BhandaryVarthe Team

BhandaryVarthe Team
Bhandary Varthe Team

Sunday 1 August 2021

ಸ್ನೇಹ ಅತೀ ಮಧುರ ಸ್ನೇಹ ಅದು ಅಮರ - ಪೂರ್ಣಿಮಾ ಅನಿಲ್ ಭಂಡಾರಿ, ಮಣಿಪಾಲ.

ಪಾಶ್ಚಾತ್ಯ ದೇಶಗಳಿಂದ ನಮ್ಮ ದೇಶಕ್ಕೆ ಕೆಲವು ರಾಷ್ಟ್ರೀಯ ದಿನಾಚರಣೆಗಳು ಬಳುವಳಿಯಾಗಿ ಸಿಕ್ಕಿವೆ. ಅಂತಹ ದಿನಾಚರಣೆಗಳಲ್ಲಿ ಸ್ನೇಹಿತರ ದಿನಾಚರಣೆಯೂ ಒಂದು. ಸ್ನೇಹಿತರಿಗೆ ಮತ್ತು ಸ್ನೇಹಕ್ಕೆ ಗೌರವ ನೀಡಲು ಈ ದಿನಾಚರಣೆಯನ್ನು ದೇಶ ವಿದೇಶಗಳೆಲ್ಲೆಡೆ ಆಚರಿಸಲಾಗುತ್ತಿದೆ. ಹಾಲ್ ಮಾರ್ಕ್ಸ್ ಕಾರ್ಡ್ ತಯಾರಕರಾಗಿದ್ದ ಜೋಯ್ಸ್ ಹಾಲ್ ಎಂಬುವವರು ಈ ದಿನವನ್ನು ಆರಂಭಿಸಿದರು.ದಕ್ಷಿಣ ಎಷ್ಯಾದ ರಾಷ್ಟ್ರಗಳಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ.

ಕವಿ ನಾ ಕೃ ಸತ್ಯನಾರಾಯಣ ಅವರು ಬರೆದ ಸುಂದರ ಭಾವಗೀತೆಯ ಸ್ನೇಹ ಅತಿ ಮಧುರ,ಸ್ನೇಹ ಅದು ಅಮರ ಎಂಬ ಸಾಲುಗಳು ಸ್ನೇಹದ ಬಗ್ಗೆ ಎಷ್ಟೊಂದು ಅರ್ಥಗಳನ್ನು ನೀಡುತ್ತದೆ.ಸ್ನೇಹವೆಂಬುದು ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರಲ್ಲಿ, ಪ್ರಾಣಿ- ಪಕ್ಷಿಗಳಲ್ಲಿ, ಹೂವು-ಮುಳ್ಳುಗಳಲ್ಲಿ,ಗಿಡ-ಬಳ್ಳಿಗಳಲ್ಲಿ ಹೀಗೆ ಅನೇಕ ಸಜೀವಿ ನಿರ್ಜೀವಿಗಳ ನಡುವೆ ಬೆಸೆದಿದೆ.

ಸ್ನೇಹವು ಜೇನಹನಿಗಿಂತ ಅತ್ಯಂತ ಸಿಹಿಯಾದ ಸಂಬಂಧ. ಅದರ ನೆನಪುಗಳು ಮನದಲ್ಲಿ ಯಾವತ್ತಿಗೂ ಅಳಿಸಲಾಗದ ಅಮರ ನೆನಪುಗಳು .
ಸ್ನೇಹಿತರು ಜೀವನದ ಕಲ್ಪತರು ಎಂದರೆ ತಪ್ಪಾಗಲಾರದು. ಕಲ್ಪತರು ಎಂದರೆ ಬಸಿದ್ದೆಲ್ಲವನ್ನೂ ಕೊಡುವುದು.ಮನುಷ್ಯನ ಜೀವನವು ಬರೀ ಊಟ,ನಿದ್ರೆ,ಮದುವೆ, ಮನೆ,ಮಕ್ಕಳು,ಕೆಲಸ,ಆಸ್ತಿ,ಅಂತಸ್ತಿನ ಮೇಲೆ ನಿಂತಿಲ್ಲ.ಇವುಗಳ ಜೊತೆಗೆ ಪ್ರೀತಿ,ವಾತ್ಸಲ್ಯ, ಕರುಣೆ,ಮನಃಶಾಂತಿ,ಜೀವನದ ಸವಾಲುಗಳನೆದುರಿಸಲು ಸರಿಯಾದ ಸಲಹೆ-ಮಾರ್ಗದರ್ಶನ,ಕಷ್ಟದ ದಿನಗಳಲ್ಲಿ ಕುಗ್ಗಿದ ಮನಕ್ಕೆ ಮನೋಧೈರ್ಯ-ಶಕ್ತಿ- ಸ್ಫೂರ್ತಿ, ಸಹಾಯ ಹಸ್ತ, ತ್ಯಾಗ, ಜೀವನದ ದಾರಿಯಲಿ ಎಡವಿದಾಗ ಕಿವಿಮಾತು-ಬುದ್ದಿಮಾತು ಇವೆಲ್ಲದವುಗಳನ್ನು ಪಡೆಯುವುದರ ಮೇಲೆ ನಿಂತಿದೆ.

ಇವೆಲ್ಲವುಗಳು ಒಟ್ಟಾಗಿ ಸಿಗುವುದು ಒಬ್ಬ ಒಳ್ಳೆಯ ಆತ್ಮೀಯ ಸ್ನೇಹಿತನಿಂದ ಮಾತ್ರ.ಮನೆಯಲ್ಲಿ ಯಾರಿಗೂ ಗೊತ್ತಿರದ ವಿಷಯ ಹಾಗೂ ಹೇಳಿಕೊಳ್ಳಲಾಗದಂತಹ ವಿಷಯಗಳನ್ನು ಸ್ನೇಹಿತರಲಿ ಮಾತ್ರ ಹೇಳಲು ಸಾಧ್ಯ.


ಸ್ನೇಹಿತರ ದಿನ ವನ್ನು ಆಚರಿಸಲು ಸ್ನೇಹಿತರೆಲ್ಲರು ಒಟ್ಟಿಗೆ ಸೇರಿ ಪಾರ್ಟಿ,ಪಾರ್ಕ್,ಸಿನಿಮಾ ಅಂತ ಓಡಾಡಿ ಮೋಜು ಮಸ್ತಿ ಮಾಡುತ್ತಾ,ಬಾಲ್ಯದ ಆಟ-ಪಾಠ ತುಂಟಾಟಗಳ ಮೆಲುಕು ಹಾಕುತ್ತ, ಕೈಗೆ ಫ್ರೆಂಡ್ಶಿಪ್ ಬ್ಯಾಂಡ್ ಒಬ್ಬರಿಗೊಬ್ಬರು ಕಟ್ಟುತ್ತ,ಹೂಗುಚ್ಛ ಉಡುಗೊರೆಗಳ ನೀಡುತ್ತಾ ಆಚರಿಸಿದರೆ..ಇನ್ನು ಕೆಲವರು ಫೇಸ್ಬುಕ್ ವಾಟ್ಸಪ್ಪ್ ಗಳಲ್ಲಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಆಚರಿಸುತ್ತಾರೆ.


ಈಗಿನ ಕಾಲದ ಮಕ್ಕಳಿಗೆ ಟಿವಿ,ಕೈಯಲಿ ಮೊಬೈಲ್ ಇರುವ ಕಾರಣ ತಮ್ಮ ಹೆಚ್ಚಿನ ಸಮಯವನ್ನು ಅದರಲ್ಲೇ ಕಳೆಯುವುದರಿಂದ ಸ್ನೇಹ ಮತ್ತು ಸ್ನೇಹಿತರ ಬೆಲೆ ತಿಳಿದಿರುವುದು ಬಹಳ ಕಡಿಮೆ.ಆದುದರಿಂದ ಇಂದಿನ ಯುವಜನರು ಈ ಸ್ನೇಹಿತರ ದಿನ ವನ್ನು ಮಧುರವಾಗಿಸಲು ಸ್ನೇಹಿತರೆಲ್ಲರು ಸೇರಿ ಕೆಲವು ಸಮಾಜ ಕಲ್ಯಾಣ ಕಾರ್ಯಕ್ರಮಗಳು,ಮಕ್ಕಳನ್ನು ಕೂರಿಸಿಕೊಂಡು ಸ್ನೇಹದ ಮಹತ್ವದ ಕುರಿತಾದ ಸಭೆ-ಚಿಂತನೆ-ಅರಿವು-ಒಲವು ಮೂಡಿಸುವ ಪ್ರಯತ್ನ ಪಟ್ಟರೆ ಈ ಸ್ನೇಹಿತರ ದಿನ ದ ಆಚರಣೆಗೊಂದು ನಿಜವಾದ ಅರ್ಥ ಸಿಕ್ಕಿದಂತಾಗುವುದು.

 

 -ಪೂರ್ಣಿಮಾ ಅನಿಲ್ ಭಂಡಾರಿ, ಮಣಿಪಾಲ.

No comments:

Post a Comment