ಕಾಲದಲ್ಲಿ ಅಂದರೆ ಪ್ರಾಚೀನ ಮತ್ತು ಆಧುನಿಕ ದೇವತೆಗಳಾಗಿ, ಅವುಗಳ ಬಣ್ಣ ಕಪ್ಪೋ,ಕೆಂಪೋ ಅದರ ಆಧಾರದಿಂದ ಮತ್ತು ಲಿಂಗಗಳಿಂದ ಗಂಡು ಹೆಣ್ಣಿನ ಲೆಕ್ಕಾಚಾರದಲ್ಲಿ ವಿಭಜನೆ ಮಾಡಿ ಅಧ್ಯಯನ ನಡೆಸಲಾಗುತ್ತದೆ. ಇವುಗಳೊಂದಿಗೆ ಪ್ರಕೃತಿ ದೇವತೆಗಳು,ಸಮೃದ್ಧಿ ದೇವತೆಗಳು,ಚಟುವಟಿಕೆ ದೇವತೆಗಳು (ಸಮರ ದೇವತೆ ರೋಗನಾಶಿನೀ ದೇವತೆಗಳು) ಯುದ್ಧ ಬಂದಾಗ, ರೋಗ ಬಂದಾಗ ಪ್ರಮುಖವಾಗಿ ಪೂಜಿಸಲ್ಪಡುವ ದೇವತೆಗಳು, ಹೀಗೆ ಹಲವಾರು ಬಗೆಯ ಗ್ರಾಮದೇವತೆಗಳನ್ನು ಕಾಣ ಬಹುದು. ಹಾಗೆಯೇ ಒಂದಿಷ್ಟು ಪುರಾಣಗಳು,ಇತಿಹಾಸಗಳು ದೇವತೆಗಳಿಗೆ ಸಿಗುವುದು ಸಹಜ ಆದರೆ ಪುರಾಣ ಇತಿಹಾಸವೇ ಇಲ್ಲದ ದೇವತೆಗಳು ನಮ್ಮ ನಡುವೆ ಇದ್ದಾವೆ ಅವುಗಳನ್ನು ಸ್ಥಳೀಯ ದೇವತೆಗಳು ಎನ್ನುತ್ತಾರೆ, ಉದಾಹರಣೆಗೆ ಮಣ್ಣಮ್ಮ,ಸಂಪಿಗಮ್ಮ, ಮನೆಯಮ್ಮ,ಇವುಗಳ ಜೊತೆಗೆ ಸೂರ್ಯನ ಬಿಸಿಲ್ಲನ್ನು ಅಮ್ಮ ಎಂದು ಕರೆದು ಬಿಸಿಲಮ್ಮ ಮಾಡಿ ಕೂರಿಸಿದ್ದು ಗ್ರಾಮದೇವತೆಗಳ ಹುಟ್ಟು ಬೆಳವಣಿಗೆಯ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ.ಮನುಷ್ಯ ಭಯ ಮತ್ತು ಕುತೂಹಲ ಜೊತೆಗೆ ಸಂತೋಷಕ್ಕೆ ಕಾರಣರಾದ, ಕಾರಣವಾದ ಎಲ್ಲವೂ ಗ್ರಾಮದೇವತೆಗಳ ರೂಪ ತಳೆದಿರುವುದು ಊಹಿಸಬಹುದಾಗಿದೆ.

ಹಾಗೆಯೇ ಪ್ರಮುಖವಾಗಿ ಸಮಾಜದಲ್ಲಿ ಜಾತಿ ಪದ್ಧತಿ ಸೃಷ್ಟಿಸಿದ ಗ್ರಾಮದೇವತೆಗಳನ್ನು ಕಾಣಬಹುದು. ಇಲ್ಲಿ ಉತ್ತಮ ಕುಲದವರು ಎನ್ನಿಸಿಕೊಂಡವರ ಜಾತಿಕಳೆದುಕೊಳ್ಳುವ ಭಯ,ಕೀಳು ಅನ್ನಿಸಿಕೊಂಡವರ ಶ್ರೇಷ್ಠತೆಯನ್ನು ಪಡೆಯುವ ಆಸೆ ಸುಪ್ತವಾಗಿ ಕಥೆಗಳಲ್ಲಿ ಕಂಡು ಬರುತ್ತದೆ. ಇದಕ್ಕೆ ಪೂರಕ ಎಂಬಂತೆ ಮಾರಮ್ಮ ದೇವತೆಯ ಬಗ್ಗೆ ಹಲವಾರು ಕಥೆಗಳು ಇವೆ,ಬೇರೆ ಬೇರೆ ವರ್ಗದ ಕೇಳಜಾತಿಯ ಯುವಕರು ಬ್ರಾಹ್ಮಣ ಕನ್ಯೆ ಯನ್ನು ವಂಚಿಸಿ ವಿವಾಹವಾಗಿ,ಕೊನೆಗೆ ಸತ್ಯ ತಿಳಿದು ಆ ಯುವತಿಯರು ತಮ್ಮ ಪತಿಯನ್ನು ಕೊಂದು ದೇವತೆಗಳು ಆಗಿ ಪೂಜಿಸಲ್ಪಡುವ, ಪೂಜೆಗೆ ಕಾರಣವಾಗುವ ಅಂತರ್ಜಾತಿಯ ವಿವಾಹ ನಿಷೇಧ ಇಲ್ಲಿ ಕಾಣಬಹುದು.



ಹೀಗೆ ಹಲವಾರು ಬಗೆಯ ದೇವಿಯರು ಹುಟ್ಟುಕೊಂಡಿದ್ದರು ಸದ್ಯಕ್ಕೆ ತಿಳಿಯಲೇ ಬೇಕಾದ ಒಂದು ಕಥೆ ಪುಸ್ತಕದಿಂದ ಆಯ್ದು ಇಲ್ಲಿ ಉದಾಹರಣೆಗೆ ನೀಡುತ್ತೇನೆ.ಅದು ಬೆಂಗಳೂರು ಜಿಲ್ಲೆಯ "ಚಕ್ಕೆರೆ ಚೌಡಮ್ಮನಿಗೆ" ಸಂಬಂಧಿಸಿದಂತೆ ಪ್ರಚಲಿತವಿರುವ ಐತಿಹ್ಯ. ಚೌಡಮ್ಮ ಇದ್ದದ್ದು ಮೊದಲಿಗೆ ತಿರುವಾಂಕೂರಿನಲ್ಲಿ.ಆ ರಾಜ್ಯವನ್ನು ಆಳುತ್ತಿದ್ದವನು "ನಯನಜ ಕ್ಷತ್ರಿಯ ಕುಲದ ರಾಜ(ಕ್ಷೌರಿಕ ರಾಜ)." ಬ್ರಾಹ್ಮಣ ಜಾತಿಯ ಹೆಣ್ಣುಗಳಾದ ಚೌಡಮ್ಮ ಸ್ನಾನ ಮಾಡಿ ಉಪ್ಪರಿಗೆಯ ಮೇಲೆ ನಿಂತು ತುರುಬಿನ ಸಿಕ್ಕನ್ನು ಬಿಡಿಸಿಕೊಳ್ಳುವಾಗ ನೋಡಿದರ ರಾಜ ಆಕೆಯಲ್ಲಿ ಮೋಹಿತನಾದ.ಬ್ರಾಹ್ಮಣನ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಏಳು ಹಟ್ಟಿಯ ದನಗಳು ಗೂಟ ಕಿತ್ತುಕೊಂಡು ಪಲಾಯನ ಮಾಡುತ್ತವೆ.ಆಗ ಚೌಡಮ್ಮ ತನ್ನ ತಲೆಗೂದಲನ್ನು ಏಳು ಭಾಗ ಮಾಡಿ ಏಳು ಹಟ್ಟಿಯ ದನಗಳನ್ನು ಹಿಡಿದು ತನ್ನ ಕೂದಲಲ್ಲಿ ಕಟ್ಟಿ ಎಳೆದುಕೊಂಡು ಬರುವಳು.ಇದನ್ನು ಕಂಡ ರಾಜನಿಗೆ ಆಕೆಯ ಮೇಲಿನ ಮೋಹ ಹೆಚ್ಚಾಗುತ್ತದೆ. ಈಕೆಯನ್ನು ತನಗೆ ಮದುವೆ ಮಾಡಿಕೊಡುವಂತೆ ಅವಳ ತಂದೆಯನ್ನು ಕೇಳುತ್ತಾನೆ.ತಂದೆಗೆ ಇಷ್ಟವಿಲ್ಲದಿದ್ದರೂ ಚೌಡಮ್ಮನೇ ಇಷ್ಟಪಡುತ್ತಿರುವುದನ್ನು ಕಂಡು ಒಪ್ಪಿಕೊಳ್ಳುತ್ತಾನೆ.ಮೂರು ಖಂಡಗ ಅಕ್ಕಿ ಕಜ್ಜಾಯ ಮಾಡಬೇಕು. ನೂರು ಬೆಕ್ಕು, ನೂರು ಹೆಣ್ಣಾಳುಗಳು ಬೇಕು. ಕೋಣೆಯಲ್ಲಿ ಧಾರೆ,ಮುಹೂರ್ತ ಆಗಬೇಕು. ಇವು ಚೌಡಮ್ಮ ಹಾಕಿದ ಷರತ್ತುಗಳು.ಮೂರು ದಿನ ವಿವಾಹ ನಡೆದ ಮೇಲೆ ನಾಲ್ಕನೆಯ ದಿನ ರಾಜನೊಬ್ಬನೇ ಹೆಣ್ಣಿನ ಮನೆಗೆ ಧಾರೆ ಮುಹೂರ್ತಕ್ಕೆ ಬಂದನು.ಈ ವೇಳೆಗಾಗಲೇ ಚೌಡಮ್ಮ ರಾಜನನ್ನು ಮೋಸಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದಳು.ಒಂದು ಕೊಪ್ಪರಿಗೆಯಲ್ಲಿ ಎಣ್ಣೆ ಕುದಿಯುತಿದ್ದರೆ,ಮತ್ತೊಂದು ಕಡೆ ಹೆಂಗಸರು ಅಕ್ಕಿ ಕುಟ್ಟುತ್ತಿದ್ದರು.ಒಳಗೆ ಬಂದ ರಾಜನನ್ನು ಚೌಡಮ್ಮ ತುಂಡರಿಸಿದಳು.ಕೊಪ್ಪರಿಗೆಯ ಮೇಕೆ ರುಂಡವನ್ನು ನೇತು ಹಾಕಿದಳು.ಅದರಿಂದ ರಕ್ತ ಬಿದ್ದು ಶಬ್ದವಾದಾಗ ಹೊರಗಿದ್ದವರು ಕಜ್ಜಾಯ ಸುಡುವ ಶಬ್ದವೆಂದು ತಿಳಿದರು.ಚೌಡಮ್ಮ ಹಿಂಬಾಗಲಿನಿಂದ ಪಲಾಯನ ಮಾಡಿದಳು.ದಾರಿಯಲ್ಲಿ ಹೊಳೆ ಅಡ್ಢವಾಯಿತು.ಹೊಳೆಯನ್ನು ಕುರಿತು ನಾನು ಒಬ್ಬ ತಂದೆ ತಾಯಿಯ ಮಗಳಾಗಿದ್ದರೆ ದಾರಿ ಮಾಡಿಕೊಡು ಎಂದಳು.ಹೊಳೆ ಭಾಗವಾಯಿತು,ಹೀಗೆ ಬಹುದೂರ ಪ್ರಯಾಣ ಮಾಡಿ ರಾವಳ ದೇವರ ಸಹಾಯದಿಂದ ಚಕ್ಕೆರಿಗೆ ಬಂದು ನೆಲಸಿದಳು.ಚೌಡಮ್ಮ ಜೀವಂತ ಸಮಾಧಿ ಆದಳು. ರಾಜನ ದಂಡು ಅಟ್ಟಿಸಿಕೊಂಡು ಬಂದಾಗ ಆಕೆಯ ಸಹೋದರರು ಹೋರಾಡಿ ವೀರಮರಣವನ್ನಪ್ಪಿದರು.ಊರಿನವರು ಆಕೆಯ ಸಹೋದರರ ಸ್ಮಾರಕವಾಗಿ ಏಳು ವೀರಗಲ್ಲುಗಳನ್ನು ಚೌಡಮ್ಮನ ಗದ್ದಿಗೆಯನ್ನು ಸ್ಥಾಪಿಸಿದರು.

ಹೀಗೆಯೇ "ಆಲೂರಮ್ಮ" ದೇವತೆಗೆ ಸಂಬಂಧಿಸಿದ ಕಥೆಯಲ್ಲಿ, ಬ್ರಾಹ್ಮಣನೊಬ್ಬನ ಇಬ್ಬರು ಹೆಣ್ಣುಮಕ್ಕಳನ್ನು "ನಯನ ಕ್ಷತ್ರಿಯ" ರಾಜನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದಾಗ ಇಬ್ಬರೂ ಹೆಣ್ಣುಮಕ್ಕಳು ಊರನ್ನು ತೊರೆದು ಆಲೂರಿನ ಕಡೆಗೆ ಪಲಾಯನ ಮಾಡಿದರು. ಆಲೂರಿನಲ್ಲಿ ಒಂದು ಹಳ್ಳಕ್ಕೆ ನೆಗೆದು ಮೇಲೆ ಚಪ್ಪಡಿಯನ್ನು ಎಳೆದುಕೊಂಡು ಜೀವಂತ ಸಮಾಧಿಯಾದರು.ಅದನ್ನೇ ಈಗಿರುವ ಆಲೂರಮ್ಮನ್ನ ದೇವಸ್ಥಾನ ಎನ್ನಲಾಗಿದೆ.ಒಟ್ಟಿನಲ್ಲಿ ಜಾತಿ ಕೆಡಿಸಿಕೊಳ್ಳದವರನ್ನು ದೇವರಾಗಿ ಪೂಜಿಸಿದ್ದರ ಹಿಂದೆ ಅದೆಷ್ಟು ಆಳವಾಗಿ ನಮ್ಮಲ್ಲಿ ಜಾತಿ ಪದ್ಧತಿ ಬೇರೂರಿದೆ ಎಂದು ಊಹಿಸಬಹುದು.

ಇನ್ನೂ ಆಹಾರ ಪದ್ದತಿಯಿಂದಾಗಿಯೂ ಗ್ರಾಮದೇವತೆಗಳು ಸೃಷ್ಟಿ ಕಂಡು ಬರುತ್ತದೆ, ಸಸ್ಯಹಾರಿಗಳಾದವರು ಮಾಂಸಾಹಾರ ಸೇವಿಸಿ ದೇವತೆಗಳಾಗಿದ್ದಾರೆ ಅದರಲ್ಲೂ ಪ್ರಮುಖವಾಗಿ ಮಹಿಳೆಯರು, ಇನ್ನೂ ಮಾಂಸಹಾರ ವಿರೋಧಿಸುವಲ್ಲಿ ಪುರುಷ ದೇವರುಗಳು.ನಿಷೇಧವೊಂದನ್ನು ಮುರಿದ ಕಾರಣಕ್ಕಾಗಿಯೇ ಈ ಹೆಂಗಸರು ಪ್ರಸಿದ್ಧವಾದರಿ,ಶಿಕ್ಷೆಗೊಳಗಾಗಿ ಪೂಜ್ಯರಾದರು.ಆಹಾರ ಪದ್ಧತಿಯ ತಾರತಮ್ಯ ಇಲ್ಲಿ ಕಾಣಬಹುದು.

ಹೀಗೆ ಹಲವಾರು ರೀತಿಯಲ್ಲಿ ಸೃಷ್ಟಿಗೊಂಡ ಗ್ರಾಮದೇವತೆಗಳು ಅವುಗಳ ಪೂಜೆ, ವಿಚಾರ ಎಲ್ಲಕ್ಕೂ, ಜನಪದ ಸಂಸ್ಕೃತಿಗೆ ಆಚರಣೆಗಳೇ ಬೆನ್ನೆಲುಬು. ಆಚರಣೆಯಿಲ್ಲದೆ ಯಾವ ದೈವದ ಅಸ್ತಿತ್ವವೂ ಇಲ್ಲಿ ಸಾಧ್ಯವಿಲ್ಲ. ಗ್ರಾಮದೇವತೆಗಳು ಒಂದು ಬಗೆಯಲ್ಲಿ ಆಚರಣೆಗಳ ಧರ್ಮ ಎನ್ನಬಹುದು. ದೇವತೆಗೂ ಸಮಾಜಕ್ಕೂ ಇರುವ ಸಂಬಂಧ ಅಭಿನಯಗೊಳದಳುವ ಕ್ರಮದ ವಿವರಗಳೇ ಆಚರಣೆಗಳು. "ಸಂಪ್ರದಾಯ ಅಂಗೀಕರಿಸಿದ ಧಾರ್ಮಿಕ ಮತ್ತು ಮಾಂತ್ರಿಕ ಆಚರಣೆಗಳ ಮೊತ್ತವೇ ಆಚರಣೆ" ಎನ್ನಲಾಗಿದೆ. ನಂಬಿಕೆ ಆಚರಣೆಗಳ ಬೆನ್ನೆಲುಬು. ನಂಬಿಕೆ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡುತ್ತದೆ. ಆಚರಣೆಗಳು ಹುಟ್ಟುವ ಮುನ್ನ ಅಥವಾ ನಂತರ ಪುರಾಣಗಳು ಹುಟ್ಟಿಕೊಳ್ಳುತ್ತವೆ. ಆದರೆ ಪುರಾಣ ಕತೆ ಮರೆತು ಹೋದರು ಯಾವುದೇ ತೊಂದರೆ ಇಲ್ಲದೇ ಆಚರಣೆ ಮುಂದುವರಿಯುತ್ತಾ ಹೋಗುತ್ತಿರುವುದನ್ನು ಕಾಣಬಹುದು.ಇದು ಕೇವಲ ನಂಬಿಕೆ ಅಲ್ಲದೇ ಇನ್ನೇನು...?

ಗ್ರಾಮದೇವತೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಸ್ವತಃ ಕೃತಿಯನ್ನು ಕೊಂಡು ಓದುವುದು ಉತ್ತಮ, ನಾನು ಇಲ್ಲಿ ಕಡಲಿನಿಂದ ಬೊಗಸೆ ನೀರನ್ನಷ್ಟೆ ಹಿಡಿಯುವ ಪ್ರಯತ್ನ ಮಾಡಿದ್ದೇನೆ.ವಿಮರ್ಶೆ ಅಥವಾ ಅರ್ಥಹಿಸಲು ಕುಳಿತರೆ ಇನ್ನೊಂದು 300\400ಪುಟಗಳ ಕೃತಿ ಬರೆಯ ಬೇಕಾಗಬಹುದು. ಮೊದಲೇ ಹೇಳಿದಂತೆ ಗ್ರಾಮದೇವತೆಗಳು ಕೃತಿಯ ಪ್ರತಿ ಪುಟವು ಜ್ಞಾನ ಭಂಡಾರವನ್ನೇ ತೋರುತ್ತದೆ. ಓದು ಮತ್ತು ವಿಷಯ ಆಸಕ್ತರಿಗೆ ಇದು ಒಂದು ಕೊಡುಗೆ. ನಾನಂತು ವಿವರಿಸಲು ಸೋತಿದ್ದೇನೆ ಎಂದು ಪ್ರಮಾಣಿಕವಾಗಿ ಒಪ್ಪುತೇನೆ.ಆದರೂ ಒಂದಿಷ್ಟು ಮಾಹಿತಿ ನಿಮಗಾಗಿ.










-ವೆಂಕಟೇಶ ಭಂಡಾರಿ ಕುಂದಾಪುರ.

No comments:

Post a Comment