ಧ್ಯಾನ-11
ಪರಸ್ಪರ ಅಗತ್ಯಗಳನ್ನು ಆಧರಿಸಿದ ಸಂಬಂಧ ಯಾವಾಗಲೂ ಘರ್ಷಣೆಯನ್ನೇ ತರುತ್ತದೆ. ನಾವು ಪರಸ್ಪರ ಎಷ್ಟೇ ಅವಲಂಬಿತರಾಗಿದ್ದರೂ ಒಬ್ಬರನ್ನೊಬ್ಬರು ಯಾವುದೋ ಉದ್ದೇಶಕ್ಕೆ, ಗುರಿಯ ಸಾಧನೆಗೆ ಬಳಸಿಕೊಳ್ಳುತ್ತಿರುತ್ತೇವೆ. ಹೀಗೆ ಬಳಸಿಕೊಳ್ಳುತ್ತಾ ನಮ್ಮ ನಡುವಿನ ಸಂಪರ್ಕ ಕಳೆದು ಹೋಗುತ್ತದೆ. ಪರಸ್ಪರ ಬಳಕೆ ಎಂಬ ತಳಹದಿಯ ಮೇಲೆ ನಿಂತ ಸಮಾಜದಲ್ಲಿ ಹಿಂಸೆ ಬೆಳೆಯುತ್ತದೆ. ನಾವು ಒಬ್ಬರನ್ನೊಬ್ಬರು ಬಳಸಿಕೊಳ್ಳುವಾಗ ನಮಗೆ ಯಾವುದೋ ಗುರಿ ಇರುತ್ತದೆ. ಆ ಗುರಿ ಮಾತ್ರ ಮುಖ್ಯವಾಗುತ್ತದೆ. ಆ ಗುರಿ, ಆ ಲಾಭದ ಕಾರಣದಿಂದಲೇ ನಿಜವಾದ ಸಂಬಂಧ, ಸಂಪರ್ಕ ಸಾಧ್ಯವಾಗುವುದಿಲ್ಲ. ಪರಸ್ಪರ ಬಳಸಿಕೊಳ್ಳುವಾಗ ಎಷ್ಟೇ ಸಮಾಧಾನ, ತೃಪ್ತಿ ಸಿಗುತ್ತದೆ ಎನ್ನಿಸಿದರೂ ಭಯ ಇದ್ದೇ ಇರುತ್ತದೆ. ಈ ಭಯದಿಂದ ತಪ್ಪಿಸಿಕೊಳ್ಳುವುದಕ್ಕೆ ಸ್ವಾಧೀನತೆಯ ಆಸೆ ಬೆಳೆಯುತ್ತದೆ. ಸ್ವಾಧೀನತೆಯ ಆಸೆಯಿಂದ ಅಸೂಯೆ, ಅನುಮಾನ, ನಿರಂತರ ಸಂಘರ್ಷಗಳು ಹುಟ್ಟುತ್ತವೆ. ಇಂಥ ಸಂಬಂಧದಿಂದ ಸುಖ ದೊರೆಯುವುದಿಲ್ಲ.
ದೈಹಿಕ ಅಥವಾ ಮಾನಸಿಕ ಅಗತ್ಯಗಳನ್ನಷ್ಟೇ ಆಧರಿಸಿ ರಚನೆಗೊಂಡಿರುವ ಸಮಾಜ ವ್ಯವಸ್ಥೆಯಲ್ಲಿ ಸಂಘರ್ಷ, ಗೊಂದಲ, ವೇದನೆಗಳು ಇದ್ದೇ ಇರುತ್ತವೆ. ನೀವು ಇರುವ ಸಮಾಜ ನಿಮ್ಮದೇ ಪ್ರತಿಬಿಂಬ. ನಿಮ್ಮೊಳಗೆ ಇರುವ ಅಗತ್ಯ ಮತ್ತು ಬಳಕೆಯ ಉದ್ದೇಶಗಳೇ ಸಮಾಜದಲ್ಲೂ ಪ್ರತಿಬಿಂಬಗೊಳ್ಳುತ್ತವೆ. ದೈಹಿಕ ಅಥವಾ ಮಾನಸಿಕ ಅಗತ್ಯಕ್ಕಾಗಿ ನೀವು ಮತ್ತೊಬ್ಬರನ್ನು ಬಳಸಿಕೊಳ್ಳುತ್ತಿರುವಾಗ ನಿಜವಾದ ಸಂಬಂಧ ಇರುವುದೇ ಇಲ್ಲ, ಸಂಪರ್ಕ ಇರುವದೇ ಇಲ್ಲ. ಆದ್ದರಿಂದಲೇ ದಿನನಿತ್ಯದ ಬದುಕಿನಲ್ಲಿ ಸಂಬಂಧದ ಮಹತ್ವವನ್ನು ಅರಿಯುವುದು ಮುಖ್ಯ.
ನಾವು ಅವಲಂಬನೆಯ ಅಗತ್ಯವನ್ನು ಒಪ್ಪಿಕೊಳ್ಳುತ್ತೇವೆ, ಅವಲಂಬನೆ ಅನಿವಾರ್ಯವೆನ್ನುತ್ತೇವೆ. ಆದರೆ ನಮಗೆ ಅವಲಂಬನೆ ಯಾಕೆ ಬೇಕು ಏನ್ನುವ ಪ್ರಶ್ನೆ ಕೇಳಿಕೊಳ್ಳುವುದೇ ಇಲ್ಲ. ನಮ್ಮ ಆಳದಲ್ಲಿರುವ ರಕ್ಷಣೆಯ ಬಯಕೆ, ಶಾಶ್ವತವಾಗಿರುವ ಆಸೆ, ಇವೇ ಅವಲಂಬನೆಗೆ ಕಾರಣವಾಗಿಲ್ಲವೇ? ನಮ್ಮಲ್ಲಿ ಗೊಂದಲವಿದ್ದಾಗ ಯಾರಾದರೂ ನಮ್ಮನ್ನು ಆ ಗೊಂದಲದಿಂದ ಪಾರುಮಾಡಬೇಕೆಂದು ಬಯಸುತ್ತೇವೆ, ಅಂದರೆ, ನಮ್ಮಲ್ಲಿ ಯಾವಾಗಲೂ ನಾವು ಈಗ ಇರುವ ಸ್ಥಿತಿಯಿಂದ ಪಾರಾಗಬೇಕೆಂಬ, ತಪ್ಪಿಸಿ
ಅವಲಂಬನೆಯ ಕಾರಣದಿಂದಲೇ ಔದಾಸೀನ್ಯ ಮತ್ತು ವ್ಯಾಮೋಹಗಳ ಚಲನೆ ಆರಂಭಗೊಳ್ಳುತ್ತದೆ. ಅರ್ಥವಾಗದ ಸಂಘರ್ಷ ನಿರಂತರವಾಗಿ ನಡೆಯುತ್ತಿರುತ್ತದೆ. ವ್ಯಾಮೋಹ ಮತ್ತು ಅವಲಂಬನೆಗಳ ಬಗ್ಗೆ ನೀವು ಎಚ್ಚರದ ಅರಿವನ್ನು ಮೂಡಿಸಿಕೊಳ್ಳಬೇಕು. ತಿರಸ್ಕಾರವಿಲ್ಲದೆ, ತೀರ್ಮಾನವಿಲ್ಲದೆ ಕೇವಲ ಎಚ್ಚರವಾಗಿದ್ದಾಗ ಮಾತ್ರ ವೈರುಧ್ಯಗಳ ಸಂಘರ್ಷದ ಮಹತ್ವ ನಿಮಗೆ ತಿಳಿಯುತ್ತದೆ.....
ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
✍: ವೆಂಕಟೇಶ ಭಂಡಾರಿ ಕುಂದಾಪುರ.
No comments:
Post a Comment