BhandaryVarthe Team

BhandaryVarthe Team
Bhandary Varthe Team

Saturday, 11 September 2021

ದಾಲ್ಚಿನ್ನಿ (ಚಕ್ಕೆ) ಯ ಬಗ್ಗೆ ಮಾಹಿತಿ-ಸುಪ್ರೀತ ಪ್ರಶಾಂತ್ ಭಂಡಾರಿ, ಸೂರಿಂಜೆ

 ಸಸ್ಯಲೋಕ  -13 

 
ಪ್ರಕೃತಿಯಲ್ಲಿ ತಾನಾಗಿ ಬೆಳೆಯುವ ಅನೇಕ ಸಸ್ಯಗಳಲ್ಲಿ ದಾಲ್ಚಿನ್ನಿ ಕೂಡ ಒಂದು. ವರ್ಣರಂಜಿತ ಚಿಗುರಿನ ಮೂಲಕ ತನ್ನ ಸೌಂದರ್ಯವನ್ನು ಪ್ರದರ್ಶಿಸುವ ಮರಗಳಲ್ಲಿ ದಾಲ್ಚಿನ್ನಿ ಮರ ಬಹಳ ಆಕರ್ಷಕ. ದಾಲ್ಚಿನ್ನಿ ಮರ ಚಿಗುರಿದಾಗ ನಸುಗೆಂಪನೆಯ ಚಿಗುರು ಎಲೆಗಳಿಂದ ಇಡೀ ಮರವೇ‌ ಸುಂದರ ರಂಗು ರಂಗಿನ ಹೂವಿನ ಹಾಗೆ ನೋಟಕರಿಗೆ ಮುದ ನೀಡುತ್ತದೆ. ಈ ಚಿಗುರೆಲೆ ಬೆಳೆದಾಗ ಹಸಿರು ಬಣ್ಣಕ್ಕೆ ತಿರುಗುತ್ತದೆ.
ದಾಲ್ಚಿನ್ನಿಯು ಲಾರೆಸಿಯಾ ಕುಟುಂಬಕ್ಕೆ ಸೇರಿದ್ದು ಸಸ್ಯಶಾಸ್ತ್ರದಲ್ಲಿ ಇದನ್ನು 'cinnamon' ಎನ್ನುತ್ತಾರೆ. ತುಳುವಿನಲ್ಲಿ 'ಇಜಿನ್' , ಸಂಸ್ಕೃತದಲ್ಲಿ 'ತಮಾಲಪತ್ರ' ಕನ್ನಡದಲ್ಲಿ 'ಸಾಂಬಾರ ಪತ್ರೆ', 'ಕಾಡುಲವಂಗ' ಹಾಗೂ ಇಂಗ್ಲೀಷ್ ನಲ್ಲಿ ಚೈನೀಸ್ ಕ್ಯಾಶಿಯಾ ಹಾಗೂ ಸಿನ್ನಮನ್ ಎಂದು ಕರೆಯಲ್ಪಡುವ ದಾಲ್ಚಿನ್ನಿ ಯ ಮೂಲ ಶ್ರೀಲಂಕಾ ಹಾಗೂ ಕೇರಳದ ಮಲಬಾರ್.   ಈ ಮರದ ಚಕ್ಕೆ ಅಂದರೆ ತೊಗಟೆ ಮತ್ತು ಎಲೆಗಳನ್ನು ಮಾಂಸದ ಪದಾರ್ಥಗಳಲ್ಲಿ ಉಪಯೋಗಿಸುತ್ತಾರೆ. ಮಾಂಸಾಹಾರಿಗಳು ಹೆಚ್ಚಾಗಿ ಮನೆಯ ಬಳಿ ಈ ಮರವನ್ನು ಬೆಳೆಸುತ್ತಾರೆ. ಇದರ ಎಲೆ ಹೂ ಮತ್ತು ಚಕ್ಕೆಗಳು ಪದಾರ್ಥವಾಗಿ ಬಳಕೆಯಾದರೆ ಕಾಯಿಗಳು ಎಣ್ಣೆ ತಯಾರಿಕೆಗೆ ಬಳಕೆಯಾಗುತ್ತದೆ ಹಾಗಾಗಿ ಮಾರುಕಟ್ಟೆಯಲ್ಲಿ ಇದಕ್ಕೆ ಬಹಳ ಬೇಡಿಕೆ ಇದೆ.


ಇದರಲ್ಲಿ ಕಬ್ಬಿಣ, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಸತು, ರಂಜಕ, ಮೇಗ್ನೀಸಿಯಂ ಜೊತೆಗೆ ಸಾರಭೂತ ತೈಲಗಳು  ಸಮೃದ್ಧವಾಗಿವೆಯಂತೆ.  ಮಾರುಕಟ್ಟೆಯಲ್ಲಿ ಅತಿ ಬೇಡಿಕೆ ಇರುವ ಸಾಂಬಾರ ಪದಾರ್ಥಗಳಲ್ಲಿ ದಾಲ್ಚಿನ್ನಿ ಯೂ ಒಂದು. ಇದಕ್ಕಾಗಿಯೇ ಅಲ್ವೇ ಬ್ರಿಟಿಷರು ವ್ಯಾಪಾರಕ್ಕೆಂದು ಬಂದು ಇಲ್ಲೇ ನೆಲೆಯೂರಿ ನಮ್ಮನ್ನೆಲ್ಲ ಅವರ ಕಪಿಮುಷ್ಠಿಯಲ್ಲಿ ಇರಿಸಿದ ಕಥೆ ನಿಮಗೆ ಗೊತ್ತೆ ಇದೆ.
ಹೆಚ್ಚಾಗಿ ಕಾಡಿನ ಭಾಗದಲ್ಲಿ ಇರುವ ದಾಲ್ಚಿನ್ನಿ ಮರವನ್ನು ನಾವು ನೋಡಿರುತ್ತೇವೆ. ಆದರೆ ಇದು ಒರಿಜಿನಲ್ ದಾಲ್ಚಿನ್ನಿ ಅಲ್ಲವಂತೆ. ಇದು ದಾಲ್ಚಿನ್ನಿ ಜಾತಿಗೆ ಸೇರಿದ ಮತ್ತೊಂದು ಗಿಡ. ದಾಲ್ಚಿನ್ನಿ ಗುಣ ಇದ್ದರೂ ಒರಿಜಿನಲ್ ದಾಲ್ಚಿನ್ನಿಯಲ್ಲ. ಯಾಕೆಂದರೆ ದಾಲ್ಚಿನ್ನಿಯಲ್ಲಿ ಅನೇಕ ಪ್ರಭೇದಗಳಿವೆ. ಶ್ರೀಲಂಕಾ ಹಾಗೂ ಕೇರಳ ಮೂಲದ ಸಿಲೋನ್ ದಾಲ್ಚಿನ್ನಿ ಒರಿಜಿನಲ್ ಆಗಿದ್ದು. ಮಾರುಕಟ್ಟೆಗೆ ಸಿಗುವ  ಎಲ್ಲಾ ದಾಲ್ಚಿನ್ನಿ ಒರಿಜಿನಲ್ ಅಲ್ಲ ಹೆಚ್ಚಿನ ದಾಲ್ಚಿನ್ನಿಯೂ ಚೈನೀಸ್ ಕ್ಯಾಶಿಯಾ ಎಂಬ ಹೆಸರಿನ ದಾಲ್ಚಿನ್ನಿ. ಇದು ಆರೋಗ್ಯಕ್ಕೂ ಅಷ್ಟು ಒಳ್ಳೆಯದಲ್ಲ.

 ಮಾರುಕಟ್ಟೆಯಲ್ಲಿ ನಿಜವಾದ ದಾಲ್ಚಿನ್ನಿ ಯ ಬೆಲೆ ಎಷ್ಟು ಗೊತ್ತೆ!??

 1ಕೆ.ಜಿ ಮೊಗ್ಗಿಗೆ 800ರೂ.
ಎಲೆಗೆ 60ರೂ ಹಾಗೂ
ಚಕ್ಕೆ ಗೆ 600ರೂ ಬೆಲೆ ಇದೆ



ಹಾಗಾದರೆ ನಿಜವಾದ ದಾಲ್ಚಿನ್ನಿಯನ್ನು ಪತ್ತೆ ಹಚ್ಚುವುದು ಹೇಗೆ!!!?
 
ನಿಜವಾದ ದಾಲ್ಚಿನ್ನಿ ಹಗುರವಾದ ಬಣ್ಣದೊಂದಿಗೆ ಸೂಕ್ಕ್ಮ ಪರಿಮಳ ಮತ್ತು ಸ್ವಲ್ಪ ಕಟುವಾದ ಹಾಗೂ ಸಿಹಿ ರುಚಿಯನ್ನು ಹೊಂದಿದೆ.
ಕ್ಯಾಶಿಯಾ ಕಡು ಬಣ್ಣದೊಂದಿಗೆ ಕೆಂಪು ಬಣ್ಣದ ಛಾಯೆಯನ್ನು ಹೊಂದಿದೆ. ತೀವ್ರವಾದ ವಾಸನೆ ಹಾಗೂ ಕಹಿ ರುಚಿಯನ್ನು ಹೊಂದಿರುತ್ತದೆ. ಇದು ದಪ್ಪವಾಗಿ ಒರಟಾಗಿದ್ದು ಸ್ವಲ್ಪ ಸುರುಳಿಯಾಗಿರುತ್ತದೆ. ಹಾಗಾಗಿ ಇನ್ನು ಮುಂದೆ ದಾಲ್ಚಿನ್ನಿಯ ಆಯ್ಕೆಯನ್ನು ಸರಿಯಾಗಿ ಮಾಡಿಕೊಳ್ಳಿ
ದಾಲ್ಚಿನ್ನಿ ಯ ಬೆಳೆ:-
ಒಣ ಹಾಗೂ ಕಲ್ಲು ಮಿಶ್ರಿತ ಭೂಮಿಗೆ ಯೋಗ್ಯವಾದ ದಾಲ್ಚಿನ್ನಿಯ ಗಿಡವನ್ನು ನರ್ಸರಿಯಿಂದ ತಂದು ಬೆಳೆಸಬಹುದು. ವಿಶೇಷ ಆರೈಕೆ ಬೇಕಾಗದ ಈ ಮರಕ್ಕೆ ಲವಂಗ ಮರದಂತೆ ಗೊಬ್ಬರ ನೀಡಿದರೆ ಸಾಕು.
ಉಪಯೋಗ:-
ದಾಲ್ಚಿನ್ನಿ ಯ ಚಕ್ಕೆಯನ್ನು ಜಗಿದು ತಿನ್ನುವುದರಿಂದ ವಾಕರಿಕೆ ಮತ್ತು ವಾಂತಿ ನಿಲ್ಲುತ್ತದೆ.
ಚಕ್ಕೆಯ ಗಂಧವನ್ನು ಮೊಡವೆಗಳಿಗೆ ಲೇಪಿಸಿದರೆ ಮೊಡವೆಯ ಕಲೆ ಮಾಯವಾಗುತ್ತದೆ.
ದಾಲ್ಚಿನ್ನಿಯ ಚೂರ್ಣಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ನೆಕ್ಕಿದರೆ ಕಫ ಕಡಿಮೆಯಾಗುತ್ತದೆ.
ಹಲ್ಲು ನೋವು ನಿವಾರಣೆಗೆ ಹಾಗೂ ಬಾಯಿಯ ದುರ್ವಾಸನೆಯನ್ನು ತಡೆಗಟ್ಟಲು ಇದನ್ನು ಬಳಸುತ್ತಾರೆ.
ನಂಜುನಿರೋಧಕ
ಗ್ಯಾಸ್ಟ್ರಿಕ್ ‌ಸಮಸ್ಯೆಗಳಿಗೆ ದಾಲ್ಚಿನ್ನಿಯಲ್ಲಿದೆ ಪರಿಹಾರ.
ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಚೈತನ್ಯವನ್ನು ಹೆಚ್ಚಿಸುವ ಗುಣ ಇದಕ್ಕಿದೆ ಆದರೆ ನೆನಪಿರಲಿ ಅತಿಯಾದ ದಾಲ್ಚಿನ್ನಿ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ.









✍️ ಸುಪ್ರೀತ ಪ್ರಶಾಂತ್ ಭಂಡಾರಿ, ಸೂರಿಂಜೆ


No comments:

Post a Comment