ಕಥೆ - 6
"ಜೀವನ್ಮುಖಿ"
ಕಡಲಕಿನಾರೆಯಲ್ಲಿ ಕುಳಿತು ತೆರೆಗಳ ಏರಿಳಿತ ನೋಡುತ್ತಿದ್ದ "ತಸ್ಮಯಿ" ಅಮೋಘನ ಕಣ್ಣಿಗೆ ದೇವತೆಯಂತೆ ಕಾಣುತ್ತಿದ್ದಾಳೆ. ನನ್ನ ಬಾಳಿನ "ಜೀವನ್ಮುಖಿ" ಈಕೆ.ಇನ್ನಾದರೂ ಈ ಪ್ರೀತಿ ದೇವತೆ ನಗುತಿರಬೇಕು. ಅವಳ ನೋವೆಲ್ಲ ಈ ಸಾಗರದ ನೀರಲ್ಲಿ ಕರಗಿ ಹೋಗಲಿ ಎಂದು ಅವನ ಮನಸ್ಸು ಆಶಿಸುತ್ತಿದೆ. ಆದರೆ ತಸ್ಮಯಿ ಅದಾವುದರ ಪರಿವೆ ಇಲ್ಲದೆ ದಿಗಂತದ ಅಂಚಿಗೆ ದೃಷ್ಟಿ ನೆಟ್ಟಿದ್ದಾಳೆ. ಅಂದು ಮುಂಜಾನೆ "ತನ್ಮಯಿ" ನಡೆದುಕೊಂಡ ನಡವಳಿಕೆಯ ಸುತ್ತಲೇ ಮನಸ್ಸು ಗಿರಕಿ ಹೊಡೆಯುತ್ತಿದೆ. ಅಂದು "ಅಮೋಘ"ನನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದವಳು, ಇಂದು ಅವನು ನನಗಿತ್ತ ಉಡುಗೊರೆ ಯಾದ 'ಮುತ್ತಿನ ಹಾರ'ವನ್ನು ತನಗಿಷ್ಟ ವೆಂದು ಯಾವುದೇ ಮುಲಾಜಿಲ್ಲದೆ ಪಡೆದುಕೊಂಡಿದ್ದಳು. ಅತ್ತಿಗೆ 'ಹಿತಾ' ಆ ಬಗ್ಗೆ ಗದರಿದಾಗ "ಇರಲಿ ಬಿಡಿ ನನ್ನ ತಂಗಿ ಅಲ್ವಾ" ಎಂದು ಸಮಾಧಾನಿಸಿದೆ. ಅಷ್ಟರಲ್ಲಿ ತನ್ಮಯಿ, "ಮುತ್ತಿನಹಾರ ಮಾತ್ರ ಯಾಕೆ ಅವಳ ಗಂಡನನ್ನು ಬೇಕಾದರೂ ನನಗೆ ಬಿಟ್ಟುಕೊಡುತ್ತಾಳೆ" ಎಂದಾಗ ಅತ್ತಿಗೆ ಸಿಡಿದಿದ್ದರು. "ತನು, ನಿನ್ನದು ಯಾಕೋ ಅತಿಯಾಯಿತು. ಅವಳು ದೊಡ್ಡ ತ್ಯಾಗಮಯಿ ನೋಡು. ಎಲ್ಲವನ್ನು ನಿನಗಾಗಿ ಬಿಟ್ಟುಕೊಡುತ್ತಾಳೆ.ನೀನು ತಗೋತಿಯಾ.ಎಂಥ ಮಾತೂಂತ ಆಡ್ತೀಯಾ?ನೀನು ಮಾಡಿದ ತಪ್ಪನ್ನು ಸರಿಪಡಿಸಲು ಅವಳೆಷ್ಟು ಕಷ್ಟ ಪಟ್ಟಿದ್ದಾಳೆ ಗೊತ್ತಾ? ಎಂದಾದರೂ ಅವಳ ಆಸೆ ಕನಸುಗಳೇನು? ಅಂತ ತಿಳ್ಕೊಂಡಿದ್ದಿಯಾ?" ಎಂದು ಮಾತನಾಡುತ್ತಲೇ ಇದ್ದರು. ಆದರೆ ತನು ಅತ್ತಿಗೆಯ ಮಾತಿಗೆ ಸಂಬಂಧವೇ ಇಲ್ಲವೆಂಬಂತೆ ಸರಿದು ಹೋಗಿದ್ದಳು.
ಇದೀಗ ಹೆರಿಗೆಗೆಂದು ತವರಿಗೆ ಬಂದಿದ್ದಾಳೆ ತನ್ಮಯಿ.ಆದರೆ ಹಠಮಾರಿ ಹೆಣ್ಣು ಬದಲಾಗಿಲ್ಲ.ಹಾಗೆಯೇ ಇದ್ದಾಳೆಂದೆನಿಸುತಿದೆ.
'ತಸು' ಎದ್ದೇಳೆ ಎಂದ ಅಮೋಘನ ದನಿಗೆ ನನ್ನ ಮನದಲ್ಲಿ ನಡೆಯುತ್ತಿದ್ದ ತಾಕಲಾಟಕ್ಕೆ ಅಲ್ಪ ವಿರಾಮ ಬಿದ್ದಂತಾಯಿತು.ನಿಧಾನವಾಗಿ ಮೇಲಿದ್ದವಳಿಗೆ ಹೊಟ್ಟೆಯಲ್ಲೇನೋ ಸಂಕಟ.ಹೌದು , ನಮ್ಮ ಪ್ರೇಮದ ಉಸಿರು ನನ್ನ ಬಸಿರಲ್ಲಿ ಮೊಳಕೆಯೊಡೆದಿದೆ.ಇನ್ನೇನು ಹೆರಿಗೆಯಾಗುವ ಸಮಯ.ನನ್ನೆಲ್ಲಾ ಕೆಲಸ ಕಾರ್ಯಗಳಿಗೆ ರಜೆ ಘೋಷಿಸಿದ್ದೇನೆ.ಅಮೋಘನು ನನ್ನ ಜತೆಯೇ ಸಮಯ ಕಳೆಯುತ್ತಿದ್ದಾರೆ.ಇದೀಗ ನನ್ನ ಪರಿಸ್ಥಿತಿ ಕಂಡು ಅಮೋಘ ಗಾಬರಿಯಾಗುವರೆಂದು ಮ ಅಮ್ಮನಿಗೆ ಆಸ್ಪತ್ರೆಗೆ ಬರಲು ಕೋರಿದೆ.
ಅಮೋಘನ ಒಲವಿನ ಕುಡಿಯ ನಿರೀಕ್ಷೆಯಲ್ಲಿಯೇ ನಾನು ನಿಧಾನವಾಗಿ ಅವರ ಕೈಹಿಡಿದು ನಿಂತೆ. ಅನತಿ ದೂರದಲ್ಲಿದ್ದ ಅತ್ತಿಗೆ ಓಡಿ ಬಂದಿದ್ದರು. "ಹೇಳಿದ ಮಾತಲ್ಲಿ ಕೇಳ್ತಿಯ? ದಿನ ತುಂಬಿದ ಮೇಲೆ ಓಡಾಡಬೇಡ ಅಂದ್ರೆ ಕೇಳಲ್ಲ" ಎಂದು ಗೊಣಗುತ್ತಲೇ ಅಣ್ಣ "ತನುಜ್ "ನ ಅವಸರಿಸುತ್ತಾ ಆಸ್ಪತ್ರೆಯತ್ತ ಕಾರು ಓಡಿಸಲು ತಿಳಿಸಿದರು.
ಒಂದು ದಿನ ನೋವು ತಿಂದ ನನ್ನ ಮಡಿಲಿಗೆ "ಮಗಳು" ಬಂದಾಯ್ತು. ಸಂತೋಷ ಸಂಭ್ರಮ ಮನೆ ಮನ ತುಂಬಿತು. ಆದರೆ ಗಂಡನ ಮನೆಯಲ್ಲಿ ಮಹಡಿಯಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ' ತನ್ಮಯಿ' ಕೂಡ ಆಸ್ಪತ್ರೆ ಸೇರಿ ಜೀವನ್ಮರಣ ಹೋರಾಟಕ್ಕೆ ಇಳಿದಿದ್ದಳು.ಅವಳ ಗಂಡ 'ಅಭಯ್' ನ ಕಳವಳ ನೋಡಲಾಗುತ್ತಿರಲಿಲ್ಲ.
ಕೊನೆಗೂ ಎಲ್ಲರ ಹಾರೈಕೆಯ ಫಲವೆಂಬಂತೆ ಮಗುವನ್ನು ಕಳೆದುಕೊಂಡು,ಜತೆಗೆ ಶಾಶ್ವತವಾಗಿ ತಾಯ್ತನದಿಂದ ವಂಚಿತವಾಗಿ ತನ್ಮಯಿ ಬದುಕುಳಿದಳು. ಜೀವಚ್ಛ ಶವದಂತೆ ಮಲಗಿದ್ದ ನನ್ನದೇ ಪಡಿಯಚ್ಚನ್ನು ನೋಡಿದಾಗ ಕರುಳು ಕಿತ್ತು ಬರುತ್ತಿತ್ತು. ಅವಳು ಯಾವಾಗ ಕೋಮಾದಿಂದ ಹೊರ ಬರುವಳೆಂದು ವೈದ್ಯರು ಭರವಸೆ ನೀಡಲಿಲ್ಲ. ಆದರೆ ಏನೋ, ನಿರ್ಧರಿಸಿದವಳಂತೆ ಮಗಳು "ಅರ್ಥಾ"ಳನ್ನು ಅವಳ ಬಳಿ ಮಲಗಿಸಿ ಬರತೊಡಗಿದೆ. ಅಚ್ಚರಿಯೆಂಬಂತೆ ಕೆಲವೇ ದಿನಗಳಲ್ಲಿ ತನ್ಮಯಿ ಚೇತರಿ ಕ್ಕೊಳ್ಳತೊಡಗಿದ್ದಾಳೆ. ಹಳೆಯದೆಲ್ಲ ಮರೆತ ಅವಳಿಗೆ "ಅರ್ಥಾ" ಮಗಳಾಗಿದ್ದಾಳೆ. ನಾನು ಅವಳ ದೊಡ್ಡಮ್ಮ ನಾಗಿದ್ದೇನೆ.ನಮಗಾಗಿ ಅಭಯ್ ಅಮೇರಿಕಾ ಬಿಟ್ಟು"ಅಮೋಘ್ " ನ ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ.ನಾವೂ ಅಷ್ಟೇ ಅರ್ಥಾಳ ತುಂಟಾಟಕ್ಕೆ ದನಿಯಾಗಿ ಮಗದೊಂದು ಸಂಭ್ರಮಕ್ಕೆ ನಿರೀಕ್ಷೆಯಿರಿಸಿ ಕಾಯುತ್ತಿದ್ದೇವೆ.
✍🏻ಎ.ಆರ್.ಭಂಡಾರಿ.ವಿಟ್ಲ.
No comments:
Post a Comment