BhandaryVarthe Team

BhandaryVarthe Team
Bhandary Varthe Team

Tuesday 13 July 2021

ಉಪ್ಪಲಿಗೆ(ಕಂಚುಪ್ರಾಂತಿ)

 ಕಂಚುಪ್ರಾಂತಿ ಗಿಡ/ಮರವನ್ನು ಚಂದಕಲ,ಬಟ್ಲ ಚಂದ್ರಿಕೆಎಂತಲೂ ಕರೆಯುವರು. ತುಲುನಾಡಲ್ಲಿ ಇದನ್ನು ಉಪ್ಪಲಿಗೆ,ಉಪ್ಪೊಲಿಗೆ,ತಂದೊಲಿಗೆ,ತಂದೇವು ಎಂದು ಕರೆಯುವರು.

ನಮ್ಮ ಕಿರು ಗಾರ್ಡನ್ ಒಳಗೆ ಏಳೆಂಟು ಕಂಚುಪ್ರಾಂತಿ ಗಿಡಗಳು ಬೆಳೆದಿದ್ದವು.ಅವುಗಳ ಎಲೆಗಳು ಬಟ್ಟಲಿನಂತೆ ಸುಂದರವಾಗಿ ಕಂಗೊಳಿಸುತ್ತಿತ್ತು.ಅವುಗಳನ್ನು ಕಡಿದುಹಾಕಲೆಂದು ಹತ್ತಿರ ಹೋಗುವಷ್ಟರಲ್ಲಿ ನನಗೆ ಬಾಲ್ಯದ ದಿನಗಳ ನೆನಪಾಯಿತು. ಈ ಎಲೆಗಳಲ್ಲಿ ಹೆಚ್ಚಾಗಿ ಕುಚಲಕ್ಕಿ ಕಡುಬು ಮಾಡುವುದು ಇತ್ತು.ಈ ಗಿಡಗಳಿಂದ ಎಲೆಗಳನ್ನುಮನೆಗೆ ತರುತ್ತಿದ್ದೆವು.

ಈ ಮರದ ಎಲೆಗಳಲ್ಲಿ ಒಂದು ಮ್ಯಾಜಿಕ್ ಶಕ್ತಿ ಇದೆ.ಎಲ್ಲಾದರೂ ಈ ಎಲೆಗಳನ್ನು ನೋಡಿ ನಾಳೆ ಈ ಎಲೆಯಕಡುಬು ಮಾಡಬೇಕು ಎಂದು ಹೇಳಿ ಮರುದಿನ ಎಲೆಗಳನ್ನುಒಯ್ಯಲು ಬಂದರೆ ಆ ಎಲ್ಲಾ ಎಲೆಗಳಲ್ಲಿ ತೂತು ಕಂಡುಬರುತ್ತದೆ.ಅದನ್ನು ಒಯ್ಯಲು ಯೋಗ್ಯವಾಗಿರುವುದಿಲ್ಲ.ನಂತರ ಬೇರೆ ಗಿಡಗಳನ್ನು ಹುಡುಕಿ ತರಬೇಕಾಗುತ್ತದೆ. ನಾವು ಈ ಗಿಡದ ಎಲೆಗಳನ್ನು ಕಂಡು ಸುಮ್ಮನೆ "ಈ ಎಲೆಗಳಿಂದ ನಾಳೆ ಕಡುಬು ಮಾಡಬೇಕು "ಎಂದು ಹೇಳಿಮರುದಿನ ಗಿಡದ ಬಳಿ ಹೋಗುತ್ತಿದ್ದೆವು.ಹೋಗಿ ನೋಡಿದಾಗ ಎಲೆಗಳಲ್ಲಿ ಯಾವುದೇ ತೂತುಗಳು ಕಂಡುಬರುತ್ತಿರಲಿಲ್ಲ.ಅಂದರೆ ನಿಜವಾಗಿಯೂ ಎಲೆ ನೋಡಿ ಮರುದಿನ ಕಡುಬುಮಾಡುವುದು ಇದ್ದರೆ ಆ ಎಲೆಗಳಲ್ಲಿ ಪೂರ್ತಿ ತೂತುಗಳುಕಂಡುಬರುತ್ತದೆ.ಇಲ್ಲದಿದ್ದರೆ ಇಲ್ಲ. ತುಲುವರು ಎಲ್ಲಾದರೂ ಈ ಎಲೆಗಳನ್ನು ಕಂಡರೆ ಆಗಲೇಕಿತ್ತು ಮನೆಗೆ ಒಯ್ಯುವರು.ಮರುದಿನ ಕಡುಬು ಮಾಡುವರು.ಇಲ್ಲಿ ಯಾವುದೇ ಎಲೆಗಳಲ್ಲಿ ತೂತುಗಳು ಕಂಡು ಬರುವುದಿಲ್ಲ.

ಇನ್ನೊಂದು ಶಾಲೆಯಲ್ಲಿ ನಡೆದ ಘಟನೆ.ನಾನು ಐದನೆಯ ತರಗತಿಯಲ್ಲಿದ್ದೆ.ನನ್ನ ಅಕ್ಕ ಆರನೆಯ ತರಗತಿಯಲ್ಲಿದ್ದಳು.ಆಗ ನಮ್ಮ ಶಾಲೆಯಲ್ಲಿ ಮಧ್ಯಾಹ್ನದ ವೇಳೆಗೆಬಿಸಿಬಿಸಿ ರುಚಿರುಚಿಯಾದ ಸಜ್ಜಿಗೆ ಉಪ್ಪಿಟ್ಟು ಮತ್ತು ದಪ್ಪಹಾಲು ಸಿಗುತ್ತಿತ್ತು.ನಮ್ಮ ತಾಯಿ ನಮಗಿಬ್ಬರಿಗೂ ಬೆದ್ರ(ಮೂಡಬಿದ್ರೆ)ಸಂತೆಯಿಂದ ಚೆಂದದ ಎಲ್ಯುಮೀನಿಯಂಪ್ಲೇಟ್ ಮತ್ತು ಲೋಟ ತಂದಿದ್ದರು.ನಾವು ಖುಷಿಯಲ್ಲಿಅವುಗಳನ್ನು ಶಾಲೆಗೆ ಒಯ್ಯುತ್ತಿದ್ದೆವು. ನಮ್ಮ ಮಧ್ಯಾಹ್ನದ ಉಪಹಾರದ ಜವಾಬ್ದಾರಿಯನ್ನುವಜ್ರನಾಭ ಸರ್ ವಹಿಸಿದ್ದರು. ಪ್ಲೇಟ್ ಇಲ್ಲದ ಮಕ್ಕಳು ಉಪ್ಪಲಿಗೆ ಅಥವಾ ಬಾಳೆ ಎಲೆಯಲ್ಲಿ ಉಪ್ಪಿಟ್ಟು ತಿನ್ನಬಹುದು.ಆದರೆ ಯಾವ ಮಾತ್ರಕ್ಕೂ ಕಾಗದದಲ್ಲಿ ತಿನ್ನಬಾರದು ಎಂಬ ಶಿಸ್ತನ್ನು ಮಕ್ಕಳಿಗೆ ಹೇಳಿದ್ದರು.ಮಕ್ಕಳು ಅದನ್ನುಅನುಸರಿಸುತಿದ್ದರು.ನಾವು ಕೂಡಾ ಪ್ಲೇಟುಗಳನ್ನು ಮನೆಯಲ್ಲೇ ಬಿಟ್ಟು ಎಲೆಗಳನ್ನು ಒಯ್ಯುತ್ತಿದ್ದೆವು.ಬಾಳೆ ಎಲೆಬೇಗ ಹರಿಯುವುದರಿಂದ ಎಲ್ಲಾ ಮಕ್ಕಳು ಇದೇ ಉಪ್ಪಲಿಗೆಎಲೆಗಳನ್ನು ದಿನಾ ಒಯ್ಯುತ್ತಿದ್ದೆವು.ಆಗಲೂ ಎಲ್ಲೆಡೆ ಈ ಗಿಡ ಮರಗಳು ಇದ್ದವು.

ನನಗೆ ಮತ್ತು ಅಕ್ಕಳಿಗೆ ಒಂದು ಮಾತುಕತೆ ಆಗಿತ್ತು.ಏನೆಂದರೆ ಒಂದು ದಿನ ನಮಗಿಬ್ಬರಿಗೂ ಅವಳು ಎರಡು ಎಲೆತರುವುದು.ಮರುದಿನ ನಾನು ತರುವುದು ಇತ್ತು.ಹಾಗೆನಡೆಯುತ್ತಾ ಇತ್ತು.ಒಂದು ದಿನ ನನ್ನ ಅಕ್ಕಳಿಗೆ ಎಲೆ ತರಲುಮರೆತು ಹೋಗಿತ್ತು.ಉಪಹಾರದ ಸಮಯಕ್ಕೆ ನನ್ನ ಅಕ್ಕ
ರಫ್ ಪುಸ್ತಕ ಹರಿದು ಒಂದು ಕಾಗದ ಕೊಟ್ಟಳು.ಅವಳುಕೂಡಾ ಪೇಪರ್ ಇಟ್ಟು ಕೊಂಡಳು.ನನಗೆ ಆಗಲೇ ಭಯಆಗಿತ್ತು.ವಜ್ರನಾಭ ಸರ್ ಕಂಡರೆ ಸುಮ್ಮನೆ ಬಿಡೊಲ್ಲ ಎಂಬ ಆತಂಕ ನನ್ನದಾಗಿತ್ತು.ನಾನು ಪಕ್ಕದ ಕ್ಲಾಸಲ್ಲೇ ಅಕ್ಕನನ್ನುನೋಡುತ್ತಲೇ ಇದ್ದೆ.ಅವಳು ಭಯ ಪಡುತ್ತಿರಲಿಲ್ಲ. ಕ್ರಿಯಾ ಶೀಲರಾದ ವಜ್ರನಾಭ ಸರ್ ರೌಂಡ್ ಹಾಕುತ್ತಿರುವಾಗಲೇ ಅಕ್ಕನನ್ನು ಕಂಡು "ಕಾಗದದಲ್ಲಿ ತಿನ್ನಬಾರದು.ಆರೋಗ್ಯಕ್ಕೆ ಒಳ್ಳೆಯದಲ್ಲ" ಎಂಬ ಕಿವಿಮಾತು ಹೇಳಿದರು.""ನನಗೆ ಎಲೆ ತರಲು ಮರೆತು ಹೋಯಿತು"ಎಂದಳು ಅಕ್ಕ."ಎಲೆ ತಾರದ ತಪ್ಪಿಗೆ ಎರಡು ಬಾರಿ ತಲೆಯನ್ನು ಡೆಸ್ಕ್ ಗೆಬಗ್ಗಿ ಬಡಿಯಬೇಕು"ಎಂಬ ಶಿಕ್ಷೆಯನ್ನು ಸರ್ ಅಕ್ಕನಿಗೆಕೊಟ್ಟರು.ಆದರೆ ಅಕ್ಕ ಅದಕ್ಕೆ ಒಪ್ಪದೆ ಹಠಕ್ಕೆ ಬಿದ್ದಳು. ಅವಳ ಕಾಗದಕ್ಕೆ ಉಪ್ಪಿಟ್ಟು ಹಾಕಲೇ ಇಲ್ಲ.ನಾನು ಅಕ್ಕನಿಗೆಡೆಸ್ಕ್ ಗೆ ತಲೆ ಬಗ್ಗಿಸಿ ಬಡಿಯಲು ಸೂಚನೆ ಕೊಟ್ಟರೂಅವಳ ಹಠಮಾರಿತನ ಬಿಡಲೇ ಇಲ್ಲ. ಈಗ ನನ್ನ ಸರದಿ." ನೀನೂ ತರಲಿಲ್ಲವೇ? ಇನ್ನು ಮುಂದೆಮರೆತುಹೋಗಬಾರದು.ಎರಡು ಬಾರಿ ತಲೆಯನ್ನು ಡೆಸ್ಕ್ ಗೆಬಡಿ "ಎಂದರು. ನಾನು ಮುಲಾಜಿಲ್ಲದೆ ನಾಲ್ಕು ಬಾರಿ ತಲೆಯನ್ನು ಜೋರಾಗಿ ಬಗ್ಗಿ ಡೆಸ್ಕ್ ಗೆ ಬಡಿದೆ.ಅವರು "ಯಾಕೋ, ನಾಲ್ಕು ಬಾರಿ ಬಡಿದೆ"ಎಂದರು."ಎರಡು ನನ್ನದು ಮತ್ತು ಎರಡು ಅಕ್ಕಂದು"ಎಂದೆ.ಅವರು ನಗುತ್ತಾತಿರಸ್ಕರಿಸಿದರು.ಮತ್ತು "ಈ ಬರೆದ ಪೇಪರಿನಲ್ಲಿ ಉಪ್ಪಿಟ್ಟುತಿನ್ನಬೇಡ.ಬರೆಯದ ಬಿಳಿಹಾಳೆ ಪೇಪರ್ ತೆಗಿ"ಎಂದರು.ಉಪ್ಪಿಟ್ಟು ಬಡಿಸಲು ಹೇಳಿದರು.

ಅಕ್ಕ ಉಪ್ಪಿಟ್ಟು ತಿನ್ನಲಿಲ್ಲ ಎಂಬ ಬೇಸರ ಒಂದೆಡೆಯಾದರೆ ಅವಳ ಹಠಮಾರಿತನಕ್ಕೆ ಸಿಟ್ಟು ಇನ್ನೊಂದೆಡೆ.ಆದರೂನಾನು ಉಪ್ಪಿಟ್ಟು ಉಳಿಸಿ ನಂತರ ಅವಳಿಗೆ ಕೊಟ್ಟರೂತಿನ್ನಲಿಲ್ಲ.ಅದನ್ನು ಮನೆಗೂ ಒಯ್ದಿದ್ದೆ.ಅಲ್ಲೂ ತಿನ್ನಲೇ ಇಲ್ಲ. ತಾಯಿಗೆ ಶಾಲೆಯಲ್ಲಿ ನಡೆದ ಘಟನೆಗಳನ್ನು ತಿಳಿಸಿದೆ.ತಾಯಿನೂ ಮಗಳ ಹಠಮಾರಿತನಕ್ಕೆ ನೊಂದು ಬಿಟ್ಟರು. ಈ ನನ್ನ ಅಕ್ಕ ತನ್ನ ಗಂಡ ಮಕ್ಕಳು ಮೊಮ್ಮಕ್ಕಳೊಡನೆ ಬೊಂಬಾಯಿಯಲ್ಲಿದ್ದಾಳೆ.ಪ್ರೀತಿ ಮಮತೆ ಅವಳಲ್ಲಿ ಆಗಾಧವಾಗಿದೆ.ಉಣ್ಣಿಸುವುದರಲ್ಲಿ ತಿನ್ನಿಸುವುದರಲ್ಲಿ ಬೇರೆ ಅಕ್ಕನವರು ಇವಳ ಸ್ಥಾನಕ್ಕೆ ಬಾರರು.ತಾನು ಉಪವಾಸ ಇದ್ದರೂಅವಳಿಗೆ ಬೇಸರ ಇಲ್ಲ.ಅವಳ ಮನೆಗೆ ಬಂದವರು ಉಣ್ಣದೆತಿನ್ನದೆ ಹೋದರೆ ಅವಳ ಹಠಮಾರಿತನದ ಬುದ್ಧಿ ಈಗಲೂ ಕಂಡು ಬರುತ್ತದೆ. ಉಪ್ಪಲಿಗೆ ಗಿಡಗಳನ್ನು ಕಂಡು ಈ ಘಟನೆಗಳು ನೆನಪಿಗೆಬಂತು.ಗಿಡಗಳನ್ನು ಕಡಿಯಲಿಲ್ಲ.ಕೆಲವು ಚಂದದ ಎಲೆಗಳನ್ನು ಮನೆಗೆ ತಂದೆ.ಕಡುಬು ಮಾಡಲು ಅಕ್ಕಿ ನೆನೆಸಲು ಹಾಕಿದ್ದಾರೆ ಮನೆಯವರು.

ಉಪ್ಪಲಿಗೆ-ಉಪ್ಪರಿಗೆ:

ಮಾಳಿಗೆ ಮನೆಗಳಿಗೆ ತುಲುವರು ಅಂದು "ಉಪ್ಪರಿಗೆದ ಇಲ್ಲ್" ಎನ್ನುತ್ತಿದ್ದರು. ಈ ಉಪ್ಪಲಿಗೆ ಮರವನ್ನು ಕಂಡು ಮಹಡಿ ಮನೆಗಳನ್ನು "ಉಪ್ಪರಿಗೆ" ಎಂದು ಕರೆದಿರಬೇಕು.ಉಪ್ಪಲಿಗೆ ಮರದ ಎಲೆಗಳು ಒಂದರ ಮೇಲೊಂದು ಜೋಡಿಸಿದ ರೀತಿಯಲ್ಲಿ ಕಾಣುತ್ತದೆ. ತುಲು ಭಾಷೆಯಲ್ಲಿ"ರ" ಕಾರಕ್ಕೆ "ಲ"ಕಾರ ಮತ್ತು "ಲ"ಕಾರಕ್ಕೆ"ರ"ಕಾರ ಬರುವುದು ಸಾಮಾನ್ಯ.

ಅಂದು "ಉಪ್ಪಲಿಗೆ" ಶಬ್ಧದಿಂದ ಮಾಳಿಗೆ ಮನೆಯನ್ನು "ಉಪ್ಪರಿಗೆ" ಮನೆ ಎಂದು ಕರೆದಿದ್ದಾರೆ. ಉಪ್ಪಲಿಗೆ. ಉಪ್ಪರಿಗೆ ಪದಗಳು ಅಪ್ಪಟ ತುಲು ಪದಗಳು.

-- ಇಗೋ ಭಂಡಾರಿ
ನಿವೃತ್ತ ಬ್ಯಾಂಕ್ ಮೇನೆಜರ್
ದೇವರ್ದಯ,ಕಾರ್ಕಳ

No comments:

Post a Comment