BhandaryVarthe Team

BhandaryVarthe Team
Bhandary Varthe Team

Saturday 1 July 2017

ಜಿಡ್ಡು ಪ್ರವಚನ : ಕಲಿಯಬೇಕೆಂದರೆ,ಮನಸ್ಸು ಸುಮ್ಮನೇ ಇರಬೇಕು - ಕಣಬ್ರಹ್ಮವೆಂಕಿ (ವೆಂಕಟೇಶ ಭಂಡಾರಿ)


           
 ಕೇಳುವುದರಂತೆ ಕಲಿಯುವುದು ಕೂಡ ಬಹಳ ಕಷ್ಟ ಎಂದು ತೋರುತ್ತದೆ. ನಮ್ಮ ಮನಸ್ಸು ಸ್ವತಂತ್ರವಲ್ಲ‌.ಆದುದರಿಂದ ನಾವು ಏನನ್ನೂ ಕೇಳಿಸಿಕೊಳ್ಳವುದೇ ಇಲ್ಲ. ನಮಗೆ ಈಗಾಗಲೇ ಗೊತ್ತಿರುವ ಸಂಗತಿಗಳು ಕಿವಿಯನ್ನು ತುಂಬಿರುತ್ತವೆ. ಆದ್ದರಿಂದಲೇ ಕೇಳಿಸಿಕೊಳ್ಳುವುದು ಅತ್ಯಂತ ಕಷ್ಟವಾದ್ದು. ನಮ್ಮ ಇಡೀ ಶಕ್ತಿ ಸಾಮರ್ಥ್ಯ, ಜೀವವನ್ನೆಲ್ಲ ಒಳಗೊಂಡು ಕೇಳಿಸಿಕೊಳ್ಳಲು ಸಾಧ್ಯವಾಗುವುದಾದರೆ ಆಗ ಕೇಳಿಸಿಕೊಳ್ಳುವ ಕ್ರಿಯೆಯೇ ನಮಗೆ ಬಿಡುಗಡೆಯನ್ನೂ ತರುತ್ತದೆ. ನಿಮ್ಮನ್ನು ಇಡಿಯಾಗಿ ಗಣಿತಕ್ಕೆ ಒಪ್ಪಿಸಿಕೊಂಡಾಗ ಮಾತ್ರ ಕಲಿಯುವುದಕ್ಕೆ ಸಾಧ್ಯವಾಗುತ್ತದೆ. ಆದರೆ ನಿಮ್ಮಲ್ಲಿ ವಿರೋಧಗಳಿದ್ದರೆ,ನಿಮಗೆ ಕಲಿಯಲು ಇಷ್ಟವಿಲ್ಲದೆ ಬಲವಂತವಾಗಿ ಕಲಿಯುತ್ತಿದ್ದರೆ,ಆಗ ಕಲಿಯುವುದು ಸಾಧ್ಯವಾಗುವುದಿಲ್ಲ, ಕೇವಲ ವಿಷಯ ಸಂಗ್ರಹವಷ್ಟೇ ಆಗಿರುತ್ತದೆ.ಕಲಿಯುವುದೆಂದರೆ ಅಸಂಖ್ಯಾತ ಪಾತ್ರಗಳಿರುವ ಕಾದಂಬರಿಯನ್ನು ಓದಿದಂತೆ. ಅಂಥ ಕಾದಂಬರಿಯನ್ನು ಓದುವುದಕ್ಕೆ ನಿಮ್ಮ ಪೂರಾಣ ಗಮನ ಅಗತ್ಯ. ಗಮನ ಚೆದುರಿದರೆ ಕಾದಂಬರಿ ತಿಳಿಯುವುದೇ ಇಲ್ಲ. ನೀವು ಎಲೆಯ ಬಗ್ಗೆ ಕಲಿಯಬೇಕೆಂದಿದ್ದರೆ ಎಲೆಯನ್ನು ತೀವ್ರವಾಗಿ ಗಮನಕೊಟ್ಟು ನೋಡಬೇಕು. ಅದರ ವಿನ್ಯಾಸ, ಹಾಸು-ಹೊಕ್ಕು,ಅದರ ಜೀವಂತಿಕೆ ಎಲ್ಲವನ್ನೂ ತೀವ್ರವಾಗಿ ನೋಡಬೇಕು. ಅದರಲ್ಲಿ, ಬಿಡಿ ಎಲೆಯಲ್ಲಿ ಚೆಲುವು ಇದೆ,ಶಕ್ತಿ ಇದೆ. ಹಾಗೆ ಹೂವು,ಮೋಡ,ಸೂರ್ಯಾಸ್ತ, ಮನುಷ್ಯ ಎಲ್ಲವನ್ನೂ ತೀವ್ರವಾಗಿ ನೋಡಿ.
                  ಹೊಸತೇನನ್ನಾದರೂ ಕಾಣಬೇಕಿದ್ದರೆ ನಿಮ್ಮಷಕ್ಕೆ ನೀವೇ ಆರಂಭ ಮಾಡಬೇಕು. ವಿಶೇಷವಾಗಿ ಜ್ಞಾನವನ್ನೆಲ್ಲ ನೀಗಿಕೊಂಡು ಬರಿದಾಗಿ ಹೊರಡಬೇಕು.ಜ್ಞಾನ ಮತ್ತು ನಂಬಿಕೆಗಳನ್ನು ಆಧಾರವಾಗಿಟ್ಟುಕೊಂಡು ಅನುಭವವನ್ನು ಪಡೆಯುವುದು ತೀರ ಸುಲಭ. ಆದರೆ ಅನುಭವಗಳೆಲ್ಲ ನಿಮ್ಮ ಬಿಂಬಕ್ಕೆ ಅನುಗುಣವಾಗಿ ಮೂಡಿಸಿಕೊಂಡ ಪ್ರತಿಬಿಂಬಗಳೇ ಆಗಿರುತ್ತವೆ. ಆದ್ದರಿಂದಲೇ ಸುಳ್ಳಾಗಿರುತ್ತವೆ.ಹೊಸತಾದುದನ್ನು ನೀವೇ ಕಾಣಬೇಕಾದರೆ ಹಳತರ ಹೊರೆಯನ್ನು ಹೊತ್ತುಕೊಂಡು ಹೋದರೆ ಉಪಯೋಗವಿಲ್ಲ. ಅದರಲ್ಲೂ ಜ್ಞಾನ, ಅದೆಷ್ಟು ಮಹಾ ಜ್ಞಾನವೇ ಆದರೂ ಅದೊಂದು ಹೊರೆ ಮಾತ್ರ. ನಿಮ್ಮ ಕ್ಷೇಮಕ್ಕಾಗಿ, ನಿಮ್ಮ ಪ್ರಿಯವಾದ ಪ್ರತಿಬಿಂಬವನ್ನು ಮೂಡಿಸಿಕೊಳ್ಳುವುದಕ್ಕಾಗಿ ಜ್ಞಾನವನ್ನು ಉಪಕರಣವನ್ನಾಗಿ ಬಳಸಿಕೊಳ್ಳುತ್ತೀರಿ. ನಿಮಗಾದ ಅನುಭವ ಬುದ್ಧನಿಗೆ ಆದಂಥದ್ದು. ಕ್ರಿಸ್ತನಿಗೆ ಆದಂಥದ್ದು, ಮತ್ತೆ ಯಾರಿಗೋ ಆದಂಥದ್ದು ಎಂದು ಖಚಿತಪಡಿಸಿಕೊಳ್ಳಲು ಬಯಸುತ್ತೀರಿ. ಆದರೆ ತನ್ನ ಜ್ಞಾನದ ಮೂಲಕ ತನ್ನದೇ ಪ್ರತಿಬಿಂಬವನ್ನು ನಿರಂತರವಾಗಿ ಮೂಡಿಸಿಕೊಳ್ಳುತ್ತಿರುವಾತ ನಿಜವಾಗಲೂ ಸತ್ಯದ ಅನ್ವೇಷಕನಲ್ಲ.....

             ಸತ್ಯದ ದರ್ಶನಕ್ಕೆ ದಾರಿಗಳಿಲ್ಲ...ನೀವು ಹೊಸತನ್ನು ಕಾಣಲು ಬಯಸಿದ್ದರೆ ಯಾವುದರೊಡನೆಯಾದರೂ ಪ್ರಯೋಗದಲ್ಲಿ ತೊಡಗಿದ್ದರೆ, ನಿಮ್ಮ ಮನಸ್ಸು ಸುಮ್ಮನೆ, ಶಾಂತವಾಗಿ ಇರಬೇಕಾದುದು ಅಗತ್ಯವಲ್ಲವೇ? ನಿಮ್ಮ ಮನಸ್ಸಿನ ತುಂಬ ಏನೇನೋ ಕಿಕ್ಕಿರಿದಿದ್ದರೆ ತುಂಬಿಕೊಂಡಿದ್ದರೆ, ಮಾಹಿತಿ, ಜ್ಞಾನಗಳು, ತುಂಬಿಕೊಂಡಿದ್ದರೆ ಹೊಸತು ಕಾಣಲಾರದಂತೆ ಅವೇ ಅಡ್ಡಿ ಮಾಡುತ್ತವೆ. ನಮ್ಮಲ್ಲಿ  ಅನೇಕರಿಗೆ ಇರುವ ತೊಂದರೆ ಮನಸ್ಸಿನದ್ದೇ. ನಮಗೆ ನಮ್ಮ ಮನಸ್ಸೇ ಬಹಳ ಮುಖ್ಯವಾಗಿ ಬಿಟ್ಟಿದೆ. ಮನಸ್ಸಿಗೆ ಎಷ್ಟು ಮಹತ್ವ ಕೊಟ್ಟಿದೇವೆಂದರೆ ಹೊಸತು ಕಂಡಾಗಲೆಲ್ಲ ನಮ್ಮ ಮನಸ್ಸು ಮಧ್ಯಪ್ರವೇಶಮಾಡಿ ಈಗಾಗಲೇ ಗೊತ್ತಿರುವುದರೊಡನೆ ಅದನ್ನು ಹೊಂದಿಸಲು ಪ್ರಯತ್ನಪಡುತ್ತಿರುತ್ತದೆ. ಕಾಲಾತೀತವಾದುದನ್ನು ಕಾಣಬಯಸುವವರಿಗೆ ಜ್ಞಾನ ಮತ್ತು ಕಲಿಕೆಗಳೇ ಬಹುದೊಡ್ಡ ಆತಂಕಗಳಾಗಿರುತ್ತವೆ.
  ಕಲಿಕೆ ಎಂಬ ಮಾತಿಗೆ ಬಹಳ ಮಹತ್ವವಿದೆ. ಎರಡು ಬಗೆಯ ಕಲಿಕೆಗಳಿವೆ.ನಮ್ಮಲ್ಲಿ ಅನೇಕರ ಪಾಲಿಗೆ ಕಲಿಕೆ ಎಂದರೆ ಜ್ಞಾನ, ಅನುಭವ, ತಾಂತ್ರಿಕತೆ, ಅಥವಾ ಭಾಷೆಗಳ ಸಂಗ್ರಹಮಾತ್ರವಾಗಿ ಕಾಣುತ್ತದೆ. ಮಾನಸಿಕವಾದ ಕಲಿಕೆಯೂ ಇದೆ. ಅನುಭವಗಳ ಮೂಲಕ ಕಲಿಯುವ ದಾರಿ ಅದು.ಅನುಭವಗಳು ನಮ್ಮ ಬದುಕಿನ ಪ್ರತ್ಯಕ್ಷ ಸಂಗತಿಗಳಿಂದ ಮೂಡಿದವಾಗಿರಬಹುದು. ಇವು ಕೆಲವು ಬಗೆಯ ಶೇಷಗಳನ್ನು ನಮ್ಮಲ್ಲಿ ಉಳಿಸುತ್ತವೆ.ಬದುಕುವುದು ಹೇಗೆ ಎಂದು ಕಲಿಸುವ ಎರಡು ಬಗೆಯ ಕಲಿಕೆಗಳು ಇವು; ದೈಹಿಕವಾದ ಕಲಿಕೆ ಮತ್ತು ಮಾನಸಿಕವಾದ ಕಲಿಕೆ.ಒಂದು ಹೊರಗಿನ ಕೌಶಲ್ಯ, ಇನ್ನೊಂದು ಒಳಗಿನ ಕೌಶಲ್ಯ.ಆದರೆ ಇವೆರಡರ ನಡುವೆ ವಿಭಜನೆಯ ರೇಖೆ ಇರುವುದಿಲ್ಲ. ಒಂದು ಇನ್ನೊಂದರೊಡನೆ ಬೆರೆತಿರುತ್ತದೆ. ಅಧ್ಯಯನ ಮತ್ತು ಅಭ್ಯಾಸಗಳ ಮೂಲಕ ನಾವು ಸಂಗ್ರಹಿಸಿಕೊಳ್ಳುವ ತಾಂತ್ರಿಕ ಕೌಶಲ್ಯದ ಬಗ್ಗೆ ನಾವೀಗ ಮಾತನಾಡುತ್ತಿಲ್ಲ.ನಮಗೆ ಮುಖ್ಯವಾದದ್ದು ಮಾನಸಿಕ ಕಲಿಕೆ. ಇದನ್ನು ನಾವು ಅನೇಕ ಶತಮಾನಗಳಿಂದ ಸಂಗ್ರಹಿಸಿಕೊಂಡು ಬಂದಿದ್ದೇವೆ.ಅದನ್ನು ಪರಂಪರೆಯೇಂದೋ,ಜ್ಞಾನವೆಂದೋ, ಅನುಭವವೆಂದೋ ಬಳುವಳಿಯಾಗಿ  ಪಡೆದಿದ್ದೇವೆ. ಇದನ್ನು ನಾವು ಕಲಿಕೆ ಎನ್ನುತ್ತಿದ್ದೇವೆ,ಇದು ನಿಜವಾದ ಕಲಿಕೆ ಹೌದೇ ಎಂಬುದೇ ಪ್ರಶ್ನೆ.
ವಿಚಾರದಲ್ಲಿ ತೊಡಗುವುದು ಮತ್ತು ಕಲಿಯುವುದು,ಇವೆರಡೂ ಮನಸ್ಸಿನ ಕಾರ್ಯಗಳು. ಕಲಿಯುವುದೆಂದರೆ ನೆನಪಿನ ಶಕ್ತಿಯನ್ನು ಬೆಳಸಿಕೊಳ್ಳುವುದಲ್ಲ, ಜ್ಞಾನ ಸಂಗ್ರಹವು ಅಲ್ಲ. ಭ್ರಮೆಗಳಿಲ್ಲದೆ ಸ್ಪಷ್ಟವಾಗಿ ಆಲೋಚಿಸುವ ಸಾಮರ್ಥ್ಯ. ನಂಬಿಕೆ ಅಥವಾ ತೀರ್ಮಾನಗಳಿಂದ ಹೊರದೆ ಸತ್ಯ ಸಂಗತಿಗಳನ್ನು ಗಮನಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳವುದೇ ಕಲಿಕೆ. ಕೇವಲ ಮಾಹಿತಿಯನ್ನೋ , ಜ್ಞಾನವನ್ನೋ ಸಂಗ್ರಹಿಸಿಒಳ್ಳುವುದರಿಂದ ಏನನ್ನೂ ಕಲಿತಂತಾಗುವುದಿಲ್ಲ. ಕಲಿಕೆ ಎಂಬುದು ತಿಳುವಳಿಕೆಯ ಬಗ್ಗೆ ಇರುವ ಪ್ರೀತಿಯನ್ನು, ಯಾವುದೇ ಕೆಲಸವನ್ನು ಕೆಲಸದ ಬಗ್ಗೆ ಇರುವ ಪ್ರೀತಿಯನ್ನು ಸೂಚಿಸುತ್ತದೆ. ಯಾವುದೇ ರೀತಿಯ ಒತ್ತಾಯವಿದ್ದಾಗ ಕಲಿಕೆ ಸಾಧ್ಯವಾಗುವುದಿಲ್ಲ.
                ಕಲಿಕೆ ಎಂಬುದು ಸದಾ ಹೊತ್ತಿನ, ಕ್ಷಣದ ಚಟುವಟಿಕೆಯಲ್ಲಿ ಸಂಭವಿಸುತ್ತಾ ಇರುತ್ತದೆ. ಅದಕ್ಕೆ ಭೂತಕಾಲವೆಂಬುದಿಲ್ಲ. "ನಾನು ಕಲಿತೆ" ಎಂದು ನೀವು ಹೇಳಿದ ಕ್ಷಣದಲ್ಲೇ ಕಲಿಕೆಯು ಜ್ಞಾನವಾಗಿ ಬದಲಾಗಿಬಿಟ್ಟಿರುತ್ತದೆ. ಜ್ಞಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಮತ್ತಷ್ಟು ಸಂಗ್ರಹಿಸಿ ಕೊಳ್ಳಬಹುದು ಆದರೆ ಹೊಸತನ್ನು ಕಲಿಯಲಾಗುವುದಿಲ್ಲ. ಏನನ್ನೂ ಸಂಗ್ರಹಿಸದೆ ಸದಾ ಹೊಸತಾಗಿ ಕಲಿಯುತ್ತಿರುವ ಮನಸ್ಸು ಮಾತ್ರ ತನ್ನನ್ನು ತಾನು ಇಡಿಯಾಗಿ ಅರಿಯಬಲ್ಲದು."ನಾನು" ಎಂದರೆ ಏನು ಎಂದು ತಿಳಿಯ ಬಲ್ಲದು. ಹಳೆಯ ಜ್ಞಾನದ ಹೊರೆಯನ್ನು ಹೊತ್ತುಕೊಂಡಿದ್ದಾಗ ನನ್ನ ಸ್ವಭಾವ, ಇಡೀ ನನ್ನ ರಚನೆ ವಿನ್ಯಾಸ, ಇಡೀ ನನ್ನ ಮಹತ್ವ ಇವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಜಾಡಿಗೆ ಬಿದ್ದ ಮನಸ್ಸನ್ನು ಇಟ್ಟುಕೊಂಡು ನಮ್ಮನ್ನು ನಾವು ತಿಳಿಯಲು ಸಾಧ್ಯವಿಲ್ಲ. ಅಂಥ ಮನಸ್ಸು ವ್ಯಾಖ್ಯಾನ, ಅನುವಾದ ಮಾಡುತ್ತಿರುತ್ತದೆ. ಭೂತಕಾಲದ ಮುಸುಕಿನೊಳಗಿಂದ ವರ್ತಮಾನವನ್ನು ನೋಡುತ್ತೀರುತ್ತದೆ......


(ಮುಂದುವರೆಯುವುದು)
ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು















: ಕಣಬ್ರಹ್ಮವೆಂಕಿ (ವೆಂಕಟೇಶ ಭಂಡಾರಿ), 
ಭಂಡಾರಿ ವಾರ್ತೆ


3 comments:

  1. ಉತ್ತಮ ಬರಹ..ಸೂಪರ್.

    ReplyDelete
  2. ಉತ್ತಮ ಬರಹ..ಸೂಪರ್.

    ReplyDelete
  3. ಮನುಷ್ಯ ಕಲಿಯಬೇಕಾದರೆ...ಮಗುವಾಗಬೇಕು- ಎಂದು ಸೂಚ್ಯವಾಗಿ ತಿಳಿಸಿದಂತಿದೆ ಬರಹ.ಸೂಪರ್.

    ReplyDelete