ಒಂದು ಪರಂಪರೆಯನ್ನು ಕಡಿದುಕೊಂಡು ಇನ್ನೊಂದು ಪರಂಪರೆಗೆ ಬದ್ಧರಾಗುವುದು, ಒಬ್ಬ ನಾಯಕನನ್ನು ಬಿಟ್ಟು ಇನ್ನೊಬ್ಬನನ್ನು ಹಿಂಬಾಲಿಸುವುದು ಇವೆಲ್ಲ ತೋರಿಕೆಯ ಭಂಗಿಗಳು. ಅಧಿಕಾರದ (ಪೂರ್ವಗ್ರಹ) ಬಗ್ಗೆ ಇಡಿಯಾದ ಎಚ್ಚರವನ್ನು ಪಡೆಯಬೇಕೆಂದಿದ್ದರೆ,ಅಧಿಕಾರ ನಮ್ಮೊಳಗೆ ಹೇಗೆ ಇದೆ ಎಂದು ಅರಿಯಬೇಕೆಂದಿದ್ದರೆ, ಖಚಿತತೆಯ ಆಸೆಯನ್ನು ಮೀರಬೇಕೆಂದಿದ್ದರೆ,ಆಗ ನಮಗೆ ಅಗಾಧವಾದ ಎಚ್ಚರ ಮತ್ತು ಒಳನೋಟ ಬೇಕಾಗುತ್ತದೆ. ಇದು ಸಾಧ್ಯವಾಗಬೇಕಾದರೆ ನಾವು ಇನ್ನು ಎಂದೋ,ನಮ್ಮ ಬದುಕಿನ ಕೊನೆಗೆ ಅಲ್ಲ,' ಈಗಲೇ, ಇಂದೇ,ಮೊದಲಿಗೇ ಬಿಡುಗಡೆಯನ್ನು ಪಡೆಯಬೇಕಾಗುತ್ತದೆ'.
ನಾವು ಮನಸ್ಸಿನ ತುಂಬ ಆಸೆಗಳನ್ನಿಟ್ಟುಕೊಂಡು, ಭಯಗಳನ್ನು ತುಂಬಿಕೊಂಡು ಕೇಳುತ್ತೇವೆ. ಬೆಳಕು ಕಂಡಿರುವ ವ್ಯಕ್ತಿ ಯಾರು ಎಂದು ಹುಡುಕುತ್ತೇವೆ. ಅಂಥವರಿಂದ ಬೆಳಕು ಪಡೆಯಲು ಬಯಸುತ್ತೇವೆ. ಆದರೆ ಅರ್ಥಮಾಡಿಕೊಳ್ಳುವುದಕ್ಕೆ ಬೇಕಾದ ನಿಷ್ಕ್ರಿಯ ಎಚ್ಚರ ನಮ್ಮಲ್ಲಿರುವುದಿಲ್ಲ. ಮುಕ್ತನಾಗಿರುವ ವ್ಯಕ್ತಿ ನಮ್ಮ ಆಸೆಗಳನ್ನು ಪೂರೈಸುವಂತೆ ಕಂಡರೆ ಆತನನ್ನು ಒಪ್ಪಿಕೊಳ್ಳುತ್ತೇವೆ. ಇಲ್ಲದಿದ್ದರೆ ಮತ್ತೊಬ್ಬ ವ್ಯಕ್ತಿ ಎಲ್ಲಿದ್ದಾನೆ ಎಂದು ಹುಡುಕಲು ತೊಡಗುತ್ತೇವೆ. ನಮ್ಮಲ್ಲಿ ಬಹಳ ಜನಕ್ಕೆ ಬೇರೆ ಬೇರೆ ಹಂತಗಳ ತೃಪ್ತಿ ಬೇಕಾಗಿರುತ್ತದೆ. ಮುಕ್ತಾತ್ಮನನ್ನು ಹುಡುಕುವುದು ಕಂಡುಕೊಳ್ಳುವುದು ಮುಖ್ಯವಲ್ಲ. ನಿಮ್ಮನ್ನು ನೀವು ಅರ್ಥಮಾಡಿಕೊಳ್ಳುವುದೇ ಮುಖ್ಯವಾದದ್ದು.ಈ ಲೋಕದ ಅಥವಾ ಪರಲೋಕದ ಯಾವ ಅಧಿಕಾರವೂ ನಿಮಗೆ ನಿಮ್ಮ ಬಗ್ಗೆ ತಿಳಿವಳಿಕೆಯನ್ನು ಕೊಡಲಾರದು. ನಿಮ್ಮ ಬಗ್ಗೆ ನೀವು ತಿಳಿಯದಿದ್ದರೆ ಮೌಢ್ಯದಿಂದ ,ದುಃಖದಿಂದ ಬಿಡುಗಡೆಯೂ ದೊರೆಯಲಾರದು.
ನಮ್ಮನ್ನು ನಾವು ತಿಳಿಯುವುದು ಬಹಳ ಶ್ರಮದ ಕೆಲಸ. ನಮಗೆ ಯಾವಾಗಲೂ ಸುಲಭವಾದ ದಾರಿ ಬೇಕು, ಭ್ರಮೆಯ ದಾರಿ ಬೇಕು.ಅದ್ದರಿಂದ ನಮ್ಮ ಬದುಕಿಗೆ ಒಂದು ವಿನ್ಯಾಸವನ್ನು, ಆಕಾರವನ್ನು ಒದಗಿಸಿಕೊಡುವ ಅಧಿಕಾರವನ್ನು (ಪದ್ಧತಿಯ ಹಿಡಿತವಿರುವ ಮನಸ್ಸು) ಸೃಷ್ಟಿಸಿಕೊಳ್ಳುತ್ತೇವೆ. ಈ ಅಧಿಕಾರ ಸಾಮೂಹಿಕ ಸ್ವರೂಪದ್ದಾಗಿರಬಹುದು, ರಾಜ್ಯಾಧಿಕಾರದಂತೆ, ವೈಯುಕ್ತಿಕ ಸ್ವರೂಪದ್ದಾಗಿರಬಹುದು. ಒಡೆಯ, ರಕ್ಷಕ, ಗುರು, ಎಂಬಂತೆ. ಯಾವುದೇ ಬಗೆಯ ಅಧಿಕಾರ ನಮ್ಮನ್ನು ಕುರುಡು ಮಾಡುತ್ತದೆ, ಆಲೋಚನೆ ಮಾಡುವುದನ್ನು ತಪ್ಪಿಸುತ್ತದೆ. ನಮ್ಮಲ್ಲಿ ಬಹುಪಾಲು ಜನಕ್ಕೆ ಆಲೋಚನೆ ಬಹಳ ನೋವಿನ ಕೆಲಸವಾದ್ದರಿಂದ ನಮ್ಮನ್ನು ನಾವು ಸುಮ್ಮನೆ ಅಧಿಕಾರಕ್ಕೆ ಒಪ್ಪಿಸಿಕೊಂಡು ಬಿಡುತ್ತೇವೆ. ಸ್ವಯಂ ಅರಿವಿಲ್ಲದವನಲ್ಲಿ ಒಪ್ಪಿಸಿಕೊಳ್ಳುವುದರಿಂದ, ಅಧಿಕಾರ ಹೊಂದಿರುವವನನ್ನು ಮಾತ್ರವಲ್ಲದೆ ಹಿಂಬಾಲಕರನ್ನು ಭ್ರಷ್ಟಗೊಳಿಸುತ್ತದೆ. ಜ್ಞಾನ ಮತ್ತು ಅನುಭವದ ಅಧಿಕಾರ, ಅದು ಒಡೆಯನ್ನಲ್ಲಿರಲಿ, ಒಡೆಯನ ಪ್ರತಿನಿಧಿಯಲ್ಲಿರಲಿ, ಗುರುವಿನಲ್ಲಿ, ಅಥವಾ ಪೂಜಾರಿಯಲ್ಲಿರಲಿ, ವಿಕೃತವಾದದ್ದು. ನಿಮ್ಮ ನಿಮ್ಮ ಸ್ವಂತ ಬದುಕು, ನಿಮ್ಮ ಸ್ವಂತ ಅರಿವು ಇಲ್ಲಿ ಮುಖ್ಯ. ಅಧಿಕಾರಯುತ ವ್ಯಕ್ತಿಗಳು ನಿಮ್ಮನ್ನು ಅರಿವಿನಿಂದ ದೂರ ದೂರ ಒಯ್ಯುತ್ತಾರೆ ನಿಮ್ಮನ್ನು… ನಾವು ಬೇರೆಯವರನ್ನು ಒಪ್ಪಿಕೊಳುವುದ ಏಕೆ ? ಇನ್ನೊಬ್ಬರ ಅಧಿಕಾರವನ್ನು, ಜ್ಞಾನವನ್ನು ಒಪ್ಪಿ ಹಿಂಬಾಲಿಸುತ್ತೇವೆ, ಆನಂತರ ಅದರ ಬಗ್ಗೆ ಅನುಮಾನಪಡುತ್ತೇವೆ. ಅಧಿಕಾರಕ್ಕಾಗಿ ನಡೆಸುವ ಹುಡುಕಾಟದ ಜೊತೆಜೊತೆಗೆ ಭ್ರಮನಿರಸನವೋ ಆಗುತ್ತಿರುತ್ತದೆ. ಇದು ಬಹಳ ನೋವಿನ ಅನುಭವ. ನಾವು ಒಮ್ಮೆ ಒಪ್ಪಿಕೊಂಡ ಅಧಿಕಾರವನ್ನು, ನಾಯಕನನ್ನು, ಗುರುವನ್ನು ನಿಂದಿಸುತ್ತೇವೆ, ಆದರೆ ನಮ್ಮೊಳಗೆ ಇದ್ದು ನಮ್ಮ ವರ್ತನೆಗೆ ಕಾರಣವಾಗಿರುವ ಅಧಿಕಾರದ ಹಂಬಲವನ್ನು ಪರಿಶೀಲಿಸಿಕೊಳ್ಳುವುದೇ ಇಲ್ಲ. ಈ ಹಂಬಲವನ್ನು ಒಮ್ಮೆ ಅರ್ಥಮಾಡಿಕೊಂಡರೆ ಸಂಶಯದ ಮಹತ್ವ ನಮಗೆ ತಿಳಿಯುತ್ತದೆ. ಹಳೆಯ ಜ್ಞಾನವೆಂಬ ಅಧಿಕಾರ ಅಥವಾ ಮೌಢ್ಯದಿಂದ ಮುಕ್ತವಾಗಿ ನಮ್ಮನ್ನು ನಾವು ಕಂಡುಕೊಂಡಾಗ ದುಃಖದಿಂದ ಬಿಡುಗಡೆ ದೊರೆಯುತ್ತದೆ...
(ಮುಂದುವರಿಯುತ್ತದೆ)
ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
✍: ಕಣಬ್ರಹ್ಮವೆಂಕಿ (ವೆಂಕಟೇಶ ಭಂಡಾರಿ ಕುಂದಾಪುರ )
✍: ಕಣಬ್ರಹ್ಮವೆಂಕಿ (ವೆಂಕಟೇಶ ಭಂಡಾರಿ ಕುಂದಾಪುರ )
No comments:
Post a Comment