BhandaryVarthe Team

BhandaryVarthe Team
Bhandary Varthe Team

Monday, 11 October 2021

‌‌‌"ಜಾತಕ ದೋಷ‌" - ಎ.ಆರ್.ಭಂಡಾರಿ. ವಿಟ್ಲ

 

ಕಥೆ - 5

‌‌‌‌ "ಜಾತಕ ದೋಷ‌"

ಪುಟ್ಟ ಹೆಜ್ಜೆ ಇಟ್ಟು ನಡೆವ ಎಳೆಯ ಕಂದನ ಮುಗ್ಧ ನಗುವಿನಂತೆ ಮೃಣ್ಮಯಿ ಹಣತೆಗಳು ಬೀರುವ ಬೆಳಕಿನ ವಿಸ್ಮಯ ಲೋಕದಲ್ಲಿ ಕ್ಷಿತಿಜ ಕಳೆದುಹೋಗಿದ್ದಳು. "ಸಾಕೇ, ಹುಡುಗಿ ಬೆಳಕಿನೊಂದಿಗೆ ಮಾತು. ನಾಳೆ ಹುಡುಗನ ಕಡೆಯವರು ಬರುವವರಿದ್ದಾರೆ" ಎನ್ನುವ ಅಣ್ಣ ರವಿಯ ಮಾತಿಗೆ ನಸುನಗುತ್ತ ಕೋಣೆ ಸೇರಿದ್ದಳು. ಅಂದೇಕೋ ಕ್ಷಿತಿಜಾಳಿಗೆ 'ಹೊಸ ಮುಂಜಾನೆ' ಎಂದೆನಿಸುತ್ತಿತ್ತು. ಮನೆಯವರ ಗಡಿಬಿಡಿ ಮಧ್ಯೆ ಅಲಂಕರಿಸಿಕೊಂಡು, ಹೆತ್ತವರೊಂದಿಗೆ ಬಂದಿದ್ದ "ಶಶಿಕಾಂತ್" ನನ್ನು ಎದುರಿಸಿದ್ದಾಯ್ತು. ಅಹಂ ಬಿಗುಮಾನವಿಲ್ಲದೆ 'ಶಶಿ' ಕ್ಷಿತಿಜಾಳ ಮನೆಯವರ ಮನ ಗೆದ್ದಾಯಿತು.ಇದ್ದ ಒಂದೇಒಂದು ತೊಂದರೆಯೆಂದರೆ, ಆತನ ಜಾತಕ ದಲ್ಲಿದ್ದ 'ಕುಜದೋಷ'.
ಉಪನ್ಯಾಸಕ ಶಶಿಕಾಂತ್ ಪ್ರತಿಭಾನ್ವಿತ ವಿದ್ಯಾರ್ಥಿ ಕ್ಷಿತಿಜಾಳಿಗೆ ಎಂದೋ ಮನಸೋತಿದ್ದ.ಒಲವ ಹಕ್ಕಿಗಳಿಗೆ 'ವಧು ಪರೀಕ್ಷೆ' ಒಂದು ನೆಪ ಆಗಿತ್ತು ಅಷ್ಟೇ. ಆದರೆ ಆಧುನಿಕ ಜಗತ್ತಿಗೆ ಹೊಂದಿಕೊಂಡ ಕ್ಷಿತಿಜಾಳ ಮನೆಯವರು ಸಮಸ್ಯೆಗಳಿಗೆ ಪರಿಹಾರ ಇದ್ದೇ ಇದೆ ಎಂದು ನಂಬಿದವರು. "ಶಶಿ"ಯನ್ನು ಪೂರ್ಣ ಮನಸ್ಸಿನಿಂದ ಒಪ್ಪಿಕೊಂಡಿದ್ದರು.

 

ಅಂತೂ ಇಂತೂ ಮೊದಲೇ ಪ್ರೇಮಿಸಿದ್ದ"ಕ್ಷಿತಿಜಾ- ಶಶಿಕಾಂತ್ " ಗೆ ಮನೆಯವರ ಒಪ್ಪಿಗೆ ದೊರೆತಂತಾಯಿತು. ಇದೇ ವೇಳೆ ಪದವಿ ಕೊನೆ ಹಂತದಲ್ಲಿದ್ದ ಕ್ಷಿತಿಜಾ ಒಂದು ವಾರದ ಕಾಲೇಜ್ ಟೂರಿಗೆ ಸಂತೋಷವಾಗಿ ನಗುನಗುತ್ತ ಹೊರಟಿದ್ದಳು.
ಎರಡು ದಿನ ಕಳೆಯುವಷ್ಟರಲ್ಲಿ ಶಶಿಕಾಂತ್ ನ ತಂದೆ "ಆರಿದ್ರಾ ನಕ್ಷತ್ರದ ಹುಡುಗಿಯನ್ನು ಸೊಸೆಯಾಗಿ ತಂದರೆ ನನ್ನ ಹೆಂಡತಿ ಸಾಯುತ್ತಾಳೆಂದು. ನಿಮ್ಮ ಹುಡುಗಿ ಬೇಡವೆಂದು ತಿರಸ್ಕರಿಸಿ , ಆರಿದ್ರಾ ಎಂದರೇನೆ ದರಿದ್ರ" ಎಂದು ಅಹಂಕಾರದ ಮಾತುಗಳನ್ನಾಡಿ ಫೋನಾಯಿಸಿದ್ದರು. ಆತನ ಮಾತಿಗೆ ರೊಚ್ಚಿಗೆದ್ದ ಕ್ಷಿತಿಜಾಳ ಹೆತ್ತವರು ದೊಡ್ಡ ರಾದ್ಧಾಂತವೇ ನಡೆಸಿದರು. ಎರಡು ಮನೆಯವರ ಮಧ್ಯೆ ಕಂದಕ ಏರ್ಪಟ್ಟು ಎರಡು ಮನಸುಗಳ ದೂರವಾಯಿತು.

ಟೂರ್ ಮುಗಿಸಿ ಬಂದ ಕ್ಷಿತಿಜ ಪರೀಕ್ಷೆ ಮುಗಿಸಿ ಬೆಂಗಳೂರಿನಲ್ಲಿದ್ದ ಮಾವನ ಮನೆಗೆ ಬಲವಂತವಾಗಿ ಸೇರಿದ್ದಳು.ಜೊತೆಯಲ್ಲೇ ಶಶಿಕಾಂತ್ ಗೆ ಮದುವೆ ನಿಶ್ಚಯಿಸಲಾಗಿದೆ ಎಂಬ ಸುದ್ದಿ ತಿಳಿಯಿತು.ಅಲ್ಲಿಗೆ ಅವಳ ಆಸೆ ಭರವಸೆಗಳೆಲ್ಲಾ ಸುಟ್ಟು ಬೂದಿಯಾಗಿ ಬದುಕೇ ಸ್ಮಶಾನವಾಗಿ‌ ಬಿಟ್ಟಿತು.ಆದರೆ ನೇಸರನ ಆಗಮನ ಅವಳಿಗೆ ಮಾನಸಿಕ ನೆಮ್ಮದಿಯನ್ನು ನೀಡಿದ್ದರೂ,ಸಾಮಾಜಿಕವಾಗಿ ಅವಳು ತಂದೆ-ತಾಯಿ ಬಂಧು ಬಳಗದಿಂದ ದೂರವಾಗಿ ಬಿಟ್ಟಿದ್ದಳು.ಈ ಏಳು ವರುಷ ನೇಸರನಿಗಾಗಿ ಅವಳು ಸಾಕಷ್ಟು ಕಷ್ಟಪಟ್ಟಿದ್ದರೂ, ಅವರಿಬ್ಬರ ಬಾಂಧವ್ಯ ಹೆಚ್ಚು ಗಟ್ಟಿಯಾಗಿತ್ತು.ನೇಸರ ಅವಳ ಸರ್ವಸ್ವವಾಗಿದ್ದಾನೆ. ಅವನೊಂದಿಗಿನ ಮಾತುಕತೆ, ಆಟ-ಪಾಠ, ಒಡನಾಟದಲ್ಲಿ ಅವಳ ಬದುಕು ಸಂಪೂರ್ಣವಾಗಿ ಬಿಟ್ಟಿದೆ.


"ಹೆಣ್ಣು ಹೆಂಡತಿಯಾಗಿ ಸಾಯುತ್ತಾಳೆ. ತಾಯಿಯಾಗಿ ಅಮರನಾಗುತ್ತಾಳೆ." ಎಂಬ 'ಸತ್ಯಕಾಮ'ರ ಮಾತು ಎಷ್ಟು ಸತ್ಯ ಎನಿಸುತ್ತಿತ್ತು. ತಲೆಗೊಂದರಂತೆ ಮಾತನಾಡುವ ಈ ಕೆಟ್ಟ ಪ್ರಪಂಚವನ್ನು ಅವರು ಮರೆತುಬಿಟ್ಟಿದ್ದಾಳೆ.ನೇಸರನೆ ಆಕೆಯ ಉಸಿರು.

ಹೌದು.ಆ ದಿನ ಮಾವನ ಮನೆ ಸೇರಿದ ಕ್ಷಿತಿಜಾ ಮಾನಸಿಕವಾಗಿ ನೊಂದು NGO ಒಂದಕ್ಕೆ ಸೇರಿ ಸಮಯ ಕಳೆಯ ತೊಡಗಿದಳು. ಅದೇ ಸಂದರ್ಭದಲ್ಲಿ ಐಎಎಸ್ ಪರೀಕ್ಷೆ ಬರೆದು ಜಿಲ್ಲಾಧಿಕಾರಿಯಾಗಿ ಆಯ್ಕೆಯಾಗಿ ನೆರೆಯ ರಾಜ್ಯದಲ್ಲಿ ಸೇವೆಗೆ ತೊಡಗಿದಳು.

ವರುಷಗಳು ಉರುಳ ತೊಡಗಿತು. ಅದೊಂದು ದಿನ ಅವಳು ಸೇವೆ ಸಲ್ಲಿಸುತ್ತಿದ್ದ ಜಿಲ್ಲೆ ಅತಿಯಾದ ಮಳೆಯಿಂದ ತತ್ತರಿಸಿತು. ಅದೇ ಸಂದರ್ಭದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಎರಡು ತಿಂಗಳ ಹಸುಗೂಸು ಅವಳ ಮಡಿಲು ಸೇರಿದ್ದು. ಆ ಮಗುವನ್ನು ಕಾನೂನು ಪ್ರಕಾರ ದತ್ತು ತೆಗೆದುಕೊಂಡು "ನೇಸರ" ಎಂದು ಹೆಸರಿಟ್ಟು ಬೆಳೆಸತೊಡಗಿದಳು.

ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆ ನಿಶ್ಚಿತ. ಕ್ಷಿತಿಜಾ ಬೇರೊಂದು‌ ಜಿಲ್ಲೆಗೆ ವರ್ಗಾವಣೆಯಾಗಿ ನಡೆದಳು. ವಿಪರ್ಯಾಸ ಎಂಬಂತೆ ಆ ಜಿಲ್ಲೆಯ ಡಿಡಿಪಿಐ ಆಗಿ 'ಶಶಿಕಾಂತ್ 'ಸೇವೆಯಲ್ಲಿದ್ದ. ಕ್ಷಿತಿಜಾಳ ಬಗ್ಗೆ ತಿಳಿದ ಆತ, ನೇರವಾಗಿ ಭೇಟಿಯಾಗಲು‌ ಆಕೆಯ‌ ಕೊಠಡಿ ಪ್ರವೇಶಿಸಿದ. ಕೆಲಸದೊತ್ತಡದಲ್ಲಿದ್ದ ಕ್ಷಿತಿಜಾ ಸಹಜವೆಂಬಂತೆ 'yes please come in' ಎಂದು ನುಡಿದಿದ್ದಳು.ಆದರೆ ಶಶಿಯ ಕಂಡು ಸ್ತಬ್ಧಳಾಗಿ ಬಿಟ್ಟಳು. ಶಶಿಕಾಂತ್ ಆ ಮೌನವ ಭೇಧಿಸುವಂತೆ ನೇರವಾಗಿ ಮಾತನಾಡ ತೊಡಗಿದ.
"ಈ ಏಳು ವರ್ಷದಲ್ಲಿ ಒಂದು ಸಲನೂ ಊರ ಕಡೆ ಬರಲಿಲ್ಲ ನೀನು. ನಾನು ಎಷ್ಟೋ ಸಲ ನಿಮ್ಮ ಊರಿಗೆ ಹೋಗಿ ನಿಮ್ಮ ಅಪ್ಪನ ಜೊತೆ ಜಗಳ ಆಡಿ ಬಂದಿದ್ದೇನೆ. ನಿನ್ನ ಎಲ್ಲಿಟ್ಟಿದ್ದಾರೆ ?ಅಂತ ಊರೂರು ಅಲೆದು ಬಂದಿದ್ದೇನೆ. ನಿನಗೋಸ್ಕರ ನಾನು ನಿದ್ದೆ ಇಲ್ಲದೆ ಅತ್ತಿದ್ದು, ನರಳಿದ್ದು ,ಹುಡುಕಿದ್ದು, ಯಾರು ನಿನ್ನಲ್ಲಿ ಹೇಳಲೆ ಇಲ್ವಾ ?ಅಥವಾ ನಿನಗೆ ಕೇಳಿಸಿಕೊಳ್ಳಲಿಕೆ ಇಷ್ಟ ಇರಲಿಲ್ವಾ ? ಶಶಿಯ ಧ್ವನಿ ಗದ್ಗದ ಆಗಿತ್ತು. ಅವಳು ನಿರ್ಲಿಪ್ತಳಾಗಿ ಕೇಳಿದಳು 'ನಿಮ್ಮ ಹೆಂಡತಿ ಮಕ್ಕಳು ಹೇಗಿದ್ದಾರೆ ಶಶಿ?' ಅವನು ಮಾತು ಮರೆತವನಂತೆ ಕುಳಿತುಬಿಟ್ಟ. ಅವಳು ಬರಿದೆ ನಕ್ಕು ನುಡಿದಳು. " ಈ ಹತ್ತು ವರ್ಷ ಅದರಲ್ಲೂ 7ವರ್ಷ ನಾನು ನನ್ನ ಮಗನ ಜೊತೆ ಬಹಳ ಸಂತೋಷದಿಂದ ಜೀವನವನ್ನು ಕಳೆದಿದ್ದೇನೆ. ಅವನನ್ನು ನೋಡುತ್ತಾ ನಿನ್ನನ್ನು ಮರೆತಿದ್ದೇನೆ.
"ಎಷ್ಟು ದೊಡ್ಡ ಸುಳ್ಳು ಅಂತ ನನಗೂ ಗೊತ್ತು.ನನಗಿಂತ ಚೆನ್ನಾಗಿ ನಿನಗೂ ಗೊತ್ತು. ನಿನಗೆ "ನೇಸರ" ಅನ್ನೋ ಮಗನೇ ಇಲ್ಲ. ಇರುವುದೂ ನಿಜ. ಆದರೆ ಅವನು ನಿನ್ನ ದತ್ತು ಮಗ. ನಮ್ಮ ಹೆತ್ತವರ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ನೀನು ಹಿಡಿದ ದಾರಿ ನಿನಗೆ ಸರಿ ಎನಿಸಿರಬಹುದು. ಅದನ್ನು ಮಾಡಿದೆ.ಆದರೆ ನನ್ನ ಬಗ್ಗೆ ಯೋಚನೆ ಮಾಡಿದೆಯಾ? ನಿನ್ನ ಮನೆಯವರು ಯಾರೋ ನನಗೆ ಮದುವೆಯಾಗಿದೆ ಅಂತ ಸುಳ್ಳು ಹೇಳಿದ್ದನ್ನು ನಿಸ್ಸಂಶಯವಾಗಿ ನಂಬಿ ಬಿಟ್ಟೆ. ನನಗೆ ಸಿಗದೇನೆ ಇರಬೇಕು ಅಂತ ನಿರ್ಧರಿಸಿಬಿಟ್ಟೆ. ನಿನ್ನ ಬದುಕು ನಿನ್ನಿಷ್ಟ ಅದರ ಬಗ್ಗೆ ಮಾತನಾಡುವುದಕ್ಕೆ ನನಗೇನು ಅಧಿಕಾರ ಇಲ್ಲ.ಯಾಕೆಂದರೆ ನಾನು ನಿನಗೆ ಏನು ಅಲ್ಲ".ಅವನ ಧ್ವನಿ ಒರಟಾಗಿರಲಿಲ್ಲ.ಆದರೆ ಅದು ಕತ್ತಿಯ ಅಲಗಿನಂತೆ ಅವಳನ್ನು ಇರಿಯುತ್ತಿತ್ತು. ಅವನು ದುಃಖವನ್ನು ನುಂಗಲು ಪ್ರಯತ್ನಿಸುತ್ತಾ ಸ್ವಲ್ಪ ಹೊತ್ತು ಮೌನವಾಗಿದ್ದು ಮತ್ತೆ ಮಾತು ಮುಂದುವರಿಸಿದ "ನಮ್ಮ ಮದುವೆ ತಡೆದ ನಮ್ಮ ಮನೆಯವರಾಗಲಿ, ನಿಮ್ಮ ಮನೆಯವರಾಗಲಿ, ಈಗ ಯಾರೂ ಬದುಕಿಲ್ಲ. ನನ್ನ ಮನೆಮನಬದುಕು ಎಲ್ಲಾ ನಿನಗೋಸ್ಕರ ಕಾಯ್ತಾ ಇದೆ.ಲಕ್ಷ್ಮಣನಿಗೆ ಊರ್ಮಿಳೆ ಹದಿನಾಲ್ಕು ವರ್ಷಗಳ ನಂತರ ಸಿಕ್ಕಿದಳು.ಅವರ ನಂತರದ ಬದುಕಿನಲ್ಲಿ ಆಷಾಡದ ವೇಗ ವಿರಲಿಲ್ಲ ನಿಜ. ಆದರೆ ಶರದೃತುವಿನ ಸಂತೃಪ್ತಿ ಇತ್ತು. ನನಗೂ ಅಂತದೆ ಬದುಕು ಬೇಕು.ನಿನ್ನ ಸಾಕು ಮಗ ನೇಸರನನ್ನು ಯಾವುದಾದರೂ ರೆಸಿಡೆನ್ಸಿಯಲ್ ಸ್ಕೂಲಿಗೆ ಸೇರಿಸೋಣ.ಇನ್ನಾದರೂ ನಮ್ಮಿಬ್ಬರ ಮಧ್ಯೆ ಯಾರು ಬರೋದು ಬೇಡ.
ಕ್ಷಿತಿಜ ಳಿಗೆ ತಟ್ಟನೆ ನೇಸರ ನೆನಪಾಗಿದ್ದ. "ಕ್ಷಮಿಸು ಶಶಿಕಾಂತ್. ಯಯಾತಿ ಮಹಾರಾಜನಿಂದ ದೂರ ಹೋದ ಶರ್ಮಿಷ್ಠೆ 'ಪುರು' ವನ್ನು ಹೇಗೆ ಬೆಳೆಸಿದಳು? ಎಷ್ಟು ಕಷ್ಟಪಟ್ಟಳು? ಅವನು ಹೇಗೆ ದೊಡ್ಡ ಚಕ್ರವರ್ತಿಯಾದ? ಎಂಬುದು ನನಗೆ ತಿಳಿದಿದೆ.ಈ ಉಸಿರು ಕಟ್ಟಿಸುವ ಬದುಕಿನಲ್ಲಿ ಸಂಜೀವಿನಿಯಾಗಿ ಬಂದವನು ನೇಸರ. ಅವನಿಗೆ ನಾನು , ನನಗೆ ಅವನು. ಈ ಬದುಕಿಗೆ ಇಷ್ಟೇ ಸಾಕು " ಎಂದು ನೇರವಾಗಿ ನುಡಿದು ಬಾಗಿಲಿನತ್ತ ಕೈ ತೋರುತ್ತಾಳೆ.

 


ಶಶಿ, ಭೂಮಿ ( ಕ್ಷಿತಿಜಾ)ಯನ್ನು ಸುತ್ತಿದರೂ ಭೂಮಿ ಸುತ್ತೋದು ಸೂರ್ಯ (ನೇಸರ)ನನ್ನು ಎಂಬ ಸತ್ಯ ಶಶಿಕಾಂತ್ ನ ಅರಿವಿಗೆ ಬರುವುದರಲ್ಲಿತ್ತು.

✍🏻ಎ.ಆರ್.ಭಂಡಾರಿ. ವಿಟ್ಲ

No comments:

Post a Comment