BhandaryVarthe Team

BhandaryVarthe Team
Bhandary Varthe Team

Sunday, 5 September 2021

ನನ್ನ ಬಾಳ ಗುರು - ಎ.ಆರ್.ಭಂಡಾರಿ.ವಿಟ್ಲ.

"ಕರುಣಾಳು ಬಾ ಬೆಳಕೆ ಮುಸುಕಿದಿ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು " ಎಂಬ ಅಂತರ್ ಧ್ವನಿಗೆ ಗರ್ಭದ ಮೌನದೊಳಗೆ ನನ್ನರಿವಿಗೆ "ಅರಿವಿನ" ಭಾಷ್ಯ ಬರೆದವಳು ನನ್ನಮ್ಮ.ಗುರು ಮತ್ತು  ದೇವರಲ್ಲಿ ಮೊದಲಿಗೆ ದೇವರ ಅಸ್ತಿತ್ವವನ್ನು ತಿಳಿಸಿದ ಗುರುವಿಗೆ ನಮನ ಸಲ್ಲಿಸುತ್ತೇನೆಂದವನು ಕಬೀರ.ಆದರೆ ಗುರು ಲೋಕೆ ಅದ್ಭುತ ಪರಿಚಯವನ್ನು ಮಾಡಿದವಳು ಗುರುವಿಗೇ ಗುರುವಾದ ತಾಯಿ.ಆದ್ದರಿಂದ ನಾನು ಮರೆಯಲಾರದ ಗುರುವೇ ನನ್ನಮ್ಮ.



 ಜೀವನ ಪ್ರೀತಿ ಮೂಡಿಸುವುದರೊಂದಿಗೆ ಬದುಕಿನ ದಾರಿ ತೋರಿದ ಶಿಲ್ಪಿ ಅವಳು.ತೊದಲು ನುಡಿಯೊಂದಿಗೆ ಮೊದಲ ಅಕ್ಷರ ಬರೆಸಿದ ಅಕ್ಷರದಾತೆ ಈಕೆ‌.ಆಪ್ತತೆಯಿಂದ ಪಾಠ ಮಾಡುವ , ಕಷ್ಟಕರ ಎನಿಸುವ  ಗಣಿತ,ವಿಜ್ಞಾನಗಳ ಥಿಯರಿ ಗೆ ಬದುಕಿನ ಉದಾಹರಣೆಗಳನ್ನು ನೀಡಿ,ಭಾಷಾ ವಿಷಯಗಳಲ್ಲಿ ಹಿಡಿತ ಸಾಧಿಸಲು, ಶಾಲಾ ವಾತಾವರಣದ ಬಗ್ಗೆ ಪ್ರೀತಿ ಮೂಡಿಸಿದ ಶಿಕ್ಷಕಿ ನನ್ನಮ್ಮ.

    ಪುಸ್ತಕದ ಹೊರತಾಗಿ ಸಾಂಸ್ಕೃತಿಕ ಚಟುವಟಿಕೆಗಳು,ಸ್ಪರ್ಧೆ ಗಳಲಿ "ಆಕಾಶಕ್ಕಿಂತ ಅವಕಾಶ ದೊಡ್ಡದು" ಎಂಬಂತೆ ಹೊಸ ಅವಕಾಶಗಳತ್ತ ಬೆರಳು ತೋರಿದ ದಾರಿದೀಪ 'ನನ್ನ ಗುರು' ....ಅವರೆಂದರೆ ನನ್ನಮ್ಮ.



    ತನ್ನಂಗೈಯೊಳಗೆ ನನ್ನ ಕಿರುಬೆರಳಿನಿರಿಸಿ ಹೆಜ್ಜೆ ಕಲಿಸಿ, ಬಾಲ್ಯದ ವಿಸ್ಮಯಗಳೊಂದಿಗೆ ಕೌಮಾರ್ಯದ ಕೌತುಕಗಳನ್ನು ಎಳೆ ಎಳೆಯಾಗಿ ಅರಿವಿನ ಮಸ್ತಕದೊಳಗೆ ಯಾವ ಪೆನ್ನು, ಪಠ್ಯದ ಸಹಾಯವಿಲ್ಲದೆ ತುರುಕಿದ ನಗುಮೊಗದ ಹಸನ್ಮುಖಿ ನನ್ನ ಗುರು.ಅವಳೇ ನನ್ನಮ್ಮ ಎನ್ನಲು ಹೆಮ್ಮೆ ನನಗೆ.

      ಬಾಳ ನಾಗಲೋಟದಲ್ಲಿ ಎಲ್ಲೆಲ್ಲೂ ಸ್ಪರ್ಧೆಗಳೇ.ಅನ್ಯರನ್ನು ಮೆಚ್ಚಿಸುವುದು ಏಳ್ಗೆಯ ಹೆಗ್ಗುರುತಲ್ಲ.ಪ್ರತೀ ದಿನವೂ ಆರಂಭವೇ.ಪ್ರತಿ ಸೋಲೂ ಗೆಲುವಿನ ಆರಂಭ ಎಂದು ಹುರಿದುಂಬಿಸಿದ ನನ್ನ ಬಾಳ ಮೊದಲ ಶಿಕ್ಷಕಿ ಈಕೆ.

      ಮಗುವೊಂದರ ಮುಗ್ಧತೆಯಂತೆ,ಹೂವೊಂದರ ಸ್ನಿಗ್ಧತೆಯಂತೆ ಅಸಹಾಯಕರ ಜತೆಯೂ ಬೆರೆತು‌ ಬದುಕಲು,ಚೇತನ ಅಚೇತನಗಳ ಜೊತೆ ಮೇಳೈಸಲು,ಜೀವನ ರಸಪಾಕದ ಹದವನ್ನು ಉಣಬಡಿಸಿದ ಈ ಗುರುವನ್ನು ನಾನೆಂತು ಮರೆಯಲಿ? ಸೃಷ್ಟಿಯ ಸುಂದರ ಸಹಜತೆಯಲಿ ಈ ವಿಶಾಲ ಜಗತ್ತನ್ನು, ನನ್ನ ಮತ್ತು ನನ್ನವರ ಪರ ಎದುರಿಸಲು ನನ್ನನಣಿ ಮಾಡುತ್ತಾ , ಒಮ್ಮೆ ಕಲಿತದ್ದು ಎಲ್ಲಿಗೂ ಸಾಲದು.ಕ್ಲಿಷ್ಟ ಮತ್ತು ಹೊಸ ವಿಷಯಗಳನ್ನು ಸತತವಾಗಿ, ವೇಗವಾಗಿ ಕಲಿಯುವ ಸಾಮರ್ಥ್ಯ ಕ್ಕೇ ಶಿಸ್ತೇ ಮುಖ್ಯ ವೆಂದು ಜೀವನದ ತಿರುವುಗಳಲ್ಲಿ ಕೈ ಹಿಡಿದು ಮುನ್ನಡೆಸಿದ ಗುರು ನನ್ನಮ್ಮ. 

        ದೇಶದ  ಭವಿಷ್ಯವು ತರಗತಿಯ ಕೋಣೆಯಲ್ಲಡಗಿದೆ ಎಂಬ ಮಾತಿದ್ದರೂ, ಜೀವನದ ಪ್ರತಿ ಕ್ಷಣಗಳಲ್ಲಿ ಗುರುವಾಗಿ, ಮಾತೆಯಾಗಿ , ಸ್ನೇಹಿತೆಯಾಗಿ, ಸೋದರಿಯಾಗಿ ನಿಂತ ಜನ್ಮದಾತೆ ನನ್ನ ಗುರು.ಕೆಲಸದ ಒತ್ತಡದಲ್ಲಿಯೂ, ನಮ್ಮೊಡನೆ ಪುಟಾಣಿ ಪಾಪಚ್ಚಿಯಾಗಿ,ತಪ್ಪು ಮಾಡಿದಾಗ ಬೆತ್ತ ಹಿಡಿದು ಗದರಿಸೋ ಮೇಷ್ಟ್ರಾಗಿ ಬದುಕಿನ ಅ,ಆ,ಇ,ಈ ಗಳೊಂದಿಗೆ ಕಾಗುಣಿತಗಳ ರಸವನ್ನು ಉಣ ಬಡಿಸಿದವಳು ಈಕೆ.ದಿನ ನಿತ್ಯದ ಕಾರ್ಯಗಳೊಂದಿಗೆ ಜೀವನದ ಲೆಕ್ಕಾಚಾರ, ತಿಂಡಿಯ ಜತೆ ಗಣಿತ,ಆಟದ ಜತೆ ಪರಿಸರ,ಊಟದ ಜತೆ ಭಾಷಾ ಪಾಠಗಳನ್ನು ಕಲಿಸಿದ ಮಹಾನ್   ಜಾಣೆ ನನ್ನ ಗುರು.ಕಾಣದೂರಿನಲ್ಲಿ ನೀನಿದ್ದರೂ ಸದಾ ಉಸಿರಾಗಿ ಕಾಯುವ ನನ್ನಮ್ಮನ ಮರೆಯೆನೆಂದರೆ ಮರೆಯಲಿ ಹೇಗೆ? ಈ ನನ್ನ ಗುರುವನ್ನು....? 


   ✍🏻ಎ.ಆರ್.ಭಂಡಾರಿ.ವಿಟ್ಲ.

No comments:

Post a Comment