BhandaryVarthe Team

BhandaryVarthe Team
Bhandary Varthe Team

Sunday, 16 July 2017

ಮೌನ ಮಾತಾದಾಗ

                                               
                ಒಲವೇ ನಿನ್ನ ಹುಡುಕಾಟದಲ್ಲಿ ನಾ ಕಳೆದು ಹೋಗಿರುವೆ.ಮುಸ್ಸಂಜೆ ಹೊತ್ತಲ್ಲಿ  ಒಂಟಿತನದ ಬಿಕ್ಕಳಿಕೆ ಜೋರಾಗಿದೆ. ಏಕಾಂಗಿಯಾಗಿ ವಿಹರಿಸುವ ನನ್ನ ಮನಕೆ ಒಬ್ಬಂಟಿತನದ ಕತ್ತಲು ಆವರಿಸಿದೆ. ಸಂಜೆಯ ಹೊತ್ತು, ತಂಪುಗಾಳಿ ಸೊಗಸಾಗಿ ಬೀಸುವ ಸಮಯ,ಸೂರ್ಯನೂ ಕೂಡ ತಣ್ಣಗೆ ಹಾದುಹೋಗುತ್ತಿರುತ್ತಾನೆ. ಹಕ್ಕಿಯ ಕಲರವ ನನ್ನ ಕಿವಿಗೆ ಅಪ್ಪಳಿಸುತ್ತಿದೆ. ಪ್ರಕೃತಿ ಸೌಂದರ್ಯ ನನ್ನ ಮೊಗದಲಿ ಮಂದಹಾಸ ಮೂಡಿಸಿದೆ. ನಿನ್ನ ನೆನಪಲ್ಲೆ ಹೊಸ ಮನ್ವಂತರದ ಅಲೆ ಶುರುವಾಗಿದೆ. ಯಾಕೋ ಸಮಯ ಮುಳುಗಿಹೋಗುತ್ತಿದೆಯೇ ಹೊರತು,ನಿನ್ನ ಹೆಜ್ಜೆಯ ಸದ್ದು ಎಲ್ಲೂ ಕೇಳಿಸುತ್ತಿಲ್ಲವಲ್ಲ?
               ನೀ ಬಂದೊಡನೆ ನನ್ನ ಮಾತಿನ ಸರಕನ್ನೆಲ್ಲಾ  ಖಾಲಿ ಮಾಡಬಹುದೇನೊ!. ಗೆಳೆಯ ನೀ ಬರುವಾಗ ಜೊತೆಗಿರಲಿ ಒಂದಿಷ್ಟು ನಗುವು, ಅದ ನೋಡುತಲೇ ನಾ ಕಳೆದುಹೋಗುವೆ. ಆದರೆ ಅದೇಕೋ ಯಾವಾಗಲು ನಿನ್ನ ಕೋಪದ ಬೆಂಕಿಯೆ ನಮ್ಮಿಬ್ಬರಲ್ಲೂ ಜಗಳ ಹೆಚ್ಚಿಸುತ್ತದೆ. ಅಬ್ಬಬ್ಬಾ! ಸಿಟ್ಟಿನಲಿ ಸೂರ್ಯನನ್ನು  ಮೀರಿಸುವವ ನೀ...ದಯವಿಟ್ಟು ನಿನ್ನ ಕೋಪದ  ಪ್ರಖರತೆಯನ್ನು  ಕಡಿಮೆ ಮಾಡಿಕೋ,ನಾನು ಕ್ಷಮಯಾಧರಿತ್ರಿಯೆನೋ ನಿಜ, ಕ್ಷಮಿಸಬಲ್ಲೆ ಕೂಡ,ಆದರೂ ನಿನ್ನ ಕೋಪ ವಿಕೋಪಕ್ಕೆ ತಲುಪಿದಾಗ  ನನ್ನ ಹ್ರದಯ  ಮತ್ತೆ ಬೆಸೆಯಲೂ, ಬಾರದಂತಾಗಬಹುದು. ಆ ಸಂದರ್ಭದಲ್ಲಿ ನೀನೆಷ್ಟೆ ಸಮಾಧಾನದ ವರ್ಷಧಾರೆ ಹರಿಸಿದರೂ ಅದು ವ್ಯರ್ಥ .
                ಗೆಳೆಯಾ ನಿನ್ನ ಆಗಮನವಾದಾಗ ನನ್ನ ಮೌನವೆಲ್ಲಾ ಮಾತಾಗುವುದು. ಆ ತಂಪಾದ ಸಂಜೆಯಲಿ ನಿನ್ನ ಕೈ ಬೆರಳುಗಳ ಜೊತೆ ನನ್ನ ಕೈಬೆರಳುಗಳ ಬೆಸೆದು ನಿನ್ನೊಡನೆ ಹೆಜ್ಜೆ ಹಾಕಬೇಕು. ಸಮುದ್ರದ ತೀರದ ಮರಳ ರಾಶಿಯಲಿ ಮನೆಕಟ್ಟಿ ಕುಣಿಯಬೇಕು.ಆ ಅಲೆಯ ರಭಸದ ಹೊಡೆತಕ್ಕೆ ಮನೆ ಮರಳಾಗಿ ಮತ್ತೆ ತೇಲಿಹೋಗುವಾಗ, ನಾ ಮುಗುಳ್ನಕ್ಕು ನಿನ್ನ ನೋಟವ ಸೆಳೆಯಬೇಕು,ನಾ ಕೋಪದಲ್ಲಿ ಕುಳಿತಾಗ ನಿನ್ನ ಸಮಾಧಾನದ ಮಾತುಗಳ ಆಲಿಸುವಾಸೆ. ನಿನ್ನ ನಿಷ್ಕಲ್ಮ ಪ್ರೀತಿಗೆ ನಾ ಸೋತು ಕಣ್ಣಿರಿಡಬಹುದೆನೋ.ನಿನ್ನೊಲವ ಪರಿಗೆ ಕರಗಿ, ಪುಟ್ಟ ಮಗುವಾಗಿ  ನಿನ್ನ ಮಡಿಲಲ್ಲಿ ನಿದ್ರೆಗೆ ಜಾರುವೆನು.ನಮ್ಮಿಬ್ಬರ ಕನಸುಗಳ ಕುರಿತು ಚರ್ಚಿಸಬಹುದು, ನಿನಗಿಷ್ಟವಾದ ಬಣ್ಣದ ಬಟ್ಟೆಯ ನಾ ಧರಿಸಿ ಅದರ ಹೊಳಪ ನಿನ್ನ ಕಣ್ಣಲ್ಲಿ ಕಾಣುವಾಸೆ, ಇಬ್ಬರು ಮರಳ ರಾಶಿಯಲಿ ಹೆಜ್ಜೆ ಹಾಕೋಣ, ಜೊತೆಜೊತೆಗೆ ನಿನ್ನ ಮಾತು ಕೇಳುತ ನಾ ಮೌನಿಯಾಗಬಹುದೆನೋ. ನಿನ್ನ ದುಃಖ ವೇದನೆಗಳಿಗೆ ತೂಕವೆಷ್ಟಿದೆಯೋ ನನಗೆ ತಿಳಿಯದು, ಆದರೂ ಅದರ ಭಾರವ ಕಡಿಮೆ ಮಾಡಿ ನಿನ್ನ ಮೊಗದಲಿ ನಗುವ ನೋಡಬೇಕು. ನಿನ್ನೆದೆಯ ಮೇಲೆ ಮುಖವನ್ನಿಟ್ಟು ನಸುನಗಬೇಕು. ಕತ್ತಲು ಕವಿಯುವವರೆಗೂ ನಿನ್ನ ಬಾಹುಬಂಧನದಲ್ಲಿ ಬಂಧಿಯಾಗಿ ಜಗತ್ತನ್ನೆ ಒಮ್ಮೆ ಮರೆತುಬಿಡಬೇಕು.....
.............

 ಪ್ರತಿಭಾ ಎಸ್. ಭಂಡಾರಿ.
 ಹರಿಹರಪುರ.

2 comments:

  1. ಸಖಿಯ ಸ್ವಗತ...
    ಗೆಳತಿಯ ಮನದಿಂಗಿತ...
    ಮಡದಿಯ ಮನದಾಸೆ...ಎಲ್ಲದರ
    ಮಿಳಿತ ಈ ಬರಹ.

    ReplyDelete