ರಾಣಿ ಅಬ್ಬಕ್ಕ
ಅದು ಹದಿನಾರನೇ ಶತಮಾನದ ಕಾಲಘಟ್ಟ. ತನ್ನ ಸಾಮ್ರಾಜ್ಯವನ್ನು ಉಳ್ಳಾಲದಲ್ಲಿ ಸ್ಥಾಪಿಸಿ ತುಳುನಾಡಿನಲ್ಲಿ ಅಧಿಕಾರ ನಡೆಸಿದ ವೀರ ವಣಿತೆ . ಚೌಟರ ರಾಣಿಯಾಗಿದ್ದ ಅಬ್ಬಕ್ಕ ತನ್ನ ದಕ್ಷ ಹಾಗು ಪ್ರಾಮಾಣಿಕ ಆಡಳಿತದಿಂದ ಹೆಸರುವಾಸಿಯಾಗಿದ್ದು, ತುಳುನಾಡಿನ ಪ್ರಥಮ ರಾಣಿಯಾಗಿದ್ದಳು. ಪುತ್ತಿಗೆ ಎನ್ನುವ ಸ್ಥಳವನ್ನು ತನ್ನ ರಾಜಧಾನಿಗಿಸಿಕೊಂಡು ಮಂಗಳೂರಿನ ಸಾಗದರದುದ್ದಕ್ಕೂ ತನ್ನ ಕನಸಿನ ಸಾಮ್ರಾಜ್ಯ ಸುಭೀಕ್ಷವಾಗಿ ಕಟ್ಟಿದ್ದ ಸಿಂಹಿಣಿಯಾಗಿದ್ದಳು.
ಮಂಗಳೂರಿನ ಪ್ರಭಲ ಅರಸನಾಗಿದ್ದ ಲಕ್ಷ್ಮಪ್ಪಅರಸನೊಂದಿಗೆ ವಿವಾಹವಾದ ನಂತರ ಆತನಿಂದ ಯುದ್ಧ ಕಲೆಗಳನ್ನೆಲ್ಲ ಕಲಿತುಕೊಂಡಳು. ನಂತರದಲ್ಲಿ ಇವರೊಡನೆ ವಿರಸವುಂಟಾಗಿ ಮತ್ತೆ ಉಳ್ಳಾಲವನ್ನು ಸೇರಿಕೊಂಡಿದ್ದಳು.
ಗೋವಾದ ಮೂಲಕ ಭಾರತ ಪ್ರವೇಶಿಸಿದ್ದ ಪೋರ್ಚುಗೀಸರು ತಮ್ಮ ಪ್ರಾಭಲ್ಯವನ್ನು ಗೋವಾದುದ್ದಕ್ಕೂ ಹೊಂದಿದ್ದರು . ಇತರ ಸಂಸ್ಥಾನಗಳನ್ನು ಬೆದರಿಸಿ ಕಪ್ಪ ಪಡೆಯುತಿದ್ದರು. ಈ ಮೂಲಕ ಅವರ ಕಣ್ಣು ಯಾವಾಗ ತುಳುನಾಡಿನೆಡೆಗೆ ಬೀಳುತ್ತೋ ಅಬ್ಬಕ್ಕ ಕೆರಳಿ ಕೆಂಡಾಮಂಡಲವಾಗುತ್ತಾಳೆ. ಮೊದಲೇ ವೈಮನಸ್ಸು ಹೊಂದಿದ್ದ ಆಕೆಯ ಗಂಡ ಪೋರ್ಚುಗೀಸರೊಡನೆ ಸೇರಿಕೊಳ್ಳುತ್ತಾನೆ.
ಸಮುದ್ರದಲ್ಲಿ ಹಡಗಿನ ಮೂಲಕವೇ ಬಂದು ದಾಳಿ ಮಾಡುವ ಪೊರ್ಚುಗೀಸರಿಗೆ ಯಾವಾಗ ಅಬ್ಬಕ್ಕ ತಮ್ಮ ಮಾತಿಗೆ ಸೊಪ್ಪು ಹಾಕುವುದಿಲ್ಲ ಎಂದು ಗೊತ್ತಾಗುವುತ್ತದೋ ತಮ್ಮ ಸೈನ್ಯದ ತುಕಡಿಯೊಂದನ್ನು ಕಳುಹಿಸುತ್ತಾರೆ. ಅಬ್ಬಕ್ಕ ದೃತಿಗೆಡಲಿಲ್ಲವಾದರೂ ಸಮುದ್ರದಿಂದ ಬರುವ ವೈರಿಗಳನ್ನು ಹೇಗೆ ತಡೆಯುವುದೆಂದು ಚಿಂತಿಸುತ್ತಾಳೆ. ಆಗ ನೆರವಾದವರೇ ಮೀನುಗಾರರು. ಯುದ್ಧದ ಗಂಧಗಾಳಿಯಿಲ್ಲದ ಬಡಮೀನುಗಾರನ್ನು ಉದ್ದೇಶಿಸಿ ಮಹಾರಾಣಿಯು ಮಾತನಾಡುತ್ತಾ ಸಮುದ್ರದಲ್ಲಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಹತ್ತಾರು ಅಡಿ ಎತ್ತರದ ಅಲೆಗಳಿಗೆ ಎದೆಕೊಟ್ಟು ಬದುಕುವವರು ನೀವು. ಇಂದು ನಮ್ಮ ನೆಲದ ಉಳಿವಿಗಾಗಿ ಹೋರಾಡಬೇಕಿದೆ, ಬದುಕಿದರೂ ಸತ್ತರೂ ಜನ್ಮಭೂಮಿಗಾಗಿಯೇ ಎಂದು ಹುರಿದುಂಬಿಸುತ್ತಾಳೆ.
ಕತ್ತಲೆಯಲ್ಲೇ ತಮ್ಮ ಕರಾಮತ್ತು ತೋರಿಸುವ ಪೋರ್ಚುಗೀಸರು ಉಳ್ಳಾಲದೆಡೆಗೆ ಹೊರಟಿರುವ ಮಾಹಿತಿ ಪಡೆದ ಅಬ್ಬಕ್ಕನ ವೀರ ಸೇನಾನಿ ಮೀನುಗಾರರು ಸಮುದ್ರಕ್ಕೆ ದಂಡು ದಂಡಾಗಿ ತಮ್ಮ ಸಣ್ಣ ಸಣ್ಣ ದೋಣಿಗಳ ಮೂಲಕ ಇಳಿದು ಬಿಡುತ್ತಾರೆ. ಅಬ್ಬಕ್ಕನ ರೋಷಾವೇಶ ಕಂಡ ಸ್ವಾತಂತ್ರ ಕಲಿಗಳ ಗರ್ಜನೆ ಕಡಲಾಳದಿಂದಲೂ ಕೇಳಿಬರತೊಡಗಿತು. ಸಮುದ್ರದ ದೈತ್ಯ ಅಲೆಗಳ ಮೇಲೆ ಪುಟ್ಟ ಪುಟ್ಟ ಬಾತುಕೋಳಿಗಳಂತೆ ತೊಯ್ದಾಡುತ್ತಿರುವ ಮೀನುಗಾಗಾರರ ಹಡಗುಗಳನ್ನು ನುಂಗಿಹಾಕುವಂತಹ ಪೋರ್ಚುಗೀಸರ ದೈತ್ಯ ಹಡಗುಗಳು ತಮ್ಮ ಕೆಲಸವನ್ನು ಶುರುಮಾಡಿಕೊಂಡವು. ಮದ್ದುಗುಂಡುಗಳ ರೌದ್ರಾವತಾರಕ್ಕೆ ಸಣ್ಣ ಪುಟ್ಟ ದೋಣಿಗಳು ಛಿದ್ರವಾಗತೊಡಗಿತು. ಮೀನುಗಾರರ ಮನೋಸ್ಥೈರ್ಯ ಕುಗ್ಗತೊಡಗಿತು. ಈಗ ಅಬ್ಬಕ್ಕನ ಆಂತರ್ಯದಲೊಂದು ಯೋಜನೆಯೊಂದು ಹೊಳೆಯಿತು. ತಮ್ಮಲ್ಲಿದ್ದ ಪಂಜು ಹಾಗು ಎಣ್ಣೆಯನ್ನೇ ಆಯುಧವಾಗಿ ಬಳಸಲು ಯೋಜನೆ ಹಾಕಿಕೊಂಡರು.
ಮೊದಲು ಮೀನುಗಾರರ ದೋಣಿಗಳು ಪೊರ್ಚುಗೀಸರ ಹಡಗುಗಳನ್ನು ಸುತ್ತುವರೆಯಿತು ತಮ್ಮಲ್ಲಿದ್ದ ಎಣ್ಣೆಯನ್ನು ಹಡಗಿಗೆ ಗುರಿಯಾಗಿಸಿ ಎಸೆದು ಪಂಜಿನ ಎಸೆತ ಶುರು ಮಾಡಿಕೊಂಡರು. ಯಾವಗ ಈ ಯೋಜನೆ ಫಲಿಸತೊಡಗಿತೋ ಎಲ್ಲಾ ಮೀನುಗಾರ ದೋಣಿಗಳು ಪೋರ್ಚುಗೀಸರನ್ನು ಸುತ್ತುವರಿಯಿತು. ಸಮುದ್ರದ ಮದ್ಯೆ ಎದುರಾಳಿಯ ಚಿತೆ ಉರಿಯುವುದನ್ನು ನೋಡಿ ಇನ್ನಷ್ಟು ಉತ್ಸಾಹದಿಂದ ಯುದ್ದ ಮುಂದುವರೆಸಿದರು. ಮೀನುಗಾರರ ತಾಂಡವಕ್ಕೆ ಬೆದರಿದ ಪೂರ್ಚುಗೀಸರು ಪಲಾಯನ ತಂತ್ರ ಉಪಯೋಗಿಸಿದರೂ ಅಟ್ಟಾಡಿಸಿಕೊಂಡು ಬೆನ್ನಟ್ಟಿದರು. ಬೆಂಕಿಯಿಂದ ಜೀವ ಉಳಿಸಿಕೊಳ್ಳಲು ಅನೇಕ ಪೋರ್ಚುಗೀಸ್ ಸೈನಿಕರು ಸಮುದ್ರಕ್ಕೆ ಹಾರಿದರು. ಹೀಗೆ ರಾಣಿ ಅಬ್ಬಕ್ಕಳು ತನ್ನ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ನಾಡಿಗಾಗಿ ಹೋರಾಟ ಮಾಡಿ ವಿಜಯವನ್ನು ಸಾಧಿಸಿಕೊಂಡಳು. ಶೌರ್ಯ ದಿಟ್ಟತನ ಸಮಯಪ್ರಜ್ಞೆ ಸಾಹಸ, ಸ್ವಾಭಿಮಾನ, ಸಾಮರಸ್ಯದ ರೂಪಕವಾಗಿ ಇಂದೂ ಉಳ್ಳಾಲದ ಮಣ್ಣಿನಲ್ಲಿ ಆಕೆಯ ಹೆಸರು ಅಜರಾಮರವಾಗಿ ಉಳಿದುಕೊಂಡಿದೆ.
-ರಂಜಿತ್ ಭಂಡಾರಿ ಸಸಿಹಿತ್ಲು
No comments:
Post a Comment