ಹೌದು ನಾನು ಇಲ್ಲದಿದ್ದರೆ ಏನಾಗುತ್ತದೆ!?..ಹೀಗೊಂದು ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಮೂಡುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದಿಷ್ಟು ಜನರಿಗೆ ಜೀವನ ಕುತೂಹಲಿಗಳಿಗೆ ಮೂಡುವುದು ಸತ್ಯ, ಇದಕ್ಕೆ ಪೂರಕ ಎಂಬಂತೆ ಇತ್ತಿಚೆಗೆ ಕ್ಲಬ್ ಹೌಸ್ ನಲ್ಲಿ ಚರ್ಚೆಯನ್ನು ಕಂಡೆ ಕೂಡ.
ಇಲ್ಲಿ ಎರಡು ಮೂರು ರೀತಿಯ ನಾನುಗಳನ್ನು ಕಾಣುತ್ತೇವೆ ,
ನಾನು (ಗುರುತಿಸಲ್ಪಡುವ, ಐಡೆಂಟಿಟಿ) ನಾನೇ(ಅಹಂ)ಮತ್ತು ನಾನುಗಳ ಗುಂಪಾಗಿ 'ನಾವು' ಇವುಗಳ ಜೊತೆಗೆ "ನಾನ್" ಭಿನ್ನವಾಗಿ ವಿಶ್ಲೇಷಣೆಗೆ ಒಳಪಡುವ ಆಧ್ಯಾತ್ಮಿಕ ಪದವಾಗಿ ಕಾಣಿಸುತ್ತದೆ.
ಈಗ ಇವುಗಳನ್ನು ಸಣ್ಣದಾಗಿ ವಿಶ್ಲೇಷಣೆ ಮಾಡಿ ನೋಡುವುದಾದರೆ.... ಮೊದಲಿಗೆ "ನಾನು" ಇದು ಸಮಾಜ ಗುರುತಿಸುವ ಪೋಷಕರು ತಿಳಿಸಿದ ಹುಟ್ಟಿದ ಮಗುವಿನ ಪರಿಚಯಿಸುವ ನಾನು ಒಬ್ಬ ಜೀವಿಯಾಗಿ ಆಯಾ ಪ್ರಾಣಿಪ್ರಪಂಚದ ರೂಪದಲ್ಲಿ ಕಾಣಿಸುವ ದೇಹವಾಗಿದೆ.ಇಲ್ಲಿ ನಾನು ಇದು ಅಥವಾ ಅದು ಎಂದಾಗಲೂ ಬಹುದು ಹಾಗೂ ಈ ನಾನು ಕೇವಲ ಮನುಷ್ಯ ಪ್ರಪಂಚಕ್ಕೆ ಸಂಬಂಧಿಸದೆ ಎಲ್ಲಾ ಅಣು ಅಣುಗಳಿಗು ಪ್ರಾಣಿ ಪಕ್ಷಿ ಇಡಿಯಾಗಿ ಜೀವ ಸಂಕುಲವನ್ನು ಪ್ರತಿನಿಧಿಸುತ್ತದೆ ಎನ್ನುವುದನ್ನು ಗಮನಿಸೋಣ.ನಾನು ಇಲ್ಲದೇ ಜೀವನವೇ ಇಲ್ಲ.
ಇನ್ನೂ ನಾನೇ...
ಕುದಿ ಹೆಚ್ಚೆ ವೆಗಟುವುದು; ಕಡಿಮೆಯಿರೆ ಹಸಿನಾತ ।
ಕದಡಲೊಡೆವುದು ಹಾಲು; ಸೂಕ್ಷ್ಮವದರ ಹದ ॥
ಅದರವೊಲೆ ಮನದ ಹದ, ಅದನೆಚ್ಚರದಿ ।
ಬದುಕು ಸೊಗ ಹದದಿಂದ – ಮಂಕುತಿಮ್ಮ
ಹಾಲನ್ನು ಕಾಯಿಸುವಾಗ ಹದವಾಗಿ ಕಾಸಿದರೆ ಅದು ಚೆನ್ನಾಗಿ ಕಾದು, ಕೆನೆಕಟ್ಟಿ, ಕುಡಿಯಲು ರುಚಿಯಾಗಿರುತ್ತದೆ. ಅದನ್ನು ಹೆಚ್ಚಾಗಿ ಕಾಯಿಸಿದರೆ ಅಡಿಕಟ್ಟಿ ಸೀದ ವಾಸನೆ ಬರುತ್ತದೆ. ಅಲ್ಲದೆ ಕಡಿಮೆಯಾಗಿ ಕಾಯಿಸಿದರೆ, ಸರಿಯಾಗಿ ಕಾಯದೆ ಹಸಿ ವಾಸನೆ ಬಂದು ಕುಡಿಯಲು ಯೋಗ್ಯವಾಗಿರುವುದಿಲ್ಲ. ಹಾಗಾಗಿ ಹಾಲನ್ನು ಹದವಾಗಿ ಕಾಯಿಸಬೇಕು. ಅದರಂತೆಯೇ ಮನಸ್ಸನ್ನೂ ಎಚ್ಚರದಿಂದ ಹದವಾಗಿಟ್ಟುಕೊಂಡು ಬಾಳನ್ನು ಬಾಳಬೇಕು ಎಂದು ಆದೇಶಿಸುತ್ತಾರೆ, ಗುಂಡಪ್ಪನವರು .ಹೌದು ನಾನು ಒಂದು ಭಿನ್ನ ಪರಿಚಯವಾಗಿ ಗುರುತಿಸಿಕೊಳ್ಳುವುದು ಇಲ್ಲಿ ಅವಶ್ಯಕವೇ ವಿನಹ "ನಾನೇ" ಎಂದು ತೋರಿಸಿಕೊಳ್ಳುವ ಮನುಷ್ಯ ಬುದ್ದಿ ಸರಿಯಲ್ಲ,ನಾನೇ ನನ್ನಿಂದಲೇ ಎನ್ನುವ ಅಹಂಕಾರ ಹೆಚ್ಚಾದರೆ ಹಾಲು ಅಡಿಕಟ್ಟಿ ಸೀದ ವಾಸನೇ ಬಂದಂತೆ ಮನುಷ್ಯ ಸಹ ಅಸಹ್ಯಕ್ಕೆ ಒಳಗಾಗುತ್ತಾನೆ,ಅದಕ್ಕಾಗಿ ಜೀವ ಇರುವವರೆಗೆ ತನ್ನ ಪರಿಚಯಿಸಿಕೊಂಡು ಬಾಳುವುದು ಸಹಜ,ನಾನೇ ಎಂದು ಬಾಳುವುದು ಅವಿವೇಕ. ನಾನೇ ಅನ್ನುವ ಭಾವ ಇಲ್ಲದೆ ಬಾಳುವುದು ಸೊಗಸು ಮತ್ತು ಸಾಧ್ಯ.
ಹಾಗೆ "ನಾವು" ಹಲವು ನಾನುಗಳು ಸೇರಿ ನಾನು .ನಾವುಗಳು ಇಲ್ಲದಿದ್ದರೆ ಈ ಜಗತ್ತೇ ಇಲ್ಲ ಅಥವಾ ಜಗತ್ತು ಇದ್ದರೂ ನಮಗೆ ಅದರ ಕಲ್ಪನೆ ಸಿಗುವುದಿಲ್ಲ,ಇಲ್ಲಿ ನಾನು ಮಾತ್ರ ಜಗತ್ ಅಲ್ಲ ನಾವುಗಳಿಂದ ಜಗತ್ತು ಕಾಣಿಸುತ್ತದೆ ಅನ್ನುವುದನ್ನು ತಿಳಿದು ಬಾಳಬೇಕು,ನಾನು ಇಲ್ಲದಿದ್ದರೆ ಜಗತ್ತು ಇರುತ್ತದೆ ಅದು ಅದರಂತೆ ನಡೆಯುತ್ತದೆ ಅದಕ್ಕೆ ಒಂದು ನಾನು ಕೊರತೆಯೇ ಅಲ್ಲ.ಪ್ರಾಣಿ ಪಕ್ಷಿ ಹಲವಾರು ರೀತಿಯ ಜೀವಿಗಳು ಬೇರೆ ಬೇರೆ ರೀತಿಯಲ್ಲಿ ವೈಯಕ್ತಿಕ ನಾನುವನ್ನು ಹೊಂದಿದ್ದಾವೆ ಅನ್ನುವುದು ಸತ್ಯ ಮತ್ತು ಎಲ್ಲಾ ನಾನುಗಳಿಂದ ನಾವು ಆಗಿದ್ದೇವೆ ,ಈ ಜಗತ್ತು ಹಲವು ನಾವು,ನಾನುಗಳ ಒಕ್ಕೂಟ.
ಇನ್ನೂ ನಾನ್ ಇಲ್ಲದಿದ್ದರೆ ಅನ್ನುವ ಮೂಲ ಪ್ರಶ್ನೆಗೆ ಬರೋಣ... ಸಾಮಾನ್ಯವಾಗಿ ಸಾಮಾಜಿಕ ಜೀವನ ಕ್ರಮದಿಂದಾಗಿ ನಮ್ಮ ಕುಟುಂಬದಲ್ಲಿ ನಾನ್ ಇಲ್ಲದಿದ್ದರೆ ಏನಾಗಬಹುದು ನಮ್ಮ ಮನೆಯ ಪರಿಸ್ಥಿತಿ, ನನ್ನವರ ಜೀವನ ಕ್ರಮ ಹೇಗೆಲ್ಲ ಬದಲಾಗಿಬಿಡಬಹುದು ಈ ಯೋಚನೆ ಬಂದೊಡನೆ ಒಂದು ಆತಂಕ ಶುರುವಿಟ್ಟುಕೊಳ್ಳುತ್ತದೆ,ನಿಜ ಒಬ್ಬನ ಅಗಲಿಕೆ ಒಂದು ಕುಟುಂಬಕ್ಕೆ ನಷ್ಟವೇ ಕೇವಲ ಆರ್ಥಿಕ ಲೆಕ್ಕಚಾರವಲ್ಲ,ಭಾವನಾತ್ಮಕವಾಗಿ ಕೂಡ ಆದರೆ ಈ ಸೃಷ್ಟಿ ಹೇಗಿದೆ ಎಂದರೆ ಎಲ್ಲವನ್ನೂ ಕಾಲಕ್ಕೆ ಅನುಗುಣವಾಗಿ ಮರೆಸಿ ಅವರವರ ಜೀವನವನ್ನು ,ಅವರು ಜೀವಿಸಬೇಕಾದ ನಿರ್ಧರಿಸಲ್ಪಟ್ಟ ವಿಧಿ ನಿಯಮದಂತೋ ಅಥವಾ ಸಹಜವಾಗಿಯೋ ನಡೆಸಿಬಿಡುತ್ತದೆ ಏನು ಆಗಲಿಲ್ಲ ಅನ್ನುವಂತೆ,ಹೀಗೆ ನೋಡಿದರೆ ನಾನು ಇಲ್ಲದಿದ್ದರೆ ಕುಟುಂಬಕ್ಕೆ ಆಗಲಿ,ಸಮಾಜ ಊರುಕೇರಿ ಈ ದೇಶ ಪ್ರಪಂಚಕ್ಕೆ ಯಾವ ನಷ್ಟವೂ ಇಲ್ಲ ಅನ್ನುವುದು ಸ್ಪಷ್ಟ.
ಈ ನಾನ್ ಇಲ್ಲದಿದ್ದರೆ ವಾಕ್ಯ ಸಹಜವಾಗಿ ಭಾರತದಂತ ದೇಶಗಳಲ್ಲಿ ಆಧ್ಯಾತ್ಮಿಕವಾಗಿ ವಿಶ್ಲೇಷಣೆಗೆ ಒಳಪಡುವುದರಿಂದ ಆ ನಿಟ್ಟಿನಲ್ಲಿ ಯೋಚಿಸಿದರೆ,ಇಲ್ಲಿ ನಾನ್ ಎಂದರೆ ಜಗತ್ ಚೈತನ್ಯ ದೇಹವನ್ನು ಹೊಂದಿದ ನಂತರ ಅದರ ಆಂತರಿಕವಾಗಿ ಇರುವ ಚೈತನ್ಯ ಶಕ್ತಿಗೆ ಆಯಾ ಪ್ರದೇಶದ ಸಮಾಜ ಪೋಷಕರು ಪ್ರಕೃತಿ ಪ್ರೇರಣೆ ನೀಡಿದ ವ್ಯಕ್ತಿಗಳಿಂದ ರೂಢಿಸಲ್ಪಟ್ಟ ವೈಯಕ್ತಿಕ ವ್ಯಕ್ತಿತ್ವ ಆಗಿದೆ. ಆಂತರಿಕವಾಗಿ ಇರುವ ನಾನ್ ಅರ್ಥಾತ್ ಮನಸ್ಸು ಹಲವಾರ ಚಿಂತನೆಗಳ ಒಂದು ಭಾವವಾಗಿದೆ.ಹೀಗೆ ಹಲವಾರು ಚಿಂತನೆಗಳು ನನ್ನೊಳಗೆ ಇಲ್ಲವಾದರೆ ಆಗ ನಾನು ಇಲ್ಲವಾಗುತ್ತೇನೆ ಅಂದರೆ ಸಾವು ಸಂಭವಿಸುತ್ತದೆ ಎಂದು ಹೇಳಬಹುದು, ಇದರ ಅರ್ಥ ಮನಸ್ಸು ಇಲ್ಲದ ಸ್ಥಿತಿಯೇ ಸಾವು ಹಾಗಾಗಿ ಮನಸ್ಸು ಅಥವಾ ನಾನು ಹಲವಾರು ಚಿಂತನೆ ನೆನಪುಗಳ ಒಂದು ಆಯಾಮವಷ್ಟೆ.,ಅದು ಇಲ್ಲದಾಗ ಮನುಷ್ಯ ಸತ್ತಿರುತ್ತಾನೆ.
ಹೀಗೆ ಚಿಂತನೆ ನಡೆಸುವಾಗ ಅಧ್ಯಾತ್ಮಿಕರ ಹಲವಾರು ಮಾತುಗಳು ನಮ್ಮನ್ನು ಚಿಂತನೆಗೆ ಒಳಪಡಿಸುತ್ತವೆ ಅವುಗಳು ಹೀಗಿವೆ.... ಅವರು ಹೇಳುತ್ತಾರೆ ಮನುಷ್ಯನಿಗೆ ನಾನು ಭಾವ ಇರಬಾರದು ಒಳ್ಳೆಯದಲ್ಲ ಅಂದರೆ ಅಹಂಕಾರ ಇರಬಾರದು, ಇದು ಒಂದು ರೀತಿಯಲ್ಲಿ ಬುದ್ದಿವಾದದ ಮಾತು ಆದ್ದರಿಂದ ಇದನ್ನು ಆ ಮಟ್ಟಿಗೆ ಒಪ್ಪೋಣ ಆದರೆ, ಅವರು ಮುಂದುವರಿದು ನಾನು ಇಲ್ಲದ ಮನುಷ್ಯನಿಗೆ ದೇವರು ಕಾಣಿಸಿಕೊಳ್ಳುತ್ತಾನೆ ಅಥವಾ ಅನುಭವಕ್ಕೆ ಬರುತ್ತಾನೆ.ಇಲ್ಲಿ ದೇವರು ಕಾಣಿಸಿಕೊಳ್ಳುತ್ತಾನೆ ಅನ್ನುವುದು ಅತಿರೇಕದ ಕಲ್ಪನೆ ಆದ್ದರಿಂದ ಅದನ್ನು ನಂಬುವುದು ಸಾಬೀತು ಮಾಡುವುದು ಕಷ್ಟ ಅದು ಸಧ್ಯಕ್ಕೆ ಎಲ್ಲರಿಗೂ ತಿಳಿದ ವಿಷಯ, ಆದರೆ ದೇವರು ಅನುಭವಕ್ಕೆ ಬರುವ ಸನ್ಯಾಸಿಗಳು ಅಥವಾ ಅಧ್ಯಾತ್ಮಿಕ ಚಿಂತಕರ ಮಾತುಗಳು ಜಿಜ್ಞಾಸೆಗೆ ತಳ್ಳುತ್ತದೆ.ನಾನು ಇಲ್ಲದಾಗ ದೇವರು ಅನುಭವಕ್ಕೆ ಬರುತ್ತಾನೆ ಅಥವಾ ಬರುತ್ತದೆ ಅಂತಾದರೆ,ಅಲ್ಲಿ ಅನುಭವಕ್ಕೆ ತಂದುಕೊಳ್ಳುವವನು ಯಾರು ನಾನು ಇಲ್ಲವಾದಾಗ ಅರ್ಥಾತ್ ಸತ್ತಾಗ ಅನುಭವ ಆಗುವುದಾದರೂ ಹೇಗೆ!? ಹೀಗೆ ನಡೆಯಲು ಯಾವ ಕಾಲಕ್ಕಾದರೂ ಸಾಧ್ಯವ!? ಅನುಭವಿಗಳ ಇತಿಹಾಸವನ್ನು ಗಮನಿಸಿದಾಗ ಆ ಒಂದು ಸ್ಥಿತಿಗೆ ಪರಮಹಂಸರು (ರಾಮಕೃಷ್ಣರು) ಹೋಗಿ ಬರುತ್ತಿದ್ದರಂತೆ ಅದು ಎಷ್ಟರ ಮಟ್ಟಿಗೆ ನಿಜ ತಿಳಿಯದು,ನಾನು ಇಲ್ಲವಾಗಿ ಅಂದರೆ ದೇಹವನ್ನು ತ್ಯಜಿಸಿ ಮತ್ತೆ ಪುನಃ ದೇಹವನ್ನು ಸೇರುವ ಕಲೆ ಅವರಿಗೆ ಸಿದ್ದಿಸಿತ್ತು ಅಂತಾದರೆ ಮರಳಿ ದೇಹವನ್ನು ಸೇರುಲು ನಾನು ಎಂಬ ಭಾವ ಇರಲೇ ಬೇಕಲ್ಲವೇ!? .ಅಲ್ಲದೇ ಇದ್ದರೆ ನಾನು ಎಂಬ ಭಾವ ಇಲ್ಲದೆ ತನ್ನೋಳಗೆ ತಾ ಮುಳುಗಿ ಹೋಗುವುದಾದರೆ ನಾನು ಅಲ್ಲಿ ಇಲ್ಲದ ಸ್ಥಿತಿಯನ್ನು ದೇವರು ಇರುವ ಸಮಯ ಎಂದು ಭಾವಿಸಬಹುದೇ,ಆಗ ದೇವರು ನೀಡುವ ಸನ್ನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಹೇಗೆ ಮತ್ತು ಯಾರು!? .ನಾನು ಇಲ್ಲದೆ ಇಲ್ಲಿ ಏನು ನಡೆಸಲು ವಿಚಾರಿಸಲು ಸಾಧ್ಯವೆ ಇಲ್ಲ ಎಂದಾಯಿತಲ್ಲವೇ.ಒಟ್ಟಿನಲ್ಲಿ ನಾನು ಇಲ್ಲದಿದ್ದರೆ ನಮ್ಮ ಈ ಜೀವನ ,ಈ ಜಗತ್ತು, ದೇವರು ಯಾವ ಕಲ್ಪನೆಯೂ ಇಲ್ಲ ,ನಾನು ಇಲ್ಲ.....ನಾನ್ ಇಲ್ಲ.
No comments:
Post a Comment