BhandaryVarthe Team

BhandaryVarthe Team
Bhandary Varthe Team

Friday 29 October 2021

ಅಂತರಾಳ - ಭಾಗ 5

 

ಇಲ್ಲಿಯವರೆಗೆ.....
ಶಮಿಕಳಿಗೆ ತನ್ನ ತಂದೆ ಯಾರೆಂದು ತಿಳಿಯಲು ತಾಯಿ ಭವಾನಿಯ ಡೈರಿ ಓದುತ್ತಾಳೆ. ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಕೊಂಡಿರುತ್ತಾರೆ.ಮಾವನ ಮನೆಯಲ್ಲಿ ಭವಾನಿ ಮತ್ತು ಅವಳ ತಾಯಿ ಇದ್ದು ಅಲ್ಲೇ ಹೈಸ್ಕೂಲ್ ವಿದ್ಯಾಬ್ಯಾಸ ಮುಗಿಸಿ ಉಡುಪಿಗೆ ಬಂದು ಕಾಲೇಜು ಮುಗಿಸಿ ಅಲ್ಲೇ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಹೀಗಿರುವಾಗ ಒಂದು ದಿನ ಕೆಲಸದಿಂದ ಬರುವಾಗ ಅವಳ ಮೇಲೆ ಅತ್ಯಾಚಾರ ನಡೆಯುತ್ತದೆ.ಇದರಿಂದ ಅವಳಿಗೆ ದಿಕ್ಕೇ ತೋಚದಂತಾಗುತ್ತದೆ... ಅವಳು ಸಾಯುವ ನಿರ್ಧಾರ ಮಾಡುತ್ತಾಳೆ..... ಸಾಯುವ ತೀರ್ಮಾನಕ್ಕೆ ಬಂದವಳು ಮನಸ್ಸು ಬದಲಿಸಿ ಕೆಲಸಕ್ಕೆ ಹೋಗುತ್ತಾಳೆ ಆದರೆ ಮಾಸಿಕ ಸ್ರಾವ ಆಗದೆ ಇರುವುದನ್ನು ನೋಡಿ ದುರುಳರ ಕಾಮದ ಕುರುಹು ಉಳಿದಿರುವುದು ಖಚಿತವಾಗುತ್ತದೆ. ಮತ್ತೆ ಗ್ರಂಥಾಲಯದ ಒಳಗಡೆ ಆತ್ಮಹತ್ಯೆಗೆ ಯತ್ನಿಸುತ್ತಿರುವಾಗ ಶಂಕರಮೂರ್ತಿ ಎನ್ನುವ ವ್ಯಕ್ತಿ ತಡೆಯುತ್ತಾರೆ.ಭವಾನಿಯಿಂದ ವಿಷಯವೆನ್ನೆಲ್ಲ ತಿಳಿದುಕೊಂಡ ಶಂಕರಮೂರ್ತಿ ಅವಳನ್ನು ಮದುವೆಯಾಗುತ್ತಾರೆ. ಇತ್ತ ಭವಾನಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಅಮ್ಮನನ್ನು ಊರಿನಿಂದ ಕರೆದುಕೊಂಡು ಬರುವುದೆಂದು ತೀರ್ಮಾನಿಸುತ್ತಾಳೆ. ಮಾವನಿಗೆ ಮದುವೆ ಆಗಿರುವ ಬಗ್ಗೆ ಪತ್ರ ಬರೆಯುತ್ತಾಳೆ.

 

ಅಂತರಾಳ - ಭಾಗ 5

ಒಂದು ವಾರದ ನಂತರ ಶಂಕರ್ ರವರು  ನನ್ನನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ನಮ್ಮ ಊರಿನ ಹೆಂಗಸೊಬ್ಬರು ಇದ್ದರು.............
ನಾನೇ ಅವರ ಬಳಿಗೆ ಹೋಗಿ ಹೇಗಿದ್ದೀರಿ?.ನನ್ನ ಮಾವನ ಮನೆಗೆ ಹೋಗಿದ್ದೀರಾ? ನನ್ನ ಅಮ್ಮ ಹೇಗಿದ್ದಾರೆ? ಎಂದು ಕೇಳಿದೆ. ಆಗ ಅವರು ನಿನಗೆ ವಿಷಯ ಗೊತ್ತಿಲ್ಲವಾ? ನಿನ್ನ ಅಮ್ಮ ನಿನ್ನ ಮದುವೆ ಪತ್ರ ನೋಡಿ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಅವರು ಸತ್ತು ನಾಲ್ಕು ದಿನ ಕಳೆಯಿತು. ನಿನಗೆ ತಿಳಿಸಿಲ್ಲವೇ? ............ಎಂದಾಗ ನಾನು ವಿಷಯ ತಿಳಿದು ಕುಸಿದು ಬಿದ್ದೆ. ಅಮ್ಮನನ್ನು ನೆನೆದು ಜೀವವನ್ನು ಯಾರೋ ಕಿತ್ತುಕೊಂಡ ಹಾಗಾಗುತ್ತಿತ್ತು. ಅಮ್ಮ ಯಾಕೆ ಹೀಗೆ ಮಾಡಿದೆ! .........ಇಲ್ಲಾ ಮಾವ ಏನಾದರೂ ಕೊಂದು ಬಾವಿಗೆ ಹಾಕಿದ್ದಾರಾ? ..........ಎಂಬ ಸಂಶಯ ಕೂಡ ಬಂತು.........

ಆದರೆ ಆಗ ನನಗೆ ಏನೂ ಮಾಡಲು ತೋಚಲಿಲ್ಲ. ಅಮ್ಮನಿಲ್ಲದ ಊರಿಗೆ ಹೋಗಿ ಏನು ಮಾಡಲಿ ಎಂದು ಊರಿಗೂ ಹೋಗಲಿಲ್ಲ. ನಾನು ಈಗ ಈ ಮನೆಗೆ ಬಂದು 5 ತಿಂಗಳೇ ಕಳೆಯಿತು. ನನ್ನ ಹೊಟ್ಟೆಗೆ 7 ತಿಂಗಳು ತುಂಬಿತು. ಶಂಕರ್ ಮೊದಲೇ ಹೇಳಿದಂತೆ ವಾರದಲ್ಲಿ ಎರಡು ದಿನ ಮಾತ್ರ ನನ್ನ ಜೊತೆ ಇದ್ದು ಉಳಿದ ದಿನ ಅವರ ಮನೆಗೆ ಹೋಗುತ್ತಿದ್ದರು. ಒಂದು ದಿನ ಅವರ ಮನೆಗೂ ಕರೆದುಕೊಂಡು ಹೋದರು. ಮೊದಲೇ ಹೇಳಿದಂತೆ ಶಂಕರ್ ನ್ ಆಫೀಸ್ ನಲ್ಲಿ ಕೆಲಸ ಮಾಡುವುದು ಎಂದು ಅವರ ಅಮ್ಮನಲ್ಲಿ ಹೇಳಿದೆ. ಅವರ ಅಮ್ಮ ನನ್ನನ್ನು ತುಂಬಾ ಉಪಚರಿಸಿದರು. ತಪ್ಪಿಯೂ ಶಂಕರ್ ಮದುವೆ ಆದ ಬಗ್ಗೆ ಹೇಳಲಿಲ್ಲ. ಅವರ ಮನೆಯಿಂದ ಶಂಕರ್ ನಿತ್ಯವೂ ತರಕಾರಿ, ಸಾಂಬಾರ್ ಹುಡಿ, ತಿಂಡಿ ತರುತ್ತಿದ್ದರು. ನಾನು ಶಂಕರ್ ನ ಅಮ್ಮನ ಪರಿಚಯದ ಬಳಿಕ ನಾನೂ ಅವರು ಪತ್ರದ ಮೂಲಕ ವಿಚಾರ ವಿನಿಮಯ ಮಾಡುತ್ತಿದ್ದೆವು. ಶಂಕರ್ ತಮಾಷೆಗೆ ಹೇಳುತ್ತಿದ್ದರು.
"ಮನೆಯಲ್ಲಿ ಅಮ್ಮನಿಗೆ ನಿಮ್ಮದೇ ಸುದ್ದಿ ನನ್ನ ಬಗ್ಗೆ ಕೇಳುವವರೇ ಇಲ್ಲ" ಎಂದು.ಹೀಗೆ ದಿನಗಳು ಕಳೆದು 9 ತಿಂಗಳು ಆಗಿ 2 ದಿನ ಆದಾಗ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದೆ. 2 ವಾರ ಶಂಕರ್ ನನ್ನ ಜೊತೆಯಲ್ಲೇ ಇದ್ದು ಮಗುವಿನ ಬಟ್ಟೆ ನನ್ನ ಬಟ್ಟೆ, ಸ್ನಾನ , ಊಟ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. 2 ವಾರದ ನಂತರ ಅವರ ಮನೆಗೆ ಹೋಗಲು ಪ್ರಾರಂಭಿಸಿದರು. ಈಗಂತೂ ನನಗೆ ಮಗುವಿನ ಜೊತೆಯೇ ಸಮಯ ಕಳೆಯುತ್ತಿತ್ತು. ಮಗುವಿಗೆ ಈಗ 3 ತಿಂಗಳು ತುಂಬಿತು. ಶಂಕರ್ ಮಗುವಿಗೆ "ಶಮಿಕಾ " ಎಂದು ಹೆಸರಿಟ್ಟು ಹಾಗೆಯೇ ಕರೆಯುತ್ತಿದ್ದರು. " ನಮ್ಮ ಮನೆಯಲ್ಲಿ ಅಕ್ಕಂದಿರು, ತಂಗಿ, ಅಣ್ಣ ಎಲ್ಲಾ ಬಂದಿದ್ದಾರೆ.ನಾನೂ ಸ್ವಲ್ಪ ದಿನ ಕೆಲಸಕ್ಕೆ ರಜೆ ಹಾಕಿದ್ದೇನೆ. ಇಲ್ಲಿಗೂ ಬರುವುದಿಲ್ಲ. ಮಗು ನೀವು ಜಾಗ್ರತೆ" ಎಂದು ಎಲ್ಲಾ ಸಾಮಾನು ತೆಗೆದುಕೊಟ್ಟು ನನಗೆ ದುಡ್ಡು ಕೊಟ್ಟು ಹೋದವರು ಒಂದು ತಿಂಗಳು ಬರಲಿಲ್ಲ. ನನಗಂತೂ ಶಂಕರನನ್ನು ತುಂಬಾನೇ ಎನಿಸುತ್ತಿತ್ತು.ಮಗು ಶಮಿಕಾ ಕೂಡ ಯಾರೂ ಇಲ್ಲದೆ ದಿನವಿಡೀ ಅಳುತ್ತಿದ್ದಳು. ನನಗೆ ದಿಕ್ಕೇ ತೋಚುತ್ತಿರಲಿಲ್ಲ.
ಒಂದು ತಿಂಗಳ ಬಳಿಕ ಶಂಕರ್ ಬಂದರು ಮೊದಲಿನ ಉತ್ಸಾಹ ಮಾತ್ರ ಅವರಲ್ಲಿ ಇರಲಿಲ್ಲ. ಮನೆ,ಮಗುವಿಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ತರುತ್ತಿದ್ದರು.
ಸ್ವಲ್ಪ ದಿನಗಳು ಕಳೆದು ಅವರ ಅಮ್ಮನ ಪತ್ರ ಬಂದಾಗ ಅದರಲ್ಲಿ ಶಂಕರ್ ಗೆ ಹೆಣ್ಣು ನೋಡಿದ್ದೇವೆ. ಹೆಸರು ರಾಜೇಶ್ವರಿ. ಅವಳು ಹೈಸ್ಕೂಲ್ ಟೀಚರ್ ಎಂದು ಬರೆದಿದ್ದರು. ಅದನ್ನು ಓದಿ ತುಂಬಾನೇ ದುಃಖವಾಯಿತು.......ನನ್ನ ಶಮಿಕಾಳ ಜೀವನದ ಗತಿ ಏನು ಎಂದು ನೆನೆದು ಚಿಂತೆ ಶುರುವಾಯಿತು . ಅವರಲ್ಲಿ ಕೇಳಲು ಭಯವಾಗುತ್ತಿತ್ತು......ನಾನು ಅತ್ತಾಗ ಮಾತ್ರ " ನಾನು ಒಂದು ಹೊತ್ತು ಊಟ ಮಾಡಿದರೆ ನಿಮಗೂ ನಿಮ್ಮ ಮಗುವಿಗೂ ನೀಡುತ್ತೇನೆ ಭಯ ಬೇಡ" ಎನ್ನುತ್ತಿದ್ದರು. ಮನೆಗೆ ಮಾತ್ರ ಮೊದಲಿನ ಹಾಗೆ ಸಾಮಾನು ಹಣ್ಣು ಎಲ್ಲವನ್ನೂ ತರುತ್ತಿದ್ದರು. ಮಗು ಶಮಿಕಾಳಿಗೆ ಈಗ 6 ತಿಂಗಳು ಆಗಿತ್ತು. ಮುಖ ನೋಡಿ ನಗುತ್ತಿದ್ದಳು. ಪರಿಚಯ ಆಗುತ್ತಿತ್ತು. ಶಂಕರ್ ನ ಅಮ್ಮನಿಂದ ಮದುವೆ ಆಮಂತ್ರಣ ಬಂತು. ಓದಿ ಅಳುವೇ ಬಂತು. ಶಂಕರ್ ನನ್ನು ನಾನು ತುಂಬಾ ಪ್ರೀತಿಸುತ್ತಿದ್ದೆ. ಆದರೆ ಅದನ್ನು ತೋರ್ಪಡಿಸಲು ಭಯವಾಗುತ್ತಿತ್ತು. ಅವರನ್ನು ಅಪ್ಪಿಕೊಳ್ಳಬೇಕು. ಅವರ ಮಡಿಲಲ್ಲಿ ಮಲಗಬೇಕು ಎಂದು ಕನಸು ಕಾಣುತ್ತಿದ್ದೆ........ಇಷ್ಟು ದಿನ ನಾವಿಬ್ಬರೂ ಜೊತೆಯಲ್ಲಿಯೇ ಇದ್ದರೂ ಮೈ ಮುಟ್ಟಿದವರಲ್ಲ.......ಸಲುಗೆಯಿಂದ ಮಾತನಾಡಿಯೂ ಇರಲಿಲ್ಲ. ನನಗೆ ಮಾತ್ರ ಅವರ ಸಂಯಮ, ತಾಳ್ಮೆ, ಹೆಣ್ಣಿನ ಬಗ್ಗೆ ಇರುವ ಗೌರವ,ಯಾವ ತೊಂದರೆಗೂ ಕೋಪ ಮಾಡಿಕೊಳ್ಳದೆ ಮಂದಸ್ಮಿತವಾಗಿಯೇ ಪರಿಹರಿಸುವ ಗುಣ ನೋಡಿ ಮನಸ್ಸಿನಲೇ ಪ್ರೀತಿ ಮಾಡುತಿದ್ದೆ...... ಆದರೆ ನಾನು ಇದನ್ನು ಹೇಳುವ ಸ್ಥಿತಿಯಲ್ಲಿ ಇರಲಿಲ್ಲ .....
ನಾನು ಸಾಯುವುದೇ ಎಂಬ ಗಳಿಗೆಯಲ್ಲಿ ಅದನು ನಿಲ್ಲಿಸಿ,ಯಾರೋ ಪಾಪಿಗಳು ಮಾಡಿದ ಅನ್ಯಾಯದ ಫಲವನ್ನು ತಾನು ದುಡಿದು ಸಾಕಿ ನನ್ನನ್ನು ಮುತ್ತೈದೆ ಎಂಬ ಹೆಸರಿನಿಂದ ಕರೆಯುವ ಭಾಗ್ಯ ನೀಡಿದ ಇಂತಹ ಕರುಣಾಮಯಿಯಲ್ಲಿ ನಾನು ಪ್ರೀತಿಸುತೇನೆ ಎಂದು ಹೇಳಲು ಧೈರ್ಯವೇ ಇರಲಿಲ್ಲ. ಅವರೇ ನನ್ನನು ಪ್ರೀತಿಸಲಿ ಎಂದು ಮನದಲ್ಲೇ ಅಂದುಕೊಳ್ಳುತ್ತಾ ದಿನ ದೂಡುತ್ತಿದೆ......ಆದರೆ ಈಗ ಶಂಕರ್ ನ ಮದುವೆ ಆಮಂತ್ರಣ ನೋಡಿದ ಮೇಲೆ ಪ್ರತಿ ಕ್ಷಣ ಮಗುವಿನ ಮತ್ತು ನನ್ನ ಜೀವನದ ಗತಿ ಏನು ಎಂದು ನಿಂತಲ್ಲಿ ನಿಲ್ಲಲು ಆಗದೆ ಮಲಗಿದರೆ ನಿದ್ದೆ ಕೂಡ ಬರುತ್ತಿರಲಿಲ್ಲ .......... ಮದುವೆಯ ಆಮಂತ್ರಣ ಪತ್ರಿಕೆ ಬಂದ ಬಗ್ಗೆ ಹೇಳಿದಾಗ ನಿಮಗೇ ಇಷ್ಟವಿದ್ದರೆ ನೀವು ಮಗು ಮದುವೆಗೆ ಬನ್ನಿ ಎಂದಷ್ಟೇ ಹೇಳಿದರು. ಮದುವೆಗೆ ಒಂದು ವಾರ ಇರುವಾಗ ನಾನು ಮದುವೆ ಆದ ಮೇಲೆ ಬರುತ್ತೇನೆ. ಮನೆಯಲ್ಲಿ ತುಂಬಾ ಕೆಲಸ ಇದೆ. ಎಂದು ಸಾಮಾನು ತಂದು ಕೊಟ್ಟು ಸ್ವಲ್ಪ ಹಣ ನೀಡಿ ಹೋದರು.
ಮದುವೆಗೆ ಹೋಗಬೇಕೆ? .......ಬೇಡವೇ...... ಎಂಬ ಗೊಂದಲದಲ್ಲಿ, ದುಃಖದಲ್ಲಿ ಮದುವೆಗೆ ನಾನು ಶಮಿಕಾ ಹೋಗಲಿಲ್ಲ. ಮದುವೆ ಆಗಿ 1 ತಿಂಗಳು ಬರಲಿಲ್ಲ. ತುಂಬಾ ಜಾಗರೂಕತೆಯಿಂದ ದುಡ್ಡು ಉಪಯೋಗಿಸಿದೆ. ಎನೂ ಮಾಡಬೇಕು ಎಂದು ದಿಕ್ಕೇ ತೋಚಲಿಲ್ಲ..‌..... ಎಲ್ಲಿಯಾದರೂ ಕೆಲಸಕ್ಕೆ ಸೇರಿಕೊಂಡರೆ ಹೇಗೆ ಎಂದು ಯೋಚನೆ ಮಾಡಿದೆ.ಆದರೆ ಮಗುವನ್ನು ಎಲ್ಲಿ ಬಿಡುವುದು ಯಾರೂ ನೋಡಿಕೊಳ್ಳುತ್ತಾರೆ ಎಂದು ಹಗಲು ರಾತ್ರಿ ಯೋಚಿಸಿ ಚಿಂತಿಸುತ್ತಿದೆ.... ಒಂದು ತಿಂಗಳು ಕಳೆದು ಶಂಕರ್ ಬಂದರು......
ಬಂದಾಗ ತುಂಬಾನೇ ಮೌನಿಯಾಗಿದ್ದರು........ಯಾವಾಗಲೂ ಬಂದಾಗ ಮಗುವಿನಲ್ಲಿ ಮಾತನಾಡುತ್ತಿದ್ದರು..ಆದರೆ ಈ ಸಲ ಮಗುವಿನ ಜೊತೆ ಕೂಡ ಹೆಚ್ಚು ಮಾತನಾಡಲಿಲ್ಲ. ಬರುವಾಗಲೇ ಮನೆಗೆ ಬೇಕಾದ ಸಾಮಾನುಗಳನ್ನು ತಂದಿದ್ದರು.. ಹೆಚ್ಚು ನಿಲ್ಲದೆ ಸ್ವಲ್ಪ ದುಡ್ಡು ನೀಡಿ ಹೋದರು. ನನಗಂತೂ ಈ ಪ್ರಪಂಚದಲ್ಲಿ ಯಾರೂ ಇಲ್ಲದ ಅನಾಥ ಭಾವವೊಂದು ಹಾದು ಹೋಗುತ್ತಿತ್ತು. ಮಗುವನ್ನು ಅಪ್ಪಿಕೊಂಡು ಅಳುತ್ತಿದ್ದೆ. ನೆರೆಹೊರೆಯವರಲ್ಲೂ ನಾನು ಮಾತನಾಡಲು ಹೋಗುತ್ತಿರಲಿಲ್ಲ.... ಮಾತನಾಡಲು ಆಸಕ್ತಿ ಇತ್ತು..ಆದರೆ ನನ್ನ ಈ ನರಕದ ಜೀವನ ಎಲ್ಲಿ ತಿಳಿಯುತ್ತದೋ ಎಂಬ ಭಯದಿಂದಲೇ ಯಾರಲ್ಲೂ ಮಾತನಾಡುತ್ತಿರಲಿಲ್ಲ ..............ಬದುಕೆ ಶೂನ್ಯವಾಗಿತ್ತು.........
ನಾನು ನನ್ನ ಅಮ್ಮನನ್ನು ಜೊತೆಗೆ ಕರೆತಂದು ಜೀವನ ಸುಗಮವಾಗಿ ಸಾಗುತ್ತದೆ ಎಂದು ಕನಸು ಕಾಣುತ್ತಿರುವ ವಾಗಲೇ ಆ ದುಷ್ಟರಿಂದ ನನ್ನ ಜೀವನದ ಗತಿಯೇ ಬೇರೆಯಾಗಿ ಹೋಯಿತಲ್ಲ...... ಅಮ್ಮ ನ ಜೊತೆ ಮಗುವಾಗಿ ಇರಬೇಕು ಅಂದುಕೊಳ್ಳುತ್ತಿದ್ದೆ...‌‌.....
ಆದರೆ ನನಗೆ ತಿಳಿಯದೇ ನನ್ನ ಮಡಿಲಲ್ಲಿ ಮಗು ಆಗಿದೆ.
ಹೀಗೆಯೇ ಯೋಚನೆಗಳು ಕಿರಿ ಕಿರಿ ಮಾಡುತ್ತಿತ್ತು.
ಎರಡು ದಿನಗಳು ಕಳೆದ ಮೇಲೆ ಮನೆ ಮಾಲೀಕರು ಬಂದು ಇನ್ನು 1 ತಿಂಗಳು ಬಾಡಿಗೆ ನೀಡಿದ್ದಾರೆ. ಬರುವ ತಿಂಗಳು ಮನೆ ಖಾಲಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಬೇರೆ ಯಾರಾದರೂ ಬಾಡಿಗೆಗೆ ಇದ್ದರೆ ಹೇಳಲಿ ಶಂಕರಮೂರ್ತಿಯವರಲ್ಲಿ ಹೇಳಿ ಎಂದರು.
ನನಗೆ ದಿಕ್ಕೇ ತೋಚಲಿಲ್ಲ.

 (ಮುಂದುವರಿಯುವುದು)

ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ



Wednesday 27 October 2021

ತುಳು ತಪ್ಪು ತುಲು- ಐ.ಜಿ.ಭಂಡಾರಿ ,ಕಾರ್ಕಳ

 "ಎನ್ನ ಕೊಡಿ ನಾಲಾಯಿದ ಮದಿಪು " ಅತ್ತೆ ಅಸ್ರನ್ನೆರೆ?(ನನ್ನ ತುದಿ ನಾಲಿಗೆಯ ಮಾತು.ಅಲ್ಲವೇ ಅಸ್ರನ್ನರವರೇ).ಎನ್ನುತ್ತವೆ ತುಲುನಾಡ್ ಬೂತೊಗಳು(ದೈವಗಳು).ಬೂತ ಕೋಲದಲ್ಲಿ ಬೂತ ತನ್ನ ನಾಲಿಗೆ ತುದಿಯನ್ನು ಮುಟ್ಟಿ ಈ ರೀತಿ ಹೇಳುತ್ತದೆ.ಅಂದರೆ ನಾಲಗೆಯನ್ನು ಅಡ್ಡ ಹಾಕಿ ಇಲ್ಲವೇ ಮಡಚಿ ಮಾತಾಡುವ ಭಾಷೆ ನನ್ನದಲ್ಲ. ನನ್ನ ಭಾಷೆ ತುದಿ ನಾಲಿಗೆಯಲ್ಲಿ ಮಾತಾಡುವ ಭಾಷೆ ಎನ್ನುತ್ತದೆ.

 

ಅಂದರೆ ನನ್ನ ಭಾಷೆ "ತುಲು".ತುಳು ಅಲ್ಲ ಎನ್ನುತ್ತದೆ.ಇದು ಆದಿ ಆರಂಭದ ನಾಗ ಕೋಲದಿಂದ ಹೇಳುತ್ತಾ ಬಂದ ದೈವಗಳ ಸತ್ಯ ನುಡಿಗಳು. ಮತ್ತೇಗೆ 'ತುಲು' ಪದ 'ತುಳು' ಎಂದಾಯಿತು? 'ತುಳು' ಎಂಬುದು ತಪ್ಪಲ್ಲವೇ?    ಇಲ್ಲಿ "ಮದಿಪು" ಎಂದರೆ ಬೂತದ ಮಾತು.ಭಕ್ತರ ಪ್ರಾರ್ಥನೆಗೆ ಬೂತೊ ತನ್ನ ತುದಿ ನಾಲಿಗೆಯಲ್ಲಿ ಮಾತಾಡುವ ಭಾಷೆ ತುಲುವಿನಲ್ಲಿ ಅಭಯದ ಮಾತುಗಳನ್ನು ನುಡಿಯುತ್ತದೆ.
       ಭಾರತಾದ್ಯಂತ ಸಂಸ್ಕೃತ ಭಾಷೆಯ 'ಳ' ಎಂಬ ಅಕ್ಷರವನ್ನು ಇತರ ಎಲ್ಲಾ ಭಾಷೆಗಳ ಅಕ್ಷರ ಮಾಲೆಯ ಕೊನೆಯಲ್ಲಿ ಸೇರಿಸಲಾಗಿದೆ. ಇದರಿಂದಾಗಿ ತಮಿಲು-ತಮಿಳು, ಮಲಯಾಲಂ-ಮಲಯಾಳಂ(ಮಲಯ+ಅಲೆ. ಅಂದರೆ ಮಲೆಯಲ್ಲಿ ವಾಸ ಮಾಡುತ್ತಿದ್ದವರು) ಆಗಿದೆ.
ಮಲಯಾಲಂ ಪದದ ಮಲಯ ಎಂಬುದು ಮಳಯ ಎಂದಾಗಿಲ್ಲ.ಅದೇ ರೀತಿ ತೆಲುಗು ಪದವು ತೆಳುಗು ಎಂದಾಗಿಲ್ಲ. ಇದರ ಎರಡನೆಯ ಅಕ್ಷರ 'ಲು' ಎಂಬುದು 'ಳು'ಎಂದಾಗಿಲ್ಲ. ತುಲು ಭಾಷೆಯ ಎರಡನೆಯ ಅಕ್ಷರ 'ಲು' ಎಂಬುದು 'ಳು' ಆಗಿದೆ. ಇದು ತಪ್ಪಲ್ಲವೇ? ತುಳು ತಪ್ಪು. ತುಲುವೇ ಸರಿ ಎಂದು ಅಂದು ಮನಷ್ಯರಾಗಿ ಹುಟ್ಟಿ ತುಲುನಾಡಿಗೆ ಶ್ರಮಿಸಿದ ಆ ಬೂತೊಗಳೇ ಹೇಳುತ್ತಾ ಬಂದಿದ್ದಾರೆ. ತುಲುವೇ ಸತ್ಯ.
ತುಲುವೇ ಸರಿ.
      'ತುಳು' ಎನ್ನುವಾಗ ನಾಲಿಗೆಯನ್ನು ಅಡ್ಡ ಇಲ್ಲವೇ ಮಡಚಿ ಉಚ್ಛಾರ ಮಾಡಬೇಕು. ಆದರೆ 'ತುಲು' ಎನ್ನಲು ಬಲು ಸುಲಭ.


"ತುಲು"ಎಂಬ ಪದವು 'ತಲ'(ಕೆಳಗಿನ)ಎಂಬ ಪದದಿಂದ ಹುಟ್ಟಿದೆ. ಗಟ್ಟದ ಮೇಲಿನವರು ತಲ ಪ್ರದೇಶವನ್ನು 'ತಲನಾಡ್' ಎಂದಿದ್ದಾರೆ. ಕ್ರಮೇಣ 'ತುಲುನಾಡ್' ಆಯಿತು. ತಲನಾಡ್ ನವರು ಮೇಲಿನ
ಪ್ರದೇಶವನ್ನು'ಮಲೆನಾಡ್'(ನಂತರ ಗಟ್ಟ-ಗಾಟ್ಸ್)ಎಂದರು.ತುಲುನಾಡ್ ರಾಜ ಪಾಂಡಿಯನನ್ನು
ಮೇಲಿನವರು ಬೂತಾಲ(ಅವರಿಗೆ ಭೂಮಿಯ ತಲದ ನಾಡು)ಪಾಂಡ್ಯ ಎಂದು ಕರೆದಿದ್ದಾರೆ.
       ದ್ರಾವಿಡ ಭಾಷೆಗಳಲ್ಲಿ ತುಲು ಭಾಷೆಯೇ ಬಲು ಪ್ರಾಚೀನವಾದುದು.ತಮಿಲ್ ಭಾಷೆಯು ತುಲು ಭಾಷೆಯಿಂದ ಹುಟ್ಟಿದೆ . ತಮಿಲು ಭಾಷೆಯಲ್ಲಿ ಮಹಾಪ್ರಾಣ ಅಕ್ಷಗಳು ಇಲ್ಲ.ತುಲು ಭಾಷೆ ಮಾತಾಡಲು ಮಹಾಪ್ರಾಣದ ಅಗತ್ಯವಿಲ್ಲ.ತುಲು ಭಾಷೆಯಿಂದ ತಮಿಲ್ ಹುಟ್ಟಿದೆ ಎನ್ನುವರು ತಮಿಲು ಸಂಶೋಧಕರು. ತಮಿಲು ಭಾಷೆಯಲ್ಲಿ 13 ಸ್ವರಾಕ್ಷರಗಳು ಇದ್ದರೆ ವ್ಯಂಜನಾಕ್ಷರಗಳು
ಬರೇ 23 ಇದೆ.ಒಟ್ಟು 36 ಅಕ್ಷರಗಳಲ್ಲಿ ತಮಿಲು ಭಾಷೆ ಇದ್ದರೆ ಮಲಯಾಲಂ ಭಾಷೆಯಲ್ಲಿ ಒಟ್ಟು 52 ಅಕ್ಷರಗಳಿವೆ. ಬರೇ 32 ಅಕ್ಷರಗಳಲ್ಲಿ ತುಲು ಭಾಷೆಯನ್ನು ಬರೆಯ ಬಹುದು ಮತ್ತು ಓದಬಹುದು. ಆದಿ ಆರಂಭದಲ್ಲಿ ತುಲು ಭಾಷೆಯು ಹುಟ್ಟುವ ಕಾಲದಲ್ಲಿ ಬರೇ 32 ರಿಂದ 36 ಅಕ್ಷರಗಳು ಮಾತ್ರ ತುಲು ಭಾಷೆಯಲ್ಲಿ ಇದ್ದಿರಬೇಕು.ತುಲು ಲಿಪಿಗಳ ಆಧಾರದಿಂದ ತಮಿಲು ಲಿಪಿಗಳನ್ನು ರಚಿಸುವಾಗ
ಅದರ ಸಂಖ್ಯೆಯನ್ನು ತುಲುವಿನಷ್ಟೆ ರಚಿಸಿರಬೇಕು.

 ಹಿಂದೊಮ್ಮೆ ಅಂದಿನ ತುಲುನಾಡ್ ಇಲ್ಲಿ ಪ್ರಲಯ ಆಗಿತ್ತು.ಇಲ್ಲಿ ಬದುಕಲು ಆಗದೆ ಊರು ಬಿಟ್ಟು ಪಶ್ಚಿಮ ಘಟ್ಟ ಹತ್ತಿ ಸಂಚರಿಸುತ್ತಾ ಕೇರಲದ ಮಲಬಾರ್ ತಪ್ಪಲು ಪ್ರದೇಶದಲ್ಲಿ ನೆಲೆಯಾಗುತ್ತಾರೆ ತುಲುವ ದ್ರಾವಿಡ ಸೂದ್ರರು. ಆಗಿನ ತುಲುನಾಡ್ ತುಲುಕಾಡ್ ಆಗಿ ಪರಿವರ್ತನೆ ಆಗುತ್ತದೆ. ಇಲ್ಲಿಂದ ಒಯ್ದ ತುಲು ಲಿಪಿಗಳನ್ನು ಸೂದ್ರರು ಕೇರಲದಲ್ಲಿ ಪ್ರಯೋಗ ಮಾಡುವರು. ಆವರೆಗೆ ಕೇರಲದಲ್ಲಿ ಮಲಯಾಲ ಭಾಷೆಗೆ ಲಿಪಿ ಇರಲಿಲ್ಲ. ನಂತರದ ಕಾಲದಲ್ಲಿ ತುಲು ಲಿಪಿಯನ್ನು ತಮ್ಮದೇ ಎಂದು ಹೇಳಿದರು ಮತ್ತು ಅದು ಅಲ್ಲಿ ಮಲಯಾಲ ಲಿಪಿ ಎಂದು ಶಾಶ್ವತವಾಗಿ ಉಳಿಯುತ್ತದೆ. ನಂತರದ ಕಾಲದಲ್ಲಿ ತುಲುವ ದ್ರಾವಿಡ ಸೂದ್ರರು ವಾಪಸ್ ತಮ್ಮ ನಾಡಿಗೆ
ಬರುವರು. ಇಲ್ಲಿನ ತುಲುಕಾಡನ್ನು ಪುನಃ ತುಲುನಾಡ್ ಆಗಿ ಪರಿವರ್ತನೆ ಮಾಡುವರು. ಕುಡರಿ ಎಸೆದು ತುಲುಕಾಡನ್ನು ತುಲುನಾಡನ್ನಾಗಿ ಪರಿವರ್ತನೆ ಮಾಡುವರು. ಆದರೆ ತಾವು ಒಯ್ದ ತುಲು ಲಿಪಿಯನ್ನು ಅಲ್ಲೇ ಬಿಟ್ಟು ಬರೆ ಕೈಯಲ್ಲಿ ಬರುತ್ತಾರೆ. ಅಲ್ಲಿ ತುಲು ಲಿಪಿಯೇ ಮಲಯಾಲಂ ಲಿಪಿಯಾಗಿ ಬೆಳೆಯಿತು.
        ತುಲುವರು ನಿತ್ಯ ಬಳಸುವ ಪದಗಳಲ್ಲಿ 'ಲ' ಕಾರ ಹೊಂದಿರುವ ಪದಗಳೇ ಹೆಚ್ಚಾಗಿ ಕಂಡುಬರುತ್ತದೆ. ಉದಾ: ಲಕ್ಕ್, ಬಲ್ಲ,ಕುಲ್ಲು,ಪೋಲ,ಬೇಲೆ,ಅಟಿಲ್,ಅಕುಲು, ಮೊಕುಲು, ಮೀಲ, ಜೆಪ್ಪುಲ,ಉನುಲ,ತಿಂಗೊಲು(ಚಂದ್ರ), ಬೊಲ್ಲಿ,ಕುರಲ್,ತಿನ್ಲ, ಬತ್ತಲ್,ಪೋಯಲ್, ತಮೆಲ್,ಅಲೆ,
ತುಲಿಪು, ತೆಲ್ಲವು, ಕಲಿ ಗಂಗಸರ, ಕಲಂಕ್,ತಲ್ಲ್,ಅಲಂಕುನ , ಲಂಕುನ,ತಮೆಲುನು,ಉಗ್ಗೆಲ್,ಒಡಿಲ್,ಕಂಬ್ಲ,ಓಕುಲಿ, ಅರಗಾಲ, ಮರಿಯಾಲ,ಕಪ್ಪಲ್,ಪರ್ಪೆಲೆ,ಸುಲಿ,ಚೂಲಿ, ಪಂರ್ದ್ ಕುಲ,ಕಲಪು,ಇರೊಲು,ಬೈಲ್,ಮಜಲ್,ಕೊಲಕೆ ಕಂಡೊಲು, ಕೊದ್ದೆಲ್,ಕಡಲ್,ಕೈಪು ಕೊದ್ದೆಲ್,ಕೋಲ,
ತಂಬಿಲ, ನಾಗಮೂಲ,ಆಲಡೆ,ಬಲಿ,ದಕ್ಕೆ ಬಲಿ,ಬೂತೊಲು, ಮೇಲ, ಸೇಲೆ, ಒಪ್ಪಸಾಲೆ,ಇಲ್ಲ್,ಜಾಲ್,ಜೋಕುಲು, ಬಾಲೆಲು,ಕಂಟಲ್ದೆ,ಬಲ್ಲ,ಕಲಸೆ,ಮೆಗ್ದಿಪಲಿ,ತೆಲಿಕೆ, ಲಪ್ಪು,
ಮರ್ಮಲ್,ಪರ್ಮಲ, ಪುರಲ್,ತೆಲಿಕೆ, ನಲಿಕೆ, ಬುಲಿಪು, ಆಲ್,ಮೋಲು,ಉಲ್ಲಲ್,ಉಲ್ಲೆರ್,ಅಜಲ್,ಬಾಜೆಲ್,ಬಜಿಲ್,ಪೊದ್ದೊಲು,ಕುರ್ಲು,ತಂಬಿಲ,ಬೂಲಿಯೆ,ತೆಂಡೆಲ್, ಬಲ್ಮೆ,ಪಡೀಲ್,ಎಲ್ಯ,ಮಲ್ಲ, ಕರಬಿಸಲೆ,ಕೂಲಿ,ಕೂಜಲ್, ಕಂಟೆಲ್,ತಿಗಲೆ,ಬಿರೆಲ್,ಅಲಿಯುಜಿ,ಪಲ್ಲ,ಪಟ್ಲ, ಕರ್ಲ್,ಕಪ್ಪಲ್,ಇಲ್ಲ್,
ಕುಲೆ,ಪಗೆಲ್,ಮದ್ಮಲ್,ಮಲೆ,ನಾಲ್,ಏಲ್,ಬರಿ,ಬಲಿಮೆ,..ಪಲಯೆ. ..ಇತ್ಯಾದಿ.ತುಲು ಭಾಷೆಯಲ್ಲಿ "ಲ" ಕಾರ ಪದಗಳೇ ಹೆಚ್ಚಾಗಿದೆ.

ತುಲುನಾಡ್ ಊರುಗಳ ಹೆಚ್ಚಿನ ಹೆಸರುಗಳಲ್ಲಿ'ಲ' ಕಾರ ಜೋಡಣೆ ಆಗಿದೆ. ಉದಾಹರಣೆಗೆ ಕಾರ್ಲ,ಕುಡ್ಲ, ಬಂಟ್ಟಾಲ,ದರ್ಮತಲ(ಜೈನ ಧರ್ಮ ತಲವೂರಿದ ಸ್ಥಳ) ಮನಿಪಾಲ(ಮನ್ನ್ ಪಲ್ಲ),ಕಟೀಲ್,ಕೊಲ್ಲೂರು, ಕುದ್ರೋಲಿ, ಮೂಲ್ಕಿ, ಮಲ್ಪೆ,ಅಲೆವೂರು,ಜಾರ್ಲ, ಪರ್ಕಲ,ಬೊಲ್ವಾಯಿ
,ಬೋಲಾರ್,ಬೊಲ್ವಾರ್,ಬೋಲ್ತೇರ್,ಆಲದಂಗಡಿ, ನೆಲ್ಲಿಕಾರ್,ಇಟ್ಲ,ಅಂಡೇಲು,ಉಲ್ಲಾಲ, ಕುಂಬ್ಲೆ ,ಆಲಂಗಾರು ,ಬೇಲಾಡಿ,ಬೋಲ,ಕಿನ್ನಿಗೋಲಿ,ಬಜಗೋಲಿ,ಪಲಿಮಾರ್....ಇತ್ಯಾದಿ...ಇತ್ಯಾದಿ....
       ತುಲುನಾಡಲ್ಲಿ ದೇವರಾಧನೆ ಆರಂಭ ಆದ ನಂತರ ರ ಚಿತ ತುಲು ಪಾಡ್ದನ, ಸಂದಿ,ಬೀರ,ಬೂತೊಗಳ ನುಡಿಕಟ್ಟು, ತುಲುವರ ಕಟ್ಟ್ ಕಟ್ಲೆಗಳಲ್ಲಿ 'ಲ'ಕಾರದಲ್ಲಿದೆ.ತುಲುನಾಡಿನ
ಪ್ರಥಮ ಬೂತ ಲೆಕ್ಕೆಸಿರಿ ಇವನ ಹೆಸರೇ 'ಲ' ಕಾರದಿಂದ ಇದೆ ಎಂದ ಮೇಲೆ 'ತುಲು'ಪದವೇ ಸರಿ ಎಂದು ದೈವಗಳು ಹೇಳುತ್ತವೆ.ಇದಲ್ಲದೆ ಕಲ್ಲುರ್ಟಿ,ಪಂಜುರ್ಲಿ, ಕಲ್ಕುಡ, ಬಲಾಂಡಿ,ಮಲೆರಾಯೆ,ಮೇಲಾಂಟ, ಸಾರಲ ಜುಮಾದಿ, ಮಾಯಾಂದಾಲ್,ಗುಲಿಗ,ಪಿಲ್ಚಂಡಿ...ಹೀಗೆ ಇನ್ನೂ ಇದೆ.
         ಮೇಲ್ಜಾತಿಯ ಜನರನ್ನು ಕೆಲವು ಪಂಗಡದವರು ದೊಕ್ಕುಲು,ಉಲ್ಲಯ,ಬೊಲಯ, ಮೇಲಂಟ..‌ಇತ್ಯಾದಿ ಹೆಸರುಗಳಲ್ಲಿ 'ಲ' ಅಕ್ಷರ ಬರುತ್ತದೆ. ಪೆಲಕಾಯಿ,ನಾನಿಲ್, ಕುಂಟಲ್,ತಾರೊಲು, ನೇರೊಲು,ಕೈರೊಲು,ಲತ್ತಂಡೆ,ಬಾಲೆ ,ಮನೊಲಿ,ಪಟ್ಲಕಾಯಿ, ಬಾಪೆಲು,ಲಟಪಟಕ್,ಲಡಾಯಿ,
ಲತ್ತ್,ಲಪ್ಪು,ಲವುಡಿ ಮಗೆ,ಲಾಂಟನ್,ಲಾಚರ್,ಲಾಟ್, ಲಾತ್,ಲಾಯಿಕ್,ಲುಂಬು,ಲೆಂಕಿರಿ,ಲಚ್ಚಿಲ್,ಲೆಪ್ಪು,ಲೆತ್ತೆ, ಲೇದ್ ಪಾಡಿಯೆ,ಲೇಲೆ ಪಾಡುನು,ಲೇಸ್,ಲೈಪು,ಲೊಟ್ಟೆ, ಹೀಗೆ ಸಾಕಷ್ಟು ತುಲು ಪದಗಳು "ಲ" ಕಾರದಿಂದ ಆರಂಭ ಆಗುತ್ತದೆ.

 


ವರ್ಷದಿಂದ ವರ್ಷಕ್ಕೆ ಪದಗಳಲ್ಲಿರುವ 'ಲ'ಅಕ್ಷರಗಳು ಮಾಯವಾಗಿ 'ಳ ' ಅಕ್ಷರಗಳು ಪ್ರತ್ಯಕ್ಷ ಆಗುತ್ತಲೇ ಇದೆ. ಮಹಾಲಕ್ಷ್ಮಿ ಕೂರುವ ತಾವರೆಯಂತಿರುವ 'ಲು' ಅಕ್ಷರಕ್ಕೆ ಹೆಚ್ಚಿನ ಮಹತ್ವ ಕೊಟ್ಟು, ಒತ್ತು ಕೊಟ್ಟು ತುಲುವರು ನಮ್ಮ ಭಾಷೆ "ತುಳು ಅಲ್ಲ ತುಲು " ಎಂದು ಒಪ್ಪ ಬೇಕು. ತುಲು
ಭಾಷೆಗೆ ನಾವು  ವಂಚಿಸ ಕೂಡದು.
        " ಳ " ಅಕ್ಷರದಿಂದ ಆರಂಭವಾಗುವ ಯಾವುದೇ ಪದಗಳು ತುಲು ಭಾಷೆಯಲ್ಲಿ ಇಲ್ಲ.ಹಾಗಿರುವಾಗ 'ತುಳು' ಪದವು ತಪ್ಪಲ್ಲವೇ? ' ತುಲು 'ಎಂಬುದೇ ಸರಿ ಮತ್ತು ಸತ್ಯ. ತುಲು,ತುಲುವೆರ್,ತುಲುನಾಡ್ಎಂಬುದೇ ಸತ್ಯ,ಸತ್ಯ, ಸತ್ಯ.

ಐ.ಜಿ.ಭಂಡಾರಿ ,ಕಾರ್ಕಳ, ನಿವೃತ್ತ ಬ್ಬಾಂಕ್ ಮ್ಯಾನೇಜರ್

 

Tuesday 26 October 2021

ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯದ ಅಕ್ಟೋಬರ್ ತಿಂಗಳ ಮಾಸಿಕ ಸಭೆಯ ವರದಿ

 ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ಇದರ ಅಕ್ಟೋಬರ್ 2021 ರ ಮಾಸಿಕ ಸಭೆಯು ದಿನಾಂಕ: 24/10/2021 ರ ಭಾನುವಾರದಂದು ಮಧ್ಯಾಹ್ನ 4 ಘಂಟೆಗೆ ಸಂಘದ ಗೌರಾವಾಧ್ಯಕ್ಷರಾದ ಶ್ರೀಯುತ ಲಕ್ಷ್ಮಣ ಕರಾವಳಿ ರವರ ಅಧ್ಯಕ್ಷತೆಯಲ್ಲಿ ಹೋಟೆಲ್ ಕದಂಬ ರಾಜಾಜಿನಗರ ಬೆಂಗಳೂರು ಇಲ್ಲಿ ಜರಗಿತು.


ವಲಯದ ಕೋಶಾಧಿಕಾರಿಯಾಗಿರುವ ಶ್ರೀ ಕುಶಲ್ ಭಂಡಾರಿ ಯವರು ಹಾಜರಿದ್ದ ಎಲ್ಲರನ್ನೂ ಸ್ವಾಗತಿಸಿದರು.

ವಲಯದ ಗೌರವಾಧ್ಯಕ್ಷರಾದ ಶ್ರೀ ಲಕ್ಷ್ಮಣ್ ಕರಾವಳಿ ಮತ್ತು ಶ್ರೀಮತಿ ಡಾ. ಸುಮತಿ ಲಕ್ಷ್ಮಣ್ ಕರಾವಳಿ ದಂಪತಿಯು ತಮ್ಮ ವೈವಾಹಿಕ ಜೀವನದ 25 ವರ್ಷವನ್ನು ಪೂರೈಸಿರುವ ಸಂದರ್ಭದಲ್ಲಿ ದಂಪತಿಗೆ ಸಭೆಯು ಅಭಿನಂದನೆ ಸಲ್ಲಿಸಿ , ಕಚ್ಚೂರು ಶ್ರೀ ನಾಗೇಶ್ವರ ದೇವರು ಇಡೀ ಕುಟುಂಬಕ್ಕೆ ಆಯುರಾರೋಗ್ಯ ಅಷ್ಟಐಶ್ವರ್ಯ ಕರುಣಿಸಲಿ ಎಂದು ಪ್ರಾರ್ಥಿಸಿ ಸಂಘದ ಪರವಾಗಿ ಶುಭಾಶಯ ಸಲ್ಲಿಸಿತು.

ಮುಂದುವರಿದು ಈ ಹಿಂದಿನ ಸಭೆಯಿಂದ ಇದುವರೆಗೆ ನಮ್ಮನ್ನಗಲಿದ ಸಂಘದ ಸದಸ್ಯರು ಹಾಗೂ ಇತರ ಪದಾಧಿಕಾರಿಗಳು ಹಾಗೂ ಬಂಧುಗಳಿಗೆ ಒಂದು ನಿಮಿಷದ ಮೌನಾಚಾರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕೋಶಾಧಿಕಾರಿ ಶ್ರೀ ಕುಶಲ್ ಭಂಡಾರಿ ಯವರು ಸೆಪ್ಟೆಂಬರ್ ತಿಂಗಳ ಮಾಸಿಕ ಸಭೆಯ ನಡಾವಳಿಗಳನ್ನು ಸಭೆಗೆ ಓದಿ ಹೇಳಿದರು ಹಾಗೂ ಈ ತಿಂಗಳ ಸಭೆಯ ಅಜೆಂಡಾವನ್ನು ತಿಳಿಸಿದರು.


ಚರ್ಚಿತ ವಿಷಯಗಳು:

ವಿದ್ಯಾರ್ಥಿ ವೇತನಕ್ಕಾಗಿ ಪ್ರತೀ ವರ್ಷ ವಲಯದ ಸಮಾಜದ ಬಂಧು ಶ್ರೀ ನೆಸ್ಲೆ ಸಂಜೀವ ಭಂಡಾರಿ ಕುಟುಂಬವು ದೇಣಿಗೆ ನೀಡಿಕೊಂಡು ಬರುತ್ತಿದ್ದು , ಕೋವಿಡ್ ನಿರ್ಬಂಧದ ಕಾರಣದಿಂದ ಕಳೆದ ವರ್ಷ ವಾರ್ಷಿಕ ಮಹಾ ಸಭೆ ರದ್ದುಗೊಂಡಿತ್ತು ಹಾಗಾಗಿ ದೇಣಿಗೆಯ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ. ಸಂಘದ ಗೌರವಾಧ್ಯಕ್ಷರಾಗಿರುವ ಶ್ರೀ ಲಕ್ಷ್ಮಣ್ ಕರಾವಳಿಯವರು ಶ್ರೀಯುತ ನೆಸ್ಲೆ ಸಂಜೀವ ಭಂಡಾರಿಯವರ ಮಗ ಶ್ರೀ ಶೋಧನ್ ಭಂಡಾರಿ ಯವರನ್ನು ಫೋನ್ ಮೂಲಕ ಸಂಪರ್ಕಿಸಿ ಈ ವರ್ಷ ವಿದ್ಯಾರ್ಥಿ ವೇತನ ನೀಡಲು ಸಂಘದ ಬಳಿ ಆರ್ಥಿಕ ಕೊರತೆ ಇರುವುದನ್ನು ಮನವರಿಕೆ ಮಾಡಿದರು ಹಾಗೂ ಪ್ರತೀ ವರ್ಷ ನೀಡುತ್ತಿದ್ದ ವಿದ್ಯಾ ನಿಧಿಗೆ ದೇಣಿಗೆಯನ್ನು ಮುಂದುವರಿಸುವಂತೆ ವಿನಂತಿಸಿಕೊಂಡರು.

ಲಕ್ಷ್ಮಣ್ ಕರಾವಳಿಯವರ ವಿನಂತಿಗೆ ಒಪ್ಪಿಕೊಂಡ ಶ್ರೀ ಶೋಧನ್ ಭಂಡಾರಿ ಯವರನ್ನು ಸಂಘದ ಉಪಾಧ್ಯಕ್ಷರಾದ ಶ್ರೀ ಪ್ರಸಾದ್ ಮುನಿಯಾಲ್ ಮತ್ತು ಕೋಶಾಧಿಕಾರಿಯವರಾದ ಶ್ರೀ ಕುಶಲ್ ಭಂಡಾರಿ ಯವರು ಶ್ರೀಯುತರ ಕಚೇರಿಗೆ ತೆರಳಿ ಸೌಹಾರ್ದಯುತ ಮಾತುಕತೆ ನಡೆಸಿ ರೂ 25000 ನಗದನ್ನು ದೇಣಿಗೆಯಾಗಿ ಸ್ವೀಕರಿಸಿದರು.

ಇಂದಿನ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಕುಶಲ್ ಭಂಡಾರಿ ಯವರು ಈ ದೇಣಿಗೆಯನ್ನು ಸ್ವೀಕರಿಸುವಲ್ಲಿ ಲಕ್ಷ್ಮಣ್ ಕರಾವಳಿಯವರ ಶ್ರಮ ಮತ್ತು ನೆಸ್ಲೆ ಸಂಜೀವ ಭಂಡಾರಿ ಕುಟುಂಬದ ಉದಾರತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿಕೊಂಡು ಸಂಘದ ಪರವಾಗಿ ಧನ್ಯವಾದ ಅರ್ಪಿಸಿದರು.

2021 ನೇ ಸಾಲಿನ ವಿದ್ಯಾರ್ಥಿ ವೇತನ ಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಸಮಾಜದ ಮುಖವಾಣಿಯಾದ ಕಚ್ಚೂರು ವಾಣಿಯ ಮುಂದಿನ ಸಂಚಿಕೆಯಲ್ಲಿ ಈ ಬಗ್ಗೆ ಅರ್ಜಿ ನಮೂನೆಯು ಪ್ರಕಟವಾಗಲಿದೆ. ಈ ಹಿಂದಿನ ಸಭೆಯಲ್ಲಿ ನಿರ್ಧರಿಸುವಂತೆ ಅರ್ಜಿ ಸಂಘಕ್ಕೆ ತಲುಪುವ ಕೊನೆಯ ದಿನಾಂಕ ನವೆಂಬರ್ 20 ನಿಗದಿಪಡಿಸಲಾಗಿದ್ದು , ಘಟಕಗಳು ಈ ಬಗ್ಗೆ ಕಾರ್ಯಪ್ರವೃತ್ತರಾಗಿ ಸೂಕ್ತ ದಿನಾಂಕದ ಒಳಗಾಗಿ ಅರ್ಜಿ ನಮೂನೆಯು ಸಂಘದ ಕಚೇರಿಗೆ ತಲುಪುವಲ್ಲಿ ಸಹಕರಿಸುವಂತೆ ಸಭೆ ವಿನಂತಿಸಿತು.


ಈ ಬಾರಿ ವಿದ್ಯಾರ್ಥಿ ವೇತನ ವಿತರಿಸಲು ಸಂಘದ ಖಾತೆಯಲ್ಲಿ ಆರ್ಥಿಕ ಕೊರತೆ ಇರುವ ಕಾರಣ ವಿದ್ಯಾರ್ಥಿ ವೇತನ ವಿತರಿಸುವ ಮೊಬಲಗನ್ನು ರೂ 60 ಸಾವಿರಕ್ಕೆ ಸೀಮಿತಗೊಳಿಸುವಂತೆ ಅಧ್ಯಕ್ಷರು ಸಲಹೆ ನೀಡಿದರು, ಸಭೆ ಅವರ ಸಲಹೆಯನ್ನು ಅಂಗೀಕರಿಸಿತು.

ಹಾಗೆಯೇ ವಲಯದ ಘಟಕಗಳ ಹಲವಾರು ಯುವಕ, ಯುವತಿಯರು ಬೆಂಗಳೂರಿನ ಉತ್ತಮ ಕಂಪೆನಿಗಳಲ್ಲಿ ಕೆಲಸ ಮಾಡಿಕೊಂಡಿದ್ದು,ಕೆಲವರಿಗೆ ತಮ್ಮ ಆದಾಯದಲ್ಲಿ ಸ್ವಲ್ಪ ಅಂಶವನ್ನು ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಚಿಂತನೆ ಇರುವ ಸಾಧ್ಯತೆ ಇದೆ. ಅಂತಹ ಯುವಕ, ಯುವತಿಯರು ಅಥವಾ ಇತರ ಬಂಧುಗಳು ವಿದ್ಯಾರ್ಥಿ ವೇತನಕ್ಕಾಗಿ ದತ್ತು ತೆಗೆದುಕೊಳ್ಳುವ ಕಾರ್ಯಕ್ರಮದ ಬಗ್ಗೆ ಸಭೆ ಚರ್ಚೆ ನಡೆಸಿತು. ಈ ಬಗ್ಗೆ ಸಂಘವು ಅಂತಹ ವ್ಯಕ್ತಿಗಳನ್ನು ಗುರುತಿಸುವುದು ಅಥವಾ ಸ್ವಯಂಪ್ರೇರಿತರಾಗಿ ದತ್ತು ತೆಗೆದುಕೊಳ್ಳಲು ಮುಂದೆ ಬರುವಂತೆ ಸಂಘವು ಮನವಿ ಮಾಡಲು ಸಂಘ ನಿರ್ಧರಿಸಿತು.ಈ ರೀತಿ ಮಾಡುವ ಮೂಲಕ ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿ ವೇತನ ವಿತರಿಸಲು ಸಂಘದಲ್ಲಿತಲೆದೋರಬಹುದಾದ ಆರ್ಥಿಕ ಕೊರತೆಯನ್ನು ಸರಿದೂಗಿಸಬಹುದೆಂಬುದು ಸಭೆಯ ಆಶಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಸಂಘವು ಕಾರ್ಯಪ್ರವೃತ್ತರಾಗುವಂತೆ ಮತ್ತು ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವ ಸಮಾಜದ ಬಂಧುಗಳನ್ನು ಸೂಕ್ತ ವೇದಿಕೆಯಲ್ಲಿ ಗುರುತಿಸಿ ಸನ್ಮಾನಿಸುವ ಬಗ್ಗೆಯೂ ಸಭೆ ನಿರ್ಧರಿಸಿತು.

ಸಭೆ ಮುಂದುವರಿದು ಡಿಸೆಂಬರ್ 25 ರಂದು ನಡೆಸುವ ವಾರ್ಷಿಕ ಮಹಾಸಭೆ ಮತ್ತು ಸ್ನೇಹ ಕೂಟದ ಬಗ್ಗೆ ಚರ್ಚೆ ನಡೆಯಿತು.
ವಾರ್ಷಿಕ ಮಹಾಸಭೆಯನ್ನು ರಾಜಾಜಿನಗರದಲ್ಲಿರುವ ಹೋಟೆಲ್ ಕದಂಬ ದಲ್ಲಿ ನಡೆಸುವ ಬಗ್ಗೆ ಈ ಹಿಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ರೂಪುರೇಷೆಯ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು.

ಆಮಂತ್ರಣ ಪತ್ರಿಕೆಯನ್ನು ಸ್ವಲ್ಪ ಸಂಖ್ಯೆಯಲ್ಲಿ ಮುದ್ರಿಸಿ , ಡಿಜಿಟಲ್ ಪ್ರತಿಯನ್ನು ವಾಟ್ಸಪ್ಪ್ ಅಥವಾ ಇತರ ಸಾಮಾಜಿಕ ಜಾಲತಾಣದ ಮೂಲಕ ಸಂಘದ ಸದಸ್ಯರಿಗೆ ಕಳುಹಿಸಿಕೊಡುವ ಬಗ್ಗೆ ಸಭೆಯು ಒಕ್ಕೊರಲ ತೀರ್ಮಾನ ಕೈಗೊಂಡಿತು ಈ ಬಗ್ಗೆ ಸದಸ್ಯರ ವಾಟ್ಸಪ್ಪ್ ನಂಬರ್ ನ್ನು ಸಂಗ್ರಹಿಸಿಕೊಂಡು ,ಎಲ್ಲಾ ಪದಾಧಿಕಾರಿಗಳು ತಮ್ಮವಾಟ್ಸಪ್ಪ್ ಮೂಲಕ ಆಮಂತ್ರಣ ಪತ್ರಿಕೆ ಕಳುಹಿಸಿ , ಕರೆ ಮಾಡುವ ಜವಾಬ್ದಾರಿಯನ್ನು ನೀಡುವ ಬಗ್ಗೆ ಸಭೆ ತೀರ್ಮಾನಿಸಿತು.

ವಾರ್ಷಿಕ ಮಹಾಸಭೆಯು ಬೆಳಿಗ್ಗೆ 8.30 ಕ್ಕೆ ಆರಂಭಗೊಂಡು ಸಂಜೆ 6 ರ ಒಳಗೆ ಮುಗಿಸುವ ಬಗ್ಗೆ ನಿರ್ಧರಿಸಲಾಯಿತು.

ಬೆಳಿಗ್ಗೆ 11 ಕ್ಕೆ ಕೋಶಾಧಿಕಾರಿಯ ವಾರ್ಷಿಕ ಲೆಕ್ಕ ಪತ್ರ ಮಂಡನೆ , ಕಾರ್ಯದರ್ಶಿಯವರ ವರದಿ ವಾಚನದ ನಂತರ ಮುಂದಿನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ .ಮದ್ಯಾಹ್ನ ಭೋಜನ ದ ಬಳಿಕದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳನ್ನು ಕರೆಯುವ ಬಗ್ಗೆ, ಕುಲಕಸುಬುದಾರರಿಗೆ ಸನ್ಮಾನ , ಪ್ರತಿಭಾ ಪುರಸ್ಕಾರ ಹಾಗೆಯೇ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಮಾಜದ ಬಂಧುಗಳನ್ನು ಕರೆದು ಸನ್ಮಾನಿಸುವ ಬಗ್ಗೆ ಕೆಲವೊಂದು ಹೆಸರುಗಳನ್ನು ಗುರುತಿಸಿಕೊಂಡು ಮುಂಬರುವ ದಿನಗಳಲ್ಲಿ ಅಂತಿಮಗೊಳಿಸುವ ಬಗ್ಗೆ ಸಭೆ ತೀರ್ಮಾನಿಸಿತು .

 

ಮಹಾಸಭೆಯ ಒಟ್ಟು ಖರ್ಚಿನ ಬಗ್ಗೆ ಬಜೆಟ್ ನಿಗದಿಪಡಿಸುವ ನಿಟ್ಟಿನಲ್ಲಿ ರೂ 1 ಲಕ್ಷದ ಮಿತಿಯ ಒಳಗೆ ಎಲ್ಲಾ ಖರ್ಚನ್ನು ಭರಿಸುವ ಮೂಲಕ ಆ ಬಗ್ಗೆ ಸಂಘದ ಪದಾಧಿಕಾರಿಗಳು , ಸಮಿತಿಯ ಸದಸ್ಯರು ಹಾಗೂ ಸಂಘದ ಇತರ ಸದಸ್ಯರ ಮೂಲಕ ದೇಣಿಗೆ ಸಂಗ್ರಹಿಸುವ ಬಗ್ಗೆ ಚಿಂತನೆ ನಡೆಸಿತು.

ಮಹಾಸಭೆಯ ಖರ್ಚು ಕಳೆದು ಉಳಿಕೆಯಾಗುವ ಮೊತ್ತವನ್ನು ವಿದ್ಯಾನಿಧಿ ಖಾತೆಗೆ ವರ್ಗಾಯಿಸುವ ಬಗ್ಗೆ ಸಭೆ ನಿರ್ಣಯಿಸಿತು.

ಹಾಜರಿದ್ದ ಪದಾಧಿಕಾರಿಗಳು ಮತ್ತು ಸಮಿತಿಯ ಸದಸ್ಯರು ತಮ್ಮ ನಿರ್ಧಿಷ್ಟ ಮೊತ್ತದ ದೇಣಿಗೆಯನ್ನು ನೀಡುವ ಬಗ್ಗೆ ಆಶ್ವಾಸನೆ ನೀಡಿದರು.

ಸಂಘದ ಮಾಜಿ ಅಧ್ಯಕ್ಷರು ಮತ್ತು ವಕೀಲರಾದ ಶ್ರೀ ಉಮೇಶ್ ರವರು ಸಭೆಯ ದಿನದ ಮಧ್ಯಾಹ್ನದ ಭೋಜನ ವ್ಯವಸ್ಥೆಯ ಖರ್ಚನ್ನು ತಾನು ಭರಿಸುತ್ತೇನೆ ಎಂದು ಭರವಸೆ ನೀಡಿ, ಶೀಘ್ರವಾಗಿ ತೀರ್ಮಾನ ಮಾಡಿ ಘೋಷಿಸುವುದಾಗಿ ಸಭೆಗೆ ತಿಳಿಸಿದರು.

ಉಪಾಧ್ಯಕ್ಷರಾದ ಪ್ರಸಾದ್ ಮುನಿಯಾಲ್ ರವರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು.

ವರದಿ : ಕುಶಲ್ ಭಂಡಾರಿ, ಬೆಂಗಳೂರು

Friday 22 October 2021

ಅಂತರಾಳ - ಭಾಗ 4

 ಇಲ್ಲಿಯವರೆಗೆ.....

ಶಮಿಕಳಿಗೆ ತನ್ನ ತಂದೆ ಯಾರೆಂದು ತಿಳಿಯಲು ತಾಯಿ ಭವಾನಿಯ ಡೈರಿ ಓದುತ್ತಾಳೆ. ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಕೊಂಡಿರುತ್ತಾರೆ.ಮಾವನ ಮನೆಯಲ್ಲಿ ಭವಾನಿ ಮತ್ತು ಅವಳ ತಾಯಿ ಇದ್ದು ಅಲ್ಲೇ ಹೈಸ್ಕೂಲ್ ವಿದ್ಯಾಬ್ಯಾಸ ಮುಗಿಸಿ ಉಡುಪಿಗೆ ಬಂದು ಕಾಲೇಜು ಮುಗಿಸಿ ಅಲ್ಲೇ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಹೀಗಿರುವಾಗ ಒಂದು ದಿನ ಕೆಲಸದಿಂದ ಬರುವಾಗ ಅವಳ ಮೇಲೆ ಅತ್ಯಾಚಾರ ನಡೆಯುತ್ತದೆ.ಇದರಿಂದ ಅವಳಿಗೆ ದಿಕ್ಕೇ ತೋಚದಂತಾಗುತ್ತದೆ... ಅವಳು ಸಾಯುವ ನಿರ್ಧಾರ ಮಾಡುತ್ತಾಳೆ.....

 

ಅಂತರಾಳ - ಭಾಗ 4

ಇಲ್ಲ ನಾನೇಕೆ ಸಾಯಬೇಕು? ನಾನೇನು ತಪ್ಪು ಮಾಡಿದ್ದೇನೆ? ಯಾರೋ ಮಾಡಿದ ತಪ್ಪಿಗೆ ನಾನೇಕೆ ಜೀವ ಕಳೆದುಕೊಳ್ಳಲಿ ?. ಖಂಡಿತ ಸಾಯುವುದಿಲ್ಲ.... ಕೆಲಸವನ್ನೂ ಬಿಡುವುದಿಲ್ಲ.... ಎಂದು ನಿರ್ಧರಿಸಿದೆ. ಎರಡು ದಿನ ಹಾಸ್ಟೆಲ್ ನಲ್ಲಿಯೇ ಇದ್ದು ಮೂರನೆಯ ದಿನ ಗ್ರಂಥಾಲಯಕ್ಕೆ ಹೋದೆ. ಮೊದಲಿನ ಉತ್ಸಾಹ , ಆಸಕ್ತಿ ಕೆಲಸದ ಮೇಲೆ ನಿಲ್ಲುತ್ತಿರಲಿಲ್ಲ. ಯಾಕೋ ಹೃದಯದಲ್ಲಿ ಭಯವಾಗುತ್ತಿತ್ತು......‌ಯಾರನೂ ನೋಡಿದರೂ ನನ್ನನ್ನು ಪೈಶಾಚಿಕ ರೀತಿಯಲ್ಲಿ ಬಳಸಿಕೊಂಡ ಪ್ರಾಣಿ ಇವನೇ ಇರಬಹುದೇ ಎಂಬ ಸಂಶಯ ಬರುತಿತ್ತು ......ಹೀಗೆ ದಿನಾ ಕಳೆದು ಘಟನೆ ನಡೆದು 40 ದಿನಗಳೇ ಕಳೆದು ಹೋಗಿತ್ತು. ಆಗ ನನಗೆ ನೆನಪಾಯಿತು ಈ ತಿಂಗಳ ಮಾಸಿಕ ಸ್ರಾವ ಆಗಿಲ್ಲ ಎಂದು. 15 ದಿನ ಮುಂದೆ ಹೋಗಿದೆ.ದಿಕ್ಕೇ ತೋಚಲಿಲ್ಲ.........ಕೈ ಕಾಲು ಬಲವಿಲ್ಲದಂತೆ ಆಯಿತು. ನಾನು ಏನು ಆಗಬಾರದು ಎಂದೆನಿಸಿ ಧೈರ್ಯದಿಂದ ಬದುಕುತ್ತಿದ್ದೇನಾ ಆದರೆ ಆಗಬಾರದ ಅನಾಹುತ ನಡೆದೇ ಹೋಗಿದೆ....

ಆ ದುರುಳರು ನನ್ನನ್ನು ನನ್ನ ದೇಹವನ್ನುಮನಸ್ಸನ್ನು ಮಲೀನ ಮಾಡಿದ್ದಲ್ಲದೇ ಅವರ ಕಾಮದ ಕುರುಹು ನನ್ನಲ್ಲಿ ಉಳಿದಿತ್ತು. ಇನ್ನು ಪ್ರಯೋಜನವಿಲ್ಲ.......ಸಾಯುವುದೇ ಸರಿ!. ಹಿಂದೆ ಮುಂದೆ ಯೋಚಿಸಲು ಸಮಯ ಇರಲಿಲ್ಲ.... ಗ್ರಂಥಾಲಯದಲ್ಲಿ ಯಾರೂ ಇರಲಿಲ್ಲ. ನನ್ನ ಸೀರೆ ಬಿಚ್ಚಿ ಹಳೆಯ ಫ್ಯಾನಿಗೆ ಗಂಟು ಹಾಕಿಕೊಂಡು ಕೊರಳು ಹಾಕಬೇಕು ಎಂದಾಗ ಯಾರೋ ಬೆನ್ನ ಮೇಲೆ ಕೈ ಹಾಕಿದ ಹಾಗೆ ಆಯಿತು. ತಿರುಗಿ ನೋಡಿದಾಗ ಎದುರಲ್ಲಿ ದಿನಾ ಮದ್ಯಾಹ್ನ ಓದಲು ಬರುವ ಒಬ್ಬ ಸಪೂರ ದೇಹದ ಪೀಚಲು ಮನುಷ್ಯ ನಿಂತಿದ್ದರು...... ನಾನು ನಿಂತಲ್ಲೇ ಕಲ್ಲಾದೆ........


ಆ ಮನುಷ್ಯ ಚಕ ಚಕನೆ ನನ್ನ ಸೀರೆ ಬಿಚ್ಚಿ ನನ್ನಲ್ಲಿ ಕೊಟ್ಟು ಸೀರೆ ಉಟ್ಟು ಬನ್ನಿ. ಯಾವ ಸಮಸ್ಯೆಗೂ ಪರಿಹಾರ ಇದೆ ಹೋಗಿ ಎಂದರು. ಆ ಮಾತಲ್ಲಿ ಆಜ್ಞೆಯೋ ನಮ್ರತೆಯೋ ಗೊತ್ತಾಗಲಿಲ್ಲ. ನಾನು ಏನೂ ಮಾತನಾಡದೆ ಒಳಗೆ ಹೋಗಿ ಸೀರೆ ಉಟ್ಟು ಬಂದೆ..... ನನ್ನ ಜಾಗದಲ್ಲಿ ಕುಳಿತೆ. ಆ ವ್ಯಕ್ತಿ ನನ್ನ ಎದುರಿಗೆ ಕುಳಿತು : ನನ್ನಹೆಸರು ಶಂಕರಮೂರ್ತಿ ಎಂ ಎಸ್ ಡಬ್ಲ್ಯೂ(M.S.W) ಮಾಡಿದ್ದೇನೆ. ಶಿಕ್ಷಣ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಬ್ಬರು ಅಕ್ಕಂದಿರು ,ಒಬ್ಬಳು ತಂಗಿ, ಒಬ್ಬರು ಅಣ್ಣ ಇದ್ದಾರೆ. ನನ್ನನ್ನು ಬಿಟ್ಟು ಎಲ್ಲರಿಗೂ ಮದುವೆಯಾಗಿದೆ. ಅಣ್ಣ ಮುಂಬೈಯಲ್ಲಿ ಇದ್ದಾರೆ. ಅಪ್ಪ ತೀರಿದ್ದಾರೆ. ಅಪ್ಪನ ರೈಲ್ವೆ ಕೆಲಸ ಅಣ್ಣನಿಗೆ ಸಿಕ್ಕಿದೆ. ಮನೆಯಲ್ಲಿ ತೋಟ, ಕೃಷಿ ಮಾಡುತ್ತಿದ್ದೇವೆ. ನಾನು ಅಮ್ಮ ಇಬ್ಬರೇ ಇರುವುದು.ದಿನಾ ಮನೆಯಿಂದ ಕೆಲಸಕ್ಕೆ ಬರುತ್ತಿದ್ದೇನೆ. ಇಷ್ಟು ನನ್ನ ಪೂರ್ವಾಪರಗಳು.ಈಗ ನೀವು ನಿಮ್ಮ ಸಮಸ್ಯೆ ಹೇಳಬೇಕು. .. ಎಂದರು "ನಾನು ಹೇಳದೆ ಇದ್ದರೆ ಅವರು ತಪ್ಪು ಎನಿಸಬಹುದು, ಹೇಳುವುದೇ ಉತ್ತಮ ಎಂದೆನಿಸಿ ಆ ದಿನಾ ನಡೆದ ಎಲ್ಲಾ ಘಟನೆಯ ಬಗ್ಗೆ ಹೇಳಿ ಈಗ ಮಾಸಿಕ ಸ್ರಾವ ಆಗದ್ದನ್ನು ಹೇಳಿ, ಮನೆಯಲ್ಲಿ ಅಪ್ಪನಿಲ್ಲದೆ ಮಾವನ ಅಡಿಯಾಳಾಗಿ ನಾನು ಅಮ್ಮ ಇರುವುದನ್ನು" ಹೇಳಿದೆ. ಎದೆಯ ಭಾರ ಇಳಿದಂತಾಯಿತು. ಆ ವ್ಯಕ್ತಿ ಏನನ್ನೂ ಹೇಳದೆ ಸುಮ್ಮನೆ ಯೋಚಿಸುತ್ತಿದ್ದರು. 5 ನಿಮಿಷದ ನಂತರ ನಿಮ್ಮ ಹೆಸರೇನು? ಎಂದರು. ಭವಾನಿ ಎಂದೇ!. ಭವಾನಿಯವರೇ ನನ್ನನ್ನು ಶಂಕರ್ ಎಂದೇ ಕರೆಯಿರಿ.
ನಿಮ್ಮ ಸಮಸ್ಯೆಗೆ ಖಂಡಿತಾ ಪರಿಹಾರ ಇದೆ. ಎಲ್ಲಾ ಸಮಸ್ಯೆಗೂ ಸಾವೇ ಪರಿಹಾರವಾದರೆ ಇಲ್ಲಿ ಮನುಷ್ಯರೇ ಇರುತ್ತಿರಲಿಲ್ಲ..... ಎಲ್ಲಾ ಮನುಷ್ಯನಿಗೂ ಸಮಸ್ಯೆ ಇದ್ದೇ ಇದೆ. ಸಮಸ್ಯೆಯ ಕಾರಣ ಬೇರೆ ಬೇರೆ ಇರಬಹುದು... ನಾನು ಖಂಡಿತವಾಗಿ ಯೋಚಿಸಿ ಪರಿಹಾರ ಹುಡುಕುತ್ತೇನೆ. ನೀವು ನಿಶ್ಚಿಂತೆಯಿಂದ ಕೆಲಸ ಮಾಡಿ. ತಪ್ಪಿಯೂ ಏನೂ ಅನಾಹುತ ಮಾಡಿಕೊಳ್ಳಬೇಡಿ. ನಾಳೆ ಬರುತ್ತೇನೆ ಎಂದು ಸಮಾಧಾನ ಹೇಳಿ ಹೋಗಿಯೇ ಬಿಟ್ಟರು. ಯಾಕೋ ಸ್ವಲ್ಪ ಸಮಾಧಾನವಾಯಿತು. ರಾತ್ರಿಯಿಡೀ ನಿದ್ದೆಯೇ ಸುಳಿಯಲಿಲ್ಲ .ಮರುದಿನ ಶಂಕರ್ ಬಂದಾಗ ಆತ್ಮೀಯನೊ , ಪ್ರೀತಿ ಪಾತ್ರರೋ ಎಂಬಂತೆ ಅವರ ಜೊತೆ ಮಾತನಾಡಿದೆ. ಶಂಕರ್ ಕೂಡ ಸಮಾಧಾನ ಹೇಳಿ " ಪರಿಹಾರ ಯೋಚಿಸಿದ್ದೇನೆ. ನೀವು ಯಾವುದಕ್ಕೂ ಚಿಂತೆ ಮಾಡಬೇಡಿ ದಿನಾ ನಾನು ಬರಲು ಆಗುವುದಿಲ್ಲ. ಗಾಬರಿಯಾಗಬೇಡಿ. ಖಂಡಿತ ಪರಿಹಾರ ಸೂಚಿಸಿ ನಿಮ್ಮ ಮುಂದೆ ಬರುತ್ತೇನೆ" ಎಂದರು. ಶಂಕರ್ ಹೋದಾಗ ನಾನು ಒಂಟಿ ಎಂದೆನಿಸಿತು. ಅಂತೂ ದಿನ ಬೇಗ ಬೇಗ ಸರಿಯುತ್ತಿತ್ತು. ಮುಟ್ಟುಆಗದೆ ಎರಡು ತಿಂಗಳು ಆಯಿತು. ನನಗೆ ಹೊಟ್ಟೆಯಲ್ಲಿ ಸಂಕಟ. ಬೆಳಿಗ್ಗೆ ಎದ್ದಾಗ ವಾಂತಿ ಬರುವುದು. ಊಟ ಸೇರುವುದಿಲ್ಲ. ತಲೆ ಸುತ್ತುವುದು ಪ್ರಾರಂಭವಾಯಿತು. ಹಾಸ್ಟೆಲ್ ನಲ್ಲಿ ಯಾರಿಗೂ ಗೊತ್ತಾಗದ ಹಾಗೆ ತುಂಬಾ ಜಾಗ್ರತೆಯಿಂದ ನಿಭಾಯಿಸುತ್ತಿದ್ದೆ. ಶಂಕರ್ ಬರುವ ದಾರಿಯೇ ಕಾಯುತ್ತಿದ್ದೆ. ಬಂದಾಗ " ಇನ್ನು ನನ್ನಿಂದ ಆಗುವುದಿಲ್ಲ 2 ತಿಂಗಳು ಆಯಿತು. ಹಾಸ್ಟೆಲ್ ನಲ್ಲಿ ಎಲ್ಲರಿಗೂ ತಿಳಿಯುತ್ತದೆ ಎಂದು ಭಯವಾಗುತ್ತಿದೆ.
ಏನು ಮಾಡೋಣ" ಎಂದು ಒಂದೇ ಉಸಿರಲ್ಲಿ ಹೇಳಿದೆ. ಅದಕ್ಕೆ ಶಂಕರ್ "ನಾನು ತುಂಬಾ ವಿಧದಲ್ಲಿ ಯೋಚಿಸಿದೆ. ಯಾವುದೂ ಪರಿಹಾರ ಕಾಣಿಸುತ್ತಿಲ್ಲ. ಕೊನೆಯದಾಗಿ ಒಂದೇ ಪರಿಹಾರ. ಅದಕ್ಕೆ ನಿಮ್ಮ ಒಪ್ಪಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ ಭವಾನಿ " ಎಂದು ನನ್ನನ್ನೇ ದಿಟ್ಟಿಸಿದರು. ಏನು ಎಂಬಂತೆ ನೋಡಿದೆ.ಅದಕ್ಕೆ ಬೇರೇನಿಲ್ಲ. " ನಾನು ನಿಮ್ಮನ್ನು ಮದುವೆ ಆಗುತ್ತೇನೆ. ಅದೂ ನೀವು ಒಪ್ಪಿದರೆ ಮಾತ್ರ" ಎಂದರು. ನನಗೆ ಏನೂ ತಿಳಿಯದೆ ಗಲಿಬಿಲಿಗೊಂಡೆ. ನನ್ನ ಎದೆ ಬಡಿಯುತ್ತಿತ್ತು. ನೀವು ಏನು ಹೇಳಿದರೂ ನಾನು ಅದಕ್ಕೆ ಬದ್ಧ.

 


ನಾನು ತೀರ್ಮಾನ ತೆಗೆದುಕೊಳ್ಳುವ ಹಕ್ಕನ್ನು ಆ ದುಷ್ಟರು ಕಸಿದುಕೊಂಡಿದ್ದಾರೆ ಎಂದೆ. ಶಂಕರ್ ಆಗ " ನಾನು ತುಂಬಾ ಯೋಚಿಸಿದೆ.ಈ ಸ್ಥಿತಿಯಲ್ಲಿ ಬೇರೆಯವರಿಗೆ ಮದುವೆ ಆಗಲು ಹೇಳುವುದು ಹೇಗೆ ? ಆಸ್ಪತ್ರೆಗೆ ಹೋದರು ಅನಾಹುತವೇ ಆಗುತ್ತದೆ. ನಾವು ಭ್ರೂಣ ಹತ್ಯೆಯ ವಿರುದ್ಧ ಕೆಲಸ ಮಾಡುವುದು. ಬೇರೆ ಯಾವ ಪರಿಹಾರವೂ ಕಾಣಿಸುತ್ತಿಲ್ಲ. ನಿಮ್ಮ ಮಾವನಿಗೆ, ಊರಿಗೆ ತಿಳಿದರೆ ನಿಮಗೇ ಸಮಸ್ಯೆ . ನೀವು ಒಪ್ಪಿದರೆ ಈಗಲೇ ಹೋಗಿ ಮದುವೆ ಆಗೋಣ. ನನ್ನ ಪರಿಚಯದವರಲ್ಲಿ ಬಾಡಿಗೆಗೆ ಮನೆಯನ್ನು ಕೇಳಿದ್ದೇನೆ. ನೀವು ಈ ಸ್ಥಿತಿಯಲ್ಲಿ ಹಾಸ್ಟೆಲ್ ನಲ್ಲಿ ಇರುವುದು ಸರಿಯಲ್ಲ" ಎಂದರು. ನನಗೆ ಆ ಕ್ಷಣ ಪ್ರವಾಹದಲ್ಲಿ ಹೋಗುವವಳಿಗೆ ತೆಪ್ಪವೇ ಬಂದು ರಕ್ಷಿಸಿದ ಹಾಗೆ ಅನ್ನಿಸಿತು. ಮರು ಮಾತನಾಡದೆ ಒಪ್ಪಿದೆ. ಅದೇ ದಿನ ದೇವಸ್ಥಾನದಲ್ಲಿ ಮದುವೆ ಆದೆವು. ನೀವು ಇವತ್ತೇ ಹಾಸ್ಟೆಲ್ ಗೆ ಹೋಗಿ ವಾರ್ಡನ್ ನಲ್ಲಿ ನಾನು ಪರಿಚಯದವರನ್ನು ಮದುವೆ ಆಗಿದ್ದೇನೆ. ಇನ್ನು 3 ದಿನದಲ್ಲಿ ನನ್ನ ಗಂಡ ಬಂದು ಬೇರೆ ಮನೆಗೆ ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿ ಎಂದು ಶಂಕರ್ ನಂಗೆ ಹೇಳಿದರು.ಅದರಂತೆ ಹಾಸ್ಟೆಲ್ ನಲ್ಲಿ ಹೇಳಿದೆ. ಎಲ್ಲರೂ ಚುಡಾಯಿಸಿದರು. ವಾರ್ಡನ್ ಶುಭ ಹಾರೈಸಿದರು . ಹೇಳಿದಂತೆ 3 ನೇ ದಿನ ಶಂಕರ್ ಬಂದು ನನ್ನನ್ನು ಕರೆದುಕೊಂಡು ಹೋದರು. ಬಾಡಿಗೆ ಮನೆಗೆ ಬೇಕಾದ ಎಲ್ಲಾ ಸಾಮಾನುಗಳನ್ನು ನಾವಿಬ್ಬರೂ ಜೊತೆಯಲ್ಲಿ ಪೇಟೆಯಲ್ಲಿ ಖರೀದಿಸಿದೆವು. ನನಗಂತೂ ತುಂಬಾನೇ ಸಂತೋಷವಾಯಿತು. ಇನ್ನು ಅಮ್ಮನನ್ನು ಜೊತೆಯಲ್ಲಿ ಕರೆದುಕೊಂಡು ಬರಬೇಕು ಎಂದು ನಿರ್ಧರಿಸಿದೆ. ಕೆಲಸಕ್ಕೂ ರಾಜೀನಾಮೆ ನೀಡಿದೆ. ಶಂಕರ್ ಹೇಳಿದಂತೆ ಮಾವನಿಗೆ ಮದುವೆ ಆಗಿರುವ ಬಗ್ಗೆ ಪತ್ರ ಬರೆದೆ. ಏನೂ ಸುದ್ದಿ ಬರಲಿಲ್ಲ.

(ಮುಂದುವರಿಯುವುದು)

ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Thursday 21 October 2021

ದಾಂಪತ್ಯ ಜೀವನದ ರಜತ ಮಹೋತ್ಸವದ ಸಂಭ್ರಮಾಚರಣೆಯಲ್ಲಿ ಬೆಂಗಳೂರು ಮಾರತ್ ಹಳ್ಳಿಯ ಶ್ರೀ ಲಕ್ಷ್ಮಣ್ ಕರಾವಳಿ ಮತ್ತು ಡಾ॥ ಸುಮತಿ ಲಕ್ಷ್ಮಣ್ ಕರಾವಳಿ

 ಭಂಡಾರಿ ಸಮಾಜ ಬೆಂಗಳೂರು ವಲಯದ ಸಕ್ರಿಯ ಮುಖಂಡ, ಮಾಜಿ ಅಧ್ಯಕ್ಷರೂ ಹಾಗೂ ಹಾಲಿ ಗೌರವಾಧ್ಯಕ್ಷರಾಗಿರುವ ಶ್ರೀ ಲಕ್ಷ್ಮಣ್ ಕರಾವಳಿ ಮತ್ತು ಬೆಂಗಳೂರಿನ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿರುವ ಶ್ರೀಮತಿ ಡಾ . ಸುಮತಿ ಲಕ್ಷ್ಮಣ್ ಕರಾವಳಿಯವರು ತಮ್ಮ ವೈವಾಹಿಕ ಜೀವನದ ರಜತ ಮಹೋತ್ಸವವನ್ನು ಅಕ್ಟೋಬರ್ 21 ನೇ ಗುರುವಾರದಂದು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಉಡುಪಿ ಕಾಡಬೆಟ್ಟು ದಿವಂಗತ ಗಿರಿಜಾ ವೆಂಕಪ್ಪ ಭಂಡಾರಿ ಮತ್ತು ದಿವಂಗತ ವೆಂಕಪ್ಪ ಭಂಡಾರಿಯವರ ಮಗ ಲಕ್ಷ್ಮಣ್ ಕರಾವಳಿ ಹಾಗೂ ಸಾಗರ ಶ್ರೀಮತಿ ರಾಜಮ್ಮ ಮತ್ತು ಶ್ರೀ ಮಹದೇವಪ್ಪದಂಪತಿಯ ಮಗಳಾಗಿರುವ ಶ್ರೀಮತಿ ಡಾ॥ ಸುಮತಿ ಲಕ್ಷ್ಮಣ್ ಕರಾವಳಿ ಯವರು 1996 ರ ಅಕ್ಟೋಬರ್ 21 ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ಸಪ್ತಪದಿ ತುಳಿದಿದ್ದರು.

ಲಕ್ಷ್ಮಣ್ ಕರಾವಳಿ ಯವರು ಬೆಂಗಳೂರಿನ ಮಾರತಹಳ್ಳಿಯಲ್ಲಿ ಇರುವ ಕರಾವಳಿ ಕೇಬಲ್& ಇಂಟರ್ನೆಟ್ ಸರ್ವಿಸಸ್ ಇದರ ಮಾಲಕರು ಮತ್ತು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಸೇವಾ ಟ್ರಸ್ಟಿನ ಉಪಾಧ್ಯಕ್ಷರಾಗಿದ್ದರು ,ಬೆಂಗಳೂರು ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸಂಘದ ಹಾಲಿ ಗೌರವ ಅಧ್ಯಕ್ಷರಾಗಿರುತ್ತಾರೆ .

ಡಾ . ಸುಮತಿ ಲಕ್ಷ್ಮಣ್ ಕರಾವಳಿಯವರು ಬೆಂಗಳೂರಿನ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿಕೊಂಡು ತನ್ನ ಸೇವಾವಧಿಯಲ್ಲಿ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುತ್ತಾರೆ.


ಇವರ ಪುತ್ರರಾದ ಡಾ॥ ಹರ್ಷಿತ್ ಎಲ್. ಭಂಡಾರಿ ಧಾರವಾಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ಪದವಿಯನ್ನು ಅತ್ಯುತ್ತಮ ಅಂಕದೊಂದಿಗೆ ಪಡೆದು ಪ್ರಸ್ತುತ ವೈದ್ಯಕೀಯ ತರಬೇತಿಯನ್ನು ಪಡೆಯುತ್ತಿದ್ದಾರೆ . ಆದಿತ್ಯ ಎಲ್. ಭಂಡಾರಿಯವರು ಬೆಂಗಳೂರಿನ ಸಿ. ಎಂ.ಆರ್.ಐ ಟಿ ಇಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಥಮ ವರ್ಷದ ಬಿ .ಇ. ವ್ಯಾಸಂಗ ಮಾಡುತ್ತಿದ್ದಾರೆ .

 

ದಂಪತಿಗೆ ಕಚ್ಚೂರು ಶ್ರೀ ನಾಗೇಶ್ವರ ದೇವರು ಆಯುರಾರೋಗ್ಯ ಅಷ್ಟಐಶ್ವರ್ಯವನ್ನು ಕರುಣಿಸಿ ಇನ್ನಷ್ಟು ಸಮಾಜ ಸೇವೆಯನ್ನು ಮಾಡುವಲ್ಲಿ ಅವರನ್ನು ಪ್ರೇರೇಪಿಸಿಕೊಂಡು ಇಡೀ ಸಮಾಜಕ್ಕೆ ಕೀರ್ತಿಯನ್ನು ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಶುಭ ಹಾರೈಸಿಕೊಂಡು ಅಭಿನಂದನೆ ಸಲ್ಲಿಸುತ್ತಿದೆ.

-ಭಂಡಾರಿ ವಾರ್ತೆ

Wednesday 20 October 2021

ಮಿಲಿಟರಿ- ಪೊಲೀಸ್ ಇಲಾಖೆ ಗೌರವಾರ್ಥ ಶಿವಾಸ್ ಸೆಲ್ಯೂಟ್ ಸೆಲೂನ್ ಶುಭಾರಂಭ

 ಮುಂಬಯಿ: ಭಾರತೀಯ ಸಶಸ್ತ್ರ ಪಡೆ ಹಾಗೂ ಪೊಲೀಸ್ ಇಲಾಖೆಗೆ ಸೇರಿದ ಲಾಂಛನಗಳನ್ನೊಂಡ ಅತ್ಯಾಧುನಿಕ ಶೈಲಿಯ ಹೇರ್ ಎಕ್ಸ್ ಪರ್ಟ್ ಡಾ.ಶಿವರಾಮಕೃಷ್ಣ ಭಂಡಾರಿ ಅವರ ಶಿವಾಸ್ ಸೆಲ್ಯೂಟ್ 3ನೇ ಸಿರೀಸ್ ಆಫ್ ಸೆಲೂನ್ ದಸರಾ ಹಬ್ಬದ ಸಂದರ್ಭದಲ್ಲಿ ಉತ್ತರ ಮುಂಬೈನ ಕಾಂಡಿವಲಿ ಪ್ರದೇಶದಲ್ಲಿ ಶುಭಾರಂಭಗೊಂಡಿತು.

ಅತ್ಯಂತ ವಿಶಾಲ ಹಾಗೂ ವಿಸ್ತಾರವಾದ ಸ್ಥಳಾವಕಾಶವನ್ನು ಹೊಂದಿರುವ ಈ ಸೆಲೂನ್ ನ ಗೋಡೆಗಳು ಹಾಗೂ ಶೊಕೇಸ್ ಗಳು ಮಿಲಿಟರಿ ಜೀವನವನ್ನು ಪರಿಚಯಿಸುತ್ತಿದ್ದು, ಪೊಲೀಸ್ ಇಲಾಖೆಯ ಹೆಮ್ಮೆಯ ಚಿಹ್ನೆಗಳನ್ನೂ ಒಳಗೊಂಡಿದೆ. ರಿಬ್ಬನ್ ಕತ್ತರಿಸುವ ಮೂಲಕ ಸೆಲೂನ್ ಉದ್ಘಾಟಿಸಿದ ಡಿಸಿಪಿ ವಿಶಾಲ್ ಠಾಕೂರ್ ಅವರು ಮಾತನಾಡಿ, ದೇಶದ ರಕ್ಷಣಾ ಕ್ಷೇತ್ರಕ್ಕೆ ‌ಸಮರ್ಪಣೆಯಾಗಿರುವ ಈ ಸೆಲೂನ್ ನಮ್ಮ ಹೆಮ್ಮೆಯ ಸಂಕೇತವಾಗಿದೆ ಎಂದು ಶುಭಹಾರೈಸಿದರು.‌ ಮಿಲಿಟರಿ ಹಾಗೂ ಪೊಲೀಸ್ ಪಡೆಗಳಿಗೆ ಸಂಬಂಧಿಸಿದ ಅನೇಕ ವಸ್ತುಗಳು, ಚಿತ್ರಗಳು, ಬ್ಯಾಡ್ಜ್ ಗಳು ಹಾಗೂ ಚಿಹ್ನೆಗಳು ದೇಶ ರಕ್ಷಣಾ ಕ್ಷೇತ್ರವನ್ನು ಪರಿಚಯಿಸುವ ಜತೆಗೆ ಅದರ ಕುರಿತು ಹೆಮ್ಮೆ ಮೂಡುವುದಕ್ಕೆ ಶಿವಾಸ್ ಸೆಲ್ಯೂಟ್ ಪ್ರೇರಣೆ ನೀಡಲಿದೆ ಎಂದರು.


























































ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ, ಸಂಸ್ಥೆಯ ಪ್ರವರ್ತಕ ಡಾ.ಶಿವರಾಮಕೃಷ್ಣ ಭಂಡಾರಿ ಅವರ ಸ್ನೇಹಿತ ಮಧುರ್ ಭಂಡಾರ್ಕಾರ್, ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ವಿಜೇತೆ, ಚಿತ್ರನಟಿ ಆಯೆಷಾ ಐಮಾನ್ ಸಮಾರಂಭದಲ್ಲಿ ಪಾಲ್ಗೊಂಡು ಉತ್ಕೃಷ್ಟ ಗುಣಮಟ್ಟದ ಈ ಸೆಲೂನ್ ಕುರಿತು ಹೆಗ್ಗಳಿಕೆಯ ಮಾತುಗಳನ್ನಾಡಿದರು. ಗಣ್ಯರಾದ ಡಾIಯೋಗೀಶ್ ಲಾಖಾನಿ, ರಾಜೀವ್ ಖಾಂಡೇವಾಲಾ ಹಾಗೂ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ, ಬಾರ್ಕೂರು ಇದರ ಅಧ್ಯಕ್ಷರಾದ ಸುರೇಶ್ ಭಂಡಾರಿ ಕಡಂದಲೆ ಪಾಲ್ಗೊಂಡಿದ್ದರು.

ಫಿಲ್ಮ್ ಮೇಕರ್ ರಾಜೀವ್ ಖಾಂಡೇವಾಲಾ ಅವರು ಹಲವಾರು‌ ಮೂಲಗಳಿಂದ ಸಂಗ್ರಹಿಸಿದ ಹಾಗೂ ವಿನ್ಯಾಸಗೊಳಿಸಿದ ಲಾಂಭನಗಳನ್ನು ಸೆಲ್ಯೂಟ್ ಸೆಲೂನ್ ಒಳಗೊಂಡಿದೆ. ಬಹಳ ಕಾಳಜಿಯಿಂದ ಗೌರವಯುತವಾಗಿ ಅವುಗಳನ್ನು ಕಾಪಾಡುವ ಜವಾಬ್ದಾರಿಯನ್ನೂ ಸಂಸ್ಥೆ ಹೊಂದಿರುತ್ತದೆ. ಸೆಲೂನ್ ನ ಪ್ರವೇಶ ಭಾಗದಲ್ಲಿ ಮಿಲಿಟರಿ ಜೀಪ್ ಹಾಗೂ ಮೋಟಾರ್ ಬೈಕ್, ರೈಫಲ್ ಗನ್ ಮಾದರಿಯ ಮುಖ್ಯ ಬಾಗಿಲಿನ ಹ್ಯಾಂಡಲ್, ಮಿಲಿಟರಿ ಬಾಕ್ಸ್ ಗಳು, ಕಿಟ್ ಗಳು, ಬುಲೆಟ್ ಪ್ಯಾಕೆಟ್, ನೌಕಾಪಡೆಯ  ಡೈವರ್ ಗಳ ಹಳೆಯ ಶೈಲಿಯ ಹೆಲ್ಮೆಟ್ ಗಳು, ವಾಯುಪಡೆಯಲ್ಲಿ ಬಳಸಲ್ಪಡುವ ವಿಮಾನ ಮಾದರಿಗಳು ಸೇರಿದಂತೆ ಹಲವಾರು ಆಸಕ್ತಿದಾಯಕ‌ ವಿನ್ಯಾಸಗಳನ್ನು ಸೆಲೂನ್ ಒಳಗೊಂಡಿದೆ. ಭಾರತೀಯ ರಕ್ಷಣಾ ಪಡೆಯ ನೈಜ ಜೀವನವನ್ನು ನಗರ ಪ್ರದೇಶದ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಶಿವಾಸ್ ಸೆಲ್ಯೂಟ್ ನ ಪ್ರವರ್ತಕ ಡಾ.ಶಿವರಾಮಕೃಷ್ಣ ಭಂಡಾರಿ ಅವರು ಇಂತಹ ಸೆಲೂನನ್ನು ವಿನ್ಯಾಸಗೊಳಿಸಿ ರಕ್ಷಣಾ ಪಡೆಗೆ ಗೌರವ ಸಲ್ಲಿಸಿದ್ದಾರೆ.




ಸೆಲೂನ್ ನ ಗೋಡೆಗಳನ್ನು ಮಿಲಿಟರಿ ಸಿಬಂದಿ ಧರಿಸುವ ಬಟ್ಟೆಯಂತೆ ಹಸಿರು ಹಾಗೂ ಕಂದು ಬಣ್ಣದಿಂದ ವಿನ್ಯಾಸಗೊಳಿಸಲಾಗಿದೆ.

 

ದಶಕಗಳ ಹಿಂದೆ ಕ್ಷೌರಿಕನ ಬದುಕು ಹೇಗಿತ್ತು ಎಂದು ಪರಿಚಯಿಸುವ ನಿಟ್ಟಿನಲ್ಲಿ ಸೆಲೂನ್ ಒಂದು ಶೊಕೇಸ್ ನಲ್ಲಿ ಭಾರವಾದ ಲೋಹಗಳಿಂದ ಮಾಡಲಾದ ಪುರಾತನ ಕ್ಷೌರಿಕ ಉಪಕರಣಗಳನ್ನು ಪ್ರದರ್ಶಿಸಲಾಗಿದೆ. ಆಧುನಿಕ‌ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ‌ ಮಧ್ಯೆ ಹಳೆಯ ಉಪಕರಣಗಳು ಮರೆಯಾಗಿದ್ದು, ಸೆಲೂನ್ ಗಳ ಶೈಲಿಯನ್ನೂ ಬದಲಿಸಿವೆ.

 

ಮುಂಬೈ ಮಹಾನಗರದ ಉದ್ದಗಲಕ್ಕೂ ಶಿವಾಸ್ ಸೆಲೂನ್ ನ 23 ಶಾಖೆಗಳ ವಿಸ್ತರಿಸಿಕೊಂಡಿದ್ದು, ಇದು ಬಾಲಿವುಡ್ ವಲಯದಲ್ಲಿ ದೊಡ್ಡ ಹೆಸರನ್ನೇ ಗಳಿಸಿಕೊಂಡಿದೆ. ಗ್ಲಾಮರ್, ಫ್ಯಾಶನ್, ಟೆಲಿವಿಷನ್ ಹಾಗೂ ಕಾರ್ಪೊರೇಟ್ ವಲಯದ ಗ್ರಾಹಕರನ್ನು ಹೊಂದಿ ಪ್ರತಿಷ್ಠಿತ ಸಂಸ್ಥೆ ಎನಿಸಿಕೊಂಡಿದೆ.

 

ಶಿವ ಅವರು ಅಲ್ಪಸಂಖ್ಯಾತರು ಹಾಗೂ ಬಡ ವರ್ಗಕ್ಕೆ ತನ್ನ ಅಕಾಡೆಮಿಯ ಮೂಲಕ ಉಚಿತವಾಗಿ ಹೇರ್ ಸ್ಟೈಲ್ ಹಾಗೂ ಸೌಂದರ್ಯ ಕ್ಷೇತ್ರದ ತರಬೇತಿಯನ್ನೂ ನೀಡುತ್ತಿದ್ದಾರೆ. ಶಿವಾಸ್ ಸೆಲ್ಯೂಟ್ ನಲ್ಲಿ ಕೇಶ ವಿನ್ಯಾಸಕಾರಿಗೆ ಮಿಲಿಟರಿ ಶೈಲಿಯ ಹೇರ್ ಕಟ್ ಹಾಗೂ ಅವರ ಲುಕ್ ಕಾಣುವಂತೆ ಮಾಡುವ ತರಬೇತಿಯನ್ನು ನೀಡುತ್ತಿದೆ.

 

ಭಾರತೀಯ ರಕ್ಷಣಾ ಪಡೆಯು ದೇಶದ ಗಡಿ ಭಾಗದಲ್ಲಿ 24x7 ಕಾರ್ಯನಿರ್ವಹಿಸಲು ಬದ್ಧವಾಗಿದೆ ಎಂಬುದನ್ನು ನಮ್ಮ ಮುಂದಿನ ಪೀಳಿಗೆಗೆ ನೆನಪಿಸುವ ಜತೆಗೆ ಎಲ್ಲಾ ಪ್ರಕೃತಿ ವಿಪತ್ತುಗಳ ಸಮಯದಲ್ಲಿ ಭಾರತವನ್ನು ರಕ್ಷಿಸಿದೆ ಎಂಬ ಸತ್ಯವನ್ನು ತಿಳಿಸುವ ಪ್ರಯತ್ನವೂ ಶಿವಾಸ್ ಸೆಲ್ಯೂಟ್ ಮೂಲಕ ನಡೆಯುತ್ತಿದೆ ಎಂಬುದನ್ನು ಪ್ರವರ್ತಕ ಡಾ.ಶಿವರಾಮಕೃಷ್ಣ ಭಂಡಾರಿ ತೋರಿಸಿಕೊಟ್ಟಿದ್ದಾರೆ.

ದೇಶಾದ್ಯಂತ ಇನ್ನೂ ಹೆಚ್ಚಿನ ತಮ್ಮ ಸಂಸ್ಥೆಯನ್ನು ಸ್ಥಾಪಿಸಿ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.


-ಭಂಡಾರಿ ವಾರ್ತೆ