ಕಥೆ - 3
"ಅನೂಹ್ಯ "
ಚಳಿಗಾಲದ ಸುಂದರ ಮುಂಜಾವು. ಮೂಡಣದಿಂದ ಮೆಲ್ಲಮೆಲ್ಲನೆ ಮೂಡಿ ಹೊನ್ನ ರಥವನ್ನೇರಿ ಹೊರಟ ದಿನಕರನ ಹೊಂಗಿರಣ. ಹಕ್ಕಿಗಳ ಚಿಲಿಪಿಲಿ ಕಲರವ, ದುಂಬಿಗಳ ಝೇಂಕಾರ, ಆಗತಾನೇ ಅರಳಿದ ಸೌಗಂಧ. ಭತ್ತದ ತೆನೆಯ ಮೇಲಿಂದ ಸಾಗಿ ಎಳೆಯ ಸೇರುತ್ತಿರುವ ಇಬ್ಬನಿಯ ಸಾಲು. ಪ್ರಕೃತಿಯ ಈ ಸ್ನೇಹಮಯ ನೋಟಕ್ಕೆ ಒಂದು ಗಳಿಗೆ ಅಪ್ಪ ಮಗಳಿಬ್ಬರು ಮೈಮರೆತು ನಿಂತರು. ಬೆಳ್ಳನೆ ಬೆಳಗಾಯಿತು ಎಂಬ ಹಾಡನ್ನು ಗುನುಗುತ್ತಾ "ಅನೂಹ್ಯ" ಗಿಡದಲ್ಲಿ ಬೆಳೆದಿದ್ದ ಹೂಗಳನ್ನು ಬಿಡಿಸುತ್ತಿದ್ದರೆ, ಶ್ರೀಧರ ರಾಯರು ಅಲ್ಲೇ ಇದ್ದ ಕಲ್ಲು ಬೆಂಚಿನಲ್ಲಿ ಕುಳಿತರು. ಅಷ್ಟರಲ್ಲೇ ಸ್ವಚ್ಚಂದವಾಗಿ ಹಾರಾಡುತ್ತ ಗುಬ್ಬಿಗಳೆರಡು ಉಷಃಕಾಲದ ನಿಶೆಯಲ್ಲಿ ಮೈಮರೆಯದೆ ಚಿವ್ ಚಿವ್ ಎಂದು ಮುಂಜಾನೆಗೆ ಭಾಷ್ಯ ಬರೆಯುತ್ತ ದಾಸವಾಳದ ಗಿಡವೊಂದರ ಮೇಲೆ ಕುಳಿತು ಅದಕ್ಕೆ ಕುಕ್ಕ ತೊಡಗಿದವು. ಬೆರಗು ಕಂಗಳಿಂದ ಅವುಗಳತ್ತಲೇ ನೋಡುತ್ತಿದ್ದ ಅನೂಹ್ಯಳನ್ನು ಕಂಡು,ರಾಯರ ಮೀಸೆಯಂಚಿನಲಿ ಕಿರು ನಗುವೊಂದು ಹಾದುಹೋಯಿತು. ಕಣ್ಣಂಚಿನಲ್ಲಿ ಕಂಡೂ ಕಾಣದಂತೆ ನೋವಿನ ಎಳೆಯೊಂದು ಮಿಂಚಿ ಮರೆಯಾಯಿತು. ಈ ಹುಡುಗಿಯ ಬಾಳಿನಲ್ಲಿ "ಆ" ಒಂದು ಕಪ್ಪು ಚುಕ್ಕೆಯನ್ನು ವಿಧಿ ಯಾಕೆ ಬರೆದ ? ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ . ಮನಸ್ಸು ಹಲವು ವರುಷಗಳ ಹಿಂದಕ್ಕೆ ಓಡಿತು. ಘಟನೆಗಳು ಕಣ್ಣ ಮುಂದೆ ಸುರುಳಿ ಬಿಚ್ಚಿದಂತೆ ಬಿಚ್ಚಿತ್ತ ಹೋದವು.
ಬಯಸಿ ಪಡೆದ ಮಗಳು ಅನೂಹ್ಯ ಅಪಘಾತವೊಂದರಲ್ಲಿ ಹೆಂಡತಿಯನ್ನು ಕಳೆದುಕೊಂಡ ರಾಯರಿಗೆ ಸರ್ವಸ್ವವಾದಳು. ಆಗತಾನೆ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಕಂಗಳಲ್ಲಿ ನೂರಾರು ಬಣ್ಣಬಣ್ಣದ ಕನಸುಗಳನ್ನು ತುಂಬಿ ಕಾಲೇಜ್ ಸೇರುವ ಧಾವಂತದಲ್ಲಿದ್ದ ಅನೂಹ್ಯ ಅಂದು ಗದ್ದೆಯಂಚಿನ ಮಾವಿನ ಮರದ ಕೆಳಗೆ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಮೈ ಕೆಂಡದಂತೆ ಸುಡುತ್ತಿತ್ತು.ಎರಡು ದಿನಗಳ ಆಸ್ಪತ್ರೆ ವಾಸದಿಂದ ಮನೆಗೆ ಬಂದ 'ಅನೂಹ್ಯ' ನಿರ್ಜೀವ ಬೊಂಬೆಯಂತಾದಳು. ಮನೆ ಮಗನಂತೆ ಬೆಳೆದ 'ಅವಿನಾಶ್' ಆಕೆಯ ಮೇಲೆ ಅತ್ಯಾಚಾರವೆಸಗಿದ್ದು ತಿಳಿದು ಬಂದಿತ್ತು. ಅಂತೂ ಇಂತೂ ವೈದ್ಯರ , ಮನೆಯವರ ಪ್ರಯತ್ನದಿಂದ ಆಕೆ ಮೊದಲಿನಂತೆ ಆಗುವುದರಲ್ಲಿ ಆಕೆಯ ದೇಹದ ಮೇಲೆ ಗಮನಾರ್ಹ ಬದಲಾವಣೆಗಳು ಕಂಡುಬಂದವು. ಪರಿಸ್ಥಿತಿ ಕೈ ಮೀರಿ ಹೋಗುವುದರಲ್ಲಿ 'ಪಾಪದ ಪಿಂಡ'ವನ್ನು ತೆಗೆಸಿದ್ದು ಆಯ್ತು. ದಿನದಿಂದ ದಿನಕ್ಕೆ ನಿರ್ಲಿಪ್ತಳಾಗಿ ತೊಡಗಿದ ಅನೂಹ್ಯಳನ್ನು ಕಂಡು ವೈದ್ಯರು ವಾಸ್ತವ್ಯ ಬದಲಾಯಿಸಲು ಹೇಳಿದರು. ಎಲ್ಲರ ಹಾರೈಕೆ ಫಲವೆಂಬಂತೆ ಚೇತರಿಸಿಕೊಂಡ ಅನೂಹ್ಯ , ಬಾಲ್ಯದ ಆಸೆಯಂತೆ ಪದವಿ ಮುಗಿಸಿ ಐ.ಎ.ಎಸ್ .ಪರೀಕ್ಷೆ ಬರೆದು ರಾಜ್ಯಕ್ಕೆ ಮೊದಲಿಗಳಾಗಿ ಪಾಸಾದಳು.
"ಏನಪ್ಪಾ ಯೋಚನೆ" ಎಂದು ಕೊರಳಿಗೆ ಜೋತುಬಿದ್ದ ಅನೂಹ್ಯಳ ಮಾತಿಗೆ ಶ್ರೀಧರರಾಯರು ವಾಸ್ತವದ ಕಡೆಗೆ ಮರಳಿದರು.ಒಂದು ಕ್ಷಣದ ಮೌನದ ಬಳಿಕ ಮಾತನ್ನು ಮುಂದುವರಿಸಿದರು. "ಅನು, ಅಂತೂ ನಿನ್ನ ಪರಿಶ್ರಮದಿಂದ ಐಎಎಸ್ ಪಾಸ್ ಆದೆ. ನನ್ನ ಆಸೆ ಯೊಂದು ಬಾಕಿ ಉಳಿದಿದೆಯಲ್ಲಾ? ಆ ಜೋಡಿ ಹಕ್ಕಿಗಳಂತೆ ನಿನ್ನ ಬದುಕಿಗೆ ಓರ್ವ ಉತ್ತಮ ಸಂಗಾತಿಯನ್ನು ಆರಿಸುವ ಜವಾಬ್ದಾರಿ ನನ್ನ ಮೇಲಿದೆ. ಪ್ರಾಯದ ಮದದಲ್ಲಿ "ಅವಿ" ಮಾಡಿದ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದಾನೆ. ನಿನ್ನ ಆಯ್ಕೆಗೆ ನನ್ನ ಒಪ್ಪಿಗೆ ಇದೆ ಮಗಳೆ. ಯಾರನ್ನಾದರೂ ಇಷ್ಟಪಟ್ಟಿದ್ದರೆ ಹೇಳಮ್ಮ ..."ಎಂದರು.ಅಪ್ಪನತ್ತ ಒಂದು ಕ್ಷಣ ದಿಟ್ಟಿಸಿದ ಅನೂಹ್ಯ " ಅಪ್ಪ ,ಹೀಗೆ ಹೇಳುತ್ತೇನೆಂದು ಬೇಜಾರು ಮಾಡಿಕೊಳ್ಳಬೇಡಿ. ಮದುವೆ ಎಂಬ ಕನಸಿನ ಗೋಪುರವನ್ನು ನಾನೆಂದು ಕಟ್ಟಿಲ್ಲ. ನನ್ನ ಗುರಿ ನಾನೊಬ್ಬಳು "ಐ.ಎ.ಎಸ್" ಅಧಿಕಾರಿಯಾಗಿ, ಸಮರ್ಥವಾಗಿ ಅದನ್ನು ನಿರ್ವಹಿಸಬೇಕು ಎಂಬುದು. ಆ ಗುರಿಯ ಕಡೆ ಹೆಜ್ಜೆ ಇಟ್ಟಿದ್ದೇನೆ. ನನ್ನ ಪರಿಶ್ರಮಕ್ಕಿಂತಲೂ ನಿಮ್ಮ ಬೆವರ ಹನಿಗಳ ಸಾಲು ನನ್ನ ಗುರಿಯ ಹಿಂದಿದೆ ಎಂಬುದನ್ನು ನಾನೆಂದಿಗೂ ಮರೆತಿಲ್ಲ.ಇನ್ನು ಪ್ರೀತಿ? ನಾನು ಪ್ರೀತಿಸಿದ್ದು "ಐ ಎ ಎಸ್" ನನ್ನು. ಬಾಲ್ಯದಲ್ಲೇ ನೀವು ನನ್ನಲ್ಲಿ ಬಿತ್ತಿದ ಬೀಜ ಅದು. ನಾನು ಮೆಚ್ಚಿದ್ದು ನನ್ನ ಸಂಗಾತಿ ಎಂದರೆ ಇದುವೇ" .ಎಂದ ಅನುವಿನತ್ತ ಪ್ರಶ್ನಾರ್ಥಕವಾಗಿ ನೋಡಿದರು ರಾಯರು.
ಅನೂಹ್ಯ ಮಾತನ್ನು ಮುಂದುವರಿಸಿದಳು. "ಅಪ್ಪ , ಬದುಕು ಏನೆಂದು ಅರ್ಥವಾಗದ ವಯಸ್ಸಿನಲ್ಲಿ ನನ್ನೊಳಗೊಂದು ಜೀವ ಮೈದಳೆಯಿತು. ನನ್ನೊಳಗೊಂದು ಪುಟ್ಟ ಜೀವ ಚಿಗುರೊಡೆಯುತ್ತಿದೆ ಎಂದರಿವಾಗುವುದರೊಳಗೆ ಅದನ್ನು ಕಳೆದುಕೊಂಡೆ. ಮಾತ್ರವಲ್ಲದೆ ತಾಯ್ತನದ ಭಾಗ್ಯದಿಂದ ಶಾಶ್ವತವಾಗಿ ವಂಚಿತಳಾದೆ. ಅಂದು ವಿಪರೀತ ರಕ್ತಸ್ರಾವದಿಂದ ನನ್ನನ್ನು ಉಳಿಸಲು ನನ್ನ ತಾಯ್ತನ ಸಂಕೇತವಾದ ಗರ್ಭಕೋಶವನ್ನು ತೆಗೆಯಲಾಗಿದೆ ಎಂದು ನನಗೆ ತಿಳಿದಿದೆ. ಇಂದು ಆಧುನಿಕ ಜಗತ್ತು ಎಷ್ಟೇ ಮುಂದುವರಿದರೂ "ಹೆಣ್ತನ" ಸಾರ್ಥಕವಾಗುವುದು ತಾಯ್ತನದಲ್ಲಿ. ವಿಧಿ ನನ್ನ ಹಣೆಯಲ್ಲಿ ಅದನ್ನು ಮೊದಲೇ ಬರೆದಿತ್ತು ಏನೋ? ಆ ದಿನಗಳಲ್ಲಿ ನನಗಿಂತಲೂ ಹೆಚ್ಚು ನೀವು ಅನುಭವಿಸಿದ ನೋವನ್ನು ನಾನೊಬ್ಬಳೇ ಅರ್ಥ ಮಾಡಿಕೊಳ್ಳಬಲ್ಲೆ. ಅಪ್ಪಾ, ಪ್ರತಿ ಹೆಣ್ಣಿನಂತೆ ಗಂಡು ಕೂಡ ತನ್ನ ಮಗುವಿನ ಬಗ್ಗೆ ಕನಸನ್ನು ಕಾಣುತ್ತಾನೆ. "ಅಪ್ಪ"ಎಂದು ಕರೆಯಿಸಿಕೊಳ್ಳುವ ಪುಟ್ಟ ಜೀವಕ್ಕಾಗಿ ಹಾತೊರೆಯುತ್ತಾನೆ .ಆತನ ತಾಯಿತಂದೆಯರಿಗೂ ಆ ಹಂಬಲ ಇದ್ದೇ ಇರುತ್ತದೆ. ಯಾರೋ ಪ್ರಾಯದ ಮದದಲ್ಲಿ ಮಾಡಿದ ತಪ್ಪಿಗೆ ಇನ್ಯಾರಿಗೋ ಇಷ್ಟು ದೊಡ್ಡ ಶಿಕ್ಷೆ ನೀಡುವುದು ಬೇಡ. ಮಾತ್ರವಲ್ಲದೆ ಯಾವ ತಪ್ಪು ಮಾಡಿರದ ಹುಡುಗರು ನನ್ನ ಬಾಳಲ್ಲಿ ಬಂದು ಅವರನ್ನು ತಂದೆ ಎನಿಸಿಕೊಳ್ಳುವ ಭಾಗ್ಯದಿಂದ ನಿರ್ಭಾಗ್ಯವಂತರನ್ನಾಗಿ ಮಾಡಲುನನಗಿಷ್ಟವಿಲ್ಲ. ನಾನು ಪಡೆದು ಬಂದುದನ್ನು ನಾನೇ ಅನುಭವಿಸುತ್ತೇನೆ. ಅದರಲ್ಲಿ ಯಾರಿಗೂ ಪಾಲು ಬೇಡ. ನನ್ನ ದುಡಿಮೆಯಲ್ಲಿ ಅನಾಥ ಮಕ್ಕಳಿಗೊಂದು ಬಾಳು ಕೊಡುವ ಆಸೆ. ನನ್ನ ಆಸೆಗೆ ಒತ್ತಾಸೆಯಾಗಿ ನೀವಿರುವಿರಿ ಎಂಬ ಭರವಸೆ ಇದೆ" ಎಂದ ಮಗಳತ್ತ ಕಣ್ತುಂಬಿ ನೋಡಿದರು ಶ್ರೀಧರ ರಾಯರು. ರವಿ ನೀಲಾಗಸದಲ್ಲಿ ತನ್ನ ದಿನಚರಿಯನ್ನು ಮುಗಿಸುವ ತುರಾತುರಿಯಲ್ಲಿ ಸಾಗುತ್ತಿದ್ದ. ಹೂವಿನ ಬುಟ್ಟಿಯನ್ನು ಎತ್ತಿಕೊಂಡು ಮನೆಯೊಳಗೆ ನಡೆದ "ಅನೂಹ್ಯ "ನ ಪ್ರತಿ ಹೆಜ್ಜೆಯಲ್ಲೂ ನಿರ್ಧಾರದ ಸ್ಪಷ್ಟತೆ ಕಾಣುತ್ತಿತ್ತು. ಮಗಳು ಬದಲಾದಾಳು ಎಂಬ ಸಣ್ಣ ನಿರೀಕ್ಷೆಯೊಂದಿಗೆ , ಜೊತೆಗೆ ಮಗಳ ಬಗ್ಗೆ ಹೆಮ್ಮೆ ಪಡುತ್ತಾ ಶ್ರೀಧರ ರಾಯರು ಬದುಕುತ್ತಿದ್ದರೆ ಸಮಾಜದ ಕಣ್ಣಿಗೆ ಅವಳು ಅನೂಹ್ಯವಾಗಿ ಉಳಿದಳು.
( ಅನೂಹ್ಯ _ ರಹಸ್ಯ)
✍🏻 ಎ.ಆರ್.ಭಂಡಾರಿ.ವಿಟ್ಲ
No comments:
Post a Comment