ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಡಾ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮ ದಿನೋತ್ಸವದ ಅಂಗವಾಗಿ ಆಚರಿಸಲ್ಪಡುವ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನೀಡಲಾಗುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗೆ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಬೊಳ್ಳುಕಲ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಬೆಳ್ತಂಗಡಿ ತಾಲೂಕಿನ ಪಣೆಜಾಲು ಶಿವಾನಂದ ಭಂಡಾರಿಯವರು ಭಾಜನರಾಗಿದ್ದಾರೆ.
ಸೆಪ್ಟೆಂಬರ್ 5 ನೇ ಭಾನುವಾರದಂದು ನಗರದ ಜಪ್ಪಿನಮೊಗರು ಪ್ರೆಸ್ಟೀಜ್ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಶಿವಾನಂದ ಭಂಡಾರಿಯವರನ್ನುಸನ್ಮಾನಿಸಿ ಗೌರವಿಸಲಾಯಿತು.
ಬೆಳ್ತಂಗಡಿ ತಾಲೂಕು ಪಣೆಜಾಲು ನಿವಾಸಿ ಶ್ರೀ ಲೋಕಯ್ಯ ಭಂಡಾರಿ ಹಾಗೂ ಶ್ರೀಮತಿ ಸುನಂದ ದಂಪತಿಯ ಪುತ್ರನಾಗಿ ಜನಿಸಿದ ಶಿವಾನಂದ ಭಂಡಾರಿಯವರು ತನ್ನ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸವನ್ನು ಗುರುವಾಯನಕೆರೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾಭ್ಯಾಸವನ್ನು ಬೆಳ್ತಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲೂ ಪೂರೈಸಿ, ಮುಂದಕ್ಕೆ ಡಿ.ಇಡಿ ತರಬೇತಿಯನ್ನು ಮಂಗಳೂರಿನ ಸರಕಾರಿ ಶಿಕ್ಷಕ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪೂರೈಸಿ, ಸುಳ್ಯ ತಾಲೂಕಿನಲ್ಲಿ ತನ್ನ ಸರಕಾರಿ ವೃತ್ತಿ ಜೀವನವನ್ನು ಆರಂಭಿಸಿ, ಅಲ್ಲಿನ ತನ್ನ 9 ವರ್ಷಗಳ ಸೇವಾವಧಿಯಲ್ಲೇ ತನ್ನ ಕ್ರಿಯಾಶೀಲ ಕಾರ್ಯವೈಖರಿಯಿಂದ “ತಾಲೂಕಿನ ಅತ್ಯುತ್ತಮ ಶಿಕ್ಷಕ' ಪ್ರಶಸ್ತಿಗೆ ಪಾತ್ರರಾಗಿರುವುದು ವಿಶೇಷ.
ಊರಸೆಳೆತದಿಂದ ತನ್ನೂರಿನ ಕುಗ್ರಾಮದ ಶಾಲೆಯೊಂದಕ್ಕೆ ವರ್ಗಾವಣೆಗೊಂಡ ಇವರು 2006ರಲ್ಲಿ ಸದ್ರಿ ಶಾಲೆಗೆ ಮುಖ್ಯಶಿಕ್ಷಕರಾಗಿ ಆಗಮಿಸಿದಾಗ ಅಲ್ಲೊಂದು ಅರ್ಪಣಾ ಮನೋಭಾವದ, ಹೊಸತನಕ್ಕಾಗಿ ತುಡಿಯುವ ಕ್ರಿಯಾಶೀಲ ಶಿಕ್ಷಕರ ತಂಡವೊಂದು ಕಾರ್ಯಾಚರಿಸುತ್ತಿತ್ತು.
ಅವರುಗಳ ಇಚ್ಛಾಶಕ್ತಿ ಬೂದಿಮುಚ್ಚಿದ ಕೆಂಡದಂತಿದ್ದು, ತಮ್ಮ ಸಾಮರ್ಥ್ಯ ಹೊರಗೆಡವಲು ತವಕಿಸುತ್ತಿದ್ದರು. ಆ ಸಮಯದಲ್ಲೇ ಈ ಮಹಾನುಭಾವರು ಬಿರುಗಾಳಿಯಾಗಿ ಬಂದು ಆ ಬೆಂಕಿಯನ್ನು ಕೆದಕುವ ಕೆಲಸವನ್ನುಅಲ್ಲಿಂದ ಆರಂಭವಾಯಿತು. ಸೇವಾ ಮನೋಭಾವನೆ, ಸಂಘಟನಾ ಚತುರತೆ, ಜನೋಪಯೋಗಿ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ, ಸಮಷ್ಟಿಯೊಂದಿಗಿನ ಮಾನವೀಯ ಸ್ಪಂದನೆ, ಶಾಲೆಯ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಮಾತ್ರವಲ್ಲದೇ ರಜಾ ದಿನಗಳಲ್ಲೂ ಕರ್ತವ್ಯ ನಿರ್ವಹಿಸುವ ಮೂಲಕ ಊರ ಸಮಗ್ರ ನಾಗರೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯದ ಸಹಕಾರದೊಂದಿಗೆ ಇಂದು ಈ ಶಾಲೆಯನ್ನು ಒಂದು ಮಾದರಿ ಶಾಲೆಯಾಗಿ ರೂಪಿಸುವ ಮೂಲಕ ತನ್ನ ವೃತ್ತಿಯಲ್ಲಿ ಸಾರ್ಥಕತೆಯನ್ನು ಮೆರೆದುದು ಮಾತ್ರವಲ್ಲ ಈ ವಿಶಿಷ್ಟ ಸಾಧನೆಗಾಗಿಯೇ ಈ ವರ್ಷದ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಸ್ವೀಕರಿಸಲು ಆಯ್ಕೆಯಾಗಿರುವುದು ಊರ ಪರವೂರ ವಿದ್ಯಾಭಿಮಾನಿಗಳಿಗೆ ಹಬ್ಬದೂಟ ಮಾಡಿದಷ್ಟು ಸಂತೋಷವನ್ನು ನೀಡಿದೆ.
"ಮನುಷ್ಯ ಬೆಳೆಯುವುದು ಯಾರ ಆಶೀರ್ವಾದದಿಂದಲೂ ಅಲ್ಲ- ಸ್ವಪ್ರಯತ್ನದಿಂದ, ಯಾವ ಹರಕೆಯಿಂದಲೂ ಅಲ್ಲ – ತನ್ನ ನಡೆನುಡಿಗಳಿಂದ'' ಎಂಬ ಕಾರಂತರ ಚಿಂತನೆಯಂತೆ ದಣಿವರಿಯದೆ ದುಡಿದ ಇವರ ಕಾರ್ಯಕ್ಷೇತ್ರ ಇಷ್ಟಕ್ಕೇ ಮುಗಿದಿಲ್ಲ. ಇದರೊಂದಿಗೆ ಹಚ್ಚಹಸುರಾಗಿ ಕಂಗೊಳಿಸುವಂತೆ ಮಾಡಿರುವ ಶಾಲಾ ಹೂದೋಟ, ಶಾಲಾ ಪೌಷ್ಠಿಕವನ, ಭತ್ತ ಕೃಷಿ, ತೆಂಗು ಕಂಗುಗಳ ನೆಟ್ಟು ಪೋಷಿಸಿ ಅದರಿಂದ ಬರುವ ಆದಾಯದಿಂದ ಸರಕಾರಿ ಶಾಲೆಯೊಂದರ ಅಸ್ತಿತ್ವಕ್ಕೆ ಬೆನ್ನೆಲುಬಾಗಿಸುವ ಮಹದಾಸೆ.
ಇದರೊಂದಿಗೆ ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ದುರ್ಗಾಪರಮೇಶ್ವರಿ ಯಕ್ಷಗಾನ ಸಂಘದ ಅಧ್ಯಕ್ಷರಾಗಿ, ಪ್ರಸ್ತುತ ಶ್ರೀ ಬನಶಂಕರಿ ಯಕ್ಷ ಕಲಾತಂಡದ ಸಂಚಾಲಕರಾಗಿ ಸಮಾಜಮುಖೀ ಚಿಂತನೆಗಳೊಂದಿಗೆ ಯಕ್ಷ ಕಲಾವಿದರಾಗಿ, ವೇಷಧಾರಿಯಾಗಿ, ಅರ್ಥದಾರಿಯಾಗಿ, ಯಕ್ಷ ಭಾಗವತರಾಗಿ, ಹಿಮ್ಮೇಳವಾದಕರಾಗಿ, ಆಕಾಶವಾಣಿ ಕಲಾವಿದನಾಗಿ, ನಾಟಕಕಾರನಾಗಿ, ಚಿತ್ರಕಾರನಾಗಿ, ಧಾರ್ಮಿಕ ಉಪನ್ಯಾಸಕನಾಗಿ, ಸಾಹಿತ್ಯದ ಕೃಷಿಕನಾಗಿ- ಹೀಗೆ ಇವರು ಕೈಯಾಡಿಸದ ಕ್ಷೇತ್ರಗಳಿಲ್ಲವೇನೋ ಅನ್ನಬಹುದು.
ಇಂತಹ ಅಪರಿಮಿತ ಸಾಧನೆಗಳ ಹರಿಕಾರ, ಹಲವಾರು ಸಮ್ಮಾನ, ಪುರಸ್ಕಾರಗಳ ಸರದಾರ ಸನ್ಮಾನ್ಯ ಶಿವಾನಂದ ಭಂಡಾರಿಯವರ ಮಹಾನ್ ಸಾಧನೆಗೆ, ಕತೃತ್ವ ಶಕ್ತಿಗೆ ತಲೆಬಾಗಿ ವಂದಿಸುತ್ತಾ ಇವರ ಸೇವಾ ಅವಧಿಯಲ್ಲಿ ಇನ್ನಷ್ಟುಪ್ರಶಸ್ತಿ ಪುರಸ್ಕಾರಗಳು ಇವರಿಗೆ ಒಲಿದು ಬರಲಿ, ಇವರಿಂದ ವಿದ್ಯೆ ಕಲಿತ ಮಕ್ಕಳು ಕೂಡ ಸಾಧನೆಯ ಶಿಖರದಲ್ಲಿ ಮಿಂಚಿ ಇವರ ಕೀರ್ತಿಯನ್ನು ಬೆಳಗಲಿ ಎಂದು ಹಾರೈಸುತ್ತ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಪಣೆಜಾಲು ಶಿವಾನಂದ ಭಂಡಾರಿ ಯವರಿಗೆ ಶುಭಾಶಯಗಳನ್ನು ಕೋರುತ್ತದೆ .
-ಭಂಡಾರಿ ವಾರ್ತೆ
No comments:
Post a Comment