( ಧ್ಯಾನ-6)
ಈ ಬಗ್ಗೆ ಗಂಭೀರವಾಗಿರುವವರು ದಯವಿಟ್ಟು, ಗಮನಕೊಡಿ.ನಿಮ್ಮ ಬಗ್ಗೆ ನೀವು ತಿಳಿದಿಲ್ಲದೆ ಇದ್ದರೆ ಆಗ ನಿಮ್ಮ ಧ್ಯಾನ ಮತ್ತು ದಿನನಿತ್ಯದ ಬದುಕು ಎರಡೂ ಹೊಂದಿಕೆಯಾಗಲಾರದಷ್ಟು ಭಿನ್ನವಾಗಿಬಿಡುತ್ತವೆ.ನೀವು ಬದುಕಿರುವಷ್ಟು ಕಾಲವೂ ಧ್ಯಾನದ ಭಂಗಿಯಲ್ಲಿ ಕುಳಿತೇ ಇದ್ದರೂ ನಿಮ್ಮ ಮೂಗಿನ ತುದಿ ಬಿಟ್ಟು ಬೇರೆ ಏನೂ ನಿಮಗೆ ಕಾಣುವುದೇ ಇಲ್ಲ.ನೀವು ಯಾವುದೇ ಆಸನದಲ್ಲಿದ್ದರೂ,ಏನೇ ಮಾಡಿದರೂ ಎಲ್ಲವೂ ಅರ್ಥಹೀನ.
ತನ್ನನ್ನು ತಾನು ತಿಳಿಯುವುದೆಂದರೇನು? ಇದು ಬಹಳ ಮುಖ್ಯ. ನೆನಪುಗಳ ಸಂಗ್ರಹದಲ್ಲಿ ಬೇರು ಬಿಟ್ಟಿರುವ "ನನ್ನ" ಬಗ್ಗೆ ಸುಮ್ಮನೆ ಎಚ್ಚರವಾಗಿರುವುದು,ಅನ್ಯಥಾ ಆಯ್ಕೆಯೇ ಇಲ್ಲವೆಂಬಂತೆ ಎಚ್ಚರವಾಗಿರುವುದು,ಅಂದರೆ ನಾನು ಇರುವುದನ್ನು ಇರುವಂತೆಯೇ ನೋಡಬೇಕು, ನಾನು ಹೀಗೆ ಇರಬೇಕು, ಇರಬಾರದು ಎಂಬ ಧೋರಣೆಗಳಿಲ್ಲದೆ ನೋಡಬೇಕು.
ನೀವು ಬೇರೆ,ನೀವು ಇರುವ ಜಗತ್ತು ಬೇರೆ ಅಲ್ಲ.ನಿಮ್ಮ ಸಮಸ್ಯೆ ಬೇರೆ, ಪ್ರಪಂಚದ ಸಮಸ್ಯೆ ಬೇರೆಯಲ್ಲ.ನೀವು ಬೇರೆ ಬೇರೆ ಪ್ರವೃತ್ತಿಗಳ ಫಲಿತಾಂಶವಾಗಿರಬಹುದು,ಪರಿಸರ ಪ್ರಭಾವಕ್ಕೆ ಒಳಗಾಗಿರಬಹುದು,ಆದರೆ ನೀವು ಮತ್ತೊಬ್ಬರಿಗೆ ಬೇರೆಯಲ್ಲ. ನಮ್ಮ ನಮ್ಮ ಅಂತರಂಗದಲ್ಲಿ ನಾವೆಲ್ಲ ಒಂದೇ ಆಗಿರುತ್ತೇವೆ.ದುರಾಸೆ,ಕೆಟ್ಟ ಮನಸ್ಸು, ಭಯ,ಮಹತ್ವಾಕಾಂಕ್ಷೆ,ಇತ್ಯಾದಿಗಳು ನಮ್ಮನ್ನೆಲ್ಲ ಒಂದೇ ರೀತಿ ತಬ್ಬಿ ತಳ್ಳಿ ಆಡುತ್ತಿರುತ್ತವೆ.ನಾವೆಲ್ಲರೂ ಒಂದೇ .ಆದರೆ ಕೃತಕವಾದ ಆರ್ಥಿಕ ಮತ್ತು ರಾಜಕೀಯ ಗಡಿಗಳು,ಪೂರ್ವಗ್ರಹಗಳು ನಮ್ಮನ್ನು ಬೇರೆ ಮಾಡಿವೆ.ನೀವು ಮತ್ತೊಬ್ಬರನ್ನು ಕೊಂದರೆ ನಿಮ್ಮನ್ನೇ ನಾಶಮಾಡಿಕೊಳ್ಳುತ್ತೀರಿ.ಪೂರ್ಣತೆಯ ಕೇಂದ್ರ ನೀವೇ.
ಮನುಷ್ಯನ ಐಕ್ಯತೆಯ ಬಗ್ಗೆ ನಮಗೆ ಬೌದ್ಧಿಕವಾದ ತಿಳುವಳಿಕೆ ಇದೆ.ಆದರೆ ನಮ್ಮ ಬುದ್ದಿ ಮತ್ತು ಭಾವಗಳು ಪ್ರತ್ಯೇಕ ಭಾಗಗಳಾಗಿ ಬಿಟ್ಟಿರುವುದರಿಂದ ಮನುಷ್ಯನ ಐಕ್ಯತೆಯ ಅಸಾಮಾನ್ಯ ಅನುಭವ ನಮ್ಮ ಅರಿವಿಗೆ ಬರುವುದಿಲ್ಲ.
ಮಣ್ಣು ಬೀಜವನ್ನು ಸ್ವೀಕರಿಸುವಂತೆಯೇ ನೀವು ಈ ಮಾತನ್ನು ಸುಮ್ಮನೆ ಅರ್ಥಮಾಡಿಕೊಳ್ಳಲು ಸಾಧ್ಯವೇ?
ಹಾಗೆ ಕೇಳಿ ಮನಸ್ಸು ತನ್ನೊಳಗೆ ಏನೂ ಇಲ್ಲದೆ ಖಾಲಿಯಾಗಿ ಸ್ವತಂತ್ರವಾಗಿರುವುದು ಸಾಧ್ಯ ಎಂದು ತಿಳಿಯಬಲ್ಲಿರಾ? ಮನಸ್ಸು ತನ್ನ ಎಲ್ಲ ಬಿಂಬಗಳನ್ನು, ತನ್ನ ಎಲ್ಲ ಚಟುವಟಿಕೆಗಳನ್ನು, ಆಗಾಗ ಅಲ್ಲ,ಸದಾ,ಪ್ರತಿಕ್ಷಣವೂ ಪ್ರತಿದಿನವೂ, ಅರ್ಥಮಾಡಿಕೊಳ್ಳುತ್ತಿದ್ದರೆ ಮಾತ್ರ ಖಾಲಿಯಾಗಬಲ್ಲದು.ಆಗ ನಿಮಗೆ ಉತ್ತರ ದೊರೆಯುತ್ತದೆ. ನೀವು ಕೇಳದಿದ್ದರೂ ಬದಲಾವಣೆ ಸಂಭವಿಸುತ್ತದೆ. "ಸೃಜನಶೀಲ ಖಾಲಿತನ ಬೆಳೆಸಿಕೊಳ್ಲಬಹುದಾದ ವಸ್ತುವಲ್ಲ,ಅದು ಇದೆ" ಕರೆಯದೆ ಬರುತ್ತದೆ.ಆ ಸ್ಥಿತಿಯಲ್ಲಿ ಮಾತ್ರ ನವೀಕರಣ,ಹೊಸತನ,ಕ್ರಾಂತಿ ಇರುತ್ತದೆ.
*ಮೂಲ *;ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
ವೆಂಕಟೇಶ ಭಂಡಾರಿ, ಭಂಡಾರಿ ವಾರ್ತೆ
ವೆಂಕಟೇಶ ಭಂಡಾರಿ, | ಭಂಡಾರಿ ವಾರ್ತೆ |