ಇಲ್ಲಿಯವರೆಗೆ.....
ಶಮಿಕಳಿಗೆ ತನ್ನ ತಂದೆ ಯಾರೆಂದು ತಿಳಿಯಲು ತಾಯಿ ಭವಾನಿಯ ಡೈರಿ ಓದುತ್ತಾಳೆ. ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಕೊಂಡಿರುತ್ತಾರೆ.ಮಾವನ ಮನೆಯಲ್ಲಿ ಭವಾನಿ ಮತ್ತು ಅವಳ ತಾಯಿ ಇದ್ದು ಅಲ್ಲೇ ಹೈಸ್ಕೂಲ್ ವಿದ್ಯಾಬ್ಯಾಸ ಮುಗಿಸಿ ಉಡುಪಿಗೆ ಬಂದು ಕಾಲೇಜು ಮುಗಿಸಿ ಅಲ್ಲೇ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಹೀಗಿರುವಾಗ ಒಂದು ದಿನ ಕೆಲಸದಿಂದ ಬರುವಾಗ ಅವಳ ಮೇಲೆ ಅತ್ಯಾಚಾರ ನಡೆಯುತ್ತದೆ.ಇದರಿಂದ ಅವಳಿಗೆ ದಿಕ್ಕೇ ತೋಚದಂತಾಗುತ್ತದೆ... ಅವಳು ಸಾಯುವ ನಿರ್ಧಾರ ಮಾಡುತ್ತಾಳೆ.....
ಅಂತರಾಳ - ಭಾಗ 4
ಇಲ್ಲ ನಾನೇಕೆ ಸಾಯಬೇಕು? ನಾನೇನು ತಪ್ಪು ಮಾಡಿದ್ದೇನೆ? ಯಾರೋ ಮಾಡಿದ ತಪ್ಪಿಗೆ ನಾನೇಕೆ ಜೀವ ಕಳೆದುಕೊಳ್ಳಲಿ ?. ಖಂಡಿತ ಸಾಯುವುದಿಲ್ಲ.... ಕೆಲಸವನ್ನೂ ಬಿಡುವುದಿಲ್ಲ.... ಎಂದು ನಿರ್ಧರಿಸಿದೆ. ಎರಡು ದಿನ ಹಾಸ್ಟೆಲ್ ನಲ್ಲಿಯೇ ಇದ್ದು ಮೂರನೆಯ ದಿನ ಗ್ರಂಥಾಲಯಕ್ಕೆ ಹೋದೆ. ಮೊದಲಿನ ಉತ್ಸಾಹ , ಆಸಕ್ತಿ ಕೆಲಸದ ಮೇಲೆ ನಿಲ್ಲುತ್ತಿರಲಿಲ್ಲ. ಯಾಕೋ ಹೃದಯದಲ್ಲಿ ಭಯವಾಗುತ್ತಿತ್ತು......ಯಾರನೂ ನೋಡಿದರೂ ನನ್ನನ್ನು ಪೈಶಾಚಿಕ ರೀತಿಯಲ್ಲಿ ಬಳಸಿಕೊಂಡ ಪ್ರಾಣಿ ಇವನೇ ಇರಬಹುದೇ ಎಂಬ ಸಂಶಯ ಬರುತಿತ್ತು ......ಹೀಗೆ ದಿನಾ ಕಳೆದು ಘಟನೆ ನಡೆದು 40 ದಿನಗಳೇ ಕಳೆದು ಹೋಗಿತ್ತು. ಆಗ ನನಗೆ ನೆನಪಾಯಿತು ಈ ತಿಂಗಳ ಮಾಸಿಕ ಸ್ರಾವ ಆಗಿಲ್ಲ ಎಂದು. 15 ದಿನ ಮುಂದೆ ಹೋಗಿದೆ.ದಿಕ್ಕೇ ತೋಚಲಿಲ್ಲ.........ಕೈ ಕಾಲು ಬಲವಿಲ್ಲದಂತೆ ಆಯಿತು. ನಾನು ಏನು ಆಗಬಾರದು ಎಂದೆನಿಸಿ ಧೈರ್ಯದಿಂದ ಬದುಕುತ್ತಿದ್ದೇನಾ ಆದರೆ ಆಗಬಾರದ ಅನಾಹುತ ನಡೆದೇ ಹೋಗಿದೆ....
ಆ ದುರುಳರು ನನ್ನನ್ನು ನನ್ನ ದೇಹವನ್ನುಮನಸ್ಸನ್ನು ಮಲೀನ ಮಾಡಿದ್ದಲ್ಲದೇ ಅವರ ಕಾಮದ ಕುರುಹು ನನ್ನಲ್ಲಿ ಉಳಿದಿತ್ತು. ಇನ್ನು ಪ್ರಯೋಜನವಿಲ್ಲ.......ಸಾಯುವುದೇ ಸರಿ!. ಹಿಂದೆ ಮುಂದೆ ಯೋಚಿಸಲು ಸಮಯ ಇರಲಿಲ್ಲ.... ಗ್ರಂಥಾಲಯದಲ್ಲಿ ಯಾರೂ ಇರಲಿಲ್ಲ. ನನ್ನ ಸೀರೆ ಬಿಚ್ಚಿ ಹಳೆಯ ಫ್ಯಾನಿಗೆ ಗಂಟು ಹಾಕಿಕೊಂಡು ಕೊರಳು ಹಾಕಬೇಕು ಎಂದಾಗ ಯಾರೋ ಬೆನ್ನ ಮೇಲೆ ಕೈ ಹಾಕಿದ ಹಾಗೆ ಆಯಿತು. ತಿರುಗಿ ನೋಡಿದಾಗ ಎದುರಲ್ಲಿ ದಿನಾ ಮದ್ಯಾಹ್ನ ಓದಲು ಬರುವ ಒಬ್ಬ ಸಪೂರ ದೇಹದ ಪೀಚಲು ಮನುಷ್ಯ ನಿಂತಿದ್ದರು...... ನಾನು ನಿಂತಲ್ಲೇ ಕಲ್ಲಾದೆ........
ಆ ಮನುಷ್ಯ ಚಕ ಚಕನೆ ನನ್ನ ಸೀರೆ ಬಿಚ್ಚಿ ನನ್ನಲ್ಲಿ ಕೊಟ್ಟು ಸೀರೆ ಉಟ್ಟು ಬನ್ನಿ. ಯಾವ ಸಮಸ್ಯೆಗೂ ಪರಿಹಾರ ಇದೆ ಹೋಗಿ ಎಂದರು. ಆ ಮಾತಲ್ಲಿ ಆಜ್ಞೆಯೋ ನಮ್ರತೆಯೋ ಗೊತ್ತಾಗಲಿಲ್ಲ. ನಾನು ಏನೂ ಮಾತನಾಡದೆ ಒಳಗೆ ಹೋಗಿ ಸೀರೆ ಉಟ್ಟು ಬಂದೆ..... ನನ್ನ ಜಾಗದಲ್ಲಿ ಕುಳಿತೆ. ಆ ವ್ಯಕ್ತಿ ನನ್ನ ಎದುರಿಗೆ ಕುಳಿತು : ನನ್ನಹೆಸರು ಶಂಕರಮೂರ್ತಿ ಎಂ ಎಸ್ ಡಬ್ಲ್ಯೂ(M.S.W) ಮಾಡಿದ್ದೇನೆ. ಶಿಕ್ಷಣ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಬ್ಬರು ಅಕ್ಕಂದಿರು ,ಒಬ್ಬಳು ತಂಗಿ, ಒಬ್ಬರು ಅಣ್ಣ ಇದ್ದಾರೆ. ನನ್ನನ್ನು ಬಿಟ್ಟು ಎಲ್ಲರಿಗೂ ಮದುವೆಯಾಗಿದೆ. ಅಣ್ಣ ಮುಂಬೈಯಲ್ಲಿ ಇದ್ದಾರೆ. ಅಪ್ಪ ತೀರಿದ್ದಾರೆ. ಅಪ್ಪನ ರೈಲ್ವೆ ಕೆಲಸ ಅಣ್ಣನಿಗೆ ಸಿಕ್ಕಿದೆ. ಮನೆಯಲ್ಲಿ ತೋಟ, ಕೃಷಿ ಮಾಡುತ್ತಿದ್ದೇವೆ. ನಾನು ಅಮ್ಮ ಇಬ್ಬರೇ ಇರುವುದು.ದಿನಾ ಮನೆಯಿಂದ ಕೆಲಸಕ್ಕೆ ಬರುತ್ತಿದ್ದೇನೆ. ಇಷ್ಟು ನನ್ನ ಪೂರ್ವಾಪರಗಳು.ಈಗ ನೀವು ನಿಮ್ಮ ಸಮಸ್ಯೆ ಹೇಳಬೇಕು. .. ಎಂದರು "ನಾನು ಹೇಳದೆ ಇದ್ದರೆ ಅವರು ತಪ್ಪು ಎನಿಸಬಹುದು, ಹೇಳುವುದೇ ಉತ್ತಮ ಎಂದೆನಿಸಿ ಆ ದಿನಾ ನಡೆದ ಎಲ್ಲಾ ಘಟನೆಯ ಬಗ್ಗೆ ಹೇಳಿ ಈಗ ಮಾಸಿಕ ಸ್ರಾವ ಆಗದ್ದನ್ನು ಹೇಳಿ, ಮನೆಯಲ್ಲಿ ಅಪ್ಪನಿಲ್ಲದೆ ಮಾವನ ಅಡಿಯಾಳಾಗಿ ನಾನು ಅಮ್ಮ ಇರುವುದನ್ನು" ಹೇಳಿದೆ. ಎದೆಯ ಭಾರ ಇಳಿದಂತಾಯಿತು. ಆ ವ್ಯಕ್ತಿ ಏನನ್ನೂ ಹೇಳದೆ ಸುಮ್ಮನೆ ಯೋಚಿಸುತ್ತಿದ್ದರು. 5 ನಿಮಿಷದ ನಂತರ ನಿಮ್ಮ ಹೆಸರೇನು? ಎಂದರು. ಭವಾನಿ ಎಂದೇ!. ಭವಾನಿಯವರೇ ನನ್ನನ್ನು ಶಂಕರ್ ಎಂದೇ ಕರೆಯಿರಿ.
ನಿಮ್ಮ ಸಮಸ್ಯೆಗೆ ಖಂಡಿತಾ ಪರಿಹಾರ ಇದೆ. ಎಲ್ಲಾ ಸಮಸ್ಯೆಗೂ ಸಾವೇ ಪರಿಹಾರವಾದರೆ ಇಲ್ಲಿ ಮನುಷ್ಯರೇ ಇರುತ್ತಿರಲಿಲ್ಲ..... ಎಲ್ಲಾ ಮನುಷ್ಯನಿಗೂ ಸಮಸ್ಯೆ ಇದ್ದೇ ಇದೆ. ಸಮಸ್ಯೆಯ ಕಾರಣ ಬೇರೆ ಬೇರೆ ಇರಬಹುದು... ನಾನು ಖಂಡಿತವಾಗಿ ಯೋಚಿಸಿ ಪರಿಹಾರ ಹುಡುಕುತ್ತೇನೆ. ನೀವು ನಿಶ್ಚಿಂತೆಯಿಂದ ಕೆಲಸ ಮಾಡಿ. ತಪ್ಪಿಯೂ ಏನೂ ಅನಾಹುತ ಮಾಡಿಕೊಳ್ಳಬೇಡಿ. ನಾಳೆ ಬರುತ್ತೇನೆ ಎಂದು ಸಮಾಧಾನ ಹೇಳಿ ಹೋಗಿಯೇ ಬಿಟ್ಟರು. ಯಾಕೋ ಸ್ವಲ್ಪ ಸಮಾಧಾನವಾಯಿತು. ರಾತ್ರಿಯಿಡೀ ನಿದ್ದೆಯೇ ಸುಳಿಯಲಿಲ್ಲ .ಮರುದಿನ ಶಂಕರ್ ಬಂದಾಗ ಆತ್ಮೀಯನೊ , ಪ್ರೀತಿ ಪಾತ್ರರೋ ಎಂಬಂತೆ ಅವರ ಜೊತೆ ಮಾತನಾಡಿದೆ. ಶಂಕರ್ ಕೂಡ ಸಮಾಧಾನ ಹೇಳಿ " ಪರಿಹಾರ ಯೋಚಿಸಿದ್ದೇನೆ. ನೀವು ಯಾವುದಕ್ಕೂ ಚಿಂತೆ ಮಾಡಬೇಡಿ ದಿನಾ ನಾನು ಬರಲು ಆಗುವುದಿಲ್ಲ. ಗಾಬರಿಯಾಗಬೇಡಿ. ಖಂಡಿತ ಪರಿಹಾರ ಸೂಚಿಸಿ ನಿಮ್ಮ ಮುಂದೆ ಬರುತ್ತೇನೆ" ಎಂದರು. ಶಂಕರ್ ಹೋದಾಗ ನಾನು ಒಂಟಿ ಎಂದೆನಿಸಿತು. ಅಂತೂ ದಿನ ಬೇಗ ಬೇಗ ಸರಿಯುತ್ತಿತ್ತು. ಮುಟ್ಟುಆಗದೆ ಎರಡು ತಿಂಗಳು ಆಯಿತು. ನನಗೆ ಹೊಟ್ಟೆಯಲ್ಲಿ ಸಂಕಟ. ಬೆಳಿಗ್ಗೆ ಎದ್ದಾಗ ವಾಂತಿ ಬರುವುದು. ಊಟ ಸೇರುವುದಿಲ್ಲ. ತಲೆ ಸುತ್ತುವುದು ಪ್ರಾರಂಭವಾಯಿತು. ಹಾಸ್ಟೆಲ್ ನಲ್ಲಿ ಯಾರಿಗೂ ಗೊತ್ತಾಗದ ಹಾಗೆ ತುಂಬಾ ಜಾಗ್ರತೆಯಿಂದ ನಿಭಾಯಿಸುತ್ತಿದ್ದೆ. ಶಂಕರ್ ಬರುವ ದಾರಿಯೇ ಕಾಯುತ್ತಿದ್ದೆ. ಬಂದಾಗ " ಇನ್ನು ನನ್ನಿಂದ ಆಗುವುದಿಲ್ಲ 2 ತಿಂಗಳು ಆಯಿತು. ಹಾಸ್ಟೆಲ್ ನಲ್ಲಿ ಎಲ್ಲರಿಗೂ ತಿಳಿಯುತ್ತದೆ ಎಂದು ಭಯವಾಗುತ್ತಿದೆ.
ಏನು ಮಾಡೋಣ" ಎಂದು ಒಂದೇ ಉಸಿರಲ್ಲಿ ಹೇಳಿದೆ. ಅದಕ್ಕೆ ಶಂಕರ್ "ನಾನು ತುಂಬಾ ವಿಧದಲ್ಲಿ ಯೋಚಿಸಿದೆ. ಯಾವುದೂ ಪರಿಹಾರ ಕಾಣಿಸುತ್ತಿಲ್ಲ. ಕೊನೆಯದಾಗಿ ಒಂದೇ ಪರಿಹಾರ. ಅದಕ್ಕೆ ನಿಮ್ಮ ಒಪ್ಪಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ ಭವಾನಿ " ಎಂದು ನನ್ನನ್ನೇ ದಿಟ್ಟಿಸಿದರು. ಏನು ಎಂಬಂತೆ ನೋಡಿದೆ.ಅದಕ್ಕೆ ಬೇರೇನಿಲ್ಲ. " ನಾನು ನಿಮ್ಮನ್ನು ಮದುವೆ ಆಗುತ್ತೇನೆ. ಅದೂ ನೀವು ಒಪ್ಪಿದರೆ ಮಾತ್ರ" ಎಂದರು. ನನಗೆ ಏನೂ ತಿಳಿಯದೆ ಗಲಿಬಿಲಿಗೊಂಡೆ. ನನ್ನ ಎದೆ ಬಡಿಯುತ್ತಿತ್ತು. ನೀವು ಏನು ಹೇಳಿದರೂ ನಾನು ಅದಕ್ಕೆ ಬದ್ಧ.
ನಾನು ತೀರ್ಮಾನ ತೆಗೆದುಕೊಳ್ಳುವ ಹಕ್ಕನ್ನು ಆ ದುಷ್ಟರು ಕಸಿದುಕೊಂಡಿದ್ದಾರೆ ಎಂದೆ. ಶಂಕರ್ ಆಗ " ನಾನು ತುಂಬಾ ಯೋಚಿಸಿದೆ.ಈ ಸ್ಥಿತಿಯಲ್ಲಿ ಬೇರೆಯವರಿಗೆ ಮದುವೆ ಆಗಲು ಹೇಳುವುದು ಹೇಗೆ ? ಆಸ್ಪತ್ರೆಗೆ ಹೋದರು ಅನಾಹುತವೇ ಆಗುತ್ತದೆ. ನಾವು ಭ್ರೂಣ ಹತ್ಯೆಯ ವಿರುದ್ಧ ಕೆಲಸ ಮಾಡುವುದು. ಬೇರೆ ಯಾವ ಪರಿಹಾರವೂ ಕಾಣಿಸುತ್ತಿಲ್ಲ. ನಿಮ್ಮ ಮಾವನಿಗೆ, ಊರಿಗೆ ತಿಳಿದರೆ ನಿಮಗೇ ಸಮಸ್ಯೆ . ನೀವು ಒಪ್ಪಿದರೆ ಈಗಲೇ ಹೋಗಿ ಮದುವೆ ಆಗೋಣ. ನನ್ನ ಪರಿಚಯದವರಲ್ಲಿ ಬಾಡಿಗೆಗೆ ಮನೆಯನ್ನು ಕೇಳಿದ್ದೇನೆ. ನೀವು ಈ ಸ್ಥಿತಿಯಲ್ಲಿ ಹಾಸ್ಟೆಲ್ ನಲ್ಲಿ ಇರುವುದು ಸರಿಯಲ್ಲ" ಎಂದರು. ನನಗೆ ಆ ಕ್ಷಣ ಪ್ರವಾಹದಲ್ಲಿ ಹೋಗುವವಳಿಗೆ ತೆಪ್ಪವೇ ಬಂದು ರಕ್ಷಿಸಿದ ಹಾಗೆ ಅನ್ನಿಸಿತು. ಮರು ಮಾತನಾಡದೆ ಒಪ್ಪಿದೆ. ಅದೇ ದಿನ ದೇವಸ್ಥಾನದಲ್ಲಿ ಮದುವೆ ಆದೆವು. ನೀವು ಇವತ್ತೇ ಹಾಸ್ಟೆಲ್ ಗೆ ಹೋಗಿ ವಾರ್ಡನ್ ನಲ್ಲಿ ನಾನು ಪರಿಚಯದವರನ್ನು ಮದುವೆ ಆಗಿದ್ದೇನೆ. ಇನ್ನು 3 ದಿನದಲ್ಲಿ ನನ್ನ ಗಂಡ ಬಂದು ಬೇರೆ ಮನೆಗೆ ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿ ಎಂದು ಶಂಕರ್ ನಂಗೆ ಹೇಳಿದರು.ಅದರಂತೆ ಹಾಸ್ಟೆಲ್ ನಲ್ಲಿ ಹೇಳಿದೆ. ಎಲ್ಲರೂ ಚುಡಾಯಿಸಿದರು. ವಾರ್ಡನ್ ಶುಭ ಹಾರೈಸಿದರು . ಹೇಳಿದಂತೆ 3 ನೇ ದಿನ ಶಂಕರ್ ಬಂದು ನನ್ನನ್ನು ಕರೆದುಕೊಂಡು ಹೋದರು. ಬಾಡಿಗೆ ಮನೆಗೆ ಬೇಕಾದ ಎಲ್ಲಾ ಸಾಮಾನುಗಳನ್ನು ನಾವಿಬ್ಬರೂ ಜೊತೆಯಲ್ಲಿ ಪೇಟೆಯಲ್ಲಿ ಖರೀದಿಸಿದೆವು. ನನಗಂತೂ ತುಂಬಾನೇ ಸಂತೋಷವಾಯಿತು. ಇನ್ನು ಅಮ್ಮನನ್ನು ಜೊತೆಯಲ್ಲಿ ಕರೆದುಕೊಂಡು ಬರಬೇಕು ಎಂದು ನಿರ್ಧರಿಸಿದೆ. ಕೆಲಸಕ್ಕೂ ರಾಜೀನಾಮೆ ನೀಡಿದೆ. ಶಂಕರ್ ಹೇಳಿದಂತೆ ಮಾವನಿಗೆ ಮದುವೆ ಆಗಿರುವ ಬಗ್ಗೆ ಪತ್ರ ಬರೆದೆ. ಏನೂ ಸುದ್ದಿ ಬರಲಿಲ್ಲ.
(ಮುಂದುವರಿಯುವುದು)
✍️ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ
No comments:
Post a Comment