BhandaryVarthe Team

BhandaryVarthe Team
Bhandary Varthe Team

Thursday, 16 September 2021

ವಿಶ್ವ ಕ್ಷೌರಿಕ ದಿನ (ಇತಿಹಾಸದ ವೈಭವ ಮರುಕಳಿಸುವಂತೆ ಮಾಡಬೇಕಿದೆ. ) - ವಿಜಯ್ ನಿಟ್ಟೂರು

 ಸಾಮಾನ್ಯವಾಗಿ ನಾವು ಕ್ಷೌರಿಕದಿನವನ್ನು ಎಂದಿಗೂ ಆಚರಿಸಿರುವುದಿಲ್ಲ. ಅದಕ್ಕೆ ನಮ್ಮ ಸಮಾಜದ ಸಂಖ್ಯಾಬಲವೋ ಅಥವಾ ಇಚ್ಚಾಶಕ್ತಿಯ ಕೊರತೆಯೂ ಆಗಿರಬಹುದು. ಸಮಾಜದ ಸವಿತಾ ಮಹರ್ಷಿ ದಿನಾಚರಣೆಯೂ ಕೂಡಾ ಇತ್ತೀಚಿಗೆ ಪ್ರಚಲಿತದಲ್ಲಿದೆ. ಆ ದಿನಾಚರಣೆಗೆ ಸರಕಾರವೂ ಕೂಡ ಮನ್ನಣೆ ನೀಡುತ್ತಿದೆ ಮತ್ತು ಸಮಾಜದ ಸಂಘಟನೆ ಕೂಡ ಹಲವು ಕವಲುಗಳು ಒಡೆದು ದೊಡ್ಡದಾದ ಒಂದು ಗಟ್ಟಿ ಸಂಘಟನೆ ಕನಸಿನ ಮಾತೇ ಆಗಿದೆ. ಅಂತಹುದರಲ್ಲಿ ಕಿವಿಗೆ ಖುಷಿಕೊಡುವ ಮನಕ್ಕೆ ಹೆಮ್ಮೆ ಎನ್ನಿಸುವ ವಿಶ್ವಮಟ್ಟದಲ್ಲಿ ಕ್ಷೌರಿಕ ದಿನಾಚರಣೆ ನೆಡೆದರೆ ಹೇಗಿರಬೇಡ ? ಹೌದು ವಿಶ್ವದ ಕ್ಷೌರಿಕರೆಲ್ಲಾ ಒಗ್ಗೂಡಿ ಇಂತಹದೊಂದು ಆಚರಣೆ ನೆಡೆಸಿದರೆ ಕ್ಷೌರಿಕರ ಬಲ ನೂರ್ಮಡಿ ಆಗುವುದಿಲ್ಲವೇ ! ಸಾಕಷ್ಟು ನೂನ್ಯತೆಗಳೂ ಕರಗಿ ಹೋಗುವುದಲ್ಲವೇ‌ ?

 

ಕೇಶಕರ್ತನವೆಂಬುದು ಲಿಂಗಭೇದವಿಲ್ಲದೇ ಪ್ರಪಂಚದಾದ್ಯಂತ ಅನೇಕರಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಧರ್ಮ, ಜಾತಿ, ಲಿಂಗ, ರೂಪ, ವಯಸ್ಸಿನ ಭೇದವಿಲ್ಲದೆ ತಮ್ಮ ಸೇವೆಯನ್ನು ನೀಡುತ್ತಿರುವ ಕ್ಷೌರಿಕರು ವಿಶ್ವ ಮಟ್ಟದಲ್ಲಿ ಒಂದಾಗಿ ಜಾಗತಿಕ ಸಮಸ್ಯೆಗಳಿಗೆ ಪರಸ್ಪರ ಸ್ಪಂದಿಸುವ ಸಲುವಾಗಿ ಪ್ರತಿ ವರ್ಷದ ಸೆಪ್ಟೆಂಬರ್ ಹದಿನಾರನೆ ತಾರೀಖನ್ನು ವಿಶ್ವ ಕ್ಷೌರಿಕರ ದಿನವೆಂದು 2018 ರಲ್ಲಿ ಮೊಟ್ಟಮೊದಲಬಾರಿಗೆ ಆಚರಿಸಲಾಯಿತು.

ಯುರೋಪ್ ಖಂಡದಲ್ಲಿ ರೋಮನ್ನರ ಚಕ್ರಾಧಿಪತ್ಯದ ಅಂತ್ಯವಾಗಿ ಆಧುನಿಕ ಯುರೋಪ್ ನಾಗರೀಕತೆ ಆರಂಭವಾಗುವ ಮಧ್ಯಯುಗದ ಕಾಲಗಟ್ಟದಲ್ಲಿ ಕ್ಷೌರಿಕರು ಕೇವಲ ಕೇಶಕರ್ತನದ ಕಾಯಕವಲ್ಲದೇ ದಂತವೈದ್ಯರಾಗಿಯೂ, ಗಾಯಗೊಂಡ ಭಾಗಗಳನ್ನು ಶುದ್ಧೀಕರಿಸಿ ಉಪಚರಿಸುವ ಮತ್ತು ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾ ಗುರುತಿಸಿಕೊಂಡಿದ್ದರು. ಇವರೆಲ್ಲಾ ಒಗ್ಗೂಡಿ ಒಂದು ಸಂಘಟನೆಯ ಅವಶ್ಯಕತೆಯನ್ನು ಆಲೋಚಿಸಿ 1096ರಲ್ಲಿ ಕ್ಷೌರಿಕರ-ಶಸ್ತ್ರಚಿಕಿತ್ಸಕರ ಸಂಟನೆಯನ್ನು ಆರಂಭಿಸಿದರು. ಇಂತಹದೊಂದು ಸಂಘಟನೆಯನ್ನು ಅಂದಿನ ಕಾಲದಲ್ಲಿ ಒಗ್ಗೂಡಿಸಿದ ವಿಷಯ ಹೆಮ್ಮೆಯಲ್ಲವೆ ! ಈ ಸಂಘಟನೆಯ ಆರಂಭದ ಸವಿನೆನಪಿಗಾಗಿ ಸೆಪ್ಟೆಂಬರ್ (09) ತಿಂಗಳ 16 ನೇ ತಾರೀಖನ್ನು (1096) ಸಂಯೋಜಿಸಿ ಪ್ರತೀ ವರ್ಷದ ಸೆಪ್ಟೆಂಬರ್ 16 ರಂದು ವಿಶ್ವ ಕ್ಷೌರಿಕರ ದಿನಾಚರಣೆ ಆಚರಿಸಲು ತೀರ್ಮಾನಿಸಲಾಯಿತು.

ವಿಶ್ವ ಕ್ಷೌರಿಕರ ದಿನದ ಚಿಹ್ನೆಯಾಗಿ ಕೆಂಪು ಬಿಳಿ ಹಾಗೂ ನೀಲಿ ಬಣ್ಣಗಳನ್ನು ಸುರುಳಿಯಾಕಾರದಲ್ಲಿ ಹೊಂದಿದ ಕ್ಷೌರಿಕ ಕಂಬ (Barber Pole) ಮತ್ತು ಅದರ ಮೇಲೆ ಭೂಮಿಯ ಗುರುತನ್ನ ಹೊಂದಿರುವ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ.

ವಿಶ್ವ ಕ್ಷೌರಿಕರ ದಿನಾಚರಣೆಯ ವಿಶೇಷವೆಂದರೆ ವಿಶ್ವಾದ್ಯಂತ ಕೆಂಪು, ಬಿಳಿ ಮತ್ತು ನೀಲಿ ಬಣ್ಣದ ತಿರುಗುವ ಕೋಲು” ಹೊಂದಿರುವ ಲಾಂಛನವನ್ನು ಪ್ರದರ್ಶಿಸಿರುವ ಕ್ಷೌರಿಕರ ಅಂಗಡಿಗಳಲ್ಲಿ ಸೇವೆ ಪಡೆದ ಗ್ರಾಹಕರು ನೀಡುವ ಶುಲ್ಕದ ಸ್ವಲ್ಪ ಭಾಗವನ್ನು ಜೊತೆಗೆ ದೇಣಿಗೆಯನ್ನು ಸಂಗ್ರಹಿಸಿ ನೇರವಾಗಿ ಅಂತಾರಾಷ್ಟ್ರೀಯ ಕ್ಷೌರಿಕರ ಸಂಘಟನೆಯು ವಿಶ್ವಸಂಸ್ಥೆಯೊಂದಿಗೆ ಕೈ ಜೋಡಿಸಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಹಾಗು ಶಿಕ್ಷಣ ವಂಚಿತ ಮಕ್ಕಳಿಗೆ ನೆರವಾಗಲು “ಸಂಯುಕ್ತ ರಾಷ್ಟ್ರಗಳ ಅಂತರರಾಷ್ಟ್ರೀಯ ಮಕ್ಕಳ ತುರ್ತುನಿಧಿ.” (UNICEF- United Nations International Children’s Emergency Fund.) ಗೆ ತಲುಪಿಸುವ ಪ್ರಯತ್ನವನ್ನು ಮಾಡುತ್ತಾರೆ..

ಅಂತರರಾಷ್ಟ್ರೀಯ ಕ್ಷೌರಿಕರ ಸಂಘಟನೆ ಕೇವಲ ಲಾಭ ಗಳಿಸುವ ಸಂಘಟನೆಯಾಗಿ ಗುರುತಿಸಿಕೊಳ್ಳದೇ, ವಿಶ್ವದಾದ್ಯಂತ ಕ್ಷೌರಿಕರು ತಮ್ಮ ಜಾಗತಿಕ ಮಟ್ಟದ ಸಂಘಟನೆಯನ್ನು ಬಲಪಡಿಸುಪಡಿಸುವುದರ ಜೊತೆಗೆ ಅಶಕ್ತರ, ಅಸಹಾಯಕರ ನೆರವಿಗೆ ದೇಣಿಗೆಯನ್ನು ಸಂಗ್ರಹಿಸುವ ಹಾಗು ನೀಡುವ ಮೂಲಕ ಆದರ್ಶಪ್ರಾಯರಾಗಿ ಆಚರಿಸುವ ಉದ್ದೇಶವನ್ನು ಹೊಂದಿದ್ದಾರೆ.

ಒಂದಷ್ಟು ಸಾಂಪ್ರದಾಯಿಕ, ಸಾಮಾಜಿಕ ನೆಲೆಗಟ್ಟಿನಿಂದ ಕುಗ್ಗಿಹೋಗಿರುವ ಕ್ಷೌರಿಕರು ಹೆಮ್ಮೆಯಿಂದ ನಾನೊಬ್ಬ ಕ್ಷೌರಿಕ ಎಂದು ಹೇಳಿಕೊಳ್ಳುವ ಕಾಲ ಕೂಡಿಬಂದಿದೆ. ಮತ್ತೊಮ್ಮೆ ನಾವು ಕುಗ್ಗಿದ ಮನಸ್ಥಿತಿಯನ್ನು ಕಿತ್ತೊಗೆದು ಒಡೆದ ಕವಲುಗಳನ್ನು ಒಟ್ಟಗೂಡಿಸಿ ಗಟ್ಟಿಯಾಗಿ ಸಂಘಟಿತರಾಗಿ ಅಶಕ್ತರನ್ನು ಶಕ್ತರನ್ನಾಗಿಸಿ ಸಮಾಜವನ್ನು ಬಲಗೊಳಿಸಬೇಕಾಗಿದೆ.

ವಿಶ್ವ ಕ್ಷೌರಿಕ ದಿನಾಚರಣೆಯ ಜೊತೆಗೆ ಸವಿತಾ ಮಹರ್ಷಿ ದಿನಾಚರಣೆಯೂ ನಮ್ಮೆಲ್ಲರ ಅವಿಭಾಜ್ಯ ಅಂಗವಾಗಬೇಕಾಗಿದೆ. ಇದರೊಂದಿಗೆ ಗತಕಾಲದ ರಾಜ್ಯವಾಳಿದ, ಶಸ್ತ್ರಚಿಕಿತ್ಸಕರಾದ, ದಂತವೈದ್ಯರಾದ ಇತ್ಯಾದಿ ಇತಿಹಾಸಗಳನ್ನು ಮನನ ಮಾಡಿ ನಮ್ಮೊಳೊಗೆ ಬೇರು ಬಿಟ್ಟಿರುವ ಸಂಕುಚಿತತೆಯನ್ನು ತೊಡೆದುಹಾಕಿ ಮತ್ತೊಮ್ಮೆ ಇತಿಹಾಸದ ವೈಭವ ಮರುಕಳಿಸುವಂತೆ ಮಾಡಬೇಕಿದೆ.

ಜೈ ಕ್ಷೌರಿಕ್...ಜೈ ಜೈ ಕ್ಷೌರಿಕ್...!!!

ಮತ್ತೊಮ್ಮೆ "ಅಂತರರಾಷ್ಟ್ರೀಯ ಕ್ಷೌರಿಕ ದಿನ" ದ ಹಾರ್ದಿಕ ಶುಭಾಶಯಗಳು.

-✍️ ವಿಜಯ್ ನಿಟ್ಟೂರು

No comments:

Post a Comment