BhandaryVarthe Team

BhandaryVarthe Team
Bhandary Varthe Team

Sunday, 18 July 2021

ಮಣಿಪಾಲ ಮಂಚಿ , ದುಗ್ಲಿಪದವು, ಕಾರ್ತಿಕ್ ಭಂಡಾರಿ ಕೈಚಳಕದಿಂದ ಮೂಡಿಬಂದ ಬಣ್ಣದ ಚಿತ್ತಾರ

 ಮಾನವನ ಕ್ರಿಯಾಶಕ್ತಿಯ ಕುಶಲ ಅಭಿವ್ಯಕ್ತಿಯೇ ಕಲೆ. ಇಂಥ ಅಭಿವ್ಯಕ್ತಿಯ ಹಂಬಲ ಮಾನವನ ಹುಟ್ಟುಗುಣ. ಇದು ಬೇರೆ ಬೇರೆ ರೀತಿಯಲ್ಲಿ ಪ್ರಕಟಗೊಂಡಿದೆ. ಸುಂದರ ಗುಲಾಬಿಯನ್ನು ಕಂಡಾಗ ಮನಸ್ಸಿಗೆ ಸಂತೋಷವಾಗುತ್ತದೆ ಅತ್ಯುತ್ತಮ ಶಿಲ್ಪ , ಚಿತ್ರ, ಸಂಗೀತ ಮುಂತಾದವು ನಮಗೆ ಆನಂದವನ್ನು ಕೊಡಬಲ್ಲವು .

ಸುತ್ತಮುತ್ತಲಿನ ಪರಿಸರ, ಘಟನೆ, ಪ್ರಸಂಗ ಇವು ಮಾನವನಲ್ಲಿ ಸುಪ್ತವಾಗಿರುವ ಕಲಾಪ್ರಜ್ಞೆ ಹೊರಹೊಮ್ಮಲು ಸಹಾಯಕವಾಗುತ್ತವೆ. ಇದರಲ್ಲಿ ಮನಸ್ಸಿನ ಮೇಲೆ ಅಧಿಕ ಪ್ರಭಾವ ಬೀರುವಂಥದನ್ನು ಮಾನವ ಚಿತ್ರಿಸುವ ಪ್ರಯತ್ನ ನಡೆಸುತ್ತಾನೆ. ಪ್ರಕೃತಿಯನ್ನು ಮತ್ತು ಅದು ಪ್ರಚೋದಿಸುವ ಭಾವನೆಗಳನ್ನು ಅನುಕರಿಸಿ ಅದರ ಪ್ರತಿಕೃತಿಗಳನ್ನು ಚಿತ್ರಿಸಲು ರೂಪಿಸಲು ಪ್ರಯತ್ನಿಸುತ್ತಾನೆ ಅನುಕರಣೆ ಕಲಾಸೃಷ್ಟಿಯ ಒಂದು ಅವಿಭಾಜ್ಯ ಅಂಗ.

ಪ್ರಾಚೀನ ಕಾಲದಿಂದಲೂ ಮಾನವ ತಾನು ವಾಸಮಾಡುತ್ತಿದ್ದ ಗವಿ, ಬಂಡೆ, ಗೋಡೆಗಳ ಮೇಲೆ ಚಿತ್ರಗಳನ್ನು ಬರೆದ ಆ ನಂತರ ನದಿ ಜಲಾನಯನ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾಗಲೂ ಸಹ ತನ್ನ ಈ ಕಲಾ ಸಂಸ್ಕೃತಿ ಕಲಾದೃಷ್ಟಿ, ಕಲಾಸೃಷ್ಟಿಗಳನ್ನು ಮುಂದುವರೆಸಿಕೊಂಡು ಬಂದಿದ್ದಾನೆ. ಚಿತ್ರ ಮಾಧ್ಯಮಗಳ ಜೊತೆಗೆ ಮಣ್ಣು , ಶಿಲೆ , ಲೋಹ ಇತ್ಯಾದಿ ಉಪಯೋಗಿಸಿಕೊಂಡು ಮೂರ್ತಿ ನಿರ್ಮಾಣ, ಮುದ್ರಿಕಾ ರಚನೆ ಮುಂತಾದುವುಗಳಲ್ಲಿ ಪರಿಣತಿ ಪಡೆದಿರುವುದನ್ನು ಗಮನಿಸಬಹುದು. ಇಂತಹ ಕಲೆಯ ಪರಿಣತಿಯನ್ನು ಪಡೆದ ನಮ್ಮ ಸಮಾಜದ ಅಪರೂಪದ ಕಲಾವಿದ ಉಡುಪಿ ಜಿಲ್ಲೆಯ ಮಣಿಪಾಲ ದುಗ್ಲಿಪದವು ಕಾರ್ತಿಕ್ ಭಂಡಾರಿ ಕೂಡಾ ಒಬ್ಬರು.

ಉಡುಪಿ ಜಿಲ್ಲೆಯ ಮಣಿಪಾಲ ನಿವಾಸಿಗಳಾದ ಶ್ರೀ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ಪ್ರಮೀಳಾ ಭಂಡಾರಿ ದಂಪತಿಯ ಪುತ್ರ ಕಾರ್ತಿಕ್ ಭಂಡಾರಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಾಗಿದ್ದಾರೆ.

ಕಳೆದ ಲಾಕ್ ಡೌನ್ ಸಮಯದಲ್ಲಿ ಹವ್ಯಾಸ ರೂಪದಲ್ಲಿ ತಯಾರಿಸಿದ ಚಿತ್ರಗಳು ನೋಡುಗರ ಗಮನ ಸೆಳೆಯುತ್ತಿದೆ. ಮೊದಮೊದಲು ಗೋಡೆಯ ಮೇಲೆ ಚಿತ್ರ ಬಿಡಿಸುತ್ತಿದ್ದು ಈಗ ಬಿಳಿಯ ಕ್ಯಾನ್ವಸ್ ಮೇಲೆ ಕುಂಚ ಹಿಡಿದು ಸರಸರನೆ ಚಿತ್ರ ಬಿಡಿಸುವ ವಿಶೇಷ ಕಲೆಯನ್ನು ಶೈಕ್ಷಣಿಕವಾಗಿ ಅಧ್ಯಯನ ಮಾಡದೆ ಸ್ವಪ್ರಯತ್ನದಿಂದ ಕರಗತ ಮಾಡಿಕೊಂಡಿದ್ದಾರೆ. ಕಷ್ಟದ ಕೆಲಸಕ್ಕೆ, ಇಷ್ಟದ ಲೇಪನ ಕೊಟ್ಟು ಕುಂಚದಲ್ಲೇ ಮನಸೊರೆಗೊಳಿಸುವ ಚಿತ್ರಗಳನ್ನು ಬಿಡಿಸುತ್ತಾರೆ. ಈಗಾಗಲೇ ಇವರ ಕೈಯಲ್ಲಿ ಅರಳಿದ ಅದ್ಭುತ ಕಲಾಕೃತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪೆನ್ಸಿಲ್ ಚಿತ್ರ, ತೈಲವರ್ಣ,ವರ್ಲಿಕಲೆಯಲ್ಲಿ ಪರಿಣತಿ ಸಾಧಿಸಿದ್ದಾರೆ. ಬಣ್ಣಗಳ ಸಂಯೋಜನೆಯಲ್ಲೋ ಇವರ ಕೈ ಚಳಕವನ್ನು ಗುರುತಿಸಬಹುದು. ಉಡುಪಿಯ ಪೂರ್ಣ ಪ್ರಜ್ಞಾ ಸಂಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಎಮ್. ಕಾಂ ವ್ಯಾಸಂಗ ಮಾಡುತ್ತಿರುವ ಇವರು ಬಿಡುವಿನ ವೇಳೆಯಲ್ಲಿ ಮೆಕ್ಯಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಾರೆ.
ಯಶಸ್ಸನ್ನು ಸಂಭ್ರಮಿಸಲು ಮನುಷ್ಯನಿಗೆ ಬಹಳಷ್ಟು ಸಂಕಷ್ಟಗಳು ಬೇಕಾಗುತ್ತವೆ ಎಂಬ ಮಾತಿನಂತೆ ಕೋವಿಡ್ ಸಂಕಷ್ಟದ ಸಮಯದಲ್ಲಿ ಹಲವಾರು ಚಿತ್ರಗಳನ್ನು ಬಿಡಿಸಿ ಸೈ ಅನಿಸಿಕೊಂಡು ಪ್ರಬುದ್ಧತೆಯ ಮೆಟ್ಟಿಲನೇರುತ್ತಾ ಬರುತ್ತಿರುವ ಕಾರ್ತಿಕ್ ಭಂಡಾರಿಯವರಿಗೆ ಶ್ರೀ ಕಚ್ಚೂರು ನಾಗೇಶ್ವರ ದೇವರ ಅನುಗ್ರಹವಿರಲಿ.
ಭಂಡಾರಿವಾರ್ತೆ ಬಳಗ ನಿಮಗೆ ಯಶಸ್ಸನ್ನು ಕೋರುತ್ತಿದೆ.


✍️ ಸುಪ್ರಿಯ ಪ್ರಕಾಶ್ ಭಂಡಾರಿ, ಕಾರ್ಕಳ, ಬೈಲೂರು .

No comments:

Post a Comment