BhandaryVarthe Team

BhandaryVarthe Team
Bhandary Varthe Team

Sunday, 17 October 2021

ಜಿಡ್ಡು ಪ್ರವಚನ - ಸಂಬಂಧಗಳಲ್ಲಿ ಗಹನವಾದ ಎಚ್ಚರ ಬೇಕು

 ಧ್ಯಾನ-11

        ಪರಸ್ಪರ ಅಗತ್ಯಗಳನ್ನು ಆಧರಿಸಿದ ಸಂಬಂಧ ಯಾವಾಗಲೂ ಘರ್ಷಣೆಯನ್ನೇ ತರುತ್ತದೆ. ನಾವು ಪರಸ್ಪರ ಎಷ್ಟೇ ಅವಲಂಬಿತರಾಗಿದ್ದರೂ ಒಬ್ಬರನ್ನೊಬ್ಬರು ಯಾವುದೋ ಉದ್ದೇಶಕ್ಕೆ, ಗುರಿಯ ಸಾಧನೆಗೆ ಬಳಸಿಕೊಳ್ಳುತ್ತಿರುತ್ತೇವೆ. ಹೀಗೆ ಬಳಸಿಕೊಳ್ಳುತ್ತಾ ನಮ್ಮ ನಡುವಿನ ಸಂಪರ್ಕ ಕಳೆದು ಹೋಗುತ್ತದೆ. ಪರಸ್ಪರ ಬಳಕೆ ಎಂಬ ತಳಹದಿಯ ಮೇಲೆ ನಿಂತ ಸಮಾಜದಲ್ಲಿ ಹಿಂಸೆ ಬೆಳೆಯುತ್ತದೆ. ನಾವು ಒಬ್ಬರನ್ನೊಬ್ಬರು ಬಳಸಿಕೊಳ್ಳುವಾಗ ನಮಗೆ ಯಾವುದೋ ಗುರಿ ಇರುತ್ತದೆ. ಆ ಗುರಿ ಮಾತ್ರ ಮುಖ್ಯವಾಗುತ್ತದೆ. ಆ ಗುರಿ, ಆ ಲಾಭದ ಕಾರಣದಿಂದಲೇ ನಿಜವಾದ ಸಂಬಂಧ, ಸಂಪರ್ಕ ಸಾಧ್ಯವಾಗುವುದಿಲ್ಲ. ಪರಸ್ಪರ ಬಳಸಿಕೊಳ್ಳುವಾಗ ಎಷ್ಟೇ ಸಮಾಧಾನ, ತೃಪ್ತಿ ಸಿಗುತ್ತದೆ ಎನ್ನಿಸಿದರೂ ಭಯ ಇದ್ದೇ ಇರುತ್ತದೆ. ಈ ಭಯದಿಂದ ತಪ್ಪಿಸಿಕೊಳ್ಳುವುದಕ್ಕೆ ಸ್ವಾಧೀನತೆಯ ಆಸೆ ಬೆಳೆಯುತ್ತದೆ. ಸ್ವಾಧೀನತೆಯ ಆಸೆಯಿಂದ ಅಸೂಯೆ, ಅನುಮಾನ, ನಿರಂತರ ಸಂಘರ್ಷಗಳು ಹುಟ್ಟುತ್ತವೆ. ಇಂಥ ಸಂಬಂಧದಿಂದ ಸುಖ ದೊರೆಯುವುದಿಲ್ಲ.


      ದೈಹಿಕ ಅಥವಾ ಮಾನಸಿಕ ಅಗತ್ಯಗಳನ್ನಷ್ಟೇ ಆಧರಿಸಿ ರಚನೆಗೊಂಡಿರುವ ಸಮಾಜ ವ್ಯವಸ್ಥೆಯಲ್ಲಿ ಸಂಘರ್ಷ, ಗೊಂದಲ, ವೇದನೆಗಳು ಇದ್ದೇ ಇರುತ್ತವೆ. ನೀವು ಇರುವ ಸಮಾಜ ನಿಮ್ಮದೇ ಪ್ರತಿಬಿಂಬ. ನಿಮ್ಮೊಳಗೆ ಇರುವ ಅಗತ್ಯ ಮತ್ತು ಬಳಕೆಯ ಉದ್ದೇಶಗಳೇ ಸಮಾಜದಲ್ಲೂ ಪ್ರತಿಬಿಂಬಗೊಳ್ಳುತ್ತವೆ. ದೈಹಿಕ ಅಥವಾ ಮಾನಸಿಕ ಅಗತ್ಯಕ್ಕಾಗಿ ನೀವು ಮತ್ತೊಬ್ಬರನ್ನು ಬಳಸಿಕೊಳ್ಳುತ್ತಿರುವಾಗ ನಿಜವಾದ ಸಂಬಂಧ ಇರುವುದೇ ಇಲ್ಲ, ಸಂಪರ್ಕ ಇರುವದೇ ಇಲ್ಲ. ಆದ್ದರಿಂದಲೇ ದಿನನಿತ್ಯದ ಬದುಕಿನಲ್ಲಿ ಸಂಬಂಧದ ಮಹತ್ವವನ್ನು ಅರಿಯುವುದು ಮುಖ್ಯ.
      ನಾವು ಅವಲಂಬನೆಯ ಅಗತ್ಯವನ್ನು ಒಪ್ಪಿಕೊಳ್ಳುತ್ತೇವೆ, ಅವಲಂಬನೆ ಅನಿವಾರ್ಯವೆನ್ನುತ್ತೇವೆ. ಆದರೆ ನಮಗೆ ಅವಲಂಬನೆ ಯಾಕೆ ಬೇಕು ಏನ್ನುವ ಪ್ರಶ್ನೆ ಕೇಳಿಕೊಳ್ಳುವುದೇ ಇಲ್ಲ. ನಮ್ಮ ಆಳದಲ್ಲಿರುವ ರಕ್ಷಣೆಯ ಬಯಕೆ, ಶಾಶ್ವತವಾಗಿರುವ ಆಸೆ, ಇವೇ ಅವಲಂಬನೆಗೆ ಕಾರಣವಾಗಿಲ್ಲವೇ? ನಮ್ಮಲ್ಲಿ ಗೊಂದಲವಿದ್ದಾಗ ಯಾರಾದರೂ ನಮ್ಮನ್ನು ಆ ಗೊಂದಲದಿಂದ ಪಾರುಮಾಡಬೇಕೆಂದು ಬಯಸುತ್ತೇವೆ, ಅಂದರೆ, ನಮ್ಮಲ್ಲಿ ಯಾವಾಗಲೂ ನಾವು ಈಗ ಇರುವ ಸ್ಥಿತಿಯಿಂದ ಪಾರಾಗಬೇಕೆಂಬ, ತಪ್ಪಿಸಿಕೊಳ್ಳಬೇಕಂಬ ಆಸೆ ಇರುತ್ತದೆ‌. ಈ ಕಾರಣಗಳಿಂದ ಅವಲಂಬಿತರಾಗುತ್ತೇವೆ, ಅವಲಂಬನೆಗಳೇ ಅಧಿಕಾರದ ಕೇಂದ್ರಗಳಾಗುತ್ತವೆ. ನಮ್ಮ ರಕ್ಷಣೆಗೆ, ನಮ್ಮ ಅಂತರಂಗದ ಸುಖಕ್ಕೆ ಮತ್ತೊಬ್ಬರನ್ನು ಅವಲಂಬಿಸಿದರೆ ಆಗ ಆ ಅವಲಂಬನೆಯಿಂದ ಅಸಂಖ್ಯಾತ ಸಮಸ್ಯೆಗಳು ಹುಟ್ಟುತ್ತವೆ. ಅವು ವ್ಯಾಮೋಹದ ಸಮಸ್ಯೆಗಳು. ಅವನ್ನು ಬಿಡಿಸುವುದರಲ್ಲಿಯೇ ಮುಳುಗಿಬೀಡುತ್ತೇವೆಯೇ ಹೊರತು ವ್ಯಾಮೋಹಕ್ಕೆ ಕಾರಣವಾದ ಅವಲಂಬನೆಯ ಸಮಸ್ಯೆಯನ್ನು ಗಮನಿಸುವುದೇ ಇಲ್ಲ. ಎಲ್ಲ ವಿವೇಕ, ಎಲ್ಲಾ ಎಚ್ಚರದೊಂದಿಗೆ ಅವಲಂಬನೆಯ ಸಮಸ್ಯೆಯನ್ನು ಪರಿಶೀಲಿಸಲು ಸಾಧ್ಯವಾದರೆ ಆಗ ಅವಲಂಬನೆ ಮುಖ್ಯವಲ್ಲವೇ ಅಲ್ಲ, ಅದು ವಾಸ್ತವದಿಂದ ಪಲಾಯನ ಮಾಡುವ ಒಂದು ದಾರಿ, ಅವಲಂಬನೆಗೆ ಬೇರೆ ಬೇರೆ ಕಾರಣ ಇದೆ ಎಂದು ತಿಳಿಯುತ್ತದೆ.
ಅವಲಂಬನೆಯ ಕಾರಣದಿಂದಲೇ ಔದಾಸೀನ್ಯ ಮತ್ತು ವ್ಯಾಮೋಹಗಳ ಚಲನೆ ಆರಂಭಗೊಳ್ಳುತ್ತದೆ. ಅರ್ಥವಾಗದ ಸಂಘರ್ಷ ನಿರಂತರವಾಗಿ ನಡೆಯುತ್ತಿರುತ್ತದೆ. ವ್ಯಾಮೋಹ ಮತ್ತು ಅವಲಂಬನೆಗಳ ಬಗ್ಗೆ ನೀವು ಎಚ್ಚರದ ಅರಿವನ್ನು ಮೂಡಿಸಿಕೊಳ್ಳಬೇಕು. ತಿರಸ್ಕಾರವಿಲ್ಲದೆ, ತೀರ್ಮಾನವಿಲ್ಲದೆ ಕೇವಲ ಎಚ್ಚರವಾಗಿದ್ದಾಗ ಮಾತ್ರ ವೈರುಧ್ಯಗಳ ಸಂಘರ್ಷದ ಮಹತ್ವ ನಿಮಗೆ ತಿಳಿಯುತ್ತದೆ.‌‌....

ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
✍: ವೆಂಕಟೇಶ ಭಂಡಾರಿ ಕುಂದಾಪುರ.

Friday, 15 October 2021

ಅಂತರಾಳ - ಭಾಗ 3

 

ಇಲ್ಲಿವರೆಗೆ.....
ಶಮಿಕಾಳ ಅಪ್ಪ ಯಾರು ಎಂದು ಗೊತ್ತಿಲ್ಲದೇ ಶಮಿಕಾ ತನ್ನ ತಾಯಿ ಭವಾನಿ ಮೇಲೆ ಸಂಶಯ ಬಂದು ಅವಳು ಇಲ್ಲದ ಸಮಯದಲ್ಲಿ ಡೈರಿ ತೆಗೆದು ಓದುತ್ತಾಳೆ... ಭವಾನಿ ಎಳೆಯ ವಯಸ್ಸಿನಲ್ಲೇ ಆಕಸ್ಮಿಕವಾಗಿ ಅಪ್ಪನನ್ನು ಕಳೆದುಕೊಂಡು ತನ್ನ ತಾಯಿ ಜೊತೆ ಮಾವನ ಮನೆಯಲ್ಲಿ ಇರಬೇಕಾಗುತ್ತದೆ... ಪ್ರಾಥಮಿಕ ಶಿಕ್ಷಣ ಮುಗಿಸಿ ಮುಖ್ಯೋಪಾಧ್ಯಾಯರ ಸಹಾಯದಿಂದ ಉಡುಪಿಗೆ ಬಂದು ಕಾಲೇಜು ಮುಗಿಸಿ ಅಲ್ಲೇ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.....

ಅಂತರಾಳ  - ಭಾಗ 3

ನನಗೆ ತುಂಬಾ ಕನಸಿತ್ತು. ಕಷ್ಟ ಪಟ್ಟು ಒಂದು ವರ್ಷ ದುಡಿದು ಸಂಬಳದ ಹಣ ಉಳಿತಾಯ ಮಾಡಬೇಕು. ಸಣ್ಣ ಮನೆ ಬಾಡಿಗೆಗೆ ಪಡೆದು ಅಮ್ಮನನ್ನು ಮಾವನ ಮನೆಯಿಂದ ಕರೆ ತಂದು ನಾವಿಬ್ಬರೂ ಜೊತೆಯಲ್ಲಿಯೇ ಇರಬೇಕು. ಮಾವನ ಮನೆಯಲ್ಲಿ ಅಮ್ಮ ಜೀತದಾಳಿಗಿಂತ ಕಡೆಯಾಗಿ ಹೋಗಿದ್ದರು. ಅಮ್ಮನನ್ನು ಚೆನ್ನಾಗಿ ಆರೈಕೆ ಮಾಡಬೇಕು. ಒಳ್ಳೆಯ ಆಹಾರ ಹಣ್ಣು ನೀಡಬೇಕು ಎಂದು ದಿನಾಲು ಕನಸು ಕಾಣುತ್ತಿದ್ದೆ.ನಮ್ಮ ಗ್ರಂಥಾಲಯಕ್ಕೆ ತುಂಬಾ ಜನ ಓದುಗರು ಬರುತ್ತಿದ್ದರು. ನನ್ನನು ತುಂಬಾ ಗೌರವದಿಂದಲೇ ಕಾಣುತ್ತಿದ್ದರು. 7 ಗಂಟೆಯವರೆಗೆ ಗ್ರಂಥಾಲಯ ಇರುವುದರಿಂದ ಕೆಲವೊಂದು ಸಮಯ ಬೇಗನೇ ಕತ್ತಲಾಗುತ್ತಿತ್ತು.ಗ್ರಂಥಾಲಯದಿಂದ ಹಾಸ್ಟೆಲ್ ಗೆ 5 ರಿಂದ 10 ನಿಮಿಷದ ದೂರ ಇತ್ತು. ಆಗ ದಾರಿಯಲ್ಲಿ ಹೆಚ್ಚು ಮನೆ , ಅಂಗಡಿಗಳು ಇರಲಿಲ್ಲ. ನಾನು ಭಯದಿಂದಲೇ ಬೇಗ ಬೇಗನೇ ಹೆಜ್ಜೆ ಹಾಕಿ ಹಾಸ್ಟೆಲ್ ತಲುಪುತ್ತಿದ್ದೆ.ಕೆಲಸಕ್ಕೆ ಸೇರಿ 6 ತಿಂಗಳು ಕಳೆಯಿತು. ಮುಖ್ಯೋಪಾದ್ಯಾಯಿನಿಯವರ ಕಾಗದ ಬಂತು. "ನಿನ್ನ ಮಾವನಿಗೆ ಹೇಳಿ ಒಪ್ಪಿಸಿದ್ದೇನೆ. ನಿನ್ನ ರಿಸಲ್ಟ್ ಬಗ್ಗೆಯೂ ಹೇಳಿದ್ದೇನೆ. ಒಮ್ಮೆ ಮನೆಗೆ ಬಂದು ಅಮ್ಮನಲ್ಲಿ ಮಾವನಲ್ಲಿ ಮಾತನಾಡಿಕೊಂಡು ಹೋಗು ಎಂದು ಬರೆದಿದ್ದರು. ಹಾಗೇನೇ ಒಂದು ಶನಿವಾರ ಮನೆಗೆ ಹೊರಟೆ. ಮನೆಗೆ ಹೋಗುವಾಗ ಅತ್ತೆಗೆ, ಅಮ್ಮನಿಗೆ ಒಂದೊಂದು ಸೀರೆ, ಮಾವನ ಸಣ್ಣ ಮಗುವಿಗೆ ಬಟ್ಟೆ ಸಿಹಿ ತಿಂಡಿ ತೆಗೆದುಕೊಂಡು ಹೋಗಿದ್ದೆ.



ಅಮ್ಮ ಮೊದಲಿಗಿಂತ ಈಗ ಸ್ವಲ್ಪ ಚೆನ್ನಾಗಿದ್ದರು. ಮುಖದಲ್ಲಿ ಸಂತೋಷ ಕಾಣುತಿತ್ತು.......ಅತ್ತೆಗೂ ಖುಷಿಯಾಯಿತು.ಮಾವ ಮಾತ್ರ ರಾತ್ರಿ ಊಟಕ್ಕಿಂತ ಮುಂಚೆ ಒಂದು ಗಂಟೆ ನಿರಂತರ ಮಾತನಾಡಿದರು.
"ಕೆಲಸ ಸಿಕ್ಕಿತು ಎಂದು ಜಂಬ , ಅಹಂಕಾರ ಬೇಡ, ಸಿಕ್ಕಿದವರ ಜೊತೆ ತಿರುಗಾಡಬೇಡ.ನೀನು ಏನಾದರೂ ಎಡವಟ್ಟು ಮಾಡಿಕೊಂಡರೆ ನನ್ನ ಮರ್ಯಾದೆ ಹೋಗುತ್ತದೆ. ಹೇಗೋ ನಿನ್ನ ಅಪ್ಪ ತೀರಿಕೊಂಡಿದ್ದಾನೆ. ನನಗೆ ಶಾಲೆ ಕಾಲೇಜು ಇಷ್ಟವಿರಲಿಲ್ಲ ಮನೆಯಲ್ಲಿ ಕೆಲಸವೂ ಇದೆ. ಅನ್ನವೂ ಇದೆ. ಕೆಲಸ ಮಾಡಿ ಆರಾಮವಾಗಿ ಇರಬಹುದಿತ್ತು. ನಿನ್ನ ಮುಖ್ಯೋಪಾಧ್ಯಾಯಿನಿ ನಿನ್ನ ತಲೆ ಕೆಡಿಸಿದಳು. ಕಾಲೇಜು ಕಲಿಯಲು ಹೋಗಿ ಈಗ ಅಲ್ಲೇ ಕೆಲಸ ಕೂಡ ಸಿಕ್ಕಿದೆ. ಈಗಂತೂ ನಿನ್ನನ್ನು ಕೇಳುವವರೇ ಇಲ್ಲ. ನಿನ್ನ ತಲೆಯಲ್ಲಿ ಅಲ್ಲೇ ಮನೆ ಮಾಡಿ ತಾಯಿಯನ್ನು ಕರೆದುಕೊಂಡು ಹೋಗುತ್ತೇನೆ ಎಂದು ಎನಿಸಿದ್ದರೆ ಅದನ್ನು ಬಿಟ್ಟು ಬಿಡು. ನಿಮ್ಮನ್ನು ಇಲ್ಲಿಯವರೆಗೆ ಸಾಕಿದ್ದು ನಾನು! ನಿನ್ನ ಅಮ್ಮ ಹೋದರೆ ಇಲ್ಲಿ ಗದ್ದೆ ಕೆಲಸ ಮಾಡುವವರು ಯಾರು? ಹೆಚ್ಚು ಹಾರಾಡಬೇಡ" ಇನ್ನು ಏನೇನೊ ಅಸಂಬದ್ಧ ಮಾತುಗಳನ್ನಾಡಿ ನನ್ನನ್ನು ಅಮ್ಮನನ್ನು ತೀರಿಕೊಂಡ ಅಪ್ಪನನ್ನೂ ಸೇರಿಸಿ ಹೀನಾಯವಾಗಿ ಬೈದು ಹೆಣ್ಣು ಕುಲಕ್ಕೆ ಹೆಚ್ಚು ಸ್ವಾತಂತ್ರ್ಯ ಕೊಡಬಾರದು ಎಂಬಂತೆ ಮಾತನಾಡಿದರು. ನನಗಂತೂ ಯಾಕೆ ಇಲ್ಲಿಗೆ ಬಂದೆ ಎಂದೆನಿಸಿತು. ರಾತ್ರಿಯಂತೂ ಅಮ್ಮ ನನ್ನನ್ನು ತಬ್ಬಿಕೊಂಡೆ ಮಲಗಿದರು. ಅಮ್ಮನಿಗೆ ಮಾತ್ರ ಕೇಳುವಂತೆ "ಅಮ್ಮ ನೀನು ಹೆದರಬೇಡ ಸ್ವಲ್ಪ ಸಮಯ ಸಹಿಸಿಕೊಳ್ಳಿ ನಾನು ಖಂಡಿತ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ. ನಾವು ಖುಷಿಯಾಗಿ ಇರೋಣ ಅಮ್ಮ" ಎಂದು ಸಂತೈಸಿದೆ.
ಮರುದಿನ ಸಂಜೆ ಹೊರಟೆ. ಹೀಗೆಯೇ ಕೆಲಸ ಸಾಗುತ್ತಿತ್ತು. ಗ್ರಂಥಾಲಯದ ನಿರಂತರ ಓದಿನಿಂದ ನನ್ನ ಬುದ್ಧಿ ಮಟ್ಟವು ಹೆಚ್ಚಿತು. ಕುವೆಂಪು, ಶಿವರಾಮ ಕಾರಂತ, ದ.ರಾ.ಬೇಂದ್ರೆ,ಅ.ನ.ಕೃ, ಮಾಸ್ತಿ ಇಂತಹ ಲೇಖಕರ ಕಥೆ ಕಾದಂಬರಿಗಳು, ಕವನ ಸಂಕಲನಗಳು ನನ್ನನ್ನು ಜಾಗೃತಗೊಳಿಸುತ್ತಿತ್ತು. ಕೆಲಸಕ್ಕೆ ಸೇರಿ 1
ವರ್ಷಕ್ಕೆ 5 ದಿನಗಳು ಬಾಕಿ ಇತ್ತು. ದಿನಾ ಲೆಕ್ಕ ಹಾಕುತ್ತಿದ್ದೆ. ಸಂಬಳವನ್ನು ಲೆಕ್ಕದಲ್ಲಿ ಖರ್ಚು ಮಾಡುತ್ತಿದ್ದೆ. ಆ ದಿನ ಸಂಜೆ 7 ಗಂಟೆಗೆ ಗ್ರಂಥಾಲಯದ ಬಾಗಿಲು ಹಾಕಿ 10 ಹೆಜ್ಜೆ ಇಟ್ಟಿರಬಹುದು.ಜಿಟಿ ಜಿಟಿ ಮಳೆ ಬರುತ್ತಿತ್ತು. ಯಾರೋ ಮೂರು ಜನ ಮುಸುಕುಧಾರಿಗಳು ಒಮ್ಮೆಲೇ ಬಂದು ನನ್ನನ್ನು ಎಳೆದುಕೊಂಡು ಪೊದರಿನಾಚೆ ತಂದರು. ಒಬ್ಬ ನನ್ನ ಬಾಯಿಗೆ ಬಟ್ಟೆ ತುರುಕಿದ. ನನಗೆ ಏನು ಆಗುತ್ತಿದೆ ಎಂದು ಯೋಚನೆ ಮಾಡುವಷ್ಟರಲ್ಲಿ ನನ್ನನ್ನು ದೂಡಿ ಒಳ ಉಡುಪನ್ನು ಕಿತ್ತು ಹರಿದು ದೈಹಿಕ ವಾಂಛೆಯನ್ನು ಒಬ್ಬರ ನಂತರ ಒಬ್ಬರಂತೆ ತೀರಿಸಿಕೊಂಡು ಕತ್ತಲಲ್ಲಿ ಕಣ್ಮರೆಯಾದರು.ಬರೀ 5 ರಿಂದ 7 ನಿಮಿಷಗಳ ಒಳಗೆ ಇಷ್ಟೆಲ್ಲಾ ನಡೆದು ಹೋಗಿತ್ತು. ನನ್ನ ದೇಹವೆಲ್ಲಾ ಅವರ ಕೊಳಕಿನಿಂದ ವಾಸನೆ ಬರುತ್ತಿತ್ತು. ಅದಕ್ಕಿಂತ ಹೆಚ್ಚು ನನ್ನ ಮನಸ್ಸಿಗೆ ಹೇಳಲಾಗದ, ವಿವರಿಸಲಾಗದ, ತುಮುಲ, ಕೋಪ, ನೋವು, ಸೇಡು ಏನೇನೋ ಅನ್ನಿಸಿತು. ಅಲ್ಲಿಂದ ಏಳಲು ಸಾಧ್ಯವಾಗಲಿಲ್ಲ. ಒತ್ತಿ ಬರುತ್ತಿದ್ದ ದುಃಖವನ್ನು ಸಹಿಸಿಕೊಂಡು ಎದ್ದೆ. ಎದ್ದು ಎಲ್ಲೆಂದರಲ್ಲಿ ಬಿದ್ದಿದ್ದ ಉಡುಪನ್ನು ತೊಟ್ಟು , ಹರಿದ ರವಕೆಯ ಮೇಲೆ ಸೆರಗನ್ನು ಮೈ ತುಂಬಾ ಮುಚ್ಚಿಕೊಂಡು ಕುಂಟುತ್ತಾ ಹಾಸ್ಟೆಲ್ ಗೆ ಬಂದೆ. ಹಾಸ್ಟೆಲ್ ನಲ್ಲಿರುವ ಎಲ್ಲರೂ ಯಾಕೆ? ಏನಾಯಿತು? ಬಿದ್ದೀರಾ? ಕೆಸರು ಆಗಿದೆ ಎಂದು ವಿಚಾರಿಸಿದರು.
ನನಗೆ ಎಲ್ಲವನ್ನೂ ಹೇಳುವ ಧೈರ್ಯ ಸಹನೆ ಇರಲಿಲ್ಲ. ಕಾಲು ಜಾರಿ ಬಿದ್ದೆ ಎಂದಷ್ಟೇ ಹೇಳಿ ಹೋಗಿ ಮಲೀನವಾದ ವಾಸನೆ ಬರುತ್ತಿದ್ದ ನನ್ನ ದೇಹ ತೊಳೆದು, ಸ್ನಾನ ಮಾಡಿ ಬಂದು ಮಲಗಿದೆ. ಊಟ ಮಾಡಲು ಹಸಿವೆಯೇ ಹೋಗಿತ್ತು. ನನ್ನ ದೇಹ, ಮನಸ್ಸು ಮಲೀನವಾಗಿದ್ದಕ್ಕೆ ಎನೋ ಎಂಬಂತೆ ನಿದ್ರಾ ದೇವಿ ನನ್ನ ಹತ್ತಿರ ಸುಳಿಯುತ್ತಿರಲಿಲ್ಲ.ಕಣ್ಣು ಮುಚ್ಚಿದರೂ ಕಣ್ಣು ತೆರೆದರೂ ಆ ದೃಶ್ಯವೇ ಕಾಣುತ್ತಿತ್ತು..... ಎದೆಯಲ್ಲಿ ಅವ್ಯಕ್ತವಾದ ಭಯವಾಗುತ್ತಿತ್ತು .....ಯಾರಲ್ಲಿ ಹೇಳುವುದು? ......ಏನೆಂದು ಹೇಳುವುದು?...... ಇಂತಹ ಸ್ಥಿತಿ ಯಾವ ಹೆಣ್ಣಿಗೂ ಬರಬಾರದು...........ಗಂಡಿನ ಬಗ್ಗೆ ಮಧುರ ಪ್ರೇಮ, ಪ್ರೀತಿ ಬಗ್ಗೆ ಇತ್ತೀಚಿಗೆ ಕಥೆ ಕಾದಂಬರಿಯಲ್ಲಿ ಓದಿ ಮನಸ್ಸು ಗರಿಗೆದರಿತ್ತು. ದೇಹ ರೋಮಾಂಚನವಾಗುತ್ತಿತ್ತು. ನರ ನಾಡಿಗಳು ನಲಿಯುತ್ತಿತ್ತು. ಆದರೆ ಇಂದು ಇದೇನಾಯ್ತು? ......ಯಾಕೆ ಹೀಗಾಯ್ತು?...... ನಾನೇನು ತಪ್ಪು ಮಾಡಿದೆ? ಜಾತಿ, ಧರ್ಮ, ದೇವರು, ಲಿಂಗ, ಶ್ರೀಮಂತ, ಬಡವ ಹೀಗೆಲ್ಲಾ ಅಸಮಾನತೆಯನ್ನು ಈ ಜನರು ಇಷ್ಟು ಪಾಲಿಸುವಾಗ ಅಸಾಯಕ ಹೆಣ್ಣೊಬ್ಬಳು ಸಿಕ್ಕಿದರೆ ಅವರ ದೈಹಿಕ ತೀಟೆಯನ್ನು ತೀರಿಸಿಕೊಳ್ಳುವರೇ? ......ಪ್ರಕೃತಿ ಎಲ್ಲರಿಗೂ ಎಲ್ಲವನ್ನೂ ನೀಡಿದೆ. ಆದರೆ ಬಲಾತ್ಕಾರವಾಗಿ ಕಬಳಿಸುವುದು ಸರಿಯೇ?...... ಗಂಡಿನ ಸುಖ ಮಾತ್ರ ಮುಖ್ಯವೇ? .......ಹೆಣ್ಣು ಅಷ್ಟೊಂದು ಅಬಲೆಯೇ?.....

 


ಹೆಣ್ಣು ಸರಿ ಇದ್ದರೆ ಅತ್ಯಾಚಾರ ಆಗುವುದಿಲ್ಲ ಎನ್ನುತ್ತಾರೆ.....ಅವಳ ಉಡುಪು ನೋಡಿ ಗಂಡು ಅತ್ಯಾಚಾರ ಮಾಡುವುದು ಎಂದು ಹೇಳುತ್ತಾರೆ... ನಾನು ಯಾವ ತಪ್ಪು ಮಾಡಿಲ್ಲ... ಅಶ್ಲೀಲ ಎನಿಸಿ ಕೊಳ್ಳುವ ಉಡುಪು ಧರಿಸಿಲ್ಲ.... ಹಾಗಾದರೆ ಯಾಕೆ ಹೀಗಾಯಿತು............... ನಾನು ಈಗ ಯಾರಲ್ಲಿ ಹೇಳುವುದು?........ಹೇಳಿದರೆ ಎಲ್ಲರೂ ನಿನ್ನದೇ ತಪ್ಪು ಎನ್ನುವರು.... ಅಷ್ಟು ಕತ್ತಲೆಗೆ ನೀನು ಒಬ್ಬಳೇ ಬರಬಾರದಿತ್ತು ಎನ್ನುವರು....... ಕೆಲವರು ಹಿಂದಿನಿಂದ ತಮಾಷೆ ಮಾಡುವರು......ಕೆಲವು ಜನರು ನನ್ನ ಮುಂದೆಯೇ ಹೀಯಾಳಿಸುವರು......ನನ್ನ ಮಾವನಿಗೆ ತಿಳಿದರೆ ನನ್ನನು ಸಾಯಿಸುವರು........ಅಮ್ಮನ ಸ್ಥಿತಿ ಹೇಳ ತೀರದು..........
ನಾನು ಯಾರಲ್ಲೂ ಸಲುಗೆಯಿಂದ ಮಾತನಾಡಿಲ್ಲ.... ನಾನು ನನ್ನ ಕೆಲಸ ಎಂಬಂತೆ ಇರುತ್ತಿದ್ದೆ......ಆದರೆ ಮಾವ ಊರಿನವರು , ಸಮಾಜದ ಜನ ನಂಬುತ್ತಾರಾ? ........ ಹೀಗೆನೇ ಯೋಚನೆಗಳು ಬರುತ್ತಿತ್ತು.. ಬೆಳಗ್ಗಿನ ಜಾವ ಸ್ವಲ್ಪ ನಿದ್ದೆ ಬಂತು. 7 ಗಂಟೆಗೆ ಎಚ್ಚರವಾದಾಗ ಮೈಯಿಡೀ ನೋಯುತ್ತಿತ್ತು. ಜ್ವರ ಬರುತ್ತಿತ್ತು. ವಾರ್ಡನ್ ಬಂದು ಚಹಾ ಕೊಟ್ಟು ಜ್ವರದ ಮಾತ್ರೆ ಕುಡಿಸಿದರು.ಇವರಲ್ಲಿ ಹೇಳೋಣವೇ ಎಂದು ಯೋಚಿಸಿದೆ. ಏನೆಂದು ಹೇಳುವುದು? ಯಾರು ಎಂದು ಕೇಳಿದರೆ? ಮಾತೇ ಹೊರಡಲಿಲ್ಲ.....ಕೆಲಸಕ್ಕೆ ಹೋಗದೆ ದಿನವಿಡೀ ಯೋಚಿಸಿದೆ." .....ಕೆಲಸ ಬಿಟ್ಟು ಊರಿಗೆ ಹೋಗಿ ಮಾವನ ಪೆಟ್ಟು ಬೈಗುಳನ್ನು ತಿಂದು ಬದುಕೋಣವೇ?........ನೇಣು ಹಾಕಿಕೊಂಡು ಸಾಯುವುದ? ...... ವಿಷ ಕುಡಿಯಬೇಕಾ?...... ಪತ್ರ ಬರೆದು ಸಾಯಬೇಕಾ? .......ಹಾಸ್ಟೆಲ್ ನಲ್ಲಿ ಸಾಯುವುದ/ ಗ್ರಂಥಾಲಯದಲ್ಲಿ ಸಾಯುವುದ?..... ಹಾಸ್ಟೆಲ್ ನಲ್ಲಿ ಸತ್ತರೆ ವಾರ್ಡನ್ ಗೆ ಕಷ್ಟ ಆಗುವುದಿಲ್ಲವೇ? ......ಎಲ್ಲಿ ಸತ್ತರೂ ನನಗೆ ಸಹಾಯ ಮಾಡಿದವರನ್ನು ಪೋಲಿಸರು ವಿಚಾರಿಸುತ್ತಾರೆ....ನಾನು ಸತ್ತರೂ ಜನ ಬೇರೇನೋ ಹೇಳುವರು....... ನನ್ನ ನಿಜವಾದ ಸ್ಥಿತಿ ಯಾರಿಗೆ ಅರ್ಥವಾಗುತ್ತದೆ?.............................. ಇಲ್ಲ ನಾನು ಸಾಯುವುದೇ ಇದಕ್ಕೆ ಪರಿಹಾರ.........

(ಮುಂದುವರಿಯುವುದು)

✍️ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ




''ಒಮ್ಮೆ ಕ್ಷಮಿಸಿ ಬಿಡು'' - ಎ.ಆರ್.ಭಂಡಾರಿ ವಿಟ್ಲ.

 

ಕಥೆ - 9

''ಒಮ್ಮೆ ಕ್ಷಮಿಸಿ ಬಿಡು''

ಯಾಕೋ ಮತ್ತು ಅವಳದೇ ನೆನಪು. ಕಣ್ಮುಚ್ಚಿದರೂ ಅದೇ ಗಾಂಭೀರ್ಯದ ಮೊಗ. ನಿದ್ದೆ ಬಳಿಯಲ್ಲಿ ಸುಳಿಯಲೊಲ್ಲದು.ಹಾಗೆಯೇ ಕಣ್ಮುಚ್ಚಿದಾಗ ನೆನಪುಗಳು ಸುರುಳಿಯಂತೆ ಬಿಚ್ಚಿಕೊಳ್ಳುತ್ತವೆ. ಅವಳನ್ನು ನೋಡಿದ್ದಾದರೂ ಎಂದು? ಅಪರೂಪಕೊಮ್ಮೆ ನಗು ಕಾಣುವ ಮೊಗ. ಅದ್ಯಾಕೋ ತುಟಿಗಳೆರಡನ್ನು ಬಿಗಿ ಹಿಡಿವಳೋ ಗೊತ್ತಿಲ್ಲ. ನನ್ನ ಪಾಲಿಗೆ ಅವಳು ಜಂಬದ ಹುಡುಗಿ, ಅಹಂಕಾರಿ. ಹಾಗಾದರೆ ನಾನು‌ ಆಕೆಗೆ ಸೋತಿದ್ದಾದರೂ ಯಾಕೆ?





ಒಂದೇ ಸಂಸ್ಥೆಯಲ್ಲಿ ದುಡಿಯುತ್ತಿದ್ದ ನನ್ನ ಪತ್ನಿಗೆ ಗೆಳತಿ ಅವಳು. ವಯಸ್ಸಿನಲ್ಲಿ ಅವಳಿಗಿಂತ ಕಿರಿಯಳು. ನಾನೋ ಮೂವತ್ತೆರಡರ ಹೊಸ್ತಿಲಲ್ಲಿರುವ ಒಂದು ಮಗುವಿನ ತಂದೆ. ಇನ್ನೂ ಇಪ್ಪತ್ತರ ಗಡಿಯಲ್ಲಿರುವ ಅವಳು ನನ್ನ ನಿದ್ದೆಗೆಡಿಸಿದಾದರೂ ಯಾಕೆ?
ದಿನಕಳೆದಂತೆ ನಾನೂ ಆಕೆಗೆ ಆತ್ಮೀಯನಾದೆ. ಮೊದಮೊದಲು ವಿಶ್ ಮಾತ್ರ ಮಾತನಾಡುತ್ತಿದ್ದ ಅವಳು ನನ್ನೊಡನೆ ಜಗಳ ಕಾಯುವಷ್ಟು ಆಪ್ತಳಾದಳು.ಆದರೂ ಅವಳ ಮೊಗದ ಹಿಂದಿರುವ ಗಾಂಭೀರ್ಯತೆ ಕಾರಣವೂ ತಿಳಿಯಲಿಲ್ಲ. ತತ್ಪರಿಣಾಮ ನನ್ನ ಪಾಲಿಗೆ ಅಹಂಕಾರದ ಹೆಣ್ಣಾಗಿ ಉಳಿದಳು.


ದಿನಗಳು ಕಳೆದಂತೆ ಅವಳ ಮೊಬೈಲ್ ನಂಬರ್ ನನ್ನ ಮೊಬೈಲ್ ನೊಳಗಿತ್ತು. ನನ್ನ ಪತ್ನಿ cell ನಿಂದ ಅದನ್ನು ತೆಗೆದುಕೊಂಡಿದ್ದೆ. ಆಗಾಗ missed-call ಮಾತ್ರ ಕೊಟ್ಟು ಸುಮ್ಮನಿರುತ್ತಿದ್ದೆ. ಮೊದ ಮೊದಲು ನನ್ನ ನಂಬರ್ ಎಂದು ಆಕೆಗೆ ತಿಳಿದಿರಲಿಲ್ಲ.ತಿಳಿದ ಮೇಲೆ ಮೆಸೇಜ್ ಕಳಿಸಲು ಆರಂಭಿಸಿದಳು. ಎಂದೂ ಅದರಲ್ಲಿ ಒಲವು ಮಾತ್ರ ನನಗೆ ಕಾಣಿಸಲಿಲ್ಲ. ಆದರೆ ಆಕೆ ನನಗೆ ಬೇಕೇ ಬೇಕಿತ್ತು. ಹೊರಗಿನ ಗಾಂಭೀರ್ಯ ಸುಳ್ಳಾಗಿರಬಹುದು ಎಂದು ಭಾವಿಸಿದೆ. ಅವಳನ್ನು ಅರಿಯುವ ಪ್ರಯತ್ನ ನಡೆಸಿದೆ.ಒಟ್ಟಿನಲ್ಲಿ ಆಕೆ ನನ್ನ ಪರೀಕ್ಷಾ ವಸ್ತುವಾಗಿದ್ದಳು. ಇದರ ಅರಿವಿಲ್ಲದೇ ಆಕೆ ನನ್ನೊಂದಿಗೆ ಎಂದಿನಂತೆ ಇದ್ದಳು. ಆದರೆ ನನ್ನ ಭಾವನೆಗಳು ಬದಲಾಗುತ್ತಾ ಸಾಗಿದವು. ಆಕೆಯನ್ನು ಸೋಲಿಸಬೇಕು ಅಹಂಕಾರವನ್ನುಇಳಿಸಬೇಕೆಂಬ ನನ್ನಲ್ಲಿದ್ದ ಕಿಚ್ಚು ಒಲವಾಗಿ ಮಾರ್ಪಾಡಾಗಿತ್ತು.ಆಕೆಯಲ್ಲಿದ್ದ ಗಾಂಭೀರ್ಯ ಅಹಂಕಾರ ವಾಗಿರಲಿಲ್ಲ. ತುಂಬುಗೆನ್ನೆಗಳು ಆಕೆಗೆ ಗಾಂಭೀರ್ಯತೆಯನ್ನು ತಂದುಕೊಟ್ಟಿದ್ದವು. ತುಸುವೇ ವಕ್ರವಾಗಿದ್ದ ಹಲ್ಲನ್ನು ಕಂಡು ಆಕೆಯ ಗೆಳತಿಯರು ರೇಗಿಸುತ್ತಿದ್ದರೆಂದು ತುಟಿ ಬಿಗಿ‌ ಹಿಡಿದಿದ್ದಳು. ಮನಸ್ಸು ಅಪ್ಪಟ ಮಗುವಿನದಾಗಿತ್ತು.ಪರೀಕ್ಷಾ ದೃಷ್ಟಿಯಿಂದ ನಾನವಳಿಗೆ " I Love you " ಎಂದರೂ, ಅದು ನನ್ನ ಮನದಿಂಗಿತವೆ ಆಗಿತ್ತು. ಆದರಾಕೆ ಸಿಡಿದು ಬಿದ್ದಿದ್ದಳು.


ಮೊದಮೊದಲು ರೇಗುತ್ತಿದ್ದ ಹುಡುಗಿ ನನ್ನನ್ನೇ ಬದಲಾಯಿಸುವ ಪ್ರಯತ್ನ ಮಾಡಿದಳು. ಅವಳು ನನ್ನ ಪ್ರೀತಿಸುತ್ತಿದ್ದಾಳೆ ಭ್ರಮೆಯಲ್ಲಿ ನನ್ನ ತಪ್ಪಿನ ಅರಿವಾಗ ತೊಡಗಿತ್ತು.ಆದರೆ ಆಕೆ ನನ್ನ ತಪ್ಪಿನ ಅರಿವು ಮೂಡಿಸುವ ಪ್ರಯತ್ನದಲ್ಲಿದ್ದಳು. ಅದೊಂದು‌ ದಿನ ನನ್ನ ತಪ್ಪಿಗೆ ಕ್ಷಮೆ ಕೇಳಿ ನಿಜಾಂಶವನ್ನು ಬಾಯಿ ಬಿಟ್ಟಾಗ ಆಕೆ ತನ್ನ ನಾಟಕವನ್ನು ತಿಳಿಸಿ,ನನ್ನನ್ನು ಜರೆದು ಬರೆದಿದ್ದ ಪತ್ರವನ್ನು ಫೋನಿನಲ್ಲೇ ಓದಿದಳು. ಆದರೆ ನಾನು ಆಕೆಗಾಗಿ ಹಂಬಲಿಸುತ್ತಲೇ ಇದ್ದೆ. ನಿಜಾಂಶವನ್ನು ತಿಳಿಸಿದಾಗ 'ಮತ್ತೆ ಪರೀಕ್ಷೆನಾ' ಎದು ನಕ್ಕುಬಿಟ್ಟಳವಳು. ಆದರೆ ನಾನು ಛಲಬಿಡದ ವಿಕ್ರಮನಂತೆ ಅವಳ ಕಾಡತೊಡಗಿದೆ. ನನ್ನ ಹಟಕ್ಕೆ ಒಂದು ಕ್ಷಣ ಕರಗಿದರೂ ವಾಸ್ತವಾಂಶಕ್ಕೆ ಎಚ್ಚೆತ್ತುಕೊಳ್ಳ ತೊಡಗಿದಳು. ಆದರೆ ನನಗೆ ಆಕೆಯನ್ನು ಪಡೆದೇ ತೀರಬೇಕಿತ್ತು. ಮಡದಿಗೆ,ನನ್ನ ಮೇಲೆ ಸಂಶಯ. ಆದರೆ 'ಸ್ನೇಹಿತೆ'ಯ ಮುಗ್ಧ ಪ್ರೀತಿ ಅವಳಿಗೆ ನಂಬಿಕೆಯನ್ನು ಕೊಟ್ಟಿತ್ತು.
‌‌‌‌‌ ವರುಷಗಳೇ ಉರುಳಿತು‌.ಒಂದು ದಿನ ನನ್ನ ಮನೆಗೆ ಅವಳನ್ನು ಆಹ್ವಾನಿಸಿದ್ದೆ. ಬರಲೊಪ್ಪದವಳನ್ನು ಕರೆತರಬೇಕೆಂದು ಮನ ಹಠ ಹಿಡಿದಿತ್ತು‌.ಮನೆಯಿಂದ ಏನೋ ನೆಪ ಹೇಳಿ ಕಾರನ್ನೇರಿ ಹೊರಟಿದ್ದೆ. ಆದರೆ ನನ್ನ ಮಾತಿಗೆ ಬೆಲೆ ಇತ್ತು,ಸ್ನೇಹಿತೆಯ ಆತ್ಮೀಯ ಆಹ್ವಾನಕ್ಕೆ ಅವಳು ನನ್ನ ಮನೆಯ ದಾರಿ ಹಿಡಿದಿದ್ದಳು. ಇನ್ನೊಬ್ಬರಿಗೆ ನೋವನ್ನುಂಟು ಮಾಡಬಾರದೆಂಬ ಅವಳ ಮನಸ್ಥಿತಿ ಅವಳಿಗೆಯೇ ಶಾಪವಾಗಿತ್ತು.ಅದು ನನಗೆ ವರವಾಗಿತ್ತು, ನನ್ನ ಗೆಲುವಾಗಿತ್ತು. ಅನುಮಾನ ಬಾರದೆಂಬ ಕಾರಣಕ್ಕೆ ನಾನು ಪೇಟೆಯತ್ತ ಸಾಗಿದೆ‌. ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಮನೆಯತ್ತ ಅವಸರವಾಗಿಯೇ ಉತ್ಸಾಹದಿಂದ ಹೊರಟೆ. ನನ್ನ ಮಗುವಿನೊಂದಿಗೆ ಮಗುವಾಗಿ ಬೆರೆತು ಆಟವಾಡುತ್ತಿದ್ದಳವಳು.ಆತಿಥ್ಯ ಸ್ವೀಕರಿಸಿ ಮನೆಗೆ ಹೊರಟು ನಿಂತವಳನ್ನು ಕರೆದುಕೊಂಡು ಹೋಗಬೇಕೆಂಬ ಬಯಕೆ ಇದ್ದರೂ ಅನಿವಾರ್ಯ ಕಾರ್ಯನಿಮಿತ್ತ ಬೈಕನ್ನೇರಿ ಹೊರನಡೆದೆ. ನಾನು ಹಿಂದಿರುಗುವಷ್ಟರಲ್ಲಿ ಆಟೋಗಾಗಿ ಕಾಯುತ್ತಿದ್ದವಳಿಗೆ ನನಗಾಗಿ ಬಂದಿದ್ದಕ್ಕೆ ಕೃತಜ್ಞತೆಯನ್ನರ್ಪಿಸಿದೆ. ನನ್ನ ಒತ್ತಾಯಕ್ಕೆ ಬೈಕನ್ನೇರಿ ಕುಳಿತವಳಿಗೆ ಹೇಳಿದವರಿಗೆ ನನ್ನ ಪ್ರೀತಿಯನ್ನು ತೆರೆದಿಟ್ಟೆ. ಬೈಕಲ್ಲೂ ಮುದುರಿ ಕುಳಿತವಳನ್ನು ಕಂಡು ನಗುವುಕ್ಕಿ ಬರುತ್ತಿತ್ತು. ಬೇಕೆಂದೇ ಗಾಡಿಯನ್ನು ವೇಗವಾಗಿ ಓಡಿಸಿ ಅವಳನ್ನು ನನಗಂಟಿ ಕುಳಿತುಕೊಳ್ಳುವಂತೆ ಮಾಡಿದೆ‌.ಅವಳ ಮನೆಯ ಬಳಿ ಇಳಿಸಿದಾಗ ನಿಡಿದಾದ ಉಸಿರುಬಿಟ್ಟಳು.
ದಿನಕಳೆದಂತೆ ನನಗವಳೇ ಕಾಡತೊಡಗಿದವು. ಮಡದಿ ಪಕ್ಕದಲ್ಲಿದ್ದರೂ 'ಅವಳೇ' ನೆನಪಾಗುತ್ತಿದ್ದಳು. ಮನದಲ್ಲೇ ನಸುನಗುತ್ತಿದ್ದಳು.ನನ್ನದೇನೋ ಹುಚ್ಚು ಹಠ. ಅವಳನ್ನು ಪಡೆದೇ ತೀರಬೇಕೆಂದು.ಆಕೆಯೋ ಜಗಮೊಂಡಿ ವಾಸ್ತವಾಂಶವನ್ನು ಬಿಡಿಬಿಡಿಯಾಗಿ‌ ನನ್ನೆದುರಿಡುವಳು.

ಅದೊಂದು ದಿನ ಪೇಟೆ ಕಡೆ ಬಂದವಳನ್ನು ಅಚಾನಕ್ ಆಗಿ ನಾನು ನೋಡಿದೆ‌.ಕಾಡಿ ಬೇಡಿ ನನ್ನ ಮನೆಯತ್ತ ಕರೆದೊಯ್ದೆ.ಅವಳಿಗೆ ನನ್ನ ಮೇಲೆ ಗಿಂತಲೂ, ಅವಳ ಮೇಲೆ ನಂಬಿಕೆ ಜಾಸ್ತಿ ಇತ್ತು.ಮನೆಯವರ್ಯಾರೂ ಇರಲಿಲ್ಲ.ತೋಟದಮನೆಯಲ್ಲಿರುವರೆಂದು ಅವಳನ್ನತ್ತ ಕರೆದೊಯ್ದೆ.ಅವಳೋ ನನ್ನ ಬದಲಾಯಿಸುವ ಪ್ರಯತ್ನದಲ್ಲಿದ್ದಳು. ನನಗೋ ಆಕೆಯನ್ನ ಪಡೆದ್ದೇ ತೀರ ಬೇಕಿತ್ತು.ಮನೆಯೊಳಗಡಿಯಿಟ್ಟವಳನ್ನು ಬಿಗಿದಪ್ಪಿದೆ. ಉಸಿರಾಡದಂತೆ ಮುದ್ದಿಸಿದೆ. ಅವಳ ಕೊಸರಾಟದ ನಡುವೆಯೂ ನಾನು ಅತ್ಯಾನಂದದಲ್ಲಿ ತೇಲುತ್ತಿದ್ದೆ. ಅರೆಕ್ಷಣದ ಬಳಿಕ ಬಿಗಿ ಹಿಡಿತವನ್ನು ಸಡಿಲಿಸಿದೆ. ಮೊಗದಲ್ಲಿದ್ದ ಕೋಪ ನಾಚಿಕೆ ಅವಳ ಚೆಲುವನ್ನು ಇಮ್ಮಡಿಸಿತ್ತು.ನನ್ನ ಪ್ರೀತಿಗೆ ಎಂದೋ ಅವಳು ಕರಗಿದ್ದಳು.ಹಠಮಾರಿ ಹೆಣ್ಣೂ, ಗಂಡಿನ ಸಾಮೀಪ್ಯಕ್ಕೆ ನೀರಾಗುತ್ತಾಳೆ ಎಂಬುದಕ್ಕೆ ಆಕೆ ಉದಾಹರಣೆಯಾಗಿದ್ದಳು. ಮತ್ತೆ ಅವಳನ್ನು ತಬ್ಬಿ ಚುಂಬಿಸಿದಾಗ ಮರವನ್ನಪ್ಪುವ ಬಳ್ಳಿಯಂತೆ ನನ್ನಪ್ಪಿದಳು.ಕ್ಷಣಕಾಲ ನಡೆದಿದ್ದೆಲ್ಲವೂ ಇತಿಹಾಸ, ನೆನಪುಗಳಷ್ಟೆ.

ಕಾಲ ಮಿಂಚಿತ್ತು.ಎಚ್ಚೆತ್ತ ಗಳ ಕಣ್ಣಲ್ಲಿ ಕಂಬನಿ ಧಾರಾಕಾರವಾಗಿ ಹರಿದಿತ್ತು. ಕಾಲಬಳಿ ಕುಸಿದುಬಿದ್ದವಳನೆತ್ತಿ ಸಂತೈಸಿದೆ.ನನ್ನೆದೆಯಲಿ ಮೊಗವಿಟ್ಟವಳನ್ನು ಕಂಡು ಸಂತಸದಿಂದ ಬೀಗಿದೆ‌.ಅವಳ ತುಂಬಿದೆಯಲ್ಲಿ ಮುಖವಿಟ್ಟು "ನೀನೆ ನನ್ನ ಉಸಿರು ಕಣೆ" ಎಂದು ನಕ್ಕಿದ್ದೆ. ನನ್ನ ಹಂಬಲ ತೀರಿತ್ತು. ಅವಳನ್ನು ಹೊರಡಿಸುವಷ್ಟರಲ್ಲಿ ನನ್ನೆಲ್ಲ ಬುದ್ಧಿ ಖರ್ಚಾಗಿತ್ತು.ಹೊರಟು ನಿಂತವಳನ್ನು ಸಮಾಧಾನಿಸಿ ಸಾವಿರದ ನೋಟುಗಳ ಕಂತೆ ಕೈಗಿಟ್ಟಿದ್ದೆ. ಕಣ್ತುಂಬಿ ನೋಡಿದವಳು ತಿರುಗಿ ನೋಡದೆ ನಡೆದಿದ್ದಳು.ಫೋನಾಯಿಸಿದರೂ ಪ್ರತಿಕ್ರಿಯೆ ಇರಲಿಲ್ಲ. ಎಷ್ಟೋ ಸಮಯದ ಬಳಿಕ ಮೆಸೇಜ್ ಬಂದಿತ್ತು 'ನನ್ನ ಪ್ರೀತಿಗೆ ನಿಮ್ಮ ಬೆಲೆ ಇಷ್ಟೇನಾ? ನನ್ನನ್ನು ಕಾಲ್ ಗರ್ಲ್ ಆಗಿ ಸ್ವೀಕರಿಸಿದ್ದಕ್ಕೆ ಥ್ಯಾಂಕ್ಯೂ...'.

ನನ್ನ ಸ್ವಾಭಿಮಾನಕ್ಕೆ ಬಡಿದಿತ್ತು ಹೊಡೆತ.ಅಂತೂ ಅವಳನ್ನು ಅನುನಯಿಸಿದ್ದೆ, ಕ್ಷಮೆ ಕೇಳಿದ್ದೆ. ಅವಳನ್ನು ಅಂದೇ ಮರೆತು ಬಿಡಬೇಕೆಂದು ನಾನಂದು ಕೊಂಡರೂ, ನನ್ನೊಳಗೆ ಗಟ್ಟಿಯಾಗಿ ಕುಳಿತಿದ್ದಳು ಯಾವುದೋ ಜನ್ಮದ ಒಡನಾಡಿಯಂತೆ. ಮತ್ತೆ ಮತ್ತೆ ಅವಳ ಸಾಮಿಪ್ಯಕ್ಕೆ ಮನ ಹಾತೊರೆದಿತ್ತು. ಆಕೆಯೋ ತಿರಸ್ಕರಿಸುತ್ತಾ ಬಂದಳು, ನನ್ನನ್ನೆ ಅವಾಯ್ಡ್ ಮಾಡತೊಡಗಿದಳು. ನನಗಂತೂ,ಈ ಮದುವೆ ಸಂಸಾರ ಒಂದು ಬೇಕಿರಲಿಲ್ಲ ಎಂದೆನಿಸುತ್ತಿತ್ತು. ನನ್ನ ಪತ್ನಿಯೊಂದಿಗೆ ಅದೇ ಆತ್ಮೀಯತೆ ಅವಳಿಗೆ ಮುಂದುವರಿದಿತ್ತು. ನನ್ನಲ್ಲಾದ ಬದಲಾವಣೆ ನೀರಸತೆ ನನ್ನವಳ ಸಂಶಯಕ್ಕೆ ಎಡೆಮಾಡ ತೊಡಗಿತ್ತು. ಒಂದು ಕ್ಷಣ ನನ್ನ ತಪ್ಪಿನ ಅರಿವಾಗ ತೊಡಗಿದರೂ, ಮರುಕ್ಷಣ ಅವಳೆದೇ ಗುಂಗು‌ ಮನದಲ್ಲಿ ಕೊರೆಯುತ್ತಿತ್ತು.

ಆ ಬಳಿಕ ಅವಳು ಅಪರೂಪಕೊಮ್ಮೆ ಎದುರಾಗುತ್ತಾಳೆ. ಪೌರ್ಣಿಮೆಯ ಚಂದಿರನಂತೆ.ಮೊಗದಲ್ಲಿ ನನ್ನ ಸೆಳೆದಿದ್ದ ಅದೇ ಗಾಂಭೀರ್ಯ ತುಟಿಯಲ್ಲಿ ಕಂಡೂಕಾಣದ ನಗು. ಜೊತೆಯಲ್ಲಿ ವಿಷಾದದ ಗೆರೆ. ಅದನ್ನು ನಾನು ಮಾತ್ರ ಗುರುತಿಸಬಲ್ಲೆನೇನೋ? ಕಂಗಳಲ್ಲಿ ಮೊದಲಿದ್ದ ಆತ್ಮವಿಶ್ವಾಸ ಇಲ್ಲ. ಎಲ್ಲೋ ಕಳೆದು ಬಿಟ್ಟಿದ್ದಾಳೆ ಅವಳು. ನನ್ನ ತಪ್ಪಿಗೆ ಎದೆಗಾನಿಸಿ ಸಂತೈಸ ಬೇಕೆಂಬಾಸೆ .ತುಟಿ ಬಿಗಿದು ಕುಳಿತಿದ್ದೇನೆ.ಅವಳ ನಿರಾಳತೆಗಾಗಿ.ಮತ್ತೆ ಮೂಡುವ ಅವಳ ನಗುವಿಗಾಗಿ, ಕಂಗಳ ಹೊಳಪಿಗಾಗಿ.... ಜೊತೆಯಲ್ಲಿ ಹುಡುಕಾಟದಲ್ಲಿ ಇದ್ದೇನೆ ಅವಳನ್ನರಿಯುವ ಜೊತೆಗಾರನಿಗಾಗಿ.... ಅವಳ ಸುಂದರ ಭವಿತವ್ಯಕ್ಕಾಗಿ....

ಯೋಚನೆಗೆ ವಿರಾಮ ಬಿದ್ದಂತೆ ಮಗಳು 'ಅಭಿ' ಯ ದನಿ ಎಚ್ಚೆತ್ತುಕೊಳ್ಳುವಂತೆ ಮಾಡಿತು.ಅಪ್ಪಾ ...
ಅಪ್ಪಾ...ಅನ್ನುತ್ತಾ ಗೇಟಿನ ಕಡೆ ಕೈ ತೋರಿದಾಗ ....ಅತ್ತ ಓಡಿದ್ದೆ. ರಕ್ತದ ಮಡುವಲ್ಲಿ ಅವಳು ಬಿದ್ದಿದ್ದಳು.ಓಡಿ ಹೋಗಿ ಎದೆಗಾನಿಸಿದ್ದೆ.ಉಸಿರು ನಿಧಾನವಾಗತೊಡಗಿತ್ತು‌.ಭಯದಿಂದ ಅವಳ ಮೊಗ ದಿಟ್ಟಿಸಿದ್ದೆ.ನಿಧಾನಕ್ಕೆ ಕಾದಂಬನಿಗಳು ಧರೆಯೆಡೆಗೆ ಬಾಗುತ್ತಿದ್ದವು.ಕೊನೆಯಲ್ಲೊಂದು ಹನಿ ಕಂಬನಿ‌ ಕಂಗಳಿಂದ ಜಾರಲೋ ಬೇಡವೋ ಎಂಬಂತೆ ನಿಂತಿತ್ತು.....ಒಮ್ಮೆ ಕ್ಷಮಿಸು ಬಿಡು ಹೆಣ್ಣೇ ಎಂದು ಮನಸು ಚೀರಿತ್ತು.



 ನಮಗರಿವಿಲ್ಲದೆ ನನ್ನ ಮಗಳು ರೋಡಿಗಿಳಿದಿದ್ದಳು.ನನ್ನದೇ ಯೋಚನೆಯಲ್ಲಿದ್ದ ನಾನೂ ಅವಳನ್ನು ಗಮನಿಸಲಿಲ್ಲ.ಅದೇ ವೇಳೆ ವೇಗವಾಗಿ ಬಂದ ಲಾರಿಯೊಂದು ಅವಳ ಮೇಲೆ ಹರಿದು ಹೋಗಲಿತ್ತು.ದೇವರಾಟವೋ ಎಂಬಂತೆ ಅದೇ ದಾರಿಯಲ್ಲಿ ಬರುತಿದ್ದ 'ಅವಳು' ಮಗಳನ್ನು ಅಪಘಾತದಿಂದ ಪಾರು ಮಾಡಿ ನಮ್ಮ ಮನೆ ಬೆಳಕನ್ನು ಉಳಿಸಿದ್ದಳು.ನಾನು ಮಾಡಿದ ತಪ್ಪಿಂದ ನಿರ್ಜೀವ ಬೊಂಬೆಯಂತಾದವಳು ಇಂದು ಶಾಶ್ವತವಾಗಿ ಈ ಲೋಕಕ್ಕೇ ವಿದಾಯ ಹೇಳಿದ್ದಳು.

✍🏻ಎ.ಆರ್.ಭಂಡಾರಿ ವಿಟ್ಲ.

Thursday, 14 October 2021

"ಮೌನದ ನಿಧಿ" - ಎ.ಆರ್.ಭಂಡಾರಿ.ವಿಟ್ಲ.

 

ಕಥೆ - 8

"ಮೌನದ ನಿಧಿ"

ನಗು ಎಂದರೆ ಅವಳು, ಅವಳೆಂದರೆ ನಗು. ಮುಂಜಾನೆಗೆ ಅರಳಿದ ಪುಷ್ಪದಂತೆ ಅವಳು ನಿತ್ಯವೂ ಹೊಚ್ಚಹೊಸ ಕನಸಿನೊಂದಿಗೆ ನನ್ನೆದುರಾಗುತ್ತಾಳೆ . ಎಂದೂ ಬಾಡದ ಮೊಗದಲ್ಲಿ ಹಚ್ಚ ಹಸಿರ ನಗು. ಕಣ್ಣಿಗೆ ಕಾಣದ ಕಂಗಳೊಳಗೆ ಏನೋ ಮುಗ್ಧತೆ, ಜೊತೆ ತುಸು ತುಂಟಾಟ.ತುಂಬು‌ಗೆನ್ನೆಯಲ್ಲಿ‌ ಗುಲಾಬಿ ರಂಗು. ತುಟಿ ತೆರೆದರೆ ಅರಳಿದ ತಾವರೆಯೇ ಸರಿ. ಆದರೆ ಆಕೆ ಮೌನದ ಮೊಗ್ಗು. ಮಾತೆತ್ತಿದರೆ ಮುತ್ತು ಉದುರಿತೋ ಎಂಬ ಭಯ. ಮೌನದಲ್ಲೂ ಆಕೆ ಸುಂದರಿ. ಬ್ರಹ್ಮನ ಅದ್ಭುತ ಸೃಷ್ಟಿಯ ಅಪೂರ್ವ ಕೊಡುಗೆ ಆಕೆ. ದಂತದ ಮೈಬಣ್ಣದ ಚೆಲುವೆಯ ಬೆಡಗನ್ನು ಮತ್ತಷ್ಟು ಹೆಚ್ಚುವುದು,ಬೆನ್ನ ಮೇಲೆ ಹರಡಿರುವ ಕಪ್ಪು ಮೋಡದಂತೆ ಇರುವ ಗುಂಗುರು ಕೂದಲು. ಹಣೆಯ ಮೇಲೆ ಲಾಸ್ಯವಾಡುತ್ತಾ ನೋಡುಗರಿಗೆ ಅಸೂಯೆ ಹುಟ್ಟಿಸುವ ಮುಂಗುರುಳು. ನಿರಾಸೆಯಿಂದರೆ ಇಂದಿಗೂ ಆಕೆಯ ಹೆಸರು ತಿಳಿದಿಲ್ಲ. ಒಂದೇ ಕ್ಯಾಂಪಸ್ಸಿನ ಒಳಗಿದ್ದರೂ ಮಾತನಾಡಲಾಗದ ಹಿಂಜರಿಕೆ.ಇಂದೇಕೋ ಭಿನ್ನವಾಗಿ ಕಂಡಳು ಚೆಲುವೆ. ಅಚ್ಚ ಬಿಳಿ ಚೂಡಿದಾರ ಆಕೆಯ ಮುಗ್ಧ ಮನಸ್ಸಿಗೆ ಕನ್ನಡಿ ಹಿಡಿದಂತಿತ್ತು.


ಎವೆಯಿಕ್ಕದೆ ಆಕೆಯನ್ನು ದಿಟ್ಟಿಸುತ್ತಿದ್ದ ನನ್ನನ್ನು ಗೆಳೆಯ 'ಶ್ರೀಕಾಂತ' ತಿಳಿದಾಗಲೇ ಅರಿವಿಗೆ ಬಂದದ್ದು ನಾನೆಲ್ಲೋ ಕಳೆದು ಹೋಗಿರುವೆ ಎಂದು‌.ಆ ಕ್ಷಣ ಆತ "ಬಾಲು ಆ ರೀತಿ ನೋಡ ಬೇಡ ಕಣೋ. ಅವಳು ನೋಡಿ ಹೆಸರಿನಂತೆಯೇ ಬಾಲ್ಯದಿಂದಲೂ ಮಾತನ್ನು ಕಳೆದುಕೊಂಡ ನತದೃಷ್ಟೆ. ಕೊಲ್ಲೂರಿನಲ್ಲಿ ನನ್ನ ಚಿಕ್ಕಮ್ಮನಿಗೆ ವರಪ್ರಸಾದವಾಗಿ ದೊರೆತವಳು' ಎಂದಾಗ ಬೆಚ್ಚಿಬಿದ್ದಿದ್ದೆ. 'ಕಾಲರಾಯನ ಬಿಸಿಲಿಗೆ ಸಿಲುಕಿ ನಲುಗಿದ ಹೂ'ಇವಳು ಎಂದರಿವಾಗುವುದರೊಳಗೆ ಆಕೆ ಮುಗುಳುನಗುತ್ತಾ, ನನ್ನನ್ನು ದಾಟಿ ಸಾಗಿದ್ದಳು. ನಡಿಗೆ ಯಲ್ಲಿದ್ದ ಆತ್ಮವಿಶ್ವಾಸ ಆಕೆಯ ಮೌನವನ್ನು ಗೆದ್ದಿತು.ಅದೇ ನಡಿಗೆ.ಅವರದ್ದೇ ಪಡಿಯಚ್ಚು. ನನ್ನಮ್ಮನದೇ ತದ್ರೂಪಿ ಇವಳು.ಅಂದರೆ ನಾನು ಎಳವೆಯಲ್ಲಿ ಕಳೆದುಕೊಂಡ ತಂಗಿ 'ಸುನಿಧಿ'ಇವಳೆನಾ? ಇಷ್ಟು ದಿನ ನನ್ನ ಹೃದಯ ತೋರುತ್ತಿದ್ದ ಸೂಚನೆ ಇದೆಯಾ? ಅಂತ ಅನಿಸಿಬಿಟ್ಟಿತು. ಕಣ್ಣರಿಯದುದನ್ನು ಕರುಳರಿಯುತ್ತದೆ ಎಂಬ ಮಾತು ನಿಜವಾಗಿತ್ತು.


ನನಗೂ ಸುನಿಧಿಗೂ ಏಳು ವರುಷಗಳ ಅಂತರ.ಅಪ್ಪ ಹಾಗೂ ಅಮ್ಮ ಬಯಸಿ ಪಡೆದ ಮಗಳವಳು.ಆದರೆ ಅಂದು ಅಪ್ಪ ಹಾಗೂ ಅಮ್ಮನ ಜತೆ ನಾವು ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಹೊರಟಿದ್ದೆವು.ಕೊಲ್ಲೂರು ಸಮೀಪಿಸ ಬೇಕೆನ್ನುವಷ್ಟರಲ್ಲಿ ನಮ್ಮ ಕಾರು ಅಪಘಾತಕ್ಕೆ ಒಳಗಾಗಿತ್ತು.ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿತ್ತು. ಸಣ್ಣ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ ನಮ್ಮವರ ನಡುವೆ 'ಸುನಿಧಿ‌' ಕಾಣಿಸಲಿಲ್ಲ.ನಡೆದ ಅನಾಹುತದಲ್ಲಿ ಮೂರರ ಹರೆಯದ ಬಾಲೆ 'ಸುನಿಧಿ' ಕಳೆದುಹೋಗಿದ್ದಳು. ಎಷ್ಟು ಹುಡುಕಿದರೂ ಆಕೆಯ ಸುಳಿವು ದೊರೆಯಲಿಲ್ಲ. ಆ ಸ್ಥಳದಲ್ಲಂತೂ ಇಂಚಿಂಚೂ ಬಿಡದೆ ಹುಡುಕಾಡಿದ್ದೆವು,ತಡಕಾಡಿದ್ದೆವು.ಆಕೆಯ ಪತ್ತೆ ಮಾಡಲು ಮಾಡಿದ ಪ್ರಯತ್ನಗಳಾವುದೂ ಫಲಿಸಲೇ ಇಲ್ಲ.ಅಮ್ಮ ಅದೇ ಚಿಂತೆಯಲ್ಲಿ ಹಾಸಿಗೆ ಹಿಡಿದಿದ್ದಾಳೆ. ಜತೆಗೆ ನಮ್ಮೆಲ್ಲರ ಕಾಯುವಿಕೆ ನಿರಂತರ. ಆದರೆ ಮಾತಿನ ಮಲ್ಲಿ ಯಾಗಿದ್ದ 'ನಿಧಿ' ಮೌನಿ ಯಾಕಾದಳು ಎಂದರಿವಾಗಲಿಲ್ಲ .

ನಡೆದ ವೃತ್ತಾಂತವನ್ನು 'ಶ್ರೀಕಾಂತ್' ತಿಳಿಸಿದಾಗ ಆತನು ಅಚ್ಚರಿಗೊಳಗಾದ. ಯಾವುದೇ ಕಾರಣಕ್ಕೂ ಸತ್ಯಾಸತ್ಯತೆ ತಿಳಿಯಬೇಕೆಂದು 'ಮೌನಿ'ಯ ರಕ್ತ ಪರೀಕ್ಷೆಯನ್ನು ಶ್ರೀಕಾಂತನ ಮೂಲಕ ಮಾಡಿಸಿದೆ. ಕೊನೆಗೂ ನಮ್ಮೆಲ್ಲರ ಕಾಯುವಿಕೆಯ ತಪಸ್ಸು ಗೆದ್ದಿತ್ತು. ಕರಾಳ ನೆನಪು ಕಾಲರಾಯನ ತೆಕ್ಕೆಯೊಳಗೆ ಅವಿತುಕ್ಕೊಳ್ಳುವ ಸಮಯ ಸನ್ನಿಹಿತವಾಗಿತ್ತು.ಆಕೆಯ ಮನೆಯವರಿಗೆ ವಿಷಯದರಿವು ಮಾಡಿಸಿ ಒಂದು ಶುಭಮುಹೂರ್ತದಲ್ಲಿ 'ಮೌನಿ'ಯನ್ನು ನಮ್ಮರಮನೆಯೊಳಗೆ 'ಶ್ರೀಕಾಂತ' ಕರೆತಂದಿದ್ದ. 'ಸುನಿಧಿ'ಅಮ್ಮನನ್ನು ನೋಡಿದ್ದೆ ತಡ 'ಅಮ್ಮ' ಅಂದಿದ್ದಳು.ಬಸಿರ ಉಸಿರು ಮಾತನಾಡಿತ್ತು. ಅಮ್ಮನ‌ ಮೊರೆ ಕೊನೆಗೂ ಭಗವಂತನಿಗೆ ಕೇಳಿಸಿತ್ತು.ಕರುಳ ನಂಟು ಬೆಸೆದಿತ್ತು.ಇಂದು 'ಸುನಿಧಿ' ಎರಡು ಮನೆಯ ಮಗಳಾಗಿ ಮನೆ-ಮನಗಳನ್ನು ಬೆಳಗುತ್ತಿದ್ದಾಳೆ.ಕಾನೂನು ಪ್ರಕಾರವಾಗಿ ಆಕೆ ನಮ್ಮ ಮನೆ ಮಗಳೆಂದು‌ ಸಾಬೀತಾಗಿದೆ.

ಅಂದು ನಡೆದ ಅಪಘಾತದಲ್ಲಿ ಒಬ್ಬಂಟಿಯಾಗಿ ಅಳುತಿದ್ದ 'ಸುನಿಧಿ' ಯನ್ನು ಯಾರೋ ಹೆಂಗಸು ಎತ್ತಿಕೊಂಡು ದೇವಸ್ಥಾನದ ಬಳಿ ಬಂದಿದ್ದಳು.ಅಲ್ಲೆ ಹೊಂಚು ಹಾಕುತ್ತಿದ್ದ ಕಳ್ಳರ ಗುಂಪೊಂದು ನಿಧಿಯನ್ನು ಅಪಹರಿಸಿ ಮಾರಟಕ್ಕಿಟ್ಟಿದ್ದರು.ಅದೇ ವೇಳೆ ಮಕ್ಕಳಿಲ್ಲದ ಶ್ರೀಕಾಂತ್ ನ ಚಿಕ್ಕಪ್ಪ ಹಾಗೂ ಚಿಕ್ಕಮ್ಮಕೊಲ್ಲೂರು ದೇವಸ್ಥಾನ ನದಲ್ಲಿ ಪ್ರಾರ್ಥಿಸಿ ಬಂದಿದ್ದರು.ದೈವ ನಿರ್ಣಯ ಎಂಬಂತೆ ಮದ್ಯವರ್ತಿ ಓರ್ವನ ಸಹಾಯದಿಂದ 'ಸುನಿಧಿ' ಅವರ ಕೈ ಸೇರಿದ್ದಳು.ಅವರ ಮನೆ ಮಗಳಾಗಿದ್ದಳು.ಕಾನೂನಿನ ಅರಿವು ಇಲ್ಲದೆ , ಮಾಧ್ಯಮದ ಛಾಪು ಅಷ್ಟಾಗಿ ಇಲ್ಲದ ಕಾಲದಲ್ಲಿ ಇಷ್ಟೆಲ್ಲಾ ಘಟನೆ ನಡೆದು ಹೋಗಿತ್ತು.

✍🏻ಎ.ಆರ್.ಭಂಡಾರಿ.ವಿಟ್ಲ.






Wednesday, 13 October 2021

"ನವ ಪಲ್ಲವಿ" - ಎ.ಆರ್‌.ಭಂಡಾರಿ ವಿಟ್ಲ.

 

ಕಥೆ -7

                                     "ನವ ಪಲ್ಲವಿ"

ಪ್ರೀತಿ ಎಂದರೆ ಅದೊಂದು ನವಿರು ಭಾವ. ಹೃದಯಬಡಿತ.ಮನಸಿನ ಆಹ್ಲಾದ‌. ಕಣ್ಣಲ್ಲಿ ಎದ್ದೆದ್ದು ತೋರುವ ಪ್ರಶಾಂತ ಕುತೂಹಲ. ಹೀಗೆ ಪ್ರೀತಿಯೆಂದರೆ ನನ್ನದೇ ವ್ಯಾಖ್ಯಾನ ಕೊಡುವ ನಾನು ಪಕ್ಕಾ ಹಳ್ಳಿ ಹುಡುಗ. ನನಗೋ ಮದುವೆಯ ವಯಸ್ಸೇ. ಪ್ರೀತಿಸಿ ಮದುವೆಯಾಗುವ ನನ್ನ ಕನಸು ಎಂದೂ ಈಡೇರದು. ಅದಕ್ಕಾಗಿಯೇ ಮನೆಯವರು ತೋರಿಸಿದ ಕಡೆ 'ವಧು ಪರೀಕ್ಷೆ'ಗೆ ಹೊರಡುತ್ತೇನೆ.ನನ್ನಲ್ಲಿರುವ 'ನ್ಯೂನತೆ'ಯೂ ಎಂದೂ ಸರಿ ಹೋಗಲಾರದು. ವಿದ್ಯೆಯು ಅಷ್ಟಕಷ್ಟೆ. ನನ್ನ ಕಂಡ ಹುಡುಗಿಯರು ತಿರಸ್ಕರಿಸಿದ್ದೇ ಜಾಸ್ತಿ. ಆಸ್ತಿಗಾಗಿ ಒಪ್ಪಿಗೆ ಕೊಟ್ಟವರನ್ನು ನಯವಾಗಿ ನಾನೇ ತಿರಸ್ಕರಿಸಿದ್ದೇನೆ.

 


ಬಹಳ ದಿನಗಳ ನಂತರ ಪಕ್ಕದೂರಿನ ಬಂಧುಗಳ ಮದುವೆಗೆ ಅಮ್ಮನ ಒತ್ತಾಯದ ಮೇರೆಗೆ ಇಂದು ಹೊರಟಿದ್ದೇನೆ. ನಿರೀಕ್ಷೆಗಳು ನಿರಾಸೆಯನ್ನುಂಟು ಮಾಡುತ್ತದೆ ಎಂದರಿವಿರುವ ಸ್ಥಿತಪ್ರಜ್ಞ ನಾನು. ಆದ ಕಾರಣ ಪ್ರಯಾಣ ಪ್ರಯಾಸವಿಲ್ಲದೆ ಸಾಗುತಿದೆ.
ಎರಡು ಗಂಟೆಗಳ‌ ದಾರಿ ಸವೆಸಿ ಮದುವೆ ಮನೆ ತಲುಪಿಯಾಯ್ತು. ಎಂದಿನಂತೆ ಸ್ವಲ್ಪ ದೂರದಲ್ಲೇ ಕುಳಿತುಕೊಂಡಿದ್ದೆ. ಅಷ್ಟೊತ್ತಿನಲ್ಲಿ ಅಮ್ಮ ನಮ್ಮ ದೂರದ ಸಂಬಂಧಿ 'ಶೇಖರ ಮಾವ'ನನ್ನು ಕರೆದು ಮಾತನಾಡ ತೊಡಗಿದರು. ಅದೇ ವೇಳೆ 'ಅವಳ' ಆಗಮನವೂ ಆಯಿತು. "ನನ್ನ ತಂಗಿ ಮಗಳು .ಎಂ.ಎಸ್ಸಿ ಬಿ.ಎಡ್ .ಮುಗಿಸಿ ಲೆಕ್ಚರರ್ ಆಗಿದ್ದಾಳೆ ಹೆಸರು ಪಲ್ಲವಿ " ಎಂದವರತ್ತ ದಿಟ್ಟಿಸಿದೆ.
" ಒಬ್ಬಳೇ ಮಗಳು. ಆಕಾಶವಾಣಿಯಲ್ಲಿ ಇವಳ ಕಾರ್ಯಕ್ರಮ ಪ್ರಸಾರ ಆಗ್ತಾ ಇರುತ್ತದೆ. ಸಂಗೀತ ಅವಳ ಉಸಿರು " ಎಂದು ಸೊಸೆಯ ಗುಣಗಾನದಲ್ಲಿ ತೊಡಗಿದ್ದರು ಶೇಖರ ಮಾವ.ನನ್ನೆದೆಯಲ್ಲಿ ಏನೋ ಕಂಪನ. ಆದರೆ ನನ್ನ ಪಾಲಿಗೆ "ನಿಲುಕದ ನಕ್ಷತ್ರ " ಅವಳು ಎಂದು ಅರಿವಿರುವುದರಿಂದ ಸುಮ್ಮನಾದೆ . ಅವಳದಾಗಲೇ ಮುಗುಳ್ನಕ್ಕು ಗೆಳತಿಯರ ದಂಡು ಸೇರಿಕೊಂಡಾಗಿತ್ತು. ನಾನು ಅಲ್ಲೇ ಪಕ್ಕದಲ್ಲಿ ಇದ್ದ ದೇವಸ್ಥಾನದ ಕಡೆ ನಡೆದೆ. ಅಲ್ಲೆ ಹೊರಗಡೆ ಕುಳಿತಿದ್ದ ವೃದ್ಧ ದಂಪತಿಗಳನ್ನು ಮಾತನಾಡಿಸುತ್ತ ಕುಳಿತೆ. ಅದೇ ವೇಳೆ ಆಕೆಯು ಇಬ್ಬರು ಗೆಳತಿಯರೊಂದಿಗೆ ದೇವಸ್ಥಾನದ ಅಂಗಳದೊಳಗೆ ಬಂದಳು. ಅದೇ ವೇಳೆ ಅವಳ ಅರಿವಿಲ್ಲದೆಯೇ ಆಕೆಯ ಮೊಬೈಲ್ ನನ್ನ ಬಳಿಯೇ ಬಿದ್ದಾಗಿತ್ತು. ಆಕೆಯನ್ನು ಹಿಂಬಾಲಿಸಿ ಮೊಬೈಲ್ ಹಿಂದುರಿಗಿಸಿದಾಗ ಪರಿಚಯದ ನಗೆ ನಕ್ಕಳು.ನನ್ನೊಂದಿಗೆ ಮಾತನಾಡುತ್ತಾ ದೇವಾಲಯದ ಪ್ರಾಂಗಣಕ್ಕೂ ಮೂರು ಸುತ್ತು ಬಂದಿದ್ದೂ ಆಯಿತು. ಬಳಿಕ‌ ಎರಡು ದಿವಸದ ಮದುವೆಯಲ್ಲಿ ಅವಳು ಆತ್ಮೀಯ ಗೆಳತಿಯಂತಾದಳು. ಹಮ್ಮು‌ಬಿಮ್ಮಿಲ್ಲದ ಆಕೆಯ ನಡವಳಿಕೆ ನನ್ನನ್ನು ಮತ್ತಷ್ಟು ಆಕೆಗೆ ಹತ್ತಿರವಾಗುವಂತೆ ಮಾಡಿತು. ಮದುವೆ ಮುಗಿಸಿ ಹಿಂದಿರುಗುವಾಗ ಅವಳ ಮೊಬೈಲ್ ಒಳಗೆ ನನ್ನ ನಂಬರ್ ಸೇವ್ ಆಗಿತ್ತು. ಊರಿಗೆ ಹಿಂದುರಿಗಿದ ನಾನು ಆಕೆಗಾಗಿ ಆಂಡ್ರಾಯ್ಡ್ ಫೋನ್ ತೆಗೆದುಕೊಂಡಾಗಿತ್ತು. ಮೆಸೇಜ್ ನಿಂದ ಆರಂಭವಾಗಿ ದಿನಕ್ಕೆರಡು ಬಾರಿ ಕಾಲ್ ಮಾಡಿ ಮಾತನಾಡುವಷ್ಟು ಆತ್ಮೀಯತೆ ನಿಧಾನವಾಗಿ ಬೆಳಗಾದಾಗಿತ್ತು. ಆದರೆ ನನ್ನ ಮನದ ಮಾತು ಮನದಲ್ಲಿ ಉಳಿದು ಸತಾಯಿಸ ತೊಡಗಿತು.



ಅದೊಂದು ದಿನ ಬೆಳಿಗ್ಗೆ ಎಂಟರ ಸಮಯ .ನಾನು ತೆಂಗಿನಕಾಯಿ ಸುಲಿಯುವುದರಲ್ಲಿ ಮಗ್ನನಾಗಿದ್ದೆ. ಅದೇ ವೇಳೆ ಓರ್ವ ಹಿರಿಯ ವ್ಯಕ್ತಿ ನಮ್ಮ ಮನೆ ಕಡೆ ಬಂದು ತಂದೆಯ ಬಳಿ ಮಾತನಾಡ ತೊಡಗಿದರು.ಅವರ ಮಗಳಿಗೆ ನನ್ನ ಸಂಬಂಧದ ಬಗ್ಗೆ ಮಾತು ಬೆಳೆಸಲು ಅವರಾಗಿಯೇ ಬಂದಿದ್ದರು. ನನಗರಿವಿಲ್ಲದೆ 'ವರ ಪರೀಕ್ಷೆ'ಯನ್ನು ಎದುರಿಸಿದ್ದೂ ಆಯಿತು. ಅಮ್ಮನಂತೂ ನನ್ನ ಸಮಸ್ಯೆಯನ್ನು ತಿಳಿಸದೆ ಮದುವೆ ಮಾಡುವ ಯೋಚನೆಯಲ್ಲಿದ್ದರು ನಾನದಕ್ಕೆ ಒಪ್ಪಲಿಲ್ಲ. ನನ್ನ ಬಗ್ಗೆ ತಿಳಿದುಕೊಂಡು ಬರುವ ಸಂಗಾತಿಯೇ ನನಗೆ ಬೇಕಾಗಿದ್ದಾಳು.'ಪಲ್ಲವಿ'ಯ ಮೊಗ‌ ಕಣ್ಣೆದುರು ನಗುತಿತ್ತು. ಎದೆಯ ಬಡಿತವೂ ಅವಳದ್ದೇ ಆಗಿತ್ತು.
ಆದರೊಂದು ಶುಭದಿನ ನೋಡಿ ನಾವು 'ಆ ಹುಡುಗಿ'ಯ ಮನೆಗೆ ಹೊರಟಾಯ್ತು. ಮುಂದೆ ನಡೆದದ್ದು ವಿಸ್ಮಯ.ನಾನು ಅಲ್ಲಿ ಕಂಡದ್ದು ನನ್ನ 'ಅಭಿಸಾರಿಕೆ' 'ಪಲ್ಲವಿ'ಯನ್ನು ಆಗಿತ್ತು.ಆದರೆ ನನ್ನ ಬಗ್ಗೆ ನಾನು ತಿಳಿಸಲೇ ಬೇಕಿತ್ತು. ಮನೆಯವರ ಒಪ್ಪಿಗೆಯ ಮೇರೆಗೆ ಪಲ್ಲವಿಯ ಬಳಿ ಮಾತನಾಡಲು ಮಹಡಿಯ ಮೇಲೆರಿದೆ. "ನಿಜವಾಗಿಯೂ ನಾನು ನಿನಗೆ ಸರಿಯಾದ ಜೋಡಿ ಎಂದು ಯೋಚಿಸಿರುವೆಯಾ ಪಲ್ಲವಿ" ಎಂದು ಕೇಳಿದೆ. 'ಹೌದು' ಎಂಬ ಉತ್ತರ ಆಕೆಯದಾಗಿತ್ತು. 'ನಿನಗೆ ನನ್ನ ಬಗ್ಗೆ ಇನ್ನು ತಿಳಿದಿಲ್ಲ. ನಾನು ಒಂದು ಕಿವಿ ಕೇಳದ ಅರೆ ಕಿವುಡ' ಎಂದು ಉಸುರುವಾಗ ದನಿ ನಡುಗಿತು.ಅಷ್ಟರಲ್ಲಿ 'ಅದು ನನಗೆ ಗೊತ್ತು' ಎಂದಳು. 'ನನ್ನ ಮನೆಯವರಿಗೆ ಮಾತ್ರ ಗೊತ್ತಿರುವ ರಹಸ್ಯ ಅದು. ನಿನಗೆ ಹೇಗೆ ಗೊತ್ತಾಯ್ತು?' ಎಂದು ಕೇಳಿದೆ. 'ಪ್ರೀತಿಸೋರಿಗೆ ಅದೆಲ್ಲ ತಿಳಿಯುತ್ತೆ' ಎಂದು ನಕ್ಕಳು.


ಅಷ್ಟೊತ್ತಿಗೆ ನನ್ನ ಅಮ್ಮ ಹಾಗೂ ಅವಳ ಮನೆಯವರು ಅಲ್ಲಿ ಬಂದಾಗಿತ್ತು. 'ಹೌದು ನವನೀತ್, ಈ ವಿಷಯ ಮೊದಲೇ ಗೊತ್ತಿತ್ತು. ವಿದ್ಯೆಯೆಂಬುದು ನಮ್ಮನ್ನು ಅರಿಯಲು ಸಹಾಯ ಮಾಡುತ್ತದೆ. ನೀವು ದೇಶಕ್ಕಾಗಿ ದುಡಿದವರು. ನಿಮ್ಮೂರನ್ನು‌ ನಕ್ಸಲರ ಕಪಿ ಮುಷ್ಟಿಯಿಂದ ಬಿಡಿಸಿಕ್ಕೊಳ್ಳಲು ಪೋಲೀಸ್ ಇಲಾಖೆಗೆ ಗುಪ್ತಚಾರರಾಗಿ ಕಾರ್ಯ ಗೈದವರು‌.ಅದೇ ಕಾಳಗದಲ್ಲಿ‌ ಗುಂಡೊಂದು ನಿಮ್ಮ ಕಿವಿಯ ಪಕ್ಕದಲ್ಲಿ ಹಾದು ಹೋಯಿತು.ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದಿರಿ.ಆದರೆ ಶಾಶ್ವತ ವಾಗಿ ಒಂದು‌ ಕಿವಿಯನ್ನೇ ಕಳೆದು ಕೊಂಡಿರಿ.ಆ ಕಿವಿ ಶಾಶ್ವತವಾದ ಕಿವುಡುತನಕ್ಕೆ ಒಳಗಾಯಿತು.ಮುಖದ ಅಂದಗೆಡವ ಬಾರದೆಂದು ಕೃತಕವಾದ ಕಿವಿಯ ರಚನೆಯನ್ನು‌ ನಿಮ್ಮ ಮುಖಕ್ಕೆ ಜೋಡಿಸಿದ್ದಾರೆಂದು ನಾನು ಬಲ್ಲೆ.ಆದರೆ‌ ನೀವು ಒಂದು ಕಿವಿಯಿಂದ ಮಾತ್ರ ಕೇಳಿಸಿಕ್ಕೊಳ್ಳ ಬಲ್ಲಿರಿ.ಅದರೆ ಅದೆಷ್ಟು ದಿನವೆಂದೂ ವೈದ್ಯರಿಗೂ ಭರವಸೆ ಇಲ್ಲ.ಜತೆಗೆ ಇದರಿಂದ ನಿಮ್ಮ ಧ್ವನಿಪೆಟ್ಟಿಗೆಗೂ ಹಾನಿಯುಂಟಾಗ ಬಹುದು ಅಲ್ಲವೇ? ಈಗಂತೂ ನೀವು ಮಣ್ಣಿನ ಮಗ .ರೈತ ನಮ್ಮ ದೇಶದ ಬೆನ್ನೆಲುಬು.ನಿಮ್ಮದಲ್ಲ ತಪ್ಪಿಗೆ ಕೊರಗುವುದ್ಯಾಕೆ? ಅಂಗ ಊನತೆ ಶಾಪವಲ್ಲ.ನೀವೊಬ್ಬ ಉತ್ತಮ ಬರಹಗಾರರು ಅಲ್ಲವೆ? ದೇವರು ಒಂದನ್ನು ಕಿತ್ತು ಕೊಂಡರೂ ಇನ್ನೊಂದನ್ನು ಕೊಟ್ಟೇ ಕೊಡುತ್ತಾನೆ.ನಿಮ್ಮ ಊರಿನವರಿಗಾಗಿ ನೀವು ಮಾಡಿದ ತ್ಯಾಗಕ್ಕೆ ಯಾವುದು ಸರಿ ಸಮ ಇದೆ ಹೇಳಿ? ಮತ್ಯಾಕೆ ಹಿಂಜರಿಕೆ? ನಮಗೆ ನಮ್ಮ ಮಗಳನ್ನು ನಮ್ಮಂತೆ ನೋಡಿಕೊಳ್ಳುವ ಅಳಿಯ ಬೇಕಾಗಿರುವುದು.ಆ ಅರ್ಹತೆ ನಿನ್ನಲ್ಲಿದೆ.ಇನ್ನು ನಿನ್ನ ಬಗ್ಗೆ ನಮಗೆ ಹಾಗೂ ಪಲ್ಲವಿಗೆ ಎಲ್ಲಾ ತಿಳಿದಿದೆ. ಆ ಬಗ್ಗೆ ಹೇಳಿರುವುದು ಅಂದು ನಿನ್ನ ಜತೆ ಇದ್ದಂತಹ ಪೋಲೀಸ್ ಅಧಿಕಾರಿ ಪ್ರಣವ್ ಭಾರಧ್ವಾಜ್.ನನ್ನ ಸೋದರಿಯ ಪತಿ ಆತ.ಒಂದು ವೇಳೆ ಎಲ್ಲಾ ರೀತಿಯಿಂದ ಪರಿಪೂರ್ಣ ವಾಗಿ ಇರುವ ಹುಡುಗ ದೊರೆತ ಎಂದಿಟ್ಟುಕೋ ಆದರೆ ಮದುವೆ ಆದ ಬಳಿಕ ಆ ಸಮಸ್ಯೆ ಬಂದರೆ ನಾವೇ ಎದುರಿಸಬೇಕು ಅಲ್ಲವೇ?"ಎಂಬ ಮಾತು ಅವರಿಂದ ಸರಾಗವಾಗಿ ಹರಿದು ಬಂತು. ಒಂದು ಕ್ಷಣ ದಿಗ್ಬ್ರಮೆಗೆ ಒಳಗಾದೆ‌."ಪಲ್ಲವಿ"ಗೆ ನಿನ್ನ ಗುಣ ಮುಖ್ಯವೇ ಹೊರತು ಆಸ್ತಿ ಅಂತಸ್ತು ರೂಪ ಅಲ್ಲ" ಎಂದ ಆಕೆಯ ತಂದೆಯ ಮಾತಿಗೆ ತಲೆ ತಗ್ಗಿಸಿದೆ.'ಅಂತೂ ನನ್ನ ಮಗನ ಜೀವನದಲ್ಲಿ ನವ ಪಲ್ಲವಿ ಚಿಗುರೊಡೆಯಿತು. ಅವನ "ಅಭಿಸಾರಿಕೆ"ಬಂದಳು' ಎಂದು ಅಮ್ಮ ಖುಷಿಯಾದಳು. ನನ್ನ ಪ್ರೀತಿ ಗೆದ್ದಿತ್ತು. ಹೀಗೆ ..... 'ಒಲವಿನರಮನೆ'ಯಲ್ಲಿ 'ಪ್ರೀತಿ ಬೆಳಕ' ಹಚ್ಚಿ 'ಪಲ್ಲವಿ' ದಾಂಪತ್ಯ ಗೀತೆ ಹಾಡತೊಡಗಿದಳು.

✍🏻 ಎ.ಆರ್‌.ಭಂಡಾರಿ ವಿಟ್ಲ.