ಆಟಿ ತಿಂಗಳು ಎಂದಾಕ್ಷಣ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ ಎಂಬ ವಾಡಿಕೆ ಇದೆ. ತುಳುನಾಡಿನ ಜನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ (ಆಷಾಢ ) ತಿಂಗಳಿಗೆ ವಿಶಿಷ್ಟ ರೀತಿಯ ಮಾನ್ಯತೆಯಿದೆ .
ಕೃಷಿ ಅವಲಂಬಿತ ಪ್ರಾಚೀನ ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಅಲ್ಲದೆ ಯಾವುದೇ ಬೆಳೆಯ ಫಸಲು ಕೊಯ್ಲಿಗೆ ಬರುವುದಿಲ್ಲ. ಈ ತಿಂಗಳಿನಲ್ಲಿ ಬದಲಾಗುವ ಭೂ ವಾತಾವರಣ ನಿರಂತರ ಸುರಿಯುವ ಮಳೆಯನ್ನು ಕಾಣಬಹುದು. ಈ ಕಾರಣದಿಂದಾಗಿ ಆಟಿ ತಿಂಗಳಿನಲ್ಲಿ ಶರೀರದಲ್ಲಿ ಬರುವ ರೋಗ ರುಜಿನಗಳು ಮನುಷ್ಯನನ್ನು ನಿಯಂತ್ರಣ ಮಾಡುತ್ತದೆ.
ಆಟಿ ತಿಂಗಳಿನಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆಟಿ ತಿಂಗಳ ಅಮಾವಾಸ್ಯೆಯ ದಿನದಂದು ಸಾಮೂಹಿಕವಾಗಿ ಕಷಾಯ ಸೇವಿಸುವ ಪದ್ಧತಿ ಬೆಳೆದು ಬಂದಿದೆ. ಹಾಲೆ ಮರದ ಕಷಾಯವನ್ನು ಕರಿಮೆಣಸು ಬೆಳ್ಳುಳ್ಳಿ ಓಮ ಸೇರಿಸಿ ಆಟಿ ತಿಂಗಳ ಅಮಾವಾಸ್ಯೆಯ ನಸುಕಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸುವ ರೂಢಿಯಿದೆ. ಈ ಕಷಾಯದ ಔಷಧೀಯ ಉಪಯೋಗದಿಂದ ಇದು ಜನಪದ ಔಷಧಿಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಹಾಳೆ ಮರದ ಎಲೆಯು ಸಾಮಾನ್ಯವಾಗಿ ದಪ್ಪವಿದೆ. ಅಮವಾಸ್ಯೆಯ ಮುಂಚಿನ ದಿನ ಸಂಜೆ ಕಾಡಿಗೆ ತೆರಳಿ ಹಾಳೆ ಮರದ ಸುತ್ತಮುತ್ತಲಿರುವ ಗಿಡಗಂಟಿಗಳನ್ನು ಕಡಿದು ಸ್ವಚ್ಚಗೊಳಿಸಿ ಅದಕ್ಕೆ ಒಂದು ದಾರವನ್ನು ಕಟ್ಟಿ ಬರುತ್ತಾರೆ. ಅಮವಾಸ್ಯೆಯ ದಿನ ಮುಂಜಾನೆ ನಾಲ್ಕು ಗಂಟೆಗೆ ಎದ್ದು (ಬ್ರಾಹ್ಮಿ ಮುಹೂರ್ತ) ಅರೆನಗ್ನ ಸ್ಥಿತಿಯಲ್ಲಿ ಹಾಳೆ ಮರದ ಬಳಿ ತೆರಳಿ ದೊಡ್ಡದಾಗಿದ್ದ ಕಲ್ಲಿನಿಂದ ಜಜ್ಜಿ ಹಾಳೆಗಳಂತೆ ತೆಗೆಯುತ್ತಾರೆ. ಅದರಿಂದ ಕಷಾಯವನ್ನು ಮಾಡಿ ಕುಡಿಯುತ್ತಾರೆ. ಖಾಲಿ ಹೊಟ್ಟೆಯಲ್ಲಿ ಸೇವಿಸಿ ನಂತರ ಮೆಂತೆ ಗಂಜಿ ಸೇವಿಸುವುದು ಪ್ರತೀತಿಯಲ್ಲಿದೆ. ದೇಹದ ಉಷ್ಣಾಂಶವನ್ನು ತಗ್ಗಿಸಲು ಅಂದಿನಿಂದ ಮೆಂತೆ ಗಂಜಿಯಿಂದ ಪ್ರಾರಂಭಗೊಂಡು ಉಳಿದ ಹದಿನಾರು ದಿನಗಳ ಕಾಲ ಅಂದರೆ ಶ್ರಾವಣ ಸಂಕ್ರಮಣದ ವರೆಗೆ ಪ್ರತಿನಿತ್ಯವೂ ಒಂದೊಂದು ಬಗೆಯ ಸೊಪ್ಪು ತರಕಾರಿ ಪಾನೀಯಗಳನ್ನು ಕುಡಿದು ಶರೀರವನ್ನು ತಂಪುಗೊಳಿಸುವುದು .
ತುಳುನಾಡು ಹಲವಾರು ಜನಪದ ಆಚರಣೆಗಳಿಗೆ ಪ್ರಸಿದ್ಧ ಅಂತಹ ಆಚರಣೆಗಳಲ್ಲಿ ಆಟಿಕಳೆಂಜ ಕೂಡಾ ಒಂದು. ಆಷಾಢ ಮಾಸದಲ್ಲಿ ವಾತಾವರಣ ಮತ್ತು ಪ್ರಕೃತಿಯಲ್ಲಿ ಆಗುವ ಬದಲಾವಣೆ ಸಂಕೇತವಾಗಿ ಹುಟ್ಟಿಕೊಂಡ ನಂಬಿಕೆ. ಆಟಿಕಳೆಂಜ ಆಟಿ ಅಂದರೆ ಆಷಾಢ ಕಳೆಂಜ ಅಂದರೆ ಕಳೆಯುವವನು ಎಂದರ್ಥ ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಮಾಂತ್ರಿಕ ಎಂಬರ್ಥವಿದೆ.
ಹಿಂದಿನ ಕಾಲದಲ್ಲಿ ಆಷಾಢ ಮಾಸದಲ್ಲಿ ತುಳುನಾಡಿನಲ್ಲಿ ಗಾಯಕರ ಕಾಯಿಲೆಯೊಂದು ಎದುರಾಗಿತ್ತು. ಇದರಿಂದ ಜನರು ನರಳಾಡುತ್ತಿದ್ದನ್ನು ಕಂಡ ಬ್ರಹ್ಮದೇವನು ನಾಗಬ್ರಹ್ಮ ಅಥವಾ ಆಟಿ ಕಳೆಂಜನನ್ನು ಸೃಷ್ಟಿ ಮಾಡಿದನೆಂಬ ನಂಬಿಕೆ ಇದೆ. ತುಳು ನಾಡಿನಲ್ಲಿ ಭೂತಾರಾಧನೆ ದೈವಾರಾಧನೆಯ ನೇಮ ವೇಷಧಾರಿಗಳಾದ ನಲಿಕೆ ಎಂಬ ಸ್ಥಳೀಯ ಬುಡಕಟ್ಟು ಜನಾಂಗದವರ ಮೂಲಕ ಈ ಸಂಪ್ರದಾಯ ನಡೆಯಬೇಕು ಎಂದು ಆದೇಶ ಮಾಡಿದರಂತೆ . ಸಾಂಪ್ರದಾಯಕ ವೇಷಭೂಷಣವೇ ಆಟಿಕಳೆಂಜದ ಹೈಲೆಟ್ ಮುಖದ ಮೇಲೆ ವಿಭಿನ್ನ ಮೇಕಪ್ ಮಾಡಿ ಕೆಂಪು ಬಣ್ಣದ ಅಂಗಿ ಮತ್ತು ಆಸ್ಕರ್ಟಗೆ ಸುತ್ತಿದ ತೆಂಗಿನ ಗರಿಗಳು ತಲೆಯ ಮೇಲೆ ಅಡಿಕೆ ಹಾಳೆಯಿಂದ ಮಾಡಿದ ಕಿರೀಟ ಅದು ಎಲೆ ಹಾಗೂ ಹೂಗಳಿಂದ ಅಲಂಕೃತವಾಗಿರುತ್ತದೆ. ವನ ತಾಳ ಎಲೆಗಳ ಛತ್ರಿ ಹಿಡಿಯುವ ಆಟಿಕಳೆಂಜನನ್ನು ನೋಡುವುದೇ ಕಣ್ಣಿಗೆ ಅದ್ಭುತ ನೋಟ.
ತುಳುನಾಡಿನಲ್ಲಿ ಒಂದು ಜಾನಪದ ಹಾಡಿದೆ ಡೆನನ ಡೆನನಾ ಡೆನನ ಡೆನನಾ ಆಟಿಕಳೆಂಜೆ ಬರೊಂದುಲ್ಲೆ ಕಳಸೇ ಭಾರ್ ಕಣಲೇ ಇದರ ಅರ್ಥ. ಆಟಿಕಳೆಂಜ ಬರುತ್ತಿದ್ದಾನೆ ಭತ್ತ ಹಿಡಿದುಕೊಂಡು ಬನ್ನಿ ಎಂದು ಮನೆ ಮನೆಗೆ ಆಟಿಕಳೆಂಜ ಭೇಟಿ ಕೊಡುವಾಗ ಅವರಿಗೆ ಪ್ರತಿಯಾಗಿ ಅಕ್ಕಿ ಮೆಣಸು ಉಪ್ಪು ಜೊತೆಗೆ ಸ್ವಲ್ಪ ಇದ್ದಿಲು ಕೊಡಬೇಕು ಎಂಬ ಸಂಪ್ರದಾಯವಿದೆ .
ಈ ರೀತಿಯಲ್ಲಿ ಅಮವಾಸ್ಯೆ ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ .
-ರಜಿತಾ ಪ್ರದೀಪ್ ಭಂಡಾರಿ , ಬೆಂಗಳೂರು
No comments:
Post a Comment