BhandaryVarthe Team

BhandaryVarthe Team
Bhandary Varthe Team

Sunday, 1 August 2021

ಸ್ನೇಹ.. ✍ ಹರೀಶ್ ನಾರ್ವೆ

 ಸ್ನೇಹ ಎಂಬ ಪದವೇ ರೋಮಾಂಚನ .ಈ ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಸ್ನೇಹ ಎಂಬ ಮಾಯೆ ಒಳಗೆ ಸಿಲುಕಿ ಕೊಂಡಿರುತ್ತಾರೆ.ಮನುಷ್ಯ ತನ್ನ ಹುಟ್ಟಿನಿಂದ ಹಿಡಿದು ಸಾಯುವವರೆಗೂ ಸ್ನೇಹಜೀವಿಯಾಗಿಯೇ ಇರುತ್ತಾನೆ. ಈ ಸ್ನೇಹಕ್ಕೆ ಯಾವುದೇ ಜಾತಿ.ಮತ. ರಕ್ತದ ಗುಂಪು. ಗಂಡು ಹೆಣ್ಣು ಎಂಬ ಭಾವನೆ ಅಡ್ಡ ಬರುವುದಿಲ್ಲ. ಹಾಗೆ ಸ್ನೇಹ ಇಲ್ಲದ ವ್ಯಕ್ತಿಯು ಕೂಡ ಈ ಜಗತ್ತಿನಲ್ಲಿ ಸಿಗಲಾರ.
ಸ್ನೇಹಕ್ಕೆ ಯಾವ ಶ್ರೀಮಂತಿಕೆಯೂ ಬೇಕಾಗಿಲ್ಲ. ಯಾವ ಬಡತನವೂ ಅಡ್ಡ ಬರುವುದಿಲ್ಲ. ಸ್ನೇಹಕ್ಕೆ ಬೇಕಾಗಿರುವುದು ಒಳ್ಳೆಯ ಹೃದಯಗಳು ಮಾತ್ರ.



ಒಂದು ಮಗು ಹುಟ್ಟಿ ಕಣ್ಣು ಬಿಡುವಾಗಲೇ ಸ್ನೇಹವನ್ನು ಅರಿಸುತ್ತದೆ.ಇನ್ನು ನಡೆದಾಡುವಾಗ ಸ್ನೇಹದ ಜಾಲದೊಳಗೆ ಬೀಳುತ್ತದೆ. ಪ್ರಪಂಚ ಎಂದರೆ ಏನು ಎಂದು ಗೊತ್ತಿಲ್ಲದ ವಯಸ್ಸಿನಲ್ಲಿಯೇ ಸ್ನೇಹಿತರು ಯಾರು ಎಂದು ಕೇಳಿದರೆ ತಕ್ಷಣ ತನಗೆ ಇಷ್ಟವಾದ ವ್ಯಕ್ತಿಗಳನ್ನು ತೋರಿಸಿ ಇವರು ನನ್ನ ಸ್ನೇಹಿತರು ಎಂದು ತೋರಿಸುವುದು ನಾವು ಕಂಡ ಕಣ್ಣೆದುರಿನ ಸತ್ಯ.ಇನ್ನು ಸ್ಕೂಲು ಕಾಲೇಜು ದಿನಗಳಲ್ಲಿಯಂತೂ ಸ್ನೇಹಿತರು ಇಲ್ಲದೆ ದಿನಕಳೆಯುವ ವ್ಯಕ್ತಿಗಳು ಈ ಜಗತ್ತಿನಲ್ಲಿ ಯಾರೂ ಸಿಗುವುದಿಲ್ಲ.ಈ ಕಾಲೇಜು ದಿನಗಳಲ್ಲಿ ಯಾವ ಜಾತಿ, ಧರ್ಮ, ಬಡವ, ಶ್ರೀಮಂತ, ಗಂಡು, ಹೆಣ್ಣು ಎಂಬ ಭಾವನೆಗಳು ಸ್ನೇಹಕ್ಕೆ ಅವಶ್ಯಕತೆ ಇರುವುದಿಲ್ಲ. ಅಲ್ಲಿ ಸಿಗುವುದು ನಿರ್ಮಲ ಮನಸ್ಸಿನ ಆತ್ಮೀಯತೆ, ಆದೇ ಸ್ನೇಹ.
ಇನ್ನು ನಾವು ಯಾವುದೇ ಉದ್ಯೋಗಕ್ಕೆ ಹೋದರೆ ಸಂಬಂಧಗಳಿಗಿಂತ ಮೊದಲು ಬಂದು ನಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವುದು ಇದೇ ಸ್ನೇಹ. ನಾವು ಸಂತೋಷದಿಂದ ಇರುವಾಗ ಕಷ್ಟದಲ್ಲಿ ಸಿಲುಕಿದಾಗ ನೆನಪಿಸಿಕೊಳ್ಳುವುದು ಸ್ನೇಹಿತರನ್ನು ಮಾತ್ರ.ಸ್ನೇಹ ಎಂಬುವುದು ಸಾವಿಲ್ಲದ ಬಂಧನ.

ಸ್ನೇಹ ಇಂದು ನಿನ್ನೆ ಹುಟ್ಟಿದ ವಸ್ತು ಅಲ್ಲ.ಅದು ನಾವು ಆರಾಧಿಸುವ ದೈವ ದೇವತೆಗಳ ಕಾಲದಿಂದಲೂ ಬಂದಿದೆ.ಶ್ರೀ ಕೃಷ್ಣನಿಗೆ ಕುಚೇಲ ಎಂಬ ಬಡವ ಸ್ನೇಹಿತ ಇದ್ದ.ಇವರ ಸ್ನೇಹಕ್ಕೆ ಯಾವ ಬಂಧವು ಅಡ್ಡ ಬರಲಿಲ್ಲ ಎಂಬ ಕಥೆ ನಮಗೆ ತಿಳಿದಿದೆ.ಹೀಗೆ ಸ್ನೇಹ ಎಲ್ಲಾ ಕಾಲದಲ್ಲೂ ಇತ್ತು ಎಂಬುದಕ್ಕೆ ಇದು ಒಂದು ಉದಾಹರಣೆ ಅಷ್ಟೆ.ಈಗಿನ ಪ್ರಸ್ತುತ ಪ್ರಪಂಚದಲ್ಲಿ ಆಧುನಿಕತೆಯು ಎಷ್ಟೇ ಮುಂದುವರಿದರೂ ಸ್ನೇಹ ಎಂಬ ಪವಿತ್ರ ಸಂಬಂಧಗಳಿಗೆ ಯಾವುದೇ ತೊಂದರೆ ಆಗಿಲ್ಲ. ಎಷ್ಟೋ ಜನ ಸ್ನೇಹಿತರು ತಮ್ಮ ಸ್ನೇಹಿತರಿಗಾಗಿ ತಮ್ಮ ದೇಹದ ಅಮೂಲ್ಯ ಅಂಗಾಂಗಗಳನ್ನು ಕೊಟ್ಟಿರುವುದು ಸಹಾ ನಮಗೆ ತಿಳಿದಿದೆ.ಹಾಗೆ ಎಷ್ಟೋ ಜನ ತಮ್ಮ ಪ್ರಾಣವನ್ನು ಲೆಕ್ಕಿಸದೆ ಪ್ರಾಣವನ್ನು ಕೊಟ್ಟಿರುವುದು ಜಗತ್ತಿನಲ್ಲಿ ನಡೆದ ಸಂಗತಿ. ಇಂತಹ ಮಹಾನ್ ವ್ಯಕ್ತಿಗಳನ್ನು ಪ್ರಾಣಸ್ನೇಹಿತರು ಎಂದು ಕರೆಯುವುದು ಲೋಕಾರೂಢಿ.ಇಂತಹ ಸ್ನೇಹದಲ್ಲಿ ಕೆಲವೊಮ್ಮೆ ದುರುಪಯೋಗ ಆಗಿರುವುದು ಸಹಾ ಇದೆ.ಅದು ಬೆರಳೆಣಿಕೆಯಷ್ಟು ಮಾತ್ರ.

ಒಬ್ಬ ವ್ಯಕ್ತಿಯ ವಿಕಾಸಕ್ಕೆ ಬೇಕಿರುವುದು ತಂದೆ ತಾಯಿಯರ ಪ್ರೀತಿ. ಗುರುಗಳ ಶಿಕ್ಷಣ. ಸ್ನೇಹಿತರ ಮಾರ್ಗದರ್ಶನ. ಇವೆಲ್ಲವನ್ನೂ ಪಡೆದ ವ್ಯಕ್ತಿ ಜೀವನದಲ್ಲಿ ಖಂಡಿತವಾಗಿ ಸಾಧಕನಾಗುತ್ತಾನೆ.

ಸ್ನೇಹಿತರನ್ನು ಸ್ಮರಿಸಲು ಒಂದು ದಿನ ಮಾತ್ರ ಸ್ನೇಹಿತರ ದಿನ ಅಲ್ಲ,ಪ್ರತಿದಿನವೂ ಸ್ನೇಹಿತರ ದಿನವೇ.ಪ್ರಪಂಚದಲ್ಲಿ ಆಚರಿಸುವ ಸುಂದರ ದಿನಗಳಲ್ಲಿ ಸ್ನೇಹಿತರ ದಿನ ಸಹಾ ಒಂದು,ಇದೊಂದು ಅದ್ಬುತ ದಿನ. ಸ್ನೇಹದ ಬಗ್ಗೆ ಹೇಳಿ ಮುಗಿಸಲು ಸಾಧ್ಯವಾಗುವುದಿಲ್ಲ.ಸ್ನೇಹ ಎಂಬ ಪದ ನಿಲ್ಲುವುದು ಸ್ನೇಹಿತರ ಅಂತ್ಯ ಆದಾಗ ಮಾತ್ರ.ಪ್ರಪಂಚ ಇರುವವರೆಗೂ ಶಾಶ್ವತ ಈ ಸ್ನೇಹ.

ಸ್ನೇಹಿತರ ದಿನದ ಪ್ರಯುಕ್ತ ಸ್ನೇಹದ ಬಗ್ಗೆ ಬರೆಯಲು ಅವಕಾಶ ಮಾಡಿಕೊಟ್ಟ "ಭಂಡಾರಿವಾರ್ತೆ" ತಂಡಕ್ಕೆ ಧನ್ಯವಾದಗಳು.

 ✍ ಹರೀಶ್ ನಾರ್ವೆ.
 

No comments:

Post a Comment