BhandaryVarthe Team

BhandaryVarthe Team
Bhandary Varthe Team

Thursday, 4 November 2021

ದೀಪಾವಳಿ ಹಬ್ಬದ ವಿಶೇಷತೆಗಳು - ಲೋಕೇಶ್ ಭಂಡಾರಿ ದೊಂಬಿವಿಲಿ, ಮುಂಬೈ

 ಅಸತೋಮಾ ಸದ್ಗಮಯಾ, ತಮಸೋಮಾ ಜ್ಯೋತಿರ್ಗಮಯ..

ಬೆಳಕಿನ ಹಬ್ಬ ದೀಪಾವಳಿ ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಕಂಡು ಸಂಭ್ರಮಿಸುವಂತಹ ವಿಶೇಷ ಹಬ್ಬ.
ಇಲ್ಲಿ ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ - ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸುವಂತದ್ದು ಎಂಬ ಅರ್ಥ ಕೂಡಾ ಇದೆ.

ಜೀವನದ, ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ. ದೀಪಾವಳಿ ಹಬ್ಬದ ಮೊದಲ ದಿನ ಎಣ್ಣೆ ಸ್ನಾನ ಮಾಡುವ ಸಂಪ್ರದಾಯ ಇದೆ. ಇದಕ್ಕೆ ಕಾರಣ ಸಮುದ್ರ ಮಥನ ಸಮಯದಲ್ಲಿ ಶ್ರೀ ವಿಷ್ಣು ಅಮೃತ ಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ ಈ ದಿನ ನೀರು ತುಂಬುವ ಸ್ನಾನದ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮಿಯೂ ಇರುತ್ತಾಳೆಂಬ ನಂಬಿಕೆ. ಈ ನೀರಿನಲ್ಲಿ ಸ್ನಾನ ಮಾಡಿದರೆ ಆಯುರಾರೋಗ್ಯ, ಆಯಸ್ಸು ವೃದ್ಧಿಸುವುದೆಂಬ ನಂಬಿಕೆ.

ದೀಪಾವಳಿಯನ್ನು ನಾವು ಇಂದು ಮೂರು ದಿನಗಳಿಗೆ ಸೀಮಿತಗೊಳಿಸಿದರೂ, ಮೂಲತಃ ಐದು ದಿನಗಳ ಹಬ್ಬ. ಐದು ದಿನಗಳಲ್ಲಿ ಮೊದಲ ದಿನ ನೀರು ತುಂಬುವುದು, ಎರಡನೇ ದಿನ ನರಕ ಚತುರ್ದಶಿ, ಮೂರನೆಯ ದಿನ ದೀಪಾವಳಿ ಅಮಾವಾಸ್ಯೆ, ನಾಲ್ಕನೆಯ ದಿನ ಬಳಿ ಪಾಡ್ಯಮಿ ಹಾಗೂ ಐದನೆಯ ದಿನ ಯಮ ದ್ವಿತೀಯ ಆಚರಣೆಯಿರುತ್ತದೆ.

ಬುಡಕಟ್ಟು ಜನಾಂಗದಿಂದ ಹಿಡಿದು ಜೈನರು, ಬೌದ್ಧರು, ಸಿಖ್ಖರು, ಹಿಂದೂಗಳು ಕಾಡಿನಿಂದ ಹಿಡಿದು ನಾಡಿನ ವರೆಗೂ ಆಚರಿಸುವ ಪುರಾತನ ಹಬ್ಬ ದೀಪಾವಳಿ.

ದೀಪಾವಳಿ ಹಬ್ಬವು ಕಾರ್ತಿಕ ಮಾಸದಲ್ಲಿ ಬರುತ್ತದೆ. ಕಾರ್ತಿಕ ಮಾಸದಲ್ಲಿ ಸೂರ್ಯಾಸ್ತ ಬೇಗನೆ ಆಗುತ್ತದೆ.ಹಾಗಾಗಿ ದೀಪಗಳ ಆವಳಿ ಎಂದರೆ ಸಾಲು ಸಾಲು ದೀಪಗಳನ್ನು ಬೆಳಗಿ ಕತ್ತಲೆಯನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ.

ದೀಪಗಳ ತುದಿ ಸರ್ವತೋಮುಖವಾಗಿದೆ. ದೀಪ ಹಚ್ಚಿದರೆ ಸುತ್ತಲೂ ಬೆಳಗುತ್ತದೆ. ದೀಪದ ಗಮನ ಊರ್ಧ್ವಮುಖವಾಗಿರುತ್ತದೆ. ಅಂದರೆ ದೀಪ ಬೆಳಗುವ ಮನುಷ್ಯನ ಮನಸ್ಸುಕೂಡಾ ಸದಾ ಊರ್ಧ್ವಗಾಮಿಯಾಗಿರಬೇಕು. ಮನುಷ್ಯ ಸದಾ ಇತಿ ಮಿತಿಗಳನ್ನು ಮೀರಿ ದೀಪದಂತೆ ಮೇಲಕ್ಕೆ ಬೆಳಗುತ್ತಾ ಹೋಗಬೇಕು. ದೀಪ ಹೇಗೆ ತನ್ನನ್ನು ತಾನು ಉರಿಸಿಕೊಂಡು ಸುತ್ತಲಿಗೆ ಬೆಳಕು ಕೊಡುತ್ತದೋ ಮನುಷ್ಯ ಕೂಡಾ ತಾನು ತ್ಯಾಗ ಮಾಡಿ ಸುತ್ತಲಿನವರ ಬಾಳಿಗೆ ಬೆಳಕಾಗಬೇಕು ಎಂಬ ಸಂಕೇತ ಇಲ್ಲಿದೆ.

ನಮಗೆ ದೀಪಾವಳಿ ಎಂದಾಕ್ಷಣ ಮನೆ ಮುಂದೆ ಉರಿಯುವ ಹಣತೆ, ಆಕಾಶದಲ್ಲಿ ಚಿಮ್ಮುವ ಬಾಣ ಬಿರುಸು , ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು ಇದಷ್ಟೇ ಮೇಲ್ನೋಟಕ್ಕೆ ಕಾಣುತ್ತದೆ. ಸಿಹಿ ತಿಂದು ಉಡುಗೊರೆ ನೀಡಿ ಸಂತೋಷ ಪಡುವುದು ಕಾಣ ಬರುತ್ತದೆ. ಆದರೆ ಈ ಹಬ್ಬದ ಆಚರಣೆಯ ಹಿಂದೆ ಹಲವು ಪುರಾಣ ಕಾಲದ ಬೆಸುಗೆ, ಸಂಪ್ರದಾಯ, ಸಂಸ್ಕೃತಿ, ಇತಿಹಾಸ ಮಿಳಿತಗೊಂಡಿರುವುದು ಕಂಡು ಬರುತ್ತದೆ.

ಲೋಕೇಶ್ ಭಂಡಾರಿ ದೊಂಬಿವಿಲಿ, ಮುಂಬೈ


No comments:

Post a Comment