ಹೌದು ಇತಿಹಾಸವನ್ನು ಅಧ್ಯಯನ ಮಾಡಿದಂತೆಲ್ಲ ಒಂದು ಇತಿಹಾಸದ ಪಳೆಯುಳಿಕೆಯನ್ನ ಬೇರೆ ಬೇರೆ ಜನಾಂಗದ, ದೇಶದ,ಮತಧರ್ಮಗಳ ಇತಿಹಾಸಕಾರರು ತಮ್ಮ ನಾನು ಶ್ರೇಷ್ಠ ಅನ್ನುವ ಮನೋರೋಗವನ್ನು ಇತಿಹಾಸದ ಪುಟಗಳಿಗೂ ಅಂಟಿಸಿದ್ದು,ಅದು ಇಂದಿಗೂ ಕಾಣಬಹುದು, ಪ್ರಾಕ್ತನ ಸಂಶೋಧಕ,ಡಿಎನ್ಎ ತಜ್ಞ, ಇತಿಹಾಸಕಾರ ಸ್ವಯಂ ಜನಾಂಗೀಯ ದ್ವೇಷಿಗಳಾದರೆ ನೈಜ ಇತಿಹಾಸ ಕಾಣುವುದು ಓದುವುದಾದರು ಹೇಗೆ ಅಲ್ಲವೆ. ಇದರಿಂದಾಗಿ ಪ್ರಕೃತಿ ಚೈತನ್ಯವನ್ನು ಅರ್ಥಹಿಸಿ ಹೇಳುವುದು ಹೇಗೆ ಕಷ್ಟವೋ ಹಾಗೆ ಇದೆ ಸರಿಯದ ಇತಿಹಾಸ ಎಂದು ಹೇಳುವುದು ಕಷ್ಟವಾಗುತ್ತದೆ,ಆಗುತ್ತಿದೆ.
ಇತಿಹಾಸ(ಹೀಗೆ ಇತ್ತು)ದ ಬಗ್ಗೆ ಹೇಳುವಾಗ ಇದೇ ಸರಿ ಇದೇ ಸತ್ಯ ಎಂದು ಹೇಳುವುದು ಸಲಭವಲ್ಲ,ಈ ಮಾತನ್ನು ವಾಸ್ತವದಲ್ಲೂ ಆಡಲು ಸಾಧ್ಯವಿಲ್ಲ ಈ ಕ್ಷಣದ ಸತ್ಯ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಗೋಚರಿಸುತ್ತದೆ ಮತ್ತು ಸಂದರ್ಭ ವಿವರಿಸುವಾಗ ಇನ್ನೊಂದು ರೀತಿಯಲ್ಲಿ ಅರ್ಥವಾಗುವ ಸಾಧ್ಯತೆಗಳೆ ಹೆಚ್ಚು.ಇನ್ನೂ ಇತಿಹಾಸ ಹಿಂದಿರುಗಿ ನೋಡಿದಾಗ ಅನೇಕರು ಅನೇಕ ರೀತಿಯಲ್ಲಿ ವರ್ಣಿಸಿದ್ದಾರೆ ಅವರವರ ಮೂಗಿನ ನೇರಕ್ಕೋ,ಅವರವರ ಮತಧರ್ಮಗಳ ಹಿತಕಾಯುವುದಕ್ಕೋ,ತಾವು ನಂಬಿದ ಸಿದ್ದಾಂತಗಳ ಉಳಿವಿಗೋ ಸತ್ಯವನ್ನು ಹೇಳುವ ಒಂದಿಷ್ಟು ಸತ್ಯವನ್ನು ಮರೆಮಾಚುವ ಕೆಲಸ ಸದಾ ನಡೆದಿದೆ ನಡೆಯುತ್ತಲಿದೆ.
ಇಂದಿಗೂ ಅದು ರಾಜಕೀಯಕ್ಕಾಗಿ,ಲೇಖಕರ ಜನಪ್ರಿಯತೆಗಾಗಿ,ಒಂದು ಸಮಾಜವನ್ನು ಎತ್ತಿಕಟ್ಟಲು,ಇನ್ನೊಂದು ಸಮಾಜವನ್ನು ಕಡೆಗಾಣಿಸಲು,ಒಂದುವಾದಕ್ಕೆ ಪುಷ್ಟಿ ನೀಡಲು ಬಹುಸಂಖ್ಯಾತರ ಒಲವು ಪಡೆದು ಒಂದಿಷ್ಟು ಪುಸ್ತಕಗಳನ್ನು ಮಾರಿಕೊಂಡು ಹಣಮಾಡಲು,ಆಯಾ ವಿಷಯಕ್ಕೆ ಅನುಕೂಲವಾಗುವಂತೆ ಇತಿಹಾಸ ತಿರುಚಲ್ಪಡುತ್ತಿರುವುದು ನಾವು ಕಾಣುತ್ತೇವೆ.
ಇತಿಹಾಸ ಹೀಗೆ ಇತ್ತಂತೆ ಅನ್ನುವುದು ಕಲ್ಪನೆ, ಹೀಗೆಯೇ ಇತ್ತು ಅನ್ನುವುದು ಭಂಡತನ,ಹೀಗಲ್ಲ ಹಾಗಿತ್ತು ಅನ್ನುವುದು ವಾದ,ವೈಭವೀಕರಿಸಿ ಹೇಳುವುದು ಕಥೆ,ಪುರಾಣ,ಕೇಳಿದ್ದನ್ನೆ ನಂಬಿಬಿಡುವುದು ಮುರ್ಖತನ.ಓದು ಅಧ್ಯಯನ ಹಲವಾರು" ಹೀಗೆ "ಗಳ ಸಮ್ಮಿಲನ. ತನ್ನ ಜನಾಂಗದ ನಾಯಕನ ಪವಾಡಗಳನ್ನು ಹೇಳುತ್ತಲೇ ಇತಿಹಾಸವನ್ನು ಬರೆಯುವುದು,ತನ್ನ ಜಾತಿಯಾ,ತನ್ನ ಮತಧರ್ಮದ ನಾಯಕನಿಲ್ಲದ ಇತಿಹಾಸ ಇತಿಹಾಸವೇ ಅಲ್ಲ ಎನ್ನುವಂತೆ ಇತಿಹಾಸವನ್ನು ಚಿತ್ರಿಸುವುದು ಇದೆಯಲ್ಲ ಅದು ನೈಜ ಇತಿಹಾಸಕ್ಕೆ ಅಂಟಿದ ರೋಗ.ಅದು ಹಲವಾರು ನೈಜ ಇತಿಹಾಸದ ಮಜಲುಗಳನ್ನು ಗೌಣವಾಗಿಸಿ ಬಿಡುತ್ತದೆ.
ಇತಿಹಾಸವನ್ನು ಬೌದ್ಧರು ಒಂದು ರೀತಿ ನೋಡಿದ್ದಾರೆ,ಜೈನರು ಇನ್ನೊಂದು ರೀತಿ,ವೈದಿಕರು ಸಹ,ಇವರೆಲ್ಲರೂ ತಮ್ಮ ಮನೆಯ ಒಳಿತು ಕೆಡುಕನ್ನು ತಮ್ಮ ಮೂಗಿನ ನೇರಕ್ಕೆ ತಮಗೆ ಅನುಕೂಲವಾಗುವಂತೆ ವರ್ಣಿಸಿದ್ದು ಒಂದು ಕಡೆಯಾದರೆ,ವಿದೇಶಿಯರ, ಕ್ರಿಶ್ಚಿಯನ್ ಹಾಗೂ ಮೊಗಲರ ಕಪೋಕಲ್ಪಿತ ಇತಿಹಾಸ ಇನ್ನೊಂದು ಕಡೆ.ಇಂದಿಗೆ ಅದು ಎಡಪಂಥೀಯ ಹಾಗೂ ಬಲಪಂಥೀಯ ಅನ್ನುವ ಮುಖವಾಡಧರಿಸಿ ಎದುರುಗೊಳ್ಳುತ್ತದೆ.ಇಂದು ಭಾರತದಂತ ದೇಶಗಳಲ್ಲಿ ಸಣ್ಣಪುಟ್ಟ ಸಮುದಾಯಗಳ ಇತಿಹಾಸ ಹುಡುಕುವುದು ಕಷ್ಟವಾಗಿ ಬಿಟ್ಟಿದೆ,ಇದಕ್ಕೆ ಕಾರಣ ಸಹಜವಾಗಿ ರಾಜಕೀಯದಂತೆ ಕಾಣುತ್ತದೆ ಯಾವ ಸಮುದಾಯದ ಜನಸಂಖ್ಯೆ ಹೆಚ್ಚು ಇದೆಯೋ ಅವರ ಹೋರಾಟ ಪ್ರತಿಭಟನೆಗೆ ಹೆದರಿ ಒಂದಿಷ್ಟು ಇತಿಹಾಸ ತೆರೆದುಕೊಳ್ಳುತ್ತದೆ ಮತ್ತು ಕಡಿಮೆ ಸಂಖ್ಯೆಯ ಜನರ ಇತಿಹಾಸ ಜಾಣ್ಮೆಯಿಂದ ಮರೆ ಮಾಡಲ್ಪಡುತ್ತದೆ, ಇನ್ನೂ ಹಿಂದುಳಿದ ವರ್ಗದ ಜನರ ರಾಜರ ಜಾತಿ ತಿಳಿಸಿ ಆ ವರ್ಗದ ಜನರ ಮನೋಬಲ ಹೆಚ್ಚಿಸಬೇಕಾದ ಇತಿಹಾಸಕಾರರು ತುಂಬಾ ಮಡಿವಂತಿಕೆಯಿಂದ ಜಾರಿಕೊಳ್ಳುವಂತೆ ಕಾಣುತ್ತಾರೆ.ಆಗ ಅವರಿಗೆ ಜಾತಿ ಮುಖ್ಯವಲ್ಲ,ತಮ್ಮ ಜನಾಂಗದ ನಾಯಕ ತಮ್ಮ ಮತಧರ್ಮ ಮಾತ್ರ ಇತಿಹಾಸಕ್ಕೆ ಪ್ರಾಮುಖ್ಯವಾಗುತ್ತದೆ.
ಈ ರೀತಿಯಾಗಿ ವಿಶ್ಲೇಷಿಸುವಾಗ ತಿಳಿಯುವುದೆನೆಂದರೆ ಇತಿಹಾಸ ಸಹ ಶ್ರೇಷ್ಠತೆಯ ರೋಗದಿಂದ ಬಳಲುತ್ತಿದೆ ಎಂದು,ಇತಿಹಾಸಕ್ಕೆ ಪುರಾವೆಗಳಿಗಿಂತಲೂ ಮತಧರ್ಮ, ಪ್ರಬಲವರ್ಗದ ಜನ,ಜಾತಿ ಶ್ರೇಷ್ಠ ಹಾಗೂ ಮೂಗಿನ ನೇರದ ಸಿದ್ಧಾಂತಗಳೆ ಮುಖ್ಯವಾಗುತ್ತವೆ ಅನ್ನುವುದು ಹಿಂದಿನ ಇಂದಿನ ಇತಿಹಾಸದ ದುರಂತ.ಪ್ರಬಲವಾದ ಜನಾಂಗದ ಇತಿಹಾಸಕಾರರು ಮೂಲ ನಾಗರಿಕತೆಗಳನ್ನೇ ಇತಿಹಾಸದ ಪುಟಗಳಲ್ಲಿ ಮರೆಮಾಡಿರುವಾಗ ಇನ್ನುಳಿದದ್ದೆಲ್ಲ ಯಾವ ಲೆಕ್ಕ ಅಲ್ಲವೆ...ಇತಿಹಾಸ ನಡೆದಂತೆ,ಇರುವಂತೆ ರಚಿಸಲ್ಪಡಲಿ ಅನ್ನುವ ಒಂದು ಆಶಯದಿಂದ......
-- ವೆಂಕಟೇಶ ಭಂಡಾರಿ ಕುಂದಾಪುರ.
No comments:
Post a Comment