BhandaryVarthe Team

BhandaryVarthe Team
Bhandary Varthe Team

Thursday 3 August 2017

ವರಮಹಾಲಕ್ಷ್ಮೀ ವ್ರತಾಚರಣೆ

       ತುಳುನಾಡು ಹೊರತುಪಡಿಸಿ ಉಳಿದೆಡೆಗಳಲ್ಲಿ ಆಷಾಡ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ. ಇದು ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸದ ಪ್ರಾರಂಭ. ಶ್ರಾವಣ ಮಾಸವೆಂದರೆ ಎಲ್ಲರಲ್ಲೂ ಸಂತಸದ ನಗು ಹೊಮ್ಮುತ್ತದೆ. ಶ್ರಾವಣ ಮಾಸ ಬಂತೆಂದರೆ ಸಾಕು ಹಬ್ಬಗಳು ಸರತಿ ಸಾಲಿನಲ್ಲಿ ನಿಲ್ಲುತ್ತದೆ. ನಮಗೇನಿದ್ದರೂ ಇನ್ನು ಹಬ್ಬಗಳನ್ನು ಆಚರಿಸುವ ಕೆಲಸವಷ್ಟೇ ಬಾಕಿ. ಶ್ರಾವಣ ಮಾಸದ ಪ್ರತಿದಿನ ಕೂಡ ಅತ್ಯಂತ ಶ್ರೇಷ್ಠ ದಿನವಾಗಿದ್ದು, ಶ್ರಾವಣ ಸೋಮವಾರ, ಮಂಗಳ ಗೌರಿ ವ್ರತ, ನಾಗರ ಪಂಚಮಿ, ವರಮಹಾಲಕ್ಷ್ಮಿ ವ್ರತ, ನೂಲ ಹುಣ್ಣಿಮೆ, ಶ್ರಿ ಕ್ರಷ್ಣ ಜನ್ಮಾಷ್ಟಮಿ ,ಗಣೇಶ ಚತುರ್ಥಿ ಹೀಗೆ ಹಬ್ಬಗಳ ಸರಮಾಲೆಯೆ ಇದೆ. ಶ್ರಾವಣದ ಎರಡನೇ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ವ್ರತ ಮಹಿಳೆಯರಿಗೆ ಅತ್ಯಂತ ಶ್ರೇಷ್ಠವಾದ ಹಬ್ಬವಾಗಿದೆ. ವಿವಾಹಿತ ಮಹಿಳೆಯರು ಕುಟುಂಬವು ಸಂಪತ್ತು, ಸಮೃದ್ಧಿಯಿಂದ ಕೂಡಿರಲೆಂದು,  ತಮ್ಮ ಗಂಡನ ಆಯಸ್ಸು, ಆರೋಗ್ಯ ಹೆಚ್ಚಲೆಂದು, ಕನ್ಯೆಯರು ಒಳ್ಳೆಯ ಗಂಡ ಸಿಗಲೆಂದು ವ್ರತವನ್ನೂ ಆಚರಿಸುತ್ತಾರೆ.

ಇತಿಹಾಸದ ಒಂದು ಕಥೆ


          ಮಗಧ ರಾಜ್ಯದ ಒಂದು ನಗರದಲ್ಲಿ ಚಾರುಮತಿ ಎಂಬ ಬ್ರಾಹ್ಮಣ ಮಹಿಳೆ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಳು. ಆಕೆಯ ಭಕ್ತಿ, ಪರಾಕಾಷ್ಟೆಗೆ ಮೆಚ್ಚಿ ದೇವಿ ಮಹಾಲಕ್ಷ್ಮಿಯು ಅವಳ ಕನಸಿನಲ್ಲಿ ಬಂದು ವರ-ಮಹಾಲಕ್ಷ್ಮಿಯ ವ್ರತವನ್ನು ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರದಂದು ಮಾಡಬೇಕೆಂದೂ, ಇದರಿಂದ ಇಷ್ಟಾರ್ಥಗಳು ಈಡೇರುವುದೆಂದು ಕನಸಲ್ಲಿ ಸೂಚಿಸಿದರು. ವರಮಹಾಲಕ್ಷ್ಮಿಯು ವಿಷ್ಣುದೇವನ ಪತ್ನಿಯ ಇನ್ನೊಂದು ರೂಪವಾಗಿದ್ದು ಹಾಗೂ ಸಂಪತ್ತಿನ ಅಧಿದೇವತೆಯೂ ಆಗಿರುತ್ತಾಳೆ. ಚಾರುಮತಿಯು ತನ್ನ ಕನಸಿನ ಬಗ್ಗೆ ಕುಟುಂಬದವರಲ್ಲಿ ಹೇಳಿದಾಗ ವ್ರತವನ್ನು ಆಚರಿಸುವುದು ಒಳ್ಳೆಯದು ಎಂದು ಆಕೆಗೆ ಪ್ರೊತ್ಸಾಹ ನೀಡಿದರು. ಹೀಗಾಗಿ ನಗರದ ಎಲ್ಲಾ ಮಹಿಳೆಯರು ಒಟ್ಟು ಸೇರಿ ವರಮಹಾಲಕ್ಷ್ಮಿ ವ್ರತವನ್ನು ಶ್ರಧ್ಧೆ-ಭಕ್ತಿಯಿಂದ ಆಚರಿಸಿದರು

ಪೂಜೆಯ ವಿಧಾನ

        ಶುಕ್ರವಾರದ ದಿನ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಮನೆಯನ್ನೆಲ್ಲಾ ಶುಚಿಗೊಳಿಸಿ , ಮನೆಯ ಮುಂದೆ ರಂಗೋಲಿ ಹಾಕಿ, ಹಸಿರು ತೋರಣ ಕಟ್ಟಿ, ಹೆಣ್ಣುಮಕ್ಕಳು ಅಭ್ಯಂಜನ ಮುಗಿಸಿಕೊಂಡು, ರೇಷ್ಮೆಯ ಬಟ್ಟೆ ಧರಿಸಿ, ಪೂಜೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಾರೆ. ಮೊದಲಿಗೆ ಕಳಶ ಸ್ಥಾಪನೆ, ಒಂದು ಕಂಚಿನ ಅಥವಾ ಬೆಳ್ಳಿ ಚೊಂಬು ತೆಗೆದುಕೊಂಡು, ಅದಕ್ಕೆ ಶ್ರೀಗಂಧವನ್ನು ಲೇಪನ ಮಾಡಿ ಕಳಶದ ಚೊಂಬಿಗೆ ಅಕ್ಕಿ ಅಥವಾ ನೀರು ಹಾಗೂ ವೀಳ್ಯದೆಲೆ, ಅಡಿಕೆ , ನಾಣ್ಯಗಳನ್ನು ಹಾಕಿ ತುಂಬಿಸುತ್ತಾರೆ. ರೀತಿ ಚೊಂಬಿನಲ್ಲಿ ತುಂಬುವ ಸಂಪ್ರದಾಯವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಕೆಲವು ಕಡೆ ಚೊಂಬಿನ ಸುತ್ತ ಒಂದು ಬಟ್ಟೆಯನ್ನು ಕಟ್ಟಿ , ಚೊಂಬಿನ ಬಾಯಿಯಲ್ಲಿ ಮಾವಿನ ಎಲೆಯನ್ನಿಟ್ಟು ನಿಲ್ಲಿಸಿ, ಒಂದು ತೆಂಗಿನ ಕಾಯಿಗೆ ಅರಿಶಿನವನ್ನು ಬಳಿದು ,ತೆಂಗಿನ ಕಾಯಿಯ ಜುಟ್ಟು ಮೇಲೆ ಬರುವ ಹಾಗೆ ಕೂರಿಸುತ್ತಾರೆ. ತೆಂಗಿನ ಕಾಯಿಗೆ ಲಕ್ಷ್ಮೀ ದೇವಿಯ ಮುಖವಾಡವನ್ನು ಕಟ್ಟುತ್ತಾರೆ ಅಥವಾ ಅರಿಶಿನದಲ್ಲಿ ಲಕ್ಷ್ಮಿ ದೇವಿಯ ಚಿತ್ರವನ್ನು ಬಿಡಿಸುತ್ತಾರೆ. ರೀತಿ ಮಾಡುವುದರಿಂದ ಕಳಶವು ಲಕ್ಷ್ಮಿ ದೇವಿಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ ಎಂಬ ನಂಬಿಕೆ ಇದೆ‌. ಹೀಗೆ ಆಭರಣಗಳಿಂದ ಭೂಷಿತಳಾದ ಲಕ್ಷ್ಮಿ ದೇವಿಯನ್ನು ಸುಮಧುರ ಸುವಾಸನೆಯುಳ್ಳ ಮಲ್ಲಿಗೆ, ಸಂಪಿಗೆ, ಸೇವಂತಿಗೆ ಹೂವುಗಳಿಂದ ಅಲಂಕರಿಸಲಾಗುತ್ತದೆ. ಬಳಿಕ ಅರಿಶಿನ ಕುಂಕುಮ ಶೋಭಿತೆಯಾದ ಲಕ್ಷ್ಮಿಯ ಕಳಶವನ್ನು ಒಂದು ಅಕ್ಕಿಯ ಪೀಠದಲ್ಲಿ ಸ್ಥಾಪಿಸಿ. ಬಳಿಕ ವಿವಿಧ ರೀತಿಯ ಸಿಹಿ ತಿಂಡಿಗಳು, ಹಣ್ಣು, ಕಾಯಿ ,ಹಾಲು ಸಕ್ಕರೆಗಳನ್ನು ನೈವೇದ್ಯಕ್ಕೆ ಇಟ್ಟು ಪೂಜೆ ಆರಂಭಿಸುತ್ತಾರೆ. ಮಹಾಲಕ್ಷ್ಮಿಯ ಶ್ಲೋಕಗಳನ್ನು ಹೇಳುತ್ತಾ ,ಲಕ್ಷ್ಮಿ ಸಹಸ್ರನಾಮಗಳನ್ನು ಜಪಿಸುತ್ತಾ, ಕಷ್ಟಗಳನ್ನು ದೂರ ಮಾಡಿ ಮನೆಯಲ್ಲಿ ಸುಖ - ಶಾಂತಿ ನೆಲೆಸಿ, ಸಮೃಧ್ದಿ, ಸಂಪತ್ತು ಹೆಚ್ಚಾಗಲೆಂದು ಬೇಡಿಕೊಳ್ಳುತ್ತಾರೆ
            "ಮಂಗಳಾರತಿಯ ತಂದು ಬೆಳಗಿರೆ ಅಂಬುಜಾಕ್ಷಿಯ ರಾಣಿಗೆ" ಎಂದು ಹಾಡುತ್ತಾ ಕಳಶಕ್ಕೆ ಆರತಿ ಮಾಡುತ್ತಾರೆ. ಕೆಲವು ಕಡೆ ಪೂಜೆ ಮಾಡುವ ಮಹಿಳೆಯರು ತಮ್ಮ 'ಕೈ' ಮಣಿಕಟ್ಟಿನ ಸುತ್ತಲೂ ಅರಿಶಿಣ ದಾರವನ್ನು (ಕಂಕಣ) ಕಟ್ಟಿಕೊಳ್ಳುತ್ತಾರೆ. ಕೊನೆಯಲ್ಲಿ ಮನೆಗೆ ಬಂದ ಮುತ್ತೈದೆಯರಿಗೆ ಅರಿಶಿಣ- ಕುಂಕುಮ ಕೊಟ್ಟು, 'ಬಾಗಣ' ವನ್ನು ನೀಡಿ ಆಶಿರ್ವಾದ ಪಡೆಯುತ್ತಾರೆ. ಎಲ್ಲರೂ ಒಟ್ಟುಗೂಡಿ ಹಬ್ಬದೂಟವನ್ನು ಮಾಡಿ ಸಂಭ್ರಮಿಸುತ್ತಾರೆ.
 ✍: ಪ್ರತಿಭಾ ಭಂಡಾರಿ, ಹರಿಹರಪುರ


  

2 comments:

  1. ವರಮಹಾಲಕ್ಷ್ಮಿ ಪೂಜೆಯ ಮಹತ್ತ್ವ ಮತ್ತು ವಿಧಾನವನ್ನು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ವಿವರಿಸಿದ್ದೀರಿ. ಧನ್ಯವಾದಗಳು.

    ReplyDelete