BhandaryVarthe Team

BhandaryVarthe Team
Bhandary Varthe Team

Sunday, 26 September 2021

ಜಿಡ್ಡು ಪ್ರವಚನ - ಒಳಿತಿಗೆ ಉದ್ದೇಶಗಳಿಲ್ಲ-ವೆಂಕಟೇಶ ಭಂಡಾರಿ ಕುಂದಾಪುರ.

 ( ಧ್ಯಾನ-9)

        ನಾನು ಒಳ್ಳೆಯವನಾಗಬೇಕೆಂಬ ಉದ್ದೇಶವಿದ್ದರೆ ಅದರಿಂದ ಒಳಿತು ಹುಟ್ಟುತ್ತದೆಯೇ? ಒಳ್ಳೆಯವನಾಗಬೇಕೆಂಬ ಅಪೇಕ್ಷೆಯೇ ಒಂದು ಒತ್ತಾಯ. ಒಳಿತು ಎಂಬುದು ಇಂಥ ಒತ್ತಾಯ ಮತ್ತು ಅಪೇಕ್ಷೆಗಳ ಹಂಗಿಲ್ಲದೆ ಸ್ವತಂತ್ರವಾಗಿ ಇರುತ್ತದೆಯೇ? ಒಳಿತು ಎಂಬುದು ಕೆಡುಕಿನ, ದುಷ್ಟತನದ ವಿರುದ್ಧ ಧ್ರುವವೇ? ಪರಸ್ಪರ ವಿರುದ್ಧಗಳೆಂದು ಭಾವಿಸುವ ಎರಡು ಸಂಗತಿಗಳಲ್ಲಿ ಒಂದೊಂದರಲ್ಲೂ ಇನ್ನೊಂದರ ಬೀಜಗಳು ಇರುತ್ತವೆಯಲ್ಲವೇ? ದುರಾಸೆ ಇರುವಂತೆಯೇ ಆಶಾರಹಿತವಾಗಿರಬೇಕೆಂಬ ಆದರ್ಶವೂ ಇದೆ‌. ಮನಸ್ಸು ಆಶಾರಹಿತವಾಗಿರಬೇಕೆಂದು ಪ್ರಯತ್ನಿಸುತ್ತಿರುವಾಗಲೇ ತಾನು ದುರಾಸೆಯಿಂದ ಕೂಡಿರುತ್ತದೆ.ಏಕೆಂದರೆ ಅದು ಈಗಿರುವುದಕ್ಕಿಂತ ಭಿನ್ನವಾದ ಮತ್ತೊಂದು ಸ್ಥಿತಿಯನ್ನು ಬೇಕೆಂದು ಅತಿಯಾಗಿ ಬಯಸುತ್ತಿರುತ್ತದೆ. ದುರಾಸೆಯೆಂದರೆ ಆಸೆಪಡುವುದು, ಸಂಗ್ರಹಿಸಿಟ್ಟುಕೊಳ್ಳಲು ಬಯಸುವುದು, ತನ್ನನ್ನು ತಾನು ವಿಸ್ತರಿಸಿಕೊಳ್ಳುವುದು ಎಂದರ್ಥ. ದುರಾಸೆಯಿಂದ ಫಲದೊರೆಯದು ಎಂದು ಅರಿತಾಗ ಮನಸ್ಸು ಆಶಾರಹಿತವಾಗಲು ಬಯಸುತ್ತದೆ. ದುರಾಸೆ ಮತ್ತು ಆಶಾರಹಿತ ಎರಡರ ಹಿಂದಿರುವ ಉದ್ದೇಶವೂ ಒಂದೇ-ಮತ್ತೇನೋ ಆಗುವುದು, ಯಾವುದೋ ಸ್ಥಿತಿಯನ್ನು ಸಂಪಾದಿಸುವುದು. ಬಯಕೆಗಳು ಬೇಡವೆಂಬ ಬಯಕೆ ಮನಸ್ಸಿನಲ್ಲಿರುವಾಗ ಕುಡ ಮೂಲ ಬಯಕೆ, ಏನೋ ಬೇಕೆಂಬ ಮೂಲ ಆಸೆ, ಹಾಗೇ ಉಳಿದಿರುತ್ತದೆ. ಆದ್ದರಿಂದ ಒಳಿತು ಎಂಬುದು ಕೆಡುಕಿಗೆ ವಿರುದ್ಧವಾದದ್ದಲ್ಲ, ಅದಕ್ಕಿಂತ ತೀರ ತೀರ ಭಿನ್ನವಾದ ಒಂದು ಸ್ಥಿತಿ. ಯಾವುದು ಆ ಸ್ಥಿತಿ?



        ಜಗತ್ತು ಈಗ ಎದುರಿಸುತ್ತಿರುವ ಬಿಕ್ಕಟ್ಟು ವಿಶಿಷ್ಟವಾದದ್ದು. ಚರಿತ್ರೆಯ ಉದ್ದಕ್ಕೂ ಅನೇಕ ಬಗೆಯ ಸಾಮಾಜಿಕ, ರಾಜಕೀಯ ಬಿಕ್ಕಟ್ಟುಗಳು ಕಾಣುತ್ತವೆ. ಬಿಕ್ಕಟ್ಟುಗಳು ಬಂದು ಹೋಗುತ್ತಲೇ ಇರುತ್ತವೆ. ಆರ್ಥಿಕ ಹಿಂಜರಿತ, ಆರ್ಥಿಕ ಕುಸಿತ, ಮೊದಲಾದವು ಅಷ್ಟಿಷ್ಟು ಪರಿಷ್ಕಾರಗೊಂಡು ಎದುರಾಗುತ್ತಲೇ ಇರುತ್ತವೆ‌. ಇಂಥ ಬಿಕ್ಕಟ್ಟುಗಳು ನಮಗೆಲ್ಲ ಪರಿಚಿತವಾದವೇ ಹೌದು. ಆದರೆ, ಈಗ ನಾವು ಎದುರಿಸುತ್ತಿರುವ ಬಿಕ್ಕಟ್ಟು ವಿಶಿಷ್ಟವಾದದ್ದು, ಅಲ್ಲವೇ? ಏಕೆಂದರೆ ನಾವು ಈಗ ಹಣಕಾಸಿನ ಅಥವಾ ವಸ್ತುಗಳ ಕಾರಣದಿಂದ ಉಂಟಾಗುವ ಬಿಕ್ಕಟ್ಟುಗಳ ಬಗ್ಗೆ ಮಾತನಾಡುತ್ತಿಲ್ಲ. ವಿಚಾರಗಳ ಬಿಕ್ಕಟ್ಟನ್ನು ನಾವೀಗ ಎದುರಿಸುತ್ತಿದ್ದೇವೆ. ವೈಚಾರಿಕ ವಲಯದ ಈ ಬಿಕ್ಕಟ್ಟು ವಿಶೇಷವಾದದ್ದು. ನಾವು ಐಡಿಯಾಗಳೊಡನೆ ಜಗಳವಾಡುತ್ತಾ ಕೊಲೆಗಳನ್ನು ಸಮರ್ಥಿಸುತ್ತಿದ್ದೇವೆ‌. ಒಳ್ಳೆಯ ವಿಷಯಗಳಿಗೆ ಮಾಡುವ ಕೊಲೆ ಸಮರ್ಥನೀಯ ಎಂಬ ವಿಚಾರ ಜಗತ್ತಿನ ಎಲ್ಲೆಡೆಗಳಲ್ಲೂ ಕಾಣುತ್ತಿದೆ. ಇದು ಅಭೂತಪೂರ್ವವಾದ ವಿಚಾರ. ಹಿಂದೆ ಕೆಡುಕನ್ನು ಕೆಡುಕೆಂದು, ಕೊಲೆಯನ್ನು ಕೊಲೆಯೆಂದು ಗುರುತಿಸುತ್ತಿದ್ದೇವು. ಈಗ ಕೊಲೆ ಎಂಬುದು ಉದಾತ್ತವಾದ ಪರಿಣಾಮವನ್ನು ಸಾಧಿಸಲು ಇರುವ ಒಂದು ಮಾರ್ಗವಾಗಿ ಬಿಟ್ಟಿದೆ. ಒಬ್ಬ ವ್ಯಕ್ತಿಯನ್ನೇ ಕೊಲ್ಲಲಿ, ಒಂದು ಸಮೂಹವನ್ನೇ ಕೊಲ್ಲಲಿ, ಆಗ ಕೊಲೆಗಾರ ಅಥವಾ ಕೊಲೆಗಾರ ಗುಂಪು ಮನುಷ್ಯಕುಲದ ಒಳಿತಿಗಾಗಿ ಕೊಲೆಮಾಡಿದ್ದೇವೆ ಎಂದು ಸಮರ್ಥಿಸಿಕೊಳ್ಳುವುದನ್ನು ಕಾಣುತ್ತಿದ್ದೇವೆ‌. ಅಂದರೆ ಭವಿಷ್ಯಕ್ಕಾಗಿ ವರ್ತಮಾನವನ್ನು ಬಲಿಗೊಡುತ್ತಿದ್ದೇವೆ. ನಮ್ಮ ಘೋಷಿತ ಉದ್ದೇಶ ಮನುಷ್ಯ ಕುಲದ ಭವಿಷ್ಯದ ಒಳಿತಿಗಾಗಿ ಎಂದು ಹೇಳುತ್ತಿರುವವರೆಗೆ ನಾವು ಹಿಡುಯುವ ಯಾವ ಮಾರ್ಗವು ತಪ್ಪು ಎನ್ನಿಸುತ್ತಿಲ್ಲ. ಇದರರ್ಥವೇನೆಂದರೆ, ತಪ್ಪು ದಾರಿ ಹಿಡಿದೂ ಒಳಿತನ್ನು ಸಾಧಿಸಬಹುದು, ತಪ್ಪು ದಾರಿ ಸಮರ್ಥನೀಯ ಎಂಬ ವೈಚಾರಿಕತೆ ಹುಟ್ಟಿಕೊಳ್ಳುತ್ತದೆ ಕೆಡುಕನ್ನು ಸಮರ್ಥಿಸುವ ವಿಚಾರಗಳ ಮಹಾನ್ ಸೌಧವನ್ನೇ ನಿರ್ಮಿಸಿಕೊಂಡಿದ್ದೇವೆ. ಇದು ಅಭೂತಪೂರ್ವವಾದದ್ದು. ಕೆಡುಕು ಎಂದಿಗೂ ಕೆಡುಕೇ, ಅದು ಒಳಿತನ್ನು ತರಲಾರದು. ಯುದ್ಧದ ದಾರಿಯಿಂದ ಶಾಂತಿಯನ್ನು ಪಡೆಯಲಾಗದು.


    ನಾನು ಕೆಡುಕಿನಿಂದ ಆರಂಭಿಸಿ ಒಳಿತಿನತ್ತ ಸಾಗುವ ವಿಕಾಸ, ಬೆಳವಣಿಗೆ, ಮಾನಸಿಕ ವಿಕಾಸ ಇದೆಯೇ ಎಂದು ನಾವೀಗ ಚರ್ಚಿಸುತ್ತಿದ್ದೇವೆ. ಕಾಲಕ್ರಮದಲ್ಲಿ, ಕೆಡುಕಿನ ಕೇಂದ್ರಬಿಂದುವಾದ "ನಾನು" ವಿಕಾಸಹೊಂದುತ್ತಾ, ಉದಾತ್ತವೂ ಒಳಿತು ಆಗಬಲ್ಲದೇ? ಖಂಡಿತ ಇಲ್ಲ. ಯಾವಾಗಲೂ ಕೆಡುಕೆ ಆಗಿರುತ್ತದೆ. ಆದರೆ ನಾವು ಇದನ್ನು ಒಪ್ಪಲು ತಯಾರಾಗಿಲ್ಲ, ಕಾಲ ಸರಿದಂತೆ, ಬೆಳೆಯುತ್ತಾ, ಬದಲಾಗುತ್ತಾ "ನಾನು" ಅಂತಿಮವಾಗಿ ನಿಜವಾಗುತ್ತೇನೆ, ಒಳಿತು ಆಗುತ್ತೇನೆ ಎಂದು ನಂಬುತ್ತೇವೆ. "ನಾನು " ಕಾಲಕ್ರಮದಲ್ಲಿ ಪರಿಪೂರ್ಣನಾಗುತ್ತೇನೆ ಎಂಬುದು ನಮ್ಮ ಆಸೆ, ಹಂಬಲ. ಈ "ನಾನು" ಮತ್ತು "ನನ್ನದು" ಎಂಬುದೇನು? ಅದು ಆಸೆ, ಹತಾಶೆ, ಹಂಬಲ, ನೆನಪುಗಳ ರಾಶಿ, ನೋವು,ದುಃಖ, ಬಂದು ಹೋಗುವ ಸುಖ, ಇವೆಲ್ಲವುಗಳಿಗೆ ಕೊಟ್ಟಿರುವ ಒಂದು ಹೆಸರು, ನೀಡಿರುವ ಒಂದು ರೂಪ. ಈ ನಾನು ಈಗಿರುವಂತೆಯೇ ಮುಂದುವರೆಯುತ್ತಾ, ಪರಿಪೂರ್ಣವಾಗಬೇಕು ಎಂದು ಬಯಸುತ್ತೇವೆ. "ನಾನು " ಎಂಬುದರಾಚೆಗೆ "ಪರಮ-ನಾನು" ಎಂಬುದಿದೆ, ಕಾಲಾತೀತವಾದ ಆತ್ಮವುದೆ, ಉನ್ನತ ಆತ್ಮವಿದೆ, ಎಂದುಕೊಳ್ಳತ್ತೇವೆ..
      ಒಳಿಗೆ ಉದ್ದೇಶಗಳಿಲ್ಲ. ಏಕೆಂದರೆ ಎಲ್ಲ ಉದ್ದೇಶಗಳು ನಾನು ಎಂಬ ಸ್ವ-ಅರ್ಥದಲ್ಲಿ ಬೇರುಬಿಟ್ಟಿರುತ್ತವೆ. ಉದ್ದೇಶವೆಂಬುದು ಮನಸ್ಸಿನ ಸ್ವ-ಕೇಂದ್ರತವಾದ ಚಲನೆ. ಹಾಗದರೆ ಒಳ್ಳೆಯತನ ಎಂಬುದರ ಅರ್ಥವೇನು?  ಸಂಪೂರ್ಣ ಗಮನವಿದ್ದಾಗ ಮಾತ್ರ ಒಳ್ಳೆಯತನವಿರುತ್ತದೆ. ಗಮನದಲ್ಲಿ ಉದ್ದೇಶವಿಲ್ಲ. ಗಮನಕ್ಕೂ ಒಂದು ಉದ್ದೇಶವಿದ್ದಾಗ ಗಮನವಿರಲು ಸಾಧ್ಯವೇ? ಏನನ್ನೋ ಸಾಧಿಸಬೇಕೆಂಬ, ಸಂಗ್ರಹಿಸಬೇಕೆಂಬ, ಉದ್ದೇಶದಿಂದ ಗಮನಿಸಲು ತೊಡಗಿದ್ದರೆ ಆಗ ಗಮನವಿರುವುದಿಲ್ಲ ವಿಕರ್ಷಣೆಮಾತ್ರವಿರುತ್ತದೆ. ಗಮನ ಮತ್ತು ಗಮನದ ಉದ್ದೇಶಗಳೆಂಬ ಭೇದವಿರುತ್ತದೆ‌. ಏನೋ ಆಗಬೇಕೆಂಬ ಅಥವಾ ಏನೋ ಆಗಬಾರದೆಂಬ ಯಾವ ಉದ್ದೇಶವೂ ಇಲ್ಲದ ಪರಿಪೂರ್ಣ ಗಮನವಿದ್ದಾಗ ಮಾತ್ರ ಒಳಿತು ಇರುತ್ತದೆ. (ಗಮನ=ಪ್ರೀತಿ, ಗುಣ)....

ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
✍🏻: ವೆಂಕಟೇಶ ಭಂಡಾರಿ ಕುಂದಾಪುರ.

No comments:

Post a Comment