BhandaryVarthe Team

BhandaryVarthe Team
Bhandary Varthe Team

Tuesday 31 August 2021

ಮುಂಬೈನಲ್ಲಿ ಶಿವಾಸ್ ಹೇರ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ನ 23 ನೇ ಸಲೂನ್ ಶಿವಾಸ್ ಸ್ಯಾಲ್ಯೂಟ್ ಶುಭಾರಂಭ

 ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಹಲವು ಪ್ರತಿಷ್ಠಿತ ಗಣ್ಯರ ಕೇಶ ವಿನ್ಯಾಸದ ಮೂಲಕ ಹೆಸರುವಾಸಿಯಾಗಿರುವ ಕಾರ್ಕಳ ಮೂಲದ ಹೇರ್ ಎಕ್ಸ್ ಪರ್ಟ್ ಡಾ| ಶಿವರಾಮ ಕೃಷ್ಣ ಭಂಡಾರಿ ಅವರ ಶಿವಾಸ್ ಹೇರ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ 23ನೇ ಶಾಖೆ ಸಲೂನ್ ಶಿವಾಸ್ ಸ್ಯಾಲ್ಯೂಟ್ ಮುಂಬಯಿನ ವಿಲೇ ಪಾರ್ಲೆ (ಈಸ್ಟ್ )ನ ಮಹಂತ್ ವಿಲೇ ರೋಡ್ ಮತ್ತು ಹನುಮಾನ್ ಕ್ರಾಸ್ ನಲ್ಲಿರುವ  ಝೀ ಉಷಾ ನಿಕೇತನ್ ಸಿ ಎಚ್ ಎಸ್ ಎಲ್   ಸಂಕೀರ್ಣದಲ್ಲಿ ಆಗಸ್ಟ್ 31 ರ ಮಂಗಳವಾರ ಶುಭಾರಂಭಗೊಂಡಿತು.  



ಶಿವಾಸ್ ಹೇರ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ಮುಂಬೈನಾದ್ಯಂತ  20 ಕ್ಕೂ ಅಧಿಕ ಶಾಖೆಗಳನ್ನು ಹೊಂದಿದ್ದು  ವಿಶಿಷ್ಟ ಶೈಲಿಯ ಸೇವೆಯ ಕೇಶ ವಿನ್ಯಾಸಗಳಿಗೆ ಹೆಸರುವಾಸಿಯಾಗಿದೆ ಹಾಗೂ ಈಗಾಗಲೇ ಗ್ಲಾಮರ್, ಫ್ಯಾಷನ್, ಶೋ ಬಿಸಿನೆಸ್ ಮತ್ತು ಕಾರ್ಪೊರೇಟ್ ವರ್ಲ್ಡ್ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದೆ .





ಭಾರತೀಯ ಸೇನೆಯಿಂದ ಸ್ಫೂರ್ತಿ ಪಡೆದಿರುವ ಶಿವಾಸ್ ಭಾರತೀಯ ಸೈನಿಕರ ತ್ಯಾಗ , ಬಲಿದಾನ, ಸಮರ್ಪಣಾ  ಮನೋಭಾವಕ್ಕೆ   ಶಿವಾಸ್ ಸಂಸ್ಥೆಯು ತನ್ನ ವಿಶಿಷ್ಟ ಸೇವೆಯ ಮೂಲಕ ಗೌರವ ಸೂಚಿಸಲಿದೆ.



ಶಿವಾಸ್ ಸಿಬ್ಬಂದಿಗಳು ಸಮವಸ್ತ್ರ ಧರಿಸುವ ಮೂಲಕ ಭಾರತೀಯ ಸೈನಿಕರು ಎಂದೆಂದಿಗೂ ನಮ್ಮ ಹೃದಯದಲ್ಲಿ ಮತ್ತು ಮನಸ್ಸಿನಲ್ಲಿ ಇರುತ್ತಾರೆ ಎನ್ನುವುದಕ್ಕೆ  ನಿದರ್ಶನವಾಗಿರುತ್ತಾರೆ . ಮತ್ತು ಇದೊಂದು ಗೌರವ ಸೂಚಿಸುವ ಸಣ್ಣ ಅವಕಾಶವಾಗಿದೆ ಎಂಬುದು ಅವರ ಅಭಿಮತ.





ಶಿವಾಸ್ ಸಲ್ಯೂಟ್ ನ ಸಿಬ್ಬಂದಿಗಳು ಉತ್ತಮ ತರಭೇತಿ ಪಡೆದಿದ್ದು,  ಸೈನಿಕರ ರೀತಿಯ  ಹೇರ್ ಸ್ಟೈಲ್ ನ ಮೂಲಕ ನಮ್ಮ ಯೋಧರ ತ್ಯಾಗ ಮತ್ತು ಸಮರ್ಪಣೆಯನ್ನು ಈಗಿನ ಯುವಕರಿಗೆ ನೆನಪಿಸುವ ಪ್ರಯತ್ನವಾಗಿದೆ.





ನಮ್ಮ ಯೋಧರು ಗಡಿಯನ್ನು ಮಾತ್ರ ಕಾಯುವುದಲ್ಲ  , ನೈಸರ್ಗಿಕ ವಿಪತ್ತು ಸಂಭವಿಸಿದಾಗ ಜನರ ಪ್ರಾಣ ಮತ್ತು ಆಸ್ತಿಯನ್ನು ಕೂಡ ರಕ್ಷಿಸುವ ಮೂಲಕ ದೇಶಕ್ಕೆ ಬಹಳ ದೊಡ್ಡ ರೀತಿಯ ಕೊಡುಗೆ ಕೊಡುತ್ತಿದ್ದಾರೆ . ಇಂತಹ ಸಂದರ್ಭದಲ್ಲಿ ನಮ್ಮ ಸಮಾಜದ  ಡಾ| ಶಿವರಾಮ ಭಂಡಾರಿಯವರು ಶಿವಾಸ್ ಸಲ್ಯೂಟ್ ಎನ್ನುವ ಸಲೂನ್ ಪ್ರಾರಂಭಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.







ಡಾ| ಶಿವರಾಮ ಕೃಷ್ಣ ಭಂಡಾರಿಯವರು ಕೇವಲ ಮುಂಬೈನಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ತನ್ನ ಶಾಖೆಗಳನ್ನು ತೆರೆಯಲಿ, ಆ ಮೂಲಕ ಸಮಸ್ತ ಭಂಡಾರಿ ಸಮಾಜಕ್ಕೆ ಕೀರ್ತಿ ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ  ಹಾರೈಸಿಕೊಂಡು ಈ ಸಂದರ್ಭದಲ್ಲಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದೆ.

-ಭಂಡಾರಿ ವಾರ್ತೆ

ಸೃಜನಶೀಲ ಖಾಲಿತನ -ವೆಂಕಟೇಶ ಭಂಡಾರಿ-ಕುಂದಾಪುರ

   ( ಧ್ಯಾನ-6)

ನಿಮ್ಮ ಬಗ್ಗೆ ನಿಮಗೆ ಅರಿವು ಇಲ್ಲದಿದ್ದರೆ, ಆಗ ನೀವೇನೇ ಮಾಡಿದರೂ ಧ್ಯಾನಸ್ಥಿತಿ ಬಹುಶಃ ದೊರೆಯುವುದಿಲ್ಲ."ತನ್ನನ್ನು ತಾನು ಅರಿಯುವುದು ಎಂದರೆ ನಮ್ಮ ಎಲ್ಲ ಆಲೋಚನೆ, ಭಾವನೆ,ಎಲ್ಲ ಪದ,ಶಬ್ಧ,ಮನಸ್ಸಿನ ಎಲ್ಲ ಕ್ರಿಯೆಗಳನ್ನು ಅರಿಯುವುದು.ಪರಮ ಆತ್ಮವನ್ನು, ಮಹಾನ್ ಆತ್ಮವನ್ನು ಅರಿಯುವುದು ಎಂದಲ್ಲ." ಅಂಥ ಯಾವ ಆತ್ಮವೂ ಇಲ್ಲ,ಆತ್ಮ, ಪರಮಾತ್ಮ ಇವೆಲ್ಲ ಆಲೋಚನೆಯ ವಲಯಕ್ಕೆ ಸೇರಿದ ಸಂಗತಿಗಳು. ಆಲೋಚನೆ ಎಂಬುದು ನಾವು ಬೆಳೆಸಿಕೊಂಡಿರುವ ರೂಢಿಯ ಫಲಿತಾಂಶ, ನೆನಪುಗಳನ್ನು ಆಧಾರಿಸಿದ ಪ್ರತಿಕ್ರಿಯೆ. ಈ ನೆನಪುಗಳು ತತ್ಕ್ಷಣದವೂ ಆಗಿರಬಹುದು, ಹಿರಿಯ ತಲೆಮಾರುಗಳಿಂದ ಬಳುವಳಿಯಾಗಿ ಬಂದಂತವೂ ,ಇರಬಹುದು. ತನ್ನನ್ನು ತಾನು ಅರಿಯುವುದರಿಂದ ಬರುವ ಗುಣವನ್ನು ಸ್ಥಿರವಾಗಿ, ಆಳವಾಗಿ, ಅನಿವಾರ್ಯವಾಗಿ ಸ್ಥಾಪಿಸಿಕೊಳ್ಳದೆ ಸುಮ್ಮನೆ ಧ್ಯಾನಮಾಡುವುದು ಕೇವಲ ಮೋಸ ಮತ್ತು ಸಂಪೂರ್ಣ ವ್ಯರ್ಥ.

ಈ ಬಗ್ಗೆ ಗಂಭೀರವಾಗಿರುವವರು ದಯವಿಟ್ಟು, ಗಮನಕೊಡಿ.ನಿಮ್ಮ ಬಗ್ಗೆ ನೀವು ತಿಳಿದಿಲ್ಲದೆ ಇದ್ದರೆ ಆಗ ನಿಮ್ಮ ಧ್ಯಾನ ಮತ್ತು ದಿನನಿತ್ಯದ ಬದುಕು ಎರಡೂ ಹೊಂದಿಕೆಯಾಗಲಾರದಷ್ಟು  ಭಿನ್ನವಾಗಿಬಿಡುತ್ತವೆ.ನೀವು ಬದುಕಿರುವಷ್ಟು ಕಾಲವೂ ಧ್ಯಾನದ ಭಂಗಿಯಲ್ಲಿ ಕುಳಿತೇ ಇದ್ದರೂ ನಿಮ್ಮ ಮೂಗಿನ ತುದಿ ಬಿಟ್ಟು ಬೇರೆ ಏನೂ ನಿಮಗೆ ಕಾಣುವುದೇ ಇಲ್ಲ.ನೀವು ಯಾವುದೇ ಆಸನದಲ್ಲಿದ್ದರೂ,ಏನೇ ಮಾಡಿದರೂ ಎಲ್ಲವೂ ಅರ್ಥಹೀನ.


ತನ್ನನ್ನು ತಾನು ತಿಳಿಯುವುದೆಂದರೇನು? ಇದು ಬಹಳ ಮುಖ್ಯ. ನೆನಪುಗಳ ಸಂಗ್ರಹದಲ್ಲಿ ಬೇರು ಬಿಟ್ಟಿರುವ "ನನ್ನ" ಬಗ್ಗೆ ಸುಮ್ಮನೆ ಎಚ್ಚರವಾಗಿರುವುದು,ಅನ್ಯಥಾ ಆಯ್ಕೆಯೇ ಇಲ್ಲವೆಂಬಂತೆ ಎಚ್ಚರವಾಗಿರುವುದು,ಅಂದರೆ ನಾನು ಇರುವುದನ್ನು ಇರುವಂತೆಯೇ ನೋಡಬೇಕು, ನಾನು ಹೀಗೆ ಇರಬೇಕು, ಇರಬಾರದು ಎಂಬ ಧೋರಣೆಗಳಿಲ್ಲದೆ ನೋಡಬೇಕು.

ನೀವು ಬೇರೆ,ನೀವು ಇರುವ ಜಗತ್ತು ಬೇರೆ ಅಲ್ಲ.ನಿಮ್ಮ ಸಮಸ್ಯೆ ಬೇರೆ, ಪ್ರಪಂಚದ ಸಮಸ್ಯೆ ಬೇರೆಯಲ್ಲ.ನೀವು ಬೇರೆ ಬೇರೆ ಪ್ರವೃತ್ತಿಗಳ ಫಲಿತಾಂಶವಾಗಿರಬಹುದು,ಪರಿಸರ ಪ್ರಭಾವಕ್ಕೆ ಒಳಗಾಗಿರಬಹುದು,ಆದರೆ ನೀವು ಮತ್ತೊಬ್ಬರಿಗೆ ಬೇರೆಯಲ್ಲ. ನಮ್ಮ ನಮ್ಮ ಅಂತರಂಗದಲ್ಲಿ ನಾವೆಲ್ಲ ಒಂದೇ ಆಗಿರುತ್ತೇವೆ.ದುರಾಸೆ,ಕೆಟ್ಟ ಮನಸ್ಸು, ಭಯ,ಮಹತ್ವಾಕಾಂಕ್ಷೆ,ಇತ್ಯಾದಿಗಳು ನಮ್ಮನ್ನೆಲ್ಲ ಒಂದೇ ರೀತಿ ತಬ್ಬಿ ತಳ್ಳಿ ಆಡುತ್ತಿರುತ್ತವೆ.ನಾವೆಲ್ಲರೂ ಒಂದೇ ‌.ಆದರೆ ಕೃತಕವಾದ ಆರ್ಥಿಕ ಮತ್ತು ರಾಜಕೀಯ ಗಡಿಗಳು,ಪೂರ್ವಗ್ರಹಗಳು  ನಮ್ಮನ್ನು ಬೇರೆ ಮಾಡಿವೆ.ನೀವು ಮತ್ತೊಬ್ಬರನ್ನು ಕೊಂದರೆ ನಿಮ್ಮನ್ನೇ ನಾಶಮಾಡಿಕೊಳ್ಳುತ್ತೀರಿ.ಪೂರ್ಣತೆಯ ಕೇಂದ್ರ ನೀವೇ.


ಮನುಷ್ಯನ ಐಕ್ಯತೆಯ ಬಗ್ಗೆ ನಮಗೆ ಬೌದ್ಧಿಕವಾದ ತಿಳುವಳಿಕೆ ಇದೆ.ಆದರೆ ನಮ್ಮ ಬುದ್ದಿ ಮತ್ತು ಭಾವಗಳು ಪ್ರತ್ಯೇಕ ಭಾಗಗಳಾಗಿ ಬಿಟ್ಟಿರುವುದರಿಂದ ಮನುಷ್ಯನ ಐಕ್ಯತೆಯ ಅಸಾಮಾನ್ಯ ಅನುಭವ ನಮ್ಮ ಅರಿವಿಗೆ ಬರುವುದಿಲ್ಲ.
      ಮಣ್ಣು ಬೀಜವನ್ನು ಸ್ವೀಕರಿಸುವಂತೆಯೇ ನೀವು ಈ ಮಾತನ್ನು ಸುಮ್ಮನೆ  ಅರ್ಥಮಾಡಿಕೊಳ್ಳಲು ಸಾಧ್ಯವೇ?
ಹಾಗೆ ಕೇಳಿ ಮನಸ್ಸು ತನ್ನೊಳಗೆ ಏನೂ ಇಲ್ಲದೆ ಖಾಲಿಯಾಗಿ ಸ್ವತಂತ್ರವಾಗಿರುವುದು ಸಾಧ್ಯ ಎಂದು ತಿಳಿಯಬಲ್ಲಿರಾ? ಮನಸ್ಸು ತನ್ನ ಎಲ್ಲ ಬಿಂಬಗಳನ್ನು, ತನ್ನ ಎಲ್ಲ ಚಟುವಟಿಕೆಗಳನ್ನು, ಆಗಾಗ ಅಲ್ಲ,ಸದಾ,ಪ್ರತಿಕ್ಷಣವೂ ಪ್ರತಿದಿನವೂ, ಅರ್ಥಮಾಡಿಕೊಳ್ಳುತ್ತಿದ್ದರೆ ಮಾತ್ರ ಖಾಲಿಯಾಗಬಲ್ಲದು.ಆಗ ನಿಮಗೆ ಉತ್ತರ ದೊರೆಯುತ್ತದೆ. ನೀವು ಕೇಳದಿದ್ದರೂ ಬದಲಾವಣೆ ಸಂಭವಿಸುತ್ತದೆ. "ಸೃಜನಶೀಲ ಖಾಲಿತನ ಬೆಳೆಸಿಕೊಳ್ಲಬಹುದಾದ ವಸ್ತುವಲ್ಲ,ಅದು ಇದೆ" ಕರೆಯದೆ ಬರುತ್ತದೆ.ಆ ಸ್ಥಿತಿಯಲ್ಲಿ ಮಾತ್ರ ನವೀಕರಣ,ಹೊಸತನ,ಕ್ರಾಂತಿ ಇರುತ್ತದೆ.


*ಮೂಲ *;ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು

ವೆಂಕಟೇಶ ಭಂಡಾರಿ, ಭಂಡಾರಿ ವಾರ್ತೆ

Monday 30 August 2021

ಶ್ರೀ ಕೃಷ್ಣಜನ್ಮಾಷ್ಟಮಿಯ ಮಹತ್ವ-ಶ್ರೀನಿಧಿ ಶಶಿಧರ್ ಕಾರ್ಕಳ

       ಜಗತ್ಪಾಲಕನಾದ ಶ್ರೀವಿಷ್ಣುವಿನ ಎಂಟನೇ ಅವತಾರವೇ ಶ್ರೀಕೃಷ್ಣನ ಅವತಾರ. ದೈವಿಕ ರೂಪವಾದ ಶ್ರೀಕೃಷ್ಣ ಸೃಷ್ಟಿಯಲ್ಲಿರುವ ದುಷ್ಟರಿಗೆ ಶಿಕ್ಷೆ ಹಾಗೂ ಶಿಷ್ಟರ  ಪಾಲನೆಗಾಗಿ ಅವತರಿಸಿ ಬಂದು ಭಾದ್ರಪದ ಮಾಸದ ಕೃಷ್ಣ ಪಕ್ಷದ ಎಂಟನೆಯ ದಿನ ಕೃಷ್ಣನ ಜನನವಾಗುತ್ತದೆ. ಇದೇ ದಿನದಂದು ಶ್ರೀಕೃಷ್ಣಜನ್ಮಾಷ್ಟಮಿ ಎಂದು ಆಚರಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಶ್ರಾವಣ ಮಾಸದಲ್ಲಿ ಜನಿಸಿದ ಎಂದು ಹೇಳಲಾಗುತ್ತದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಮಾಸಗಳ ವ್ಯತ್ಯಾಸವಿದೆ.  ಆದರೆ ಕೃಷ್ಣ ಜನ್ಮಾಷ್ಟಮಿಯನ್ನು ಒಂದೇ ದಿನ ಆಚರಿಸಲಾಗುತ್ತಿದೆ 


  

             ಮಥರಾ ರಾಜನಾದ ಕಂಸನು ದಬ್ಬಾಳಿಕೆಯ ರೂಪದಲ್ಲಿ ಆಳ್ವಿಕೆ ನಡೆಸುತ್ತಿದ್ದ.ಅವನ ದಬ್ಬಾಳಿಕೆಯಿಂದ ಜನರು ಆತಂಕದಿಂದ ಜೀವನ ನಡೆಸುತ್ತಿದ್ದರು. ಕಂಸ ತನ್ನ ತಂಗಿ ದೇವಕಿಯನ್ನು ತುಂಬಾ ಪ್ರೀತಿಸುತ್ತಿದ್ದ. ನಂತರ ಅವನು ದೇವಕಿಯನ್ನು ವಸುದೇವನ ಜೊತೆ ವಿವಾಹ ಮಾಡಿಸುತ್ತಾನೆ. ನಂತರ ದಂಪತಿಯನ್ನು ವಸುದೇವನ ಮನೆಗೆ ಕರೆದುಕೊಂಡು ಹೋಗುವಾಗ “ಹೇ ಮೂರ್ಖ ಕಂಸ ಸಾವಧಾನ,  ದೇವಕಿಯ ಎಂಟನೆ ಪುತ್ರ ನಿನ್ನ ಸಾವಿಗೆ ಕಾರಣನಾಗುವನು ಎಂದು ಅಶರೀರವಾಣಿಯೊಂದು ಕೇಳುತ್ತದೆ. ಇದನ್ನು ಕೇಳಿದ ಕಂಸ ಕ್ರೋಧಿತನಾಗಿ ದಂಪತಿಯನ್ನು  ಕಾರಾಗೃಹಕ್ಕೆ  ತಳ್ಳುತ್ತಾನೆ ನಂತರ ದೇವಕಿ ಹಾಗೂ ವಸುದೇವನಿಗೆ ಹುಟ್ಟುವ ಎಲ್ಲಾ ಮಕ್ಕಳನ್ನು ಕೊಲ್ಲಲು ನಿರ್ಧರಿಸುತ್ತಾನೆ. ಸಮಯ ಕಳೆದಂತೆ ದೇವಕಿ ಹಾಗೂ ವಸುದೇವನಿಗೆ ಮೊದಲ ಮಗು ಹುಟ್ಟಿತು.ಈ ವಿಷಯ ತಿಳಿದ ಕಂಸ  ಕಾರಾಗೃಹಕ್ಕೆ ಬಂದು ದೇವಕಿಯ ಮಗುವನ್ನು ನೋಡಿದ. ಆ ಮಗುವನ್ನ ಕೊಂದ. ಇದೇರೀತಿ ಕಂಸ ದೇವಕಿಯ ಏಳು ಮಕ್ಕಳನ್ನು ಕೊಂದು ಹಾಕಿದ. ಕಾರಾಗೃಹದಲ್ಲಿ ದೇವಕಿ ವಸುದೇವ ದಂಪತಿಗಳಿಗೆ ಎಂಟನೇ ಮಗು ಜನಿಸಿತು. ಆ ಮಗು ನೋಡಲು ಸುಂದರ ಹಾಗೂ ಮುಗ್ಧವಾಗಿತ್ತು. ಆ ಮಗುವಿನ ಕಣ್ಣು ತೇಜದಿಂದ ಕೂಡಿತ್ತು.         

             ಮುಗ್ಧವಾದ ಮಗುವನ್ನು ನೋಡಿದ ವಸುದೇವ ಈ ಮಗುವನ್ನು ಉಳಿಸಲೇ ಬೇಕೆಂದು ವಿಷ್ಣುವನ್ನು ಧ್ಯಾನಿಸಿದ. ವಸುದೇವ ಧ್ಯಾನಿಸುತ್ತಿದ್ದಂತೆ ಕಾರಾಗೃಹದ ಬಾಗಿಲು ತೆರೆಯಿತು.ಇದರಿಂದ ದೇವಕಿ ಹಾಗೂ ವಸುದೇವನಿಗೆ ಆಶ್ಚರ್ಯವಾಗುತ್ತದೆ. ತಕ್ಷಣವೇ ವಸುದೇವ ಮಗುವನ್ನು ಎತ್ತಿಕೊಂಡು ನಗರದ ಹೊರಗೆ ಹೊರಡಲು ತಯಾರಾದ. ಕಾರಾಗೃಹದಿಂದ ಹೊರಗೆ ಬಂದ ವಸುದೇವ ಗೋಕುಲದ ಕಡೆಗೆ ಹೋಗಲು ನಿರ್ಧರಿಸಿದ. ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲೇ ನಡೆದುಬಂದ ವಸುದೇವ ಯಮುನಾ ನದಿ ತೀರಕ್ಕೆ ತಲುಪುತ್ತಾನೆ. ಪೂಜೆಗಾಗಿ ತಯಾರಿಸಿದ ಬುಟ್ಟಿಯನ್ನು ನೋಡಿದ ನಂತರ ಬುಟ್ಟಿಯಲ್ಲಿ ಬಾಲಕನನ್ನು ಇಟ್ಟು ತಲೆಯ ಮೇಲೆ ಹೊತ್ತು ನದಿ ದಾಟಲು ಮುಂದಾದ.ನದಿ ದಾಟುತ್ತಿರುವಾಗ ನೀರು ವಸುದೇವನ ಮೂಗಿನವರಿಗೆ ತಲುಪಿತು. ಆಗ ಬುಟ್ಟಿಯಲ್ಲಿದ್ದ ಬಾಲ ರೂಪಿ ಭಗವಂತ ತನ್ನ ಬಲಗಾಲನ್ನು ನೀರಿಗೆ ಸ್ಪರ್ಶಿಸಿದ ಯಮುನೆಗೆ ಪಾದಸ್ಪರ್ಶವಾಗುತ್ತದೆ.ನೀರು ತನ್ನಷ್ಟಕ್ಕೆ ಕೆಳಗಿಳಿಯಿತು. ನಂತರ ವಸುದೇವ ಮುಂದೆ ಸಾಗಿದಾಗ ಅವನ ಹಿಂದೆ ಶೇಷನಾಗ ಬಂದಿತ್ತು. ತನ್ನ ಹೆಡೆಯಿಂದ ಬುಟ್ಟಿಯ ಮೇಲೆ ಛತ್ರದ ರೂಪದಲ್ಲಿ ವಸುದೇವನ ಹಿಂದೆ ಸಾಗಿತ್ತು. ಇದರಿಂದ ಬಾಲಕನ ಮೇಲೆ ಮಳೆಯ ಸ್ಪರ್ಶ ವಾಗಲಿಲ್ಲ.ನಂತರ ವಸುದೇವ ಯಮುನಾ ನದಿ ದಾಟಿದ.



     ಇತ್ತ ಗೋಕುಲದಲ್ಲಿ ಯಶೋದೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಆಗ ಗೋಕುಲ ತಲುಪಿದ ವಸುದೇವನಿಗೆ ಮಗು ಅಳುವುದರ ಶಬ್ದ ಕೇಳಿತು. ಆಗ ವಸುದೇವ ಅಳುವಿನ ಧ್ವನಿಯನ್ನು ಹಿಂಬಾಲಿಸಿ ನಂದನ ಮನೆಗೆ ಹೋದ. ನಿದ್ರಾವಸ್ಥೆಯಲ್ಲಿದ್ದ ಯಶೋಧೆ ಮತ್ತು ಅವಳ ಹೆಣ್ಣು ಮಗುವನ್ನು ನೋಡಿದ. ನಂತರ ವಸುದೇವ, ಕಂಸನು ಹೆಣ್ಣು ಮಗುವನ್ನು ಕೊಲ್ಲುವುದಿಲ್ಲ ಎಂದು ಯೋಚಿಸಿ ತನ್ನ ಮಗುವನ್ನು ಯಶೋದೆಯ ಬಳಿಯಲ್ಲಿ,  ಅವಳ ಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು ಕಾರಾಗೃಹ ತಲುಪಿದ. ಕಾರಾಗೃಹ ಬರುತ್ತಿದ್ದಂತೆ ಕಾರಾಗೃಹದ ಎಲ್ಲಾ ಬಾಗಿಲುಗಳು ಮುಚ್ಚಿದ್ದವು.  ಕೆಲ ಸಮಯದ ನಂತರ ಕಂಸನಿಗೆ ದೇವಕಿಯ ಎಂಟನೆ ಮಗುವಿನ ಮಗುವಿನ ಜನ್ಮದ ವಿಷಯ ತಿಳಿಯುತ್ತದೆ.ಆಗ ಅವನು ಕಾರಾಗೃಹಕ್ಕೆ  ಧಾವಿಸುತ್ತಾನೆ. ಕಂಸನನ್ನು ನೋಡಿ ವಸುದೇವ,  “ಇದು ಹೆಣ್ಣು ಮಗು ನಿನಗೆ ಹಾನಿ ಮಾಡಲು ಸಾಧ್ಯವಿಲ್ಲ. ಇದನ್ನು ಬಿಟ್ಟುಬಿಡು ಕಂಸ” ಎಂದು ಬೇಡಿಕೊಂಡ. ಆದರೆ ಕಂಸ ಮಗುವನ್ನು ಎತ್ತಿಕೊಂಡು ಗೋಡೆಗೆ ಹೊಡೆಯಲು ಮುಂದಾದಾಗ ಅವನ ಕೈಯಿಂದ ತಪ್ಪಿಸಿಕೊಂಡು ಆಕಾಶಕ್ಕೆ ಹಾರಿತು. ನಂತರ ಆ ಮಗು ಹೆಣ್ಣು ರೂಪತಾಳಿ  ಹೇ  ದುಷ್ಟ ಕಂಸ ನಿನ್ನ ನಾಶಮಾಡುವ ಬಾಲಕ ಗೋಕುಲದಲ್ಲಿ ಸುರಕ್ಷಿತವಾಗಿದ್ದಾನೆ ಎಂದು ಹೇಳಿ ಮಾಯವಾಗುತ್ತಾಳೆ. ಇತ್ತ ನಂದ ಹಾಗೂ ಯಶೋದೆ ಆ ಬಾಲ ರೂಪಿ ಭಗವಂತನನ್ನು ಕೃಷ್ಣ ಎಂದು ನಾಮಕರಣ ಮಾಡುತ್ತಾರೆ. ಅದೇ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ. ಜನ್ಮಾಷ್ಟಮಿಯಂದು ಜನರು ಹಣ್ಣು ಮತ್ತು ನೀರು ಕುಡಿಯುವುದರ ಬದಲಾಗಿ ಉಪವಾಸ ಮಾಡುತ್ತಾರೆ.ಕೃಷ್ಣನಿಗೆ ಹಾಲು ತುಪ್ಪ ಜೇನುತುಪ್ಪ ಹಾಗೂ ನೀರಿನಿಂದ ಸ್ನಾನ ಮಾಡಿಸುತ್ತಾರೆ. ಕೃಷ್ಣಾಷ್ಟಮಿಯ ಮರುದಿನ ಜನರು ಮೊಸರಿನಿಂದ ತುಂಬಿದ ಮಡಕೆಯನ್ನು ಒಡೆಯುತ್ತಾರೆ.  ಇದುವೇ ಶ್ರೀಕೃಷ್ಣಜನ್ಮಾಷ್ಟಮಿಯ ಮಹತ್ವ.






-ಶ್ರೀನಿಧಿ ಶಶಿಧರ್ ಕಾರ್ಕಳ 

ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆ ಅಂದು ಮತ್ತು ಇಂದು- ಸುಪ್ರೀತಾ ರವಿಶಂಕರ್ ಭಾಗಮಂಡಲ.

ಶ್ರೀ ಕೃಷ್ಣ ಅನೇಕ ಭಕ್ತರ ಪ್ರೀಯ ದೇವ, ಅಂತೆಯೇ ಆತನ ಜನ್ಮದಿನವೂ ನಮಗೆಲ್ಲ ವಿಶೇಷ. ಪ್ರತೀ ವರ್ಷ ಸಂಭ್ರಮ ಸಡಗರ ತುಂಬಿರುತಿದ್ದ ಅಷ್ಟಮಿ ಇತ್ತೀಚಿನ ವರ್ಷಗಳಲ್ಲಿ  ಸಡಗರ ಸ್ವಲ್ಪ ಕಡಿಮೆಯಾಗಿದೆ ಎನ್ನಬಹುದು.



ಹಾ! ಅಂದ ಹಾಗೆ ಈಗಲೂ ನೆನಪಿದೆ ಅಂದಿನ ಅಷ್ಟಮಿಯ ಸಡಗರ. ಹಿಂದಿನ ದಿನದಿಂದಲೇ ಹಬ್ಬದ ತಯಾರಿ ಶುರು. ಮನೆಮಂದಿಯೆಲ್ಲ ಕೂಡಿ "ಕೊಟ್ಟಿಗೆ"(ಬಾಳೆ ಎಲೆಯ ಒಂದು ಬಗೆಯ ತಿಂಡಿ), ಗುಂಡ(ಹಲಸಿನ ಎಲೆಯ ತಿಂಡಿ) ಮುಂತಾದ ತಿಂಡಿಗಳ ತಯಾರಿಗೆ ಆರಂಭ. ಅಷ್ಟಮಿಯ ದಿನ ಬಗೆ ಬಗೆಯ ಉಪಹಾರ, ಖಾದ್ಯ, ಸಿಹಿ ಊಟ. ಈ ಸಂಭ್ರಮದ ನಡುವೆ ಊರ ಮಂದಿ ಸೇರಿ ಊರಿನ ಒಂದು ಜಾಗದಲ್ಲಿ ಹಲವು ವಿಶೇಷ ಸ್ಪರ್ಧೆಗಳ ಆಯೋಜನೆ. ಮಕ್ಕಳು, ಹಿರಿಯರು ಕಿರಿಯರು ಎಲ್ಲಾ ಸೇರಿ ಆಟೋಟಗಳಲ್ಲಿ ಪಾಲ್ಗೊಂಡು ಬಹುಮಾನ ಗಿಟ್ಟಿಸಿಕೊಳ್ಳುವ ಖುಷಿ. ಕೃಷ್ಣನ ಬಾಲ್ಯವನ್ನು ಮೆಲುಕು ಹಾಕುವ ಸ್ಪರ್ಧೆಗಳು, ಎಲ್ಲವೂ ಹಬ್ಬದ ವಾತಾವರಣವನ್ನು ಪ್ರತೀ ಬಾರಿ ನೆನಪಿಸುವಂತೆ ಮಾಡುತ್ತದೆ.

 ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆ ಅಂದು ಮತ್ತು ಇಂದು- ಸುಪ್ರೀತಾ ರವಿಶಂಕರ್ ಭಾಗಮಂಡಲ. 

ಆದರೆ  ಆ ಸಡಗರವೆಲ್ಲ ಇಂದು ಉಳಿದಿಲ್ಲ. ಎಲ್ಲವೂ ಆನ್ಲೈನ್ ಮಯ. ಜಗತ್ತಿಗೆ ಮಾರಿ ಎನಿಸಿರುವ ಕೋರೋನ ಕಾರಣದಿಂದ ಅಷ್ಟಮಿ ಮನೆ ಮಂದಿಗೆ ಮಾತ್ರ ಸೀಮಿತ ಎಂದೇ ಹೇಳಬಹುದು. ಊರ ಮಂದಿ ಸೇರಿ ಆಚರಿಸುತ್ತಿದ್ದ ಆಚರಣೆ ಇಂದು ಕಾಣ ಸಿಗುವುದು ಅಪರೂಪ. ಇಂದು ಕೃಷ್ಣ ಜನ್ಮಾಷ್ಟಮಿ ಆನ್ಲೈನಲಿ ಮುದ್ದು ಕೃಷ್ಣ ಸ್ಪರ್ಧೆಗೆ ಸೀಮಿತ ಎನ್ನಬಹುದು. ಕೇವಲ ಲೈಕ್ ಮತ್ತು ಶೇರ್ ಗಳ ನಡುವೆ ಅಷ್ಟಮಿಯ ಸ್ಪರ್ಧೆಗಳು ನಡೆಯುತ್ತಿದೆ. ಆದಷ್ಟು ಬೇಗ ಹಿಂದಿನ ಅಷ್ಟಮಿಯ ಸಂಭ್ರಮಾಚರಣೆ ನಮೆಗೆಲ್ಲ ಸಿಗಲಿ ಎನ್ನುವುದೇ ನನ್ನ ಆಶಯ.







ಸುಪ್ರೀತಾ ರವಿಶಂಕರ್ ಭಾಗಮಂಡಲ.

       

                                        

ಶ್ರೀ ಕೃಷ್ಣ ಜನ್ಮಾಷ್ಠಮಿಯ ಮಹತ್ವ-ರಜಿತಾ ಪ್ರದೀಪ್,ಭಂಡಾರಿ , ಬೆಂಗಳೂರು 

 ಜನ್ಮಾಷ್ಟಮಿಯು ಹಿಂದೂ ಧರ್ಮದ ಪ್ರಮುಖ ಹಬ್ಬಗಳ್ಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲೂ ಆಚರಿಸುತ್ತಾರೆ. ಈ ಹಬ್ಬವು ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಬರುತ್ತದೆ.ಈ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತಾರೆ. ಜನರ ಮನೆಯಲ್ಲಿ ಬಾಲ ಕೃಷ್ಣನ ತೊಟ್ಟಿಲನ್ನು ಇಡುತ್ತಾರೆ. ಕೆಲವು ರಾಜ್ಯಗಳಲ್ಲಿ ಮೊಸರು ಗಡಿಗೆಯನ್ನು ಒಡೆದು ಹಬ್ಬ ಆಚರಿಸುತ್ತಾರೆ. ಭಗವಾನ್ ಶ್ರೀ ಕೃಷ್ಣನನ್ನು ವಿಷ್ಣುವಿನ ಅತ್ಯಂತ ಶಕ್ತಿಶಾಲಿ ಅವತಾರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಅವನ ಜನ್ಮದ ಉದ್ದೇಶ ದುಷ್ಟ ಶಕ್ತಿಗಳಿಂದ ಜಗತ್ತನ್ನು ರಕ್ಷಿಸುವುದು. ಭಗವಾನ್ ಶ್ರೀ ಕೃಷ್ಣನು ಜನರಿಗೆ ಒಳ್ಳೆಯ ಮಾರ್ಗಗಳನ್ನು ಅನುಸರಿಸಲು ಮತ್ತು ಎಂದಿಗೂ ಕೆಟ್ಟ ಕೆಲಸವನ್ನು ಮಾಡಬಾರದು ಎಂದು ತಿಳಿಸುತ್ತಾರೆ.

ಶ್ರೀ ಕೃಷ್ಣನ ಜನನ
ಜಗತ್ ಪಾಲಕನದ ವಿಷ್ಣುವಿನ 8ನೇ ಅವತಾರವೇ ಶ್ರೀ ಕೃಷ್ಣ ಅವತಾರ. ದೈವಿಕನಾದ ಶ್ರೀ ಕೃಷ್ಣನು ಸೃಷ್ಟಿಯಲ್ಲಿರುವ ದುಷ್ಟರಿಗೆ ಶಿಕ್ಷೆ ಹಾಗು ಶಿಷ್ಟರ ಪಾಲನೆಗಾಗಿ ಅವತಾರ ಎತ್ತಿದ್ದಾನೆ . ಬಾದ್ರಪದ ಮಾಸದ ಶುಕ್ಲ ಪಕ್ಷದ 8ನೇ ದಿನ ಕೃಷ್ಣ ಜನಿಸುತ್ತಾನೆ. ಆದ್ದರಿಂದ ಅಂದೇ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.
ಮಥುರಾ ರಾಜ್ಯದಲ್ಲಿ ಕಂಸನ ದಬ್ಬಾಳಿಕೆಯಿಂದ ಜನರು ಆತಂಕದಿಂದ ಜೀವನ ನಡೆಸುತ್ತಿದ್ದರು. ಆದರೆ ಕಂಸನಿಗೆ ತನ್ನ ತಂಗಿ ದೇವಕಿಯ ಮೇಲೆ ತುಂಬಾ ಪ್ರೀತಿ ಇತ್ತು. ನಂತರ ದೇವಕಿಯ ವಿವಾಹವನ್ನು ವಸುದೇವನ ಜೊತೆ ಮಾಡಿಸುತ್ತಾನೆ. ನಂತರ ದಂಪತಿಯನ್ನು ವಸುದೇವನ ಮನೆಗೆ ಕರೆದುಕೊಂಡು ಹೋಗುವಾಗ ಆಕಾಶವಾಣಿ ನುಡಿಯುತ್ತದೆ ಹೇ ಮೂರ್ಖ ಕಂಸ ದೇವಕಿಯ 8ನೇ ಪುತ್ರನಿಂದ ನಿನ್ನ ಮೃತ್ಯು ಆಗುತ್ತದೆ ಎಂದು. ಇದನ್ನು ಕೇಳಿದ ಕಂಸ ಕೋಪಗೊಂಡು ಅವರನ್ನು ಸೆರೆಮನೆಗೆ ತಳ್ಳಿದನು. ನಂತರ ಅವರಿಗೆ ಜನಿಸಿದ ಇಲ್ಲಾ ಮಗುವನ್ನು ಕೊಲ್ಲಲು ನಿರ್ಧರಿಸುತ್ತಾನೆ. ಹೀಗೆ ಹುಟ್ಟಿದ ಎಲ್ಲಾ 7ಮಕ್ಕಳನ್ನು ಗೋಡೆಗೆ ತಳ್ಳಿ ಕೊಲ್ಲುತಾನೆ. ಮುಂದೊಂದು ದಿನ ರಾತ್ರಿ ಗುಡುಗು ಸಿಡಿಲು ಸಹಿತ ಜೋರಾಗಿ ಮಳೆ ಸುರಿಯುತ್ತದೆ. ಆಗ ದೇವಕಿಗೆ 8ನೇ ಮಗು ಜನಿಸಿತ್ತದೆ. ಆ ಮಗು ನೋಡಲು ಸುಂದರವಾಗಿಯೂ ತೇಜಸ್ಸಿನಿಂದ ಪ್ರಕಾಶಮಾನವಾಗಿರುತ್ತದೆ. ಆ ಮಗುವನ್ನು ನೋಡಿ ವಸುದೇವನು ವಿಷ್ಣುವನ್ನು ಧ್ಯಾನಿಸುತ್ತಾನೆ. ಆಗ ಕಾರಗ್ರಹದ ಬಾಗಿಲು ತೆರೆಯುತ್ತದೆ. ಅಂತ ಮಗುವನ್ನು ಎತ್ತಿಕೊಂಡು ವಾಸುದೇವ ಹೊರಗೆ ಬಂದು ಗೋಕುಲದ ಕಡೆ ಹೋಗುತ್ತಾನೆ.

ಜೋರಾಗಿ ಸುರಿಯುವ ಮಳೆಯಲ್ಲಿ ಮಗುವನ್ನು ಯಮುನಾ ತೀರಕ್ಕೆ ಬರುತ್ತಾನೆ. ಒಂದು ಬಿದುರಿನ ಬುಟ್ಟಿಯಲ್ಲಿ ಮಗುವನ್ನು ಮಲಗಿಸಿ ನದಿ ದಾಟಲು ಮುಂದಾಗುತ್ತಾನೆ. ನದಿಯ ನೀರು ವಸುದೇವ ಮೂಗಿನವರೆಗೂ ತಲುಪಿತು ಆಗ ಬುಟ್ಟಿಯಲ್ಲಿದ್ದ ಭಗವಂತ ಶ್ರೀ ಕೃಷ್ಣನ ಪಾದ ಸ್ಪರ್ಶದಿಂದ ನೀರಿನ ಪ್ರಮಾಣ ಕಡಿಮೆ ಆಗುತ್ತದೆ. ಹಿಂದಿನಿಂದ ಶೇಷಾನಾಗನು ಮಳೆಯನೀರು ಮಗುವಿಗೆ ಬೀಳದಂತೆ ತಡೆಯುತ್ತಾನೆ. ನಂತರ ವಸುದೇವ ಗೋಕುಲ ತಲುಪಿದ ಅಲ್ಲಿ ಯಶೋದೆ ಹೆಣ್ಣುಮಗುವುಗೆ ಜನ್ಮ ನೀಡಿರುತ್ತಾಳೆ ಆ ಮಗುವಿನ ಅಳುವ ದ್ವನಿ ಕೇಳಿ ವಸುದೇವ ಅಲ್ಲಿಗೆ ಹೋಗಿ ತನ್ನ ಮಗುವನ್ನು ಯಶೋದೆಯ ಬಳಿ ಇಟ್ಟು ಅವಳ ಹೆಣ್ಣು ಮಗುವನ್ನು ವಾಸುದೇವ ಕಂಸನ ಕಾರಗ್ರಹಕ್ಕೆ ತೆಗೆದುಕೊಂಡು ಹೋಗುತ್ತಾನೆ.


ದೇವಕಿಗೆ ಮಗು ಜನಿಸಿದ ವಿಷಯ ತಿಳಿದು ಕಾರಗ್ರಹಕ್ಕೆ ಬಂದ್ದು ಆ ಮಗುವನ್ನು ಗೋಡೆಗೆ ಬಿಸಾಡುತ್ತಾನೆ. ಆದರೆ ಆ ಮಗು ಮೇಲಕ್ಕೆ ಹಾರಿ ಹೋಗಿ ಏ ಕಂಸ ನಿನ್ನನ್ನು ನಾಶ ಮಾಡುವ ಬಾಲಕನ ಜನನವಾಗಿದೆ. ಆ ಬಾಲಕ ಗೋಕುಲದಲ್ಲಿ ಇದ್ದಾನೆ ಎಂದು ಹೇಳಿ ಮಾಯವಾಗುತ್ತಾಳೆ.
ಇತ್ತ ಯಶೋದೆ ಮಗುವಿಗೆ ಕೃಷ್ಣ ಎಂದು ನಾಮಕರಣ ಮಾಡುತ್ತಾಳೆ.




ಹೀಗೆ ಶ್ರೀ ಕೃಷ್ಣನ ಜನನವಾಗುತ್ತದೆ. ಕೃಷ್ಣನ ಹೆಜ್ಜೆಗುರುತುಗಳನ್ನು ಮನೆಯಲ್ಲಿ ಹಾಕಿ ಮತ್ತು ಸಣ್ಣ ಮಕ್ಕಳಿಗೆ ಕೃಷ್ಣನ ವೇಷಭೂಷಣ ಹಾಕಿಸಿ ಮನೆಯಲ್ಲಿ ಸಂಭ್ರಮ ಆಚರಿಸುತ್ತಾರೆ. ಹೀಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ನಡೆಯುತ್ತದೆ





--ರಜಿತಾ ಪ್ರದೀಪ್,ಭಂಡಾರಿ , ಬೆಂಗಳೂರು 

ಶ್ರೀ ಕೃಷ್ಣ ಜನ್ಮಾಷ್ಠಮಿಯ ಮಹತ್ವ-ರಂಜಿತ್ ಸಸಿಹಿತ್ಲು

 ವಿಷ್ಣುವಿನ 10 ಅವತಾರಗಳಲ್ಲಿ 8 ನೇ ಅವತಾರವೇ ಶ್ರೀ ಕೃಷ್ಣ. ಕೃಷ್ಣನ ಪ್ರಭಾವ ಅದೆಷ್ಟಿದೆಯೆಂದರೆ ವಿಶ್ವಾದ್ಯಂತ ಮತ್ತು ಶ್ರೀಕೃಷ್ಣನಿಗೆ ತಮ್ಮ ಜೀವನವನ್ನು ಅರ್ಪಿಸಿದ ಕೋಟ್ಯಂತರ ಭಕ್ತರಿದ್ದಾರೆ.


ವಿಷ್ಣುವಿನ ಅವತಾರಗಳಲ್ಲಿ ರಾಮ ಮತ್ತು ಕೃಷ್ಣ ಅತ್ಯಂತ ಜನಪ್ರಿಯವಾದದ್ದು. ಅವರ ಜೀವನ ಶೈಲಿ ಬದುಕಿನ ತತ್ವಗಳು ಅನೆಕ ಜನರನ್ನು ಆಕರ್ಷಿಸಿದ್ದವು. ಹಾಗೇ ಪೂಜನೀಯವೂ ಆಗಿರುತ್ತದೆ.

 


ಭಾರತದಲ್ಲಿ ಅನೇಕ ಕೃಷ್ಣಮಂದಿರಗಳಿದ್ದು , ಕೋಟ್ಯಂತರ ಭಕ್ತರು ವರ್ಷoಪ್ರತಿ ಭೇಟಿ ನೀಡುತ್ತಾರೆ. ಇನ್ನು ಅನೇಕರು ತಮ್ಮ ಮನೆಗಳಲ್ಲೇ ಪೂಜಿಸುವವರಿದ್ದಾರೆ. ಅದಲ್ಲದೆ ವಿದೇಶಗಳಲ್ಲೂ ಅನೇಕ ಭಕ್ತರಿದ್ದು ಭಾರತದ ಕೃಷ್ಣಮದಿರಗಳಿಗೆ ಭೇಟಿ ನೀಡುತ್ತಿರುತ್ತಾರೆ.

ಅದ್ಭುತ ಕೃಷ್ಣ ಮಂತ್ರಗಳು

ಕೃಷ್ಣನ ಮೂಲ ಮಂತ್ರವೆಂದೇ ನಂಬಲಾಗಿರುವ ಕೃ ಕೃಷ್ಣಾಯ ನಮಃ ವನ್ನು ಜಪಿಸುವುದರಿಂದ ಜೀವನದ ಕಷ್ಟಗಳು ದೂರವಾಗುತ್ತದೆ ಎಂದು ನಂಬಲಾಗುತ್ತದೆ.
ಹಿಂದೂ ನಂಬಿಕೆಗಳ ಪ್ರಕಾರ ಈ ಮಂತ್ರವನ್ನು ದಿನಂಪ್ರತಿ 108 ಬಾರಿ ಪಠಿಸುವುದರಿಂದ ಮನೆ ಸಂತಸದಿಂದ ಕೂಡಿರುತ್ತದೆ.

" ಜೈ ಶ್ರೀ ಕೃಷ್ಣ ಚೈತನ್ಯ ಪ್ರಭು ನಿತ್ಯಾನಂದ ಶ್ರೀ ಅದ್ವೈತ ಗದಾಧರ ಶ್ರೀ ವಾಸಾದಿ ಗೌರ ಭಕ್ತ ವೃಂದ"

ಅರ್ಥ: ಈ ಮಂತ್ರವು ಭಕ್ತರನ್ನು ಶ್ರೀ ಕೃಷ್ಣನ ಆಶೀರ್ವಾದವನ್ನು ಪಡೆದುಕೊಳ್ಳವಂತೆ ಆಹ್ವಾನಿಸುವುದಾಗಿದೆ.

" ವಸುದೇವ ಸುತಂ ದೇವಂ ಕಂಸ ಚಾನುರ ಮರ್ಧನಂ ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗತ್‌ ಗುರುಂ"

ಅರ್ಥ: ಕಂಸ ಮತ್ತು ಚಾನುರನ್ನು ವಧಿಸಿದ ವಸುದೇವನ ಸುತನೇ ದೇವಕಿಯ ಪರಮಾನಂದಗಳಿಗೆ ಕಾರಣೀಭೂತ ಜಗಧಾರಕ ಕೃಷ್ಣನೇ ನಿನಗೆ ವಂದನೆ.


ಕೃಷ್ಣ ಮಂತ್ರವನ್ನು ಜಪಿಸುವುದರಿಂದ ಅವನ ಕೃಪೆಗೆ ಒಳಗಾಗುವುದಲ್ಲದೆ , ಮನಸ್ಸಿನ ಭಯ ಗೊಂದಲ ಹಾಗು ನೋವುಗಳನ್ನು ದೂರ ಮಾಡಬಹುದು.
ಕೃಷ್ಣ ಮಂತ್ರ ಪಠಣವು ಧೈರ್ಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನೆಮ್ಮದಿ ಆರೋಗ್ಯ ಐಶ್ವರ್ಯ ವೃದ್ಧಿಸುವುದಲ್ಲದೆ,ಅನಾರೋಗ್ಯ ನಕಾರಾತ್ಮಕತೆ ಹಾಗೂ ದುರಾದೃಷ್ಠವನ್ನು ತೊಡೆದು ಹಾಕುತ್ತದೆ.





✍🏼ರಂಜಿತ್ ಸಸಿಹಿತ್ಲು

ಭಗವದ್ಗೀತೆಯಿಂದ ನಾವು ಕಲಿಯುವ ಜೀವನದ ಮೌಲ್ಯಗಳು - ಭರತ್ ರಾಜ್ ಭಂಡಾರಿ, ಉಜಿರೆ.

 ಓಂ ಶ್ರೀ ಭಗವತೇ ವಾಸುದೇವಯ ನಮೋ :

ಭಗವದ್ಗೀತೆಯು ಶ್ರೀ ಕೃಷ್ಣನು ಅರ್ಜುನನಿಗೆ ಹೇಳುವ ಉಪದೇಶ. ಗೀತೆಯ ಪ್ರತಿ ಅಧ್ಯಾಯದಲ್ಲಿ ಮೌಲ್ಯದ ಸಂದೇಶವಿದೆ..

 


ಗೀತಾ ಸಾರ:
ಆದುದೆಲ್ಲ ಒಳ್ಳೆಯದಕ್ಕೆ
ಆಗುವುದೆಲ್ಲ ಒಳ್ಳೆಯದೇ ಆಗುತ್ತಿದೆ
ಆಗಲಿರುವುದೂ ಸಹ ಒಳ್ಳೆಯದೇ ಆಗಲಿದೆ
ರೋದಿಸಲು ನೀನೇನು ಕಳೆದುಕೊಂಡಿರುವೆ..
ಕಳೆದುಕೊಳ್ಳಲು ನೀನು ತಂದಿರುವುದಾದರು ಏನು..
ನಾಶವಾಗಲು ನೀನು ಮಾಡಿರುವದಾದರು ಏನು..
ನೀನೇನು ಪಡೆದಿದ್ದರು ಅದನ್ನು ಇಲ್ಲಿಂದಲೇ ಪಡಿದಿರುವೆ..
ನೀನು ಏನನ್ನೂ ನೀಡಿದ್ದರೂ ಅದನ್ನು ಇಲ್ಲಿಗೆ ನೀಡಿರುವೆ..
ನಿನ್ನೆ ಬೇರಾರದೋ ಆಗಿದ್ದು ಇಂದು ನಿನ್ನದಾಗಿದೆ ಮತ್ತು ನಾಳೆ ಇನ್ನಾರದ್ದೋ ಆಗಲಿದೆ..

 


ಪರಿವರ್ತನೆ ಜಗದ ನಿಯಮ..

ಬದಲಾಗುವ ಕಾಲದ ಜೊತೆ ..ಇರುವುದರಲ್ಲೇ ತೃಪ್ತಿ ಪಟ್ಟುಕೊಂಡು.. ಇನ್ಯಾರಿಗೂ ಕೇಡು ಮಾಡದೆ..ಮನುಷ್ಯ ಜನ್ಮವನ ಕೃಷ್ಣ ನೀಡಿರುವ ಸಂದೇಶಗಳ ಪಾಲಿಸುವ ಮುಖೇನ ಸಾರ್ಥಕಗೊಳಿಸಿಕೋಲ್ಲೋಣ..

ಇರುವತನಕ ಆತ್ಮವಾದರು ನಮ್ಮ ಮೆಚ್ಚುವ ಹಾಗೇ ಬದುಕಲು ಪ್ರಯತ್ನ ಪಡೋಣ..🙏

ಭರತ್ ರಾಜ್ ಭಂಡಾರಿ 😍
ಉಜಿರೆ.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆ -ಗ್ರೀಷ್ಮಾ ಭಂಡಾರಿ

 ಶ್ರೀಕೃಷ್ಣನ ಜನ್ಮದಿನವನ್ನು ಪವಿತ್ರ ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ ಜನ್ಮಾಷ್ಟಮಿಯನ್ನು ವ್ಯಾಪಕವಾಗಿ ಆಚರಿಸಲಾಗುತ್ತದೆ.

ಜನ್ಮಾಷ್ಟಮಿ ಹಿಂದಿನ ಪೌರಾಣಿಕ ಕಥೆ
ಎಲ್ಲಾ ಪೌರಾಣಿಕ ಹಬ್ಬಗಳಂತೆ, ಜನ್ಮಾಷ್ಟಮಿಯ ಹಿಂದೆಯೂ ಒಂದು ಕುತೂಹಲಕಾರಿ ಕಥೆ ಇದೆ. ದಂತಕಥೆಯ ಪ್ರಕಾರ, ಮಥುರಾ ಸಾಮ್ರಾಜ್ಯವು ಕಂಸ ರಾಜನ ಆಳ್ವಿಕೆಯಲ್ಲಿ ಸೊರಗಿಹೋಗಿತ್ತು. ಅವನು ಸಾಕಷ್ಟು ಕ್ರೂರನಾಗಿದ್ದನು. ರಾಜನು ತನ್ನ ಸಹೋದರಿ ರಾಜಕುಮಾರಿ ದೇವಕಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು. ಬಳಿಕ ದೇವಕಿ ವಾಸುದೇವನನ್ನು ಮದುವೆಯಾದಾಗ, ಪ್ರಬಲವಾದ ಮೋಡವು ಇದ್ದಕ್ಕಿದ್ದಂತೆ ಭವಿಷ್ಯಜ್ಞಾನದೊಂದಿಗೆ ಘರ್ಜಿಸಿ, ಇವರಿಬ್ಬರಿಗೆ ಜನಿಸಿದ ಎಂಟನೇ ಮಗ ರಾಜ ಕಂಸ ಸಾವಿಗೆ ಕಾರಣ ಎಂದು ಭವಿಷ್ಯ ನುಡಿಯಿತು. ಇದನ್ನು ಕೇಳಿದ ಕಂಸ ಆಕ್ರೋಶಗೊಂಡನು. ದೇವಕಿ ಮತ್ತು ವಾಸುದೇವ ಅವರನ್ನು ತಕ್ಷಣ ಜೈಲಿಗೆ ಹಾಕುವಂತೆ ಆದೇಶಿಸಿದ್ದನು. ಅಲ್ಲದೆ, ದಂಪತಿಗೆ ಜನಿಸಿದ ಮೊದಲ ಆರು ಮಕ್ಕಳನ್ನು ಕೊಂದುಹಾಕಿದರು. ಅದೃಷ್ಟವಶಾತ್, ರಾಜಕುಮಾರಿ ದೇವಕಿಯ ಏಳನೇ ಮಗುವಾಗಿ ಬಲರಾಮ ಹುಟ್ಟಿದನು .ಆತ, ಗರ್ಭದಲ್ಲಿದ್ದಾಗಲೇ, ವೃಂದಾವನದ ರಾಜಕುಮಾರಿ ರೋಹಿಣಿಗೆ ಅತೀಂದ್ರಿಯವಾಗಿ ವರ್ಗಾಯಿಸಲಾಯಿತ್ತು.ಎಂಟನೇ ಮಗುವಿನ ಜನನದ ನಂತರ, ವೃಂದಾವನದಲ್ಲಿ ನಂದ ಮತ್ತು ಯಶೋಧರಿಗೆ ಮಗುವನ್ನು ನೀಡಲು ದೇವರುಗಳು ವಾಸುದೇವನಿಗೆ ಮಾರ್ಗದರ್ಶನ ನೀಡಿದರು. ವರ್ಷಗಳ ನಂತರ, ಶ್ರೀಕೃಷ್ಣನು ಕಂಸನನ್ನು ಕೊಂದು ಮಥುರಾ ಸಾಮ್ರಾಜ್ಯವನ್ನು ಕ್ರೌರ್ಯದ ಸಂಕೋಲೆಗಳಿಂದ ಮುಕ್ತಿಗೊಳಿಸಿದನು

 

ಜನ್ಮಾಷ್ಟಮಿ ವ್ರತ
ಹಲವು ಭಕ್ತರು ಜನ್ಮಾಷ್ಟಮಿ ದಿನದಂದು ಉಪವಾಸವನ್ನು ಆಚರಿಸುತ್ತಾರೆ.ಅಂದರೆ ಈ ವೇಳೆ ಹಣ್ಣುಗಳು ಮತ್ತು ನೀರನ್ನು ಮಾತ್ರ ಸೇವಿಸುತ್ತಾರೆ.

ಶ್ರೀ ಕೃಷ್ಣ ದೇಗುಲ ದರ್ಶನ
ಕೃಷ್ಣ ಜನ್ಮಾಷ್ಟಮಿಯಂದು ಭಗವಾನ್‌ ಶ್ರೀ ಕೃಷ್ಣನ ಆಶೀರ್ವಾದ ಪಡೆಯಲು ಜನರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅಲ್ಲದೆ, ದೇವರಿಗೆ ಲಾಡು ಮುಂತಾದ ಸಿಹಿ ತಿಂಡಿಗಳನ್ನು ಅರ್ಪಣೆ ಮಾಡಲಾಗುತ್ತದೆ.

ಕೃಷ್ಣ ಮಂತ್ರ ಜಪ
ಜನ್ಮಾಷ್ಟಮಿ ವೇಳೆ ಎಲ್ಲೆಡೆ, ವಿಶೇಷವಾಗಿ ದೇವಾಲಯಗಳಲ್ಲಿ ಭಕ್ತಿ ವಾತಾವರಣ ಮೇಳಯಸಿರುತ್ತದೆ. ಮಂತ್ರಗಳನ್ನು ಪಠಿಸುವುದರ ಹೊರತಾಗಿ, ಭಗವಾನ್ ಶ್ರೀ ಕೃಷ್ಣನ ವಿಗ್ರಹಕ್ಕೆ ಹೂವುಗಳನ್ನು ಹಾಕಿ ಶ್ರೀಕೃಷ್ಣನ ಹೆಸರುಗಳನ್ನು ಜಪಿಸುವ ಆಚರಣೆಯೂ ಇದೆ. ಅನೇಕ ಸ್ಥಳಗಳಲ್ಲಿ, ಅಲಂಕೃತ ಜೋಕಾಲಿಗಳನ್ನು ಮರಗಳ ಮೇಲೆ ಕಟ್ಟಲಾಗುತ್ತದೆ.


ದಹಿ ಹಂಡಿ
ದಹಿ ಹಂಡಿ ಸಹ ಒಂದು ಆಚರಣೆಯಾಗಿದ್ದು, ಮಹಾರಾಷ್ಟ್ರದಲ್ಲಿ ಜನ್ಮಾಷ್ಟಮಿಯ ನಂತರದ ದಿನ ಈ ಉತ್ಸವವನ್ನು ಆಚರಿಸಲಾಗುತ್ತದೆ. ಹಬ್ಬದ ಅಂಗವಾಗಿ, ಜನರು ಪರಸ್ಪರರ ಮೇಲೆ ನಿಂತು ಮಾನವ ಪಿರಮಿಡ್ ನಿರ್ಮಿಸಿಕೊಳ್ಳುತ್ತಾರೆ ಮತ್ತು ನಿರ್ದಿಷ್ಟ ಎತ್ತರದಿಂದ ನೇತುಹಾಕಿರುವ ಮೊಸರು, ಸಕ್ಕರೆ ಮತ್ತು ಬೆಣ್ಣೆ ತುಂಬಿದ ಮಡಕೆಯನ್ನು ಒಡೆಯುತ್ತಾರೆ. ಮಗುವಾಗಿದ್ದಾಗ ಬೆಣ್ಣೆಯನ್ನು ಕದಿಯುತ್ತಿದ್ದರಿಂದ ಶ್ರೀ ಕೃಷ್ಣನನ್ನು ಮಖಾನ್ ಚೋರ್ (ಬೆಣ್ಣೆ ಕಳ್ಳ) ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಈ ರೀತಿ ದಹಿ ಹಂಡಿ ಉತ್ಸವದ ಮೂಲಕ ಶ್ರೀಕೃಷ್ಣನಿಗೆ ಗೌರವ ಸಲ್ಲಿಸಲಾಗುತ್ತದೆ

ಇನ್ನೂ ವಿವಿಧೆಡೆ ಪೋಷಕರು ಮಕ್ಕಳಿಗೆ ಕೃಷ್ಣ, ರಾಧೆ,ರುಕ್ಮಿಣಿಯ ವೇಷ ಧರಿಸಿ ಪೋಟೋ ತೆಗೆಸುತ್ತಾರೆ.ಅಲ್ಲದೇ ಶಾಲೆಗಳಲ್ಲಿ ಆನೇಕ ಸ್ಪರ್ಧೆಗಳನ್ನು ನಡೆಸಿ ಬಹುಮಾನವನ್ನು ನೀಡುತ್ತಾರೆ.

ಹೀಗೆ ವಿವಿಧ ರೀತಿಯಲ್ಲಿ ಕೃಷ್ಣಾಷ್ಟಮಿಯನ್ನು ಆಚರಿಸಲಾಗುತ್ತದೆ.






ಗ್ರೀಷ್ಮಾ ಭಂಡಾರಿ
ಪ್ರಥಮ ಎಂ.ಎ
ಅರ್ಥಶಾಸ್ತ್ರ ವಿಭಾಗ
ವಿಶ್ವವಿದ್ಯಾನಿಲಯ ಕಾಲೇಜು
ಮಂಗಳೂರು


ಶ್ರೀ ಕೃಷ್ಣ ಕಲಿಸಿದ ಬದುಕಿನ ಪಾಠಗಳು-ಸುಮಾ ಭಂಡಾರಿ ಸುರತ್ಕಲ್

 ಕೃಷ್ಣ ಎಂದರೆ ಏನೋ ಮನಸ್ಸಿಗೆ ಉಲ್ಲಾಸ. ತನ್ನ ಬದುಕಿನುದ್ದಕ್ಕೂ ನಾನಾ ಲೀಲೆಗಳನ್ನು ತೋರಿಸಿದ ಮಹಾನ್ ಸಾಧಕ. ಜಗತ್ತಿನ ಉದ್ಧಾರಕ್ಕಾಗಿ ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ಮಾಡಿದ ಜಗದ್ದೋರಕ. ವಾಸುದೇವನ ಪತ್ನಿ ದೇವಕಿಯ ಅಷ್ಟಮ ಗರ್ಭದಲ್ಲಿ, ಮಥುರೆಯ ಕಾರಾಗೃಹದಲ್ಲಿ ಜನಿಸಿದ ವಾಸುದೇವ ಆದರೆ ಜನ್ಮ ಕೊಟ್ಟ ತಂದೆ ತಾಯಿಯ ಜೊತೆ ಬೆಳೆಯದೆ, ನಂದ ಗೋಕುಲದಲ್ಲಿ ನಂದಗೋಪ- ಯಶೋದೆಯರ ಮಗನಾಗಿ ಬೆಳೆದಿದ್ದು ಜಗತ್ ನಿಯಾಮಕನ ನಿಯಮವೇ ಆಗಿದೆ. ಅಲ್ಲಿಂದ ನಂದ ಗೋಪಾಲ ನಾದ. ರಾಜವಂಶದಲ್ಲಿ ಹುಟ್ಟಿದರೂ ತನ್ನ ಬಾಲ್ಯವನ್ನು ಗೋಪಾಲಕನಾಗಿ ನಂದ ಗೋಕುಲದಲ್ಲಿ ಕಳೆದ. ಬಾಲ್ಯದ ತುಂಟಾಟ ಜೊತೆಗೆ ತನ್ನ ಹಾಗೂ ತನ್ನವರ ಶತ್ರುಗಳನ್ನು ನಾಶ ಮಾಡುತ್ತಾ ಜನರಿಗಾಗಿ, ತನ್ನವರಿಗಾಗಿ ಬಾಳಿದ.



ಕೃಷ್ಣನ ಜೀವನದತ್ತ ಕಣ್ಣು ಹಾಯಿಸಿದರೆ ನಾವು ಕಲಿಯಬೇಕಾದ ಎಷ್ಟೋ ಅಂಶಗಳು ಅಡಕವಾಗಿದೆ. ಮನುಷ್ಯ ಕಷ್ಟ, ಸುಖಗಳೊಡನೆಯೇ ಬಾಳುತ್ತಾನೆ. ಕೆಲವೊಮ್ಮೆ ಜೀವನ ಸುಖದ ಸುಪ್ಪತ್ತಿಗೆಯಾದರೆ, ಮಗದೊಮ್ಮೆ ಕಷ್ಟಗಳ ಸರಮಾಲೆಯೇ ಎದುರಾಗುತ್ತದೆ. ಕೃಷ್ಣನ ಬದುಕು ಇದಕ್ಕೆ ಹೊರತಾಗಿಲ್ಲ, ಮಾವ ಕಂಸನಿಂದಾಗಿ ಕಾರಾಗೃಹದಲ್ಲಿ ಜನಿಸಿದರೂ ಧರ್ಮ ಸಂಸ್ಥಾಪನೆಗಾಗಿ ಹಾಗೂ ದುಷ್ಟ ಸಂಹಾರಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ. ಶಿಷ್ಟರ ರಕ್ಷಣೆಗಾಗಿ ಪಣ ತೊಟ್ಟ. ಪುಟ್ಟ ಮಗು ಬಾಲ ಕೃಷ್ಣ ಹುಟ್ಟಿದ ಘಳಿಗೆಯಲ್ಲಿ ರಭಸದಿಂದ ಭೋರ್ಗರೆಯುತ್ತಾ ಹರಿಯುವ ಯಮುನೆಗೆ ತನ್ನ ಪಾದ ಸ್ಪರ್ಶದಿಂದ ಆರ್ಶೀವಾದ ನೀಡಿದ. ಮಕ್ಕಳಿಲ್ಲದೆ ಪರಿತಪಿಸುತ್ತಿದ್ದ ಮಾತೆ ಯಶೋಧೆಗೆ ಮಗುವಾಗಿ ನೋವನ್ನು ನಿವಾರಿಸಿದ. ತನ್ನ ಬಾಲ ಲೀಲೆಗಳಿಂದ ಬೆರಗುಗೊಳಿಸುತ್ತಾ ಮಣ್ಣು ತಿಂದ ಬಾಯಲಿ ತಾಯಿಗೆ ಬ್ರಹ್ಮಾಂಡ ತೋರಿಸಿದ. ತಂದೆ, ತಾಯಿಯ ಇಷ್ಟಾರ್ಥ ನೇರವೇರಿಸುತ್ತಾ ಮುದ್ದಿನ ಮಗನಾದ. ಮುಂದೆ ಕಂಸ ಕಳುಹಿಸಿದ ಪೂತನಿ, ಬಕ, ತೃಣಾವರ್ತ, ಶಕಟಾ , ಧೇನುಕ ಮುಂತಾದ ರಾಕ್ಷಸರನ್ನು ನಾಶ ಮಾಡುತ್ತಾ ತನ್ನವರನ್ನು ರಕ್ಷಿಸುತ್ತಾನೆ. ಅದಕ್ಕೆ ಕೃಷ್ಣನಿಗೆ ಪುರುಷೊತ್ತಮ ಎಂಬ ಹೆಸರು ಬಂದಿರಬೇಕು. ಒಬ್ಬ ಪುರುಷನು ತನ್ನ ಸಂಸಾರವನ್ನು ಕಾಪಾಡಲು ಏನೆಲ್ಲಾ ಮಾಡುತ್ತಾನೆ ಅದೆಲ್ಲವನ್ನೂ ಶ್ರೀಕೃಷ್ಣ ತನ್ನ ಜೀವನದುದ್ದಕ್ಕೂ ಮಾಡುತ್ತಾನೆ. ಸಾಕು ಮಗನಾಗಿ ನಂದ ಗೋಕುಲದಲ್ಲಿ ಗೋಪಾಲಕರ ರಕ್ಷಣೆ ಮಾಡಲು ತನ್ನ ಕಿರು ಬೆರಳಿನಿಂದ ಗೋವರ್ಧನ ಗಿರಿಯನ್ನು ಎತ್ತಿ ಗೋವರ್ಧನ ಗಿರಿಧಾರಿ ಯಾದ.


ಸಾಮಾನ್ಯವಾಗಿ ಮಕ್ಕಳು ಬಾಲ್ಯದಲ್ಲಿ ಕದ್ದು ತಿನ್ನುವುದು ಸಹಜ. ಕೃಷ್ಣನೂ ತನ್ನ ಬಾಲ್ಯವನ್ನು ಹಾಲು, ಮೊಸರು ಬೆಣ್ಣೆ ಕದ್ದು ತಿನ್ನುತ್ತಾ ಗೋಪಿಕೆಯರನ್ನೂ, ಅಮ್ಮನನ್ನು ಗೋಳಾಡಿಸುತ್ತಿದ್ದ. ಇವನು ಉಪಟ ತಡೆಯದೆ ಒಂದು ದಿನ ಯಶೋದೆ ಒರಳು ಕಲ್ಲಿಗೆ ಕೃಷ್ಣನನ್ನು ಕಟ್ಟಿ ಹೋದರೆ ಅಲ್ಲಿಂದಲೂ, ಆ ಕಲ್ಲನ್ನು ಉರುಳಾಡಿಸುತ್ತಾ ಹೋಗಿ ಶಾಪಗ್ರಸ್ತರಾಗಿ ಮರದ ರೂಪದಲ್ಲಿದ್ದ ನಳಕೂಟ ಹಾಗೂ ಮಣಿಗ್ರೀವರಿಗೆ ಶಾಪ ವಿಮೋಚನೆ ಮಾಡಿದ ಮುಕುಂದ.
ಮುರಳಿಯನ್ನು ಸದಾ ನುಡಿಯುತ್ತಾ ಗೋವುಗಳ, ಗೋಪಾಲಕರ ಪ್ರೀತಿ ಗಳಿಸಿದ ಮುರಾರಿ ಸಾಮಾನ್ಯ ಮನುಜರಂತೆ ರಾಧೆಯ ಮೋಹಕ್ಕೆ ಒಳಗಾಗಿ ರಾಧಾಲೋಲ ನಾದ. ಕರ್ತವ್ಯದ ಕರೆಗೆ ಓಗೊಟ್ಟು, ತಾಯಿ ಯಶೋದೆಯ ಮನಸ್ಸು ನೋಯಿಸಲಾಗದೆ, ರಾಧೆಗೆ ಸತ್ಯದ ಅರಿವು ಮೂಡಿಸಿ ತನ್ನ ಪ್ರೀತಿಯ ಸಂಕೇತವಾಗಿ ಕೊಳಲನ್ನು ನೀಡಿ ತಾನು ಎಂದೆಂದಿಗೂ ನಿನ್ನ ಪ್ರಿಯತಮ. ಸದಾ ನೀನು ನನ್ನ ಮನದಲ್ಲಿ ಜೊತೆಯೇ ಇರುವೆ ಎಂದ ಮುರಳಿ ಮುಂದೆಂದೂ ಕೊಳಲನ್ನು ಹಿಡಿಯಲೇ ಇಲ್ಲ ವೇಣು ಗೋಪಾಲ. ಎಷ್ಟೇ ಪ್ರೀತಿ ಪಾತ್ರರಾದರೂ ತನಗಾಗಿ ಹಗಲಿರುಳು ಕಷ್ಟ ಪಡುವ ತಂದೆ ತಾಯಿಯ ಮನ ನೋಯಿಸಬಾರದು ಎಂಬ ಮಾತು ಪಾಠ ಈ ಮೂಲಕ ಬೋಧಿಸಿದನೋ ಏನೋ......




ದುಷ್ಟನಾದ ಮಧು ಎಂಬ ರಾಕ್ಷಸನನ್ನು ಕೊಂದು ಮಧುಸೂದನ ನೆಂಬ ಹೆಸರು ಗಳಿಸಿದ. ಕಪ್ಪು ಎಂದರೆ ಹೀಗಳೆಯುವವರೇ ಹೆಚ್ಚು. ಗಂಡಾಗಲಿ ಹೆಣ್ಣಾಗಲೀ ಶ್ಯಾಮ ವರ್ಣದಲ್ಲಿ ಇದ್ದರೆ ಹೆಚ್ಚಿನ ಮನುಜರು ಮೂಗೆಳೆಯುವರು. ಆದರೆ ನಮ್ಮ ಈ ಶ್ಯಾಮ ಮೋಹಕ ರೂಪದಿಂದ ಎಲ್ಲಾ ಗೋಪಿಕೆಯರ ಮನಕದ್ದು ಘನ ಶ್ಯಾಮ ನಾದ. ರುಕ್ಮಿಣಿ, ಸತ್ಯಭಾಮೆ, ಜಾಂಬವತಿ, ಕಾಳಿಂದಿ, ಮಿತ್ರಾವಿಂದ, ನಾಗನಜತಿ, ಭದ್ರಾ,ಲಕ್ಷ್ಮಣ ಎಂಟು ಜನ ಪಟ್ಟದ ರಾಣಿಯರು ಜೊತೆಗೆ ನರಕಾಸುರನಿಂದ ರಕ್ಷಿಸಲ್ಪಟ್ಟ 16100 ಹೆಣ್ಣು ಮಕ್ಕಳನ್ನು ಮದುವೆಯಾದ ಮಾಧವ. ಇಂದ್ರೀಯವನ್ನು ಹಿಡಿದಿಡುವ ಬಗ್ಗೆ ಜನರಿಗೆ ಬೋಧಿಸಿದ ಹೃಷಿಕೇಶ. ದುರ್ಯೋಧನ ಆಣತಿಯಂತೆ ದುಶ್ಯಾಸನ ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡಲು ಮುಂದಾದಾಗ ಅಕ್ಷಯಾಂಬರವನ್ನು ದಯಾಪಾಲಿಸಿ , ಹೆಣ್ಣಿನ ಮಾನ ಪ್ರಾಣ ರಕ್ಷಣೆ ಮಾಡಬೇಕು ಎಂಬ ನೀತಿಯನ್ನು ಕಲಿಯುವಂತೆ ಮಾಡಿದ. ದ್ರೌಪದಿಯು ಹಿಂದೆ ತನ್ನ ರಕ್ಷಣೆಗಾಗಿ ಕೈಗೆ ಕಟ್ಟಿದ ಸಾರಿಯ ತುಂಡು ಮುಂದೆ ಅವಳ ಅಣ್ಣನಾಗಿ ರಕ್ಷಣೆ ಮಾಡಿದ ಕೇಶವ. ರಕ್ಷಾಬಂಧನದಂದು ರಾಖಿ ಕಟ್ಟಿ ಅಣ್ಣಾ ಎಂದು ಕರೆಯದವ ಎಂದೂ ಅವಳ ಬಗ್ಗೆ ಬೇರೆ ಯೋಚಿಸಬಾರದು ಎಂಬ ನೀತಿ ಪಾಠ ಕೃಷ್ಣ ದ್ವಾಪರದಲ್ಲಿಯೇ ಜಗತ್ತಿಗೆ ನೀಡಿದ್ದಾನೆ.

ಕುಂತಿಯ ಕರೆಗೆ ಓಗೊಟ್ಟು ಪಾಂಡವರ ರಕ್ಷಣೆಗೆ ನಿಂತ ಜಗನ್ನಾಥ. ಸದಾ ಸಜ್ಜನರ ಪರವಾಗಿ ಕೆಲಸ ಮಾಡಬೇಕು ಎಂಬುದನ್ನು ತಿಳಿಸಿದ ಆಗಿರಬಹುದು ಅಲ್ಲವೇ.. ಬಾಲ್ಯದ ಗೆಳೆಯ ಕುಚೇಲನಿಂದ ಪುಡಿ ಅವಲಕ್ಕಿಯನ್ನು ಮೃಷ್ಟಾನ್ನ ಎಂದು ತಿಂದು ಸುಧಾಮನ ಕಷ್ಟ ನೀಗಿಸಿದಲ್ಲದೆ , ಗೆಳೆತನದ ಮಹತ್ವ ಜಗತ್ತಿಗೆ ಸಾರಿದ. ದಾನಶೂರ ವಿಧುರ ಮನೆಯಲ್ಲಿ ಹಾಲು ಕುಡಿದು ಹಾಲಿನ ಹೊಳೆಯನ್ನೇ ಹರಿಸಿದ. ಬಡವರು, ಶ್ರೀಮಂತರು, ದೊಡ್ಡದು, ಸಣ್ಣದು ಎಂಬ ಭೇದ ಸಲ್ಲದು ಎಂದು ಜಗತ್ತಿಗೆ ಸಾರಿದ ದ್ವಾರಕಾದೀಶ. ಸತ್ತ ಮಗುವಿಗೆ ಜನ್ಮ ನೀಡಿ ಕರುಳು ಕಿತ್ತು ಬರುವಂತೆ ರೋದಿಸುವ ಉತ್ತರೆಯ ಮಗು ಪರೀಕ್ಷೀತನನ್ನು ಬದುಕಿಸಿ ಮಾತೆಯ ದುಃಖ ಶಮನ ಮಾಡಿದ. ಕಷ್ಟ ಎಂದು ಕೂಗಿದವರ ಬಳಿಗೆ ಓಡಿ ಹೋಗಿ ಕಷ್ಟವನ್ನು ನೀಗಿಸುವ ವಿಠಲ. ಚಕ್ರ(ಸುರ್ದಶನ)ವನ್ನು ಕೈಯಲ್ಲಿ ಹಿಡಿದು ಸಾವಿರಾರು ದುಷ್ಟರ ಸಂಹಾರ ಮಾಡಿದ ಚಕ್ರಧಾರಿ. ಯೋಗಿಗಳಿಗೆಲ್ಲಾ ಸ್ವಾಮಿಯಾದ ಯೋಗ್ವೇಶ್ವರ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ಮಾದರಿಯಾದ.

ಜಗತ್ ಪಾಲಕ ಶ್ರೀ ಕೃಷ್ಣನ ಪ್ರತಿಯೊಂದು ಹೆಸರೂ ಬೇರೆ ಬೇರೆ ಅರ್ಥದಿಂದ ಕೂಡಿದೆ. ಅಚ್ಯುತ ಎಂದರೆ ಯಾವುದೇ ದೋಷ ಇಲ್ಲದವನು. ಜೀವನದಲ್ಲಿ ಹುಟ್ಟಿನಿಂದ ಸಾವಿನ ವರೆಗೂ ಶಿಷ್ಟರಿಗೆ ರಕ್ಷಕನಾಗಿ, ದುಷ್ಟರ ನಾಶ ಮಾಡುತ್ತಾ ಬದುಕಿದ. ಅಹಂಕಾರದಿಂದ ಮೆರೆದವರ ಅಹಂಕಾರವನ್ನು ಮುರಿದು ಧರ್ಮ ಸಂಸ್ಥಾಪಕನಾದ. ತನ್ನ ವಂಶದವರಾದ ಯಾದವರು ಅಹಂಕಾರದಿಂದ ಸಪ್ತ ಋಷಿಗಳಿಗೆ ಸಾಂಬಾ (ಜಾಂಬವತಿ ಕೃಷ್ಣನ ಮಗ) ನ ಮೂಲಕ ಅವಮಾನ ಮಾಡಿದಾಗ ಶಾಪ ಗ್ರಸ್ಥರಾಗಿ ಒನಕೆಯಿಂದ ನಾಶ ಹೊಂದುತ್ತಾರೆ. ಅದೇ ಒನಕೆಯ ಉಳಿದ ತುಂಡು ನದಿಗೆ ಎಸೆಯಲ್ಪಟ್ಟದ್ದು ಮುಂದೆ ಬೇಡನ ಕೈಯಲ್ಲಿ ಬಾಣವಾಗಿ ಕೃಷ್ಣನ ಕಾಲಿಗೆ ಚುಚ್ಚಿ ಕೃಷ್ಣನ ಅವಸಾನವಾಗುತ್ತದೆ. ಎಂತವನನ್ನೂ (ದೇವ ಮಾನವ ನನ್ನೂ) ಮಾಡಿದ ಪಾಪ ಬೆನ್ನು ಬಿಡದೆ ನಾಶ ಮಾಡುತ್ತದೆ ಎಂಬುದು ಇದರಿಂದ ಜಗತ್ತಿಗೆ ಸಾರಿದ. ಅಷ್ಟೇ ಅಲ್ಲದೆ ಗಾಂಧಾರಿ ತನ್ನ ಕುರುವಂಶದ ನಾಶದ ದುಃಖದಿಂದ ಕೃಷ್ಣನಿಗೆ ನಿನ್ನ ವಂಶವೂ ಇದೇ ತರಹ ನಾಶವಾಗಲಿ ಎಂಬ ಶಾಪವೂ ಇಲ್ಲಿ ಫಲಿಸಿತು ಎಂಬುದಂತೂ ಸತ್ಯ. ಜೀವನದಲ್ಲಿ ಹಿರಿಯರು, ಗುರುಗಳಿಂದ ಶಾಪ ಪಡೆಯ ಬಾರದು ಎಂಬ ನೀತಿಯನ್ನೂ ಕೃಷ್ಣನ ಬದುಕಿನಿಂದ ನಾವೂ ಕಲಿಯಬಹುದು.


ಶ್ರೀಕೃಷ್ಣ ರಾಜನಾಗಿ ಮೆರೆದರೂ ಜೀವನದುದ್ದಕ್ಕೂ ಏರುಪೇರುಗಳ ಅನುಭವಿಸಿ ಬಾಳಿದ. ಬಾಲ್ಯದ ಚೇಷ್ಟೆ, ತುಂಟಾಟಗಳು ಒಂದೆಡೆಯಾದರೆ, ಮುಂದೆ ಕಂಸನ ಅವಸಾನದ ಬಳಿಕ ರಾಜನಾಗಿ ಕರ್ತವ್ಯ ನಿರ್ವಹಿಸಿ, ಉತ್ತಮ ರಾಜನು ಹೇಗಿರಬೇಕೆಂಬ ಪಾಠ ಮಾಡಿದ. ಗೆಳೆಯನಾಗಿ, ಸಖನಾಗಿ ಪಾಂಡವರ ರಕ್ಷಣೆಗೆ ನಿಂತು ಜಗತ್ತಿಗೆ ಅರ್ಜುನನ ಮೂಲಕ ಭಗವದ್ಗೀತೆ ಬೋಧಿಸಿದ. ಉತ್ತಮ ಜೀವನದ ಸೂತ್ರಗಳೆಲ್ಲಾ ಅದರಲ್ಲಿ ಅಡಕವಾಗಿ, ಇಂದು ಅದು ಜನರಿಗೆ ದಾರಿದೀಪವಾಗಿದೆ ಎಂಬುದು ಸುಳ್ಳಲ್ಲ. ತಾನೇ ತನ್ನಿಂದಲೇ ಎಲ್ಲಾ ಎಂಬ ಅಹಂಕಾರದಿಂದ ಮೆರೆದ ಸುರ್ದಶನ, ಭೀಮ ,ಅರ್ಜುನ ಮುಂತಾದವರಿಗೆ ಬದುಕಿನ ಪಾಠ ಕಲಿಸಿದ. ಮನುಜನು ನಿಮಿತ್ತ ಮಾತ್ರ. ಎಲ್ಲವೂ ದೇವರ ಇಚ್ಛೆ. ಅವನು ಇಚ್ಛೆ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲುಗಾಡದು ಎಂಬ ಸತ್ಯವನ್ನು ತಿಳಿಸಿದ ಪರಬ್ರಹ್ಮ ಪಾಂಡುರಂಗ ನಿಗೆ ವಂದಿಸುತ್ತೇನೆ. ಜಗತ್ತಿನ ಸೂತ್ರಧಾರಿಯಾದ ಜಗನ್ನಾಥ ಎಲ್ಲರಿಗೂ ಸಂನ್ಮಂಗಳವನ್ನು ನೀಡಲಿ.🙏🏽

ನನ್ನೆಲ್ಲಾ ಓದುಗರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಕಾರ್ಯಗಳು 🙏🏽







ಸುಮಾ ಭಂಡಾರಿ ಸುರತ್ಕಲ್




ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹತ್ವ-ರಮ್ಯಾ ಶ್ರೀಪಾಲ್ ಭಂಡಾರಿ ತೊಕ್ಕೊಟ್ಟು

 ಚಂದ್ರಮಾನ ಪಂಚಾಂಗ ರೀತ್ಯಾ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು . ಸೌರಮಾನ ಪಂಚಾಂಗ ರೀತ್ಯಾ ಸಿಂಹ ಮಾಸದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು. ಇದಲ್ಲದೆ ವರಾಹ ಪುರಾಣದ ಪ್ರಕಾರ ಶ್ರೀಕೃಷ್ಣನ ಜನ್ಮವು ಆಷಾಢ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಯಿತು. ಆ ಸಂದರ್ಭದಲ್ಲಿ ಚಂದ್ರಮಾನದ ಶ್ರಾವಣ ಮಾಸವೇ ಸೌರಮಾನದ ಸಿಂಹಮಾಸವಾಗಿತ್ತು. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿಯೇ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವುದು ವಾಡಿಕೆ .ದೇಶದ ವಿವಿಧ ಪ್ರದೇಶಗಳಲ್ಲಿ ತಮ್ಮದೇ ವೈಖರಿಯಲ್ಲಿ ಶ್ರೀಕೃಷ್ಣನನ್ನು ಆರಾಧಿಸುವರು ಪೂಜಿಸುವರು ಇದೇ ದಿನವನ್ನು ಗೋಕುಲಂ ಗೋಕುಲಾಷ್ಟಮಿಯೆಂದೂ , ಶ್ರೀಕೃಷ್ಣ ಜನ್ಮಾಷ್ಟಮಿಯಂದೂ , ಜನ್ಮಾಷ್ಟಮಿಯೆಂದೂ ಕರೆಯುವರು .


ವರಾಹ ಪುರಾಣದಲ್ಲಿ ಉಲ್ಲೇಖಿಸಿದಂತೆ ಅಂದು ರಾತ್ರಿ ಸ್ತ್ರೀಯು ಪತಿಯೊಡನೆ ಉಪವಾಸವಿದ್ದು ವ್ರತವನ್ನಾಚರಿಸಿದರೆ ಅವಳ ಹೃದಯದಲ್ಲಿ ಭಗವಂತನು ಕಾಣಿಸಿಕೊಳ್ಳುವನು ಅಂಥವರಿಗೆ ಒಳ್ಳೆಯ ಸಂತಾನ ಮತ್ತು ಸಂಪತ್ತು ದೊರೆಯುತ್ತದೆ ಎಂದು ಪುರಾಣದಲ್ಲಿ ಹೇಳಲಾಗಿದೆ. ತಿಥಿ ತತ್ತ್ವ ಎಂಬ ಗ್ರಂಥದಲ್ಲಿ ಜಯಂತಿಯ ಆಚರಣೆ ಬಗ್ಗೆ ಹೀಗೆ ಹೇಳಿದೆ ಜಯಂತಿ ಯೋಗವು ಒಂದು ದಿವಸ ಮಾತ್ರವಿದ್ದರೆ ಅಂದೇ ಉಪವಾಸ ಪೂಜೆಯನ್ನು ಮಾಡಬೇಕು. ಆ ಯೋಗವು ಎರಡು ದಿವಸ ಇದ್ದರೆ, ಎರಡನೇ ದಿನದಲ್ಲಿ ವ್ರತದ ಆಚರಣೆ ಮಾಡಬೇಕು ಜಯಂತಿ ಯೋಗವು ಇಲ್ಲದಿದ್ದರೆ ರೋಹಿಣಿ ನಕ್ಷತ್ರದಿಂದ ಕೂಡಿದ ಅಷ್ಟಮಿಯಂದು ವ್ರತವನ್ನಾಚರಿಸಬೇಕು ಎರಡು ದಿನಗಳಲ್ಲೂ ರೋಹಿಣಿ ನಕ್ಷತ್ರಕ್ಕೆ ಸೇರಿದ ಅಷ್ಟಮಿಯಿದ್ದರೆ ಉಪವಾಸವನ್ನು ಎರಡನೇ ದಿನದಲ್ಲಿ ಆಚರಿಸಬೇಕು ರೋಹಿಣಿ ನಕ್ಷತ್ರವು ಇಲ್ಲದಿದ್ದರೆ ಅರ್ಧ ರಾತ್ರಿಯಲ್ಲಿರುವ ಅಷ್ಟಮಿಯನ್ನು ಆಚರಿಸಬೇಕು . ತಿಥಿ ಯೋಗವಿಲ್ಲದಿದ್ದರೂ ಕೇವಲ ರೋಹಿಣಿ ನಕ್ಷತ್ರದಲ್ಲೇ ಪೂಜೆಯನ್ನು ಮಾಡಬೇಕು . ರೋಹಿಣಿ ನಕ್ಷತ್ರ ಮತ್ತು ಅಷ್ಟಮಿ ತಿಥಿ ಎರಡೂ ಒಟ್ಟಿಗೆ ಕೂಡಿ ಬರದಿದ್ದರೆ ಎರಡರಲ್ಲಿ ಯಾವುದಾದರೂ ಒಂದಕ್ಕೆ ಪ್ರಾಧನ್ಯ ಕೊಟ್ಟು ವ್ರತವನ್ನಾಚರಿಸಬೇಕು .

ಅವತಾರ ಪುರುಷ

ಶ್ರೀಮನ್ನಾರಾಯಣನ ದಶಾವತಾರಗಳಲ್ಲಿ ಒಂಭತ್ತನೆಯ ಅವತಾರವೇ ಶ್ರೀ ಕೃಷ್ಣ. ಮನುಷ್ಯರಂತೆ ವ್ಯವಹರಿಸಿ ಅಮೋಘವಾದ ಜ್ಞಾನ, ಬಲ, ಶಕ್ತಿ , ತೇಜಸ್ಸುಗಳನ್ನು ಮತ್ತು ಆತ್ಮ ಗುಣ ಸಂಪತ್ತನ್ನೂ ಪ್ರದರ್ಶಿಸಿದ ಪರಮಪುರುಷ ಗೋವುಗಳನ್ನು , ಗೋಪಾಲಕರನ್ನೂ , ಪಶು ,ಪಕ್ಷಿ ,ವೃಕ್ಷ , ವನಸ್ಪತಿಗಳನ್ನು ಸಂರಕ್ಷಿಸಿ ಉದ್ಧರಿಸಿದ ಪರಮಾತ್ಮ . ಮಹಾಭಾರತದ ಸೂತ್ರಧಾರ ಭಗವದ್ಗೀತೆಯ ಮೂಲಕ ಅಧ್ಯಾತ್ಮ ತತ್ವವನ್ನು ಉಪದೇಶಿಸಿದ ಯೋಗಾಚಾರ್ಯ. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ನೀತಿಯನ್ನೂ ಧರ್ಮವನ್ನೂ ಉಪದೇಶಿಸುತ್ತಾನೆ . ಮಧುರೆಯ ತಾಯಿ ಮತ್ತು ತಂದೆ ಸೆರೆಮನೆಯಲ್ಲಿರುವಾಗ ಅಲ್ಲಿ ಹುಟ್ಟಿದ ವಸುದೇವ -- ದೇವಕಿ ಕುಟುಂಬದ ಎಂಟನೇ ಮಗು ಶ್ರೀವಾಸುದೇವ. ಗೋಕುಲದಲ್ಲಿ ಯಶೋದೆಯ ಮುದ್ದು ಪೋರನಾಗಿ ಬೆಳೆದು ಅಕ್ಕ ಪಕ್ಕದ ಮನೆಯಲ್ಲಿಹ ಬೆಣ್ಣೆ ಕದ್ದು ತಿಂದು ತುಂಟತನದಲ್ಲಿ ಮಕ್ಕಳಿಗೆ ಗುರುವಾಗಿದ್ದ .


ಅಷ್ಟೇ ಅಲ್ಲದೆ ಬಾಯಲ್ಲಿ ಮಣ್ಣು ಹಾಕಿಕೊಂಡು ತನ್ನ ತಾಯಿಗೆ ವಿಶ್ವರೂಪ ದರ್ಶನ ಮಾಡಿಸಿದ ವಿಶ್ವರೂಪಿ . ಜಾಂಬವಂತನಿಂದ ಸ್ಯಮಂತಕ ಮಣಿಯನ್ನು ಪಡೆದ ದೈವರೂಪಿ. ವಾಸುಕಿ ಎಂಬ ಕಾಳಸರ್ಪವನ್ನು ಸಂಹರಿಸಿ ಜನಗಳನ್ನು ಸಂರಕ್ಷಿಸಿದವನು . ಬಲರಾಮನ ತಮ್ಮ ಮತ್ತು ಕುಚೇಲನ ಆಪ್ತ ಮಿತ್ರ .
ಇವನಿಗೆ ಅವಲಕ್ಕಿ ಬಹು ಪ್ರಿಯವಾದ ತಿನಿಸು .








ರಮ್ಯಾ ಶ್ರೀಪಾಲ್ ಭಂಡಾರಿ ತೊಕ್ಕೊಟ್ಟು


ನೀಲಿ ಬಣ್ಣ ಮೂಲಕವೇ ಕೃಷ್ಣನ ಗುರುತಿಸುವಿಕೆ ಯಾಕೆ? -ಸೀತಾರಾಮ ಭಂಡಾರಿ, ಕೋಣಾಜೆ

 ಹತ್ತು ಅವತಾರಗಳಲ್ಲಿ ಕೃಷ್ಣಾವತಾರವೂ ಒಂದು. ಕೃಷ್ಣನಿಗೇಕೆ ನೀಲಿ ಬಣ್ಣ ಎಂದು ಯಾವ ಗ್ರಂಥದಲ್ಲೂ ಸರಿಯಾದ ಸ್ಪಷ್ಟೀಕರಣ ದೊರೆಯುವುದಿಲ್ಲ.

ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನಕ್ಕೆಂದು 1893 ರಲ್ಲಿ ಅಮೇರಿಕಾದ ಚಿಕಾಗೊ ಇಲ್ಲಿಗೆ ಭೇಟಿ ನೀಡಿದ್ದರು. ಆಗ ಅಲ್ಲಿಗೆ ಬಂದಿದ್ದ ಕ್ರೈಸ್ತ ಪಾದ್ರಿಯೊಬ್ಬರು ವಿವೇಕಾನಂದರಲ್ಲಿ ಮಾತಾಡುತ್ತಾ ಶ್ರೀ ಕೃಷ್ಣನನ್ನು ನಿವೇಕೆ ನೀಲಿ ಬಣ್ಣದ ಮೂಲಕ ಗುರುತಿಸುತಿದ್ದೀರಿ ಎಂದರಂತೆ.

ಅದಕ್ಕೆ ಶ್ರೀ ವಿವೇಕಾನಂದರು ಉತ್ತರಿಸಿದ ಪರಿ ಹೀಗಿತ್ತು:

ಭೂಮಿಯ ಪೃಕೃತಿಯನ್ನು ಹತ್ತಿರದಿಂದ ನೋಡುವಾಗ ನಮಗೆ ಹಸಿರಾಗಿ ಕಾಣುತ್ತೇವೆ. ಅದೇ ಪ್ರಕೃತಿ ಸೌಂದರ್ಯವನ್ನು ಅತ್ಯಂತ ದೂರದಿಂದ ನೋಡಿದಾಗ ಪ್ರಕೃತಿ ಹಸಿರಿನ ಬದಲು ಸಂಪೂರ್ಣ ನೀಲಿಮಯವಾಗಿ ಗೋಚರಿಸುವುದು ವಿಜ್ಞಾನ ಸತ್ಯ.

ಹಾಗೆಯೇ ಸಮುದ್ರವನ್ನು ಹತ್ತಿರದಿಂದ ನೋಡುವಾಗ ನೀರು ಹಸಿರುಮಯವಾಗಿ ಕಾಣುತ್ತದೆ. ಅತ್ಯಂತ ದೂರದಿಂದ ಸಮೂದ್ರವನ್ನು ನೋಡಿದಾಗ ಸಮುದ್ರವೂ ನೀಲಿಮಯವಾಗಿ ಕಣ್ಣಿಗೆ ಗೋಚರಿಸುತ್ತದೆ.



ಹಾಗೆಯೇ ಆಕಾಶವನ್ನು ಹತ್ತಿರದಿಂದ ನೋಡುವಾಗ ಅಲ್ಲಲ್ಲಿ ಮೋಡ ಮುಸುಕಿದಂತೆ ಕಾಣುತ್ತದೆ.ಆದರೆ ಇಡೀ ನಭೋಮಂಡಲವನ್ನು ಸಮಗ್ರವಾಗಿ ಒಟ್ಟಾಗಿ ವೀಕ್ಷಿಸಿದಾಗ ನಭೋಮಂಡಲವೂ ನೀಲಿಮಯ.

ಅಂದರೆ ಭೂಮಿ, ಸಮೂದ್ರ ಹಾಗೂ ಆಕಾಶ ಇವುಗಳ ಒಟ್ಟು ಸಂಗಮವೇ ನೀಲಿಮಯ.





ತಾಯಿಗೆ ಬಾಯೊಳು ಮೂಜಗ ತೋರಿದ ಅಂದರೆ ಈಡೀ ಭೂಮಂಡಲದ ಪ್ರತೀಕ ಶ್ರೀ ಕೃಷ್ಣ ಎಂಬುದೇ ಅರ್ಥವೆಂದು ಸ್ವಾಮಿ ವಿವೇಕಾನಂದರು ಪಾದ್ರಿಗೆ ತಿಳಿಸಿದರು ಎನ್ನುವ ಪುಸ್ತಕವನ್ನು ನಾನು ಶ್ರೀ ರಾಮಕೃಷ್ಣ ಆಶ್ರಮದಲ್ಲಿ ವಿದ್ಯಾರ್ಥಿಯಾಗಿದ್ದಾಗ ಓದಿದ ನನ್ನ ನೆನಪಿನ ಸಾರಾಂಶವನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳಬಯಸುತ್ತೇನೆ.

ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ವೈಜ್ಞಾನಿಕವಾಗಿ ಹೇಗೆ ಪ್ರತಿಪಾದಿಸಿದರು ಎನ್ನುವುದಕ್ಕೆ ಇದೊಂದು ಸಾಕ್ಷಿ🙏🙏🙏










-ಸೀತಾರಾಮ ಭಂಡಾರಿ, ಕೋಣಾಜೆ


ಭಗವದ್ಗೀತೆಯ ಸಂದೇಶ-ಪ್ರಕೃತಿ ಭಂಡಾರಿ ಆಲಂಕಾರು

 ದೇವಕಿಯ ಎಂಟನೇ ಕಂದ.

ಮಾವ ಕಂಸನ ವಧೆಗೆಂದು ಬಂದ,
ನೂರೆಂಟು ನಾಮಧೇಯದ ಮುಕುಂದ.

ಎನ್ನ ಮನದಲಿರುವ ನೋವ ಕೇಳಿ..
ನುಡಿಸುವೆಯ ನೀ ಗಾನ ಮುರಳಿ?
ಸುಖದಿ ತೇರನೇರುವೆ ನಾ ಮರಳಿ.








ಭಕ್ತಿಯಿಂದ ನಿನ್ನ ಬಳಿ ಬಂದೆ,

ಕಷ್ಟ ದಾರಿಯಲಿ ಕೈ ಹಿಡಿಯೋ ತಂದೆ!
ನೆರಳಿನ ಹಾಗೆ ಎಂದೆಂದಿಗೂ ಇರು ಬೆನ್ನ ಹಿಂದೆ!!

ಗರಿ ಬಿಚ್ಚಿ ಕುಣಿದಾಡುವುದು ಈ ಮನವು..
ತೋರುಲು ನೀ ಎನಗೆ ವಿಶೇಷ ಒಲವು,
ಬದುಕಿನಲಿ ನನಗದುವೇ ಶ್ರೇಷ್ಠ ಗೆಲುವು.









ಕೊಳಲಿನಂತೆ ನಾ ಆಗಲು ಶರಣಾಗತಿ
ಎನ್ನ ಮನ ಬಯಸುತಿದೆ ಗೋಪಿಕಾಪತಿ
ಜೀವನದಲ್ಲಿ ಮೀರಲಾರೆ ನಿನ್ನ ಆಣತಿ.

ಅರ್ಜುನನಿಗೆ ನೀಡುತ ಉಪದೇಶ..
ಸಾರಿದೆ ಭಗವದ್ಗೀತೆಯಲಿ ಸಂದೇಶ,
ಅರಿತುಕೊಳ್ಳಲು ಬದುಕಿನ ಸದುದ್ದೇಶ.

 ಪ್ರಕೃತಿ ಭಂಡಾರಿ ಆಲಂಕಾರು