BhandaryVarthe Team

BhandaryVarthe Team
Bhandary Varthe Team

Thursday 15 July 2021

ವಿನೂತನ ಮಾದರಿಯ ಎಸ್. ಎಸ್. ಎಲ್. ಸಿ ಪರೀಕ್ಷೆಯ ಪಕ್ಷಿನೋಟ

 ದೇಶ, ಭಾಷೆ, ಗಡಿ, ಜಾತಿ, ಧರ್ಮ ಇತ್ಯಾದಿಗಳನ್ನು ಮೀರಿದ ಕೊರೋನಾ ರೋಗದಿಂದ ಉಂಟಾದ ಬಿಕ್ಕಟ್ಟು ಇಡೀ ಮನುಕುಲದ ಕಲ್ಪನೆಗೆ ನಿಲುಕದ್ದು. ಕಳೆದ ಒಂದು ವರ್ಷದಿಂದ ನಮ್ಮೆಲ್ಲರ ಜೀವನ ಶೈಲಿ ಬದಲಾಗಿದೆ. ಬದಲಾವಣೆಗೆ ಹೊಂದಿಕೊಂಡು ಜೀವನ ಮಾಡಬೇಕಾದ ಅನಿವಾರ್ಯ ನಮಗಿದೆ. ಅಂತೆಯೇ ಶಿಕ್ಷಣ ಕ್ಷೇತ್ರದ ಮೇಲೆ ಕೊರೋನಾ ತೀವ್ರತರನಾದ ಪ್ರಭಾವ ಬೀರಿದ್ದು, ವಿಶೇಷವಾಗಿ ಈ ಬಾರಿ ಎಸ್. ಎಸ್. ಎಲ್. ಸಿ. ಓದುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ನಡೆಯವತ್ತದೋ ಇಲ್ಲವೋ ಎಂಬ ಗೊಂದಲಕ್ಕೆ ಒಳಗಾಗಿದ್ದರು. ಕೊನೆಗೂ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ವಿಭಿನ್ನ ಶೈಲಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿದ್ದು ಜುಲೈ 19 ಮತ್ತು ಜುಲೈ 22ರಂದುಪರೀಕ್ಷೆಗಳು ನಡೆಯಲಿದೆ.



ಈ ಮೊದಲು ದಿನಕ್ಕೆ ಒಂದು ವಿಷಯದ ಪರೀಕ್ಷೆಯನ್ನು ನಡೆಸುತ್ತಿದ್ದು ಈ ಬಾರಿ ದಿನಕ್ಕೆ ಮೂರು ವಿಷಯಗಳ ಪರೀಕ್ಷೆಗಳು ನಡೆಯುತ್ತವೆ. ಪರೀಕ್ಷೆಯು ಬೆಳಿಗ್ಗೆ 10:30 ಕ್ಕೆ ಆರಂಭವಾಗಿ 1:30ಕ್ಕೆ ಕೊನೆಗೊಳ್ಳುತ್ತದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಒಂದು ಗಂಟೆ ಮುಂಚಿತವಾಗಿ ಹಾಜರಿರುವುದು. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು . ಪರೀಕ್ಷಾ ಅವಧಿಯು 3 ಗಂಟೆಗಳಾಗಿರುತ್ತದೆ. 

ಮೂರು ಪ್ರಶ್ನಾ ಪತ್ರಿಕೆ ಮತ್ತು OMR ಗಳನ್ನುಒಟ್ಟಿಗೆ ಕೊಡಲಾಗುತ್ತದೆ.ಆದರೆ ವಿದ್ಯಾರ್ಥಿಗಳು ಪ್ರತಿ ವಿಷಯಕ್ಕೆ ತಲಾ ಒಂದೊಂದು ಗಂಟೆಯನ್ನು ಮೀಸಲಿಡುವುದು ಒಳ್ಳೆಯದು. ಜುಲೈ 19ರಂದು ಕೋರ್ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಹಾಗೂ ಜುಲೈ 22 ರಂದು ಭಾಷಾ ವಿಷಯಗಳಾದ ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆಗಳ ಪರೀಕ್ಷೆಗಳು ನಡೆಯಲಿವೆ.ಎಲ್ಲಾ ಪರೀಕ್ಷೆಗಳಲ್ಲಿ ವಸ್ತುನಿಷ್ಠ ಬಹು ಆಯ್ಕೆಯ ಪ್ರಶ್ನೆಗಳು ಇರುತ್ತದೆ.

 ಪ್ರತಿ ವಿಷಯಕ್ಕೂ ತಲಾ 40 ಅಂಕಗಳು ಇರುತ್ತದೆ. ಪ್ರತೀ ವಿಷಯಕ್ಕೂ ವಿಷಯವಾರು OMR ಹಾಳೆ ಮತ್ತು ಪ್ರಶ್ನೆಪತ್ರಿಕೆಗಳು ಇರುತ್ತವೆ. ಮೊದಲನೇ ದಿನದ ಪರೀಕ್ಷೆಯಲ್ಲಿ ಗಣಿತಕ್ಕೆ ಗುಲಾಬಿ ಬಣ್ಣ, ವಿಜ್ಞಾನಕ್ಕೆ ಕೇಸರಿ ಬಣ್ಣ , ಸಮಾಜ ವಿಜ್ಞಾನಕ್ಕೆ ಹಸಿರು ಬಣ್ಣದ OMR ಹಾಳೆ ಇರುತ್ತದೆ. ಭಾಷಾ ವಿಷಯಕ್ಕೂ ಇದೇ ಬಣ್ಣದ OMR ಗಳನ್ನು ನೀಡಲಾಗುತ್ತದೆ. ಪ್ರಥಮ ಭಾಷೆಗೆ ಗುಲಾಬಿ ಬಣ್ಣ,ದ್ವಿತೀಯ ಭಾಷೆಗೆ ಕೇಸರಿ ಬಣ್ಣ,ತೃತೀಯ ಭಾಷೆಗೆ ಹಸಿರು ಬಣ್ಣದ OMR ಹಾಳೆ ಇರುತ್ತದೆ. ಪ್ರಶ್ನೆ ಸಂಖ್ಯೆ1ರಿಂದ 40 ಗಣಿತ, 41 ರಿಂದ 80 ವಿಜ್ಞಾನ, 81ರಿಂದ 120 ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಸಂಖ್ಯೆ1ರಿಂದ 40 ಪ್ರಥಮ ಭಾಷೆ, 41ರಿಂದ 80 ದ್ವಿತೀಯ ಭಾಷೆ, 81ರಿಂದ 120 ತೃತೀಯ ಭಾಷೆಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಪ್ರತಿ ಉತ್ತರಕ್ಕೆ ಎರಡು ಅಂಕಗಳು ಇರುವುದರಿಂದ ಪ್ರತಿ ವಿಷಯಕ್ಕೆ (40x2=80) 80 ಅಂಕಗಳು ಮತ್ತು 20 ಇಂಟರ್ನಲ್ ಅಂಕಗಳು ಸೇರಿ ಒಟ್ಟು 100 ಅಂಕಗಳಾಗುತ್ತದೆ.

ಪ್ರತೀ ವಿದ್ಯಾರ್ಥಿಯ OMR ಹಾಳೆಯಲ್ಲಿ ವಿದ್ಯಾರ್ಥಿಯ ಫೋಟೋ, ಹೆಸರು, ಪರೀಕ್ಷಾ ಕೇಂದ್ರದ ಹೆಸರು, ನೋಂದಣಿ ಸಂಖ್ಯೆ, ಇತ್ಯಾದಿಗಳು ಮೊದಲೇ ಭರ್ತಿ ಆಗಿದ್ದು ತನ್ನದೇ OMR ಹಾಳೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ . ಆದ್ದರಿಂದ ವಿದ್ಯಾರ್ಥಿಗಳು OMR ಹಾಳೆಯ ಮೇಲೆ ನೀಲಿ ಅಥವಾ ಕಪ್ಪು ಬಾಲ್ ಪೆನ್ನಿನಿಂದ ನಿಗದಿತ ಸ್ಥಳದಲ್ಲಿ ಸಹಿ ಮತ್ತು ಉತ್ತರವನ್ನು ಮಾತ್ರ ಭರ್ತಿ ಮಾಡುವುದು. ಇದನ್ನು ಹೊರತುಪಡಿಸಿ ವಿದ್ಯಾರ್ಥಿಗಳು OMR ಹಾಳೆಯಲ್ಲಿ ಏನನ್ನೂ ಬರೆಯುವ ಹಾಗಿಲ್ಲ. 

ಉತ್ತರಗಳನ್ನು ಶೇಡ್ ಮಾಡುವ ಸರಿಯಾದ ವಿಧಾನ ವನ್ನು OMR ಹಾಳೆಯಲ್ಲಿ ನೀಡಿರುವುದನ್ನು ಗಮನಿಸಿಕೊಳ್ಳಬೇಕು. ಉತ್ತರಗಳನ್ನು ಭರ್ತಿ ಮಾಡುವ ಮೊದಲು ಪ್ರಶ್ನೆಗಳನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ಸರಿಯಾದ ಉತ್ತರವನ್ನು ಪ್ರಶ್ನೆ ಪತ್ರಿಕೆಯಲ್ಲಿ ಗುರುತು ಮಾಡಿಕೊಂಡ ಬಳಿಕ OMR ಹಾಳೆಯಲ್ಲಿ ಪ್ರಶ್ನೆ ಸಂಖ್ಯೆಯನ್ನು ಸರಿಯಾಗಿ ಗಮನಿಸಿಕೊಂಡು ಶೇಡ್ ಮಾಡುವುದು ಉತ್ತಮ. ಕಂಪ್ಯೂಟರೀಕೃತ ಮೌಲ್ಯಮಾಪನ ಆಗಿರುವುದರಿಂದ ಒಂದು ಪ್ರಶ್ನೆಗೆ ಎರಡು ಉತ್ತರಗಳನ್ನು ಗುರುತಿಸಿದಲ್ಲಿ ಯಾವುದೇ ಅಂಕಗಳು ಸಿಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು sslc.karnataka. gov.in ವೆಬ್ ಸೈಟ್ ನಲ್ಲಿ ನೀಡಿರುವ ಮಾದರಿ ಪ್ರಶ್ನಾ ಪತ್ರಿಕೆ ಹಾಗೂ OMR ಹಾಳೆಯನ್ನು ತೆಗೆದು ಒಮ್ಮೆಯಾದರೂ ಅಭ್ಯಾಸ ಮಾಡಿಕೊಳ್ಳಿ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಹಾಲ್ ಟಿಕೇಟ್ ನ್ನು ಮರೆಯದೆ ತೆಗೆದುಕೊಂಡು ಹೋಗುವುದು . ಕರ್ನಾಟಕ ರಾಜ್ಯ ಸಾರಿಗೆಯಲ್ಲಿ ಪರೀಕ್ಷಾರ್ಥಿಗಳು ಹಾಲ್ ಟಿಕೇಟ್ ನ್ನು ತೋರಿಸಿ ಪರೀಕ್ಷಾ ಕೇಂದ್ರಕ್ಕೆ ಉಚಿತ ಪ್ರಯಾಣ ಮಾಡಬಹುದು. ವಿದ್ಯಾರ್ಥಿಗಳು ಪರೀಕ್ಷೆಗೆ ಸಂಬಂಧಿಸಿದ ಕೊನೆಯ ಕ್ಷಣದ ಗೊಂದಲವನ್ನು ಕೊಠಡಿ ಮೇಲ್ವಿಚಾರಕರ ಸಹಾಯದಿಂದ ಬಗೆಹರಿಸಿಕೊಳ್ಳಬಹುದು.

ಪರೀಕ್ಷಾ ಕೇಂದ್ರದ ಆವರಣದೊಳಗೆ ಗುಂಪುಗಾರಿಕೆಯನ್ನು ತಡೆಯಲು ಪೋಷಕರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡೆ ಪರೀಕ್ಷೆಗಳನ್ನು ನಡೆಸುವುದರಿಂದ ಪೋಷಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.

ಪರೀಕ್ಷೆ ಬರೆಯುತ್ತಿರುವ ಸಮಾಜದ ಎಲ್ಲಾ ವಿದ್ಯಾರ್ಥಿಗಳಿಗೆ ಕಚ್ಚೂರು ನಾಗೇಶ್ವರ ದೇವರ ಅನುಗ್ರಹವಿರಲಿ. ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪರೀಕ್ಷೆ ಬರೆಯಲು ಸಿದ್ಧರಾಗಿರುವ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶುಭ ಹಾರೈಕೆಗಳು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ

 

✍️ಸುಪ್ರಿಯಾ ಪ್ರಕಾಶ್ ಭಂಡಾರಿ

ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾರ್ಕಳ

No comments:

Post a Comment