BhandaryVarthe Team

BhandaryVarthe Team
Bhandary Varthe Team

Friday, 15 October 2021

''ಒಮ್ಮೆ ಕ್ಷಮಿಸಿ ಬಿಡು'' - ಎ.ಆರ್.ಭಂಡಾರಿ ವಿಟ್ಲ.

 

ಕಥೆ - 9

''ಒಮ್ಮೆ ಕ್ಷಮಿಸಿ ಬಿಡು''

ಯಾಕೋ ಮತ್ತು ಅವಳದೇ ನೆನಪು. ಕಣ್ಮುಚ್ಚಿದರೂ ಅದೇ ಗಾಂಭೀರ್ಯದ ಮೊಗ. ನಿದ್ದೆ ಬಳಿಯಲ್ಲಿ ಸುಳಿಯಲೊಲ್ಲದು.ಹಾಗೆಯೇ ಕಣ್ಮುಚ್ಚಿದಾಗ ನೆನಪುಗಳು ಸುರುಳಿಯಂತೆ ಬಿಚ್ಚಿಕೊಳ್ಳುತ್ತವೆ. ಅವಳನ್ನು ನೋಡಿದ್ದಾದರೂ ಎಂದು? ಅಪರೂಪಕೊಮ್ಮೆ ನಗು ಕಾಣುವ ಮೊಗ. ಅದ್ಯಾಕೋ ತುಟಿಗಳೆರಡನ್ನು ಬಿಗಿ ಹಿಡಿವಳೋ ಗೊತ್ತಿಲ್ಲ. ನನ್ನ ಪಾಲಿಗೆ ಅವಳು ಜಂಬದ ಹುಡುಗಿ, ಅಹಂಕಾರಿ. ಹಾಗಾದರೆ ನಾನು‌ ಆಕೆಗೆ ಸೋತಿದ್ದಾದರೂ ಯಾಕೆ?





ಒಂದೇ ಸಂಸ್ಥೆಯಲ್ಲಿ ದುಡಿಯುತ್ತಿದ್ದ ನನ್ನ ಪತ್ನಿಗೆ ಗೆಳತಿ ಅವಳು. ವಯಸ್ಸಿನಲ್ಲಿ ಅವಳಿಗಿಂತ ಕಿರಿಯಳು. ನಾನೋ ಮೂವತ್ತೆರಡರ ಹೊಸ್ತಿಲಲ್ಲಿರುವ ಒಂದು ಮಗುವಿನ ತಂದೆ. ಇನ್ನೂ ಇಪ್ಪತ್ತರ ಗಡಿಯಲ್ಲಿರುವ ಅವಳು ನನ್ನ ನಿದ್ದೆಗೆಡಿಸಿದಾದರೂ ಯಾಕೆ?
ದಿನಕಳೆದಂತೆ ನಾನೂ ಆಕೆಗೆ ಆತ್ಮೀಯನಾದೆ. ಮೊದಮೊದಲು ವಿಶ್ ಮಾತ್ರ ಮಾತನಾಡುತ್ತಿದ್ದ ಅವಳು ನನ್ನೊಡನೆ ಜಗಳ ಕಾಯುವಷ್ಟು ಆಪ್ತಳಾದಳು.ಆದರೂ ಅವಳ ಮೊಗದ ಹಿಂದಿರುವ ಗಾಂಭೀರ್ಯತೆ ಕಾರಣವೂ ತಿಳಿಯಲಿಲ್ಲ. ತತ್ಪರಿಣಾಮ ನನ್ನ ಪಾಲಿಗೆ ಅಹಂಕಾರದ ಹೆಣ್ಣಾಗಿ ಉಳಿದಳು.


ದಿನಗಳು ಕಳೆದಂತೆ ಅವಳ ಮೊಬೈಲ್ ನಂಬರ್ ನನ್ನ ಮೊಬೈಲ್ ನೊಳಗಿತ್ತು. ನನ್ನ ಪತ್ನಿ cell ನಿಂದ ಅದನ್ನು ತೆಗೆದುಕೊಂಡಿದ್ದೆ. ಆಗಾಗ missed-call ಮಾತ್ರ ಕೊಟ್ಟು ಸುಮ್ಮನಿರುತ್ತಿದ್ದೆ. ಮೊದ ಮೊದಲು ನನ್ನ ನಂಬರ್ ಎಂದು ಆಕೆಗೆ ತಿಳಿದಿರಲಿಲ್ಲ.ತಿಳಿದ ಮೇಲೆ ಮೆಸೇಜ್ ಕಳಿಸಲು ಆರಂಭಿಸಿದಳು. ಎಂದೂ ಅದರಲ್ಲಿ ಒಲವು ಮಾತ್ರ ನನಗೆ ಕಾಣಿಸಲಿಲ್ಲ. ಆದರೆ ಆಕೆ ನನಗೆ ಬೇಕೇ ಬೇಕಿತ್ತು. ಹೊರಗಿನ ಗಾಂಭೀರ್ಯ ಸುಳ್ಳಾಗಿರಬಹುದು ಎಂದು ಭಾವಿಸಿದೆ. ಅವಳನ್ನು ಅರಿಯುವ ಪ್ರಯತ್ನ ನಡೆಸಿದೆ.ಒಟ್ಟಿನಲ್ಲಿ ಆಕೆ ನನ್ನ ಪರೀಕ್ಷಾ ವಸ್ತುವಾಗಿದ್ದಳು. ಇದರ ಅರಿವಿಲ್ಲದೇ ಆಕೆ ನನ್ನೊಂದಿಗೆ ಎಂದಿನಂತೆ ಇದ್ದಳು. ಆದರೆ ನನ್ನ ಭಾವನೆಗಳು ಬದಲಾಗುತ್ತಾ ಸಾಗಿದವು. ಆಕೆಯನ್ನು ಸೋಲಿಸಬೇಕು ಅಹಂಕಾರವನ್ನುಇಳಿಸಬೇಕೆಂಬ ನನ್ನಲ್ಲಿದ್ದ ಕಿಚ್ಚು ಒಲವಾಗಿ ಮಾರ್ಪಾಡಾಗಿತ್ತು.ಆಕೆಯಲ್ಲಿದ್ದ ಗಾಂಭೀರ್ಯ ಅಹಂಕಾರ ವಾಗಿರಲಿಲ್ಲ. ತುಂಬುಗೆನ್ನೆಗಳು ಆಕೆಗೆ ಗಾಂಭೀರ್ಯತೆಯನ್ನು ತಂದುಕೊಟ್ಟಿದ್ದವು. ತುಸುವೇ ವಕ್ರವಾಗಿದ್ದ ಹಲ್ಲನ್ನು ಕಂಡು ಆಕೆಯ ಗೆಳತಿಯರು ರೇಗಿಸುತ್ತಿದ್ದರೆಂದು ತುಟಿ ಬಿಗಿ‌ ಹಿಡಿದಿದ್ದಳು. ಮನಸ್ಸು ಅಪ್ಪಟ ಮಗುವಿನದಾಗಿತ್ತು.ಪರೀಕ್ಷಾ ದೃಷ್ಟಿಯಿಂದ ನಾನವಳಿಗೆ " I Love you " ಎಂದರೂ, ಅದು ನನ್ನ ಮನದಿಂಗಿತವೆ ಆಗಿತ್ತು. ಆದರಾಕೆ ಸಿಡಿದು ಬಿದ್ದಿದ್ದಳು.


ಮೊದಮೊದಲು ರೇಗುತ್ತಿದ್ದ ಹುಡುಗಿ ನನ್ನನ್ನೇ ಬದಲಾಯಿಸುವ ಪ್ರಯತ್ನ ಮಾಡಿದಳು. ಅವಳು ನನ್ನ ಪ್ರೀತಿಸುತ್ತಿದ್ದಾಳೆ ಭ್ರಮೆಯಲ್ಲಿ ನನ್ನ ತಪ್ಪಿನ ಅರಿವಾಗ ತೊಡಗಿತ್ತು.ಆದರೆ ಆಕೆ ನನ್ನ ತಪ್ಪಿನ ಅರಿವು ಮೂಡಿಸುವ ಪ್ರಯತ್ನದಲ್ಲಿದ್ದಳು. ಅದೊಂದು‌ ದಿನ ನನ್ನ ತಪ್ಪಿಗೆ ಕ್ಷಮೆ ಕೇಳಿ ನಿಜಾಂಶವನ್ನು ಬಾಯಿ ಬಿಟ್ಟಾಗ ಆಕೆ ತನ್ನ ನಾಟಕವನ್ನು ತಿಳಿಸಿ,ನನ್ನನ್ನು ಜರೆದು ಬರೆದಿದ್ದ ಪತ್ರವನ್ನು ಫೋನಿನಲ್ಲೇ ಓದಿದಳು. ಆದರೆ ನಾನು ಆಕೆಗಾಗಿ ಹಂಬಲಿಸುತ್ತಲೇ ಇದ್ದೆ. ನಿಜಾಂಶವನ್ನು ತಿಳಿಸಿದಾಗ 'ಮತ್ತೆ ಪರೀಕ್ಷೆನಾ' ಎದು ನಕ್ಕುಬಿಟ್ಟಳವಳು. ಆದರೆ ನಾನು ಛಲಬಿಡದ ವಿಕ್ರಮನಂತೆ ಅವಳ ಕಾಡತೊಡಗಿದೆ. ನನ್ನ ಹಟಕ್ಕೆ ಒಂದು ಕ್ಷಣ ಕರಗಿದರೂ ವಾಸ್ತವಾಂಶಕ್ಕೆ ಎಚ್ಚೆತ್ತುಕೊಳ್ಳ ತೊಡಗಿದಳು. ಆದರೆ ನನಗೆ ಆಕೆಯನ್ನು ಪಡೆದೇ ತೀರಬೇಕಿತ್ತು. ಮಡದಿಗೆ,ನನ್ನ ಮೇಲೆ ಸಂಶಯ. ಆದರೆ 'ಸ್ನೇಹಿತೆ'ಯ ಮುಗ್ಧ ಪ್ರೀತಿ ಅವಳಿಗೆ ನಂಬಿಕೆಯನ್ನು ಕೊಟ್ಟಿತ್ತು.
‌‌‌‌‌ ವರುಷಗಳೇ ಉರುಳಿತು‌.ಒಂದು ದಿನ ನನ್ನ ಮನೆಗೆ ಅವಳನ್ನು ಆಹ್ವಾನಿಸಿದ್ದೆ. ಬರಲೊಪ್ಪದವಳನ್ನು ಕರೆತರಬೇಕೆಂದು ಮನ ಹಠ ಹಿಡಿದಿತ್ತು‌.ಮನೆಯಿಂದ ಏನೋ ನೆಪ ಹೇಳಿ ಕಾರನ್ನೇರಿ ಹೊರಟಿದ್ದೆ. ಆದರೆ ನನ್ನ ಮಾತಿಗೆ ಬೆಲೆ ಇತ್ತು,ಸ್ನೇಹಿತೆಯ ಆತ್ಮೀಯ ಆಹ್ವಾನಕ್ಕೆ ಅವಳು ನನ್ನ ಮನೆಯ ದಾರಿ ಹಿಡಿದಿದ್ದಳು. ಇನ್ನೊಬ್ಬರಿಗೆ ನೋವನ್ನುಂಟು ಮಾಡಬಾರದೆಂಬ ಅವಳ ಮನಸ್ಥಿತಿ ಅವಳಿಗೆಯೇ ಶಾಪವಾಗಿತ್ತು.ಅದು ನನಗೆ ವರವಾಗಿತ್ತು, ನನ್ನ ಗೆಲುವಾಗಿತ್ತು. ಅನುಮಾನ ಬಾರದೆಂಬ ಕಾರಣಕ್ಕೆ ನಾನು ಪೇಟೆಯತ್ತ ಸಾಗಿದೆ‌. ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಮನೆಯತ್ತ ಅವಸರವಾಗಿಯೇ ಉತ್ಸಾಹದಿಂದ ಹೊರಟೆ. ನನ್ನ ಮಗುವಿನೊಂದಿಗೆ ಮಗುವಾಗಿ ಬೆರೆತು ಆಟವಾಡುತ್ತಿದ್ದಳವಳು.ಆತಿಥ್ಯ ಸ್ವೀಕರಿಸಿ ಮನೆಗೆ ಹೊರಟು ನಿಂತವಳನ್ನು ಕರೆದುಕೊಂಡು ಹೋಗಬೇಕೆಂಬ ಬಯಕೆ ಇದ್ದರೂ ಅನಿವಾರ್ಯ ಕಾರ್ಯನಿಮಿತ್ತ ಬೈಕನ್ನೇರಿ ಹೊರನಡೆದೆ. ನಾನು ಹಿಂದಿರುಗುವಷ್ಟರಲ್ಲಿ ಆಟೋಗಾಗಿ ಕಾಯುತ್ತಿದ್ದವಳಿಗೆ ನನಗಾಗಿ ಬಂದಿದ್ದಕ್ಕೆ ಕೃತಜ್ಞತೆಯನ್ನರ್ಪಿಸಿದೆ. ನನ್ನ ಒತ್ತಾಯಕ್ಕೆ ಬೈಕನ್ನೇರಿ ಕುಳಿತವಳಿಗೆ ಹೇಳಿದವರಿಗೆ ನನ್ನ ಪ್ರೀತಿಯನ್ನು ತೆರೆದಿಟ್ಟೆ. ಬೈಕಲ್ಲೂ ಮುದುರಿ ಕುಳಿತವಳನ್ನು ಕಂಡು ನಗುವುಕ್ಕಿ ಬರುತ್ತಿತ್ತು. ಬೇಕೆಂದೇ ಗಾಡಿಯನ್ನು ವೇಗವಾಗಿ ಓಡಿಸಿ ಅವಳನ್ನು ನನಗಂಟಿ ಕುಳಿತುಕೊಳ್ಳುವಂತೆ ಮಾಡಿದೆ‌.ಅವಳ ಮನೆಯ ಬಳಿ ಇಳಿಸಿದಾಗ ನಿಡಿದಾದ ಉಸಿರುಬಿಟ್ಟಳು.
ದಿನಕಳೆದಂತೆ ನನಗವಳೇ ಕಾಡತೊಡಗಿದವು. ಮಡದಿ ಪಕ್ಕದಲ್ಲಿದ್ದರೂ 'ಅವಳೇ' ನೆನಪಾಗುತ್ತಿದ್ದಳು. ಮನದಲ್ಲೇ ನಸುನಗುತ್ತಿದ್ದಳು.ನನ್ನದೇನೋ ಹುಚ್ಚು ಹಠ. ಅವಳನ್ನು ಪಡೆದೇ ತೀರಬೇಕೆಂದು.ಆಕೆಯೋ ಜಗಮೊಂಡಿ ವಾಸ್ತವಾಂಶವನ್ನು ಬಿಡಿಬಿಡಿಯಾಗಿ‌ ನನ್ನೆದುರಿಡುವಳು.

ಅದೊಂದು ದಿನ ಪೇಟೆ ಕಡೆ ಬಂದವಳನ್ನು ಅಚಾನಕ್ ಆಗಿ ನಾನು ನೋಡಿದೆ‌.ಕಾಡಿ ಬೇಡಿ ನನ್ನ ಮನೆಯತ್ತ ಕರೆದೊಯ್ದೆ.ಅವಳಿಗೆ ನನ್ನ ಮೇಲೆ ಗಿಂತಲೂ, ಅವಳ ಮೇಲೆ ನಂಬಿಕೆ ಜಾಸ್ತಿ ಇತ್ತು.ಮನೆಯವರ್ಯಾರೂ ಇರಲಿಲ್ಲ.ತೋಟದಮನೆಯಲ್ಲಿರುವರೆಂದು ಅವಳನ್ನತ್ತ ಕರೆದೊಯ್ದೆ.ಅವಳೋ ನನ್ನ ಬದಲಾಯಿಸುವ ಪ್ರಯತ್ನದಲ್ಲಿದ್ದಳು. ನನಗೋ ಆಕೆಯನ್ನ ಪಡೆದ್ದೇ ತೀರ ಬೇಕಿತ್ತು.ಮನೆಯೊಳಗಡಿಯಿಟ್ಟವಳನ್ನು ಬಿಗಿದಪ್ಪಿದೆ. ಉಸಿರಾಡದಂತೆ ಮುದ್ದಿಸಿದೆ. ಅವಳ ಕೊಸರಾಟದ ನಡುವೆಯೂ ನಾನು ಅತ್ಯಾನಂದದಲ್ಲಿ ತೇಲುತ್ತಿದ್ದೆ. ಅರೆಕ್ಷಣದ ಬಳಿಕ ಬಿಗಿ ಹಿಡಿತವನ್ನು ಸಡಿಲಿಸಿದೆ. ಮೊಗದಲ್ಲಿದ್ದ ಕೋಪ ನಾಚಿಕೆ ಅವಳ ಚೆಲುವನ್ನು ಇಮ್ಮಡಿಸಿತ್ತು.ನನ್ನ ಪ್ರೀತಿಗೆ ಎಂದೋ ಅವಳು ಕರಗಿದ್ದಳು.ಹಠಮಾರಿ ಹೆಣ್ಣೂ, ಗಂಡಿನ ಸಾಮೀಪ್ಯಕ್ಕೆ ನೀರಾಗುತ್ತಾಳೆ ಎಂಬುದಕ್ಕೆ ಆಕೆ ಉದಾಹರಣೆಯಾಗಿದ್ದಳು. ಮತ್ತೆ ಅವಳನ್ನು ತಬ್ಬಿ ಚುಂಬಿಸಿದಾಗ ಮರವನ್ನಪ್ಪುವ ಬಳ್ಳಿಯಂತೆ ನನ್ನಪ್ಪಿದಳು.ಕ್ಷಣಕಾಲ ನಡೆದಿದ್ದೆಲ್ಲವೂ ಇತಿಹಾಸ, ನೆನಪುಗಳಷ್ಟೆ.

ಕಾಲ ಮಿಂಚಿತ್ತು.ಎಚ್ಚೆತ್ತ ಗಳ ಕಣ್ಣಲ್ಲಿ ಕಂಬನಿ ಧಾರಾಕಾರವಾಗಿ ಹರಿದಿತ್ತು. ಕಾಲಬಳಿ ಕುಸಿದುಬಿದ್ದವಳನೆತ್ತಿ ಸಂತೈಸಿದೆ.ನನ್ನೆದೆಯಲಿ ಮೊಗವಿಟ್ಟವಳನ್ನು ಕಂಡು ಸಂತಸದಿಂದ ಬೀಗಿದೆ‌.ಅವಳ ತುಂಬಿದೆಯಲ್ಲಿ ಮುಖವಿಟ್ಟು "ನೀನೆ ನನ್ನ ಉಸಿರು ಕಣೆ" ಎಂದು ನಕ್ಕಿದ್ದೆ. ನನ್ನ ಹಂಬಲ ತೀರಿತ್ತು. ಅವಳನ್ನು ಹೊರಡಿಸುವಷ್ಟರಲ್ಲಿ ನನ್ನೆಲ್ಲ ಬುದ್ಧಿ ಖರ್ಚಾಗಿತ್ತು.ಹೊರಟು ನಿಂತವಳನ್ನು ಸಮಾಧಾನಿಸಿ ಸಾವಿರದ ನೋಟುಗಳ ಕಂತೆ ಕೈಗಿಟ್ಟಿದ್ದೆ. ಕಣ್ತುಂಬಿ ನೋಡಿದವಳು ತಿರುಗಿ ನೋಡದೆ ನಡೆದಿದ್ದಳು.ಫೋನಾಯಿಸಿದರೂ ಪ್ರತಿಕ್ರಿಯೆ ಇರಲಿಲ್ಲ. ಎಷ್ಟೋ ಸಮಯದ ಬಳಿಕ ಮೆಸೇಜ್ ಬಂದಿತ್ತು 'ನನ್ನ ಪ್ರೀತಿಗೆ ನಿಮ್ಮ ಬೆಲೆ ಇಷ್ಟೇನಾ? ನನ್ನನ್ನು ಕಾಲ್ ಗರ್ಲ್ ಆಗಿ ಸ್ವೀಕರಿಸಿದ್ದಕ್ಕೆ ಥ್ಯಾಂಕ್ಯೂ...'.

ನನ್ನ ಸ್ವಾಭಿಮಾನಕ್ಕೆ ಬಡಿದಿತ್ತು ಹೊಡೆತ.ಅಂತೂ ಅವಳನ್ನು ಅನುನಯಿಸಿದ್ದೆ, ಕ್ಷಮೆ ಕೇಳಿದ್ದೆ. ಅವಳನ್ನು ಅಂದೇ ಮರೆತು ಬಿಡಬೇಕೆಂದು ನಾನಂದು ಕೊಂಡರೂ, ನನ್ನೊಳಗೆ ಗಟ್ಟಿಯಾಗಿ ಕುಳಿತಿದ್ದಳು ಯಾವುದೋ ಜನ್ಮದ ಒಡನಾಡಿಯಂತೆ. ಮತ್ತೆ ಮತ್ತೆ ಅವಳ ಸಾಮಿಪ್ಯಕ್ಕೆ ಮನ ಹಾತೊರೆದಿತ್ತು. ಆಕೆಯೋ ತಿರಸ್ಕರಿಸುತ್ತಾ ಬಂದಳು, ನನ್ನನ್ನೆ ಅವಾಯ್ಡ್ ಮಾಡತೊಡಗಿದಳು. ನನಗಂತೂ,ಈ ಮದುವೆ ಸಂಸಾರ ಒಂದು ಬೇಕಿರಲಿಲ್ಲ ಎಂದೆನಿಸುತ್ತಿತ್ತು. ನನ್ನ ಪತ್ನಿಯೊಂದಿಗೆ ಅದೇ ಆತ್ಮೀಯತೆ ಅವಳಿಗೆ ಮುಂದುವರಿದಿತ್ತು. ನನ್ನಲ್ಲಾದ ಬದಲಾವಣೆ ನೀರಸತೆ ನನ್ನವಳ ಸಂಶಯಕ್ಕೆ ಎಡೆಮಾಡ ತೊಡಗಿತ್ತು. ಒಂದು ಕ್ಷಣ ನನ್ನ ತಪ್ಪಿನ ಅರಿವಾಗ ತೊಡಗಿದರೂ, ಮರುಕ್ಷಣ ಅವಳೆದೇ ಗುಂಗು‌ ಮನದಲ್ಲಿ ಕೊರೆಯುತ್ತಿತ್ತು.

ಆ ಬಳಿಕ ಅವಳು ಅಪರೂಪಕೊಮ್ಮೆ ಎದುರಾಗುತ್ತಾಳೆ. ಪೌರ್ಣಿಮೆಯ ಚಂದಿರನಂತೆ.ಮೊಗದಲ್ಲಿ ನನ್ನ ಸೆಳೆದಿದ್ದ ಅದೇ ಗಾಂಭೀರ್ಯ ತುಟಿಯಲ್ಲಿ ಕಂಡೂಕಾಣದ ನಗು. ಜೊತೆಯಲ್ಲಿ ವಿಷಾದದ ಗೆರೆ. ಅದನ್ನು ನಾನು ಮಾತ್ರ ಗುರುತಿಸಬಲ್ಲೆನೇನೋ? ಕಂಗಳಲ್ಲಿ ಮೊದಲಿದ್ದ ಆತ್ಮವಿಶ್ವಾಸ ಇಲ್ಲ. ಎಲ್ಲೋ ಕಳೆದು ಬಿಟ್ಟಿದ್ದಾಳೆ ಅವಳು. ನನ್ನ ತಪ್ಪಿಗೆ ಎದೆಗಾನಿಸಿ ಸಂತೈಸ ಬೇಕೆಂಬಾಸೆ .ತುಟಿ ಬಿಗಿದು ಕುಳಿತಿದ್ದೇನೆ.ಅವಳ ನಿರಾಳತೆಗಾಗಿ.ಮತ್ತೆ ಮೂಡುವ ಅವಳ ನಗುವಿಗಾಗಿ, ಕಂಗಳ ಹೊಳಪಿಗಾಗಿ.... ಜೊತೆಯಲ್ಲಿ ಹುಡುಕಾಟದಲ್ಲಿ ಇದ್ದೇನೆ ಅವಳನ್ನರಿಯುವ ಜೊತೆಗಾರನಿಗಾಗಿ.... ಅವಳ ಸುಂದರ ಭವಿತವ್ಯಕ್ಕಾಗಿ....

ಯೋಚನೆಗೆ ವಿರಾಮ ಬಿದ್ದಂತೆ ಮಗಳು 'ಅಭಿ' ಯ ದನಿ ಎಚ್ಚೆತ್ತುಕೊಳ್ಳುವಂತೆ ಮಾಡಿತು.ಅಪ್ಪಾ ...
ಅಪ್ಪಾ...ಅನ್ನುತ್ತಾ ಗೇಟಿನ ಕಡೆ ಕೈ ತೋರಿದಾಗ ....ಅತ್ತ ಓಡಿದ್ದೆ. ರಕ್ತದ ಮಡುವಲ್ಲಿ ಅವಳು ಬಿದ್ದಿದ್ದಳು.ಓಡಿ ಹೋಗಿ ಎದೆಗಾನಿಸಿದ್ದೆ.ಉಸಿರು ನಿಧಾನವಾಗತೊಡಗಿತ್ತು‌.ಭಯದಿಂದ ಅವಳ ಮೊಗ ದಿಟ್ಟಿಸಿದ್ದೆ.ನಿಧಾನಕ್ಕೆ ಕಾದಂಬನಿಗಳು ಧರೆಯೆಡೆಗೆ ಬಾಗುತ್ತಿದ್ದವು.ಕೊನೆಯಲ್ಲೊಂದು ಹನಿ ಕಂಬನಿ‌ ಕಂಗಳಿಂದ ಜಾರಲೋ ಬೇಡವೋ ಎಂಬಂತೆ ನಿಂತಿತ್ತು.....ಒಮ್ಮೆ ಕ್ಷಮಿಸು ಬಿಡು ಹೆಣ್ಣೇ ಎಂದು ಮನಸು ಚೀರಿತ್ತು.



 ನಮಗರಿವಿಲ್ಲದೆ ನನ್ನ ಮಗಳು ರೋಡಿಗಿಳಿದಿದ್ದಳು.ನನ್ನದೇ ಯೋಚನೆಯಲ್ಲಿದ್ದ ನಾನೂ ಅವಳನ್ನು ಗಮನಿಸಲಿಲ್ಲ.ಅದೇ ವೇಳೆ ವೇಗವಾಗಿ ಬಂದ ಲಾರಿಯೊಂದು ಅವಳ ಮೇಲೆ ಹರಿದು ಹೋಗಲಿತ್ತು.ದೇವರಾಟವೋ ಎಂಬಂತೆ ಅದೇ ದಾರಿಯಲ್ಲಿ ಬರುತಿದ್ದ 'ಅವಳು' ಮಗಳನ್ನು ಅಪಘಾತದಿಂದ ಪಾರು ಮಾಡಿ ನಮ್ಮ ಮನೆ ಬೆಳಕನ್ನು ಉಳಿಸಿದ್ದಳು.ನಾನು ಮಾಡಿದ ತಪ್ಪಿಂದ ನಿರ್ಜೀವ ಬೊಂಬೆಯಂತಾದವಳು ಇಂದು ಶಾಶ್ವತವಾಗಿ ಈ ಲೋಕಕ್ಕೇ ವಿದಾಯ ಹೇಳಿದ್ದಳು.

✍🏻ಎ.ಆರ್.ಭಂಡಾರಿ ವಿಟ್ಲ.

No comments:

Post a Comment