BhandaryVarthe Team

BhandaryVarthe Team
Bhandary Varthe Team

Thursday 26 August 2021

"ಬಂಧುಗಳ ಸೇವೆಯೇ ಭಗವಂತನ ಸೇವೆ ಎಂದು ನಂಬಿದ ಭಂಡಾರಿವಾರ್ತೆಯ ಕಳೆದ ನಾಲ್ಕು ವರ್ಷಗಳ ಸಾಧನೆಗಳೇನು?"

 ಭಂಡಾರಿವಾರ್ತೆ ಆರಂಭಗೊಂಡು ಆಗಸ್ಟ್ 26 ಕ್ಕೆ ನಾಲ್ಕು ವರ್ಷ ಪೂರ್ಣಗೊಂಡಿದೆ.

 
 ಭಂಡಾರಿವಾರ್ತೆ ಆರಂಭಗೊಂಡಾಗ ಕೇವಲ ಭಂಡಾರಿ ಸಮುದಾಯದ ಒಂದು ಸುದ್ದಿ ಮಾಧ್ಯಮವಾಗಿ ಗುರುತಿಸಿಕೊಂಡಿತ್ತು. ದಿನಗಳೆದಂತೆ ಭಂಡಾರಿವಾರ್ತೆ ಭಂಡಾರಿ ಸಮುದಾಯದ ಯುವ ಬರಹಗಾರರಿಗೆ ವೇದಿಕೆಯನ್ನು ಕಲ್ಪಿಸುತ್ತಾ ಸಮಾಜದ ಸೃಜನಶೀಲ ಲೇಖಕರಿಗೆ ಕೂಡಾ ವೇದಿಕೆಯನ್ನು ಕಲ್ಪಿಸಿಕೊಟ್ಟಿತು. ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಂಸ್ಕೃತಿಕ,  ಕ್ರೀಡಾ ಸಾಧನೆಗಳನ್ನು ಬಿತ್ತರಿಸುತ್ತಾ ಭಂಡಾರಿವಾರ್ತೆ ಭಂಡಾರಿ ಸಮಾಜದ ಮುಖವಾಣಿಯಾಗಿ ಬದಲಾಯಿತು.


ಹಾಗೇ ಮುಂದುವರಿದು ಭಂಡಾರಿ ಸಮಾಜದ ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸದ ಮುಂದುವರಿಕೆಗಾಗಿ, ಸಮಾಜದ ದುರ್ಬಲ ವರ್ಗದ ಬಂಧುಗಳ ಅನಾರೋಗ್ಯದ ಸಂದರ್ಭದ ಆರ್ಥಿಕ ಸಂಕಷ್ಟದ ಸಂದರ್ಭಗಳಲ್ಲಿ ದಾನಿಗಳ ನೆರವಿನಿಂದ ಆರ್ಥಿಕ ನೆರವು ನೀಡುವ ಮೂಲಕ ಭಂಡಾರಿವಾರ್ತೆ ಭಂಡಾರಿ ಬಂಧುಗಳ ಮನದಲ್ಲಿ ಆಪತ್ಬಾಂಧವನ ಸ್ಥಾನವನ್ನು ಅಲಂಕರಿಸಿತು. 



 
"ಬಂಧುಗಳ ಸೇವೆಯೇ ಭಗವಂತನ ಸೇವೆ" ಎಂಬುದನ್ನು ಭಂಡಾರಿವಾರ್ತೆ ಕಾಲಕಾಲಕ್ಕೆ ತನ್ನ ಕೆಲಸ ಕಾರ್ಯಗಳಿಂದ ನಿರೂಪಿಸುತ್ತಾ ಬಂದಿದೆ.
 
 
ಭಂಡಾರಿವಾರ್ತೆ ಆರಂಭದ ದಿನಗಳಿಂದಲೂ ಸಮಾಜದ ಬಂಧುಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಜನಮಾನಸದಲ್ಲಿ ಶಾಶ್ವತ ಸ್ಥಾನವನ್ನು ಅಲಂಕರಿಸಿದೆ.
 
 ಮಕ್ಕಳಿಗಾಗಿ ಏರ್ಪಡಿಸಿದ "ಸೆಲ್ಫಿ ಫೋಟೋ ಸ್ಪರ್ಧೆ", ಚಿತ್ರಕಲಾ ಸ್ಪರ್ಧೆ "ಭಂಡಾರಿ ಚಿತ್ತಾರ", ದೀಪಾವಳಿಯ ಸಂದರ್ಭದಲ್ಲಿ ಏರ್ಪಡಿಸಿದ್ದ ಕೈಯಾರೆ ತಯಾರಿಸಿದ "ಗೂಡು ದೀಪ ಸ್ಪರ್ಧೆ" ಮತ್ತು ಭಂಡಾರಿವಾರ್ತೆಯ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಲ್ಲ ವಯೋಮಾನದವರಿಗಾಗಿ ಏರ್ಪಡಿಸಿದ "ಸೆಲ್ಫಿ ಫೋಟೋ ಸ್ಪರ್ಧೆ" ಇವೆಲ್ಲವುಗಳು ಅಭೂತಪೂರ್ವ ಯಶಸ್ಸು ಕಂಡು ಭಂಡಾರಿವಾರ್ತೆ ಬಂಧುಗಳ ಮನದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿತು.



 

ಭಂಡಾರಿ ಸಮಾಜದ ಇತಿಹಾಸದಲ್ಲಿ ಮೊದಲಬಾರಿಗೆ ಕಾರ್ಯಕ್ರಮಗಳ ನೇರಪ್ರಸಾರವನ್ನು ಮಾಡಿರುವ ಹೆಮ್ಮೆ ಭಂಡಾರಿವಾರ್ತೆಯದು. ಮೊದಲಬಾರಿಗೆ ಭಂಡಾರಿವಾರ್ತೆಯ ಅನಾವರಣದ ಸಂದರ್ಭದಲ್ಲಿ, ಮೊದಲ ವಾರ್ಷಿಕ ದಿನಾಚರಣೆಯ ಸಂದರ್ಭದಲ್ಲಿ, ಭಂಡಾರಿವಾರ್ತೆಯ ಸಕ್ರಿಯ ಸದಸ್ಯರಾದ ಶ್ರೀಪಾಲ್ ಭಂಡಾರಿಯವರು ಮತ್ತು ಸಂದೇಶ್ ಬಂಗಾಡಿಯವರ ಮದುವೆಯಲ್ಲಿ ,ಬೆಂಗಳೂರು ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ 2018 ರಲ್ಲಿ ಬೆಂಗಳೂರಿನಲ್ಲಿ ನಡೆದಾಗ, 2019 ರಲ್ಲಿ ಶಿರಾಳಕೊಪ್ಪದಲ್ಲಿ ನಡೆದಾಗ ಮತ್ತು ಭಂಡಾರಿ ಸಮಾಜ ಸಂಘ ಬೆಂಗಳೂರಿನ ಹಲವು ಮಾಸಿಕ ಸಭೆಗಳ ನೇರಪ್ರಸಾರವನ್ನು ಭಂಡಾರಿವಾರ್ತೆಯ ಮೂಲಕ ಮಾಡಿ ಹಲವರ ಮೆಚ್ಚುಗೆ ಗಳಿಸಿದೆ.

ಭಂಡಾರಿವಾರ್ತೆಯ ಮುಂದಾಳತ್ವದಲ್ಲಿ ಮಂಗಳೂರಿನ ಪುರುಷರ ಮತ್ತು ಮಹಿಳೆಯರ ಅಬಲಾಶ್ರಮದಲ್ಲಿ ವಿಶೇಷ ಚೇತನರಿಗೆ ಕೇಶ ಕರ್ತನ ಮಾಡಿ ಸೇವಾ ಕಾರ್ಯವನ್ನು ಆರಂಭಿಸಿದ ಭಂಡಾರಿ ವಾರ್ತೆ ಅನಾರೋಗ್ಯ ಪೀಡಿತರಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪ್ರಸಾದ್ ಭಂಡಾರಿ ಮತ್ತು ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಕುದುರೆಮಜಲು ನಿವಾಸಿ ಜಗದೀಶ್ ಭಂಡಾರಿಯವರ ಪತ್ನಿ ಶ್ರೀಮತಿ ಸುಗುಣ ಭಂಡಾರಿಯವರಿಗೆ ದಾನಿಗಳ ನೆರವಿನಿಂದ ಆರ್ಥಿಕ ನೆರವು ಒದಗಿಸಿ ಬಂಧುಗಳ ಸಂಕಷ್ಟ ಪರಿಸ್ಥಿತಿಯಲ್ಲಿ ನೆರವು ಒದಗಿಸುವ ಮೂಲಕ ಆಸರೆಯಾಗಿದ್ದು ನಿಮಗೆಲ್ಲ ತಿಳಿದಿರುವ ವಿಚಾರವೇ ಸರಿ.
 
ದಾನಿಗಳ ನೆರವಿನೊಂದಿಗೆ ಆರಂಭಿಸಲಾದ ವಿದ್ಯಾ ದತ್ತು ಯೋಜನೆಯಲ್ಲಿ ಪತ್ರಿಕೋದ್ಯಮ ಕಲಿಯುತ್ತಿರುವ ಕಲ್ಲಡ್ಕದ ಕುಮಾರಿ ಗ್ರೀಷ್ಮಾ ಭಂಡಾರಿ, ಕಾನೂನು ವಿದ್ಯಾಭ್ಯಾಸ ಮಾಡುತ್ತಿರುವ ಕಾರ್ಕಳದ ಇರುವೈಲು ಗ್ರಾಮದ ಕುಮಾರಿ ಸುಷ್ಮಾ, ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿರುವ ಉಡುಪಿಯ ಅಶ್ವತ್ಥ್ ಭಂಡಾರಿ ಮುಂತಾದ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಹೃದಯಿ ಬಂಧುಗಳ ನೆರವಿನಿಂದ ಆಸರೆಯಾಗಿದ್ದು ಭಂಡಾರಿ ವಾರ್ತೆ. ಇದು ಕೇವಲ ಕೆಲವು ಉದಾಹರಣೆಯಾಗಿದ್ದು ಈ ವಿದ್ಯಾ ದತ್ತು ಯೋಜನೆಯಲ್ಲಿ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
 
ಈ ದಿಸೆಯಲ್ಲಿ ಮುಂದುವರಿದು ಕುಂದಾಪುರದ ಕುಂದಬಾರಂದಾಡಿ ಗ್ರಾಮದ ಮಾಣಿಕೊಳಲಿನ ಶಂಕರ ಭಂಡಾರಿಯವರ ಪುತ್ರಿ ಕುಮಾರಿ ರಜನಿ ಭಂಡಾರಿಯ ಪ್ರಕರಣ. ದೃಷ್ಟಿದೋಷ ಹೊಂದಿರುವ ಆಕೆ ಛಲದಿಂದ ಬೆಂಗಳೂರಿಗೆ ತೆರಳಿ ಪಿಜಿ ಯಲ್ಲಿದ್ದುಕೊಂಡು ಪಿಯುಸಿಯಲ್ಲಿ ಶೇ 70 ರಷ್ಟು ಅಂಕಗಳನ್ನು ಗಳಿಸಿ ಪದವಿ ಶಿಕ್ಷಣ ಪಡೆಯಲು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದನ್ನು ಮನಗಂಡ ಭಂಡಾರಿವಾರ್ತೆ ಮಸ್ಕತ್ ನಲ್ಲಿ ನೆಲೆಸಿರುವ ಅನಿಲ್ ಭಂಡಾರಿ, ಬೆಂಗಳೂರು ದಾಸರಹಳ್ಳಿಯ ರಾಜಶೇಖರ ಭಂಡಾರಿ, ರಮೇಶ್ ಭಂಡಾರಿ ಬೊಟ್ಯಾಡಿ, ರಮೇಶ್ ಭಂಡಾರಿ ಮಂಜೇಶ್ವರ, ಎಂ.ಕೆ.ಚಿದಂಬರನಾಥ್ ಭಂಡಾರಿ ಬೆಂಗಳೂರು, ಲಕ್ಷ್ಮಣ ಭಂಡಾರಿ ಕರಾವಳಿ, ನವೀನ್ ಭಂಡಾರಿ ಬೋರುಗುಡ್ಡೆ ಬೆಂಗಳೂರು, ರಾಹುಲ್ ಉಡುಪಿ, ನಿತಿನ್ ಆನಂದ್ ಭಂಡಾರಿ ಕುಂದಾಪುರ, ನಾರಾಯಣ ಭಂಡಾರಿ ಕಲ್ಲಡ್ಕ, ರುಕ್ಮಿಣಿ ಅನಂತ ಭಂಡಾರಿ ಮುಂಬಯಿ,ಕತಾರ್ ನಲ್ಲಿ ನೆಲೆಸಿರುವ ಶ್ರೀಪಾಲ್ ಭಂಡಾರಿ ನೆಲ್ಯಾಡಿ, ವಿಠ್ಠಲ ಭಂಡಾರಿ ಮೈಸೂರು, ನಾರಾಯಣ ಭಂಡಾರಿ ಮೂಲ್ಕಿ, ವಿಶ್ವನಾಥ ಭಂಡಾರಿ DYSP ಪೊಲೀಸ್ ಇಲಾಖೆ ಬೆಂಗಳೂರು, ಸತೀಶ್ ಭಂಡಾರಿ ಸಂಪ್ಯ, ರಾಜಕೇಸರಿ ತಂಡ ಮತ್ತು ಮುಂತಾದ  ದಾನಿಗಳ ನೆರವಿನಿಂದ ಸುಮಾರು 87000/- (ಎಂಬತ್ತೇಳು ಸಾವಿರ ರೂಪಾಯಿಗಳು)ರೂ ಮೊತ್ತವನ್ನು ಸಂಗ್ರಹಿಸಿ ಕೊಟ್ಟಿತು. ಈ ನೆರವಿನಿಂದಾಗಿ ರಜನಿ ಈಗ ಬೆಂಗಳೂರಿನ ಕೆ ಎಲ್ ಇ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸುವಂತಾಗಿದೆ.
 
ಕುಂಬ್ಳೆಯ ಹೇಮಂತ್ ಕುಮಾರ್ ಅವರು ಎಸ್ಸೆಸ್ಸೆಲ್ಸಿಯಲ್ಲಿಶೇಕಡಾ  96% ಉತ್ತಮ ಅಂಕ ಗಳಿಸಿದ್ದರೂ ಆರ್ಥಿಕ ಅಡಚಣೆಯಿಂದಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವ ಚಿಂತನೆಯಲ್ಲಿದ್ದಾಗ ಭಂಡಾರಿವಾರ್ತೆ ಬೆಂಗಳೂರಿನಲ್ಲಿ ನೆಲೆಸಿರುವ ನವೀನ್ ಭಂಡಾರಿ ಬೋರುಗುಡ್ಡೆ ಯವರ ಮೂಲಕ ಆರ್ಥಿಕ ನೆರವನ್ನು ಒದಗಿಸಿಕೊಟ್ಟಿತು. ಅವರು ಪ್ರಸ್ತುತ ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.
 
ಶೇಕಡಾ 80 ದೃಷ್ಟಿಹೀನರಾಗಿರುವ ಕುಂದಾಪುರದ ಯುವಕ ರಂಜಿತ್ ಭಂಡಾರಿಯವರಿಗೆ ಉದ್ಯೋಗಕ್ಕಾಗಿ ತರಬೇತಿಯ ಅವಶ್ಯಕತೆ ಇದ್ದಾಗ ಸ್ಪಂದಿಸಿದ ಭಂಡಾರಿವಾರ್ತೆ ನ್ಯಾಯವಾದಿ ಶ್ರೀ ಮನೋರಾಜ್ ರಾಜೀವ್ ನೆರವಿನಿಂದ “ಯೂತ್ 4 ಜಾಬ್ಸ್” ಸಂಸ್ಥೆಯಲ್ಲಿ ಮೂರು ತಿಂಗಳ ಅವಧಿಯ ತರಬೇತಿಯನ್ನು ಉಚಿತವಾಗಿ ಪಡೆಯಲು ಅನುವು ಮಾಡಿಕೊಟ್ಟಿದ್ದು ಭಂಡಾರಿವಾರ್ತೆ.
 
ಮಂಗಳೂರಿನ ಭಂಡಾರಿ ಬಂಧುವೊಬ್ಬರು ಆಕಸ್ಮಿಕವಾಗಿ ಅನಾರೋಗ್ಯಕ್ಕೆ ತುತ್ತಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಸಂಗತಿಯನ್ನು ಅರಿತು ನೆರವಿಗೆ ಧಾವಿಸಿದ ಭಂಡಾರಿವಾರ್ತೆ ಮನೋರಾಜ್ ರಾಜೀವ ,ಚಂದ್ರಶೇಖರ ಭಂಡಾರಿ ಕುಳಾಯಿ, ಸುಧಾಕರ್ ಕಲ್ಬಾವಿ, ಪ್ರಕಾಶ್ ಭಂಡಾರಿ ಕಟ್ಲ, ಕಿಶೋರ್ ಸೋರ್ನಾಡ್, ರಮೇಶ್ ಭಂಡಾರಿ ಬೊಟ್ಯಾಡಿ ಮತ್ತು ಸಹೋದರರು, ಚೇತನ್ ಬಂಡಾರಿ ಬೊಟ್ಯಾಡಿ, ಪ್ರವೀಣ್ ಭಂಡಾರಿ ಬಂಟ್ವಾಳ, ಹರಿಕಿರಣ್ ಮಂಜೇಶ್ವರ ಮತ್ತು ಕುಟುಂಬದವರು, ಅಂಜಲಿ ಭಂಡಾರಿ USA,ಧನಂಜಯ ಭಂಡಾರಿ, ಕುರಿಯಾಳ (MRPL), ಯಶೋಧಾ ರಮೇಶ್. ಎ.ಕೆ.ಭಂಡಾರಿ ಮರೋಳಿ,ರೂಪಾ ಮುರಳೀಧರ್ ಭಂಡಾರಿ ಮುಂತಾದ ಸಹೃದಯಿ ಬಂಧುಗಳ ನೆರವಿನಿಂದ ಸುಮಾರು 71000/- (ಎಪ್ಪತ್ತೊಂದು  ಸಾವಿರ) ರೂಪಾಯಿಗಳನ್ನು ಒಗ್ಗೂಡಿಸಿ ಕೊಟ್ಟಿತು.
 
ಮಂಗಳೂರಿನ ಭಂಡಾರಿ ಸಮಾಜದ ಹಿರಿಯ ಸ್ವಯಂಸೇವಕರೊಬ್ಬರು ಅನಾರೋಗ್ಯಕ್ಕೆ ತುತ್ತಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಪ್ರಪ್ರಥಮವಾಗಿ ಸ್ಪಂದಿಸಿದ ಭಂಡಾರಿವಾರ್ತೆ ಪ್ರಕಾಶ್ ಭಂಡಾರಿ ಕಟ್ಲ, ಲಕ್ಷ್ಮಣ್ ಕರಾವಳಿ ಮತ್ತು ಕುಶಾಲ್ ಕುಮಾರ್ ಅವರು ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದರು. ಅವರ ಅಸಹಾಯಕತೆಯನ್ನು ಮನಗಂಡು ಲಕ್ಷ್ಮಣ್ ಕರಾವಳಿ,ಡಾ.ಸುದೇಶ್ ಕಾಡಬೆಟ್ಟು,  ಬಿರ್ತಿ ಶಂಕರ ಭಂಡಾರಿಯವರಂತಹ ಸಹೃದಯರ ಮುಖಾಂತರ ರೂ  40000.00(ನಲುವತ್ತು ಸಾವಿರ ) ಹಣವನ್ನು ಒಟ್ಟು ಮಾಡಿಕೊಡಲು ಭಂಡಾರಿವಾರ್ತೆ ಪ್ರೇರೇಪಣೆ ನೀಡಿತು. 
 
ಕುಟುಂಬವು ಕೆಲವೇ ತಿಂಗಳುಗಳಲ್ಲಿ ಆ ಮೊತ್ತವನ್ನು ಹಿಂದಿರುಗಿಸಲು ಮುಂದಾಗಿರುವುದು  ಸ್ವಯಂ ಸೇವಕರ ಸ್ವಾಭಿಮಾನಕ್ಕೆ ಒಂದು ಉದಾಹರಣೆ. ಅಪತ್ಕಾಲದಲ್ಲಿ ನೆರವಿಗೆ ನಿಂತ ಸಹೃದಯೀ ಬಂಧುಗಳಿಗೆ ಮತ್ತು ಭಂಡಾರಿವಾರ್ತೆಗೆ ಕುಟುಂಬವು ತಮ್ಮ ಕೃತಜ್ಞತೆಯನ್ನು  ಅರ್ಪಿಸಿತು.
 
ಈ ಘಟನೆಯಿಂದ ನಾವು ಸಂಘಟನೆಗಳಲ್ಲಿ ಸ್ವಯಂಸೇವಕ ನಿಧಿ ಯೋಜನೆಯ ಅವಶ್ಯಕತೆಯನ್ನು ಮನಗಾಣಬಹುದು. 
 

ಈ ಎಲ್ಲ ಘಟನೆಗಳು ನೊಂದವರ ಬೆನ್ನಿಗೆ ಭಂಡಾರಿವಾರ್ತೆ ಸದಾ ನಿಲ್ಲುತ್ತದೆ ಎಂಬುದಕ್ಕೆ ನಿದರ್ಶನವನ್ನು ಒದಗಿಸಿಕೊಡುತ್ತವೆ.

ಕೊರೋನಾ ಮಹಾಮಾರಿ ಅಪ್ಪಳಿಸಿ ಸಮಾಜದ ಬಂಧುಗಳು ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದಾಗ ಬಂಧುಗಳ ವಾಸ್ತವ ಪರಿಸ್ಥಿತಿಯನ್ನು ಪ್ರಪ್ರಥಮ ಗಮನಿಸಿ ಅವರ ನೆರವಿಗೆ ಧಾವಿಸಿದ್ದು ಭಂಡಾರಿವಾರ್ತೆ. ಮೊದಮೊದಲು ಸಾಂತ್ವನದ ನುಡಿಗಳನ್ನಾಡುತ್ತಾ, ಕೊರೋನ ಸಮಯದಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ವಿವರಿಸುತ್ತಾ, ಪಾಲಿಸಬೇಕಾದ ನಿಯಮಗಳನ್ನು ತಿಳಿಸುತ್ತಾ ಬಂಧುಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಭರವಸೆ ತುಂಬುವ ಕೆಲಸವನ್ನು ಮಾಡಿದ್ದು ಭಂಡಾರಿವಾರ್ತೆ.
 
 ಮೇಲ್ನೋಟಕ್ಕೆ ಸ್ಥಿತಿವಂತರಂತೆ ಕಂಡರೂ ಅಂತರಂಗದಲ್ಲಿ ವಿಷಯ ಬೇರೆಯೇ ಇರುತ್ತದೆ ಎಂಬುದು ಬಹಿರಂಗಗೊಳಿಸಿದ್ದು ಕೊರೋನ ಎಂಬುದು ನಿರ್ವಿವಾದ. ಅದನ್ನು ಮನಗಂಡು ಅಂತಹ ಅನೇಕರನ್ನು ಪತ್ತೆಮಾಡಿ ಹಲವಾರು ಸ್ಥಳೀಯ ಸಂಘ ಸಂಸ್ಥೆಗಳ ನೆರವಿನಿಂದ ಅವರ ಮನೆ ಬಾಗಿಲಿಗೆ ಭಂಡಾರಿವಾರ್ತೆಯ ಅಭಿಮಾನಿಗಳ ಮುಖಾಂತರ ನೇರವಾಗಿ ದಿನಸಿ ಸಾಮಗ್ರಿಯ ಕಿಟ್ ಗಳನ್ನು  ತಲುಪಿಸುವ ವ್ಯವಸ್ಥೆ ಮಾಡಿದ್ದು ಭಂಡಾರಿವಾರ್ತೆ. 
 
ಇಂತಹ ಸಂದರ್ಭದಲ್ಲಿಯೇ ಬಾಳೆಹೊನ್ನೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಸುನಿಲ್ ರಾಜ್ ಭಂಡಾರಿಯವರು ದೂರವಾಣಿ ಕರೆ ಮಾಡಿ ಶೃಂಗೇರಿಯ ನೆಮ್ಮಾರಿನ ಭಂಡಾರಿ ಬಂಧುವೊಬ್ಬರ ನೆರವಿಗೆ ಧಾವಿಸುವಂತೆ ಮನವಿ ಮಾಡಿದರು. ಇವರು ಮೊದಲೇ ಅಂಗವಿಕಲರು, ಆದರೂ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದರು. ಅವರು  ಬೈಕ್ ಅಪಘಾತದಲ್ಲಿ ಗಾಯಗೊಂಡು ನಡೆಯಲು ಆಗದ ಸ್ಥಿತಿ ತಲುಪಿದ್ದರು. ಸುನಿಲ್ ರಾಜ್ ರಿಂದ ಅವರ ಮನವಿಯನ್ನು ಸ್ವೀಕರಿಸಿದ ಪ್ರಕಾಶ್ ಕಟ್ಲಾರವರು ಪೂನಾದ ಬಾಲಕೃಷ್ಣ ಭಂಡಾರಿ ಪುತ್ತೂರು ಅವರ ನೆರವಿನಿಂದ 10000/- (ಹತ್ತು ಸಾವಿರ) ರೂಪಾಯಿಗಳ ತತ್ಕ್ಷಣದ ನೆರವು ಒದಗಿಸಿಕೊಟ್ಟಿದ್ದು ಇನ್ನೂ ಹಸಿರಾಗಿದೆ.
 
ಸಮಾಜಸೇವೆಯ ದಾರಿಯಲ್ಲಿ ಮೊದಲು ನಮಗೆ ದೊರೆಯುವುದು ಟೀಕೆ,ಮೂದಲಿಕೆ.ಇವುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಮುನ್ನೆಡೆದಾಗ ಮಾತ್ರ ನಾವು ಯಶ ಗಳಿಸಲು ಸಾಧ್ಯ. ಅದೇ ರೀತಿ ಭಂಡಾರಿವಾರ್ತೆ ಆರಂಭದಿಂದಲೂ ಸ್ವಜಾತಿಯವರಿಂದಲೇ ಹಲವಾರು ಎಡರುತೊಡರುಗಳನ್ನು,ಟೀಕೆ ಟಿಪ್ಪಣಿಗಳನ್ನು ಎದುರಿಸಬೇಕಾಯಿತು. ಆದರೆ ನಮಗೆ ಮುಂದೆ ಪ್ರಕಾಶ್ ಭಂಡಾರಿ ಕಟ್ಲರವರಂತಹ ನಾಯಕ  ಇರುವುದರಿಂದಾಗಿ ಗುರಿ ಮುಟ್ಟುವುದು ಸುಲಭವಾಯಿತು. ಸಮಾಜದ್ರೋಹಿಗಳೆಂದು ಕರೆಸಿಕೊಂಡವರು ಮಾಡುತ್ತಿರುವ ಸಮಾಜಮುಖಿ ಸೇವೆಗಳನ್ನು ನೋಡಿ ಸಮಾಜದ ಬಂಧುಗಳು ಮಾತ್ರವಲ್ಲದೆ ನಮ್ಮನ್ನು ವಿರೋಧಿಸಿದವರೂ ಕೂಡ ನಿಬ್ಬೆರಗಾಗಿದ್ದಾರೆ.ಇದೆಲ್ಲಾ ಸಾಧ್ಯವಾಗಿದ್ದು ಬಂಧುಗಳು ನಮ್ಮ ಮೇಲೆ ಇಟ್ಟಿರುವ ನಂಬಿಕೆಯಿಂದ, ಸಹೃದಯಿ ದಾನಿಗಳ ವಿಶ್ವಾಸದಿಂದ. ಭಂಡಾರಿ ಸಮಾಜದ ಯುವಕರು ಸೇವಾ ಮನೋಭಾವದಿಂದ ತಮ್ಮನ್ನು ತಾವು ಸಮರ್ಪಿಸಿಕೊಂಡಾಗ ಅದ್ಭುತವಾದುದನ್ನು ಸಾಧಿಸಲು ಸಾಧ್ಯ. ಭಂಡಾರಿ ಸಮಾಜದ ಮಕ್ಕಳು ವಿದ್ಯಾಭ್ಯಾಸದ ಅವಶ್ಯಕತೆಗಳಿಗಾಗಿ ವಿನಂತಿಸಿದಾಗ,ನಮ್ಮವರು ಅನಾರೋಗ್ಯಕ್ಕೆ ತುತ್ತಾಗಿ ಹೈರಾಣಾದಾಗ, ಬಂಧುಗಳು ಸಂಕಷ್ಟದಲ್ಲಿದ್ದಾಗ ತಕ್ಷಣಕ್ಕೆ ಸ್ಪಂದಿಸುವ, ಮಿಡಿಯುವ ಇನ್ನಷ್ಟು ಮನಸ್ಸುಗಳು ಬೇಕು.ಬಂಧುಗಳ ಸೇವೆಯಲ್ಲಿ ಭಗವಂತನನ್ನು ಕಾಣುವ ಇನ್ನಷ್ಟು ಸಹೃದಯರು ಬೇಕು.ಹಾಗಾದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ನಾವು ತಲುಪಲು ಸಾಧ್ಯ.
 


 ಕ್ಷೌರಿಕ ವೃತ್ತಿಯನ್ನು ಅವಲಂಬಿಸಿರುವ ಭಂಡಾರಿ ಕುಟುಂಬಗಳಿಗೆ ಸರ್ಕಾರ ಐದು ಸಾವಿರ ರೂಪಾಯಿಗಳ ಸಹಾಯಧನ ಘೋಷಣೆ ಮಾಡಿದಾಗ ಆ ಯೋಜನೆಯಡಿಯಲ್ಲಿ ಸೌಲಭ್ಯ ವಂಚಿತರಾಗಿ ಸಹಾಯಧನ ದೊರೆಯದೇ ಇರುವ ಭಂಡಾರಿ ಬಂಧುಗಳಿಗೆ ಭಂಡಾರಿವಾರ್ತೆ "ಕೋವಿಡ್ 19 ಪರಿಹಾರ ನಿಧಿ" ಸ್ಥಾಪಿಸಿ ಸಹೃದಯಿ ಬಂಧುಗಳಿಂದ ನೆರವನ್ನು ಪಡೆದು ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಯೋಜನೆಯನ್ನು ಹಮ್ಮಿಕೊಂಡಿತ್ತು .ಸರ್ಕಾರದಿಂದ ಕೊಡಮಾಡುವ ಕೋವಿಡ್ 19 ಪರಿಹಾರ ನಿಧಿ, ಕಾರ್ಮಿಕರ ಸಹಾಯಧನ ಅಥವಾ ಕೃಷಿ ಸಮ್ಮಾನ್ ಈ ಯಾವುದೇ ಯೋಜನೆಗಳಿಂದ ಸಹಾಯಧನ ಪಡೆಯದೇ ಇರುವ ಅರ್ಹ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಿಕೊಂಡು , 90 ಅರ್ಜಿಗಳು ಬಂದಿದ್ದು ಅವುಗಳ ಪರಿಶೀಲನೆ ಮಾಡಿದ ನಂತರ  57 ಅರ್ಜಿ ಗಳು ಅಂತಿಮವಾಗಿ ಆಯ್ಕೆ ಮಾಡಿದೆವು.  ದಾನಿಗಳಿಂದ ಈಗಾಗಲೇ 80503.00 ರೂಪಾಯಿಗಳ ಸಹಾಯಧನ ಹರಿದು ಬಂದಿದ್ದು, ಅವುಗಳನ್ನು ಅರ್ಹತೆಗನುಗುಣವಾಗಿ ವಿಂಗಡಿಸಿ,ಫಲಾನುಭವಿಗಳ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸುವ ಮೂಲಕ  "ಕೋವಿಡ್ 19 ಪರಿಹಾರ ನಿಧಿ" ಯೋಜನೆ ಅಂತಿಮರೂಪ ಪಡೆದುಕೊಂಡಿತು. 
 

ಕೋವಿಡ್ ಸಂಕಷ್ಟದಿಂದ ತೊಂದರೆಗೀಡಾದ ಸಮಾಜದ ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಿಸಿದ ನಂತರ ಭಂಡಾರಿ ವಾರ್ತೆಯು ಗಮನಹರಿಸಿದ್ದು ದೀಪಾವಳಿಯ ಪ್ರಯುಕ್ತ ಏನಾದರೂ ಕಾರ್ಯಕ್ರಮ ಮಾಡಬೇಕೆಂಬುದರ ಬಗ್ಗೆ, ಈ ಬಗ್ಗೆ ತಂಡವು ಹಲವು ಸುತ್ತಿನ ಮಾತುಕತೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿ ಕಥಾ ಸ್ಪರ್ಧೆ ಯನ್ನು ಹಮ್ಮಿಕೊಳ್ಳುವುದರ ಬಗ್ಗೆ ತೀರ್ಮಾನಿಸಿತು.

ಕೂಡಲೇ ಆ ಬಗ್ಗೆ ಕಾರ್ಯಪ್ರವೃತ್ತರಾಗಿ ಸ್ಪರ್ಧೆಯ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ಕಳುಹಿಸಿತು.

ಆಶ್ಚರ್ಯದ ಸಂಗತಿಯೇನೆದರೆ ಅತೀ ಕಡಿಮೆ ಅವಧಿಯಲ್ಲಿ100 ಕ್ಕೂ ಅಧಿಕ ಕಥೆಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿತು.

ಸಮಾಜದ ಲೇಖಕರೇ ಬರೆದಂತಹ 35 ಕಥೆಗಳನ್ನು ಆಯ್ದುಕೊಂಡಿತು. ಸಾಹಿತ್ಯದಲ್ಲಿ ಹೆಚ್ಚು ನೈಪುಣ್ಯತೆ ಹೊಂದಿರುವ ತಂಡದ ಇಬ್ಬರು ಪ್ರಾಥಮಿಕವಾಗಿ ತೀರ್ಪುಗಾರರಾಗಿ ನೇಮಿಸಿ ಅತ್ಯುತ್ತಮ 10 ಕಥೆಗಳನ್ನು ಕೊನೆಯ ಸುತ್ತಿಗೆ ಆಯ್ಕೆ ಮಾಡಿತು. ಅಂತಿಮ ಸುತ್ತಿನ ತೀರ್ಪುಗಾರರಾಗಿ ಕಥೆ ಕಾದಂಬರಿಗಳಲ್ಲಿ ಪರಿಣತಿ ಹೊಂದಿರುವ ಹೊರಗಡೆಯ ಅನ್ಯ ಸಮಾಜದ ಇಬ್ಬರನ್ನು ನೇಮಿಸಲಾಗಿತ್ತು .
4 ಅತೀ ಉತ್ತಮ ಕಥೆಗಳನ್ನು ಆಯ್ಕೆ ಮಾಡಲಾಗಿತ್ತು. ಎರಡನೇ ಸ್ಥಾನದಲ್ಲಿ ಇಬ್ಬರ ಕಥೆಯನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿಒಂದು ಕಥೆ ಭಂಡಾರಿ ವಾರ್ತೆಯ ತಂಡದ ಭಾಸ್ಕರ ಭಂಡಾರಿಯವರು ಬರೆದ " ಮೂಕ ವೇದನೆ ".


ನಮ್ಮ ತಂಡದಲ್ಲಿ ಇರುವವರಿಗೆ ಬಹುಮಾನ ಘೋಷಿಸುವುದು ಸರಿಯಲ್ಲವೆಂದು ನಿರ್ಧರಿಸಿ ತಂಡವು ಸರ್ವಾನುಮತದಿಂದ ಭಾಸ್ಕರ ಭಂಡಾರಿಯವರ ಕಥೆಯನ್ನು ಕೈ ಬಿಟ್ಟಿತು.
ನಿರ್ಣಾಯಕರ ಆಯ್ಕೆಯಂತೆ "ತನ್ನೂರಿಗೆ ಸರಿಯಾದ ರಸ್ತೆ ಸಂಪರ್ಕ ಇರದುದರಿಂದ ತನ್ನ ತಾಯಿ ಸಾಯಬೇಕಾಗಿ ಬಂತು,ನನಗಾದ ಅನ್ಯಾಯ ಇನ್ನಾರಿಗೂ ಆಗದಿರಲೆಂದು ಸರ್ಕಾರಕ್ಕೆ ಸಡ್ಡು ಹೊಡೆದು ರಸ್ತೆ ನಿರ್ಮಿಸಿಕೊಂಡು, ತನ್ನೂರಿನವರಿಗೆ ಪ್ರತಿಭಟಿಸುವ,ತಮ್ಮ ಹಕ್ಕನ್ನು ಧಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ಸ್ಪೂರ್ತಿ ತುಂಬುವ ಪುಟ್ಟ ಬಾಲಕಿಯೊಬ್ಬಳ ಕಥಾಹಂದರ" ಹೊಂದಿರುವ ರಂಜಿತ್ ಭಂಡಾರಿ ಸಸಿಹಿತ್ಲು ರವರ "ಸ್ಫೂರ್ತಿ" ಕಥೆ ಪ್ರಥಮ ಸ್ಥಾನವನ್ನು ಗಳಿಸಿದರೆ,


"ತನ್ನ ಮನದಿನಿಯ ನನ್ನ ಪ್ರತಿಭೆಗೆ ನೀರೆಯಬಹುದೆಂದು ಭಾವಿಸಿ ಮದುವೆಯಾದ ಹೆಣ್ಣೊಬ್ಬಳು ಗಂಡನ ಅಸಡ್ಡೆ,ಮೂದಲಿಕೆ ಮಾತುಗಳಿಗೆ ಅರೆಜೀವವಾಗಿ,ತನ್ನ ಮಾವನೆಂಬ ಮಾನಗೇಡಿಯಿಂದ ಲೈಂಗಿಕ ಶೋಷಣೆಗೊಳಗಾಗಿ ಭ್ರಮನಿರಸನಗೊಂಡು ಬದುಕಿಗೆ ಅಂತಿಮ ವಿದಾಯ ಹೇಳುವ ಹೆಣ್ಣೊಬ್ಬಳ" ಕಥಾಹಂದರದ ಹೊಂದಿರುವ ಬಜಪೆಯ ಶ್ರೀಮತಿ ವನಿತಾ ಅರುಣ್ ಭಂಡಾರಿಯವರ "ಜೊತೆಗಾರ" ಕಥೆ ದ್ವಿತೀಯ ಸ್ಥಾನವನ್ನು,

"ಬೆಟ್ಟದೂರಿನ ಜನರ ದೀಪವನ್ನು ತಂದು ದೇವರದೀಪವೆಂದು ತನ್ನೂರಿನ ಜನರನ್ನು ನಂಬಿಸಿ ಅವರ ಮೌಡ್ಯತೆಯ ಅಂಧಕಾರವನ್ನು ತೊಲಗಿಸುವ,ತನ್ಮೂಲಕ ತಾನೂ ಊರವರ ದೃಷ್ಟಿಯಲ್ಲಿ ಶ್ರೇಷ್ಠನೆನಿಸಿಕೊಳ್ಳುವ ಕ್ಷೌರಿಕರ ದ್ಯಾವಪ್ಪನ" ಕಥಾವಸ್ತು ಹೊಂದಿರುವ ವಿಜಯ ಭಂಡಾರಿ ನಿಟ್ಟೂರು ರವರ "ದೇವರ ದೀಪ" ಕಥೆ ತೃತೀಯ ಸ್ಥಾನವನ್ನು ಗಳಿಸಿಕೊಂಡಿತು.





ವಿಜೇತರಾದ ನಮ್ಮ ಸಮಾಜದ ಹೆಮ್ಮೆಯ ಮೂರು ಲೇಖಕರಿಗೆ ಅಭಿನಂದನೆ ಸಲ್ಲಿಸುತ್ತದೆ.
ಭಂಡಾರಿ ಸಮಾಜದ ಯುವ ಪ್ರತಿಭೆಗಳಿಗೆ ವೇದಿಕೆಯಾಗಬೇಕೆಂಬ ಸದುದ್ಧೇಶದಿಂದ ಶ್ರೀ ಪ್ರಕಾಶ್ ಭಂಡಾರಿ ಕಟ್ಲರ ಸಾರಥ್ಯದಲ್ಲಿ ಹೊರಟ "ಭಂಡಾರಿವಾರ್ತೆ" ಯ ತಂಡಕ್ಕೆ ಈ ಸ್ಪರ್ಧೆಯ ಅದ್ಭುತವಾದ ಯಶಸ್ಸು ಆನೆಬಲವನ್ನು ತಂದುಕೊಟ್ಟಿರುವುದು ಸುಳ್ಳಲ್ಲ.





ಅದಲ್ಲದೆ ಕಳೆದ ಕೆಲವು ಸಮಯದಿಂದ ವಿವಿಧ ದಿನಾನಚರಣೆಗಳಿಗೆ ವಿಶೇಷಾಂಕ ಎಂಬ ಹೆಸರಿನಲ್ಲಿ ಲೇಖನವನ್ನು ಆಹ್ವಾನಿಸಿದಾಗ ನಮ್ಮ ಎಲ್ಲ ಬರಹಗಾರರು ಉತ್ತಮವಾಗಿ ಸ್ಪಂದಿಸಿ ಲೇಖನ ಬರೆದು ಕಳುಹಿಸುತ್ತಿರುವುದು ಭಂಡಾರಿ ವಾರ್ತೆಯು ಯಾವ ರೀತಿ ಸಮಾಜದ ಬಂಧುಗಳ ಮನೆ ಮನದಲ್ಲಿ ನೆಲೆ ನಿಂತಿದೆ ಎಂಬುದರ ಸ್ಪಷ್ಟ ಸಂದೇಶವಾಗಿದೆ

 
ಭಂಡಾರಿವಾರ್ತೆ ನಾಲ್ಕು ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಮತ್ತೊಮ್ಮೆ ನಮ್ಮೆಲ್ಲಾ ಓದುಗರಿಗೆ,ಕಾರ್ಯಕ್ರಮಗಳ ಪ್ರಾಯೋಜಕರಿಗೆ,   ಅಭಿಮಾನಿಗಳಿಗೆ, ಜಾಹೀರಾತು ನೀಡಿ ಪ್ರೋತ್ಸಾಹಿಸಿದ ಆತ್ಮೀಯರಿಗೆ, ದಾನಿಗಳ ರೂಪದಲ್ಲಿ ದೊರೆತ ಸಹೃದಯಿ ಬಂಧುಗಳಿಗೆ ಭಂಡಾರಿ ವಾರ್ತೆಯ ತಾಂತ್ರಿಕ ವರ್ಗ, ಸಂಪಾದಕ ವರ್ಗ, ವರದಿಗಾರರು ಮತ್ತು ಸಂಪೂರ್ಣ ಭಂಡಾರಿವಾರ್ತೆ ತಂಡದಿಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತಾ ನಿಮ್ಮೆಲ್ಲರ ಪ್ರೋತ್ಸಾಹ ನಿರಂತರವಾಗಿ ಭಂಡಾರಿವಾರ್ತೆಯ ಮೇಲಿರಲಿ ಎಂದು ಆಶಿಸುತ್ತೇವೆ.
 
ಧನ್ಯವಾದಗಳೊಂದಿಗೆ....
 
"ಭಂಡಾರಿವಾರ್ತೆ."



No comments:

Post a Comment