ಈ ಪದ್ಧತಿ 1975-77 ರ ಮಧ್ಯದ ತುರ್ತು ಪರಿಸ್ಥಿತಿಯ ವೇಳೆ ಮಾನ್ಯ ದೇವರಾಜ್ ಅರಸು ಮುಖ್ಯ ಮಂತ್ರಿ ಕಾಲಾವಧಿಯಲ್ಲಿ ಕ್ಯಾಬಿನೆಟ್ ದರ್ಜೆಯ ಪೌರಾಡಳಿತ ಸಚಿವರಾಗಿದ್ದ ನೇರ ನಡೆಯ ಶ್ರೀ ಬಸವ ಲಿಂಗಪ್ಪನವರ ಖಡಕ್ಕ್ ರಾಜ್ಯಾದೇಶದ ಪ್ರಕಾರ ಕರ್ನಾಟಕದಲ್ಲಿ ಬಹಳಷ್ಟು ಪಾಲು ಈ ಪದ್ಧತಿ ನಿಗದಿತ ಅವಧಿಯೊಳಗೆ ನಿಂತೇ ಹೋಯ್ತು.
ಈ ಪದ್ಧತಿಯನ್ನು ಕಳೆದ 45 ವರುಷಗಳ ಹಿಂದೆ ಕಠಿಣ ಆದ್ಯಾದೇಶದ ಮೂಲಕ ಮನುಷ್ಯನ ಮಲವನ್ನು ಮನುಷ್ಯನೇ ಹೊರುವ ಜೀತ ಪದ್ಧತಿಯನ್ನು ತತ್ಕ್ಷಣವೇ ನಿಲ್ಲಿಸಲು ಆಜ್ನಾಪಿಸಿದ ಮಾನ್ಯ ಬಸವ ಲಿಂಗಪ್ಪನವರಿಗೆ ಅನಂತ ಕೃತಜ್ಞತೆಗಳು.
ಮೇಲೆ ಹೇಳಿದ ರೀತ್ಯಾ ಮಲ ಹೊರುವ ಪದ್ಧತಿಯ ವಿಚಾರ ಕನಿಷ್ಟ 55 ವರುಷಗಳ ಆಸುಪಾಸಿನವರಿಗೆ ತಿಳಿದಿಲಿಕ್ಕಿಲ್ಲ.
ಈ ವಿಷಯವನ್ನು ನಾನು ಬರೆಯಲು ಕಾರಣ ಇಂತಹ ಪದ್ಧತಿ ಕೇವಲ 50 ವರುಷಗಳ ಹಿಂದೆ ಕರ್ನಾಟಕದ ನಗರ ಭಾಗಗಳಲ್ಲಿ ಅರ್ಥಾತ್ municipality area ದಲ್ಲಿತ್ತು.
ಉಳಿದ ಗ್ರಾಮೀಣ ಪ್ರದೇಶದಲ್ಲಿ ಬಯಲು ಶೌಚಾಲಯವಾದರೆ ನಗರ ಪ್ರದೇಶದಲ್ಲಿ ಮಾರ್ಗದ ಇಕ್ಕೆಲಗಳಲ್ಲಿ ರಾತ್ರಿ ಹಾಗೂ ಬೆಳ್ಳಂಬೆಳಿಗ್ಗೆ ಕದ್ದು ಮುಚ್ಚಿ ಮಲ ವಿಸರ್ಜಿಸಿ ಕಣ್ಮರೆಯಾಗುವ ಪಧ್ಧತಿ ಇತ್ತು.
1967 ರಲ್ಲಿ ನಮ್ಮ ಕುಟುಂಬ ಮಂಗಳೂರಿಗೆ ಬಂದು ಮಲ್ಲಿಕಟ್ಟೆಯ ಬಾಡಿಗೆ ಮನೆಯಲ್ಲಿ ನೆಲೆಸಿದ ಕಾಲ. ತಾಗಿಕೊಂಡ ದೊಡ್ಡ ಮನೆ, ಮನೆ ಮಾಲೀಕರ ಸಂಸಾರ.
ಮನೆಯ ಅಂಗಳದ ಮುಂದೆ ಎರಡು ಜೋಡಿ ಪಾಯಿಖಾನೆಗಳು. ಒಂದು ಮಾಲೀಕರಿಗೆ ಮತ್ತೊಂದು ಬಾಡಿಗೆಯಲ್ಲಿರುವ ನಮ್ಮ ಮನೆ ಸದಸ್ಯರಿಗೆ.
ಪಾಯಿಖಾನೆಗೆ ನನ್ನ ಪ್ರಥಮ ಪ್ರವೇಶದ ಅನುಭವ
ಉರಿನಿಂದ ಬಂದ ಮಾರನೆಯ ಬೆಳಿಗ್ಗೆ ಬಯಲು ಶೌಚಾಲಯ ಇಲ್ಲದ ನನಗೆ ಮನಸ್ಸಿಗೆ ಸ್ವಲ್ಪ ಅಂಜಿಕೆ ಮುಜುಗುರವಾದರೂ ತೀವ್ರ ಕೆಳಮುಖ ಒತ್ತಡ ತಡೆಯಲಾರದೆ ನನ್ನ ನಡೆ ಪಾಯಿಖಾನೆ ಕಡೆ ಬಳಿಹೋಗಿ ಬಾಗಿಲು ತೆರೆದು ಬಾಗಿಲು ಮುಚ್ಚಿದೆ..
ಪಾಯಿಖಾನೆಯಲ್ಲಿ ಈಗಿನ ತರಹ ಬೇಸಿನೇ ಇಲ್ಲ. ಅದರ ಬದಲು ಬೇಸಿನ್ ಬದಲು ಅಷ್ಟು ಜಾಗ ಖಾಲಿಯಾಗಿ ಕೆಳಗೆ 4-6 ಅಡಿ ಆಳದ ಚೌಕಾಕಾರದ ಸಿಮೆಂಟಿನ ಹೊಂಡ. ಹೊಂಡದ ಎತ್ತರ ಭಾಗದಲ್ಲಿ ನಮ್ಮ ಕಾಲುಗಳನ್ನು ಎಡ ಬಲಕ್ಕೆ ಸರಿಸಿ ಮಲ ವಿಸರ್ಜನೆ ಮಾಡುವ ರೀತಿ ಹೇಗಿತ್ತೆಂದರೆ ನಮ್ಮೂರಿನ ಕೊಟ್ಟಿಗೆಯಲ್ಲಿರುವ ಗೋವುಗಳು ಸೆಗಣಿ ಹಾಕಿ ಅದರ ಮೇಲೆ ಮೂತ್ರ ವಿಸರ್ಜಿಸಿದಂತೆ ಆಗುತಿತ್ತು. ಆದರೆ ಮನುಷ್ಯ್ ಇನ್ನೂ ಹೆಚ್ಚುವರಿಯಾಗಿ ಅಂಗಾಂಗ ಶುದ್ಧಗೊಳಿಸಲು ನೀರು ಬಳಸುವುದರಿಂದ ಕೆಳಗೆ ಬಿದ್ದ ಅನೇಕ ಮಂದಿಯ ಮಲ ಮೂತ್ರಗಳ ರಾಶಿಯನ್ನು ಯಾವುದಕ್ಕೂ ಹೋಲಿಸಲಾರೆ.
ಸಾಂದರ್ಭಿಕ ಚಿತ್ರ
ಪಾಯಿಖಾನೆಯ ಈ ಮಲದ ರಾಶಿಯನ್ನು ಕೊಂಡು ಹೋಗಲು ಮುನ್ಸಿಪಾಲಿಟಿ ವತಿಯಿಂದ ಶುಚಿಗೊಳಿಸುವ ಕಾರ್ಮಿಕರು ಬರುತಿದ್ದರು. ಆದರೆ ಈ ಕಾರ್ಮಿಕರಿಗೆಮುಖ ಕವಚವಾಗಲಿ, ಕೈಗೆ ಗ್ಲೌಸುಗಳಾಗಲಿ, ಕಾಲಿಗೆ ಬೂಟ್ಸುಗಳು ಯಾವುದೂ ಇಲ್ಲದೆ ಬರಿಗೈಯ್ಯಲ್ಲಿಯೆ ತಗಡನ್ನು ಬಳಸಿ ಕೆರೆಯುತ್ತಾ ದೊಡ್ಡ ಗಾತ್ರದ ಬಕೆಟ್ ಗೆ ಹಾಕುತಿದ್ದರು. ಬಕೆಟ್ ತುಂಬಿದ ಬಳಿಕ ಬಕೆಟ್ ನ್ನು ತಲೆಯ ಮೇಲಿಟ್ಟು ತಲೆ ಹೊರೆಯಲ್ಲೇ ಮಲವನ್ನು ಮಂಗಳೂರು ನಗರದ ನಿರ್ಧಿಷ್ಟ ಪ್ರದೇಶಕ್ಕೆ ಹಲವು ಮೈಲು ನಡೆದುಕೊಂಡೇ ಹೋಗಿ ಆ ದಿನದ ತ್ಯಾಜ್ಯವನ್ನು ವಿಲೇವಾರಿ ಮಾಡುತಿದ್ದರು.
ನನ್ನ ಮನಸ್ಸಿನಲ್ಲಿ ಅತೀ ಆಳವಾಗಿ ಮನನೋಯಿಸಿದ ಸನ್ನಿವೇಶ ಏನೆಂದರೆ, ಮಲವನ್ನು ತಲೆ ಹೊರೆಯಲ್ಲಿ ಕೊಂಡು ಹೋಗುವಾಗ ತಗಡಿನ ಡಬ್ಬದೊಳಗೆ ಕಲಕಿತಗೊಂಡ ನೀರು ಮಿಶ್ರಿತ ತೆಳು ಮಲವು ಹೊತ್ತುಕೊಂಡವನ ತಲೆಗೆ ಬಿದ್ದು, ಅಲ್ಲಿಂದ ಮುಖ ಭಾಗದ ಅಂಗಾಂಗಳ ಮೇಲೆ ಹರಿದು ಆಮೇಲೆ ಧರಿಸಿದ ಖಾಕಿ ಅಂಗಿ ಚಡ್ಡಿಯ ಮೇಲೆ ಮಲ ಹರಿದು ಕೊನೆಗೆ ಹೊತ್ತುಕೊಂಡವನ ಕಾಲಿನ ಪಾದದವರೆಗೂ ಹರಿಯುತಿತ್ತು ಕಣ್ಣಾರೆ ಕಾಣುತಿದ್ದ ಹಾಗು ಕಂಡಿದ್ದ ಹಿರಿಯ ಪೀಳಿಗೆಯವರಿಗೆ ಸ್ಪಷ್ಟ ಅರಿವು ಇರಬಹುದು.
ನಾನು 9ನೇ ತರಗತಿಯಲ್ಲಿರುವ ವೇಳೆ ಅದೊಂದು ದಿನ ನಾನು ಶಾಲೆಯಿಂದ ಹಿಂತಿರುಗುವ ವೇಳೆ ಮಾರ್ಗದ ಬದಿಯಲ್ಲಿ ಮಲದ ಡಬ್ಬಿಯನ್ನು ತಲೆಯಿಂದ ಕೆಳಗಿರಿಸಿ ಹೊರುವ ಕಾರ್ಮಿಕ ವಿಶ್ರಾಂತಿಯಲ್ಲಿದ್ದರು.
ನನ್ನನ್ನು ಕಂಡು "ಓ ಬಾಲೆ ಎಂಕ್ ದಾಲ ತೀರುಜಿ, ಕೈಕಾರ್ ಬಚ್ಚಿದ್ಂಡ್ ಒಂತೆ ಡಬ್ಬಿ ದೆರ್ಪರೆ ಕೈ ಕೊರೋಲಿಯಾ" ಎಂದು ಆ ಕಾರ್ಮಿಕ ಮಾರ್ಮಿಕವಾಗಿ ಕ್ಷೀಣ ಧ್ವನಿಯಲ್ಲಿ ನುಡಿದಾಗ ನಾನು ನನ್ನ ಯೋಚನೆಯ ಪೂರ್ವಾನುಮತಿ ಪಡೆಯದೆ ಡಬ್ಬ ಎತ್ತಲು ಹಸ್ತ ನೀಡಿದೆ.
ಸಾಂದರ್ಭಿಕ ಚಿತ್ರ
ಆದರೆ ಕಾರ್ಮಿಕ ಹೇಳಿದ ಕೈಟ್ಟ್ ಮುಟ್ಟೊಡ್ಚಿ ಬಾಲೆ ಇಂದ ಈ ಪಜ್ಜಿ ಇರೆ ಪತೋನು, ಇಜಿಂಡ ನಿನ್ನ ಕೈ ಹೇಸಿಗೆ ಆಪುಂಡತ್ತಾ ಎಂದು.
ಜ್ಯೋತಿ ಟಾಕೀಸಿನ ಬಸ್ಟೇಂಡ್ ಬಳಿ ನಡೆದ ಈ ಸಹಾಯಹಸ್ತದ ಸನ್ನಿವೇಶವನ್ನು ಬಸ್ಟೇಂಡಿನಲ್ಲಿದ್ದ ಜನರು ಮೂಗನ್ನು ಕೈಯ್ಯಲ್ಲಿ ಮುಚ್ಚಿ ನಮ್ಮನ್ನು ನೋಡುತಿದ್ದರು
ಆದರೆ ಈ ಪದ್ಧತಿ ನಗರದ ಪ್ರತಿಷ್ಟಿತ ಹೋಟೇಲುಗಳಲ್ಲಿ, ವಸತಿಗ್ಗೃಹದಲ್ಲಿ, ಆಸ್ಪತ್ರೆಗಳಲ್ಲಿ
ಬೇಸಿನ ಇರಿಸಿದ ಈಗಿನ ಇಂಗು ಗುಂಡಿಯ ಪದ್ಧತಿಯಲ್ಲಿತ್ತು.
ಆದರೆ ಬಹುಪಾಲು ಈ ಪದ್ಧತಿ ನಗರದ ಹೊರವಲಯದ ಮನೆಗಳಲ್ಲಿ ಮಾತ್ರ ಆಚರಣೆಯಲ್ಲಿತ್ತು.
ಈ ಪದ್ಧತಿ ಕರ್ನಾಟಕದ ರಾಜ್ಯಾದ್ಯಂತ ಹೀಗೆಯೇ ಮುಂದುವರಿದು 1975 ನೇ ಇಸವಿಯಲ್ಲಿ ಮಾನ್ಯ ಪೌರಾಡಳಿತ ಸಚಿವ ಶ್ರೀ ಬಸವ ಲಿಂಗಪ್ಪನವರ ಕಠಿಣ ಆಧ್ಯಾದೇಶದ ಮೂಲಕ ನಾಗರಿಕರಿಗೆ ಎಚ್ಚರಿಕೆ ಕೊಟ್ಟು ಮೂರು ತಿಂಗಳಾವಧಿಯ ಒಳಗೆ ಎಲ್ಲಾ ಮನೆಯವರು ಪಾಯಿಖಾನೆಯನ್ನು ಆಧುನೀಕರಿಸತಕ್ಕದ್ದು ಎಂದು ಕಟ್ಟಪ್ಪಣೆ ಮಾಡಿದರು
ನಿಗದಿತ ಸಮಯದೊಳಗೆ ಪಾಯಿಖಾನೆ ಆಧುನೀಕರಿಸದಿದ್ದಲ್ಲಿ, ಅವರವರ ಮನೆಯ ಮಲವನ್ನು ಅವರೇ ವಿಲೇವಾರಿ ಮಾಡತಕ್ಕದ್ದು ಮತ್ತು ಈ ವರೆಗೆ ಶುಚಿಗೊಳಿಸಲು ಬರುತಿದ್ದ ಕಾರ್ಮಿಕರಿಗೆ ಮುನ್ಸಿಪಾಲಿಟಿಯಲ್ಲಿ ಬದಲೀ ಹುದ್ದೆ ನೀಡಲಾಗುವುದೆಂದರು
ಮೇಲಿನ ಹೀನ ಪದ್ಧತಿ ವಜಾಗೊಳಿಸಿದ ಸರಕಾರದ ಆಜ್ಞೆಯ ವಿರುದ್ಧ ಅಂದು ಯಾರೂ ಪ್ರತಿಭಟಿಸಲಿಲ್ಲ, ಕೋರ್ಟು ಮೆಟ್ಟಲೇರಲಿಲ್ಲ, ಈಗೀನ ಹಾಗೆ ಸರಕಾರದ/ ಪಂಚಾಯತ್ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿ ತ್ಯಾಜ್ಜಗಳನ್ನು ಎಲ್ಲೆಂದರಲ್ಲಿ ಬಿಸಾಡಿದಂತೆ ಅಂದು ಅವರವರ ಮಲವನ್ನು ಬೀದಿ ಬದಿ ಚೆಲ್ಲದೆ ಸರಕಾರದ ಕಾನೂನಿಗೆ ಗೌರವ ಕೊಟ್ಟು ನಿಗದಿತ ಸಮಯದೊಳಗೆ ಪಾಯಿಖಾನೆ ನಿರ್ಮಿಸಿ ಸರಕಾರದ ಆಜ್ಞೆಯನ್ನು ನಾಗರಿಕರು ಶಿರಸಾ ಪಾಲಿಸಿದ
ಕಾನೂನು ಅದು ಮನುಷ್ಯನ ಮಲವನ್ನು ಮನುಷ್ಯನೇ ಹೊರುವ ಜೀತ ಪದ್ಧತಿ
ಮಂತ್ರಿಗಳು ಏಷ್ಟೇ ಒಳ್ಳೆಯ ಕೆಲಸ ಮಾಡಬಹುದು. ಆದರೆ ಸಮಾಜದ ಅನಿಷ್ಟ ಪದ್ಧತಿಯನ್ನು ಯಾವುದೇ ಪ್ರತಿರೋಧನೆ ಇಲ್ಲದೆ ಶಾಶ್ವತವಾಗಿ ತೊಡೆದು ಹಾಕಿದ ಬಸವಲಿಂಗಪ್ಪನವರ ಈ ಕ್ರಮ ಮುಂದಿನ ಪೀಳಿಗೆಗೂ ತಿಳಿದಿರಲಿ ಎಂದು ಕಾಲ್ಪನಿಕವಲ್ಲದ ವಾಸ್ತವಿಕ ಘಟನೆಯನ್ನು ನನ್ನ ನೆನಪಿನ ಬುತ್ತಿಯಿಂದ ಹೊರತೆಗೆದು ನಿಮ್ಮೊಡನೆ ಹಂಚಿಕೊಂಡೆ.
-ಸೀತಾರಾಮ ಭಂಡಾರಿ M P , ಕೋಣಾಜೆ
No comments:
Post a Comment