BhandaryVarthe Team

BhandaryVarthe Team
Bhandary Varthe Team

Tuesday, 20 July 2021

ರೋಟರಿ ಇಂಟರ್ನ್ಯಾಷನಲ್ 3181 ಜಿಲ್ಲಾ ನೂತನ ಅಸಿಸ್ಟೆಂಟ್ ಗವರ್ನರ್ ಅರುಣ್ ಭಂಡಾರಿ ಬಜ್ಪೆ ಪದಗ್ರಹಣ

 ನಮ್ಮ ಸಮಾಜದಲ್ಲಿ ಅನೇಕ ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿವೆ. ಅದರಲ್ಲಿ ಒಂದು ಉತ್ತಮ ಸಂಸ್ಥೆ ರೋಟರಿ ಕ್ಲಬ್. ರೋಟರಿ ಕ್ಲಬ್ ಎನ್ನುವುದು ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು ಇದು ಸಮಾಜಮುಖಿ ಸಂಘಟನೆಯಾಗಿದ್ದು, ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸಾಮಾಜಿಕ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದೆ. ಈ ಸಂಸ್ಥೆಯು ಜನರಿಗೆ ನೀತಿ, ಮಾನವೀಯತೆ, ಸಾಂಸ್ಕೃತಿಕ ಅರಿವು, ಜನರ ಕೌಶಲ್ಯವನ್ನು ಹೆಚ್ಚಿಸುವತ್ತ ಹೆಚ್ಚಿನ ಗಮನ ನೀಡುತ್ತಿದ್ದು ಎಲ್ಲಾ ರೀತಿಯ ಸಹಾಯ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.

 

ಶಾಂತಿ ಸ್ಥಾಪನೆ, ರೋಗಗಳ ವಿರುದ್ಧ ಹೋರಾಡುವುದು, ಶುದ್ಧ ನೀರು, ನೈರ್ಮಲ್ಯದ ಅರಿವು, ತಾಯಂದಿರು ಮತ್ತು ಮಕ್ಕಳ ಸುರಕ್ಷತೆ, ಶಿಕ್ಷಣಕ್ಕೆ ಪ್ರೋತ್ಸಾಹ, ಸ್ಥಳೀಯ ಆರ್ಥಿಕತೆ ಹೆಚ್ಚಳಕ್ಕೆ ಕ್ರಮ, ಹೀಗೆ ರೋಟರಿಯು ಜಗತ್ತಿನಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುವತ್ತ ಶ್ರಮಿಸುವುದರ ಜೊತೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ಜಗತ್ತನ್ನು ಉತ್ತಮ ಬದಲಾವಣೆಯತ್ತ ಕೊಂಡೊಯ್ಯುತ್ತಿದೆ.

ಇಂತಹ ಒಂದು ಸಮಾಜಮುಖಿ ಸಂಸ್ಥೆಗಳಲ್ಲಿ ನಮ್ಮ ಸಮಾಜದ ಅನೇಕರು ತೊಡಗಿಸಿಕೊಂಡಿದ್ದು ನಿಜಕ್ಕೂ ಹೆಮ್ಮೆಯ ವಿಚಾರ. ಜುಲೈ 7, 2021ರ ಬುಧವಾರ ಮೈಸೂರಿನಲ್ಲಿ ನಡೆದ ಅನುಸ್ಥಾಪನ ಸಮಾರಂಭದಲ್ಲಿ ನಮ್ಮ ಸಮಾಜದ ಖ್ಯಾತ ಬಿಲ್ಡರ್ ಅರುಣ್ ಭಂಡಾರಿ ಬಜ್ಪೆ ಅಸಿಸ್ಟೆಂಟ್ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ರೋಟರಿ ಇಂಟರ್ನ್ಯಾಷನಲ್‌ನ 3181 ಜಿಲ್ಲೆಯ 9 ವಲಯಗಳಲ್ಲಿ ಒಂದು ವಲಯಕ್ಕೆ ಅರುಣ್ ಭಂಡಾರಿ ಅಸಿಸ್ಟೆಂಟ್ ಗವರ್ನರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ರೋಟರಿ ಇಂಟರ್ನ್ಯಾಷನಲ್‌ನ ಒಂದನೇ ವಲಯದಲ್ಲಿ ಒಟ್ಟು 4 ರೋಟರಿ ಕ್ಲಬ್‌ಗಳಿದ್ದು, ಇದರಲ್ಲಿ ರೋಟರಿ ಕ್ಲಬ್ ಬಜ್ಪೆ, ರೋಟರಿ ಕ್ಲಬ್ ಕಿನ್ನಿಗೋಳಿ, ರೋಟರಿ ಕ್ಲಬ್ ಮುಲ್ಕಿ ಮತ್ತು ರೋಟರಿ ಕ್ಲಬ್ ಮೂಡಬಿದ್ರೆ ಸೇರಿವೆ. ಈ ಬಾರಿ ಇನ್ನೂ ಎರಡು ಕ್ಲಬ್‌ಗಳನ್ನೂ ಸೇರ್ಪಡೆಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಕೈಕಂಬ ಮತ್ತು ಹಳೆಯಂಗಡಿಯಲ್ಲಿ ರೋಟರಿ ಕ್ಲಬ್‌ಗಳು ಪ್ರಾರಂಭಗೊಳ್ಳಲಿದೆ.

ಅನುಸ್ಥಾಪನ ಸಭೆಯಲ್ಲಿ ಅಧ್ಯಕ್ಷರೂ ಸೇರಿದಂತೆ ಉಳಿದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸೇವಾ ಯೋಜನೆಗಳಲ್ಲಿ ನಮ್ಮನ್ನು ನಾವು ಹೆಚ್ಚಾಗಿ ತೊಡಗಿಸಿಕೊಂಡಾಗ ಅದು ಇತರರ ಜೀವನವನ್ನು ಬದಲಾಯಿಸುವುದರ ಜೊತೆಗೆ ನಮ್ಮ ಜೀವನದಲ್ಲೂ ಬದಲಾವಣೆಯನ್ನು ತರುತ್ತದೆ. ಈ ಮೂಲಕ "serve to change lives"ಎಂಬ ಧ್ಯೇಯ ವಾಕ್ಯವನ್ನು ಪಾಲಿಸುವುದು ರೋಟರಿ ಇಂಟರ್ನ್ಯಾಷನಲ್‌ನ ಮುಖ್ಯ ಉದ್ಧೇಶವಾಗಿದೆ. ಅರುಣ್ ಭಂಡಾರಿ ತಾವು ಪ್ರತಿನಿಧಿಸುವ ವಲಯದಲ್ಲಿ ಪ್ರಮುಖವಾಗಿ ಸದಸ್ಯತ್ವವನ್ನು ಹೆಚ್ಚಿಸುವುದರ ಜೊತೆಗೆ ಪ್ರಥಮ ಚಿಕಿತ್ಸೆ, ರಕ್ತದಾನ, Each One Teach One (ಪ್ರತಿಯೊಬ್ಬರೂ ಒಂದು ವಿಷಯವನ್ನು ಕಲಿಸುವುದು) ಮುಂತಾದ ಕಾರ್ಯಕ್ರಮವನ್ನು ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳುವ ಯೋಜನೆ ಇಟ್ಟುಕೊಂಡಿದ್ದಾರೆ.


ಶ್ರೀಯುತ ವಸಂತ ಕುಮಾರ್ ಮತ್ತು ಶ್ರೀಮತಿ ನಳಿನಿ ದಂಪತಿಯ ಮೊದಲ ಮಗನಾಗಿ ತಾರೀಕು 15-5-1975 ರಂದು ಬಜಪೆ ಯಲ್ಲಿ ಜನಿಸಿದ ಅರುಣ್ ಭಂಡಾರಿ ದುಬೈ‌ನಲ್ಲಿ ಸಾಫ್ಟ್‌ವೇರ್ ಸಂಸ್ಥೆಯಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ, ತದನಂತರ ಹೈದರಾಬಾದ್‌‌ನ ವಿಪ್ರೊ ಸಂಸ್ಥೆಯಲ್ಲಿ 2019 ರವರೆಗೆ ಕೆಲಸ ನಿರ್ವಹಿಸಿದರು. ತದನಂತರ ಸ್ವಂತ ರಿಯಲ್ ಎಸ್ಟೇಟ್ ವ್ಯವಹಾರ ಪ್ರಾರಂಭಿಸಿ ಅರುಣ್ ಭಂಡಾರಿ ಬಿಲ್ಡರ್ಸ್ & ಡೆವಲಪರ್ಸ್ ಎಂಬ ಹೆಸರಿನ ಸಂಸ್ಥೆ ಮೂಲಕ ಗೃಹ ನಿರ್ಮಾಣದ ಕನಸು ಹೊತ್ತ ಅದೆಷ್ಟೋ ಜನರಿಗೆ ಅತೀ ಕಡಿಮೆ ದರದಲ್ಲಿ ಮನೆ ನಿರ್ಮಿಸಿ ಕೊಡುವ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಖ್ಯಾತಿಯನ್ನು ಪಡೆದರು.


ಸ್ವಂತ ವ್ಯವಹಾರದ ಜೊತೆಗೆ ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿರುವ ಅರುಣ್ 2013 ರಲ್ಲಿ ಬಜ್ಪೆಯ ರೋಟರಿ ಕ್ಲಬ್‌ಗೆ ಸೇರ್ಪಡೆಗೊಳ್ಳುತ್ತಾರೆ. ಅಲ್ಲಿ 2017 -2018 ರ ಅವಧಿಯಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷರಾಗಿ ನಿಯುಕ್ತಿಗೊಳ್ಳುತ್ತಾರೆ. ನಂತರ ರೋಟರಿ ಕ್ಲಬ್‌ನ 3181 ಜಿಲ್ಲೆಯ ಝೋನಲ್ ಲೆಫ್ಟಿನೆಂಟ್ ಆಗಿ 2018 -2019 ರಲ್ಲಿ ಆಯ್ಕೆಯಾಗುತ್ತಾರೆ .ರೋಟರಿ ಇಂಟರ್ನ್ಯಾಷನಲ್‌ನ ಅನೇಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು 2020 -2021 ರಲ್ಲಿ ರೋಟರಿ ಯೂಥ್ ಲೀಡರ್‌ಶಿಪ್ (RYLA ) ನ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. 2020 -2021 ರಲ್ಲಿ ಫೆಲೋಶಿಪ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿಕೊಂಡು ಇದೀಗ ಕಳೆದ ಜುಲೈ 7 ರಿಂದ ಅಸಿಸ್ಟೆಂಟ್ ಗವರ್ನರ್ ಆಗಿ ಆಯ್ಕೆಯಾಗಿರುವುದು ನಮ್ಮ ಭಂಡಾರಿ ಸಮಾಜಕ್ಕೊಂದು ಹೆಮ್ಮೆಯ ವಿಷಯ.

ಅರುಣ್ ಭಂಡಾರಿ ಪತ್ನಿ ವನಿತಾ ಅರುಣ್ ಭಂಡಾರಿ , ಇಬ್ಬರು ಮಕ್ಕಳಾದ ಅನೀಶ್ ಭಂಡಾರಿ ಮತ್ತು ಅಮನ್ ಭಂಡಾರಿ ಜೊತೆ ಬಜ್ಪೆಯ ಸ್ವಾಮಿಲ ಪದವು ಎಂಬಲ್ಲಿ ವಾಸವಾಗಿದ್ದಾರೆ. ಇವರ ಸಮಾಜ ಸೇವೆಗೆ ಇಡೀ ಸಂಸಾರ ಕೈಜೋಡಿಸಿದೆ ಎಂದರೆ ‌ ತಪ್ಪಾಗಲಾರದು. ಅರುಣ್ ಭಂಡಾರಿ ಅವರು ಭಂಡಾರಿ ವಾರ್ತೆಯ ಪ್ರಾರಂಭದ ದಿನದಿಂದಲೂ ಬೆನ್ನೆಲುಬಾಗಿ ನಿಂತಿದ್ದು ಇದೀಗ ಪತ್ನಿ ವನಿತಾ ಅರುಣ್ ಭಂಡಾರಿ ಉತ್ತಮ ಲೇಖನಗಳನ್ನು ಬರೆಯುವ ಮೂಲಕ ಭಂಡಾರಿ ವಾರ್ತೆಗೆ ಸಹಕಾರ ನೀಡುತ್ತಿದ್ದಾರೆ.

ಅರುಣ್ ಭಂಡಾರಿಯವರು ಸಾಮಾಜಿಕ ಸೇವೆಯಲ್ಲಿ ಇನ್ನಷ್ಟು ಖ್ಯಾತಿ ಗಳಿಸಲಿ, ಇನ್ನಷ್ಟು ಮೇಲ್ಮಟ್ಟದ ಸ್ಥಾನವು ಅವರಿಗೆ ದೊರೆಯಲಿ ಆ ಮೂಲಕ ವ್ಯವಹಾರದಲ್ಲಿ ಅಭಿವೃದ್ಧಿ ಕಾಣಲಿ, ದೇವರು ಅವರಿಗೆ ಅವರ ಕುಟುಂಬಕ್ಕೆ ಆಯಸ್ಸು, ಆರೋಗ್ಯ, ನೆಮ್ಮದಿಯನ್ನು ಕರುಣಿಸಿ ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತಿದೆ.

--ಭಂಡಾರಿ ವಾರ್ತೆ

No comments:

Post a Comment