ಸ್ನೇಹ, ರಕ್ತ ಸಂಬಂಧಗಳನ್ನೂ ಮೀರಿದ ಬಂಧ. ಸ್ನೇಹಿತರಿಲ್ಲದ ಬದುಕು ಊಹಿಸಲೂ ಅಸಾಧ್ಯ. ನಮ್ಮ ಜೀವನದಲ್ಲಿ ಎದುರಾಗುವ ಪ್ರತಿಯೊಂದು ನೋವು ನಲಿವಿನಲ್ಲಿ, ಕಷ್ಟ ಸುಖಗಳಲ್ಲಿ ಅವರಿದ್ದರೇನೆ ಅದಕ್ಕೊಂದು ಅರ್ಥ. ರಕ್ತ ಸಂಬಂಧಗಳನ್ನೇ ಮೀರಿಸೋ ಈ ಅನುಬಂಧಕ್ಕೆ ವಯಸ್ಸಿನ ಮಿತಿಯಿಲ್ಲ. ಜಾತಿ ಧರ್ಮದ ಹಂಗಿಲ್ಲ. ಪರಸ್ಪರ ನಂಬಿಕೆ, ಕಾಳಜಿ, ಪ್ರೀತಿ, ಆತ್ಮೀಯತೆ.. ಹೀಗೆ ಮತ್ತೊಬ್ಬರ ನಗುವಿಗೆ, ಕಣ್ಣೀರಿಗೆ ಸಾಥ್ ಕೊಟ್ಟು ಜೊತೆಯಲ್ಲೇ ಬೆರೆಯುವ ಮಧುರ ಸಂಬಂಧವಿದು. ನಿಜವಾದ ಸ್ನೇಹಿತರೇ ಹಾಗೇ, ತಮ್ಮ ಖುಷಿಗಿಂತಲೂ ಸ್ನೇಹಿತರು ಚೆನ್ನಾಗಿದ್ದರೇನೆ ಅವರ ಮನಸ್ಸಿಗೆ ನೆಮ್ಮದಿ. ಸ್ನೇಹಿತರಿಗೋಸ್ಕರ, ಅವರ ಹಿತಕ್ಕೋಸ್ಕರ ಯಾವುದೇ ಸಮಸ್ಯೆಗಳನ್ನು ಎದುರಿಸಲು ಅವರು ಸಿದ್ಧವಾಗಿರುತ್ತಾರೆ. ಮತ್ತೊಬ್ಬರ ಕಷ್ಟ, ಸುಖಗಳಲ್ಲಿ ಭಾಗಿಯಾಗೋ ಅಂತಹ ಗೆಳೆಯ ಗೆಳತಿಯರನ್ನು ನೆನೆಯುವ ಈ ಸುದಿನವೇ ಸ್ನೇಹಿತರ ದಿನ.
ಹೌದು, ಹಿಂದೆಲ್ಲಾ ಸ್ನೇಹಿತರ ದಿನ ಬಂತಂದ್ರೆ ಸಾಕು ಫ್ರೆಂಡ್ ಶಿಪ್ ಬ್ಯಾಂಡ್ ಗಳನ್ನು ಹಿಡಿದುಕೊಂಡು ಸ್ನೇಹಿತರಿಗೆ ಶುಭಾಶಯ ಕೋರಿ ಬ್ಯಾಂಡ್ ಗಳನ್ನು ಕಟ್ಟುತ್ತಿದ್ದೆವು, ಉಡುಗೊರೆಗಳನ್ನು ನೀಡುತ್ತಿದ್ದೆವು. ಆದ್ರೆ ಈಗ ಹಾಗಲ್ಲ, ಈ ದಿನವನ್ನ ಜನ ಕೊಂಚ ಡಿಫರೆಂಟ್ ಆಗಿ ಆಚರಿಸುತ್ತಾರೆ. ಸಾಮಾಜಿಕ ಜಾಲತಾಣಗಳಂತೂ ಈ ದಿನ ಭಿನ್ನ ವಿಭಿನ್ನ ಪೋಸ್ಟ್ ಗಳಿಂದ ರಾರಾಜಿಸುತ್ತಿರುತ್ತದೆ. ಮಾರುಕಟ್ಟೆಯಲ್ಲಂತೂ ಕೇಳೋದೆ ಬೇಡ, ಕಲರ್ ಫುಲ್ ಬ್ಯಾಂಡ್ ಗಳು, ವಿವಿಧ ವಿನ್ಯಾಸಗಳ ಗ್ರೀಟಿಂಗ್ ಕಾರ್ಡ್ ಗಳು ಗಮನ ಸೆಳೆಯುತ್ತವೆ. ಅಲ್ಲದೆ ಭಾನುವಾರವಾಗಿರೋದ್ರಿಂದ ಸ್ನೇಹಿತರೊಂದಿಗೆ ಪ್ರವಾಸ, ಪಾರ್ಟಿಗಳು ಜೋರಾಗಿಯೇ ಇರುತ್ತವೆ. ನಮ್ಮ ಸಂತೋಷಕ್ಕೋಸ್ಕರ, ನಮ್ಮ ಹಿತಕ್ಕೋಸ್ಕರ, ಕಷ್ಟ ಸುಖಗಳಲ್ಲಿ ನಮ್ಮೊಂದಿಗಿರುವ ಈ ಸ್ನೇಹಿತರಿಗೋಸ್ಕರ ಖರ್ಚು ಮಾಡೋದು ದೊಡ್ಡ ವಿಷಯವಲ್ಲ. ಹೀಗಾಗಿಯೇ ದುಬಾರಿ ವೆಚ್ಚದ ಗಿಫ್ಟ್, ಕಾರ್ಡ್ ಗಳ ಮೊರೆ ಹೋಗುವವರೂ ನಮ್ಮಲ್ಲಿ ಅನೇಕರಿದ್ದಾರೆ.
ಹಿಂದೆಲ್ಲ ದೂರದೂರಿಗೆ ಹೋದ ಸ್ನೇಹಿತರು ಮತ್ತೆ ಸಿಗೋದೆ ಅಪರೂಪ. ಸಿಕ್ಕಿದ್ರೂನು ಹಿಂದಿನ ಆತ್ಮೀಯತೆ ಇರೋದು ಕಡಿಮೆ. ಆದರೆ ಈಗ ಹಾಗಿಲ್ಲ, ಕಾಲ ಬದಲಾದಂತೆ ತಂತ್ರಜ್ಞಾನಗಳು ಅಭಿವೃದ್ಧಿಯಾಗಿವೆ. ಪತ್ರಗಳ ಜಾಗಕ್ಕೆ ಫೇಸ್ಬುಕ್, ವಾಟ್ಸಾಪ್ ಗಳು ಲಗ್ಗೆ ಇಟ್ಟಿವೆ. ಮೆಸೇಜ್, ವಾಯ್ಸ್ ಕಾಲ್, ವೀಡಿಯೋ ಕಾಲ್ ಗಳು ದೂರದೂರಿನ ಸ್ನೇಹಿತರನ್ನ ಒಟ್ಟುಗೂಡಿಸುವ ಸೇತುವೆಯಾಗಿ ಕೆಲಸ ಮಾಡುತ್ತಿವೆ. ಗೆಟ್ ಟುಗೆದರ್, ಎಂಗೇಜ್ ಮೆಂಟ್, ಮದುವೆ, ಸಂತೋಷ ಕೂಟ, ಪ್ರವಾಸದ ನೆಪದಲ್ಲಿ ಹಳೆ ಸ್ನೇಹಿತರು ಮತ್ತೆ ಒಟ್ಟುಗೂಡಿ ತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕಲು ಸಹಾಯ ಮಾಡುತ್ತಿವೆ. ಈ ಮೂಲಕ ಹಳೆ ಸ್ನೇಹಿತರು ಮತ್ತೆ ನಮ್ಮ ಬಾಂಧವ್ಯವನ್ನು ಮುಂದುವರಿಸುವ ವೇದಿಕೆಯಾಗುತ್ತಿವೆ.
ಅದೇನೆ ಇರಲಿ, ಸ್ನೇಹಿತರು ಎಂದು ಹೇಳಿಕೊಳ್ಳುವ ಎಲ್ಲರೂ ನಿಜವಾದ ಸ್ನೇಹಿತರಾಗಿರುವುದಿಲ್ಲ. ಜೀವನದ ಏಳು, ಬೀಳುಗಳಲ್ಲಿ ನಮ್ಮೊಂದಿಗಿದ್ದು, ಧೈರ್ಯ ತುಂಬಿ ನಮ್ಮನ್ನ ಮುನ್ನಡೆಸಿಕೊಂಡು ಹೋದರೇನೆ ಸ್ನೇಹಕ್ಕೊಂದು ಅರ್ಥ. ಹೀಗಾಗಿ ಬೆಸ್ಟ್ ಫ್ರೆಂಡ್, ಜಸ್ಟ್ ಫ್ರೆಂಡ್, ಕ್ಲೋಸ್ ಫ್ರೆಂಡ್, ವೆಲ್ ವಿಷರ್ ಅನ್ನೋ ಹೆಸರಿನಲ್ಲಿ ಯಾರೆಲ್ಲ ತಮ್ಮ ಸ್ನೇಹಿತರಿಗಾಗಿ ತಮ್ಮ ಸ್ನೇಹಿತರ ಖುಷಿಗಾಗಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟಿದ್ದೀರೋ, ಅವರೆಲ್ಲರಿಗೂ ಸ್ನೇಹಿತರ ದಿನದ ಶುಭಾಷಯಗಳು.
✍:ದಿವ್ಯ
ಉಜಿರೆ. ಸಂಪಾದಕರು,
ಭಂಡಾರಿ ವಾರ್ತೆ
|
Super..
ReplyDeleteHappy friendship day💐ಸೂಪರ್
ReplyDeleteತುಂಬಾ ಚೆನ್ನಾಗಿ ತಿಳಿಸಿದ್ದೀರಿ
ReplyDeleteಸ್ನೇಹ ಅಮರ...
ReplyDeleteಸ್ನೇಹ ಮಧುರ...
ಸ್ನೇಹ ನಿರಂತರ...
ಸ್ನೇಹ ಅಜರಾಮರ....ಸಮಯೋಚಿತ ಬರಹ..ಚೆನ್ನಾಗಿದೆ.