BhandaryVarthe Team

BhandaryVarthe Team
Bhandary Varthe Team

Thursday, 22 July 2021

ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್ ಅಧ್ಯಕ್ಷರಾಗಿ ಪ್ರಶಾಂತ್ ಭಂಡಾರಿ ಮೂಡಬಿದ್ರೆ ಪದಗ್ರಹಣ

 ಜಗತ್ತಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಇಂಟರ್ನ್ಯಾಷನಲ್.

ರೋಟರಿ ಎನ್ನುವುದು ಒಂದು ಸಮಾಜಮುಖಿ ಚಿಂತನೆಯ ಸಂಘಟನೆಯಾಗಿದ್ದು, ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ನಿರಂತರವಾಗಿ ತೊಡಗಿಸಿಕೊಳ್ಳುತ್ತಿದೆ. ರೋಟರಿ ಸಂಸ್ಥೆಯು ಜನರಿಗೆ ನೀತಿ, ಮಾನವೀಯತೆ, ಸಾಂಸ್ಕೃತಿಕ ಅರಿವು ಹಾಗೂ ಜನರ ಕೌಶಲ್ಯವನ್ನು ಹೆಚ್ಚಿಸುವತ್ತ ಹೆಚ್ಚು ಗಮನ ನೀಡುತ್ತಿದ್ದು ಎಲ್ಲಾ ರೀತಿಯ ಸಹಾಯ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಗೆ ಈ ವರ್ಷ ಅಧ್ಯಕ್ಷರಾಗಿ ಆಯ್ಕೆಯಾಗಿರುವವರು ನಮ್ಮ ಭಾರತ ದೇಶದವರೇ ಆದ ಮೇಜರ್ ಡೋನರ್ ಶೇಖರ್ ಮೆಹ್ತಾ . ಇದು ದೇಶದ ಎಲ್ಲಾ ರೋಟರಿ ಸದಸ್ಯರಿಗೆ ಹೆಮ್ಮೆಯ ವಿಷಯವಾಗಿದೆ . ರೋಟರಿ ಇಂಟರ್ನ್ಯಾಷನಲ್ ಇದರ ರೋಟರಿ 3181 ಜಿಲ್ಲೆಯ ಅಡಿಯಲ್ಲಿ ಬರುವ ಮೂಡಬಿದ್ರೆ ರೋಟರಿ ಕ್ಲಬ್ ನ 2021 -2022 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಮೂಡಬಿದ್ರೆಯ ಸಮಾಜ ಭವನದಲ್ಲಿ ತಾರೀಕು 16 ಜುಲೈ 2021 ರಂದು ನಡೆಯಿತು.
ನಮ್ಮ ಸಮಾಜದ ಪ್ರಶಾಂತ್ ಭಂಡಾರಿ ಮೂಡಬಿದ್ರೆ ಯವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು .


ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಹಾಗೂ ರೋಟರಿ ಸಂಸ್ಥೆಯ ಸಾಧಕ ಪ್ರಶಸ್ತಿ ಆಯ್ಕೆಯ ಸದಸ್ಯರಾದ ವಿಕ್ರಂ ದತ್ತರವರು ನಮ್ಮ ಹೃದಯದಲ್ಲಿ ಸಹನೆ, ಶಾಂತಿ ಮತ್ತು ನೆಮ್ಮದಿಯಿದ್ದರೆ ಕೊರೋನಾದಂತಹ ಸಂಕಷ್ಟದ ಕಾಲದಲ್ಲೂ ಯಶಸ್ಸನ್ನು ಕಾಣಲು ಸಾಧ್ಯ ಎಂದು ನುಡಿದರು.

ಸಭಾ ಕಾರ್ಯಕ್ರಮದಲ್ಲಿ ರೋಟರಿ ಇಂಟರ್ನ್ಯಾಷನಲ್ 3181 ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್ ಅರುಣ್ ಭಂಡಾರಿ ಬಜ್ಪೆ ಮಾತನಾಡಿ ರೋಟರಿ ಸಂಸ್ಥೆಯಲ್ಲಿ ಮಹಿಳಾ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಸಂಸ್ಥೆಯನ್ನು ಇನ್ನಷ್ಟು ಸದೃಢಗೊಳಿಸಲು ಕರೆ ನೀಡಿದರು.

ನಿಕಟಪೂರ್ವ ಗವರ್ನರ್ ರಂಗನಾಥ್ ಭಟ್, ನಿಕಟಪೂರ್ವ ಅಧ್ಯಕ್ಷ ಸುಶಾಂತ್ ಕರ್ಕೇರ ಮಾರೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಭಂಡಾರಿ ಈ ವರ್ಷದ ಯೋಜನೆಗಳ ಮಾಹಿತಿ ನೀಡಿ ಎಲ್ಲರ ಸಹಕಾರ ಕೋರಿದರು. ಇಂತಹ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯ ಉನ್ನತ ಸ್ಥಾನಗಳಿಗೆ ನಮ್ಮ ಸಮಾಜದ ಸದಸ್ಯರು ಹೆಚ್ಚು ಹೆಚ್ಚು ಆಯ್ಕೆಗೊಳ್ಳುತ್ತಿದ್ದು ನಾವೆಲ್ಲರೂ ಹೆಮ್ಮೆಪಡಬೇಕಾದ ವಿಷಯ.

ಪ್ರಶಾಂತ್ ಭಂಡಾರಿ ವ್ಯಕ್ತಿ ಪರಿಚಯ ::

ಪ್ರಶಾಂತ್ ಭಂಡಾರಿ ಮೂಡಬಿದ್ರೆ ಇವರು ಪುತ್ತಿಗೆ ಮುಪ್ಪರಪ್ಪು ದಿವಂಗತ ಕೃಷ್ಣಪ್ಪ ಮತ್ತು ಶ್ರೀಮತಿ ಗೌರಿ ಭಂಡಾರಿ ದಂಪತಿಯ ಮಗನಾಗಿ ಆಗಸ್ಟ್ 22, 1976 ರಂದು ಜನಿಸಿದರು. ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಗುಡ್ಡೆಯಂಗಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಮೂಡಬಿದ್ರೆಯ ಜೈನ್ ಹೈಸ್ಕೂಲ್ ನಲ್ಲಿ, ಪದವಿ ಶಿಕ್ಷಣವನ್ನು ಧವಳಾ ಮಹಾವಿದ್ಯಾಲಯದಲ್ಲಿ ಪೂರೈಸಿದ ನಂತರ ಮಣಿಪಾಲ್ ಕಂಪ್ಯೂಟರ್ ವಿದ್ಯಾ ಸಂಸ್ಥೆಯಲ್ಲಿ ಕಂಪ್ಯೂಟರ್ ಡಿಪ್ಲೋಮ ಪೂರೈಸಿಕೊಂಡು ಮುಂಬೈಯತ್ತ ಮುಖ ಮಾಡಿ ಸಿಂಘ್ವಿ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಅಕೌಂಟ್ಸ್ ವಿಭಾಗದಲ್ಲಿ ವೃತ್ತಿಯನ್ನು ಮಾಡಿದರು. ನಂತರ ವರ್ತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಸುಮಾರು 13 ವರ್ಷ ಕೆಲಸ ನಿರ್ವಹಿಸಿದರು.ಪ್ರಸ್ತುತ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. 

ಸಾಮಾಜಿಕ ಕೆಲಸಗಳಲ್ಲಿ ನಿರಂತರ ತನ್ನನ್ನು ತಾನು ತೊಡಗಿಸಿಕೊಂಡಿರುವ ಪ್ರಶಾಂತ್ ಭಂಡಾರಿ ಹಲವು ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ಧೆಗಳನ್ನು ಅಲಂಕರಿಸಿದ್ದಾರೆ. ನೆಲ್ಲಿಗುಡ್ಡೆ (ರಿ) ಮಿತ್ರಮಂಡಳಿ ಪುತ್ತಿಗೆ ಇದರಲ್ಲಿ ಕೋಶಾಧಿಕಾರಿಯಾಗಿ, ಕಾರ್ಯದರ್ಶಿಯಾಗಿ,ಉಪಾಧ್ಯಕ್ಷರಾಗಿ,ಪ್ರಸ್ತುತ ಅಧ್ಯಕ್ಷರಾಗಿ ಸುದೀರ್ಘ 32 ವರ್ಷಗಳ ಕಾಲ ಈ ಸಂಘಟನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಭಂಡಾರಿ ಸಮಾಜ ಸೇವಾ ಸಂಘ (ರಿ) ಮೂಡಬಿದ್ರೆ ಇದರಲ್ಲಿ 4 ವರ್ಷಗಳ ಕಾಲ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪುತ್ತಿಗೆ ಸೋಮನಾಥೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿಯ ವಾರ್ಡ್ ಸಮಿತಿಯ ಕಾರ್ಯದರ್ಶಿಯಾಗಿದ್ದಾರೆ.ಭಂಡಾರಿ ಸಮಾಜದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿ, ಗುಡ್ಡೆಯಂಗಡಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. 2018 -2019 ರಲ್ಲಿ ರೋಟರಿ ಸಂಸ್ಥೆಯ ಸದಸ್ಯರಾಗಿ ಸೇರ್ಪಡೆಗೊಂಡ ಪ್ರಶಾಂತ್ ಭಂಡಾರಿ 2020 - 2021 ನೇ ಸಾಲಿನಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಶ್ರೀಮತಿ ಶ್ರೀದೇವಿಯವರನ್ನು ಮದುವೆಯಾಗಿರುವ ಪ್ರಶಾಂತ್ ಭಂಡಾರಿ ಪುತ್ರ ಲಿಖಿತ್ ಭಂಡಾರಿ ಯೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.

 

ಇಂತಹ ಸಮಾಜ ಸೇವಕರನ್ನು ಸಮಾಜಕ್ಕೆ ಪರಿಚಯಿಸುವುದು ಭಂಡಾರಿ ವಾರ್ತೆಗೆ ಕೂಡಾ ಹೆಮ್ಮೆಯ ವಿಷಯ. ಅವರ ಸಾಮಾಜಿಕ ಜೀವನ, ವ್ಯಾವಹಾರಿಕ ಜೀವನ ಉತ್ತಮವಾಗಿರಲಿ, ಅವರಿಗೆ ಮತ್ತು ಅವರ ಕುಟುಂಬಕ್ಕೆ ದೇವರು ಆಯಸ್ಸು, ಆರೋಗ್ಯ, ಸಕಲಸ್ಟೈಶ್ವರ್ಯ ಕರುಣಿಸಿ ಇನ್ನಷ್ಟು ಸಮಾಜ ಸೇವೆ ಮಾಡುವ ಶಕ್ತಿ ಕೊಡಲಿ ಎಂದು ಬೇಡುತ್ತಾ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

ವರದಿ : ವನಿತಾ ಅರುಣ್ ಭಂಡಾರಿ, ಬಜ್ಪೆ

No comments:

Post a Comment