ಭಕ್ತಿಯೇ ಪ್ರಧಾನವಾಗಿದ್ದ ನಮ್ಮ ಪೂರ್ವಜರ ಕಾಲದಲ್ಲಿ ಹಬ್ಬಗಳು ಕೇವಲ ಮನರಂಜನೆಯ ಆಚರಣೆಯಾಗಿರಲಿಲ್ಲ. ನಮ್ಮ ಪೂರ್ವಿಕರ ಸುಂದರ ಕಲ್ಪನೆಗಳಾಗಿದ್ದ ಹಬ್ಬಗಳು ನೀರಸ ಬದುಕಿಗೊಂದು ಹೊಸಹುರುಪು ತುಂಬಿಕೊಡುವ ದಿನಗಳಾಗಿದ್ದವು. ನಿತ್ಯ ಬಿಡುವಿಲ್ಲದ ಜಂಜಾಟದ ಬದುಕಿನಲ್ಲಿ ಹಬ್ಬ-ಹರಿದಿನಗಳೆ ಅಂದಿನ ಜನರಿಗೆ ಮುಕ್ತಿ ನೀಡುತ್ತಿದ್ದವು. ಪ್ರಕೃತಿ, ಪಶು-ಪಕ್ಷಿ ಬಹುಮುಖ್ಯವಾಗಿ ಮಾನವ ಸಂಬಂಧಗಳ ರಕ್ಷಣೆಯ ಉದಾತ್ತ ಆಶಯಗಳು ಈ ಆಚರಣೆಗಳ ಹಿಂದಿನ ಉದ್ದೇಶವಾಗಿತ್ತು.
ಇಂತಹ ಹಬ್ಬಗಳಲ್ಲಿ ದೀಪಾವಳಿಗೆ ವಿಶೇಷ ಸ್ಥಾನವಿದೆ. ತಾನೊಬ್ಬನೇ ಸಂತೋಷಪಡದೇ ತಮ್ಮಲ್ಲಿರುವ ಗೋವು, ತಾನು ಉಪಯೋಗಿಸುವ ಕೃಷಿ ಮತ್ತಿತರ ಸಾಧನಗಳನ್ನು ಭಕ್ತಿಯಿಂದ ಪೂಜಿಸುವ ದೀಪಾವಳಿ ಕೇವಲ ಹಬ್ಬವಲ್ಲ; ಅದೊಂದು ಸಂಭ್ರಮಾಚರಣೆ.
ಹಬ್ಬಗಳೆಂದರೆ ಕೇವಲ ಬಗೆ-ಬಗೆಯ ತಿಂಡಿ-ತಿನಸು, ಹೊಸ ಬಟ್ಟೆಗಳಿಗೆ ಮಾತ್ರ ಸೀಮಿತವಲ್ಲ. ಹಬ್ಬದ ಆಚರಣೆಯಲ್ಲಿ ಆಡಂಬರ, ಢಂಬಾಚಾರಗಳಿಗೂ ಮೀರಿದ ಸದಾಶಯಗಳಿವೆ. ಬಹು ಮುಖ್ಯವಾಗಿ ಬಂಧು-ಬಳಗ ದ್ವೇಷ ಮರೆತು, ಬೆರೆತು ಸಂಭ್ರಮಿಸುವ ವಾತಾವರಣವಿದೆ. ಮನೆ ಮಂದಿಯಲ್ಲಿ ಸಡಗರ ತುಂಬುವ ಹಬ್ಬಗಳು ಇಂದಿನ ದಿನಗಳಲ್ಲಿ ನೀರಸವಾಗುತ್ತಿದೆ. ಆಚರಣೆಯೊಂದಿಗೆ ಸಂಸ್ಕೃತಿಯೂ ಮರೆಯಾಗಿ ಕೇವಲ ಹೊಸ ಬಟ್ಟೆ, ಬಂಗಾರ, ಹೊಸ ಕಾರು, ಬೇಕರಿ ತಿಂಡಿಗಳ ಖರೀದಿಗಳಿಗೆ ಇಂದಿನ ಹಬ್ಬಗಳು ಸೀಮಿತವಾಗುತ್ತಿವೆ.
ಬದುಕನ್ನು ಆಸಕ್ತಿದಾಯಕವಾಗಿರಿಸಲು ನಮ್ಮ ಪೂರ್ವಜರು ಹಬ್ಬ-ಹರಿದಿನಗಳನ್ನು ಆಚರಣೆಗೆ ತಂದರು. ಆದರೆ ಆಧುನಿಕ ಯುಗದಲ್ಲಿ ಸಾಂಪ್ರದಾಯಿಕ ಆಚರಣೆಗಳು ಹಳ್ಳಹಿಡಿದು ವಿದೇಶಿ ಸಂಸ್ಕೃತಿಯ ಮೋಹ ಯುವ ಪೀಳಿಗೆಯನ್ನು ಕೇವಲ ಎಂಜಾಯ್‌ಮೆಂಟ್ ಸಂಸ್ಕೃತಿಗೆ ದೂಡುತ್ತಿದೆ. ಆದ್ದರಿಂದಲೇ ನಮ್ಮ ಸಂಸ್ಕೃತಿಯ ಹಬ್ಬದಾಚರಣೆಗಿಂತ ಪಬ್-ಕ್ಲಬ್‌ಗಳೇ ಬೆಟರ್ ಅನಿಸತೊಡಗಿತು. ಹಬ್ಬದ ಮುಖ್ಯ ಆಶಯಗಳು ಮಾಯವಾಗಿ ಹಬ್ಬವೆಂದರೆ ಡಿಸ್ಕೌಂಟ್ ಸೇಲ್ ಇರುವಲ್ಲಿ ಶಾಪಿಂಗ್ ಮಾಡುವುದು, ಹಬ್ಬದ ರಜೆಯನ್ನು ಟೂರ್ ಮಾಡಿ ಎಂಜಾಯ್ ಮಾಡುವುದೇ ಹಬ್ಬ ಎನ್ನುವಂತಾಗಿದೆ.
ನರಕ ಚತುರ್ಥಿಯ ಮುಂಚಿನ ದಿನದಿಂದಲೇ ಹಬ್ಬದ ತಯಾರಿ ನಡೆಯುತ್ತದೆ. ಬಿಸಿ ನೀರಿನ ಹಂಡೆ ತೊಳೆದು, ಅದಕ್ಕೆ ಶುದ್ಧ ನೀರು ತುಂಬಿಸಿ ತಮ್ಮ-ತಮ್ಮ ಸಂಪ್ರದಾಯದಂತೆ ಹಬ್ಬವನ್ನು ಬಿಡುವಿಲ್ಲದೆ ಆಚರಿಸುವಾಗ ಸಿಗುವ ಆನಂದ ಇಂದಿನ ವಾಟರ್ ಹೀಟರ್, ಬಾಯ್ಲರ್, ಗೀಝರ್‌ಗಳಿಗೆ ಸ್ಚಿಚ್ ಹಾಕಿ ಶವರ್‌ಬಾತ್ ಮಾಡುವಾಗ ಸಿಗಲಾರದು.
ದೀಪಗಳ ಹಬ್ಬವೆಂದೆ ಕರೆಯಲ್ಪಡುವ ದೀಪಾವಳಿ ಅನೇಕ ಉದಾತ್ತ ತತ್ವಗಳನ್ನು ಸಾರುತ್ತದೆ. ಕತ್ತಲೆಯಲ್ಲಿದ್ದಾಗ ಮಾತ್ರ ನಮಗೆ ದೀಪದ ಮಹತ್ವ ತಿಳಿಯುವುದು. ಭಕ್ತಿ ಎಂದರೆ ಕೃತಕವಾಗಿ ನಾವು ಹಚ್ಚುವ ದೀಪಗಳಿಂದಲ್ಲ. ನಮ್ಮ ಅಂತರಂಗದ ಬೆಳಕು ಪ್ರಕಾಶಿಸದಿದ್ದರೆ ಪ್ರಪಂಚದಲ್ಲಿ ಎಷ್ಟೇ ಬೆಳಕಿದ್ದರೂ ಏನು ಪ್ರಯೋಜನ. ‘ಪ್ರಪಂಚದ ಬೆಳಕೆಲ್ಲವನ್ನೂ ಒಟ್ಟು ಸೇರಿಸಿದರೂ ಒಬ್ಬ ವ್ಯಕ್ತಿಯ ಅಂತರಂಗದ ಬೆಳಕಿಗೆ ಸರಿಸಮಾನವಾಗಲಾರದು’ ಎಂದು ಜ್ಞಾನಿಗಳು ಹೇಳುತ್ತಾರೆ.
ಬೆಳಕಿನ ಹಬ್ಬ ದೀಪಾವಳಿ ನಮ್ಮ ಅಂತರಂಗದ ಕತ್ತಲೆ ಕಳೆದು ಸುಜ್ಞಾನದ ಬೆಳಕು ತರಲಿ, ಮನುಷ್ಯರಲ್ಲಿ ಮಾನವೀಯತೆಯ ದಿವ್ಯ ಜ್ಯೋತಿ ಬೆಳಗಲಿ ಎಂದು ಆಶಿಸೋಣ.
ನಾರಾಯಣ. ಬಿ, ಕುಂಡದಬೆಟ್ಟು
ಎಸ್.ಡಿ.ಎಂ ಆಸ್ಪತ್ರೆ, ಉಜಿರೆ
ಫೋ: 9481391527
No comments:
Post a Comment