BhandaryVarthe Team

BhandaryVarthe Team
Bhandary Varthe Team

Tuesday 7 September 2021

ಏನಾದರೂ ಆಗುವುದು ಎಂದರೆ ಸಂಘರ್ಷ - ( ಧ್ಯಾನ-7)-ವೆಂಕಟೇಶ ಭಂಡಾರಿ,ಕುಂದಾಪುರ

 ಜಿಡ್ಡು ಪ್ರವಚನ ಧ್ಯಾನ -7

ಮಗೆ ತಿಳಿದಿರುವಂತೆ ನಮ್ಮ ಬದುಕು ಏನಾದರೂ 'ಆಗುವ 'ಕ್ರಿಯೆಯೇ ಆಗಿರುತ್ತದೆ. ನಾನು ಡವನಾಗಿದ್ದರೆ,ಅದನ್ನೇ ನನ್ನ ಗಮನದಲ್ಲಿಟ್ಟುಕೊಂಡು ಶ್ರೀಮಂತ ಆಗಬೇಕು, ಎಂದು ಬದುಕುತ್ತೇನೆ. ಕುರೂಪಿ ಆಗಿದ್ದರೆ ಸುಂದರ ಆಗಬೇಕು ‌.ನನ್ನ ಜೀವನ ಏನೋ 'ಆಗುವ' ಕೆಲಸವಷ್ಟೇ ಆಗಿರುತ್ತದೆ.ಬದುಕಿ ಇರುವುದು ಎಂದರೆ ಏನೋ ಆಗುವುದು ಎಂದು ತಿಳಿದ್ದಿದ್ದೇವೆ. ಇದರಿಂದಾಗಿ ನಮ್ಮ ಪ್ರಜ್ಞೆಯ ಬೇರೆ ಬೇರೆ ಮಟ್ಟಗಳಲ್ಲಿ, ಬೇರೆ ಬೇರೆ ಸ್ಥಿತಿಯಲ್ಲಿ, ಸವಾಲುಗಳು,ಪ್ರತಿಕ್ರಿಯೆಗಳು,ಹೆಸರಿಸುವ ಕೆಲಸಗಳು, ದಾಖಲಿಸಿಕೊಳ್ಳುವ ಕೆಲಸಗಳು ನಡೆಯುತ್ತಿರುತ್ತವೆ.ಆಗುವ ಆಸೆಯೇ ಸಂಘರ್ಷ. ಆಗುವ ಕೆಲಸವೇ ನೋವಿನ ಕೆಲಸ,ಅಲ್ಲವೇ? "ಆಗುವುದು "ಎಂದರೆ ನಿರಂತರ ಸಂಘರ್ಷ.ನಾನು ಹೀಗೆ ಇದ್ದೇನೆ. ಹಾಗೆ ಆಗಬೇಕು ಅನ್ನುವ ಸಂಘರ್ಷ.



ಮನಸ್ಸಿನಲ್ಲಿ ಒಂದು ಐಡಿಯಾ ಇರುತ್ತದೆ. ಅದು ಸುಖದ ಐಡಿಯಾ ಇರಬಹುದು. ಮನಸ್ಸು ಆ ಐಡಿಯಾದಂತೆ ಆಗಬೇಕು ಎಂದು ಬಯಸುತ್ತದೆ. ಆ ಐಡಿಯಾ ಕೇವಲ ನಿಮ್ಮ ಆಸೆಯ ಒಂದು ಬಿಂಬ ಮಾತ್ರ ನೀವು  ಹೀಗಿದ್ದೀರಿ,ಹೀಗೆ ಇರುವುದು ನಿಮಗೆ ಇಷ್ಟವಿಲ್ಲ,ಹಾಗೆ ಇರುವುದು ಇಷ್ಟ, ಹಾಗೆ ಆಗಲು ಬಯಸುತ್ತೀರಿ. ಈ ಆದರ್ಶ ನಾವೇ ಮಾಡಿಕೊಳ್ಳುವ ಒಂದು ಬಿಂಬ ಮಾತ್ರ‌. ಇದಕ್ಕೆ ವಿರುದ್ಧವಾದದ್ದು ಎಂದರೆ ಏನು ಇದೆಯೋ ಅದನ್ನು ವಿಸ್ತಾರಿಸಿಕೊಳ್ಳುವುದು."ಆಗುವುದು" ಎಂಬುದು "ಇರುವುದರ" ವಿರುದ್ಧ ಸ್ಥಿತಿಯಲ್ಲ,ಬಹುಶಃ ಏನು ಇದೆಯೋ ಆದರ ವಿಸ್ತರಣೆ ಮಾತ್ರವಾಗಿರುತ್ತದೆ.ಅಥವಾ ಒಂದಿಷ್ಟು ಪರಿಷ್ಕಾರಗೊಂಡಿರುತ್ತದೆ‌. ಹಾಗೆ ಮೂಡಿಸಿಕೊಂಡ ಬಿಂಬದತ್ತ ಸಾಗುವ ಪ್ರಯಾಣದಲ್ಲಿ ಸಂಘರ್ಷ ಹುಟ್ಟಿಕೊಳ್ಳುತ್ತದೆ‌.‌..ನೀವು ಏನೋ ಆಗಲು ಪ್ರಯತ್ನಿಸುತ್ತಿದ್ದೀರಿ,ಆ ಏನೋ ಎಂಬುದು ನಿಮ್ಮ ಭಾಗವೇ ಆಗಿದೆ‌. ಆದರ್ಶವು ನೀವೇ ಮೂಡಿಸಿಕೊಂಡ ಕಲ್ಪನೆ. ಮನಸ್ಸು ಹೇಗೆ ತನ್ನೊಡನೆ ತಾನು ಆಡುತ್ತದೆ,ಮೋಸ ಮಾಡಿಕೊಳ್ಳುತ್ತದೆ,ನೋಡಿ.  ನೀವು ನಿಮ್ಮದೇ ನೆರಳನ್ನು ಹಿಂಬಾಲುಸುತ್ತಾ,ನಿಮ್ಮದೇ ಬಿಂಬದ ಬೆನ್ನು ಹತ್ತುತ್ತಾ, ಪದಗಳೊಡನೆ ಆಡುತ್ತಾ ಸಂಘರ್ಷದಲ್ಲಿ ಸಿಕ್ಕಿಕೊಂಡಿದ್ದೀರಿ.  ನಿಮ್ಮಲ್ಲಿ ಹಿಂಸೆ ತುಂಬಿದ್ದರೆ  ಅಹಿಂಸೆಯ ಶಾಂತ ಸ್ವಭಾವದ ಆದರ್ಶದಂತೆ ಆಗಲು ಬಯಸುತ್ತೀರಿ.ಆದರೆ ಆ ಆದರ್ಶ ಈಗ ಏನು ಇದೆಯೋ ಅದರದ್ದೇ ಇನ್ನೊಂದು ಬಿಂಬ, ಆದರೆ ಹೆಸರು ಮಾತ್ರ ಬೇರೆ,ಅಷ್ಟೇ.

ನಿಮಗೆ ನೀವೇ ಮಾಡಿಕೊಳ್ಳುವ ಈ ಮೋಸದ ಬಗ್ಗೆ ಎಚ್ಚರವಾಗಿದ್ದಾಗ ಮಾತ್ರ ಯಾವುದು ಸುಳ್ಳೋ ಅದು ಸುಳ್ಳಾಗಿ ಕಾಣುತ್ತದೆ. ಭ್ರಮೆಯನ್ನು ನಿಜ ಮಾಡಿಕೊಳ್ಳುವ ಸಂಘರ್ಷವೇ ಛಿದ್ರತೆಗೆ ಕಾರಣವಾಗುತ್ತದೆ. ಎಲ್ಲಾ ಸಂಘರ್ಷ, ಏನೋ ಆಗುವ ಎಲ್ಲಾ ಪ್ರಯತ್ನ, ಛಿದ್ರತೆಯನ್ನು ಉಂಟುಮಾಡುತ್ತದೆ. ಮನಸ್ಸು ಆಡುವ ಈ ಆಟದ ಬಗ್ಗೆ ಎಚ್ಚರ ಮೂಡಿದಾಗ ಏನು ಇದೆಯೆ ಅದು ಮಾತ್ರ ಇರುತ್ತದೆ‌. ಎಲ್ಲಾ ಬಗೆಯ ಆಗುವ ಆಸೆ,ಎಲ್ಲ ಆದರ್ಶ, ಎಲ್ಲ ಹೋಲಿಕೆ, ಎಲ್ಲ ತಿರಸ್ಕಾರಗಳನ್ನು ಮನಸ್ಸು ಪೂರ್ತಿಯಾಗಿ ನೀಗಿಕೊಂಡಾಗ,ಮನಸ್ಸಿನ ರಚನೆ ಕುಸಿದಾಗ,ಏನು ಇದೆಯೋ ಅದು ಪೂರ್ಣವಾಗಿ ಬದಲಾಗಿಬಿಡುತ್ತದೆ. ಎಲ್ಲಿಯವರೆಗೆ ಏನಿದೆಯೋ ಅದಕ್ಕೆ ಒಂದು ಹೆಸರು ಇಡುತ್ತಿರುತ್ತೇವೆಯೋ ಅಲ್ಲಿಯವರೆಗೆ ಇರುವುದಕ್ಕೂ ಮನಸ್ಸಿಗೂ ಸಂಬಂಧವಿರುತ್ತದೆ‌.ಹೆಸರಿಡುವ ಕೆಲಸವೆಂದರೆ ನೆನಪು ಎಂದರ್ಥ. ಮನಸ್ಸಿನ ರಚನೆ ನಿಂತಿರುವುದೇ ಈ ನೆನಪುಗಳ ಮೇಲೆ. ಹೆಸರು ಇಡುವುದು ಇಲ್ಲವಾದಾಗ ಏನು ಇದೆಯೋ ಅದು ಇಲ್ಲವಾಗುತ್ತದೆ. ಅದು ಪೂರ್ಣವಾದ ಐಕ್ಯ. (ಆತ್ಮ ಸಂಧಾನದ ಸ್ಥಿತಿ)....

*ಮೂಲ *;ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು






ವೆಂಕಟೇಶ ಭಂಡಾರಿ,ಕುಂದಾಪುರ

No comments:

Post a Comment