ಅದೇ ಮರದ ಕೆಳಗೆ ನೋಡ್ದೆ ಧಣಿಗಳೇ, ಇಷ್ಟು ಉದ್ದ, ಇಷ್ಟು ದಪ್ಪ ಇತ್ತು ಮಾರ್ರೆ. ನಾನ್ ಬೊಬ್ಬೆ ಹಾಕಿದ್ದನ್ನ ನೋಡಿ ಸೀದಾ ದನದ ಕೊಟ್ಟಿಗೆ ಕಡೆ ಹೋಯ್ತು ನೋಡಿ. ಕಾಳಿಂಗಸರ್ಪ ನೆ ಅದು, ನಾನ್ ಅಸ್ಟ್ ಸರಿಯಾಗಿ ನೋಡ್ದೆ. ನಂಗೆ ಕತ್ತಿ ಬಿಸಾಕಿ ಓಡಿ ಬರ್ಲಿಕ್ಕೆ ಲೋಕ ಇಲ್ಲ ಮಾರ್ರೆ". ಸೀನ ಹುಲ್ಲು ಕೊಯ್ಯುತ್ತಿದ್ದಾಗ ಕಂಡ ಹಾವಿನ ಬಗ್ಗೆ ಧಣಿ ರಂಗಣ್ಣ ನಿಗೆ ತಿಳಿಸುತ್ತಿದ್ದ. " ನಮ್ ಸ್ನೇಕ್ ರವಿ ಗೆ ಕರೆ ಕಳ್ಸಿದ್ದೀನಿ. ಅವ ಬಂದ್ರೆ ಆಯ್ತು ನೋಡು ಎಂತ ಮಂಡೆ ಬಿಸಿ ಇಲ್ಲ. ಆದ್ರೂ ಜನ ಆಕಳು ಇರುವಲ್ಲಿಗೆ ಯಾಕ್ ಬರುತ್ತವೋ ಇವುಗಳು. ಬಾಳ ಹೆದ್ರಿಕೆ ನೋಡಪ್ಪಾ" ತನ್ನ ಭಯ ತೋರ್ಪಡಿಸದೆ ಅಂದ್ರು ಯಜಮಾನ ರಂಗಣ್ಣ. ಮನೆಮಂದಿಯೆಲ್ಲಾ ದನಗಳಿಗೆ ಏನಾಗುತ್ತೋ ಎಂಬ ಭಯದಿಂದ ನಿಂತಿದ್ದರು. " ಧಣಿಗಳೇ, ನಾನ್ ಹೋಗಿ ಹಾವು ಕೊಂದು ಬರ್ಲೆನೋ, ಮತ್ತೆ ನೀವ್ ಹೇಳ್ದನ್ಗೆ ನೋಡಿ" ಸೀನ ಒಳ್ಳೆ ಹೀರೊ ತರ ಆಡೋದನ್ನ ನೋಡಿ ಆ ಪರಿಸ್ಥಿತಿಯಲ್ಲೂ ನಗು ಬಂದಿತ್ತು ಎಲ್ಲರಿಗೂ. " ಪುಕ್ಕಲನ್ ತರ ಹಾವು ನೋಡಿ ಓಡಿ ಬಂದೋನು, ಈಗ ಹಾವು ಹಿಡಿತಾನಂತೆ" ರಂಗಣ್ಣನ ಹೆಂಡತಿ ನಗುತ್ತ ತಮಾಷೆ ಮಾಡಿದಳು.
ವಾಹನದ ಸದ್ದು ಕೇಳಿ ರಸ್ತೆ ಕಡೆ ನೋಡಿದ ರಂಗಣ್ಣನಿಗೆ ರವಿ ಇಳಿಯುವುದು ಕಾಣಿಸಿತು. ಸೀದಾ
ಅವನ ಬಳಿ ಹೊರಟರು. ಅವರಿಗಿಂತ ಮುಂಚೆನೇ ಸೀನ ಓಡಿ ಹೋಗಿ ತಾನು ನೋಡಿದ ಹಾವನ್ನು ಹಾಲಿವುಡ್
ಸಿನೆಮಾ ತರ ವರ್ಣಿಸತೊಡಗಿದ್ದ. ರವಿಗೆ ಅವನ ಹಾವಭಾವ ಕಂಡು ನಗು ಬಂದಿತ್ತು. " ಲೋ, ಸುಮ್ನೆ
ಇರೋ ಮಾರಾಯ." ಎಂದು ಸೀನ ನ ಗದರಿಸುತ್ತ
ಎಲ್ಲಾ ಘಟನೆಯನ್ನ ರವಿಗೆ ತಿಳಿಸಿದರು ರಂಗಣ್ಣ. " ಏನೂ ಭಯ ಬೇಡ, ಇಲ್ಲೇ ಎಲ್ಲೋ
ಅಡಗಿ ಕೂತಿರುತ್ತೆ. ಅದಕ್ಕೆ ತೊಂದರೆ ಆಗುವ ತನಕ ಏನೂ ಹೆದರಿಕೆಯಿಲ್ಲ" ಎಂದು ಸಮಾಧಾನ ಪಡಿಸಿದ ರವಿ.
ತನ್ನ ಸಹಾಯಕನಿಗೆ ಹಾವು ಹಿಡಿಯುವ ಕೋಲು ಮತ್ತು ಚೀಲ ತರಲು ಹೇಳಿ ರಂಗಣ್ಣನ ಹಿಂದೆ ಮನೆಯ
ಕಡೆಗೆ ನಡೆದ ರವಿ. ರಂಗಣ್ಣ ಹಾವು ಹೊತ್ತ ಕೊಟ್ಟಿಗೆಯನ್ನು ತೋರಿಸುತ್ತಾ" ರವಿ ಇವತ್ತು ಆ
ಹಾವನ್ನು ಬಿಡಬಾರದು ನೋಡು, ಕೊಂದೇ ಹಾಕಬೇಕು" ಎಂದರು. " ನೋಡಿ ರಂಗಣ್ಣನವರೇ, ಅವು
ನಮ್ಮಂತೆ ಬದುಕುವ ಅರ್ಹತೆಯುಳ್ಳ ಜೀವಿಗಳು. ನಾವು ಅವುಗಳ ವಾಸಿಸುವ ಸ್ಥಳ ಕಸಿದುಕೊಂಡದ್ದರಿಂದ
ಅವು ನಮ್ಮಲ್ಲಿಗೆ ಬರುತ್ತಿವೆ" ಎಂದು ಹಾವಿನ ಮಹತ್ವವನ್ನು ಅವರಿಗೆ ತಿಳಿಸಿ
ಕೊಟ್ಟಿಗೆಯನ್ನು ಹೊಕ್ಕು ಹಾವನ್ನು ಹುಡುಕತೊಡಗಿದ. ಮೂಲೆಯಲ್ಲಿ ಬೆಚ್ಚಗೆ ಸೂರಿ ಸುತ್ತಿಕೊಂಡು
ಮಲಗಿದ್ದ ಕಾಳಿಂಗ ರವಿಯ ಕಣ್ಣಿಗೆ ಬಿತ್ತು. ರವಿಯ ಹೆಜ್ಜೆ ಸಪ್ಪಳಕೆ ತಲೆ ಎತ್ತಿದ ಕಾಳಿಂಗ
ಬುಸುಗುಡತೊಡಗಿದ. ಶುರುವಾಗಿತ್ತು ಕಾಳಗ ರವಿಗೂ, ಕಾಳಿಂಗನಿಗೂ. ಆದರೆ ರವಿಯ ಕೈಚಳಕದ ಮುಂದೆ
ಕಾಳಿಂಗನ ಆಟ ನಡೆಯಲಿಲ್ಲ. ಸೋತ ಕಾಳಿಂಗ ರವಿಯ ಸರ್ಪಬಂಧನದಲ್ಲಿ ಸಿಲುಕಿಕೊಂಡಿದ್ದ.
ಹೊರಗೆ ಜನಸೇರಿದ್ದರು. ಎಲ್ಲರಿಗೂ ಕಾಳಿಂಗ ಸರ್ಪ ನೋಡುವ ಕಾತುರ. ಇನ್ನು ಸೀನ ಅಲ್ಲಿ
ಸೇರಿದ್ದ ಎಲ್ಲರಿಗೂ ಅನಾಕೊಂಡ ಫೀಲ್ ಬರುವಂತೆ ವರ್ಣನೆ ಮಾಡುತಿದ್ದ. ಕೈಯಲ್ಲಿ ಕಾಳಿಂಗ ನ ಹಿಡಿದು
ಹೊರಬಂದ ರವಿಯ ನೋಡಿ ಎಲ್ಲರಲ್ಲೂ ಮೆಚ್ಚುಗೆಯ ಮಾತುಗಳು. ತನ್ನ ಸಹಾಯಕನಿಂದ ಚೀಲ ತರಿಸಿ ಕಾಳಿಂಗ
ನನ್ನು ಒಳಗೆ ಹಾಕುವಸ್ಟರಲ್ಲಿ ರವಿಯ ದೃಷ್ಟಿ ಅದರ ಮೈಮೇಲಿನ ಗಾಯದ ಮೇಲೆ ಹೋಯಿತು. ಅಪರಿಚಿತ
ಜಾಗದಲ್ಲಿ ಪರಿಚಿತನ ಕಂಡಂತೆ ಭಾಸವಾಗಿತ್ತು ರವಿಗೆ. ಇವನು ಅವನೇ ಅಲ್ಲವೇ? ನನ್ನ ಕೈಯಿಂದ
ತಪ್ಪಿಸಿಕೊಂಡು ಹತ್ತು ವರ್ಷಗಳ ನಂತರ ಸಿಕ್ಕಿದೆ. ಮುಖದಲ್ಲಿ ನಗು ಮೂಡಿತ್ತು. ದ್ವೇಷದ ನಗುವೋ??
ಪ್ರೀತಿಯ ನಗುವೋ?. ಆದರೆ ಆ ಕ್ಷಣದ ನಗು ನೋವಿಗೆ ತಿರುಗಿತ್ತು. ಕ್ಷಣಮಾತ್ರದಲ್ಲಿ ತಿರುಗಿ ಬಿದ್ದ
ಕಾಳಿಂಗ ರವಿಯ ಕೈಗೆ ಕಚ್ಚಿಯೇ ಬಿಡ್ತು. ನೋವಿನಿಂದ ಚೀರಿದ ರವಿಯ ಬಳಿ ಎಲ್ಲರೂ ಓಡಿ ಬಂದ್ರು.
ಕಾಳಿಂಗ ಸದ್ದಿಲ್ಲದೆ ಜಾಗ ಖಾಲಿ ಮಾಡಿದ್ದನ್ನು ಯಾರೂ ಗಮನಿಸಲೇ ಇಲ್ಲ.
ರವಿಯ ಕಣ್ಣು ಮಂಜಾಗತೊಡಗಿತ್ತು. ರಕ್ತ ಹೆಪ್ಪುಗಟ್ಟಿದ ಅನುಭವ. ವಿಪರೀತ ಸಹಿಸಲಸಾಧ್ಯವಾದ
ಯಾತನೆ." ಬೇಗ ಆಸ್ಪತ್ರೆಗೆ ಕೊಂಡ್ಹೋಗ್ರೋ" ರಂಗಣ್ಣ ಕೂಗತೊಡಗಿದರು. " ಅಲ್ಲಾ,
ರವಿ ಕೈಯಲ್ಲಿ ಗರುಡರೇಖೆ ಇದೆ . ಹಾವು ಅವನ ಮುಂದೆ ತಲೆ ಕೂಡ ಎತ್ತಕ್ಕೆ ಹೆದರುತ್ತೆ ಅಂತಾರಲ್ಲ,
ಇವತ್ತು ಏನಾಯ್ತು ಅವ್ನಿಗೆ."ಯಾರೋ ಅಂದಿದ್ದು ರವಿಯ ಕಿವಿಗೆ ನೋವಿನಲ್ಲೂ ಬಿದ್ದಿತ್ತು.
ಆಸ್ಪತ್ರೆಯ ಕಡೆ ಹೊರಟಿತ್ತು ರವಿಯ ಹೊತ್ತ ವಾಹನ.
ಸ್ನೇಕ್ ರವಿ ಈ ಹೆಸರು ನಾಗಲಾಪುರ ದ ಸುತ್ತಮುತ್ತ ಹಳ್ಳಿಗಳಲ್ಲಿ ತುಂಬಾ ಪರಿಚಯ. ಯಾರ್
ಮನೆ ತೋಟದಲ್ಲಿ ಹಾವು ಕಂಡ್ ಬಂದ್ರು ಮೊದ್ಲು ಕರೆ ಹೋಗೋದು ರವಿಗೇನೆ. ಯಾವ ತರದ್ದ್ ಹಾವು ಇದ್ರು
ರವಿ ಹಿಡಿದೇ ಹಿಡಿತಾನೆ ಅನ್ನೊ ನಂಬಿಕೆ ಜನರಲ್ಲಿತ್ತು. ರವಿ ಕೈಯಲ್ಲಿ ಗರುಡರೇಖೆ ಇದೆ ಅನ್ನೋ
ಮಾತು ಕೂಡ ಜನರ ನಡುವೆ ಹರಿದಾಡ್ತಾ ಇತ್ತ್ತು.
ರವಿ ಹಾವು ಹಿಡಿಯಲು ಶುರು ಮಾಡಿದ್ದೆ ಒಂದು ರೋಚಕ ಸಂಗತಿ. ಸುಮಾರು 15 ವಯಸ್ಸು ರವಿಗೆ
ಆಗ, ತಾಯಿ ಜೊತೆ ಕಟ್ಟಿಗೆ ತರಲು ಹೋದಾಗ ಕಾಳಿಂಗ ಸರ್ಪವೊಂದು ತಾಯಿಯನ್ನ ಕಚ್ಚಿತ್ತು. ಕೂಡಲೇ
ಕಚ್ಚಿದ ಹಾವನ್ನ ಕೊಲ್ಲಲು ಪ್ರಯತ್ನಿಸಿದ್ದ ರವಿ. ಕಲ್ಲಿನೇಟಿಗೆ ಗಾಯಗೊಂಡ ಹಾವು ಮಾತ್ರ ರವಿ
ಕಣ್ಣಿಂದ ತಪ್ಪಿಸಿಕೊಂಡಿತ್ತು. ರಕ್ತದ ಕಲೆಯ ಜಾಡು ಹಿಡಿದು ಹುಡುಕಿದರು ಅದರ ಸುಳಿವಿರಲಿಲ್ಲ.
ಅಂದಿನಿಂದ ರವಿಗೆ ಹಾವು ಕಂಡರೆ ಏನೋ ದ್ವೇಷ. ಹಾವು ಸಿಕ್ಕರೆ ಸಾಕು ಹಿಡಿದು ಹಿಂಸಿಸುತ್ತಿದ್ದ.
ವರುಷಗಳು ಉರುಳಿದವು. ರವಿ ಕಾಲೇಜು ಮೆಟ್ಟಿಲು ಹತ್ತಿದ. ಒಳ್ಳೆಯ ಶಿಕ್ಷಣ ಅವನನ್ನು
ಹಾವಿನ ಕಡೆಗಿರುವ ದ್ವೇಷವನ್ನು ಕಡಿಮೆ ಮಾಡಿತ್ತು. ದ್ವೇಷ ಪ್ರೀತಿ, ಕಾಳಜಿಯಾಗಿ ಬದಲಾಗಿತ್ತು.
ತಾನು ಮಾಡಿದ ಪಾಪಕ್ಕೆ ಪಶ್ಚಾತಾಪ ಪಟ್ಟು
ಹಾವುಗಳ ಸಂರಕ್ಷಣೆಗೆ ಪಣತೊಟ್ಟ ರವಿ, ಹಾವುಗಳ ಬಗೆಗೆ ಜನರಲ್ಲಿ ಮಾಹಿತಿ ನೀಡಿ ಜನಜಾಗ್ರತಿ
ಮೂಡಿಸತೊಡಗಿದ. ಈಗ ಎಲ್ಲೇ ಹಾವು ಕಂಡುಬರಲಿ ಜನರ ಬಾಯಲ್ಲಿ ಮೊದಲು ಬರುವ ಹೆಸರು ಸ್ನೇಕ್
ರವಿ.ಎಂದಿನಂತೆ ಇಂದೂ ಕೂಡ ರಂಗಣ್ಣ ನ ಕರೆಗೆ ಓಗೊಟ್ಟು ಬಂದಿದ್ದ ರವಿ. ಆದರೆ ರವಿಗೆ ಗೆ ಅಪಾಯ
ಹೊಂಚು ಹಾಕಿ ಕೂತಿತ್ತು.10 ವರುಷಗಳ ದ್ವೇಷದ ರೂಪದಲ್ಲಿ..
ರವಿಗೆ ಹಾವು ಕಡಿದ ವಿಷಯ ನಾಗಲಾಪುರದ ತುಂಬಾ ಹಬ್ಬಿತ್ತು. ಜನ ಆಸ್ಪತ್ರೆಗೆ
ಬರತೊಡಗಿದರು. ಎಲ್ಲರಿಗೂ ಬೇಕಾದವ ನಮ್ ರವಿ. ಎಲ್ಲರ ಮನಸ್ಸಲ್ಲೂ ಬೇಸರದ ಛಾಯೆ. ಮನಗಳು ರವಿಯ
ಚೇತರಿಕೆಗೆ ದೇವರಲ್ಲಿ ಪ್ರಾರ್ಥಿಸತೊಡಗಿದವು.
ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿದ್ದ ರವಿಯ ಆರೋಗ್ಯಸ್ಥಿತಿ ಕ್ಷಣಕ್ಷಣಕ್ಕೂ
ಹದಗೆಡುತಿತ್ತು. ರವಿಗೆ ಅರ್ಥವಾಗಿತ್ತು ನಾನಿನ್ನು ಬದುಕುವುದಿಲ್ಲ. ಕೋಣೆಯ ಮೂಲೆಯಲ್ಲಿ ಕುಳಿತು
ಕಾಳಿಂಗ ಸರ್ಪ ತನ್ನ ನೋಡಿ ನಗುವಂತೆ ತೋರಿತ್ತು. ಕಣ್ಣು ಮುಚ್ಚಿದ ರವಿ ಮತ್ತೆ ಕಣ್ಣು ತೆರೆಯಲೇ
ಇಲ್ಲ.
"ಕ್ಷಮಿಸಿ ರಂಗಣ್ಣನವರೇ, ನಮ್ಮಿಂದ
ಸಾಧ್ಯವಾದಷ್ಟು ಪ್ರಯತ್ನಪಟ್ಟೆವು. ಆದ್ರೆ ರವಿನ ಉಳಿಸಕ್ಕೆ ನಮ್ ಕೈಲಿ ಆಗ್ಲಿಲ್ಲ" .
ರಂಗಣ್ಣ ನಿರಾಶೆಯ ಉಸಿರು ಬಿಟ್ಟರು. ರವಿಯ ಹೆತ್ತವರ ಕೂಗು ಮುಗಿಲು ಮುಟ್ಟಿತ್ತು.
" ಛೇ, ನಾನ್ ಆಗ್ಲೇ ಕೊಲ್ಲಬೇಕಾಗಿತ್ತು ಅದನ್ನ. ನಮ್ ಧಣಿನೆ ರವಿ ನ ಕರ್ಸೊಣ ಅಂತ
ನನ್ನ ತಡೆದಿದ್ದು. ಈಗ ನೋಡು ಹಾವು ಸಿಕ್ಕಿಲ್ಲ, ರವಿನೂ ಇಲ್ಲ. ನಾನಾಗಿದ್ರೆ ಮಾತ್ರ ಆ ಹಾವು
ತಪ್ಪಿಸ್ಕೊಳ್ಳೋಕೆ ಸಾಧ್ಯನೇ ಇಲ್ಲ" ಅಂತ ಸೀನ ಆಸ್ಪತ್ರೆಯ ಹೊರಗಡೆ ವಾಹನದಲ್ಲಿ ಕುಳಿತು
ಡ್ರೈವರ್ ಜೊತೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಸೀಟಿನ ಕೆಳಗೆ ಬೆಚ್ಚನೆ ಮುದುರಿ ಮಲಗಿದ್ದ
ಕಾಳಿಂಗ.
............................................
✍🏻 ಲೇಖನ: ದೀಪಕ್ ಭಂಡಾರಿ ಮುಚ್ಚೂರು
ಕಥೆ ರೋಮಾಂಚಕವಾಗಿದೆ,ಸೂಪರ್
ReplyDeleteThank u sir
Deleteಕಥೆ ರೋಮಾಂಚಕವಾಗಿದೆ,ಸೂಪರ್
ReplyDeleteSuper.be alert
ReplyDeleteThank u
DeleteSuper brooo
ReplyDeleteSuper brooo
ReplyDeleteಸುಂದರ ನಿರೂಪಣೆ.
ReplyDelete