BhandaryVarthe Team

BhandaryVarthe Team
Bhandary Varthe Team

Tuesday 10 August 2021

ತಡೆಯಬೇಕಿದೆ ಮಾನಸಿಕ ಶೋಷಣೆ. (ಪದಬಳಕೆಯ ವಿರುದ್ಧ)-ವಿಜಯ್ ನಿಟ್ಟೂರು.

ಹಜಾಮ ಈ ಪದ ಅನಾಯಾಸವಾಗಿ ಹಲವರ ಬಾಯಲ್ಲಿ ಹರಿದಾಡುವ ಪದ. ಈ ಪದ ಒಂದು ಜಾತಿಸೂಚಕ ಅಥವಾ ವೃತ್ತಿ ಸೂಚಕ ಪದವಾಗಿದ್ದು ಕ್ಷೌರ ಕರ್ಮಮಾರ್ಗದ ಜಾತಿಸೂಚಕವಾಗಿದೆ. ಅಷ್ಟೊಂದು ಅನಾಯಾಸವಾಗಿ ಹೊರಟು ಬರುವ ಈ ಪದ ಕ್ಷೌರಿಕರ ಅಭಿನಂದಿಸಲು ಅಲ್ಲ ಅಥವಾ ಯಾವುದೋ ಹೊಗಳಿಕೆಗೂ ಅಲ್ಲ ಬದಲಿಗೆ ಇನ್ನೊಬ್ಬರನ್ನು ಮೂದಲಿಸುವ, ಹೀಯಾಳಿಸುವ, ನಿಂದಿಸುವ, ವ್ಯೆಂಗ್ಯವಾಡುವ ಶಬ್ಧವಾಗಿ ಬಳಕೆಯಲ್ಲಿದೆ. ಸಾಮಾಜಿಕವಾಗಿ ಈ ಪದವನ್ನು ಇಂತಹ ವಿಷಯಗಳಿಗೆ ಎಳೆದುತರುವಾಗ ಸಮಾಜದ ಒಂದು ವರ್ಗಕ್ಕೆ ಮುಜುಗರವನ್ನೂ, ಅಗೌರವವನ್ನೂ ಉಂಟುಮಾಡುತ್ತದೆ ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಬಳಸುವವರಿಗೆ ಧಿಕ್ಕಾರವಂತೂ ಹೇಳಲೇಬೇಕು.

 


ಇಂತಹ ನಿಕೃಷ್ಟ ನೆಡೆಗಳು ಸಮಾಜದ ಭಾವನೆಗೆ ಧಕ್ಕೆ ತರುವಂತಹ ಮತ್ತು ಅವರ ಮಾನಸಿಕ ಸ್ಥಿತಿ ಪಾತಾಳಕ್ಕೆ ಕುಸಿಯುವಂತಹ ಪದವಾಗಿ ಮಾರ್ಪಾಡಾಗಿದೆ. ಇದರಿಂದಾಗಿ ಆ ವರ್ಗಕ್ಕೆ ಸೇರಿದ ಜನರು ತಮ್ಮ ಸಮುದಾಯದ ಹೆಸರನ್ನು ಸಾರ್ವಜನಿಕವಾಗಿ ಇಂದಿಗೂ ಮುಚ್ಚಿಡುವ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಸಾಮಾಜಿಕವಾಗಿ ನಿರಂತರ ಶೋಷಣೆಗೆ ಒಳಗಾದ ಒಂದು ಸಣ್ಣ ಸಮುದಾಯ ಇಂದಿಗೂ ತನ್ನ ಸಮುದಾಯದ ಹೆಸರನ್ನ ಸಾರ್ವಜನಿಕವಾಗಿ ತೆರೆದಿಡಲು ಹಿಂಜರಿಕೆ ಅಥವಾ ಮಾನಸಿಕ ವೇದನೆಯನ್ನು ಪಡುತ್ತದೆ ಅಂತಾದರೆ ಆ ಸಮುದಾಯದ ಮೇಲಾದ ಮಾನಸಿಕ ಆಘಾತ ಅದು ಎಷ್ಟು ಆಳವಾಗಿರಬಹುದು !

ಇಂದು ನಿಷೇಧಿತ ಪದವಾಗಿದ್ದರೂ ಅದರ ಬಳಕೆ ಮಾತ್ರ ನಿಂತಿರುವಂತೆ ಕಾಣುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಆಗಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಯ ಶಬ್ದವಾಗಿ ಅಲ್ಲಲ್ಲಿ ಕಾಣಸಿಗುತ್ತದೆ. ಇದರ ಹೊರತಾಗಿಯೂ ರಾಜಕಾರಣಿಗಳ ನಾಲಿಗೆಯಲ್ಲಿ ಆಗಾಗ ಹರಿದಾಡಿ ಮತ್ತಷ್ಟು ನೋವನ್ನು ತಂದುಬಿಡುತ್ತದೆ. ಇಂತಹ ಅವಮಾನಗಳು ಎಲ್ಲೆಂದರಲ್ಲಿ ಆಗಾಗ್ಗೆ ನಮ್ಮ ಕಣ್ಣಮುಂದೆಯೇ ನೆಡೆಯುತ್ತಿದ್ದರೂ ಅದನ್ನು ಅಲ್ಲಿಯೇಪ್ರತಿಭಟಿಸುವ ಸ್ಥೈರ್ಯ ಕ್ಷೌರಿಕನಲ್ಲಿ ಇರುವುದಿಲ್ಲ. ಯಾವುದೋ ಸಾರ್ವಜನಿಕ ಸ್ಥಳದಲ್ಲಿ ಯಾರದ್ದೋ ಜಗಳದಲ್ಲಿ ಇವನಿಗೆ ಆ ಪದ ಕಿವಿಗೆ ಬಿದ್ದರೆ ಹೋಗಿ ಅವರೊಂದಿಗೆ ಜಗಳ ಬೀಳಲು ಸಾಧ್ಯವೇ ! ಕೊಚ್ಚೆಯನ್ನೇ ಎತ್ತಿ ಮೈಮೇಲೆ ಹೊಯ್ದುಕೊಂಡಂತೆ ಅಲ್ಲವೇ ? ಹಾಗೆಂದುಕೊಂಡು ಸುಮ್ಮನೆ ನಿಂತರೆ ತನಗೆ ತಮ್ಮವರಿಗೆ ಆದಂತಹ ಅವಮಾನದ ನೋವು ಕಡಿಮೆಯಾಗುವುದೆ ? ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ಸಮಾಜ ಸಿಲುಕಿಕೊಂಡು ನರಳುತ್ತಿದೆ.

ಬಹುಶಃ ಸಮಾಜದಲ್ಲಿ ಅತಿ ಕಡಿಮೆ ಸಂಖ್ಯೆಯ ವರ್ಗ ಎನ್ನುವ ತಾತ್ಸಾರದಿಂದ ಹೇಗೂ ಅಪಮಾನಿಸಿ ತಪ್ಪಿಸಿಕೊಳ್ಳಬಹುದೆಂಬ ಭಾವ ರಾಜಕೀಯವಾಗಿ, ಸಾಮಾಜಿಕವಾಗಿ ಈ ವರ್ಗ ಅಪಮಾನಕ್ಕೆ ಒಳಗಾಗುತ್ತಿದೆಯೇ ಎನ್ನುವ ಪ್ರಶ್ನೆ ಏಳುವುದು ಕೂಡ ದಿಟ. ಸಣ್ಣ ಸಮುದಾಯವಾದರೇನು ? ಕ್ಷೌರಿಕರು ಯಾರ ಅನ್ನವನ್ನು ಕಿತ್ತಿದ್ದಾರಾ ? ಕಷ್ಟದ ದುಡಿಮೆಯನ್ನು ನಂಬಿ ಬಾಳುವ ಕ್ಷೌರಿಕರು ನಿಮ್ಮ ಮನೆಯನ್ನು ದೋಚಿದ್ದಾರಾ ? ಇಲ್ಲಾ ಸಾರ್ವಜನಿಕ ಸೇವೆಯ ಹೆಸರಲ್ಲಿ ಅಧಿಕಾರ ಪಡೆದು ಬಡಜನರ ಲೂಟಿ ಮಾಡಿದ್ದಾರಾ ? ಇದಾವುದು ಇಲ್ಲದೆ ಸಮಾಜದಲ್ಲಿ ತನ್ನಪಾಡಿಗೆ ತಾನು ಕೆಲಸ ಮಾಡಿಕೊಂಡಿರುವ ಈ ಸಣ್ಣ ವರ್ಗದ ಕುಲಸುಬಿನ ಸೂಚಕ ಪದವನ್ನು ಕೀಳಾಗಿ ಕಂಡು ಅಪಹಾಸ್ಯ ಮಾಡಿ ನಿಂದನೆಯ ಪದವಾಗಿ ಬಳಸುವ ಅಧಿಕಾರ ಖಂಡಿವಾಗಿಯೂ ಇಲ್ಲ.


ನಿಂದನೆಯ ಪದ ಸಾರ್ವಜನಿಕವಾಗಿ ದೊಡ್ಡದಾದ ಸಮಯ ಈ ಸಮಾಜ ಹೇಳಿಕೆ ನೀಡಿದ ವ್ಯೆಕ್ತಿಗಳ ಕ್ಷಮೆಗೆ ತೃಪ್ತಿಪಟ್ಟುಕೊಳ್ಳುವುದು ಕೂಡ ಖೇದಕರ ವಿಚಾರ. ಕ್ಷಮೆಯನ್ನು ಕೇಳುವವರು ಕೂಡ ಕೆಲವೊಮ್ಮೆ ಸರಿಯಾದ ರೀತಿಯಲ್ಲಿ ಕ್ಷಮೆಯನ್ನು ಯಾಚಿಸದೆ ಹಾರಿಕೆಯ ಕ್ಷಮೆಯನ್ನ ಕೇಳುವುದು ಉಂಟು. ಇನ್ನೂ ಇಂತಹ ಮಾನಸಿಕ ಶೋಷಣೆಯನ್ನು ಸಮಾಜದವರ ಗಮನಕ್ಕೆ ತಂದರೂ ಇದು ತನಗೆ ಸಂಬಂಧಿಸಿದ್ದೇ ಅಲ್ಲವೆಂಬಂತೆ ಕುರುಡಾಗಿರುವ ಹಲವರ ನೆಡೆಯು ದುರದೃಷ್ಟಕರ ಸಂಗತಿಯಾಗಿದೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಕೆಲವರಿಂದ ಇಂತಹ ಅವಘಡಗಳು ಆಗುವಾಗ ಸಮಾಜದ ಸಾಮಾನ್ಯರನ್ನು ತಡೆಯುವುದು ಹೇಗೆ ಸಾಧ್ಯ ?

ಸಮಾಜದ ಸಣ್ಣವರ್ಗವೆಂಬ ಸಾಮಾಜಿಕ ಮತ್ತು ರಾಜಕೀಯ ತಾತ್ಸಾರವನ್ನು ಮೆಟ್ಟಿನಿಲ್ಲಬೇಕಿದೆ. ಸಮಾಜದ ಬಲ ಒಗ್ಗೂಡಿ ಗಟ್ಟಿಗೊಳ್ಳಬೇಕಿದೆ. ಅಪಮಾನಿಸಿದವರು ಎಂತಹವರೇ ಆಗಿರಲಿ ಇಂತಹ ಸಾಮಾಜಿಕ ಶೋಷಣೆಯ ವಿರುದ್ಧ, ನಿಕೃಷ್ಟ ನೆಡೆಯ ವಿರುದ್ದ ಸಮಾಜದ ಧ್ವನಿ ಇನ್ನೂ ಗಟ್ಟಿಯಾಗಬೇಕಾಗಿದೆ. ಇಂತಹ ಮಾನಸಿಕ ಶೋಷಣೆಯ ವಿರುದ್ಧ ಕಾನೂನಿನ ನೆಲೆಯಲ್ಲಿ ಹೋರಾಟಗಳನ್ನು ನೆಡೆಸಿ ಬಿಸಿ ಮುಟ್ಟಿಸಿ ನಿಂದಿಸುವವರಿಗೆ ಎಚ್ಚರಿಸಿ ಕ್ಷೌರಿಕರು ಸಮಾಜದಲ್ಲಿ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕಿದೆ. ಸಾಮಾಜಿಕವಾಗಿ ಮುನ್ನೆಲೆಗೆ ಬಂದು ಈ ಶ್ರಮಿಕ ವರ್ಗ ಅಂಜಿಕೆಯನ್ನು ತೊಡೆದು ತಮ್ಮ ಕುಲಕಸುಬಿನ ಬಗ್ಗೆ ಹೆಮ್ಮೆಪಡಬೇಕಿದೆ.



 



✍️ ವಿಜಯ್ ನಿಟ್ಟೂರು.

No comments:

Post a Comment