ಗರ್ಭಕೋಶ ಮಹಿಳೆಯರಿಗೆ ಬಹುಮುಖ್ಯವಾದ ಅಂಗವಾಗಿದೆ. ಗರ್ಭಕೋಶ ಸಂತಾನೋತ್ಪತ್ತಿಗೆ ಪ್ರಮುಖವಾಗಿದ್ದು, ಪ್ರತಿಯೊಬ್ಬ ಹೆಣ್ಣಿಗೂ ಪ್ರತೀ ತಿಂಗಳು ಋತುಸ್ರಾವವಾಗಲು ಗರ್ಭಕೋಶವೇ ನೆರವಾಗುತ್ತದೆ. ಅಂಡಾಶಯದಿಂದ ಬಿಡುಗಡೆಯಾಗುವ ಅಂಡಾಣು ಗರ್ಭನಾಳದ ಮುಖಾಂತರ ಗರ್ಭಕೋಶಕ್ಕೆ ತಲುಪಿ, ಅಲ್ಲಿ ವೀರ್ಯಾಣುವಿನ ಸಂಪರ್ಕಕ್ಕೆ ಬಂದಾಗ ಭ್ರೂಣವನ್ನು ಹಿಡಿದಿಟ್ಟುಕೊಂಡು ಅದರ ಬೆಳವಣಿಗೆಗೆ ಸಹಕಾರ ನೀಡುತ್ತಿದೆ. ಇಂತಹ ಮಹತ್ತರ ಕೆಲಸಕ್ಕೆ ನೆರವಾಗುವ ಗರ್ಭಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ.
ಗರ್ಭಕೋಶ ಆರೋಗ್ಯಕರವಾಗಿದ್ದರೆ, ಅನಿಯಮಿತ ಋತುಸ್ರಾವ, ಸೋಂಕುಗಳು, ಫೈಬ್ರಾಯ್ಡ್, ಗರ್ಭಕೋಶದಲ್ಲಿ ಉಂಟಾಗುವ ನೋವು, ಮುಟ್ಟಿನ ಸಮಯದಲ್ಲಿ ಸೆಳೆತ ಸಮಸ್ಯೆಗಳಿಂದ ದೂರ ಇರಬಹುದು.ಹಾಗಾದರೆ ಗರ್ಭಕೋಶ ಆರೋಗ್ಯ ಕಾಪಾಡುವುದು ಹೇಗೆ...?
ಇಂದಿನ ಜೀವನ ಶೈಲಿ ಹಾಗೂ ಆಹಾರ ಕ್ರಮಗಳು ನಮ್ಮ ದೇಹಕ್ಕೆ ಆರೋಗ್ಯವನ್ನು ಒದಗಿಸುವುದಕ್ಕಿಂತ ಅನಾರೋಗ್ಯ ಸೃಷ್ಟಿಸುವುದೇ ಹೆಚ್ಚು. ಹಾಗಾಗಿ ನಾವು ಆಯ್ಕೆ ಮಾಡಿಕೊಳ್ಳುವ ಆಹಾರ ಹಾಗೂ ಜೀವನ ಕ್ರಮ ಉತ್ತಮವಾಗಿರಬೇಕು.
ಸೊಪ್ಪು ಮತ್ತು ತರಕಾರಿ ನಮ್ಮ ದೇಹದ ಸಂಪೂರ್ಣ ಆರೋಗ್ಯದ ವಿಚಾರದಲ್ಲಿ ಬಹಳಷ್ಟು ಉತ್ತಮ ಲಾಭಗಳನ್ನು ತಂದುಕೊಡುತ್ತದೆ. ಸೊಪ್ಪಿನಲ್ಲಿರುವ ಅನೇಕ ಅಂಶಗಳು ಮಹಿಳೆಯರ ದೇಹದ ಬಹುತೇಕ ಸಮಸ್ಯೆಗಳಿಗೆ ಸಹಕಾರಿಯಾಗಿ ಕೆಲಸ ಮಾಡುತ್ತವೆ.
ವೈಜ್ಞಾನಿಕವಾಗಿ ಹಾರ್ಮೋನುಗಳ ಸಮತೋಲನದಿಂದ ಹಿಡಿದು ಸೊಪ್ಪಿನಲ್ಲಿರುವ ಆಂಟಿ - ಇಂಪ್ಲಾಮೇಟರಿ ಗುಣಲಕ್ಷಣಗಳು, ಮಹಿಳೆಯರ ದೇಹದಲ್ಲಿ ಉಂಟಾಗುವ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಿ ಗರ್ಭಕೋಶದ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ನಿಮ್ಮ ಪ್ರತಿ ದಿನದ ಆಹಾರ ಪದ್ಧತಿಯಲ್ಲಿ ಮಾಂಸಾಹಾರಕ್ಕೆ ಬದಲಾಗಿ ಹೆಚ್ಚು ಹಣ್ಣುಗಳು, ಸೊಪ್ಪು ಮತ್ತು ತರಕಾರಿಯನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು.
ಹೆಚ್ಚಾಗಿ ಕಾಫಿ ಕುಡಿಯುವವರು ಅಭ್ಯಾಸವನ್ನು ಬಿಡುವುಡು ಒಳ್ಳೆಯದು. ಹೆಚ್ಚಿನ ಪ್ರಮಾಣದ ಕೆಫೀನ್ ಸೇವನೆಯು ಗರ್ಭಪಾತ ಸಮಸ್ಯೆಗಳಿಗೆ ಕಾರಣವಾಗಬಹುದು. ಹೆಚ್ಚಿನ ಪ್ರಮಾಣದ ಕೆಫೀನ್ ಸೇವನೆಯು ಈಸ್ಟ್ರೊಜೆನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಗರ್ಭಾಶಯದ ಫೈಬ್ರಾಯ್ಡ್‌ಗಳು ಪ್ರಚೋದನೆಗೊಳ್ಳುವಂತೆ ಮಾಡುತ್ತದೆ.
ಸಕ್ಕರೆ ಪ್ರಮಾಣ ದೇಹದಲ್ಲಿ ಹೆಚ್ಚಾದಂತೆಲ್ಲಾ ದೇಹದ ಉರಿಯೂತ ಸಮಸ್ಯೆ ತೀವ್ರಗೊಂಡು ದೇಹದ ಹಲವು ಭಾಗಗಳಲ್ಲಿ ನೋವು ಹೆಚ್ಚಾಗಿ ಆಂತರಿಕ ರೋಗ ನಿರೋಧಕ ವ್ಯವಸ್ಥೆ ತಗ್ಗುತ್ತಾ ಹೋಗುತ್ತದೆ.
ಇದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳು ಕ್ಷೀಣಿಸಿ ಸಮತೋಲನ ಕಳೆದುಕೊಂಡು ಯುಟಿರೈನ್ ಫೈಬ್ರಾಯ್ಡ್ ಸಮಸ್ಯೆ ಉದ್ಭವವಾಗಲು ಕಾರಣವಾಗುತ್ತದೆ.
ಮಹಿಳೆಯರ ದೇಹದ ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ವ್ಯಾಯಾಮ ಅತ್ಯಗತ್ಯ. ಜೊತೆಗೆ ದೇಹದ ತೂಕ ನಿರ್ವಹಣೆಯಲ್ಲಿ ಮತ್ತು ದೇಹದ ಹಾರ್ಮೋನುಗಳ ಸಮತೋಲನವನ್ನು ಕಾಪಾಡಲು ಮಹಿಳೆಯರು ವ್ಯಾಯಾಮ ಮಾಡಬೇಕು.
ಮದ್ಯಪಾನ ಆರೋಗ್ಯದ ವಿಚಾರದಲ್ಲಿ ಅದರಲ್ಲೂ ಮಹಿಳೆಯರ ಆರೋಗ್ಯದ ವಿಚಾರವನ್ನು ನೋಡುವುದಾದರೆ, ದೇಹದಲ್ಲಿ ಬಹಳಷ್ಟು ಬದಲಾವಣೆಗಳನ್ನು ಪರೋಕ್ಷವಾಗಿ ತಂದು ಮುಂದಿನ ದಿನಗಳಲ್ಲಿ ವಿಪರೀತ ದೈಹಿಕ ಯಾತನೆಯನ್ನು ಅನುಭವಿಸುವಂತೆ ಮಾಡುತ್ತದೆ.
ಮದ್ಯಪಾನದಿಂದ ದೇಹದಲ್ಲಿ ಉರಿಯೂತ ಉಂಟಾಗಿ ದೇಹದ ತೂಕ ಹೆಚ್ಚಾಗುವಂತೆ ಪ್ರೇರೇಪಿಸಿ, ಹಾರ್ಮೋನುಗಳ ವ್ಯತ್ಯಾಸ ಮತ್ತು ಅಸಮತೋಲನತೆಗೆ ಕಾರಣವಾಗುತ್ತದೆ. ಹೀಗಾಗಿ ಗರ್ಭಕೋಶದ ಆರೋಗ್ಯ ಕಾಪಾಡಿಕೊಳ್ಳಲು ಬಯಸುವವರು ಇದರಿಂದ ದೂರ ಉಳಿದರೆ ಒಳ್ಳೆಯದು.
ಗರ್ಭಕೋಶದ ಆರೋಗ್ಯ ಹೆಚ್ಚಿಸುವ ಆಹಾರಗಳು ಪದಾರ್ಥಗಳಿವು...
ಸಿಟ್ರಸ್ ಹಣ್ಣುಗಳು
ಕಿತ್ತಳೆ, ದ್ರಾಕ್ಷಿ, ಮೂಸಂಬಿ ಸೇರಿದಂತೆ ಇನ್ನಿತರ ಸಿಟ್ರಸ್ ಹಣ್ಣುಗಳು ವಿಟಮಿನ್-ಸಿ ಅನ್ನು ಸಮೃದ್ಧವಾಗಿ ಪಡೆದಿರುತ್ತವೆ. ಅವು ಪೊಟ್ಯಾಸಿಯಮ್, ಕ್ಯಾಲ್ಸಿಯಮ್, ಫೋಲೇಟ್, ವಿಟಮಿನ್-ಬಿ ಯ ಅತ್ಯುತ್ತಮ ಮೂಲವೂ ಹೌದು.
ಇವುಗಳನ್ನು ನಿತ್ಯ ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದ್ಭುತ ಆರೋಗ್ಯವನ್ನು ಪಡೆದುಕೊಳ್ಳಬಹುದು. ಈ ಆರೋಗ್ಯಕರ ಅಂಶಗಳು ಗರ್ಭಕೋಶದ ಆರೋಗ್ಯವನ್ನು ಹೆಚ್ಚಿಸುತ್ತದೆ.
ತರಕಾರಿ/ಸೊಪ್ಪು
ಸೊಪ್ಪು ಮತ್ತು ತರಕಾರಿ ನಮ್ಮ ದೇಹದ ಸಂಪೂರ್ಣ ಆರೋಗ್ಯದ ವಿಚಾರದಲ್ಲಿ ಬಹಳಷ್ಟು ಉತ್ತಮ ಲಾಭಗಳನ್ನು ತಂದುಕೊಡುತ್ತದೆ. ಸೊಪ್ಪಿನಲ್ಲಿರುವ ಅನೇಕ ಅಂಶಗಳು ಮಹಿಳೆಯರ ದೇಹದ ಬಹುತೇಕ ಸಮಸ್ಯೆಗಳಿಗೆ ಸಹಕಾರಿಯಾಗಿ ಕೆಲಸ ಮಾಡುತ್ತವೆ.
ವೈಜ್ಞಾನಿಕವಾಗಿ ಹಾರ್ಮೋನುಗಳ ಸಮತೋಲನದಿಂದ ಹಿಡಿದು ಸೊಪ್ಪಿನಲ್ಲಿರುವ ಆಂಟಿ - ಇಂಪ್ಲಾಮೇಟರಿ ಗುಣಲಕ್ಷಣಗಳು, ಮಹಿಳೆಯರ ದೇಹದಲ್ಲಿ ಉಂಟಾಗುವ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಿ ಗರ್ಭಕೋಶದ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ನಿಮ್ಮ ಪ್ರತಿ ದಿನದ ಆಹಾರ ಪದ್ಧತಿಯಲ್ಲಿ ಮಾಂಸಾಹಾರಕ್ಕೆ ಬದಲಾಗಿ ಹೆಚ್ಚು ಹಣ್ಣುಗಳು, ಸೊಪ್ಪು ಮತ್ತು ತರಕಾರಿಯನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು.
ಅವಕಾಡೂಸ್/ ಬೆಣ್ಣೆ ಹಣ್ಣು
ದೈನಂದಿನ ಫೋಲೇಟ್ ಪ್ರಮಾಣವನ್ನು ಪಡೆದುಕೊಳ್ಳಲು ಇನ್ನೊಂದು ಉತ್ತಮ ಮಾರ್ಗ ಎಂದರೆ ಬೆಣ್ಣೆ ಹಣ್ಣಿನ ಮೊರೆ ಹೋಗುವುದು. ಹಸಿರು ಚರ್ಮದ ಹಣ್ಣಾದ ಇದು ವಿಟಮಿನ್-ಕೆ ಅನ್ನು ಸಮೃದ್ಧವಾಗಿ ಪಡೆದುಕೊಂಡಿರುತ್ತದೆ. ಇದು ಹಾರ್ಮೋನ್‍ಗಳ ಸಮತೋಲನವನ್ನು ಕಾಯ್ದುಕೊಳ್ಳುವುದರ ಮೂಲಕ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡುವುದು.
ರಕ್ತದೊತ್ತಡವನ್ನು ನಿಯಂತ್ರಿಸುವಂತಹ ಪೊಟ್ಯಾಸಿಯಮ್ ಅನ್ನು ಸಹ ಹೊಂದಿದೆ. ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸಿ, ಗರ್ಭಕೋಶದ ಆರೋಗ್ಯ ಹೆಚ್ಚಿಸುತ್ತದೆ.
ಡೈರಿ ಉತ್ಪನ್ನ
ಕಡಿಮೆ ಪ್ರಮಾಣದ ಕೊಬ್ಬನ್ನು ಹೊಂದಿರುವ ಡೈರಿ ಉತ್ಪನ್ನಗಳು ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗಿರುತ್ತವೆ. ಇವು ನಮ್ಮ ಮೂಳೆಗಳ ಬೆಳವಣಿಗೆ, ಬಲವನ್ನೂ ಹೆಚ್ಚಿಸುತ್ತದೆ. ಹಾಲು, ಬೆಣ್ಣೆ, ಮೊಸರು ಪದಾರ್ಥಗಳ ಸೇವನೆ ಮಾಡುವುದರಿಂದ ಫೈಬ್ರಾಯ್ಡ್ ಸಮಸ್ಯೆಯಿಂದ ದೂರ ಉಳಿಯಬಹುದು.
ಧಾನ್ಯಗಳು
ದೈನಂದಿನ ಆಹಾರದಲ್ಲಿ ನೀವು ಕನಿಷ್ಠ ಶೇ.50 ರಷ್ಟು ಧಾನ್ಯಗಳ ಆಹಾರವನ್ನು ಹೊಂದುವ ಗುರಿ ಇಟ್ಟುಕೊಳ್ಳಬೇಕು. ಅಂಟು ರಹಿತವಾದ ಈ ಧಾನ್ಯವು ಪ್ರೋಟೀನ್, ಫೋಲೇಟ್ ಮತ್ತು ಸತುಗಳ ಉತ್ತಮ ಮೂಲವಾಗಿದೆ. ಇದರಲ್ಲಿ ಸಮೃದ್ಧವಾದ ನಾರಿನಂಶ ಇರುವುದರಿಂದ ಮಲಬದ್ಧತೆಯನ್ನು ತಡೆಯಬಹುದು.
ಜೊತೆಗೆ ಉತ್ತಮ ಚಯಾಪಚಯ ಕ್ರಿಯೆಗೆ ಪ್ರೇರಣೆ ದೊರೆಯುವುದು. ನವಣೆ ಅಕ್ಕಿಯಂತಹ ಧಾನ್ಯಗಳಿಂದ ಪ್ರೋಟೀನ್ ಪಡೆದರೆ ಫಲವತ್ತತೆ ಸುಧಾರಣೆಯಾಗುವುದು. ಅಲ್ಲದೆ ಗರ್ಭಧಾರಣೆಗೆ ಉತ್ತಮ ವಾತಾವರಣವನ್ನು ಸೃಷ್ಟಿಸುವುದು. ಇದು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದರಿಂದ ಗರ್ಭಾವಸ್ಥೆಗೆ ಉಂಟಾಗುವ ತೊಡಕುಗಳನ್ನು ನಿವಾರಿಸುತ್ತದೆ.
ವಾಲ್‍ನಟ್
ವಾಲ್‍ನಟ್ ಅದ್ಭುತ ಬೀಜಗಳಲ್ಲಿ ಒಂದು. ಇದು ಉತ್ತಮ ನಾರಿನಂಶ ಮತ್ತು ಒಮೆಗಾ-3 ಅನ್ನು ಹೊಂದಿರುವ ಏಕೈಕ ಸಸ್ಯಹಾರಿ ಉತ್ಪನ್ನ. ಅಧಿಕ ಪ್ರಮಾಣದ ಮೆಗ್ನೀಷಿಯಮ್ ಹೊಂದಿರುವ ಇದು ಪ್ರೊಜೆಸ್ಟರಾನ್ ಉತ್ಪಾದಿಸಲು ಮತ್ತು ಗರ್ಭಾಶಯಕ್ಕೆ ರಕ್ತ ಪೂರೈಕೆ ಮಾಡಲು ಸಹಾಯ ಮಾಡುವುದು.
ಗರ್ಭಾವಸ್ಥೆಯಲ್ಲಿ ಇರುವಾಗ ಮೊದಲ ತ್ರೈಮಾಸಿಕದ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಿಸುವುದು. ಅಧಿಕ ಕ್ಯಾಲೋರಿಯನ್ನು ಹೊಂದಿರುವ ವಾಲ್‍ನಟ್ ಅನ್ನು ದಿನಕ್ಕೆ ಎರಡು ಟೇಬಲ್ ಚಮಚದಷ್ಟು ಮಾತ್ರ ಸೇವಿಸಬೇಕು.
ಮೊಟ್ಟೆ
ಸಾವಯವ ಮೊಟ್ಟೆಯಲ್ಲಿ ಅಧಿಕ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳು ತುಂಬಿರುತ್ತವೆ. ಇದರಲ್ಲಿ ಇರುವ ಕೋಲೀನ್ ಗುಣಗಳು ಅಮೈನೋ ಆಮ್ಲ ಕೋಶದ ಗುಣಮಟ್ಟವನ್ನು ಸುಧಾರಿಸುತ್ತವೆ. ಪೋಲೇಟ್ ನಂತೆ ಮೆದುಳಿನ ಬೆಳವಣಿಗೆ, ಜನನಾಂಗದ ದೋಷಗಳನ್ನು ನಿವಾರಿಸುತ್ತದೆ.
ಮೂಲ ಕನ್ನಡ ಪ್ರಭ
ಸಂಗ್ರಹ: ಕುಶಲ್ ಭಂಡಾರಿ , ಬೆಂಗಳೂರು