BhandaryVarthe Team

BhandaryVarthe Team
Bhandary Varthe Team

Sunday 25 July 2021

ಆಧ್ಯಾತ್ಮಿಕತೆ ಅಂದರೆ ಮನೋವಿಜ್ಞಾನ.. ಹೆಜ್ಜೆ ಹೆಜ್ಜೆಗು ಬದಲಾಗುವ ಮನಸ್ಸು,ಮುಖವಾಡಗಳ ಸಂಪೂರ್ಣ ಅಧ್ಯಯನ..-ವೆಂಕಟೇಶ ಭಂಡಾರಿ ಕುಂದಾಪುರ

.....................................................................................................................
ಪ್ರಿಯ ಭಂಡಾರಿ ಬಂಧುಗಳೇ.. ಭಂಡಾರಿ ಸಮುದಾಯದ ಸರ್ವತೋಮುಖ ಬೆಳವಣಿಗೆ ಮತ್ತು ಅಭಿವೃದ್ಧಿಯ ಆಶಯ ಹೊತ್ತು ಹೊರಬಂದ ಭಂಡಾರಿವಾರ್ತೆ ಅಲ್ಪ ಸಮಯದಲ್ಲೇ ವಿಶ್ವದ ಮೂಲೆಮೂಲೆಯ ನೆಲಸಿರುವ ಭಂಡಾರಿ ಬಂಧುಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ..  ಅವರ ನಿರೀಕ್ಷೆಗೆ ತಕ್ಕಂತೆ ಎಲ್ಲಾ ರಂಗದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಭಂಡಾರಿವಾರ್ತೆ ಮಾಡಲಿದೆ..  ಇದಕ್ಕೆ ಪೂರಕವಾಗಿ ಆಧ್ಯಾತ್ಮದ ಬಗ್ಗೆ ಕೂಡ ಭಂಡಾರಿವಾರ್ತೆ ಕುಡಿನೋಟ ಬೀರಲಿದೆ.. ಈ ವಿಷಯವಾಗಿ ಕಣಬ್ರಹ್ಮ ವೆಂಕಿ (ವೆಂಕಟೇಶ ಭಂಡಾರಿ ಕುಂದಾಪುರ) ತಮ್ಮ ಬರಹದ ಮೂಲಕ ಇಂದಿನಿಂದ ಆಧ್ಯಾತ್ಮದ ಅರಿವು ಮೂಡಿಸುವ ಪ್ರಯತ್ನ ಮಾಡಲಿದ್ದಾರೆ..
                                                                                                             ‘’’’’’’’’’ಸಂಪಾದಕ, ಭಂಡಾರಿವಾರ್ತೆ
................................................................................................................................. 
ವಿಶ್ವದ ಪ್ರತಿಯೊಂದು ದೇಶ, ಭೂ ಭಾಗವು ತನ್ನದೇ ವಿಶೇಷತೆಯನ್ನು ಹೊಂದಿದೆ ಅಂತೆಯೇ ನಮ್ಮ ಭಾರತ ದೇಶಕ್ಕೆ ಅಧ್ಯಾತ್ಮಿಕ ಚಿಂತನೆ ಮತ್ತು ಆಚರಣೆಯಲ್ಲಿ ವಿಶಿಷ್ಟವಾದ ಹೆಸರು, ಗೌರವವಿರುವುದು ನಮಗೆ ನಿಮಗೆಲ್ಲ ತಿಳಿದಿರುವ ವಿಷಯವೆ. ನಮ್ಮ ದೇಶದಲ್ಲಿ ಸಾವಿರಾರು ಮಹಾತ್ಮರು ಆಗಿ ಹೋಗಿದ್ದಾರೆ, ಪ್ರತಿಯೊಬ್ಬರೂ ತಮ್ಮದೇ ಸನ್ಮಾರ್ಗದಿಂದಾಗಿ ವಿಶಿಷ್ಠವಾಗಿ ಗುರುತಿಸಿಕೊಂಡಿದ್ದರೆ ಮತ್ತು ಕೊಡುಗೆ ನೀಡಿದ್ದಾರೆ.
ಆಧ್ಯಾತ್ಮ ಅಂದರೆ ಏನು? ಕೆವಲ ವೇಷಧಾರಿ ಸ್ವಾಮಿಜಿಗಳೆ? ಮಂಕು ಬೂದಿ ಎರಚುವ ಬಾಬಾಗಳೆ? ಸಂಪನ್ಮೂಲಗಳನ್ನು ಕ್ರೋಡೀಕರಿಸುವ ಮಠಮಂದಿರಗಳೇ? ನಿಜವಾದ ಅರ್ಥದಲ್ಲಿ ಆಧ್ಯಾತ್ಮ ಅಂದರೆ ಏನು, ಇದಕ್ಕೆ ಸಾಕಷ್ಟು ಮಹಾತ್ಮರು ಉತ್ತರಿಸಿದ್ದಾರಾದರೂ,ಮನಸ್ಸು ವೇಗದ ಜೀವನದ ಶೈಲಿಯಿಂದಾಗಿ ಮತ್ತೆ ಮತ್ತೆ ಗೊಡ್ಡು ಸಂಪ್ರದಾಯಗಳಿಗೆ ಅಂಟಿಕೊಂಡು ನೈಜ ಆಧ್ಯಾತ್ಮಿಕ ಚಿಂತನೆಯಿಂದ ದೂರ ಉಳಿಯುತ್ತಿದೆ.
         ಆಧ್ಯಾತ್ಮಿಕತೆ ಅಂದರೆ ಮನೋವಿಜ್ಞಾನವು ಹೌದು ಆ ನಿಟ್ಟಿನಲ್ಲಿ ಪ್ರತಿಯೊಂದು ಹೆಜ್ಜೆ ಹೆಜ್ಜೆಗು ಬದಲಾಗುವ (ತಮ್ಮದೇ) ಮನಸ್ಸುಗಳ,ಮುಖವಾಡಗಳ ಸಂಪೂರ್ಣ ಅಧ್ಯಯನವೇ ಆಧ್ಯಾತ್ಮ.
 ಇಲ್ಲಿ ನನ್ನ ಗಮನವನ್ನು ಸೆಳೆದ ಜಿಡ್ಡು ಕೃಷ್ಣಮೂರ್ತಿ ಯವರ ಪುಸ್ತಕಗಳಿಂದ ಆಯ್ದುಕೊಂಡ ಭಾಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳವ ಆಸೆಯಿಂದಾಗಿ ಮತ್ತು ಅವರ ಮಾತುಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವು ಅದ್ದರಿಂದ ನಮ್ಮ ಸಮಾಜಕ್ಕೆ ಒಂದಿಷ್ಟು  ಜೀವನ ಪ್ರೇರಣೆಯು ಸಿಗಬಹುದೆಂಬ ಸ್ವಾರ್ಥದಿಂದ,ಹಂತ ಹಂತವಾಗಿ ಜಿಡ್ಡು ಪ್ರವಚನ ಎಂಬ ಲೇಖನದಿಂದ ಹಂಚಿಕೊಳ್ಳತ್ತೇನೆ,ಸ್ವೀಕರಿಸಿ.

ಜಿಡ್ಡು ಪ್ರವಚನ
(ಧ್ಯಾನ-1)
ಸುಮ್ಮನೆ ಕೇಳಿ ಯಾವುದರ ಮೇಲೂ ಗಮನವಿಡದೆ,ಏಕಾಗ್ರತೆ ಪ್ರಯತ್ನಪಡದೆ,ಮನಸ್ಸನ್ನು ಮೌನವಾಗಿಟ್ಟುಕೊಂಡು,ನಿಜವಾಗಿ ನಿಶ್ಛಲವಾಗಿಟ್ಟುಕೊಂಡು, ಸುಮ್ಮನೆ ಕುಳಿತಿದ್ದೀರಾ? ಆಗ ನಿಮಗೆ ಎಲ್ಲವೂ ಕೇಳಿಸುತ್ತದೆ,ಅಲ್ಲವೇ? ದೂರದ ಸದ್ದು,ಹತ್ತಿರದ ಸದ್ದು,ತತ್‌ಕ್ಷಣದಲ್ಲಿ ಆಗುವ ಸಣ್ಣಪುಟ್ಟ ಸದ್ದು ಎಲ್ಲವನ್ನೂ ಕೇಳುತ್ತೀರುತ್ತೀರಿ.ನಿಮ್ಮ ಮನಸ್ಸು ಯಾವುದೇ ಕಿರು ಕಾಲುವೆಯಲ್ಲಿ ಹರಿಯುತ್ತಿರುವುದಿಲ್ಲ.ಸುಮ್ಮನೆ ಕೇಳುತ್ತೀರತ್ತೀರಿ.ಶ್ರಮವಿಲ್ಲದೆ,ಆಯಾಸವಿಲ್ಲದೆ ಸುಮ್ಮನೆ ಕೇಳುತ್ತೀರುವಾಗ ನಿಮ್ಮೊಳಗೆ ಅಸಾಮಾನ್ಯ ಬದಲಾವಣೆ ಆಗುತ್ತಿರುವುದು ಗಮನಕ್ಕೆ ಬರುತ್ತದೆ. ನಿಮ್ಮ ಇಚ್ಛೆ ಇಲ್ಲದೆ,ನೀವು ಕೇಳದೆ,ನೀವು ಬಯಸದೆ ಬದಲಾವಣೆಯೊಂದು ಆಗುತ್ತದೆ.ಆ ಬದಲಾವಣೆಯಲ್ಲಿ ಆಗಾಧ ಚೆಲುವು,ಅಗಾಧ ಒಳನೋಟ ದೊರೆಯುತ್ತದೆ.


          ಕೇಳುವ ಕಲೆ ಸುಲಭವಲ್ಲ. ಆದರೆ ಕೇಳುವ ಕಲೆಯಿಂದ ಅಪಾರವಾದ ಚೆಲುವು,ಅಪಾರವಾದ ಅರಿವು ದೊರೆಯುತ್ತದೆ.ನಾವು ನಮ್ಮೊಳಗೆ ಬೇರೆ ಬೇರೆ ಆಳಗಳಲ್ಲಿ ನಿಂತು ಕೇಳಿಸಿಕೊಳ್ಳುತ್ತೇವೆ.ಆದರೆ ಕೇಳಿಸಿಕೊಳ್ಳುವಾಗ ನಮ್ಮ ಮನಸ್ಸಿನಲ್ಲಿ ಆಗಲೇ ರೂಪಗೊಂಡ ಯಾವುದೇ ಕಲ್ಪನೆ,ಯಾವುದೇ ದೃಷ್ಟಿಕೋನ ಸಿದ್ಧಮಾಡಿ ಇಟ್ಟುಕೊಂಡಿರುತ್ತೇವೆ.ನಾವು ಸುಮ್ಮನೆ ಕೇಳಿಸಿಕೊಳ್ಳುವುದೇ ಇಲ್ಲ.ಯಾವಾಗಲೂ ಆಲೋಚನೆಯ ತೆರೆ,ತೀರ್ಮಾನಗಳ ತೆರೆ ,ಪೂರ್ವಾಗ್ರಹಗಳ ತೆರೆಗಳು ಕಸಿದುಕೊಂಡಿರುತ್ತವೆ. ಕೇಳಬೇಕಾದರೆ  ನಮ್ಮೊಳಗೆ ಶಾಂತಿ ಇರಬೇಕು.ನಮಗೆ ಏನೋ ಬೇಕು,ನಮ್ಮದಾಗಬೇಕು ಎಂಬ ಜಂಜಡ ಇರಬಾರದು.ಆರಾಮವಾದ ಎಚ್ಚರ ಇರಬೇಕು. ಈ ಎಚ್ಚರದ ಆದರೂ ನಿಷ್ಕ್ರಿಯವಾದ ಸ್ಥಿತಿಯಲ್ಲಿ ಶಬ್ದಗಳ, ಮಾತಿನ ರೂಪದಲ್ಲಿರುವ ತೀರ್ಮಾನಗಳ  ಆಚೆಗೂ ಇರುವುದು ನಮಗೆ ಕೇಳಿಸುತ್ತದೆ.ಪದಗಳು ಗೊಂದಲ ಹುಟ್ಟಿಸುತ್ತವೆ.ಅವೇನಿದ್ದರೂ ಸಂಪರ್ಕದ ಹೊರ ಉಪಕರಣಗಳು.ನಿಜವಾಗಿ ಕೇಳಿಸಿಕೊಂಡಾಗ ಮಾತ್ರ ಶಬ್ದಗಳ ಸಂಗೀತವನ್ನು ಆಲಿಸುತ್ತೇವೆ‌.
ನೀವೀಗ ನನ್ನನ್ನು ಕೇಳಿಸಿಕೊಳ್ಳುತ್ತಿದ್ದೀರಿ.ಗಮನಕೊಡಬೇಕೆಂಬ ಯತ್ನವಿಲ್ಲದೆ,ಸುಮ್ಮನೆ ಕೇಳುತ್ತೀರಿ.ನೀವು ಕೇಳುತ್ತಿತುವುದು ಸತ್ಯವಾಗಿದ್ದರೆ ನಿಮ್ಮೊಳಗೆ ಅಗಾಧವಾದ ಬದಲಾವಣೆಯಾಗುತ್ತಿದೆ‌.ಯೋಚಿಸಿ ಉಂಟುಮಾಡಿಕೊಂಡ ಬದಲಾವಣೆಯಲ್ಲ,ಬಯಸಿ ಆದ ಬದಲಾವಣೆಯಲ್ಲ,ಅದೊಂದು ಸಂಪೂರ್ಣ ಪಲ್ಲಟ.ಕೇವಲ ನಾನು ಹೇಳುತ್ತಿರುವುದನ್ನು ಮಾತ್ರವಲ್ಲ ಎಲ್ಲವನ್ನೂ ಹೀಗೆಯೇ ಕೇಳಿಸುಕೊಳ್ಳಬೇಕು.ಬೇರೆ ಜನರ ಮಾತು,ಹಕ್ಕಿಗಳ ಸದ್ದು, ರೈಲಿನ ಸಿಳ್ಳೆ,ಅಲ್ಲಿ ಹೋಗುತ್ತಿರುವ ಬಸ್ಸಿನ ಶಬ್ದ-ಎಲ್ಲವನ್ನೂ.ಎಲ್ಲವನ್ನೂ ಹೆಚ್ಚು ಹೆಚ್ಚು ಕೇಳಿಸಿಕೊಂಡಾಗ ಮಾತ್ರ ಅಗಾಧವಾದ ಮೌನ ಇರುತ್ತದೆ.ಸದ್ದು ಆ ಮೌನವನ್ನು ಕಲಕುವುದಿಲ್ಲ‌.
ಆಡುವಾತನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ನಿಮ್ಮನ್ನೇ ಕೇಳಿಸಿಕೊಳ್ಳಲು ಸಾಧ್ಯಾವಾದರೆ,ಹಾಗೆ ಕೇಳುವ ಮುಖಾಂತರ ಸ್ಪಷ್ಟತೆ, ಸೂಕ್ಷ್ಮತೆಗಳು ಹುಟ್ಟುತ್ತವೆ.ಹಾಗೆ ಕೇಳುವುದರಿಂದ ಮನಸ್ಸು ಆರೋಗ್ಯವಾಗಿ,ದೃಢವಾಗಿ ಇರುತ್ತದೆ. ವಿಧೇಯತೆಯೂ ಇಲ್ಲದೆ‌,ವಿರೋಧವೊ ಇಲ್ಲದೆ,ಮನಸ್ಸು ಜೀವಂತವಾಗುತ್ತದೆ,ತೀವ್ರವಾಗುತ್ತದೆ.ಅಂಥ ಮನುಷ್ಯ ಜೀವಿ ಮಾತ್ರ ಹೊಸ ತಲೆಮಾರನ್ನು,ಹೊಸ ಜಗತ್ತನ್ನು ಕಟ್ಟಬಲ್ಲ.


 (ಮುಂದುವರೆಯುವುದು)
........................................................
ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
: ಕಣಬ್ರಹ್ಮವೆಂಕಿ(ವೆಂಕಟೇಶ ಭಂಡಾರಿ), ಭಂಡಾರಿ ವಾರ್ತೆ

3 comments:

  1. ಈಗಿನ ಗಡಿಬಿಡಿಯ,ಯಾಂತ್ರೀಕೃತ ಜೀವನ ಶೈಲಿಯಲ್ಲಿ ಆಧ್ಯಾತ್ಮ ಎಷ್ಟು ಅವಶ್ಯಕ ಎಂಬುದನ್ನು ಕ್ಲುಪ್ತವಾಗಿ,ಆಪ್ತವಾಗಿ ಹೇಳಿರುವ ಲೇಖಕರ ಪ್ರಯತ್ನ ಶ್ಲಾಘನಾರ್ಹ. ಮುಂದುವರೆಯಲಿ.

    ReplyDelete
  2. This comment has been removed by the author.

    ReplyDelete